Wednesday, March 10, 2010

ಸ್ವಾವಲಂಬಿ ಕೃಷಿಯ ತಪಸ್ವಿ



'ಚೇರ್ಕಾಡಿ' ಅಂದರೆ ಸಾಕು, ರಾಮಚಂದ್ರ ರಾವ್ ಅನ್ನಬೇಕಾಗಿಲ್ಲ - ಒಂದು ಕೃಷಿ ಪದ್ಧತಿಯೇ ಕಣ್ಣ ಮುಂದೆ ನಿಂತುಬಿಡುತ್ತದೆ. ಈ ಪದ್ಧತಿಯ ಕಲಿಕೆ ಮತ್ತು ಅಳವಡಿಕೆ ಪುಸ್ತಕ ಆಧರಿಸಿದ್ದಲ್ಲ. ಎರವಲು ಪಡೆದದ್ದೂ ಅಲ್ಲ. ನಿತ್ಯ ಮಣ್ಣಿನೊಂದಿಗೆ, ಗಿಡಗಳೊಂದಿಗಿರುತ್ತಾ ಅವೂ ಬೆಳೆದಂತೆ, ತಾನೂ ಬೆಳೆಯುತ್ತಾ ರೂಪಿಸಿದ ಕೃಷಿಕ್ರಮ.

ಮೇಲ್ನೋಟಕ್ಕೆ ಚೇರ್ಕಾಡಿಯವರ ಕೃಷಿಯಲ್ಲಿ ಹೇಳುವಂತಹುದು, ನೋಡುವಂತಹುದು ಹೆಚ್ಚೇನಿಲ್ಲ ಅನ್ನಿಸಬಹುದು. ಅವರ ಕೃಷಿ ವಿಚಾರಗಳನ್ನು 'ಮಾಡಿ-ನೋಡಿ' ಅನುಭವಿಸಿದರೆ ಮಾತ್ರ ಮಹತ್ವ ವೇದ್ಯ.

ಕೃಷಿ ಮತ್ತು ಬದುಕನ್ನು ಚೇರ್ಕಾಡಿಯವರು ಪ್ರತ್ಯಪ್ರತ್ಯೇಕಿಸಿಲ್ಲ. ಅದಕ್ಕೆ ವಾಣಿಜ್ಯಿಕ ಟಚ್ ಕೊಟ್ಟಿಲ್ಲ! 'ಅವರಿಗೆ ಬದುಕಿಗಾಗಿ ಕೃಷಿ, ಕೃಷಿಗಾಗಿ ಬದುಕು ಅಲ್ಲ' ಎನ್ನುತ್ತಾ ಬಾಳಿದವರು. ಒಂದು ಕಾಲಘಟ್ಟದಲ್ಲಿ ಹೊಟ್ಟೆಪಾಡಿಗಾಗಿ ಹತ್ತಿ ಬೆಳೆದು, 'ಚರಕ'ದಿಂದ ನೂಲು ಎಳೆದರು. ಮಗ್ಗದಿಂದ ಬಟ್ಟೆ ನೇಯ್ದರು. ಅರ್ಧ ಹೊಟ್ಟೆ ತುಂಬಿದರೂ, ಪೂರ್ತಿ ತುಂಬಿದ ಸಂತೃಪ್ತಿ ಉಂಟಾದುದು - ನೇಯ್ದ ಬಟ್ಟೆಯನ್ನು ಸ್ವತಃ ಧರಿಸಿದಾಗ!

ಮಹಾತ್ಮ ಗಾಂಧೀಜಿಯವರ ವಿಚಾರ, ಅದರ ಅನುಷ್ಠಾನ ರಾಮಚಂದ್ರ ರಾಯರ ಬದುಕಿನುಸಿರು. ತುಂಡು ಬಟ್ಟೆ, ಹೆಗಲಲ್ಲಿ ಶಲ್ಯ, ಅಗತ್ಯ ಬಿದ್ದರಷ್ಟೇ ಅಂಗಿ - ಇದು ಬಿಟ್ಟರೆ ಬೇರ್ಯಾವ ಉಡುಪನ್ನೂ ಆಶಿಸಿಲ್ಲ. ರಂಗುರಂಗಿನ ಪ್ರಲೋಭನೆಗಳು ಅಟ್ಟಿಸಿಕೊಂಡು ಬಂದಿಲ್ಲ.

ನಲುವತ್ತರ ದಶಕದಲ್ಲಿ ದೇಶದಲ್ಲಿ ಅನ್ನಕ್ಷಾಮ ಬಂದಾಗ 'ನಿಮ್ಮ ಅನ್ನವನ್ನು ನೀವೇ ಬೆಳೆಯಿರಿ' ಗಾಂಧೀಜಿ ಕರೆ. ಅಲ್ಲಿಂದ ಶುರುವಾಯಿತು, ಭತ್ತದ ಕೃಷಿ. ಎರಡಕ್ರೆ ಭೂಮಿಯ ಒಂದು ಭಾಗದಲ್ಲಿ ಮಳೆನೀರು ಬಳಸಿ ಭತ್ತದ ಬೇಸಾಯ.

1962ರ ಒಂದು ದಿನ. ಮೆಣಸಿನ ಏರು ಮಡಿಯಲ್ಲಿ ಅದರಷ್ಟಕ್ಕೇ ಬೆಳೆದ ಒಂದೇ ಒಂದು ಭತ್ತದ ತೆನೆ. ಅದರಲ್ಲಿ ಸಿಕ್ಕಿತು, ಅರ್ಧ ಪಾವು ಭತ್ತ. ' ನೀರು ನಿಲ್ಲಿಸದೆ, ಕಾರ್ಮಿಕರ ಅವಲಂಬನೆಯಿಲ್ಲದೆ, ಉಳುಮೆ ಮಾಡದೆ ಭತ್ತದ ಕೃಷಿ ಸಾಧ್ಯ' - ಚೇರ್ಕಾಡಿಯವರ 'ಆರನೇ ಸೆನ್ಸ್' ಚುರುಕಾಯಿತು. ಸಿಕ್ಕಿದ ಅರ್ಧ ಪಾವನ್ನು ಮಡಿ ಮಾಡಿ ಬೆಳೆದರು. ಬರೋಬ್ಬರಿ ಇಪ್ಪತ್ತೊಂದು ಕಿಲೋ ಇಳುವರಿ. ಮುಂದಿನ ವರುಷಗಳಲ್ಲಿ ಕ್ವಿಂಟಾಲಾಯಿತು.

'ನೋಡಿ. ಯಾವ ಸಂಶೋಧನೆಗಳನ್ನು ಭೂಮಿ ಸ್ವೀಕರಿಸುವುದಿಲ್ಲ. ನಮ್ಮ ಬೆವರು ಭೂಮಿಗೆ ಬಿದ್ದರೆ, ಅದು ಅನ್ನದ ರೂಪದಲ್ಲಿ ಚಿನ್ನವಾಗಿ ಬರುತ್ತದೆ' ಇಲಾಖೆಗಳಿಗೆ, ಸಂಶೋಧಕರಿಗೆ ಚೇರ್ಕಾಡಿಯವರ ಸಲಹೆ. ಈ ಕ್ರಮದಲ್ಲಿ ಪಡೆದ ಇಳುವರಿ ಇದೆಯಲ್ಲಾ, ಇಲಾಖೆಗಳ ಅಂಕಿಅಂಶಗಳ ಕಡತವನ್ನು ಮುಚ್ಚಿಸಿತ್ತು! ಕೆಲವರ ಮುಖ ಕೆಂಪಗಾಗಿತ್ತು.

ಕೃಷಿ ನೋಡಲು ಸಾವಿರಾರು ರೈತರು ಚೇರ್ಕಾಡಿಯವರ ತೋಟಕ್ಕೆ ಬಂದರು. ನೋಡಿದರು. ಮಾತಾಡಿಸಿದರು. 'ಶಹಬ್ಬಾಸ್' ಕೊಟ್ಟರು. 'ಅದೆಲ್ಲಾ ಬೇಡ. ನೀವು ಮಾಡಿ ನೋಡಿ ಫಲಿತಾಂಶ ಹೇಳಿ. ಸುಮ್ಮನೆ ಮಾತನಾಡಿ ಪ್ರಯೋಜನವಿಲ್ಲ' ಎನ್ನುತ್ತಿದ್ದರು.
ಭೂಮಿಗೆ ಹಟ್ಟಿಗೊಬ್ಬರವೇ ಅಮೃತ. ಅದಕ್ಕಿಂತ ಮಿಗಿಲಾದ ಬೇರೆ ಗೊಬ್ಬರವಿಲ್ಲ. ಸುತ್ತಲಿನ ಕಚ್ಚಾವಸ್ತುಗಳನ್ನು ಭೂಒಡಲಿಗೆ ಹಾಕಿದರೆ ಗೊಬ್ಬರವಾಗುತ್ತದೆ. ರಾಯರು ಸಾವಯವ, ರಾಸಾಯನಿಕ ಶೂನ್ಯ - ಅಂತ 'ಬೋರ್ಡು' ಹಾಕಿ ಕೃಷಿ ಮಾಡಿದವರಲ್ಲ. ಅವರ ತೋಟಕ್ಕೆ ರಾಸಾಯನಿಕ, ಬೀಜ ಕಂಪೆನಿಗಳು ನುಗ್ಗಿಯೇ ಇಲ್ಲ!

ಡಾ.ಟಿ.ಎ.ಪೈಗಳು ಇವರ ಕಷ್ಟ ನೋಡಿ 'ನಿಮಗೆ ಪಂಪ್ ಸೆಟ್ ಕೊಡಿಸ್ತೇನೆ' ಅಂದರು. ಅದನ್ನು ನಯವಾಗಿ ತಿರಸ್ಕರಿಸಿ, ಬಾವಿಯಿಂದ ನೀರು ಸೇದಿ, ಏತದಿಂದ ಎತ್ತಿ ತೋಟದ ಗಿಡಗಳನ್ನು ಹಸಿರು ಮಾಡಿದ್ದರು. ಚರಕದಂತಹುದೇ, ಆದರೆ ಸ್ವಲ್ಪ ದೊಡ್ಡದಾದ ರಾಟೆಯನ್ನು ಮಾಡಿ ಬಾವಿಯ ನೀರನ್ನು ಮೇಲೆತ್ತಿದ ದಿವಸಗಳನ್ನು ಹೇಳುವಾಗ ಚೇರ್ಕಾಡಿಯವರು ಮುಖ ಬಾಡುತ್ತಿರಲಿಲ್ಲ.

'ಹೌದಪ್ಪಾ.. ಪಂಪ್ ಕೊಟ್ಟರು ಅಂತಿಟ್ಟುಕೊಳ್ಳೋಣ. ಅರ್ಧ ಗಂಟೆಯಲ್ಲಿ ನನ್ನ ಕೆಲಸಗಳೆಲ್ಲಾ ಮುಗಿದುಹೋಗುತ್ತದೆ. ನಂತರ ಏನು ಮಾಡೋಣ. ಅಂಗಡಿಯ ಜಗಲಿಯಲ್ಲೋ, ಬಸ್ಸ್ಟಾಂಡಿನಲ್ಲೋ, ರಸ್ತೆಯಲ್ಲೋ ಪರದೂಷಣೆ ಮಾಡುತ್ತಾ ಸಮಯ ಕೊಲ್ಲಲು ನನಗಿಷ್ಟವಿಲ್ಲ' ಎನ್ನುತ್ತಿದ್ದರು. ಕೃಷಿಕನಾದವ ತೋಟದಲ್ಲೇ ಇರಬೇಕು, ಆತನಿಗೆ ತಿರುಗಾಟ ಸಲ್ಲದು. ತಿರುಗಾಟ ಅನಿವಾರ್ಯವಾದರೂ ಹಿಡಿತದಲ್ಲಿರಲಿ - ಅವರ ಕಿವಿಮಾತು.

ನಿತ್ಯ ಬದುಕಿಗೆ ಬೇಕಾಗುವಂತಹ ಎಲ್ಲವೂ ತೋಟದಲ್ಲಿರಬೇಕು. ಅಂಗಡಿಯಿಂದ ಉಪ್ಪು, ಚಹಪುಡಿ ಬಿಟ್ಟರೆ ಬೇರೇನನ್ನೂ ತರುವಂತಿರಬಾರದು! ಈ ನಿಲುವಿನಲ್ಲಿ ಅವರಿಗೆ ರಾಜಿಯಿಲ್ಲ. ಮಾವು, ಹಲಸು, ಚಿಕ್ಕು, ಶುಂಠಿ, ಕಾಳುಮೆಣಸು, ಅನಾನಸ್, ಗೇರು.. ಒಂದೇ ಎರಡೇ. ಜತೆಗೆ ಕಾಡುಮರಗಳು.

'ಬ್ಯಾಂಕಲ್ಲಿ ಹಣವಿಡಲು ನನ್ನಲ್ಲಿಲ್ಲ. ತೋಟವೇ ನನಗೆ ಬ್ಯಾಂಕ್. ಇಲ್ಲಿರುವ ಮರಗಳೆಲ್ಲಾ ಫಿಕ್ಸೆಡ್ ಡಿಪಾಸಿಟ್. ನೆಲದೊಳಗಿನ ಶುಂಠಿ, ಅರಸಿನ ಏಟಿಎಂ. ಬೇಕಾದಾಗ ನಗದೀಕರಿಸಿದರಾಯಿತು' ಎನ್ನುತ್ತಿದ್ದರು. ಒಮ್ಮೆ ಬ್ಯಾಂಕಿನಿಂದ ಸಾಲ ಮಾಡಿದ್ದರಂತೆ. ಸಾಕೋ ಸಾಕಾಯಿತು - ಮತ್ತೆಂದೂ ಸಾಲಕ್ಕಾಗಿ ಬ್ಯಾಂಕಿನ ಮುಂದೆ ಅರ್ಜಿ ಹಿಡಿದು ನಿಲ್ಲಲಿಲ್ಲ. ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು - 'ದಯಮಾಡಿ ಕೃಷಿಕರಿಗೆ ಸಾಲಕೊಟ್ಟು ಅವರನ್ನು ಲಗಾಡಿ ಕೊಡಬೇಡಿ'.

ಕೃಷಿಕನಿಗೆ ಎರಡು ಎಕರೆಗಳಿಗಿಂತ ಹೆಚ್ಚು ಕೃಷಿ ಭೂಮಿಯಿರಬಾರದು. ಅದರೊಳಗೆ ಹೆಚ್ಚು ತಾಳಿಕೆ ಬರುವಂತಹ ಕೃಷಿ ಬೆಳೆಯಿರಿ. ಕೃಷಿ ಕೆಲಸಗಳಿಗೆ ಯಂತ್ರೋಪಕರಣಗಳು ಬಂದಿವೆ. ಅವು ನಮ್ಮನ್ನು ಆಳಬಾರದು. ಅವುಗಳ ಸಹವಾಸ ಹೆಚ್ಚಾದರೆ ಮತ್ತೆ ಅಳುವೇ ಗತಿ!

'ಈಗ ನೋಡಿ. ಎಲ್ಲೆಲ್ಲೂ ಪವರ್.. ಬೊಬ್ಬೆ! ವಿದ್ಯುತ್..! ಕೃಷಿಕನಿಗೆ ಪವರ್ ಬರುವುದು ಸ್ವಿಚ್ ಹಾಕಿದಾಗ ಅಲ್ಲ. ತೋಟದಲ್ಲಿದ್ದಷ್ಟೂ, ಮಣ್ಣಿನೊಂದಿಗೆ ಇದ್ದಷ್ಟೂ ಹೊತ್ತು ಪವರ್ ಜಮೆ ಆಗುತ್ತ ಇರುತ್ತದೆ.'

ಶಾಲೆಗಳಲ್ಲಿ ಮಕ್ಕಳಿಗೆ ಕೃಷಿ ಪಾಠ ಬೇಕು. ಥಿಯರಿಯೊಂದಿಗೆ ಪ್ರಾಕ್ಟಿಕಲ್ ಕೂಡ. ಅಲ್ಲಿ ಕಲಿತ ಪಾಠ ಮನೆಯಲ್ಲಿ ಅನುಷ್ಠಾನವಾಗಬೇಕು. ಈಗಿನ ಶಿಕ್ಷಣ ಪದ್ಧತಿ ಮಕ್ಕಳನ್ನು ಕೃಷಿಯಿಂದ ದೂರಮಾಡುತ್ತದೆ - ಎಂಬ ದೂರದೃಷ್ಟಿ.
ಮಾತಿನ ಮಧ್ಯೆ ರಾಯರು ಹೇಳಿದ್ದರು - 'ಯಾರು ಶ್ರಮ ಪಟ್ಟು, ಬೆವರುಸುರಿಸಿ ತಂತಮ್ಮ ತೋಟದಲ್ಲಿ ದುಡೀತಾರೋ ಅವರೆಂದೂ 'ಅದು ಕೊಡಿ, ಇದು ಕೊಡಿ' ಅಂತ ಬೊಬ್ಬೆ ಹಾಕುವುದಿಲ್ಲ!

ಕೃಷಿಕ ಸ್ವಾವಲಂಬಿಯಾಗಿ ಬದುಕಬಹುದು ಎಂಬುದನ್ನು ಚೇರ್ಕಾಡಿ ರಾಮಚಂದ್ರ ರಾಯರು ಬದುಕಿ ತೋರಿಸಿದರು. 'ಸ್ವಾವಲಂಬನೆ ಮತ್ತು ಸ್ವ-ನಂಬಿಕೆ' ಅವರ ಕೃಷಿಯ ಗುಟ್ಟು. ಇವೆರಡೂ ಇದ್ದರೆ ಕೃಷಿ ಸೋಲುವುದಿಲ್ಲ. ಒಂದು ದಿನವೂ 'ಕೃಷಿ ಪ್ರಯೋಜನವಿಲ್ಲ' ಅತ ಗೊಣಗಿದವರಲ್ಲ. ಇದರಿಂದಾಗಿ 'ಕೊಳ್ಳುಬಾಕ ಸಂಸ್ಕೃತಿ' ಅವರ ಅಂಗಳವೇರಿಲ್ಲ. ಬದುಕಿನ ಹೊಯ್ದಾಟವನ್ನು ತಾನು ನಂಬಿದ ತತ್ವದಲ್ಲಿ ನಿಯಂತ್ರಿಸಿದ ಚೇರ್ಕಾಡಿಯವರು ನಿಜಾರ್ಥದಲ್ಲಿ ಓರ್ವ ಸಂತ.

ಚೇರ್ಕಾಡಿಯವರು ಹಾಕಿಕೊಟ್ಟ 'ಕೃಷಿ ಬದುಕಿನ ದಾರಿ' ಮುಂದಿದೆ. ಸರಳ ಬದುಕಿನ ಅಡಿಗಟ್ಟನ್ನು ಹಾಕಿಕೊಟ್ಟಿದ್ದಾರೆ. ನಾವದರ ನೊಣಪ್ರತಿಯಾಗುವುದು ಬೇಡ, ಆಗಲೂ ಸಾಧ್ಯವಿಲ್ಲ. ಆದರೆ 'ಸರಳ' ದಾರಿಯಿದೆಯಲ್ಲಾ - ಅದರಲ್ಲಿ ಕಲ್ಲುಮುಳ್ಳುಗಳಿಲ್ಲ! ನಡೆಯುವ ಕೆಲಸ ನಾವೇ ಮಾಡಬೇಕಷ್ಟೇ.

ತೊಂಭತ್ತೆರಡು ಸಂವತ್ಸರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಚೇರ್ಕಾಡಿಯವರು ಫೆ.21, 2010 ರಂದು ಕಾಲವಾದರು. ಅವರಿಗಿದು ಅಕ್ಷರ ನಮನ.

3 comments:

ಕೇಶವ ಪ್ರಸಾದ್.ಬಿ.ಕಿದೂರು said...

very nice artice..

ಸಾಗರಿ.. said...

ಪರಾಜೆ ಅವರೇ,
ನಿಮ್ಮ ಅಕ್ಷರ ನಮನ ಚೆನ್ನಾಗಿದೆ. ಇದು ನನ್ನ ಕಾಮೆಂಟು ನಮನ(ಕಾಮೆಂಟು ಮೂಲಕ ನನ್ನದೂ ಒಂದು ನಮನ)

ವಿ.ರಾ.ಹೆ. said...

ಕೃಷಿಯ ತಪಸ್ವಿಗೆ ನನ್ನದೂ ಒಂದು ನಮನ.

ಮೂರನೇ ಚಿತ್ರದಲ್ಲಿ ಅವರು ಹಿಡಿದುಕೊಂಡಿರುವ ಹಣ್ಣು/ಕಾಯಿ ಯಾವುದು ಅಂತ ಹೇಳುತ್ತೀರಾ ಪ್ಲೀಸ್....

Post a Comment