'ಸಂವೇದನಾ' - ಹೆಚ್ಐವಿ ಸೋಂಕು ಬಾಧಿತ ಮಕ್ಕಳ ಪಾಲನಾ ಮಂದಿರ. ಅರುವತ್ತಕ್ಕೂ ಮಿಕ್ಕಿ ಮಕ್ಕಳಿದ್ದಾರೆ. ಮಂಗಳೂರಿನ ಪಂಪ್ವೆಲ್ ಸನಿಹದಲ್ಲಿದೆ. 'CARDTS' ಎಂಬ ಸೇವಾ ಸಂಸ್ಥೆಯಿಂದ ನಿರ್ವಹಣೆ.
ಆರಂಭ ದಿವಸಗಳನ್ನು CARDTS ಮುಖ್ಯಸ್ಥ ಭಗವಾನ್ ದಾಸ್ ವಿವರಿಸಿದ್ದು ಹೀಗೆ - 2002, ದ.ಕ. ಜಿಲ್ಲಾದ್ಯಂತ ಏಡ್ಸ್ ಕುರಿತು ಜಾಗೃತಿ ಮೂಡಿಸುವ ಪ್ರಚಾರಾಂದೋಲನ. ಬೀದಿನಾಟಕ, ಭಾಷಣ, ಜಾಥಾ, ಕರಪತ್ರ, ಭಿತ್ತಿಪತ್ರ...ಹೀಗೆ ಹತ್ತು ಹಲವು ಕಾರ್ಯಕ್ರಮಗಳು. ವಾರ ಕಳೆದಿರಬಹುದಷ್ಟೇ. ಬೆಳ್ಳಂಬೆಳಿಗ್ಗೆ ಸತಿಪತಿಯರಿಬ್ಬರು ಹಾಜರ್. 'ನಿಮ್ಮ ಪ್ರಚಾರಾಂದೋಳನ ಗಮನಿಸಿದೆವು. ಭಾಷಣ ಕೇಳಿದೆವು. ಒಳ್ಳೆಯ ಕೆಲಸ. ನಾವಿಬ್ಬರೂ ಹೆಚ್.ಐ.ವಿ. ಸೋಂಕಿತರು. ನಮ್ಮ ಮಗೂ ಸಹ. ಮಗು ಅನಾಥವಾಗಕೂಡದು. ಇದರ ಭಾರ ನಿಮ್ಮದು' - ಎನ್ನುತ್ತಾ ತಮ್ಮ ಐದು ವರುಷದ ಮಗುವನ್ನು ನಮ್ಮ ಕೈಗೆ ಒಪ್ಪಿಸಿ ಆ ದಂಪತಿಗಳು ತೆರಳಿದರು.
ನಮಗೆ ದಿಕ್ಕೇ ತೋಚಲಿಲ್ಲ! ಒಂದೆಡೆ ಮಾನವೀಯ ಕಾಳಜಿ, ಮತ್ತೊಂದೆಡೆ ಕಾಣದ ಹಾದಿ. ಮಗುವನ್ನು ಅನಾಥಾಲಯಕ್ಕೆ ಸೇರಿಸೋಣವೇ - ಹೆಚ್ಐವಿ ಬಾಧಿತ ಮಗುವನ್ನು ಯಾರು ಸ್ವೀಕರಿಸಿಯಾರು? ತಂಡದ ಸದಸ್ಯರಾದ ಸತ್ಯೇಂದ್ರಪ್ರಕಾಶ್ ಮತ್ತು ಶಶಿಕಲಾ ಮಗುವಿನ ಪಾಲನೆಗೆ ಮುಂದಾದಾಗಲೇ, 'ಇಂತಹ ಸವಾಲನ್ನು ಸ್ವೀಕರಿಸುವ ಮನಸ್ಸು ಗಟ್ಟಿಯಾಯಿತು'
ಮಗುವನ್ನು ಸಾಕಲು ಸಹಾಯಕರು. ಬಾಡಿಗೆ ಮನೆ ಹುಡುಕಾಟ. ಹೆಚ್ಐವಿ ಎಂದಾಕ್ಷಣ ಬಾಡಿಗೆದಾರರ ತಕರಾರು. ಅತ್ತಿತ್ತ ಹೊಂದಾಣಿಸಿ ಮನೆ ಗೊತ್ತು ಮಾಡಿ, ಮಗುವಿನ ಆರೈಕೆ ಆರಂಭ. ಈ ರೀತಿ ಶುಶ್ರೂಶೆ, ಆರೈಕೆಗಳಿಂದ ಬೆಳೆದ ಜಯಶ್ರೀ ಈಗ ನಾಲ್ಕನೇ ತರಗತಿ.
ಸರಿ, 'ಎಂ ವಿಟಮಿನ್' ಬೇಕಲ್ವಾ. ಕೆಲವು ಸಂಸ್ಥೆಗಳನ್ನು, ಪ್ರತಿಷ್ಠಿತ ವ್ಯಕ್ತಿಗಳನ್ನು ಭೇಟಿಯಾಗಿ ದಿನವೊಂದರ ವೆಚ್ಚ 750 ರೂಪಾಯಿಯಂತೆ ಸಂಗ್ರಹ.. ಹಣ ಮಾಡುವ ದಂಧೆ ಎಂದು ಗೇಲಿ ಮಾಡಿದರು! ಅನೇಕ ಸಹೃದಯಿಗಳು ದೇಣಿಗೆ, ವಸ್ತುಗಳನ್ನು ನೀಡಿದರು. ನಂತರದ ದಿವಸಗಳಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಯಿತು. ಈ ಮಧ್ಯೆ 'ಇನ್ನೇನು, ನಾಲ್ಕೈದು ವರುಷಗಳಲ್ಲಿ ಇನ್ನಿಲ್ಲವಾಗುವ ಮಕ್ಕಳಿಗೆ ಇದೆಲ್ಲಾ ಯಾಕೆ?' ಎಂದು ಮುಖ ತಿರುವಿದರು!
ಎಂಫಸಿಸ್ ತಾಂತ್ರಿಕ ಸಲಹೆಗಾರರಾದ ಕ್ಲಾರ್ಕ್ ದಂಪತಿಗಳಿಗೆ 'ನಮ್ಮ ಕೆಲಸ' ತಿಳಿಯಿತು. 'ನಿಮಗೆ ನಾವು ಸಹಾಯ ಮಾಡಲು ಸಿದ್ಧರಿದ್ದೇವೆ' ಎನ್ನಬೇಕೇ? ಇದು 'ಮಾನವೀಯತೆಗೆ ಸಂದ ಗೌರವ' ಎನ್ನುತ್ತಾ ಅವರ ಕೊಡುಗೆಯನ್ನು ಸ್ವೀಕರಿಸಿದೆವು.
ಹೆಚ್ಐವಿ ಸೋಂಕಿತರನ್ನು ಗೊತ್ತುಮಾಡುವ (ನೆಟ್ ವರ್ಕ) ಸಂಘಟನೆ ಮೂಲಕ ಮಕ್ಕಳ ದಾಖಲಾತಿ. ಇಂತಹ ಮಕ್ಕಳಿಗೆ 'ಸಂವೇದನಾ' ಮನೆ. ಅಡುಗೆ, ಪರಿಚಾರಿಕೆ, ನರ್ಸ್ .. ಹೀಗೆ ಹದಿನೈದಕ್ಕೂ ಮಿಕ್ಕಿ ಸಿಬ್ಬಂದಿಗಳು. ಒಂದು ವರುಷದಿಂದ ಹದಿನೈದು ವರುಷದ ವರೆಗಿನ ಮಕ್ಕಳಿದ್ದಾರೆ. ಹೊರನೋಟಕ್ಕೆ ಎಚ್ಐವಿ ಸೋಂಕಿತರೆಂದು ನಂಬುವುದೇ ಕಷ್ಟ! ಊಟ, ತಿಂಡಿ, ಯೋಗ, ವ್ಯಾಯಾಮ....ಎಲ್ಲದಕ್ಕೂ ವೇಳಾಪಟ್ಟಿ. ವರುಷಕ್ಕೊಮ್ಮೆ ಪ್ರವಾಸ, ಪಿಕ್ನಿಕ್. ವಾರಕ್ಕೆ ಮೂರು ದಿವಸ ಪೌಷ್ಠಿಕತೆಗಾಗಿ ಮಾಂಸಾಹಾರ. ನಿತ್ಯ ಆರೋಗ್ಯ ತಪಾಸಣೆ. ಆಸ್ಪತ್ರೆ ಅನಿವಾರ್ಯವಾದರೆ ದಾಖಲಾತಿ. ಹೀಗೆ ಆಸ್ಪತ್ರೆ ಸೇರಿದ ಮಗುವನ್ನು, ಹೆತ್ತವರು ನೋಡಿಕೊಂಡ ಹಾಗೆ, ಸಿಬ್ಬಂದಿಗಳು ನೋಡಿಕೊಳ್ಳುತ್ತಾರೆ.
ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲೇ ಒಂದರಿಂದ ಒಂಭತ್ತರ ತನಕ ಕನ್ನಡ ಮಾಧ್ಯಮದಲ್ಲಿ ಕಲಿಕೆ. ಓದು, ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಮುಂದು. 'ಇದು ನಮ್ಮ ಕರ್ತವ್ಯ. ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಇಲ್ಲಾಗುತ್ತಿದೆ. ಬದುಕಿದ್ದಷ್ಟೂ ದಿವಸ ಮಕ್ಕಳು ಕಲಿಕೆ, ಆಟ, ಪಾಠ.....ಗಳಲ್ಲಿ ತೊಡಗಿಸಿಕೊಂಡು ಸುಖವಾಗಿರಲಿ ಎಂಬುದು ಆಶಯ. ಅವರಿಗೂ ಬದುಕುವ ಹಕ್ಕಿದೆಯಲ್ವಾ.' ಕಾರ್ಯದರ್ಶಿ ಗೋಪಾಲ ಕುಂಬಳೆ ಹೇಳುತ್ತಾರೆ.
ಮೃತಪಟ್ಟ ಮಕ್ಕಳನ್ನು ಅವರವರ ಧರ್ಮದಂತೆ ಶವಸಂಸ್ಕಾರ. ಸಂಬಂಧಿಸಿದ ಪಾಲಕರಿಗೋ, ಬಂಧುಗಳಿಗೆ ಮರಣದ ಸುದ್ದಿ ಸಂವೇದನಾ ತಲಪಿಸುತ್ತದೆ. ಕೆಲವರು ಬರುತ್ತಾರೆ. ಇನ್ನೂ ಕೆಲವರು ಬರುವುದೇ ಇಲ್ಲ! ರಕ್ತ ಸಂಬಂಧವಾದ ಎಲ್ಲಾ ಬಂಧನಗಳೂ 'ಹೆಚ್ಐವಿ' ಎಂಬ ಕಾರಣಕ್ಕೆ ದೂರವಾಗಿ ಬಿಡುತ್ತವೆ. ಇಂತಹ ಹೊತ್ತಿನಲ್ಲಿ ಮರಣಿಸಿದ ಚೇತನಕ್ಕಾಗಿ ಅಳುವವರು ಯಾರು?
'ಹೆಚ್ಐವಿ ಪೀಡಿತರು ಎಂದರೆ ಸಾಕು, ಕೆಲವರಿಗೆ ಏನೋ ಕುತೂಹಲ. ಮಕ್ಕಳನ್ನು ಝೂನಲ್ಲಿ ಪ್ರಾಣಿಗಳನ್ನು ನೋಡಿದಂತೆ ನೋಡುತ್ತಾರೆ. ಜತೆಗೆ ಅನುಕಂಪದ ಸೋಗು! ಅಂತಹವರಿಗೆ ಇಲ್ಲಿ ಪ್ರವೇಶವಿಲ್ಲ.' ಸಂವೇದನಾದಲ್ಲಿ ಮಗುವೊಂದು ಇಹದಿಂದ ದೂರವಾದಾಗ ಆ ದುಃಖವನ್ನು ಮಡುಗಟ್ಟಿಸಿಕೊಂಡು, ಉಳಿದ ಮಕ್ಕಳ ಮುಂದಿನ ಆ ದಿನವನ್ನು ಎಣಿಸುತ್ತಾ, ಅವರ ಆರೈಕೆಯಲ್ಲಿರುವ ಪರಿ ಇದೆಯಲ್ಲಾ, ಇದೊಂದು ಶಬ್ಧಕ್ಕೆ ನಿಲುಕದ ಸಂವೇದನೆ. ಇದಕ್ಕೆ ಬೇಕಾಗಿರುವುದು ಮನಸ್ಸಿನ ಸಜ್ಜು. ತಮ್ಮ ಸ್ವಂತ ಮಕ್ಕಳೊಂದಿಗೆ, ಇಷ್ಟೂ ಮಕ್ಕಳಿಗೆ 'ಅಮ್ಮ'ನಾಗಿರುವುದು ಇಲ್ಲಿನ ಸಿಬ್ಬಂದಿಗಳ ಭಾಗ್ಯ.
ಎಲ್ಲ್ಲಾ ಅಮ್ಮಂದಿರಿಗೆ ಅದು ಬರುವುದಿಲ್ಲ!
Home › Unlabelled › ಕತ್ತಲ ಲೋಕದಲ್ಲಿ ಒಲುಮೆಯ ನಂದಾದೀಪ
0 comments:
Post a Comment