Saturday, August 8, 2009

'ಗೆರಟೆ'ಗೆ ಮಾನವರ್ಧನೆ!


ಪುತ್ತೂರು ಸನಿಹದ ಶಾಂತಿಗೋಡು ಸೇರಾಜೆಯ ಸುಹಾಸ್ ಹೆಬ್ಬಾರ್ರಿಗೆ ಪ್ಲಾಸ್ಟಿಕ್ ಅಂದರೆ ಅಷ್ಟಕ್ಕಷ್ಟೇ. ಬೆಂಕಿಯಲ್ಲೂ ನಾಶವಾಗದ, ಮಣ್ಣಿನಲ್ಲೂ ಕರಗದ ಪ್ಲಾಸ್ಟಿಕ್ನ್ನು ಮಿತವಾಗಿ ಬಳಸುವುದು ಅವರ ಜೀವನದ ಒಂದು 'ಪಾಲಿಸಿ'. 'ಪ್ಲಾಸ್ಟಿಕ್ ಬಗ್ಗೆ ಮೂಗು ಮುರಿಯುತ್ತಿಯಾ, ನಿನ್ನ ಅಂಗಿಯ ಗುಬ್ಬಿಗಳು ಪ್ಲಾಸ್ಟಿಕ್ ಅಲ್ವಾ?' ಸ್ನೇಹಿತರೊಬ್ಬರ ಪ್ರಶ್ನೆ ಅಂತರಂಗಕ್ಕೆ ಚುಚ್ಚಿತು. ನಾಳೆಯಿಂದ ಅದನ್ನೂ ಬಿಟ್ಟೆ' ಸುಹಾಸ್ ಪ್ರತಿಜ್ಞೆ! ಜೊತೆಗಿದ್ದವರು ಗೇಲಿ ಮಾಡಿ ನಕ್ಕರು!
ಆಗಲೇ ತೆಂಗಿನ ಗೆರಟೆ(ಚಿಪ್ಪಿ)ಯಲ್ಲಿ ವಿವಿಧ ಕುಸುರಿಗಳನ್ನು ಮಾಡುತಿದ್ದ ಸುಹಾಸ್, ಗೆರಟೆಯಿಂದಲೇ ಪ್ಯಾಂಟ್, ಅಂಗಿಯ ಗುಂಡಿ(ಗುಬ್ಬಿ)ಗಳನ್ನು ಯಾಕೆ ತಯಾರಿಸಬಾರದು? ಮನದೊಳಗಿನ ಮೌನ ಪ್ರಶ್ನೆ ಮಾತಾಗಲು ಹೆಚ್ಚು ದಿವಸ ಬೇಕಾಗಲಿಲ್ಲ. ಹಲವರಲ್ಲಿ ವಿಚಾರ ತಿಳಿಸಿದರು. 'ತಲೆ ಕೆಟ್ಟಿದೆ' ಅಂದರು. ಗೆರಟೆಯಿಂದ ಗುಬ್ಬಿ ಸಿದ್ಧಪಡಿಸಲು ಬೇಕಾದ ಸಲಕರಣೆ ಸಂಗ್ರಹಕ್ಕೆ ತಾಂತ್ರಿಕ ಅನುಭವಿಗಳನ್ನು ಸಂಪರ್ಕಿಸಿದರು. ಅದಕ್ಕೆ ಬೇಕಾದ 'ಅಚ್ಚು' ತಯಾರಿಸಿ ಕೊಡುವಂತೆ ವಿನಂತಿಸಿದರು. ಇವರನ್ನು ವಿಚಿತ್ರವಾಗಿ ನೋಡಿ ಕೈಚೆಲ್ಲಿದರು!
ಕೊನೆಗೆ ಊರಿನ ಒಬ್ಬ ಪದವಿ ಪಡೆಯದ(!) ಮೆಕ್ಯಾನಿಕ್ ಒಬ್ಬನಲ್ಲಿ ವಿಚಾರ ತಿಳಿಸಿದಾಗ, ಇವರ ಮನದಲ್ಲಿದ್ದ ಅಚ್ಚಿನ ಮಾದರಿ ವಾರದೊಳಗೆ ಸಿದ್ಧವಾಯಿತು. ಎಲ್ಲವನ್ನೂ ಕಲಿತ ತಾಂತ್ರಿಕ ಪದವೀಧರರಿಗೆ ಹೊಳೆಯದ ಒಂದು ವಿಚಾರ, ಏನನ್ನೂ ಕಲಿಯದ ಹಳ್ಳಿಯ ಸಾಮಾನ್ಯನಿಗೆ ಹೊಳೆಯಿತು. ಈತನೇ ನಿಜವಾದ ವಿಜ್ಞಾನಿ' ಜೊತೆಗಿದ್ದ ಸುಹಾಸರ ತಂದೆ ಸುಬ್ರಹ್ಮಣ್ಯ ಹೆಬ್ಬಾರ್ ಒಂದು ಸರ್ಟಿಫಿಕೇಟ್ ನೀಡಿದರು!
3-4 ಆಕಾರದ ಗುಬ್ಬಿಗಳನ್ನು ತಯಾರಿಸಲು ಅಚ್ಚು, ಈ ಆಕಾರಕ್ಕೆ ಗೆರಟೆಯನ್ನು ಕೊರೆಯಲು ಕೈಚಾಲಿತ ಕೊರೆಯಂತ್ರ, ಅಲ್ಪಸ್ವಲ್ಪ ಓಡಾಟ...ಹೀಗೆ ಮುನ್ನೂರು ರೂಪಾಯಿ ವೆಚ್ಚ. ಕೊರೆಯಂತ್ರ ಗೆರಟೆಯನ್ನು ಕೊರೆಯಿತು ಸಿದ್ಧವಾದುವು ಗುಂಡಿಗಳು. ಅದೂ ನಾಲ್ಕು ಬಣ್ಣ, ನಾಲ್ಕು ಆಕಾರದಲ್ಲಿ. ಮೊದಲು ತನ್ನ ಅಂಗಿ, ಪ್ಯಾಂಟಿನ ಪ್ಲಾಸ್ಟಿಕ್ ಗುಬ್ಬಿಗಳನ್ನು ಕಿತ್ತರು. ಗೆರಟೆ ಗುಬ್ಬಿಗಳನ್ನು ಹೊಲಿದರು. ತನ್ನನ್ನು ಚುಚ್ಚಿದವರೆದುರು ನಿಂತರು. ಅಂದು ಕಟಕಿಯಾಡಿದವರ ಬಾಯಿ ಮುಚ್ಚಿತು. ಅವರು ಗೇಲಿ ಮಾಡದಿರುತ್ತಿದ್ದರೆ, ಗೆರೆಟೆಯ ಗುಬ್ಬಿ ತಯಾರಿಯೇ ಆಗುತ್ತಿರಲಿಲ್ಲ' ಸುಹಾಸ್ ಹೇಳುತ್ತಾರೆ.
ಸೀಯಾಳ ಹಂತ ದಾಟಿದ ಆದರೆ ಇನ್ನೂ ಒಣಗದ (ಬನ್ನಂಗಾಯಿ) ಗೆರಟೆಯು ಹಳದಿ ಮಿಶ್ರಿತ ಬಿಳಿ ವರ್ಣ, ತೀರಾ ಒಣಗಿದ ಗೆರಟೆ ಕಪ್ಪುಬಣ್ಣ, ಕೊಬ್ಬರಿ ಹಂತದ ಗೆರಟೆಯ ಒಳಮೈ ಮಣ್ಣಿನ ಬಣ್ಣ ಮತ್ತು ಬಾವೆ ಕಟ್ಟಿದ ಸೀಯಾಳ ಗೆರಟೆಯ ಒಳಮೈ ಕಾಫಿವರ್ಣವನ್ನು ಹೋಲುತ್ತದೆ.....ಹೀಗೆ 3-4 ಸ್ತರದ ಗುಬ್ಬಿಗಳು, ಬೇಕಾದ ಬಣ್ಣದೊಂದಿಗೆ ಅಂಗಿ, ಕೋಟು, ಪ್ಯಾಂಟ್ಗಳಿಗೆ ಹೊಂದಿಸಬಹುದು. 'ಖಾದಿ ಉಡುಪುಗಳಿಗೆ ಗೆರಟೆ ತಯಾರಿ ಗುಂಡಿಗಳು ಹೊಂದುವಷ್ಟು ಬೇರ್ಯಾವುದೂ ಹೊಂದುವುದಿಲ್ಲ' ಧರಿಸಿ ಅನುಭವಿಸಿದ ಸುಹಾಸ್ ಅನುಭವ.
ಗುಂಡಿಯ ದಪ್ಪಕ್ಕನುಗುಣವಾಗಿ ಗೆರಟೆಯ ಆಯ್ಕೆ. ಮೊದಲು ಗೆರಟೆಯನ್ನು ಕೊರೆಯಂತ್ರದ ಮೂಲಕ ಗುಂಡಿಯಾಕಾರದಲ್ಲಿ ಕೊರೆತ. ನಂತರ ಅದನ್ನು ಎರಡೂ ಬದಿ ಅಲಗುಳ್ಳ ಹರಿತವಾದ ಸಣ್ಣ ಚೂರಿಯ ಸಹಾಯದಿಂದ ಜುಂಗನ್ನು ತೆಗೆದು ನಯಗೊಳಿಸುವಿಕೆ. ಮಧ್ಯದಲ್ಲಿ ಎರಡು ತೂತನ್ನು ತೆಗೆದರೆ ಗುಬ್ಬಿ ಸಿದ್ಧ. ಆದರೆ ಇಲ್ಲಿ ಬರೆದಷ್ಟು ಸಲೀಸಾಗಿ ಗುಬ್ಬಿ ತಯಾರಾಗದು! ಅದಕ್ಕೆ ಸೂಕ್ಷ್ಮ ಕುಸುರಿ ಮನಸ್ಸು ಬೇಕು. ಸ್ವಲ್ಪ ಎಚ್ಚರ ತಪ್ಪಿತೋ, ಬೆರಳು ತುಂಡು. ಮೊದಮೊದಲು ಎಷ್ಟು ಸಲ ಗಾಯಮಾಡಿಕೊಂಡಿದ್ದಾನೋ ಏನೋ ಹೆತ್ತವ್ವೆ ಪದ್ಮಿನಿ ಅಮ್ಮನ ಕರುಳು ಮಾತನಾಡಿತು.
ಸುಹಾಸ್ ಮಾತ್ರವಲ್ಲ, ಅವರ ಮನೆಯವರೆಲ್ಲರ ಅಂಗಿ, ಪ್ಯಾಂಟ್, ಪೈರಾನ್ಗಳಲ್ಲಿರುವುದು ಗೆರಟೆ ಗುಬ್ಬಿಗಳು. ದರ್ಜಿ 'ಗುಬ್ಬಿಯನ್ನೂ ತಂದು ಕೊಡಿ' ಎಂದಾಗ ಇವರನ್ನು ಅರಿಯದವರಿಗೆ ಆಶ್ಚರ್ಯವಾದೀತು! 'ಇದನ್ನು ಗೆರಟೆ ಗುಬ್ಬಿಯೆಂದು ಯಾರೂ ಇದುವರೆಗೆ ಹೇಳಿಲ್ಲ. ಯಾಕೆಂದರೆ ಪ್ಲಾಸ್ಟಿಕ್ ಗುಬ್ಬಿಯನ್ನು ಇದು ಹೋಲುತ್ತದೆ' ಸುಬ್ರಹ್ಮಣ್ಯ ಹೆಬ್ಬಾರ್ ಖುಷಿಯಿಂದ ಹೇಳುತ್ತಾರೆ. ಏನಿದ್ದರೂ ಮನೆಮಂದಿಯ ಬಳಕೆಗೆ ಮಾತ್ರ ಸ್ವತಯಾರಿ ಗುಂಡಿಗಳು. ಬೇಡಿಕೆ ಬಂದರೂ ತಯಾರಿಸಲಾಗದಷ್ಟು ಬಿಡುವಾಗದ ಸುಹಾಸ್, 'ಮನಸ್ಸಿದ್ದರೆ ಎಲ್ಲರೂ ತಯಾರಿಸಬಹುದು. ಇದೇನೂ ಬ್ರಹ್ಮವಿದ್ಯೆಯಲ್ಲ!' ಅನ್ನುತ್ತಾರೆ.
ಸುಹಾಸ್ ಶಾಲಾ ದಿನಗಳಿಂದಲೇ 'ಗೆರಟೆ ಕಲಾವಿದ. ಅವರಲ್ಲಿ ಮೂವತ್ತಕ್ಕೂ ಮಿಕ್ಕಿ ಗೆರಟೆ ತಯಾರಿ ಕುಸುರಿ ಕಲಾಕೃತಿಗಳಿವೆ. ಎಲ್ಲವೂ ಕೈಚಾಲಿತ. ವಿವಿಧ ದೋಣಿಗಳು, ಡೈನಿಂಗ್ ಟೇಬಲ್, ಹೆಣ್ಮಕ್ಕಳ ಹೇರ್ಕ್ಲಿಪ್, ಮೊಬೈಲ್ ಚಾರ್ಜ್ ಮಾಡಲಿಡುವ ಪೀಠ, ಮುಖವಾಡಗಳು..ಹೀಗೆ. ಒಮ್ಮೆ ವಿಟ್ಲ (ದ.ಕ.) ಕಾಲೇಜಿನಲ್ಲಿ ಇವರ ಕುಸುರಿಗಳ ಪ್ರದರ್ಶನವಿತ್ತು. 'ಹೇರ್ ಕ್ಲಿಪ್ ಅಂದಕ್ಕೆ ಅಂದಗಾತಿಯರು ಮುಗಿಬಿದ್ದದ್ದೇ ಬಿದ್ದದ್ದು... ಎನ್ನುವಾಗ ಸುಹಾಸ್ ನಾಚುತ್ತಾರೆ. ಮರದ ಬೊಡ್ಡೆಯನ್ನು 'ಕುಳಿತು ಬರೆಯವ' ಮೇಜನ್ನಾಗಿ ರೂಪುಗೊಳಿಸಿದ್ದಾರೆ. ಇದರಲ್ಲಿ ಗೆರಟೆಯ ಪೆನ್ ಸ್ಟಾಂಡ್. ಇವರಜ್ಜ 97ರ ವೆಂಕಟ್ರಮಣ ಹೆಬ್ಬಾರ್ರಿಗೆ ಬರೆಯಲು ಇದೇ ಬೇಕು!
ಇವರಲ್ಲಿ ಈಗಿರುವ ಎಲ್ಲಾ ಕುಸುರಿಗಳು ಮಾರಾಟಕ್ಕಿಲ್ಲ. ಆ ಹಂಬಲವೂ ಅವರಿಗಿಲ್ಲ. ತನ್ನ ಸಂತೋಷಕ್ಕಾಗಿ ರೂಪುಗೊಂಡ ಶಿಲ್ಪಗಳಿವು. ಹೀಗೆ ಮನೆಮಂದಿ ಎಲ್ಲರೂ ಸುಹಾಸರ ಗೆರಟೆ ಸಹವಾಸವನ್ನು ಸಹಮತಿಸಿದ್ದಾರೆ. ಗೌರವಿಸಿದ್ದಾರೆ. 'ಏನಾದರೂ ಹೊಸತು ಮಾಡಬಾರ್ದಾ' ಮಡದಿ ನಿತ್ಯ ಚುಚ್ಚುತ್ತಾರಂತೆ! ಇಷ್ಟು ಸಾಲದೇ ಕಲಾವಿದನೊಬ್ಬನಿಗೆ ಬೇಕಾದ ಮನೆಪ್ರೋತ್ಸಾಹ? ಆದರೆ ಸುಹಾಸರ (08251-280750) ಹವ್ಯಾಸ ಗೆರಟೆಯೊಳಗೇ ಸುತ್ತುತ್ತಿಲ್ಲ! ಸಂಗೀತದೆಡೆಗೆ ತಿರುಗಿಸಿದ್ದಾರೆ! ಈಗವರು 'ಮೇಲೇರುತ್ತಿರುವ' ಹಿಂದೂಸ್ಥಾನಿ ತಬಲಾಪಟು. ಅಂತಾರಾಷ್ಟ್ರೀಯ ಖ್ಯಾತಿಯ ಎನ್.ವಿ.ಮೂರ್ತಿಯವರ ಶಿಷ್ಯ.


0 comments:

Post a Comment