Saturday, August 29, 2009

ಚಕ್ರದಡಿ ಸಿಕ್ಕಿಬಿದ್ದವರು!

(ದೇಶದ ಹೆಸರಾಂತ ಕೃಷಿ ಚಿಂತಕ ಡಾ.ದೇವೀಂದ್ರ ಶರ್ಮಾ ಅವರು ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಮಾಡಿದ ಭಾಷಣದ ಒಂದು ಎಸಳು. ಖ್ಯಾತ ಪತ್ರಕರ್ತ ನಾಗೇಶ ಹೆಗಡೆ ಇದನ್ನು ಕನ್ನಡೀಕರಿಸಿದ್ದು, ಬೆಂಗಳೂರಿನ 'ಸಹಜ ಸಮೃದ್ಧ' ಭಾಷಣದ ಸಾರವನ್ನು ಅಚ್ಚುಹಾಕಿದೆ)

ನಮ್ಮ ದೇಶದ ಕೃಷಿರಂಗದ ದುಃಸ್ಥಿತಿಗೆ ಮುಖ್ಯ ಕಾರಣ ಏನು ಗೊತ್ತೇ? ಇಂದಿಗೂ ಅಮೇರಿಕ ಅಥವಾ ಬ್ರಿಟಿಷ್ ತಜ್ಞರು ಬರೆದ ಪಠ್ಯಪುಸ್ತಕಗಳನ್ನು ಓದಿಯೇ ನಮ್ಮ ಕೃಷಿ ವಿಜ್ಞಾನದ ವಿದ್ಯಾರ್ಥಿಗಳು ಪದವಿ ಪಡೆಯಬೇಕಾದ ಸ್ಥಿತಿ ಇದೆ.

ಪಾಶ್ಚಾತ್ಯ ಕೃಷಿ ಪಂಡಿತರ ಸಲಹೆಗಳಿಂದಾಗಿಯೇ ನಮ್ಮಲ್ಲಿ ಏನೇನು ದುರವಸ್ಥೆಗಳಾಗಿವೆ ಎಂಬುದಕ್ಕೆ ಕೆಲವು ಕಾರಣಗಳು -1966ರಲ್ಲಿ ನಮ್ಮಲ್ಲಿ ಹಸಿರು ಕ್ರಾಂತಿಯ ಬೀಜಗಳನ್ನು ಹೊರ ದೇಶಗಳಿಂದ ತರಿಸಿದೆವು. 'ಅದರಿಂದ ಮತ್ತೇನೂ ದುಷ್ಪರಿಣಾಮ ಆಗಲಿಕ್ಕಿಲ್ಲ. ಎರೆಹುಳಗಳು ಸಾಯಬಹುದಷ್ಟೇ' ಎಂಬ ಉಪದೇಶ ಈ ತಜ್ಞರಿಂದ ಸಿಕ್ಕಿತು. ಸರಿ, ಗಿಡ್ಡತಳಿಯ ಭತ್ತದ ತಳಿಗಳು ಬಂದುವು. ಹಿಂದೆಲ್ಲಾ ನಮ್ಮ ರೈತರು ಬೀಜಗಳನ್ನು ಹೊಲದಲ್ಲಿ ಎರಚುತ್ತಿದ್ದರು. ಹಾಗೆ ಮಾಡುವುದು ಸರಿಯಲ್ಲ, ಸಾಲಾಗಿ ನಾಟಿ ಮಾಡಿ ಎಂದು ಈ ತಜ್ಞರು ಹೇಳಿದರು. ಜತೆಗೆ ಹೇರಳ ರಸಗೊಬ್ಬರ, ನೀರು, ಕೀಟನಾಶಕ ಸುರಿಯಲು ಸಲಹೆ ಮಾಡಿದರು.

ಅವೆಲ್ಲ ಸುರಿದರೆ ಫಸಲು ಹೆಚ್ಚಾಗಿ ಬರುತ್ತದೆ ನಿಜ. ಆದರೆ ಸಾಲಾಗಿ ಏಕೆ ನಾಟಿ ಮಾಡಬೇಕು? ಅದಕ್ಕೆಂದು ಹೆಚ್ಚಿನ ಕೃಷಿ ಕೂಲಿಕಾರರು ಬೇಕು. ದಾರ ಕಟ್ಟಿ ಕೆಸರಿನಲ್ಲಿ ನಾಟಿ ಮಾಡಲು ಅಪಾರ ಕೂಲಿ ವೆಚ್ಚವಾಗುತ್ತದೆ. ಸಾಲಾಗಿ ನೆಟ್ಟ ಮಾತ್ರಕ್ಕೇ ಇಳುವರಿ ಜಾಸ್ತಿ ಬರುವುದಿಲ್ಲ. ಆದರೂ ಯಾಕೆ ಈ ನಿಯಮ ಜಾರಿಯಲ್ಲಿದೆ?

ಫಿಲಿಪ್ಹಿನ್ಸ್ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಗುರುದೇಬ್ ಘೋಷ್ ಅವರಿಗೆ ಹಿಂದೊಮ್ಮೆ ಈ ಪ್ರಶ್ನೆಯನ್ನು ಕೇಳಿದ್ದೇನೆ. ಕೊನೆಗೆ ಅವರು ಚುಟುಕಾಗಿ ಉತ್ತರಿಸಿದ್ದೇನೆಂದು ಗೊತ್ತೇ - 'ಟ್ರ್ಯಾಕ್ಟರ್ ತಯಾರಿಕಾ ಉದ್ಯಮಕ್ಕೆ ನೆರವಾಗಲಿ ಎಂದೇ ಈ ನಿಯಮ.!

ನಿಜವೇ ಇರಬೇಕು. ಶಿಸ್ತಿನ ಸಾಲಿನಲ್ಲಿ ನಾಟಿ ಮಾಡಿದರೆ ಮಾತ್ರ ಸಾಲಿನ ಮಧ್ಯೆ ಟ್ರ್ಯಾಕ್ಟರ್ ಸಲೀಸಾಗಿ ಓಡಾಡುತ್ತದೆ. ನಿರೀಕ್ಷೆಯತೆ ಅನುಕೂಲಸ್ಥ ರೈತರು ಇದರ ಮೋಡಿಗೆ ಬಿದ್ದರು. ಅಷ್ಟೇನೂ ಅನುಕೂಲವಿಲ್ಲದ ರೈತರಿಗೂ ಅದು ಆಕರ್ಷಿಸಿತು. ಬ್ಯಾಂಕುಗಳು ತಾವಾಗಿ ಟ್ರ್ಯಾಕ್ಟರ್ಗೆ ಸಾಲ ನೀಡಲು ಮುಂದಾದರು. ತಾವು ಸಾಲ ಕೊಟ್ಟ ಟ್ರ್ಯಾಕ್ಟರ್ಗೆ ಮಾಲೆ ಹಾಕಿ ಫೋಟೋ ತೆಗೆಸಿ ಪ್ರಚಾರ ಕೊಟ್ಟು ಬ್ಯಾಂಕುಗಳು ಉದ್ದಾರವಾದವೇ ವಿನಾ ರೈತರ ಏಳಿಗೆಯಾಗಲಿಲ್ಲ.

ಇಂದು ನಮ್ಮ ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು (ಶೇ.70ರಷ್ಟು) ಟ್ರ್ಯಾಕ್ಟರ್ಗಳಿವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಟ್ರ್ಯಾಕ್ಟರ್ ಇಟ್ಟುಕೊಂಡವರ ಸಂಖ್ಯೆಯೇ ಜಾಸ್ತಿ! 'ಇನ್ನು ಮೇಲೆ ಟ್ರ್ಯಾಕ್ಟರ್ಗೆ ಸಾಲ ಕೊಡುವುದನ್ನು ನಿಲ್ಲಿಸಿಬಿಡಿ' ಎಂದು ನಮ್ಮಂಥ ಕೆಲವರು ಬ್ಯಾಂಕ್ಗಳಿಗೆ ವಿನಂತಿ ಮಾಡಿಕೊಂಡೆವು. ಏನೂ ಪ್ರಯೋಜನವಾಗಲಿಲ್ಲ. ಸಾಲ ನಿಲ್ಲಿಸಲು ಬ್ಯಾಂಕುಗಳು ಖಡಾಖಂಡಿತ ನಿರಾಕರಿಸಿದುವು.

ಕೀಟನಾಶಕಗಳದ್ದೂ ಇದೇ ಕತೆ. ಭತ್ತಕ್ಕೆ ಕೀಟನಾಶಕದ ಸಿಂಪಡಣೆಯ ಅಗತ್ಯವೇ ಇಲ್ಲ. ಆದರೂ ರೈತರಿಗೆ ಅದೇನೋ ಮೋಡಿ ಮಾಡಲಾಗಿದೆ. ಬೆನ್ನಿಗೆ ಕಟ್ಟಿಕೊಳ್ಳುವ ಸಿಂಪಡಣಾ ಯಂತ್ರಗಳು ಬಂದುವು. ಉದ್ದ ಪಿಚಕಾರಿಯ ಮೂತಿ ಇರುವ ಸಿಂಪಡಣಾ ಸಾಧನಗಳು ಬಂದುವು. ಇದರಿಂದಾಗಿ ನೀರಿಗೋ ಮಣ್ಣಿಗೋ ವಿಷ ಸೇರ್ಪಡೆ ಆಗಿ ಬೇಕಿಲ್ಲದ ಜಾಗಕ್ಕೆಲ್ಲಾ ಪಸರಿಸುವಂತಾಯಿತು. ಹೇಗಿದ್ದರೂ ಸಿಂಪಡಣಾ ಪಂಪ್ ಇದೆ ಎಂಬ ಒಂದೇ ಕಾರಣಕ್ಕೆ ಕೀಟನಾಶಕಗಳನ್ನು ಖರೀದಿಸಿ ತಂದು, ಅನಗತ್ಯವಾಗಿ ಭತ್ತಕ್ಕೆ ಸಿಂಪಡಣೆ ಮಾಡಲಾಗುತ್ತವೆ.

ಕೃಷಿ ವಿಷಯ ಕುರಿತ ಏನೆಲ್ಲ ಬಗೆಯ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ 'ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ' ಇದುವರೆಗೆ ರೈತರ ಆತ್ಮಹತ್ಯೆಯ ವಿಚಾರದಲ್ಲಿ ಒಂದೇ ಒಂದು ಸಭೆಯನ್ನು ನಡೆಸಿಲ್ಲ! ಅವರಿಗೆ ರೈತರ ಕಷ್ಟನಷ್ಟಗಳ ಗೊಡವೆ ಬೇಕಿಲ್ಲ. ಅವರು ಟ್ರ್ಯಾಕ್ಟರ್ ಮಾರಾಟದ ವ್ಯವಸ್ಥೆ ಮಾಡುತ್ತಾರೆ. ಕೀಟನಾಶಕದ ಮಾರಾಟದ ಏರ್ಪಾಟು ಮಾಡುತ್ತಾರೆ. ಈಗ ಕುಲಾಂತರಿ ಫಸಲಿನ ಜಾಹೀರಾತು ಮಾಡುತ್ತಿದ್ದಾರೆ.

ನಾವೀಗ ಈ ತಜ್ಞರಿಗೆ ಹೇಳಬೇಕಾಗಿದೆ - 'ಮಾನ್ಯರೇ, ಇಷ್ಟು ವರುಷಗಳ ಕಾಲ ಉದ್ದಿಮೆಗಳು ಬದುಕುಳಿಯಲು ನೀವು ರೈತರ ಹಿತವನ್ನು ಬಲಿಗೊಟ್ಟಿರಿ. ಒಂದೊಂದು ಬ್ಲಾಕ್ನಿಂದಲೂ ಸರಾಸರಿ 70 ಲಕ್ಷ ರೂಪಾಯಿಗಳು ರೈತರ ಕಿಸೆಯಿಂದ ಉದ್ದಿಮೆಗಳಿಗೆ ಹರಿದು ಹೋಗುವಂತೆ ಮಾಡಿದಿರಿ. ಇನ್ನಾದರೂ ಅವನ್ನೆಲ್ಲಾ ನಿಲ್ಲಿಸಿ. ರೈತರು ಬದುಕುಳಿಯುವಂತಹ ಏನಾದರು ಉಪಾಯ ಮಾಡಿ' ಎನ್ನಬೇಕಾಗಿದೆ.

ಮತ್ತೇನಿಲ್ಲ, 'ಈ 70 ಲಕ್ಷ ರೂಪಾಯಿ ಆಯಾ ಬ್ಲಾಕ್ಗಳಲ್ಲಿ ರೈತರ ಬಳಿಯೇ ಉಳಿದರೂ ಸಾಕು, ದೊಡ್ಡ ಉಪಕಾರವಾಗುತ್ತದೆ. ದಯವಿಟ್ಟು ಈ ಉದ್ಯಮಗಳು ಹಳ್ಳಿಗೆ ಬರದಂತೆ ನೋಡಿಕೊಳ್ಳಿ' ಎನ್ನಬೇಕಾಗಿದೆ.1988ರಲ್ಲಿ ಇಂಡೋನೇಶ್ಯಾ ಸರಕಾರ ಇಂಥವೆ ನಿರ್ಣಯವನ್ನು ಕೈಗೊಂಡಿತು. ಅಲ್ಲೂ ಕೀಟನಾಶಕದ ಹಾವಳಿ ಅತಿಯಾಗಿತ್ತು. ಭತ್ತಕ್ಕೆ ಕಂದುಜಿಗಿ ಹುಳು ಬರುತ್ತದೆಂಬ ಭೀತಿ ಹುಟ್ಟಿಸಿ, ಐವತ್ತೇಳು ಬಗೆಯ ಕೀಟನಾಶಕಗಳನ್ನು ರೈತರು ಭತ್ತದ ಗದ್ದೆಗೆ ಎರಚುವಂತೆ ಮಾಡಲಾಗಿತ್ತು. ಒಂದು ಕಠಿಣ ನಿರ್ಧಾರವನ್ನು ರೈತರು ಕೈಗೊಂಡದ್ದರಿಂದ ಅಲ್ಲಿನ ಸರಕಾರ ಎಲ್ಲಾ ಕೀಟನಾಶಕಗಳನ್ನು ನಿಷೇಧಿಸಿತು.

ಅಚ್ಚರಿಯ ಸಂಗತಿ ಏನು ಗೊತ್ತೇ? ಭತ್ತದ ಉತ್ಪಾದಕತೆ ಶೇ.20 ಹೆಚ್ಚಾಯಿತು.ನಮ್ಮ ಸಂಶೋಧನಾ ಸಂಸ್ಥೆಗಳು ಈ ಉದಾಹರಣೆಯನ್ನು ರೈತರಿಗೆ ಯಾಕೆ ಹೇಳುವುದಿಲ್ಲ!

Thursday, August 20, 2009

ಕತ್ತಲ ಲೋಕದಲ್ಲಿ ಒಲುಮೆಯ ನಂದಾದೀಪ

'ಸಂವೇದನಾ' - ಹೆಚ್ಐವಿ ಸೋಂಕು ಬಾಧಿತ ಮಕ್ಕಳ ಪಾಲನಾ ಮಂದಿರ. ಅರುವತ್ತಕ್ಕೂ ಮಿಕ್ಕಿ ಮಕ್ಕಳಿದ್ದಾರೆ. ಮಂಗಳೂರಿನ ಪಂಪ್ವೆಲ್ ಸನಿಹದಲ್ಲಿದೆ. 'CARDTS' ಎಂಬ ಸೇವಾ ಸಂಸ್ಥೆಯಿಂದ ನಿರ್ವಹಣೆ.

ಆರಂಭ ದಿವಸಗಳನ್ನು CARDTS ಮುಖ್ಯಸ್ಥ ಭಗವಾನ್ ದಾಸ್ ವಿವರಿಸಿದ್ದು ಹೀಗೆ - 2002, ದ.ಕ. ಜಿಲ್ಲಾದ್ಯಂತ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಪ್ರಚಾರಾಂದೋಲನ. ಬೀದಿನಾಟಕ, ಭಾಷಣ, ಜಾಥಾ, ಕರಪತ್ರ, ಭಿತ್ತಿಪತ್ರ...ಹೀಗೆ ಹತ್ತು ಹಲವು ಕಾರ್ಯಕ್ರಮಗಳು. ವಾರ ಕಳೆದಿರಬಹುದಷ್ಟೇ. ಬೆಳ್ಳಂಬೆಳಿಗ್ಗೆ ಸತಿಪತಿಯರಿಬ್ಬರು ಹಾಜರ್. 'ನಿಮ್ಮ ಪ್ರಚಾರಾಂದೋಳನ ಗಮನಿಸಿದೆವು. ಭಾಷಣ ಕೇಳಿದೆವು. ಒಳ್ಳೆಯ ಕೆಲಸ. ನಾವಿಬ್ಬರೂ ಹೆಚ್.ಐ.ವಿ. ಸೋಂಕಿತರು. ನಮ್ಮ ಮಗೂ ಸಹ. ಮಗು ಅನಾಥವಾಗಕೂಡದು. ಇದರ ಭಾರ ನಿಮ್ಮದು' - ಎನ್ನುತ್ತಾ ತಮ್ಮ ಐದು ವರುಷದ ಮಗುವನ್ನು ನಮ್ಮ ಕೈಗೆ ಒಪ್ಪಿಸಿ ಆ ದಂಪತಿಗಳು ತೆರಳಿದರು.

ನಮಗೆ ದಿಕ್ಕೇ ತೋಚಲಿಲ್ಲ! ಒಂದೆಡೆ ಮಾನವೀಯ ಕಾಳಜಿ, ಮತ್ತೊಂದೆಡೆ ಕಾಣದ ಹಾದಿ. ಮಗುವನ್ನು ಅನಾಥಾಲಯಕ್ಕೆ ಸೇರಿಸೋಣವೇ - ಹೆಚ್ಐವಿ ಬಾಧಿತ ಮಗುವನ್ನು ಯಾರು ಸ್ವೀಕರಿಸಿಯಾರು? ತಂಡದ ಸದಸ್ಯರಾದ ಸತ್ಯೇಂದ್ರಪ್ರಕಾಶ್ ಮತ್ತು ಶಶಿಕಲಾ ಮಗುವಿನ ಪಾಲನೆಗೆ ಮುಂದಾದಾಗಲೇ, 'ಇಂತಹ ಸವಾಲನ್ನು ಸ್ವೀಕರಿಸುವ ಮನಸ್ಸು ಗಟ್ಟಿಯಾಯಿತು'

ಮಗುವನ್ನು ಸಾಕಲು ಸಹಾಯಕರು. ಬಾಡಿಗೆ ಮನೆ ಹುಡುಕಾಟ. ಹೆಚ್ಐವಿ ಎಂದಾಕ್ಷಣ ಬಾಡಿಗೆದಾರರ ತಕರಾರು. ಅತ್ತಿತ್ತ ಹೊಂದಾಣಿಸಿ ಮನೆ ಗೊತ್ತು ಮಾಡಿ, ಮಗುವಿನ ಆರೈಕೆ ಆರಂಭ. ಈ ರೀತಿ ಶುಶ್ರೂಶೆ, ಆರೈಕೆಗಳಿಂದ ಬೆಳೆದ ಜಯಶ್ರೀ ಈಗ ನಾಲ್ಕನೇ ತರಗತಿ.

ಸರಿ, 'ಎಂ ವಿಟಮಿನ್' ಬೇಕಲ್ವಾ. ಕೆಲವು ಸಂಸ್ಥೆಗಳನ್ನು, ಪ್ರತಿಷ್ಠಿತ ವ್ಯಕ್ತಿಗಳನ್ನು ಭೇಟಿಯಾಗಿ ದಿನವೊಂದರ ವೆಚ್ಚ 750 ರೂಪಾಯಿಯಂತೆ ಸಂಗ್ರಹ.. ಹಣ ಮಾಡುವ ದಂಧೆ ಎಂದು ಗೇಲಿ ಮಾಡಿದರು! ಅನೇಕ ಸಹೃದಯಿಗಳು ದೇಣಿಗೆ, ವಸ್ತುಗಳನ್ನು ನೀಡಿದರು. ನಂತರದ ದಿವಸಗಳಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಯಿತು. ಈ ಮಧ್ಯೆ 'ಇನ್ನೇನು, ನಾಲ್ಕೈದು ವರುಷಗಳಲ್ಲಿ ಇನ್ನಿಲ್ಲವಾಗುವ ಮಕ್ಕಳಿಗೆ ಇದೆಲ್ಲಾ ಯಾಕೆ?' ಎಂದು ಮುಖ ತಿರುವಿದರು!

ಎಂಫಸಿಸ್ ತಾಂತ್ರಿಕ ಸಲಹೆಗಾರರಾದ ಕ್ಲಾರ್ಕ್ ದಂಪತಿಗಳಿಗೆ 'ನಮ್ಮ ಕೆಲಸ' ತಿಳಿಯಿತು. 'ನಿಮಗೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ' ಎನ್ನಬೇಕೇ? ಇದು 'ಮಾನವೀಯತೆಗೆ ಸಂದ ಗೌರವ' ಎನ್ನುತ್ತಾ ಅವರ ಕೊಡುಗೆಯನ್ನು ಸ್ವೀಕರಿಸಿದೆವು.

ಹೆಚ್ಐವಿ ಸೋಂಕಿತರನ್ನು ಗೊತ್ತುಮಾಡುವ (ನೆಟ್ ವರ್ಕ) ಸಂಘಟನೆ ಮೂಲಕ ಮಕ್ಕಳ ದಾಖಲಾತಿ. ಇಂತಹ ಮಕ್ಕಳಿಗೆ 'ಸಂವೇದನಾ' ಮನೆ. ಅಡುಗೆ, ಪರಿಚಾರಿಕೆ, ನರ್ಸ್ .. ಹೀಗೆ ಹದಿನೈದಕ್ಕೂ ಮಿಕ್ಕಿ ಸಿಬ್ಬಂದಿಗಳು. ಒಂದು ವರುಷದಿಂದ ಹದಿನೈದು ವರುಷದ ವರೆಗಿನ ಮಕ್ಕಳಿದ್ದಾರೆ. ಹೊರನೋಟಕ್ಕೆ ಎಚ್ಐವಿ ಸೋಂಕಿತರೆಂದು ನಂಬುವುದೇ ಕಷ್ಟ! ಊಟ, ತಿಂಡಿ, ಯೋಗ, ವ್ಯಾಯಾಮ....ಎಲ್ಲದಕ್ಕೂ ವೇಳಾಪಟ್ಟಿ. ವರುಷಕ್ಕೊಮ್ಮೆ ಪ್ರವಾಸ, ಪಿಕ್ನಿಕ್. ವಾರಕ್ಕೆ ಮೂರು ದಿವಸ ಪೌಷ್ಠಿಕತೆಗಾಗಿ ಮಾಂಸಾಹಾರ. ನಿತ್ಯ ಆರೋಗ್ಯ ತಪಾಸಣೆ. ಆಸ್ಪತ್ರೆ ಅನಿವಾರ್ಯವಾದರೆ ದಾಖಲಾತಿ. ಹೀಗೆ ಆಸ್ಪತ್ರೆ ಸೇರಿದ ಮಗುವನ್ನು, ಹೆತ್ತವರು ನೋಡಿಕೊಂಡ ಹಾಗೆ, ಸಿಬ್ಬಂದಿಗಳು ನೋಡಿಕೊಳ್ಳುತ್ತಾರೆ.

ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲೇ ಒಂದರಿಂದ ಒಂಭತ್ತರ ತನಕ ಕನ್ನಡ ಮಾಧ್ಯಮದಲ್ಲಿ ಕಲಿಕೆ. ಓದು, ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಮುಂದು. 'ಇದು ನಮ್ಮ ಕರ್ತವ್ಯ. ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಇಲ್ಲಾಗುತ್ತಿದೆ. ಬದುಕಿದ್ದಷ್ಟೂ ದಿವಸ ಮಕ್ಕಳು ಕಲಿಕೆ, ಆಟ, ಪಾಠ.....ಗಳಲ್ಲಿ ತೊಡಗಿಸಿಕೊಂಡು ಸುಖವಾಗಿರಲಿ ಎಂಬುದು ಆಶಯ. ಅವರಿಗೂ ಬದುಕುವ ಹಕ್ಕಿದೆಯಲ್ವಾ.' ಕಾರ್ಯದರ್ಶಿ ಗೋಪಾಲ ಕುಂಬಳೆ ಹೇಳುತ್ತಾರೆ.

ಮೃತಪಟ್ಟ ಮಕ್ಕಳನ್ನು ಅವರವರ ಧರ್ಮದಂತೆ ಶವಸಂಸ್ಕಾರ. ಸಂಬಂಧಿಸಿದ ಪಾಲಕರಿಗೋ, ಬಂಧುಗಳಿಗೆ ಮರಣದ ಸುದ್ದಿ ಸಂವೇದನಾ ತಲಪಿಸುತ್ತದೆ. ಕೆಲವರು ಬರುತ್ತಾರೆ. ಇನ್ನೂ ಕೆಲವರು ಬರುವುದೇ ಇಲ್ಲ! ರಕ್ತ ಸಂಬಂಧವಾದ ಎಲ್ಲಾ ಬಂಧನಗಳೂ 'ಹೆಚ್ಐವಿ' ಎಂಬ ಕಾರಣಕ್ಕೆ ದೂರವಾಗಿ ಬಿಡುತ್ತವೆ. ಇಂತಹ ಹೊತ್ತಿನಲ್ಲಿ ಮರಣಿಸಿದ ಚೇತನಕ್ಕಾಗಿ ಅಳುವವರು ಯಾರು?

'ಹೆಚ್ಐವಿ ಪೀಡಿತರು ಎಂದರೆ ಸಾಕು, ಕೆಲವರಿಗೆ ಏನೋ ಕುತೂಹಲ. ಮಕ್ಕಳನ್ನು ಝೂನಲ್ಲಿ ಪ್ರಾಣಿಗಳನ್ನು ನೋಡಿದಂತೆ ನೋಡುತ್ತಾರೆ. ಜತೆಗೆ ಅನುಕಂಪದ ಸೋಗು! ಅಂತಹವರಿಗೆ ಇಲ್ಲಿ ಪ್ರವೇಶವಿಲ್ಲ.' ಸಂವೇದನಾದಲ್ಲಿ ಮಗುವೊಂದು ಇಹದಿಂದ ದೂರವಾದಾಗ ಆ ದುಃಖವನ್ನು ಮಡುಗಟ್ಟಿಸಿಕೊಂಡು, ಉಳಿದ ಮಕ್ಕಳ ಮುಂದಿನ ಆ ದಿನವನ್ನು ಎಣಿಸುತ್ತಾ, ಅವರ ಆರೈಕೆಯಲ್ಲಿರುವ ಪರಿ ಇದೆಯಲ್ಲಾ, ಇದೊಂದು ಶಬ್ಧಕ್ಕೆ ನಿಲುಕದ ಸಂವೇದನೆ. ಇದಕ್ಕೆ ಬೇಕಾಗಿರುವುದು ಮನಸ್ಸಿನ ಸಜ್ಜು. ತಮ್ಮ ಸ್ವಂತ ಮಕ್ಕಳೊಂದಿಗೆ, ಇಷ್ಟೂ ಮಕ್ಕಳಿಗೆ 'ಅಮ್ಮ'ನಾಗಿರುವುದು ಇಲ್ಲಿನ ಸಿಬ್ಬಂದಿಗಳ ಭಾಗ್ಯ.
ಎಲ್ಲ್ಲಾ ಅಮ್ಮಂದಿರಿಗೆ ಅದು ಬರುವುದಿಲ್ಲ!

Tuesday, August 11, 2009

ಮನೆಯೊಳಗೆ ಅವಿತ ಅಂತಕನ ದೂತ!

'ಮನೆ ಅಂದ ಮೇಲೆ ಅಲ್ಲಿ ನಾಯಿ, ಬೆಕ್ಕು, ಆಡು, ದನ ಇರಲೇ ಬೇಕು' - ಕೃಷಿಭೀಷ್ಮ ಚೇರ್ಕಾಡಿಯವರು ಮಾತಿನ ಮಧ್ಯೆ ಆಡಿದ ಮಾತು. ಹಸುಗಳಿಲ್ಲದೆ ಬದುಕೇ ಇಲ್ಲ. ನಾಯಿಗಳು ಮನೆಯ ಹೊರಗಿನ ರಕ್ಷಕನಾದರೆ, ಬೆಕ್ಕುಗಳು ಮನೆಯೊಳಗಿನ ಕಾವಲುಗಾರ!ಮನೆಯ ಸದಸ್ಯರೊಂದಿಗೆ ಮತ್ತೊಬ್ಬ ಸದಸ್ಯನಾಗಿ ಬದುಕುತ್ತವೆ -ಸಾಕುಪ್ರಾಣಿಗಳು. ನಾಯಿ, ಬೆಕ್ಕು, ದನಗಳಿಗೆ ಆಹಾರ ತಿನ್ನಿಸಿದ ಬಳಿಕವೆ ಮನೆಯೊಡತಿ ತಾನುಣ್ಣುತ್ತಾಳೆ.
ಏಳೆಂಟು ಬೆಕ್ಕಿನಮರಿಗಳು, ಐದಾರು ನಾಯಿಗಳು, ಹಟ್ಟಿಯಲ್ಲಿ 3-4 ಹಸುಗಳು..ಹೀಗೆ ನಮ್ಮದು ದೊಡ್ಡ ಸಂಸಾರ. 'ಶ್ವೇತಸುಂದರಿ'ಯ ಕೊರಳಿಗೆ ಬಿಗಿದ ಸರಪಳಿಯನ್ನು ಹಿಡಿದು ವಾಕಿಂಗ್ ಹೋಗುವ ಯೋಗ ಇನ್ನೂ ಬಂದಿಲ್ಲ! ಅಂಟಿಲ್ಲ!ಮನುಷ್ಯನಾದರೋ 'ಅನ್ನದ ಋಣಕ್ಕೆ ಕೃತಘ್ನನಾಗುತ್ತಾರೆ.
ಸಾಕಿದ ಪ್ರಾಣಿ ಋಣವನ್ನು ನೆನಪಿಟ್ಟು ತೀರಿಸುತ್ತದೆ. ಹಟ್ಟಿಯ ದನವನ್ನು ಮೇಯಲು ಬಿಡುತ್ತೇವಲ್ಲಾ, ದಾರಿಯಲ್ಲಿ ಅದು ನಿಮಗೆ ಸಿಕ್ಕಿತೆನ್ನಿ. ಗುರುತುಹಿಡಿದುಬಿಡುತ್ತವೆ. ಒಂದು ವೇಳೆ ಗುರುತು ಸಿಗದಿದ್ದರೆ ನಿಮ್ಮ ಮತ್ತು ದನದ ಮಧ್ಯೆ ಅಂತರವಿದೆ ಎಂದರ್ಥ!ಹಳ್ಳಿಯಲ್ಲಿ ದನಗಳನ್ನು ಮೇಯಲು ಗುಡ್ಡಕ್ಕೆ ಅಟ್ಟುತ್ತಾರೆ. ದನಗಳು ಮೇಯುವ ಗುಡ್ಡ, ಕಾಡಿನಲ್ಲೆಲ್ಲಾ ಮನೆಗಳು! ಅವುಗಳು ಯಾರ್ಯಾರದೋ ತೋಟ, ಗದ್ದೆಗೆ ನುಗ್ಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತವೆ! ಕೆಲವು ಸಲ ಮಂದೆಯಿಂದ ತಪ್ಪಿಸಿಕೊಂಡು, ಮನೆಯ ಹಾದಿ ಕಾಣದೆ ಗುಡ್ಡದಲ್ಲೇ ಏಕಾಂಗಿಯಾಗಿ ಉಳಿದುಬಿಡುತ್ತವೆ. ದನ ಎಲ್ಲಿದೆ ಗೊತ್ತಿಲ್ಲ, ಅವುಗಳನ್ನು ಅರಸುತ್ತಾ, ದನದ ಹೆಸರನ್ನು ಕೂಗಿ ಕರೆಯುತ್ತಾ ಹೋಗುತ್ತಿದ್ದಂತೆ ದನಿಯ ಪರಿಚಯವಿದ್ದ ಅದು ತಾನಿರುವಲ್ಲಿಂದಲೇ ಪ್ರತಿಸ್ಪಂದನ ಕೊಡುತ್ತದೆ. ಇವೆಲ್ಲಾ 'ದೊಡ್ಡ ವಿಷಯ'ವಲ್ಲ ಬಿಡಿ. ಆದರೆ ಬದುಕಿನಲ್ಲಿ ಮನುಷ್ಯರನ್ನು ಪ್ರಾಣಿಗಳು ಹಚ್ಚಿಕೊಳ್ಳುವ ರೀತಿ ಮರೆಯುವಂತಹುದಲ್ಲ.
ವಿಚಾರ ಎಲ್ಲೋ ಹೋಯಿತು ಅಲ್ವಾ. ನಾನು ಹೇಳ ಹೊರಟಿರುವುದು ಹದಿನೈದು ವರುಷದ ಹಿಂದಿನ ನನ್ನ ಮನೆಯ ಕರಿಬೆಕ್ಕೊಂದರ ಕಥೆಯನ್ನು! ಎರಡು ಬೆಕ್ಕು ದಂಪತಿ, ಆರು ಮರಿಗಳ ದೊಡ್ಡ ಸಂಸಾರವಿತ್ತು. ಹಾಲು ಕರೆದು ತರುವಾಗ ಅವುಗಳ ರಾದ್ದಾಂತ ನೋಡಬೇಕು, ಕುರುಕ್ಷೇತ್ರವೇ?! ಅವುಗಳಲ್ಲಿ ಒಂದೆರಡು ಹಟ್ಟಿಯ ಮೂಲೆಯಲ್ಲಿ ಕುಳಿತು 'ನನಲಾ ಅತ್ಜ್ಜಾ, ಏತ್ ಪೊರ್ತು' ಎಂದು ದುರುಗುಟ್ಟಿ ನೋಡುವ ಪರಿ! ಊಟಕ್ಕೆ ಬಟ್ಟಲಿಟ್ಟಾಗ, ಮುತ್ತಿಕೊಳ್ಳುವ ಚಂದ! ಮಾರ್ಜಾಲ ಸಮಾರಾಧನೆ ಆಗದೆ ಮನೆಮಂದಿಗೆ ಊಟವಿಲ್ಲ.
ಹೀಗಿದ್ದಾಗ ಒಂದಿವಸ ಕರ್ರಗಿನ ಚಿಕ್ಕ ಗಂಡು ಬೆಕ್ಕಿನ ಮರಿಯೊಂದು ಪ್ರತ್ಯಕ್ಷ. ಊರಿಲ್ಲ-ಸೂರಿಲ್ಲ, ಎಲ್ಲಿಂದಲೋ ಬಂದಿತ್ತು. ನಾವದಕ್ಕೆ 'ಕಂಠು' ಅಂತ ನಾಮಕರಣ ಮಾಡಿದ್ದೆವು. 'ಅಯ್ಯೋ, ಮನೆಯಲ್ಲಿ ರಾಶಿರಾಶಿ ಇವೆ. ಇದರೊಟ್ಟಿಗೆ ಇನ್ನೊಂದು. ನಿಮ್ಮನ್ನೆಲ್ಲಾ ಹೊಳೆಗೆ ಹಾಕಿ ಬಿಡ್ತೇನೆ' ಅಮ್ಮ ಗದರಿಸುತ್ತಿದ್ದರು. ಅದನ್ನು ಗೋಣಿಯಲ್ಲಿ ಹಿಡಿದು ಎರಡು ಕಿಲೋಮೀಟರ್ ದೂರದಲ್ಲಿ ಬಿಟ್ಟು ಬಂದರೂ ಎರಡೇ ದಿನದಲ್ಲಿ ಮರಳಿ ಪ್ರತ್ಯಕ್ಷ! ಆಹಾರ ಏನೂ ಹಾಕದಿದ್ದರೆ ಹೋದೀತು ಎಂದು ಗ್ರಹಿಸಿ ಉಪವಾಸ ಕೆಡವಿದರೂ ಜಪ್ಪನೆ ಝಂಡಾ ಊರಿತ್ತು! ಸಾಯಲಿ, ಹತ್ತರೊಟ್ಟಿಗೆ ಹನ್ನೊಂದು. ಮಾರ್ಜಾಲ ಸಂಸಾರ ದೊಡ್ಡದಾಯಿತು.
ಯಾಕೋ, ಉಳಿದ ಬೆಕ್ಕಿನ ಮರಿಗಳಂತೆ ಆಟ, ಓಟ, ನಡಿಗೆ ನಿಧಾನ. ಉಳಿದವು 'ಭೂಮಿ-ಆಕಾಶ ಒಂದು ಮಾಡುತ್ತಾ ಆಟವಾಡುತ್ತಿದ್ದರೂ' ಇದು ಮಾತ್ರ 'ಸ್ಥಿತಪ್ರಜ್ಞ'ನಂತೆ ಪಿಳಿಪಿಳಿ ಮಾಡುತ್ತಾ ಕೂರುತ್ತಿತ್ತು. ಥೇಟ್ 'ಪುಷ್ಕರನನ್ನು ಜೂಜಿಗೆ ಎಳೆವ ಶನಿ'ಯೇ!ಈ ಕರಿಸುಂದರಾಂಗನಿಗೆ ಆಗಾಗ ಅಸೌಖ್ಯತೆ. ಒಂದಿನವೂ ಆರೋಗ್ಯದಲ್ಲಿರುವುದನ್ನು ನಾನು ನೋಡಿಲ್ಲ. ಏನನ್ನೋ ತಿಂದು ವಾಂತಿ ಮಾಡಿ ಕೈಕಾಲು ಬಿಟ್ಟು ಮಲಗಿದರೆ, ಇಪ್ಪತ್ತನಾಲ್ಕು ಗಂಟೆಯ ಶವಾಸನ! ಕೆಲವು ದಿವಸ ನಾಪತ್ತೆ! ಮತ್ತೆ ದಿಢೀರ್ ಪ್ರತ್ಯಕ್ಷ. ಕಾಕತಾಳೀಯವೋ ಎಂಬಂತೆ ಕಂಠು ಶವಾಸನ ಮಾಡಿದಾಗಲೆಲ್ಲಾ ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಶೀತವೋ, ಜ್ವರವೋ ಬಾಧಿಸುತ್ತಿತ್ತು! ಕೆಟ್ಟ ಸುದ್ದಿ ಕೇಳುತ್ತಿತ್ತು. ಹಾಗಾಗಿ ಇದನ್ನು ನೆರೆಮನೆಯವರು ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ. ಓಡಿಸುತ್ತಿದ್ದರು. ಎದುರು ಬಂದರೆ ಹಿಡಿಶಾಪ ಹಾಕುತ್ತಿದ್ದರು.
ಒಮ್ಮೆ ಏನನ್ನೋ ತಿಂದು, ವಾಂತಿ ಮಾಡಿ ಅಟ್ಟದಲ್ಲಿ 'ಗೊರ್..ಗೊರ್' ಅನ್ನುತ್ತಾ ಮಲಗಿತ್ತು. 'ಇನ್ನು ಏನು ಕಾದಿದೆಯೋ, ಗ್ರಾಚಾರ' ಅಮ್ಮನಿಂದ ಸಂಶಯ. ಅಂದೇ ರಾತ್ರಿ ಜ್ವರವೆಂದು ಮಲಗಿದ ತಂದೆಯವರು ಹಾಸಿಗೆ ಬಿಟ್ಟೇಳುವಾಗ ವಾರ ದಾಟಿತ್ತು! ಕಂಠು ಕೈಕಾಲು ಬಿಟ್ಟರೆ, ಮನೆಯವರಿಗೆ ಗೋಳು ತಪ್ಪಿದ್ದಲ!'ನಿಮ್ಮ ಕರಿಬೆಕ್ಕು ತೋಡಿನಲ್ಲಿದೆ. ಅದು ಸತ್ತು ಹೋಗಿದೆ ಮಾರಾಯ್ರೆ' ಪಕ್ಕದ ಮನೆಯವರಿಂದ ಬುಲಾವ್! ಅನ್ನ ಹಾಕಿ ಸಾಕುವ ಪಟ್ಟಿಯಲ್ಲಿ ಇದೆಯಲ್ಲಾ ಎನ್ನುತ್ತಾ ಮನೆಗೆ ತಂದೆವು. 'ಪೂರ್ತಿ ಸಾಯಲಿಲ್ಲ!' ನಾಲ್ಕು ದಿವಸದ 'ದಿವ್ಯಮೌನ'ದ ನಂತರ ಯಥಾಸ್ಥಿತಿಗೆ.
ಈ ಮಧ್ಯೆ ಅಪ್ಪ ಹೊಟ್ಟೆನೋವು ಎನ್ನುತ್ತಾ ಮಲಗಿದವರು, ಮಣಿಪಾಲ ಆಸ್ಪತ್ರೆಯಲ್ಲಿ ಹೊಟ್ಟೆಯನ್ನು ಕೊಯಿಸಿಕೊಂಡು ತನ್ನ ಅರ್ಚಕ ವೃತ್ತಿಗೆ ಶಾಶ್ವತ ವಿದಾಯ ಹೇಳಿದರು! ದಿನ ಸರಿಯುತ್ತಿತ್ತು. ಕಂಠುವಿನ ಶವಾಸನಗಳು ಮುಂದುವರಿಯುತ್ತಿತ್ತು. ಈ ಮಧ್ಯೆ ಅಪ್ಪನಿಗೆ ಅಸೌಖ್ಯ ಬಾಧಿಸಿದ್ದರ ಪರಣಾಮವಾಗಿ ಕ್ಷಣಗಣನೆಯಲ್ಲಿದ್ದರು. ಒಂದಿವಸ ಕಂಠು ಅಡುಗೆ ಮನೆಯಲ್ಲಿ ಶವವಾಗಿದ್ದ! ಅಂದೇ ಸಂಜೆ ನನ್ನಪ್ಪ ಇಹಲೋಕ ತ್ಯಜಿಸಿದರು! ಹೇಗಿದೆ ಕಂಠು ಮತ್ತು ಬದುಕಿನ ಸಂಬಂಧ.
ಉಳಿದ ಬೆಕ್ಕುಗಳು ಅವುಗಳಷ್ಟಕ್ಕೇ ಇದ್ದುವು. ಕಂಠು ಮಾತ್ರ ಯಾವುದೋ ರೂಪದಿಂದ 'ಮುನ್ಸೂಚನೆ' ಕೊಡುವ ಅಂತಕನ ದೂತನಾಗಿ ಮನೆಯೊಳಗೆ ಸೇರಿಬಿಟ್ಟಿದ್ದ! ಮನೆಯಜಮಾನ ಹೊರಟು ಹೋದಾಗ ಆತನೊಂದಿಗೆ ತಾನೂ ಹೋಗಿದ್ದ! ಈ ಒಟ್ಟೂ ಪ್ರಕರಣವನ್ನು 'ಮೂಢನಂಬಿಕೆ, ಗೊಡ್ಡುನಂಬಿಕೆ ಅಥವಾ ಇನ್ನೇನೋ' ಎಂದರೂ ನನಗಾವುದೇ ಸೂತಕವಿಲ್ಲ, ಪಾತಕವಿಲ್ಲ. ಆದರಿದು ಬದುಕಿನಲ್ಲಿ ಅನುಭವಿಸಿದ ಸತ್ಯ ಘಟನೆ.

Saturday, August 8, 2009

'ಗೆರಟೆ'ಗೆ ಮಾನವರ್ಧನೆ!


ಪುತ್ತೂರು ಸನಿಹದ ಶಾಂತಿಗೋಡು ಸೇರಾಜೆಯ ಸುಹಾಸ್ ಹೆಬ್ಬಾರ್ರಿಗೆ ಪ್ಲಾಸ್ಟಿಕ್ ಅಂದರೆ ಅಷ್ಟಕ್ಕಷ್ಟೇ. ಬೆಂಕಿಯಲ್ಲೂ ನಾಶವಾಗದ, ಮಣ್ಣಿನಲ್ಲೂ ಕರಗದ ಪ್ಲಾಸ್ಟಿಕ್ನ್ನು ಮಿತವಾಗಿ ಬಳಸುವುದು ಅವರ ಜೀವನದ ಒಂದು 'ಪಾಲಿಸಿ'. 'ಪ್ಲಾಸ್ಟಿಕ್ ಬಗ್ಗೆ ಮೂಗು ಮುರಿಯುತ್ತಿಯಾ, ನಿನ್ನ ಅಂಗಿಯ ಗುಬ್ಬಿಗಳು ಪ್ಲಾಸ್ಟಿಕ್ ಅಲ್ವಾ?' ಸ್ನೇಹಿತರೊಬ್ಬರ ಪ್ರಶ್ನೆ ಅಂತರಂಗಕ್ಕೆ ಚುಚ್ಚಿತು. ನಾಳೆಯಿಂದ ಅದನ್ನೂ ಬಿಟ್ಟೆ' ಸುಹಾಸ್ ಪ್ರತಿಜ್ಞೆ! ಜೊತೆಗಿದ್ದವರು ಗೇಲಿ ಮಾಡಿ ನಕ್ಕರು!
ಆಗಲೇ ತೆಂಗಿನ ಗೆರಟೆ(ಚಿಪ್ಪಿ)ಯಲ್ಲಿ ವಿವಿಧ ಕುಸುರಿಗಳನ್ನು ಮಾಡುತಿದ್ದ ಸುಹಾಸ್, ಗೆರಟೆಯಿಂದಲೇ ಪ್ಯಾಂಟ್, ಅಂಗಿಯ ಗುಂಡಿ(ಗುಬ್ಬಿ)ಗಳನ್ನು ಯಾಕೆ ತಯಾರಿಸಬಾರದು? ಮನದೊಳಗಿನ ಮೌನ ಪ್ರಶ್ನೆ ಮಾತಾಗಲು ಹೆಚ್ಚು ದಿವಸ ಬೇಕಾಗಲಿಲ್ಲ. ಹಲವರಲ್ಲಿ ವಿಚಾರ ತಿಳಿಸಿದರು. 'ತಲೆ ಕೆಟ್ಟಿದೆ' ಅಂದರು. ಗೆರಟೆಯಿಂದ ಗುಬ್ಬಿ ಸಿದ್ಧಪಡಿಸಲು ಬೇಕಾದ ಸಲಕರಣೆ ಸಂಗ್ರಹಕ್ಕೆ ತಾಂತ್ರಿಕ ಅನುಭವಿಗಳನ್ನು ಸಂಪರ್ಕಿಸಿದರು. ಅದಕ್ಕೆ ಬೇಕಾದ 'ಅಚ್ಚು' ತಯಾರಿಸಿ ಕೊಡುವಂತೆ ವಿನಂತಿಸಿದರು. ಇವರನ್ನು ವಿಚಿತ್ರವಾಗಿ ನೋಡಿ ಕೈಚೆಲ್ಲಿದರು!
ಕೊನೆಗೆ ಊರಿನ ಒಬ್ಬ ಪದವಿ ಪಡೆಯದ(!) ಮೆಕ್ಯಾನಿಕ್ ಒಬ್ಬನಲ್ಲಿ ವಿಚಾರ ತಿಳಿಸಿದಾಗ, ಇವರ ಮನದಲ್ಲಿದ್ದ ಅಚ್ಚಿನ ಮಾದರಿ ವಾರದೊಳಗೆ ಸಿದ್ಧವಾಯಿತು. ಎಲ್ಲವನ್ನೂ ಕಲಿತ ತಾಂತ್ರಿಕ ಪದವೀಧರರಿಗೆ ಹೊಳೆಯದ ಒಂದು ವಿಚಾರ, ಏನನ್ನೂ ಕಲಿಯದ ಹಳ್ಳಿಯ ಸಾಮಾನ್ಯನಿಗೆ ಹೊಳೆಯಿತು. ಈತನೇ ನಿಜವಾದ ವಿಜ್ಞಾನಿ' ಜೊತೆಗಿದ್ದ ಸುಹಾಸರ ತಂದೆ ಸುಬ್ರಹ್ಮಣ್ಯ ಹೆಬ್ಬಾರ್ ಒಂದು ಸರ್ಟಿಫಿಕೇಟ್ ನೀಡಿದರು!
3-4 ಆಕಾರದ ಗುಬ್ಬಿಗಳನ್ನು ತಯಾರಿಸಲು ಅಚ್ಚು, ಈ ಆಕಾರಕ್ಕೆ ಗೆರಟೆಯನ್ನು ಕೊರೆಯಲು ಕೈಚಾಲಿತ ಕೊರೆಯಂತ್ರ, ಅಲ್ಪಸ್ವಲ್ಪ ಓಡಾಟ...ಹೀಗೆ ಮುನ್ನೂರು ರೂಪಾಯಿ ವೆಚ್ಚ. ಕೊರೆಯಂತ್ರ ಗೆರಟೆಯನ್ನು ಕೊರೆಯಿತು ಸಿದ್ಧವಾದುವು ಗುಂಡಿಗಳು. ಅದೂ ನಾಲ್ಕು ಬಣ್ಣ, ನಾಲ್ಕು ಆಕಾರದಲ್ಲಿ. ಮೊದಲು ತನ್ನ ಅಂಗಿ, ಪ್ಯಾಂಟಿನ ಪ್ಲಾಸ್ಟಿಕ್ ಗುಬ್ಬಿಗಳನ್ನು ಕಿತ್ತರು. ಗೆರಟೆ ಗುಬ್ಬಿಗಳನ್ನು ಹೊಲಿದರು. ತನ್ನನ್ನು ಚುಚ್ಚಿದವರೆದುರು ನಿಂತರು. ಅಂದು ಕಟಕಿಯಾಡಿದವರ ಬಾಯಿ ಮುಚ್ಚಿತು. ಅವರು ಗೇಲಿ ಮಾಡದಿರುತ್ತಿದ್ದರೆ, ಗೆರೆಟೆಯ ಗುಬ್ಬಿ ತಯಾರಿಯೇ ಆಗುತ್ತಿರಲಿಲ್ಲ' ಸುಹಾಸ್ ಹೇಳುತ್ತಾರೆ.
ಸೀಯಾಳ ಹಂತ ದಾಟಿದ ಆದರೆ ಇನ್ನೂ ಒಣಗದ (ಬನ್ನಂಗಾಯಿ) ಗೆರಟೆಯು ಹಳದಿ ಮಿಶ್ರಿತ ಬಿಳಿ ವರ್ಣ, ತೀರಾ ಒಣಗಿದ ಗೆರಟೆ ಕಪ್ಪುಬಣ್ಣ, ಕೊಬ್ಬರಿ ಹಂತದ ಗೆರಟೆಯ ಒಳಮೈ ಮಣ್ಣಿನ ಬಣ್ಣ ಮತ್ತು ಬಾವೆ ಕಟ್ಟಿದ ಸೀಯಾಳ ಗೆರಟೆಯ ಒಳಮೈ ಕಾಫಿವರ್ಣವನ್ನು ಹೋಲುತ್ತದೆ.....ಹೀಗೆ 3-4 ಸ್ತರದ ಗುಬ್ಬಿಗಳು, ಬೇಕಾದ ಬಣ್ಣದೊಂದಿಗೆ ಅಂಗಿ, ಕೋಟು, ಪ್ಯಾಂಟ್ಗಳಿಗೆ ಹೊಂದಿಸಬಹುದು. 'ಖಾದಿ ಉಡುಪುಗಳಿಗೆ ಗೆರಟೆ ತಯಾರಿ ಗುಂಡಿಗಳು ಹೊಂದುವಷ್ಟು ಬೇರ್ಯಾವುದೂ ಹೊಂದುವುದಿಲ್ಲ' ಧರಿಸಿ ಅನುಭವಿಸಿದ ಸುಹಾಸ್ ಅನುಭವ.
ಗುಂಡಿಯ ದಪ್ಪಕ್ಕನುಗುಣವಾಗಿ ಗೆರಟೆಯ ಆಯ್ಕೆ. ಮೊದಲು ಗೆರಟೆಯನ್ನು ಕೊರೆಯಂತ್ರದ ಮೂಲಕ ಗುಂಡಿಯಾಕಾರದಲ್ಲಿ ಕೊರೆತ. ನಂತರ ಅದನ್ನು ಎರಡೂ ಬದಿ ಅಲಗುಳ್ಳ ಹರಿತವಾದ ಸಣ್ಣ ಚೂರಿಯ ಸಹಾಯದಿಂದ ಜುಂಗನ್ನು ತೆಗೆದು ನಯಗೊಳಿಸುವಿಕೆ. ಮಧ್ಯದಲ್ಲಿ ಎರಡು ತೂತನ್ನು ತೆಗೆದರೆ ಗುಬ್ಬಿ ಸಿದ್ಧ. ಆದರೆ ಇಲ್ಲಿ ಬರೆದಷ್ಟು ಸಲೀಸಾಗಿ ಗುಬ್ಬಿ ತಯಾರಾಗದು! ಅದಕ್ಕೆ ಸೂಕ್ಷ್ಮ ಕುಸುರಿ ಮನಸ್ಸು ಬೇಕು. ಸ್ವಲ್ಪ ಎಚ್ಚರ ತಪ್ಪಿತೋ, ಬೆರಳು ತುಂಡು. ಮೊದಮೊದಲು ಎಷ್ಟು ಸಲ ಗಾಯಮಾಡಿಕೊಂಡಿದ್ದಾನೋ ಏನೋ ಹೆತ್ತವ್ವೆ ಪದ್ಮಿನಿ ಅಮ್ಮನ ಕರುಳು ಮಾತನಾಡಿತು.
ಸುಹಾಸ್ ಮಾತ್ರವಲ್ಲ, ಅವರ ಮನೆಯವರೆಲ್ಲರ ಅಂಗಿ, ಪ್ಯಾಂಟ್, ಪೈರಾನ್ಗಳಲ್ಲಿರುವುದು ಗೆರಟೆ ಗುಬ್ಬಿಗಳು. ದರ್ಜಿ 'ಗುಬ್ಬಿಯನ್ನೂ ತಂದು ಕೊಡಿ' ಎಂದಾಗ ಇವರನ್ನು ಅರಿಯದವರಿಗೆ ಆಶ್ಚರ್ಯವಾದೀತು! 'ಇದನ್ನು ಗೆರಟೆ ಗುಬ್ಬಿಯೆಂದು ಯಾರೂ ಇದುವರೆಗೆ ಹೇಳಿಲ್ಲ. ಯಾಕೆಂದರೆ ಪ್ಲಾಸ್ಟಿಕ್ ಗುಬ್ಬಿಯನ್ನು ಇದು ಹೋಲುತ್ತದೆ' ಸುಬ್ರಹ್ಮಣ್ಯ ಹೆಬ್ಬಾರ್ ಖುಷಿಯಿಂದ ಹೇಳುತ್ತಾರೆ. ಏನಿದ್ದರೂ ಮನೆಮಂದಿಯ ಬಳಕೆಗೆ ಮಾತ್ರ ಸ್ವತಯಾರಿ ಗುಂಡಿಗಳು. ಬೇಡಿಕೆ ಬಂದರೂ ತಯಾರಿಸಲಾಗದಷ್ಟು ಬಿಡುವಾಗದ ಸುಹಾಸ್, 'ಮನಸ್ಸಿದ್ದರೆ ಎಲ್ಲರೂ ತಯಾರಿಸಬಹುದು. ಇದೇನೂ ಬ್ರಹ್ಮವಿದ್ಯೆಯಲ್ಲ!' ಅನ್ನುತ್ತಾರೆ.
ಸುಹಾಸ್ ಶಾಲಾ ದಿನಗಳಿಂದಲೇ 'ಗೆರಟೆ ಕಲಾವಿದ. ಅವರಲ್ಲಿ ಮೂವತ್ತಕ್ಕೂ ಮಿಕ್ಕಿ ಗೆರಟೆ ತಯಾರಿ ಕುಸುರಿ ಕಲಾಕೃತಿಗಳಿವೆ. ಎಲ್ಲವೂ ಕೈಚಾಲಿತ. ವಿವಿಧ ದೋಣಿಗಳು, ಡೈನಿಂಗ್ ಟೇಬಲ್, ಹೆಣ್ಮಕ್ಕಳ ಹೇರ್ಕ್ಲಿಪ್, ಮೊಬೈಲ್ ಚಾರ್ಜ್ ಮಾಡಲಿಡುವ ಪೀಠ, ಮುಖವಾಡಗಳು..ಹೀಗೆ. ಒಮ್ಮೆ ವಿಟ್ಲ (ದ.ಕ.) ಕಾಲೇಜಿನಲ್ಲಿ ಇವರ ಕುಸುರಿಗಳ ಪ್ರದರ್ಶನವಿತ್ತು. 'ಹೇರ್ ಕ್ಲಿಪ್ ಅಂದಕ್ಕೆ ಅಂದಗಾತಿಯರು ಮುಗಿಬಿದ್ದದ್ದೇ ಬಿದ್ದದ್ದು... ಎನ್ನುವಾಗ ಸುಹಾಸ್ ನಾಚುತ್ತಾರೆ. ಮರದ ಬೊಡ್ಡೆಯನ್ನು 'ಕುಳಿತು ಬರೆಯವ' ಮೇಜನ್ನಾಗಿ ರೂಪುಗೊಳಿಸಿದ್ದಾರೆ. ಇದರಲ್ಲಿ ಗೆರಟೆಯ ಪೆನ್ ಸ್ಟಾಂಡ್. ಇವರಜ್ಜ 97ರ ವೆಂಕಟ್ರಮಣ ಹೆಬ್ಬಾರ್ರಿಗೆ ಬರೆಯಲು ಇದೇ ಬೇಕು!
ಇವರಲ್ಲಿ ಈಗಿರುವ ಎಲ್ಲಾ ಕುಸುರಿಗಳು ಮಾರಾಟಕ್ಕಿಲ್ಲ. ಆ ಹಂಬಲವೂ ಅವರಿಗಿಲ್ಲ. ತನ್ನ ಸಂತೋಷಕ್ಕಾಗಿ ರೂಪುಗೊಂಡ ಶಿಲ್ಪಗಳಿವು. ಹೀಗೆ ಮನೆಮಂದಿ ಎಲ್ಲರೂ ಸುಹಾಸರ ಗೆರಟೆ ಸಹವಾಸವನ್ನು ಸಹಮತಿಸಿದ್ದಾರೆ. ಗೌರವಿಸಿದ್ದಾರೆ. 'ಏನಾದರೂ ಹೊಸತು ಮಾಡಬಾರ್ದಾ' ಮಡದಿ ನಿತ್ಯ ಚುಚ್ಚುತ್ತಾರಂತೆ! ಇಷ್ಟು ಸಾಲದೇ ಕಲಾವಿದನೊಬ್ಬನಿಗೆ ಬೇಕಾದ ಮನೆಪ್ರೋತ್ಸಾಹ? ಆದರೆ ಸುಹಾಸರ (08251-280750) ಹವ್ಯಾಸ ಗೆರಟೆಯೊಳಗೇ ಸುತ್ತುತ್ತಿಲ್ಲ! ಸಂಗೀತದೆಡೆಗೆ ತಿರುಗಿಸಿದ್ದಾರೆ! ಈಗವರು 'ಮೇಲೇರುತ್ತಿರುವ' ಹಿಂದೂಸ್ಥಾನಿ ತಬಲಾಪಟು. ಅಂತಾರಾಷ್ಟ್ರೀಯ ಖ್ಯಾತಿಯ ಎನ್.ವಿ.ಮೂರ್ತಿಯವರ ಶಿಷ್ಯ.