ಅಂದು ಉರ್ವರಾದಲ್ಲಿ ಮಧ್ಯಾಹ್ನದೂಟಕ್ಕೆ ಶಿರಸಿಯ ಶಿವಾನಂದ ಕಳವೆ ಜತೆಗಿದ್ದರು. ಕಾನಕಲ್ಲಟೆ-ಸೌತೆಯ ಕಾಯಿಹುಳಿ, ಕ್ರೋಟಾನ್ ಹರಿವೆಯ ಚಟ್ನಿ, ಕಪ್ಪೆಮೆಣಸು (ನೀರ್ಕಡ್ಡಿ)ಸಾರು, ಪಾಲಿಷ್ ಮಾಡದ ಅಕ್ಕಿಯ ಅನ್ನ.
ಇದರಲ್ಲೇನು ವಿಶೇಷ? ಜಯಕ್ಕನ ಮಾತಲ್ಲೇ ಕೇಳಿ - ಕಾನಕಲ್ಲಟೆ ಉಷ್ಣಗುಣವುಳ್ಳದ್ದು, ಸೌತೆ ತಂಪು. ಎರಡೂ ಸೇರಿದಾಗ ಸಮಧಾತು. ಹಾಗಾಗಿ ಅವರೆಡು ಕಾಂಬಿನೇಶನ್! ಜೀರ್ಣಕ್ರಿಯೆಗೆ ಈ ಪಾಕ. ಕ್ರೋಟಾನ್ ಚಟ್ನಿ ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಸಹಕಾರಿ. ನೀರ್ಕಡ್ಡಿ ಕಫಹರ, ಜ್ವರಹರ. ಒಗ್ಗರಣೆಗೆ ಹಾಕುವ ಕರಿಬೇವಿನಸೊಪ್ಪು ಮೂತ್ರದೋಷ ಶಮನಕ್ಕೆ. ಕಾಫಿಯ ಬದಲಿಗೆ ಪುನರ್ಪುಳಿ ಶರಬತ್ತು. ಇದು ಕೂಡಾ ಹಿಮೋಗ್ಲೋಬಿನ್ ಹೆಚ್ಚಳಕ್ಕೆ.
ಮಧ್ಯಾಹ್ನ ಊಟಕ್ಕೆ ನೆಂಟರು ಬಂದಾಗ ನಾವೇನು ಮಾಡುತ್ತೇವೆ? ಅಂಗಡಿಗೆ ಹೋಗುತ್ತೇವೆ: ರೆಡಿಮೇಟ್ ಹಪ್ಪಳ, ಟೊಮ್ಯಾಟೋ, ಶ್ಯಾವಿಗೆ...ಜತೆಗೆ ಕುರುಕುರು ತಿಂಡಿ ಸ್ವಲ್ಪ....ಇನ್ನು ಏನೇನೋ... ತರುತ್ತೇವೆ. ಆದರೆ ಜಯಕ್ಕ ಹಾಗಲ್ಲ, ನೆಂಟರು ಬಂದರೆ, ಈಗ ಬಂದೆ...ಎನ್ನುತ್ತಾ ಹಿತ್ತಿಲಿಗೆ ಹೋಗುತ್ತಾರೆ.....ಬರುವಾಗ ಕೈಯಲ್ಲೊಂದಷ್ಟು ಸಸ್ಯದ ಚಿಗುರುಗಳು, ಹೂಮಿಡಿಗಳು!
ನೋಡಿ....ಇದು ನುಗ್ಗೆ ಸೊಪ್ಪು. ಹಾಗೆ ಬಾಯಲ್ಲಿ ಹಾಕಿ ಜಗಿಯಿರಿ. ಇದರಲ್ಲಿರುವಷ್ಟು ಕಬ್ಬಿಣದಂಶ ಮತ್ತು ಕ್ಯಾಲ್ಸಿಯಂ ಬೇರ್ಯಾವ ಸೊಪ್ಪಿನಲ್ಲೂ ಇಲ್ಲ. ದೊಡ್ಡವರಿಗೆ ಎಂಟೆಲೆ, ಮಕ್ಕಳಿಗೆ ಮೂರೆಲೆ ಸಾಕು ಎಂದು ಜಗಿಯಲು ಕೊಟ್ಟರು.
ಅಷ್ಟರಲ್ಲಿ ಪತಿ ವೆಂಕಟ್ರಾಮರು ಪೇಟೆಗೆ ಹೋದವರು ಪತ್ರಿಕೆಯಲ್ಲಿದ್ದ ಒಂದು ಸುದ್ದಿಯನ್ನು ಓದಿದರು - ಆಹಾರಗಳೆಲ್ಲಾ ವಿಷಮಯವಾಗುತ್ತಿದೆ. ಹೀಗೆ ಮುಂದುವರಿದರೆ 2016ರಕ್ಕಾಗುವಾಗ ಭಾರತದ ಜನಸಂಖ್ಯೆ ಕ್ಷೀಣವಾಗುತ್ತದಂತೆ. ಉರ್ವರಾದ ಅಡುಗೆ ಮನೆ ಯಾಕೆ ಹಸಿರಾಗಿದೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿತ್ತು!
ಜಯಲಕ್ಷ್ಮೀ ದೈತೋಟ - ಆಪ್ತರಿಗೆ ಜಯಕ್ಕ. ಖ್ಯಾತ ಪಾಣಾಜೆ ಪಂಡಿತ ಕುಟುಂಬದ ಸೊಸೆ. ಸಾಗರದ ಹೆಗ್ಗೋಡು ಸನಿಹದ ಮುಂಡಿಗೇಸರ ತವರು. ಸ್ನಾತಕೋತ್ತರ ಪದವೀಧರೆ. ಪತಿ ಮೂಲಿಕಾ ತಜ್ಞ ವೆಂಕಟ್ರಾಮ ದೈತೋಟ. ಊಟದ ಬಟ್ಟಲಿನಲ್ಲಿ ಅಡವಿ ಪ್ರೀತಿ ಮತ್ತು ಆರೋಗ್ಯವನ್ನು ಕಂಡ ಇವರ ಕೈಗುಣದಿಂದ ನಗುನಗುತ್ತಾ ಬಾಳುವೆ ಮಾಡುವ ಕುಟುಂಬಗಳು ಅಸಂಖ್ಯ. ಜಯಕ್ಕ ಮಾತಿಗಿಳಿದರೆ ಸಾಕು - ಅಡವಿಯೇ ನಮ್ಮ ಮುಂದೆ ಧುತ್ತೆಂದು ನಿಲ್ಲುತ್ತದೆ! ಋತುಮಾನಕ್ಕನುಸಾರವಾಗಿ ಪ್ರಕೃತಿಯಲ್ಲಿ ಸಿಗುವ ಚಿಗುರು, ಹೂ, ಮಿಡಿ, ಕೆತ್ತೆ, ಬೇರು ಬಳಸಿ - ಸಾರು, ಚಟ್ನಿ, ತಂಬುಳಿ, ಕಷಾಯ ಮಾಡಿ ಆರೋಗ್ಯವನ್ನು ಕಾಪಾಡುವ ಮುನ್ನೂರಕ್ಕೂ ಮಿಕ್ಕಿ ಅಡವಿ ಸಸ್ಯಗಳ ಆಹಾರ ಅವರ ಬೊಗಸೆಯಲ್ಲಿದೆ. ಯಾವ ಸಸ್ಯದಲ್ಲಿ ಯಾವ ಗುಣವಿದೆ, ಅವಗುಣವಿದೆ; ಅದನ್ನು ಸರಿದೂಗಿಸುವ ಬಗೆ ಹೇಗೆ - ಇವೆಲ್ಲಾ ಅವರಿಗೆ ರಕ್ತದಲ್ಲೇ ಬಂದಿದೆ.
ತರಕಾರಿ ಮನೆಯಲ್ಲೇ ಬೆಳೆಸಿ. ಮಾರುಕಟ್ಟೆಯಿಂದ ತಂದರೆ ನೀವು ರೋಗವನ್ನು ತಂದಂತೆ - ನಿಖರವಾಗಿ ಹೇಳುತ್ತಾರೆ. ಜಯಕ್ಕನ ಅಡುಗೆ ಮನೆಗೆ ಮಾರುಕಟ್ಟೆಯ ತರಕಾರಿ ಬಾರದೆ ಬಹುಶಃ ಹದಿನೈದು ವರುಷವಾಗಿರಬಹುದು! ಪ್ರಕೃತಿಯೊಂದಿಗೆ ಬದುಕಬೇಕು. ಪ್ರಕೃತಿಯನ್ನು ಬಿಟ್ಟಾಗ ಅದು ನಮ್ಮ ಕೈಬಿಡುತ್ತದೆ. ರೋಗ ಅಟ್ಟಿಸಿಕೊಂಡು ಬರುತ್ತದೆ - ಜಯಕ್ಕ ಆಗಾಗ್ಗೆ ಹೇಳುವ ಮಾತನ್ನು ಅಕ್ಷರಶಃ ಪಾಲಿಸಿದ್ದಾರೆ.
ಹಿಂದೆಲ್ಲಾ ತಂಬುಳಿ-ಕಷಾಯಗಳು ಬದುಕಿನಂಗ. ಈಗ ಅದಕ್ಕೂ ಕ್ಲಾಸ್ ಬೇಕಾಗಿದೆ. ಅತ್ತೆಯಿಂದ ಸೊಸೆಗೆ, ಅಮ್ಮನಿಂದ ಮಗಳಿಗೆ ಪಾರಂಪರಿಕ ಜ್ಞಾನ ಬಾರದೇ ಇರುವುದೂ ಒಂದು ಕಾರಣ - ಇವರ ಮಾತು ಒಗಟಾಗಿ ಕಾಣಬಹುದು, ಅದರೆ ಸತ್ಯ ಅಲ್ವಾ. ಇಂದು ಬಹುತೇಕ ಅಡುಗೆ ಮನೆಯಲ್ಲಿ ಅಡುಗೆ ಮಾಡುವ ಪುಸ್ತಕ ಇದ್ದೇ ಇರುತ್ತದೆ.
ಬಾಣಂತಿ ಔಷಧಿಯಲ್ಲಿ ಜಯಕ್ಕ ಸ್ಟ್ಪೆಷಲಿಸ್ಟ್. ಕಷಾಯದ ಹುಡಿ, ಸಾರು-ಸಾಂಬಾರು ಹುಡಿ, ತಲೆಹೊಟ್ಟಿಗೆ ಎಣ್ಣೆ, ಬಾಣಂತಿಗೆ ಮೈಗೆ ಹಚ್ಚಲು ಎಣ್ಣೆ, ಮಕ್ಕಳ ಆಹಾರ ಮಣ್ಣಿಹುಡಿ, ಮಕ್ಕಳ ಮೈಗೆ ಹಚ್ಚುವ ಎಣ್ಣೆ, ಮೆಂತೆ ಹಿಟ್ಟು, ಪುಳಿಯೋಗರೆ, ಮಾಲ್ಟ್ ಹುಡಿ, ಚಟ್ನಿ ಹುಡಿ - ತಾವೇ ಸ್ವತಃ ಮಾಡಿ, ಆಸಕ್ತರಿಗೆ ನೀಡುತ್ತಾರೆ. ಆರೋಗ್ಯ ಹದಗೆಡುತ್ತಿದೆ. ಇನ್ನಿನ್ನು ತಯಾರಿಸಲು ಕಷ್ಟ. ಎಷ್ಟೋ ಮಂದಿ ಕೇಳುತ್ತಾರೆ. ಇಲ್ಲವೆನ್ನಲಾಗುವುದಿಲ್ಲ ಎನ್ನುವ ಜಯಕ್ಕನ ಕಾಳಜಿಯ ಹಿಂದೆ ತಾಯಿ ಮನಸ್ಸು ಇದೆ.
ಪತಿ ವೆಂಕಟ್ರಾಮ ದೈತೋಟರ ಜತೆ ಆಹಾರ-ಆರೋಗ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿ. ೨೦೦೮ ರಲ್ಲಿ ಶಿರಸಿ ಸನಿಹದ ಕಳವೆಯಲ್ಲಿ ಅಡವಿ ಆರೋಗ್ಯ-ಮನೆಮದ್ದು ಕಾರ್ಯಗಾರ ನಡೆದಿತ್ತು. ಎರಡು ದಿವಸ ನಡೆದ ಸಮಾರಂಭದಲ್ಲಿ ಜಯಕ್ಕನೇ ಹೀರೋ! ವೆಂಕಟ್ರಾಮರೇ ಸ್ವತಃ ಹೇಳಿದ್ದುಂಟು - ತಂಬುಳಿ, ಕಷಾಯಗಳಿಗೆ ಅವಳೇ ಹೈಕಮಾಂಡ್!
ಹೊರಡುವಾಗ ತಮ್ಮ ಗೋಪಾಲಕೃಷ್ಣ ಕೈಗೆ ನೆಲಗಡಲೆ ಸುರುವಿ, ತಿನ್ನುತ್ತಾ ಹೋಗಿ ಎಂದರೆ, ಜಯಕ್ಕ ಜತೆಗೆ ಬೆಲ್ಲ ಸೇರಿಸಿಕೊಳ್ಳಿ. ಕಡಲೆಯ ಪಿತ್ಥವನ್ನು ಬೆಲ್ಲ ಸರಿದೂಗಿಸುತ್ತದೆ-ಎನ್ನುತ್ತಾ ಬೆಲ್ಲ ನೀಡಿದರು. ದೈತೋಟ ಕುಟುಂಬದ ಅಡವಿ ಪ್ರೀತಿ-ಆರೋಗ್ಯ ಕಾಳಜಿಯ ಮುಂದೆ ನಾವು ಮೂಕರಾದೆವು. ತಾವು ಕಹಿಯುಂಡರೂ, ಇತರರ ಬಾಯಿ ಸಿಹಿಯಾಗಿರಬೇಕೆಂದು ಬಯಸುವ ಮನಸ್ಸು ಇದೆಯಲ್ಲಾ.....ಇದು ಎಲ್ಲರಿಗೂ ಬರುವುದಿಲ್ಲ! (ಜಯಲಕ್ಷ್ಮೀ ದೈತೋಟ, ಉರ್ವರಾ, ಅಂಚೆ : ಪಾಣಾಜೆ, ಪುತ್ತೂರು ತಾಲೂಕು - ದ.ಕ.)
5 comments:
ಈಚೆಗೆ ದೈತೋಟಕ್ಕೆ ಹೋಗಿದ್ದೆ. ಅದೊಂದು ಅವಿಸ್ಮರಣೀಯ ಅನುಭವ. ಈ ದಂಪತಿಯದ್ದು ಅಪೂರ್ವ ಸಮಾಜ ಸೇವೆ.
ಪೈಲೂರು
kaaraMtarE,
jaya daitota avara dooravaani sigabahudE?
kaaraMtarE,
jaya daitota avara dooravaani sigabahudE?
sir
sorry for the delay.
Jayalaximi daithota Phone No.
04998-226296
Hello. Can I get Mrs Jayalakshmi's contact details please? I have tried the above number and it is a non working number. Thanks in advance for your help
Post a Comment