Thursday, January 15, 2009

ಎಮ್ಮೆ ಕಥನ

1973, ಫೆಬ್ರವರಿ. ಪುತ್ತೂರಿನ ಬಳ್ಳಿಕಾನದಲ್ಲೊಂದು ಸಭೆ. 'ಹಸುಗಳ ಜತೆಗೆ ಎಮ್ಮೆ ಸಾಕಿದರೆ ತುಂಬಾ ಲಾಭದಾಯಕ. ಹಸುವಿನ ಹಾಲಿನಲ್ಲಿ ಕೊಬ್ಬಿನ ಅಂಶ ಕಡಿಮೆ. ಎಮ್ಮೆಯ ಹಾಲಿನಲ್ಲಿ ಕೊಬ್ಬಿನ ಅಂಶ ಜಾಸ್ತಿ. ಎಮ್ಮೆ ಸಾಕಿ ಜೀವನಮಟ್ಟವನ್ನು ಸುಧಾರಿಸಬೇಕು' - ಇದು ಸಭಾನಿರ್ಣಯ.

ಗುಜರಾತ್ ರಾಜ್ಯದ ಕೈರಾ ಜಿಲ್ಲೆಯ ಆನಂದ್ನಲ್ಲಿದೆ-ಅಮುಲ್ ಪ್ಯಾಕ್ಟರಿ. ಕೈರಾದಲ್ಲಿ ಮನೆಮನೆಯಲ್ಲಿ ಸೂರ್ತಿ ಜಾತಿ'ಯ ಎಮ್ಮೆ ಸಾಕಣೆ ವಿಶೇಷ. 'ಇವು ನಮ್ಮ ಕರಾವಳಿಗೂ ಒಗ್ಗುವಂತಹುದು. ಅದನ್ನೇ ತಂದರೆ ಹೇಗೆ' ಒಕ್ಕೊರಲ ಅಭಿಪ್ರಾಯ. ಎಮ್ಮೆ ಖರೀದಿಗೆ ಒಂದಷ್ಟು ಮಂದಿ ತಯಾರಾದರು. ಬ್ಯಾಂಕು ಸಾಲ ಮಂಜೂರಾಯಿತು. 160 ಎಮ್ಮೆ ತರುವ ನೀಲನಕ್ಷೆ ಸಿದ್ಧ.

ಯಡಕತ್ತೋಡಿ ನಾರಾಯಣ ರೈಯವರ ಉಸ್ತುವಾರಿಕೆ. 'ಎರಡು ಅಂಬಾಸಿಡರ್ ಕಾರ್ನಲ್ಲಿ ಗುಜರಾತ್ಗೆ ಹೋಗುವುದು, ಅನಂದ ಎಂಬಲ್ಲಿ ವಾಸ್ತವ್ಯ. ಎರಡು ಬ್ಯಾಚ್ನಲ್ಲಿ ನಿರ್ವಹಣೆ. ಎಮ್ಮೆ ವ್ಯವಹಾರ ಕುದುರಿದ ತಕ್ಷಣ ಊರಿಗೆ ಟೆಲಿಗ್ರಾಂ. ಇಲ್ಲಿಂದ ಇಪ್ಪತ್ತು ಜನ ಬಸ್ಸಲ್ಲಿ ಗುಜರಾತ್ಗೆ' ಇವೇ ಮೊದಲಾದ ಪ್ರಾಕ್ಟಿಕಲ್ ವಿಚಾರಗಳು ನಿರ್ಧಾರವಾದ ತಕ್ಷಣ ಹೊರಟರು ಎಮ್ಮೆಪ್ರಿಯರು!

ಕೈರಾ ಜಿಲ್ಲೆಯ ನಾನಾ ಭಾಗದಲ್ಲಿ ಹುಡುಕಾಟ. ಒಂದೊಂದು ಎಮ್ಮೆಗೆ 850ರಿಂದ 1250 ರೂಪಾಯಿ. ಸೂರ್ತಿ ಜಾತಿಯವು. ಕೆಲವು ಗಬ್ಬದವು, ಮತ್ತೆ ಕೆಲವು ಸಂಸಾರಿಗಳು. ಮೊದಲ ಬ್ಯಾಚ್ಗೆ ಬೇಕಾದ ಎಂಭತ್ತು ಎಮ್ಮೆಗಳು ಅನಂದ್ ಸೇರಲು ಲಾರಿಯೇರಿದುವು. ಸಂಜೆ ಗೂಡ್ಸ್ ರೈಲು ಬರುವುದಿತ್ತು. ಗ್ರಹಚಾರ ನೋಡಿ... ಭಾರತ-ಪಾಕಿಸ್ಥಾನ ಯುದ್ಧ ಭೀತಿಯಿಂದ ರೈಲು ಎಂಟು ದಿವಸ ತಡ! ಎಮ್ಮೆಗಳು ಗೋಳಿಮರದ ಬುಡದಲ್ಲಿ! ಜತೆಗಿದ್ದವರ ಪಾಡು ಪ್ರತ್ಯೇಕ ಹೇಳಬೇಕೆ. ಅಲ್ಲೇ ಗಂಜಿ, ಊಟ, ನಿದ್ರೆ, ಸ್ನಾನ.. ಬಿಟ್ಟು ಬರುವ ಹಾಗಿಲ್ಲ! ಅದೂ ಸಾಲದೆಂಬತ್ತೆ ಕೆಲವು ಎಮ್ಮೆಗಳಿಗೆ ಪುತ್ರೋತ್ಸವ! ಗೌಜಿಯೋ ಗೌಜಿ.

ಅಂತೂ ಹನ್ನೊಂದು ಬೋಗಿಗಳ ರೈಲು ನಿಲ್ದಾಣಕ್ಕೆ ಬಂತು. ಅದರಲ್ಲಿ ಹತ್ತು ಎಮ್ಮೆಗಳಿಗೆ, ಮತ್ತೊಂದು ಅವುಗಳ ಆಹಾರ ದಾಸ್ತಾನಿಗೆ. ಮನುಷ್ಯರಿಗೆ ಪ್ರತ್ಯೇಕ ಬೋಗಿಯಲ್ಲ. ಎಮ್ಮೆಗಳ ಜತೆಗೆ! ಪ್ರತೀ ಬೋಗಿಯಲ್ಲೀ ಇಬ್ಬರು ವಾಸ. ಅಂತೂ ಆನಂದ್ನಿಂದ ಹೊರಟಿತು. ಬಲ್ಸಾರ್ ತಲುಪಿತು., ಇಲ್ಲಿಂದ ಹತ್ತು ಬೋಗಿ ಮುಂಬಯಿ ರೈಲಿಗೆ ಲಿಂಕ್. ದಾದರ್ನಲ್ಲಿ ಒಂದು ದಿನ ಠಿಕಾಣಿ. 'ಈಗಾಗಲೇ ಎಮ್ಮೆಯೊಂದಿಗೆ ಐದು ದಿವಸ ಕಳೆದಿತ್ತು!' ಅಲ್ಲಿಂದ ಪೂನಾಕ್ಕೆ. ಎಂಟನೇ ದಿನಕ್ಕೆ ಕನ್ನಾಡು ದರ್ಶನ. ಅಂತೂ ಇಂತೂ ಹದಿಮೂರು ದಿವಸದ ಪ್ರಯಾಣದಲ್ಲಿ ಹಾಸನ ತಲುಪಿತು ಎಮ್ಮೆ ಸಂಸಾರ.

ಪೂರ್ವನಿರ್ಧರಿತದಂತೆ ಪುತ್ತೂರಿನಿಂದ ಎಂಟು ಲಾರಿಗಳು ಹಾಸನಕ್ಕೆ ಹೋದುವು. ಶುಭಮುಹೂರ್ತದಲ್ಲಿ ಎಮ್ಮೆಯೇರಿದ ಲಾರಿಗಳು ಹೊರಟವು. 'ಲಾರಿಯಲ್ಲಿ ಎಲ್ಲಾ ಎಮ್ಮೆಗಳು ಲಾರಿ ಇಳಿಯುವಾಗ ಮುಂಭಾಗಕ್ಕೆ ಬರುವುದು, ಸಮತಟ್ಟು ಪ್ರದೇಶದಲ್ಲಿ ಎಮ್ಮೆಗಳು ಸರಿಯಾಗಿ ನಿಲ್ಲುತ್ತವೆ. ಘಾಟಿ ಇಳಿಯುವಾಗ ಅದಕ್ಕೆ ಸರಿಯಾಗಿ ನಿಲ್ಲಲು ಆಗದೆ ಪ್ರಯಾಣ ಕಷ್ಟವೋ ಕಷ್ಟ!'

ಲಾರಿ ಪುತ್ತೂರು ನಗರ ಪ್ರವೇಶಿಸಿತು. ಲಾರಿಗೆ ಸೂರು ಇಲ್ಲದ್ದರಿಂದ ಎಲ್ಲರಿಗೂ ಎಮ್ಮೆ ಗೋಚರ. ಎಮ್ಮೆ ನೋಡಲು ಜನಸಂದಣಿ. ತಲುಪಬೇಕಾದ 'ಮುಗೇರು' ಎಂಬಲ್ಲಿಗೆ ಎಂಭತ್ತು ಎಮ್ಮೆಗಳು 'ಡೌನ್ಲೋಡ್' ಆದುವು! ಅಬ್ಬಬ್ಬಾ..ಇದೇ ಸ್ಥಿತಿ ಇನ್ನೊಂದು ಬ್ಯಾಚ್ನದು. ಒಂದುನೂರ ಅರುವತ್ತು ಎಮ್ಮೆಗಳು ಪುತ್ತೂರು ತಾಲೂಕಿಗೆ ಬಂದುವು. ಯಾವ್ಯಾವ ಎಮ್ಮೆ ಯಾರ್ಯಾರಿಗೆ ಎಂಬ ಆಯ್ಕೆಗೆ ಲಾಟರಿ ವ್ಯವಸ್ಥೆ. 'ಎಮ್ಮೆಹಾಲು' ಹೊಟ್ಟೆಸೇರಿತು. ಡೈರಿಗೆ ಹೋಯಿತು. ಮಾತಿಗೆ ಸಿಕ್ಕಾಗಲೆಲ್ಲಾ ಎಮ್ಮೆಯದೇ ಸುದ್ದಿ.

ಈ ಎಮ್ಮೆಗಾಥೆಗೆ ಮೂವತ್ತೈದು ವರುಷ. ಆ ಸಾಹಸವನ್ನು 'ಎಮ್ಮೆ ತಂದ ಹೆಮ್ಮೆ' ಪುಸ್ತಕದಲ್ಲಿ ಶ್ರೀ ಕಡಮಜಲು ಸುಭಾಸ್ ರೈಯವರು ಪೋಣಿಸಿದ್ದಾರೆ. ಎಮ್ಮೆ ತರಲು ಹೋದ ಒಂದು ಬ್ಯಾಚ್ನಲ್ಲಿ ಇವರಿದ್ದರು. ಹಾಗಾಗಿ ಇದು ಅನುಭವ ಕಥನ. ಪ್ರವಾಸ ಕಥನವೂ ಹೌದೆನ್ನಿ. 'ಕಳೆದ ಕಾಲದ ಕಥನ' ಎನ್ನೋಣವೇ? ಎಮ್ಮೆ ಕಥನದೊಂದಿಗೆ ಒಂದಷ್ಟು ಹೊರ ವಿಚಾರಗಳು ಹಾದುಹೋಗುತ್ತದೆ. ಮತ್ತೆ ಪುನಃ ಹಳಿಗೆ ಬರುತ್ತದೆ. ಈ ಸಾಹಸದಲ್ಲಿ ಸಂತೋಷವಿತ್ತು. ಸಿಹಿ-ಕಹಿಯಿತ್ತು. ಮಾತುಬಾರದ ಪಶುಗಳ ಜತೆಗೆ ಮಾತು ಬರುವ ಮನುಷ್ಯನ ಸ್ಪಂದನ. ಎಮ್ಮೆ ಪ್ರಯಾಣದ ರೋಚಕತೆಯನ್ನು ರೈಗಳು ಮತ್ತಷ್ಟು ಕಟ್ಟಿಕೊಡುತ್ತಾರೆ - ಬಹಳಷ್ಟು. ಸಮಯ ಕಳೆಯಲೋಸುಗ ಅಂಟಿದ ಸಿಗರೇಟು ಚಟ, ರೈಲ್ವೇ ನಿಲ್ದಾಣದಲ್ಲಿ ಕೈಗಾಸಿಗಾಗಿ ಎಮ್ಮೆಯ ಹಾಲನ್ನು ಕರೆದು ಮಾರಿದ್ದು, ಬ್ರೆಡ್-ಬಿಸ್ಕತ್ತೇ ಊಟ, ಹಿಂಡಿ ಗೋಣಿಯ ಸುಪ್ಪತ್ತಿಗೆ, ಎಮ್ಮೆಗಳಿಗೆ ಶುಶ್ರೂಷೆ, ಹೆರಿಗೆಯಾದವುಗಳಿಗೆ ಆರೈಕೆ. ಲಂಚಾವತಾರ, ..ಹೀಗೆ ಒಂದೇ ಎರಡೇ. ಎಲ್ಲವೂ ಅನುಭವಗಳು.

'ಎಮ್ಮೆಯ ಸಂತತಿ ವೃದ್ಧಿಯಾಗುವ ಬದಲು ಕ್ಷೀಣಿಸಿತು. ಇದು ಇಂದಿನ ಜಾನುವಾರು ಸಾಕುವ ಕಷ್ಟದ ದ್ಯೋತಕ. ಮುಂದಕ್ಕೆ ಗುಜರಾತಿನ ಸೂರ್ತಿ ಜಾತಿಯ ಎಮ್ಮೆಗಳು ನಮ್ಮ ಪ್ರದೇಶದಿಂದ ಕಣ್ಮರೆಯಾದರೂ, ಉಳಿಯುವುದು ಕಣ್ಣಮುಂದೆ ಅಂದು ಎಮ್ಮೆಗಳನ್ನು ಗುಜರಾತಿನಿಂದ ತಂದ ದೃಶ್ಯ ಮಾತ್ರ' - ಕಥನದ ಮಧ್ಯೆ ಬರುವ ರೈಗಳ ಈ ಮಾತಿನಲ್ಲಿ 'ವಾಸ್ತವ'ವಿದೆ.ದೇಶಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನ -ಪುಸ್ತಕವನ್ನು ಪ್ರಕಾಶಿಸಿದೆ.

2 comments:

Suma said...

chennagide.....
-suma

Govinda Nelyaru said...

ಕಾರಂತರೇ

ಸಾಹಸಗಾಥೆ ಓದಿ ಸಂತಸವಾಯಿತು. ವಿವರಗಳು ಮರೆಯುವ ಮುನ್ನ ದಾಖಲಾತಿ ಆದುದು ಬಹಳ ಸಂತೋಷ. ಇಲ್ಲವಾದರೆ ಮುಂದೊಂದು ದಿನ ಅದು ರೈಯವರ ರೈಲು ಎಂದು ಜನ ತಿಳಿದುಕೊಂಡಾರು.

ಗೋವಿಂದ

Post a Comment