Tuesday, August 31, 2010

ಮಂಡನೆಗೆ ಸಿದ್ಧವಾಗಿದೆ, ಬೀಜ ಮಸೂದೆ

ಬಿಟಿ ಬದನೆ ಗುಮ್ಮ ಬದಿಗೇನೋ ಸರಿಯಿತು ಇತ್ತ ಬೀಜ ಗುಮ್ಮ 'ತಾನು ರೈತಪರ' ಎನ್ನುತ್ತಾ ಅಂಗೈಗೆ ತುಪ್ಪ ಸವರಿ ಕೃಷಿಕರ ಮನೆ ನುಗ್ಗಲು ಹೊಂಚು ಹಾಕುತ್ತಿದೆ!

ತನ್ನದೇ ವಿಧಾನದಲ್ಲಿ ಕೃಷಿಕನು ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾನೆ. ಕರಾವಳಿಯಲ್ಲಿ ಭತ್ತವನ್ನು ಮುಡಿಯ ರೂಪದಲ್ಲಿ ಕಾಪಿಟ್ಟರೆ; ಇತರ ಕಡೆಗಳಲ್ಲಿ ಬೀಜಗಳನ್ನು ಮಣ್ಣಿನೊಳಗೆ, ಪಾತ್ರೆಗಳೊಳಗೆ ಸಂರಕ್ಷಣೆ ಮಾಡುತ್ತಿರುವುದನ್ನು ಕಾಣುತ್ತೇವೆ. ಮುಂದಿನ ವರುಷ ಯಾರ ಮುಂದೆಯೂ ಕೈಯೊಡ್ಡದೆ ತಮ್ಮದೇ ಹೊಲದ ಬೀಜವನ್ನು ಬಿತ್ತುವುದು ಪಾರಂಪರಿಕ ವಿಧಾನ. ತಾನು ಬಳಸಿ ಮಿಕ್ಕುಳಿದುದನ್ನು ಇತರರಿಗೆ ಹಂಚುತ್ತಿರುವುದು ಸೌಹಾರ್ದ ಬಾಳ್ವೆಗೊಂದು ನಿದರ್ಶನ.

'ರೈತ ಬೀಜಕ್ಕಾಗಿ ಕಂಪೆನಿಗಳ ಮುಂದೆ ಕೈಯೊಡ್ಡಬೇಕು. ತಾನು ಸಂಗ್ರಹಿಸಿಟ್ಟುಕೊಂಡರೆ ಶಿಕ್ಷಾರ್ಹ ಅಪರಾಧ. ಹಂಚಿದರೆ ಅದು ಮಾರಾಟ ಅಂತ ಪರಿಗಣಿತವಾಗುತ್ತದೆ. ಅದಕ್ಕೆ ಸರಕಾರದ ಪ್ರತ್ಯೇಕ ಪರವಾನಿಗೆ ಬೇಕು. ನಿಮ್ಮ ಹೊಲದಲ್ಲಿ ಬೆಳೆದ ಪೈರಿನಲ್ಲಿ ಬೀಜ ತೆಗೆದಿಟ್ಟರೆ ಅದು ಸರಕಾರದ ಸೊತ್ತು!' - ಇಂತಹ ಕಂಪೆನಿ ಪ್ರಣೀತ' ಬೀಜ ಕಾಯದೆಯೊಂದು ಸಂಸತ್ತಿನಲ್ಲಿ ಮಂಡನೆಯಾಗಲು ಸಿದ್ಧವಾಗಿತ್ತು. ಆರು ವರುಷಗಳ ಹಿಂದೆಯೇ ಮಸೂದೆ ಸಿದ್ಧವಾದರೂ, ಈಗ ಹೊಸ ಅವತಾರದೊಂದಿಗೆ ಮಂಜೂರು ಮಾಡಲು ತುದಿಗಾಲಲ್ಲಿದೆ. ಆದರೆ 2004ರಲ್ಲಿ ನಿರೂಪಿತವಾಗಿದ್ದ ರೈತಮಾರಕ ವಿಚಾರಗಳನ್ನು ಈ ಸಲ ಕೈಬಿಟ್ಟಿರುವುದು ಸಮಾಧಾನಕರ.

ವಾಣಿಜ್ಯವಾಗಿ ಬೀಜ ಮಾರಾಟಗಾರರ ಮೂಲಕ ಮಾರಾಟವಾಗುವ ಕಂಪೆನಿ ಬೀಜಗಳ ಗುಣಮಟ್ಟವನ್ನು ನಿಯಂತ್ರಿಸುವುದು ಮತ್ತು ಭಾರತೀಯ ರೈತರನ್ನು ನಕಲಿ ಹಾಗೂ ಕಳಪೆ ಗುಣಮಟ್ಟದ ಬೀಜಗಳಿಂದ ರಕ್ಷಿಸುವುದು ತಿದ್ದುಪಡಿ ಮಸೂದೆಯ ಆಶಯ.
ಮಸೂದೆಯ ವ್ಯಾಪ್ತಿ ತೀರಾ ಕಿರಿದು ಮತ್ತು ಸೀಮಿತ. ಇದರಲ್ಲಿ ಬೀಜಗಳ ಬೆಲೆಯ ಕುರಿತಾದ ನಿಯಂತ್ರಣಕ್ಕೆ ಕಾನೂನಿಲ್ಲ. ಬೀಜಗಳ ಬೆಲೆಗಳು ರೈತರಿಗೆ ಎಟಕುವಂತಿರಬೇಕು. ಕೃಷಿ ಉತ್ಪನ್ನದ ಬೆಲೆಗಳನ್ನು ಸರ್ಕಾರವೇ ಭರಿಸುತ್ತದೆ. ಆದರೆ ಬೀಜದ ಬೆಲೆಗಳನ್ನು ಸರ್ಕಾರ ಪರಿಗಣಿಸುವುದಿಲ್ಲ. ಆಗ ಬೀಜ ಕಂಪೆನಿಗಳು ಮನಸ್ಸಿಗೆ ಬಂದಂತೆ ಬೆಲೆ ನಿಗದಿ ಮಾಡುವ ಅವಕಾಶ ಹೇರಳವಾಗಿದೆ.


ಉದಾ: ಟೊಮೆಟೋ ಬೀಜದ ಬೆಲೆ ಕಿಲೋಗೆ 475 ರೂಪಾಯಿಯಿಂದ 76,000 ರೂಪಾಯಿ ತನಕ ಇದ್ದರೆ, ದೊಣ್ಣೆಮೆಣಸಿನ ಬೆಲೆ ಕಿಲೋಗೆ 3670-65200 ರೂಪಾಯಿ! ಈ ರೀತಿಯ ಕಂಪೆನಿ ನಿರ್ಣಾಯಕ ಬೆಲೆಗಳನ್ನು ಕೃಷಿಕನಿಗೆ ತಾಳಿಕೊಳ್ಳಲು ಅಸಾಧ್ಯ. ಒಂದು ವೇಳೆ ಅಲ್ಲೋ ಇಲ್ಲೋ ತಾಳಿಕೊಂಡರೂ ಕಂಪೆನಿಯ ದಾಸಾನುದಾಸರಾಗಬೇಕಾದ ಸ್ಥಿತಿ!

'ರೈತರ ಹಿತಾಸಕ್ತಿಗಳನ್ನು ಬಲಿಕೊಟ್ಟು ಖಾಸಗಿ ಬೀಜ ಕಂಪೆನಿಗಳು ಹಾಗೂ ಕಾರ್ಪೋರೇಷನ್ಗಳ ಹಿತಾಸಕ್ತಿಗಳನ್ನು ನಿಯಂತ್ರಣ ಇಲ್ಲದೇ ರೈತರ ಸುಲಿಗೆ ಮಾಡುವ ಸಾಧ್ಯತೆಯಿದೆ. ಕೃಷಿಯ ಉತ್ಪಾದನಾ ವೆಚ್ಚ ಏರಿಕೆ ರೈತರಿಗೆ ಹೊರಲಾರದ ಹೊರೆಯಾಗಬಹುದು. ಈಗಲೇ ಈ ವಿಚಾರದಲ್ಲಿ ರೈತ ಹೈರಾಣನಾಗಿದ್ದಾನೆ' ಎನ್ನುತ್ತಾರೆ ಸಹಜ ಸಮೃದ್ಧದ ಜಿ.ಕೃಷ್ಣಪ್ರಸಾದ್.
ಬೀಜಗಳ ಬೆಲೆ ಮತ್ತು ಸಂಭಾವನೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರಕಾರದ ಅಧಿಕಾರವನ್ನು ಪ್ರಶ್ನಿಸಿ ಖಾಸಗಿ ಬೀಜ ಕಂಪೆನಿಗಳು ಆಂದ್ರಪ್ರದೇಶ ಸರಕಾರವನ್ನು ಉಚ್ಛನ್ಯಾಯಾಲಯದ ಮೆಟ್ಟಿಲೇರಿಸಿದೆ. ಈ ಹಿನ್ನೆಲೆಯಲ್ಲಿ ರೂಪಿತವಾಗುವ ಬೀಜ ಸಮಿತಿಯ ಅಧಿಕಾರವು ಬೀಜಗಳ ಬೆಲೆ ಮತ್ತು ಬೆಲೆ ನಿಯಂತ್ರಣದ ಅಧಿಕಾರವನ್ನು ಒಳಗೊಳ್ಳಬೇಕು.


ಮಸೂದೆಯಲ್ಲಿ ಜುಲ್ಮಾನೆಗಳು ತೀರಾ ಕಡಿಮೆ ಪ್ರಮಾಣದಲ್ಲಿರುವುದರಿಂದ ಸರಕಾರಕ್ಕೆ ನಕಲಿ ಹಾಗೂ ಕಳಪೆ ಬೀಜಗಳ ಹಾವಳಿಯನ್ನು ತಡೆಗಟ್ಟುವುದು ಅಸಾಧ್ಯ. ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲು ತಿದ್ದುಪಡಿ ಆಗಬೇಕಾದ ಅಗತ್ಯವಿದೆ.
ರಾಷ್ಟ್ರೀಯ ಬೀಜಗಳ ರಿಜಿಸ್ಟರ್ನಲ್ಲಿ ಬೀಜಗಳು ನೋಂದಾವಣೆ ಪಡೆದರೂ ಸಹಾ, ಅವುಗಳಲ್ಲಿ ಯಾವ ನೋಂದಾಯಿತ ಬೀಜಗಳನ್ನು ರಾಜ್ಯದಲ್ಲಿ ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸುವ ಹಾಗೂ ಅವಕ್ಕೆ ಲೈಸನ್ಸ್ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರಬೇಕು.


ಬೀಜಗಳ ನೋಂದಾವಣೆಗೆ ಸಲ್ಲಿಸಲಾಗುವ ಅರ್ಜಿಯು- ಸಾಧ್ಯವಾದಷ್ಟು ವಿವರವಾಗಿ - ನೋಂದಾವಣೆ ಬಯಸುವ ಬೀಜವನ್ನು ಯಾವ ತಳಿಯ ಬೀಜದಿಂದ ಸೃಷ್ಟಿಸಲಾಗಿದೆಯೋ ಅಂತಹ ಬೀಜದ ವಂಶಾವಳಿಯ ಸಂಪೂರ್ಣ ವಿವರಗಳನ್ನು ಒಳಗೊಂಡಿರುವಂತೆ, ಬೀಜ ನೋಂದಾವಣೆ ಸಮಿತಿಯು ಖಾತ್ರಿ ಮಾಡಿಕೊಳ್ಳಬೇಕು. ಈ ಮೂಲಕ ಸಾಮಾನ್ಯ ತಳಿಗಳನ್ನು ಹಾಗೂ ಕದ್ದ ಬೀಜಗಳನ್ನು ಯಾರೂ ನೋಂದಾವಣೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಿಕೊಳ್ಳಬೇಕು.
ಆಮದು ಮಾಡಲಾಗುವ ಎಲ್ಲಾ ಬೀಜಗಳು ಕಡ್ಡಾಯವಾಗಿ ಬೀಜ ತಪಾಸಣೆ ವಿಧಿಗಳಿಗೆ ಒಳಪಡಬೇಕು. ದೇಶದ ಭೂಸ್ಥಿತಿಗೆ ಅನುಗುಣವಾಗಿ ಅವುಗಳ ಒಗ್ಗುವಿಕೆ ನಿರ್ಧಾರಕ್ಕಾಗಿ, ವಿವಿಧ ಪ್ರದೇಶಗಳಲ್ಲಿ ಬೆಳೆದು ನೋಡುವ ವ್ಯವಸ್ಥೆಯಾಗಬೇಕು. ವಿದೇಶೀ ಬೀಜ ಪ್ರಮಾಣೀಕರಣ ಸಂಸ್ಥೆಗಳು ನೀಡುವ ಸ್ವಯಂ ತಪಾಸಣೆ ಹಾಗೂ ಪ್ರಮಾಣ ಪತ್ರಗಳು ಭಾರತದಲ್ಲಿ ಮಾನ್ಯವಾಗಬಾರದು.

ಪಿಡುಗು ಅಪಾಯದ ತಪಾಸಣೆ ಹಾಗೂ ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಳ್ಳುವ ಬಗ್ಗೆ ಪರೀಕ್ಷೆಗಳನ್ನು ನಡೆಸಿದ ನಂತರವೇ ಬೀಜಗಳ ಆಮದಿಗೆ ಅನುಮತಿ ನೀಡಬೇಕು. ಯಾವುದೇ ಪಿಡುಗು ಬಾಧೆಯ ಹರಡುವಿಕೆಗೆ ಹಾಗೂ ಅದರ ನಿವಾರಣೆಗೆ ಬೀಜ ರಫ್ತುದಾರರನ್ನು ಹೊಣೆಗಾರರನ್ನಾಗಿಸುವಂತಹ ಹೊಣೆಗಾರಿಕೆ ವಿಧಿಯನ್ನು ಮಸೂದೆಯಲ್ಲಿ ಸೇರಿಸುವ ಅಗತ್ಯವಿದೆ.
ಭಾರತೀಯ ಕಿಸಾನ್ ಸಂಘ, ಸಹಜಸಮೃದ್ಧ, ಸ್ವದೇಶಿ ಜಾಗರಣ ಮಂಚ್.. ಮೊದಲಾದ ರೈತಪರ ಸಂಸ್ಥೆಗಳು ಪ್ರಸ್ತಾಪಿತ ಬೀಜ ಕಾಯದೆಯ ತಿದ್ದುಪಡಿಗೆ ಕೇಂದ್ರವನ್ನು ಆಗ್ರಹಿಸಿದೆ.


'ಭಾರತದ ರೈತರನ್ನು, ಕೃಷಿಯನ್ನು ಹಾಗೂ ಆಹಾರದ ಭದ್ರತೆಯನ್ನು ಕಾಪಾಡಲು ಬೀಜಮಸೂದೆಯು ಬಹಳ ಮುಖ್ಯ. ಒಂದು ದುರ್ಬಲ ಮಸೂದೆಯನ್ನು ರಚಿಸಿ, ಕಂಪೆನಿಗಳನ್ನು ಯಾವುದೆ ನಿಯಂತ್ರಣವಿಲ್ಲದೇ ಮುಕ್ತವಾಗಿ ಬಿಡುವುದರಿಂದ, ರೈತರ ಸರ್ವನಾಶ ಖಚಿತ. ರೈತರನ್ನು ಉಳಿಸಲು ಮೇಲಿನೆಲ್ಲಾ ಅಂಶಗಳ ತಿದ್ದುಪಡಿ ಆಗಲೇಬೇಕು' - ಕೃಷ್ಣಪ್ರಸಾದ್ ಸ್ಪಷ್ಟವಾಗಿ ಹೇಳುತ್ತಾರೆ.
(ಚಿತ್ರ, ಮಾಹಿತಿ :ಜಿ. ಕೃಷ್ಣಪ್ರಸಾದ್)

Wednesday, August 25, 2010

"ತೆಂಗು ಬಳಸಿ" ಅಭಿಯಾನ

ತೆಂಗಿನ ಎಣ್ಣೆ ಜಗತ್ತಿನ ಶ್ರೇಷ್ಠ ಎಣ್ಣೆ. ತೆಂಗಿನೆಣ್ಣೆಯು ರೋಗತರುವ ಬ್ಯಾಕ್ಟೀರಿಯಾ ಹಾಗೂ ವೈರಸ್ಗಳ ವಿರುದ್ಧ ಕೆಲಸ ಮಾಡುತ್ತದೆ. ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಬೊಜ್ಜು.. ಹೀಗೆ ಎಲ್ಲಾ ನಮೂನೆಯ 'ಫಲಾನುಭವಿಗಳು' ತಿನ್ನಬಹುದಾದ ಎಣ್ಣೆ. ಜಗತ್ತಿನಲ್ಲಿದಯೆ ಶ್ರೀಲಂಕಾ ತೆಂಗಿನೆಣ್ಣೆಯನ್ನು ಅತೀ ಹೆಚ್ಚು ಬಳಸುವ ರಾಷ್ಟ್ರ. ಇಲ್ಲಿ ಹೃದಯಾಘಾತದ ಪ್ರಮಾಣ ಇಳಿಮುಖವಾಗಿದೆಯಂತೆ!

ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಎಂದು ಹೇಳಿ, ಇದನ್ನು ಬಳಸುವಲ್ಲಿ ಜನರಿಗೆ ಭಯತರುವಂತಹ ಸನ್ನಿವೇಶಗಳನ್ನು ನಿರ್ಮಿಸುಸುವಂತಹ ವ್ಯವಸ್ಥಿತ ಹುನ್ನಾರ ನಡೆಯುತ್ತಲೇ ಇದೆ. ಇದರ ಮೇಲೆ ಅಪವಾದಕ್ಕೂ ಕಾರಣ ಇಲ್ಲದಿಲ್ಲ - ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ಮಾಡುತ್ತಿವೆ. ಇಲ್ಲಿನ ತೆಂಗಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುವ ಜಾಣ್ಮೆ!

ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧೀ ಕಾಯಿಲೆಗಳು ದೂರವಾಗುತ್ತವೆ' ಎಂಬ ವೈಜ್ಞಾನಿಕ ಸತ್ಯ ಕಣ್ಣಮುಂದಿದ್ದರೂ, ಈ ಹುನ್ನಾರಗಳ ವಿರುದ್ಧ ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಸುಮ್ಮನಿವೆಯಲ್ಲಾ!

ತುಮಕೂರು ಸುತ್ತಮುತ್ತ ಕೊಬ್ಬರಿ, ಕರಾವಳಿ, ಕೇರಳಗಳಲ್ಲಿ ತೆಂಗಿನೆಣ್ಣೆ, ತೆಂಗಿನಕಾಯಿ ಬಳಕೆ ವ್ಯಾಪಕವಾಗಿದೆ. ಬಳಕೆ ಹೆಚ್ಚಿದಾಗ ತೆಂಗಿನಕಾಯಿಗೆ ದರ ಹೆಚ್ಚುವುದಲ್ಲಾ. ತೆಂಗಿನ ಉತ್ಪನ್ನಗಳಿಗೂ ಬೆಲೆ ಏರಿಕೆಯಾಗಬಹುದು.

ಈ ಹಿನ್ನೆಲೆಯಲ್ಲಿ ತೆಂಗಿನ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚು ಬಳಸುವಂತಾಗಲು ಜನರಲ್ಲಿ ಜಾಗೃತಿ ಮೂಡಿಸುವಂತಹ 'ತೆಂಗು ಬೆಳೆಗಾರರೇ, ಎದ್ದೇಳಿ' ಎಂಬ ಅಭಿಯಾನವು ಸೆಪ್ಟೆಂಬರ್ 2ರಂದು ತುಮಕೂರಿನಲ್ಲಿ ನಡೆಯಲಿದೆ.
ಚಿಕ್ಕನಾಯಕನ ಹಳ್ಳಿ, ತುರುವೆಕರೆಯಿಂದ ತುಮಕೂರು ತನಕ ಸೈಕಲ್ ಜಾಥಾ. ತುಮಕೂರಿನಲ್ಲಿ ಸಭಾ ಕಲಾಪ. ಡಾ.ಬಿ.ಎಂ.ಹೆಗ್ಡೆ ಭಾಗವಹಿಸುತ್ತಾರೆ.


ಸಂಪರ್ಕ : ಅಣೇಕಟ್ಟೆ ವಿಶ್ವನಾಥ್ 8095222728, ವಿನೋದ್ : 9448357536

Monday, August 23, 2010

ಶ್ಲಾಘನೀಯ ಯತ್ನ : ಹಳ್ಳಿಗರ ಕ್ಯಾಲೆಂಡರ್

ಕೃಷಿ ಬದುಕಿನಿಂದ ಭತ್ತವು ಕಣ್ಮರೆಯಾಗುವ ದಿವಸ ಹತ್ತಿರವಿದೆ. ಅಕ್ಕಿಗಾಗಿ ಪರದಾಡುವ ದಿನಕ್ಕಿನ್ನು ಇಳಿಲೆಕ್ಕ. ಹಿಂದೊಮ್ಮೆ ಅಕ್ಕಿ/ಭತ್ತದ ಕುರಿತಾದ ಬರಗಾಲ ಬಂದಿತ್ತಲ್ಲಾ, ಅಂತಹುದೇ ದಿವಸಗಳನ್ನು ಅಪ್ಪಿಕೊಳ್ಳಲು, ಒಪ್ಪಿಕೊಳ್ಳಲು ಈಗಲೇ ಮಾನಿಸಿಕ ಸಿದ್ಧತೆ ಮಾಡಬೇಕಿದೆ!

ಬೆಂಗಳೂರಿನ ಸಹಜ ಸಮೃದ್ಧವು 'ಭತ್ತ ಉಳಿಸಿ ಆಂದೋಳನ'ವನ್ನು ಚಳುವಳಿ ರೂಪದಲ್ಲಿ ನಿರ್ವಹಿಸುತ್ತಿದೆ. ದೇಸಿ ಭತ್ತದ ಸಂಸ್ಕೃತಿ ಮತ್ತು ಜ್ಞಾನವನ್ನು ಸಂರಕ್ಷಿಸಲು ಪಣತೊಟ್ಟ ಜನಪರ ಚಳುವಳಿಯಿದು.

ಇದರ ಒಂದು ಹಜ್ಜೆಯಾಗಿ 'ಹಳ್ಳಿಗರ ಕ್ಯಾಲೆಂಡರ್' ರೂಪಿಸಿದ್ದು, ಭತ್ತದ ಕುರಿತಾಗಿ 'ಬರೋಬ್ಬರಿ' ಮಾಹಿತಿ ನೀಡಿದೆ. ಭತ್ತದ ಸಂಸ್ಕೃತಿಯನ್ನು ಪುನಃ ಅನ್ನದ ಬಟ್ಟಲಿಗೆ, ಬದುಕಿಗೆ ತರುವ ಪ್ರಯತ್ನ. ಅದರ ಪುಟಗಳನ್ನೊಮ್ಮೆ ತೆರೆದು ನೋಡಿದರೆ ಹೇಗೆ?
ವರುಷಕ್ಕಾಗುವಷ್ಟು ಭತ್ತವನ್ನು ಬೀಜಕ್ಕೆ, ಮನೆ ಬಳಕೆಗೆ ಸಂಗ್ರಹಿಸಿಡುವ ಹಳ್ಳಿ ಜಾಣ್ಮೆ ಹಿರಿದು. ಆಯಾ ಪ್ರದೇಶ, ವಾತಾವರಣಕ್ಕೆ ತಕ್ಕಂತೆ ರೂಪುಗೊಳ್ಳುವ ಭತ್ತದ ಸಂಗ್ರಹಣಾ ರಚನೆಗಳು ಹಳ್ಳಿ ಕಲಾಕೃತಿಗಳು! ಹಸೆಚಿತ್ರಗಳಿಂದ ಚಿತ್ತಾರಗೊಂಡ ತಿರಿ, ಗಳಗೆ, ಮೂಡೆ, ಮಡಿಕೆ, ಪತ್ತಾಯಗಳ ಸೌಂದರ್ಯದ ಮುಂದೆ ಸರಕಾರವು ನೀಡುವ ಬೀಜ ಸಂಗ್ರಹಣಾ ತಗಡಿನ ಬುಟ್ಟಿ ನಿಜಕ್ಕೂ ಡಬ್ಬ! ಇಂತಹ ಸಂಗ್ರಹಣಾ ವಿಧಾನಗಳ ವಿವರಗಳು ಮೊದಲ ಪುಟದ ಹೂರಣ.


ಫೆಬ್ರವರಿ ತಿಂಗಳ ಪುಟದಲ್ಲಿ - ಆಳ ನೀರಿನ ಭತ್ತದ ತಳಿಗಳ ಭಂಡಾರವಿದೆ. ಸಾಗರ ತಾಲ್ಲೂಕಿನ ವರದಾಮೂಲದಲ್ಲಿ ಹುಟ್ಟುವ ವರದಾ ನದಿಯು ಸಾಗರ, ಸೊರಬ, ಶಿರಸಿ ತಾಲೂಕುಗಳಲ್ಲಿ ಸಣ್ಣ ಹೊಳೆಯಾಗಿ ಹರಿಯುತ್ತದೆ. ಜುಲೈ-ಆಗಸ್ಟ್ ತಿಂಗಳಲ್ಲಿ ವರದಾ ನದಿಯಲ್ಲಿ ನೆರೆ ಬಂದುಬಿಟ್ಟರೆ 20-30 ದಿನ ಗದ್ದೆಗಳು ಜಲಸಮಾಧಿ.

ಈ ಜೀವ ಪರಿಸರಕ್ಕೆ ಹೊಂದಿಕೊಳ್ಳುವ ಆಳನೀರಿನ ಭತ್ತದ ತಳಿಗಳು - 'ಬಿಳಿಜಡ್ಡು, ಜೇನುಗೂಡು, ಕರಿಜಡ್ಡು, ಕರಿನೆಲ್ಲು, ಕರಿಕಂಟಕ, ಮುಳ್ಳುಭತ್ತ, ನೆರೆಗುಳಿ, ನೆಟ್ಟಿ, ಪದ್ಮರೇಖ, ಸಣ್ಣವಾಳ್ಯ, ಏಡಿಕುಣಿ, ಮದ್ರಾಸ್ಸಣ್ಣ..' ಇವುಗಳ ಗುರುತು ಹಿಡಿಯಲು ಅನುಕೂಲವಾಗುವಂತೆ ವರ್ಣಚಿತ್ರಗಳಿವೆ.

ಜಲಾಶಯ, ಕೆರೆ, ಕುಂಟೆ, ಕೊಳವೆ ಬಾವಿಗಳ ಬಯಲಿಗೆ ಸೂಕ್ತವಾದ ನೀರಾವರಿ ತಳಿಗಳು, ಯಳಂದೂರಿನ 'ರತ್ನಚೂಡಿ', ಹಾಸನದ 'ರಾಜಮುಡಿ', ಮಲೆನಾಡಿನ 'ಗಂಧಸಾಲೆ', ಸೊರಬದ 'ಸಿದ್ದಸಾಲೆ', ತುಮಕೂರಿನ 'ಹಾಲುಬ್ಬಲು', ಮಂಡ್ಯದ 'ಬಂಗಾರ ಸಣ್ಣ'.. ಹೀಗೆ ಹದಿನಾಲ್ಕು ತಳಿಗಳ ದಾಖಲಾತಿ.

ಒನಕೆಯಿಂದ ಕುಟ್ಟಿದ, ಪಾಲಿಷ್ ಮಾಡದ ಅಕ್ಕಿ ಪೋಷಕಾಂಶಗಳ ಆಗರ. ನಾರು, ಖನಿಜ ಮತ್ತು ವಿಟಮಿನ್ಗಳಿಂದ ಸಮೃದ್ಧ. ಕ್ಯಾನ್ಸರ್ ನಿರೋಧಕ, ಕೊಲೆಸ್ಟರಾಲ್ನಿಂದ ದೂರ. ಆಧುನಿಕ ಗಿರಣಿಗಳು ಬಂದ ಮೇಲೆ, 'ಬಿಳಿ ಅನ್ನ' ಉಣ್ಣುವುದು ಪ್ಯಾಷನ್ ಆಗಿದೆ. ಪಾಲಿಷ್ ಹೆಚ್ಚಿದಷ್ಟೂ ಬೆಲೆ ಹೆಚ್ಚು ತೆರುವ ಹುಚ್ಚುತನ! ಪೋಷಕಾಂಶಗಳ ಭಂಡಾರವಾದ ತೌಡನ್ನು ದನಗಳಿಗೆ ತಿನ್ನಿಸಿ, ಸಕ್ಕರೆ ಕಾಯಿಲೆ ಆಹ್ವಾನಿಸುವ ಪಾಲಿಷ್ ಅಕ್ಕಿ ತಿನ್ನುವ ಹಣೆಬರೆಹ. 'ಕೆಂಪಕ್ಕಿಗೆ ಜೈ.. ಪಾಲಿಷ್ ಅಕ್ಕಿಗೆ ಬೈ' - ಮನಮುಟ್ಟುವ ಸ್ಲೋಗನ್.

ದೇಸೀ ಭತ್ತಗಳ ಬೀಜೋಪಚಾರದ ಕುತೂಹಲ ಮಾಹಿತಿ ಕ್ಯಾಲೆಂಡರ್ನ ಹೈಲೈಟ್! 'ಒಂದು ಪಾತ್ರೆಗೆ ಮುಕ್ಕಾಲು ಭಾಗದಷ್ಟು ನೀರು ತುಂಬಿ. ನಾಟಿ ಕೋಳಿ ಮೊಟ್ಟೆಯನ್ನು ನೀರಿನಲ್ಲಿ ಮುಳುಗಿಸಿ. ಇದಕ್ಕೆ ಉಪ್ಪು ಸುರಿಯುತ್ತಾ ಹೋಗಿ. ಮೊಟ್ಟೆಯ ತುದಿ ಕಾಲು ಭಾಗ ಕಾಣುವವರೆಗೂ ಉಪ್ಪು ಹಾಕುತ್ತಾ ಹೋಗಿ. ಮೊಟ್ಟೆ ತೇಲಲು ಶುರುವಾದಾಗ ಉಪ್ಪು ಹಾಕುವುದನ್ನು ನಿಲ್ಲಿಸಿ. ಅನಂತರ ಭತ್ತದ ಬೀಜವನ್ನು ನೀರಿಗೆ ಹಾಕಿ, ಕೈಯಾಡಿಸುತ್ತಿರಬೇಕು. ತೇಲುವ ಜೊಳ್ಳು ಭತ್ತ ತೆಗೆಯಿರಿ. ಹದಿನೈದು ನಿಮಿಷ ಬಿಟ್ಟು ಭತ್ತದ ಬೀಜವನ್ನು ಉಪ್ಪು ನೀರಿನಿಂದ ಹೊರ ತೆಗೆದು, ಉತ್ತಮ ನೀರಿನಿಂದ ಚೆನ್ನಾಗಿ ತೊಳೆದು, ನೆರಳಲ್ಲಿ ಒಣಗಿಸಿ ನಂತರ ಬಿತ್ತಬೇಕು.' ಬೀಜದ ಆಯ್ಕೆಯ ಕುರಿತು ಪ್ರತ್ಯೇಕ ವಿವರಗಳಿವೆ.

'ಹಸಿರು ಕ್ರಾಂತಿಯ ಹೆಸರಿನಲ್ಲಿ ಅಧಿಕ ಇಳುವರಿಗಾಗಿ ಹೈಬ್ರಿಡ್ ಬೀಜಗಳು ಹೊಲಕ್ಕೆ ಕಾಲಿಟ್ಟವು. ಈಗ ವಿಜ್ಞಾನಿಗಳೊಂದಿಗೆ ಕೆಲವು ಕಂಪೆನಿಗಳು ಕುಲಾಂತರಿ ಭತ್ತವನ್ನು ಗದ್ದೆಗಿಳಿಸಲು ಹುನ್ನಾರ ನಡೆಸುತ್ತಿವೆ. ನಿಸರ್ಗದ ಸೃಷ್ಟಿಗೆ ವಿರುದ್ಧವಾಗಿ, ಜನರ ಬದುಕಿನೊಂದಿಗೆ ಚೆಲ್ಲಾಟವಾಡುವ ಇಂತಹ ತಳಿಗಳ ಬಗ್ಗೆ ಎಚ್ಚರ ಬೇಕಿದೆ. ಇದಕ್ಕೆ ಪರಿಹಾರ ಒಂದೆ - ನಮ್ಮ ದೇಸಿ ಭತ್ತದ ತಳಿಗಳು ನಮ್ಮ ಹೊಲಗಳಲ್ಲಿ ಮತ್ತೆ ತಲೆ ಎತ್ತಿ ನಿಲ್ಲುವಂತೆ ಮಾಡುವುದು. ಊಟದ ಬಟ್ಟಲಿನಲ್ಲಿ ಪುನಃ ಅನ್ನ ಬರುವುದು. ಇದಕ್ಕಾಗಿ ನಮ್ಮ ಮನಸ್ಸು ಸಜ್ಜಾಗಬೇಕಾದ ಅನಿವಾರ್ಯತೆ ಮುಂದಿದೆ' ಎನ್ನುತ್ತಾರೆ ಸಹಜ ಸಮೃದ್ಧದ ಮುಖ್ಯಸ್ಥ ಕೃಷ್ಣಪ್ರಸಾದ್.

ಒಣಭೂಮಿಯ ತಗ್ಗು ಪ್ರದೇಶದ ತಳಿಗಳಾದ 'ಮುಂಡುಗ, ಆನೆಕೊಂಬಿನ ಭತ್ತ, ಕರಿಮುಂಡುಗ, ಕೆಂಪುದೊಡ್ಡಿ, ಮರುಡಿ..'; ಔಷಧಿ ಭತ್ತದ ತಳಿಗಳಾದ 'ಅಂಬೇಮೋರೆ, ಕಗಿಸಾಲೆ, ದೊಡ್ಡಬ್ರನೆಲ್ಲು, ಕರಿಕಂಟಕ, ಕಪ್ಪು ನವರ, ಸಣ್ಣಕ್ಕಿ, ಬಿಳಿ ನವರ, ಕರಿ ಭತ್ತ'..ಗಳು; 'ಬಮರ್ಾಬ್ಲಾಕ್, ಕಪ್ಪು ಬಾಸ್ಮತಿ, ಸಾಗ್ಭತ್ತ, ಗಂಧಸಾಲೆ, ಸುಗಂಧಿ, ಕಾಗಿಸಾಲೆ, ಡೆಹರಡೋನ್ ಬಾಸ್ಮತಿ'ಗಳ ವಿವರಗಳು ಇಂಟರೆಸ್ಟಿಂಗ್!

ಇದು ಹಳ್ಳಿಗರ ಕ್ಯಾಲೆಂಡರ್ ಆದರೂ, ಹಳ್ಳಿಯನ್ನು ಪ್ರೀತಿಸುವ, ಆರೋಗ್ಯಕರ ಆಹಾರ ಬಯಸುವ ನಗರದ ಮನೆಗಳಲ್ಲಿ ತೂಗುಹಾಕಲೇ ಬೇಕಾದ ಕ್ಯಾಲೆಂಡರ್.

ಬೆಲೆ ಮೂವತ್ತು ರೂಪಾಯಿ. (ಅಂಚೆ ವೆಚ್ಚ ಸೇರಿದೆ) ಆಸಕ್ತರಿಗಾಗಿ ವಿಳಾಸ : ಸಹಜ ಸಮೃದ್ಧ, 'ನಂದನ', ನಂ7, 2ನೇ ಕ್ರಾಸ್, 7ನೇ ಮುಖ್ಯರಸ್ತೆ, ಸುಲ್ತಾನ್ ಪಾಳ್ಯ, ಬೆಂಗಳೂರು - 560 032, ಸಂಚಾರಿವಾಣಿ: 97312 75656

Friday, August 20, 2010

ಮೌನದ ಬದುಕಿಗೆ ಮಾತುಕೊಟ್ಟ 'ಸಸಾ'


'ಭೂಕಂಪ-ಯುದ್ಧಪೀಡಿತ ಪ್ರದೇಶಗಳ ಸಂತ್ರಸ್ತರ ಹಿಡಿ ಸಿಮೆಂಟ್ ಮತ್ತು ಬೆವರು ಬೆರೆಸಿ 'ತೂಗುಸೇತುವೆ' ನಿರ್ಮಿಸಿ ಸಂಪರ್ಕಜಾಲವನ್ನು ಮತ್ತೆ ಬೆಸೆಯುವ ಜನಸಹಭಾಗಿತ್ವದ ಕೆಲಸ ಮಾಡುತ್ತಿದ್ದಾರೆ' - ಸ್ವಿಸ್ನ ಟೋನಿ.

ಸಾರಿಗೆ ವ್ಯವಸ್ಥೆಯನ್ನು ಹಳ್ಳಿಹಳ್ಳಿಗಳಿಗೆ ವಿಸ್ತರಿಸುವ ಮೂಲಕ ಗ್ರಾಮೀಣರ ಮುಖದಲ್ಲಿ ನಗುವನ್ನು ಚೆಲ್ಲಿಸಿ, ಬದುಕನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ ಕೊಪ್ಪದ 'ಸಹಕಾರಿ ಸಾರಿಗೆ'. ಹೃಸ್ವವಾಗಿ 'ಸಸಾ' ಅನ್ನೋಣ.

ಎಲ್ಲಿಯ ಟೋನಿ! ಎಲ್ಲಿಯ ಕೊಪ್ಪ! ಇಬ್ಬರದೂ 'ಬೆಸೆಯುವ' ಕೆಲಸ. ಸ್ವರೂಪ ಬೇರೆಬೇರೆ. ಟೋನಿಯ ಕೆಲಸ ದಡ-ದಡವನ್ನು ಬೆಸೆದರೆ; ಮನ-ಮನವನ್ನು, ಹಳ್ಳಿ-ಹಳ್ಳಿಗಳನ್ನು ಬೆಸೆದಿದೆ ಸಸಾ.

ದೇಶದುದ್ದದ ವಿದ್ಯಮಾನಗಳನ್ನು ಅವಲೋಕಿಸಿದಾಗ ಪ್ರತಿನಿತ್ಯ ಒಂದಲ್ಲ ಒಂದು ಮುಷ್ಕರ, ಧರಣಿ, ಗಲಾಟೆ, ದೊಂಬಿ....ಕಾಣುತ್ತೇವೆ. ಇದುವೇ 'ಸಮಸ್ಯೆಗೆ ಪರಿಹಾರ'ವೆಂದು ಸ್ವೀಕರಿಸುತ್ತಿದ್ದೇವೆ. ಕೊಪ್ಪದ ಸಹಕಾರ ಸಾರಿಗೆ ಉದಯದ ಹಿಂದಿದ್ದದ್ದು ಇಂತಹುದೇ ಸಮಸ್ಯೆ! ತಾವು ದುಡಿಯುತ್ತಿದ್ದ ಸಾರಿಗೆ ಸಂಸ್ಥೆ ಮುಚ್ಚಿದಾಗ, ಅತಂತ್ರಗೊಂಡ ಕಾರ್ಮಿಕ ವರ್ಗ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು. 'ಹೋರಾಟದ ಬದಲು ದುಡಿಮೆ' ಎಂಬ ತತ್ವಕ್ಕೆ ಅಂಟಿಕೊಂಡಿತು. ತಾವೇ ಬಸ್ ಓಡಿಸುವ ನಿರ್ಧಾರ ಮಾಡಿ, ಹೊಸ ಸಂಸ್ಥೆ ಕಟ್ಟಿದರು. ಕೈಯಲ್ಲಿದ್ದ ಅಷ್ಟಿಷ್ಟು ಮೊತ್ತವನ್ನು ಸೇರಿಸಿ ಹಿಂದೆ ದುಡಿಯುತ್ತಿದ್ದ ಕಂಪೆನಿಯಿಂದಲೇ ಬಸ್ ಖರೀದಿಸಿದರು! ಆರು ಬಸ್ನೊಂದಿಗೆ ಶುರುವಾದ ಸಸಾದಲ್ಲೀಗ ಎಪ್ಪತ್ತೈದಕ್ಕೂ ಮಿಕ್ಕಿ ಬಸ್ಗಳಿವೆ.

ಸಾಗಿ ಬಂದ ದಾರಿಯುದ್ದಕ್ಕೂ ಕಲ್ಲುಮುಳ್ಳುಗಳು! ಕಷ್ಟವನ್ನು ಎದುರಿಸುವ ಛಲ ಎಲ್ಲರಲ್ಲಿದ್ದುದರಿಂದ ದಾರಿ ಸುಗಮವಾಗಿತ್ತು. ಪ್ರಕೃತ 300ಕ್ಕೂ ಅಧಿಕ ಸಿಬ್ಬಂದಿಯಿದ್ದು, ಅವರ ಸಾವಿರಕ್ಕೂ ಮಿಕ್ಕಿ ಸದಸ್ಯರಿರುವ ಕುಟುಂಬವನ್ನು ಆಧರಿಸಿದೆ. ಇಷ್ಟು ಮಾಹಿತಿ ಸಸಾದ ಚಿಕ್ಕ ಚಿತ್ರಣಕ್ಕೆ ಸಾಕು. ಇದು ಒಂದು ಮುಖ. ಆದರ ಮತ್ತೊಂದು ಮುಖ ನೋಡೋಣ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಬಹುತೇಕ ಹಳ್ಳಿಗಳಲ್ಲೀಗ ಮೌನವಿಲ್ಲ! ಸೈಕಲ್ ತುಳಿಯುವುದನ್ನು ಕಂಡರೂ ಸಾಕು, ವಿಸ್ಮಯದಿಂದ ಕಾಣುವ ಕಣ್ಣುಗಳಿಲ್ಲ! ವರ್ತಮಾನ ಪತ್ರಿಕೆಗಳು ಬಂದಿವೆ. ರೇಡಿಯೋ ಬಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಹೊರಲೋಕದ ಎಲ್ಲಾ ವಿದ್ಯಾಮಾನಗಳು ಸೂರಿನಡಿ ಚರ್ಚಿತವಾಗುತ್ತಿವೆ. ಇದಕ್ಕೆ ಕಾರಣ ಸಸಾ.
ಹಳ್ಳಿಯ ಮಾರ್ಗವೆಂದರೆ ಗೊತ್ತಲ್ಲ! ಡಾಮರು ಬಿಡಿ, ಹೊಂಡಗುಂಡಿಗಳನ್ನು ಮುಚ್ಚಲೂ ವ್ಯವಸ್ಥೆಯಿಲ್ಲ! ಇದ್ದರೂ 'ತಮಗೇನು ಲಾಭ' ಎಂದು ಆಕಳಿಸುವ ಸರಕಾರಿ ಮಂದಿ!

ಫೋರ್ವೀಲ್ ಜೀಪುಗಳು ಕಷ್ಟಪಟ್ಟು ಓಡುತ್ತವೆ. ಎಸ್ಟೇಟ್ ಮಾಲಿಕರಲ್ಲಿ ಅವಿವೆ. ಅಲ್ಲಿ ದುಡಿಯುವ, ಮನೆಮಾಡಿಕೊಂಡಿರುವ ಮಂದಿಗೆ ಹತ್ತೋ, ಹದಿನೈದು ಕಿಲೋಮೀಟರ್ ದೂರದ ಪೇಟೆಗೆ ಸಾಗಲು ಕಾಲ್ನಡಿಗೆಯೇ ಗತಿ. ಆಗಲೋ ಈಗಲೋ ಅತ್ತಿತ್ತ ಸಾಗುವ ಎಸ್ಟೇಟ್ ಮಾಲಿಕರು ತಮ್ಮ ಜೀಪಿಗೆ ಹತ್ತಿಸಿಕೊಂಡರೆ ಅದೇ ಸ್ವರ್ಗ!

ಸಸಾದಲ್ಲಿರುವ ಎಲ್ಲರೂ ಹಳ್ಳಿಗಳಿಂದ ಬಂದವರಾಗಿದ್ದು, ಹಳ್ಳಿ ಜೀವನದ ಕಷ್ಟ-ಸುಖ ಗೊತ್ತು. 'ಹಳ್ಳಿಯ ಅಭಿವೃದ್ಧಿ ತಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ಹಾಗಾಗಿ ನಮ್ಮ ಹೆಚ್ಚಿನ ಬಸ್ಗಳು ಓಡಾಡುವುದು ಹಳ್ಳಿಗಳಲ್ಲೇ. ಮೂವತ್ತೈದು ಹಳ್ಳಿಗಳಿಗೆ ಹೋಗಿ, ರಾತ್ರಿ ತಂಗಿ, ಮರುದಿನ ಬೆಳಗ್ಗೆ ಬರುತ್ತದೆ' ಸಸಾದ ಅಧ್ಯಕ್ಷ ಬಿ.ಎನ್.ಮಹೇಶ್ ಹೇಳುತ್ತಾರೆ.

'ಪೇಟೆ ನೋಡದ ನಮ್ಮ ಮಕ್ಕಳು ಈಗ ಪೇಟೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ' ಎನ್ನುತ್ತಾರೆ ಕಳಸಾಪುರದ ಕಾರ್ಮಿಕ ಸಿದ್ದಪ್ಪ. 'ಬೇರ್ಯಾವುದೇ ಬಸ್ ಬರಲು ಒಪ್ಪದ ಕೊಂಡದಕಾನ, ಮಕ್ಕಿಮನೆ, ಮೇಗೂರು, ಶಿರ್ವಾಸೆ ಹಳ್ಳಿಗಳಿಗೆ ನಮ್ಮ ಬಸ್ ಓಡುತ್ತಿದೆ' ಎನ್ನಲು ಖುಷಿ ಸಸಾದ ತಾಂತ್ರಿಕ ವ್ಯವಸ್ಥಾಪಕ್ಷ ಇ.ಎಸ್.ಧರ್ಮಪ್ಪರಿಗೆ.

ಶೇ.90 ವಿದ್ಯಾರ್ಥಿಗಳಿಗೆ ಸಹಕಾರ ಸಾರಿಗೆಯೊಂದು 'ಐರಾವತ!'. ಅದೇ ಬದುಕು. ಇವರಿಗೆ ಬಸ್ ಶುಲ್ಕದಲ್ಲಿ ವಿನಾಯಿತಿ. ಸುತ್ತುಮುತ್ತಲಿನ ಇಪ್ಪತ್ತೇಳು ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಹೊತ್ತ ಬಸ್ ಕೊಪ್ಪಕ್ಕೆ ಬೆಳಿಗ್ಗೆ ಹತ್ತು ಗಂಟೆಗೆ ತಲಪುವಂತೆ ಸಮಯವನ್ನು ನಿಗದಿ ಮಾಡಿಕೊಂಡಿದೆ ಸಸಾ.

ಮೊದಲು ಹಳ್ಳಿಯ ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳೇ ದೊರೆಗಳು! ಕಡಿಮೆ ಕ್ರಯಕ್ಕೆ ಕೊಂಡು, ಹೆಚ್ಚು ದರಕ್ಕೆ ಮಾರಿ ಇವರ ಕಿಸೆ ದಪ್ಪವಾಗುತ್ತಿತ್ತು. ಹಳ್ಳಿಗರಿಗೂ ಅನಿವಾರ್ಯ. ತಲೆಹೊರೆಯಲ್ಲೇ ಸಾಗಬೇಕು. ಅದು ತ್ರಾಸ. ಹಾಗಾಗಿ 'ಸಿಕ್ಕಿದಷ್ಟು ಆಯಿತು. ಕೊಟ್ಟುಬಿಡೋಣ.' ಈಗಿನ ಬಸ್ ವ್ಯವಸ್ಥೆ ಎಷ್ಟೊಂದು ಅನುಕೂಲ ನೋಡಿ - ಹತ್ತು ಕಿಲೋ ಅಡಿಕೆಯೋ, ಶುಂಠಿಯೋ ಅಥವಾ ಬಾಳೆಗೊನೆಯನ್ನೋ ಪೇಟೆಯಲ್ಲಿ ಮಾರಿ ಅಷ್ಟಿಷ್ಟು ಜೀನಸಿಯನ್ನು ಮನೆಗೆ ಒಯ್ಯಬಹುದು.

ಕೊಪ್ಪದ ಕೃಷಿಕ ವಸಂತಕುಮಾರ್ ಹರ್ಡೀಕರ್ ಹೇಳುತ್ತಾರೆ -`ಸಾರಿಗೆ ಶುರುವಾದ ಮೇಲೆ ಹಳ್ಳಿಗಳು ಅಭಿವೃದ್ಧಿಯಾಗಿವೆ. ಮಾರುಕಟ್ಟೆಯಿಲ್ಲವಲ್ಲಾ, ಯಾಕೆ ಬೆಳೆಯಬೇಕು ಎಂದಿದ್ದ ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬಿದೆ. ತರಕಾರಿ ಬೆಳೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಬೆಳೆದ ತಾಜಾ ತರಕಾರಿ ಸೂರ್ಯೋದಯದ ಹೊತ್ತಿಗೆ ಕೊಪ್ಪದಲ್ಲಿ ಸಿಗುತ್ತಿದೆ.'

ಕೃಷ್ಯುತ್ಪನ್ನಗಳನ್ನು ಒಯ್ಯಲು ಸಸಾದ ತಕರಾರಿಲ್ಲ! ಅದಕ್ಕಾಗಿಯೇ ಹಳ್ಳಿಗಳಿಗೆ ಹೋಗುವ ಬಸ್ಸುಗಳಿಗೆ ಹಿಂದಿನ ಆಸನ ಅಳವಡಿಸಿಲ್ಲ! ಕಾರಣ-ಅದು ಅಡಿಕೆ, ಬಾಳೆಗೊನೆ..ಮೊದಲಾದ ಕೃಷ್ಯುತ್ಪನ್ನಗಳನ್ನಿಡಲು. 'ಯಾವುದೇ ಬಸ್ನಲ್ಲಿ ಗೊಬ್ಬರದ ಚೀಲವನ್ನು ಸಾಗಿಸಲು ಬಿಡುವುದಿಲ್ಲ. ನಾವು ಅದಕ್ಕೆ ಅನುವು ಮಾಡಿಕೊಟ್ಟಿದ್ದೇವೆ.' ಕನಿಷ್ಠ ದರ. ಸಾಮಗ್ರಿಗಳನ್ನು ಮೇಲೇರಿಸಲು, ಇಳಿಸಲು ಕಂಡಕ್ಟರ್ ಸಹಾಯ.

ಚಿಕ್ಕ ಕೃಷಿಕ ಮಾರಾಟಗಾರರು ಬೆಳೆದಿದ್ದಾರೆ. ತಮ್ಮ ಹರಿವೆ, ತರಕಾರಿಗಳನ್ನು ಅಂಗಡಿಗೆ ಮಾರದೆ, ತಾವೇ ಸ್ವತಃ ಸಂತೆಯಲ್ಲಿ ಖುದ್ದಾಗಿ ಮಾರುತ್ತಾರೆ. ಸಾರಿಗೆ ಸಂಪರ್ಕವಾದ ಮೇಲೆ ನಾಲ್ಕು ಕಾಸು ಓಡಾಡುತ್ತಿದೆ. ಈಗ ಜಯಪುರದ ಹುಸೇನ್ಸಾಬ್ ಅವರಿಗೆ 'ಮಳೆಗಾಲದಲ್ಲಿ ಹಲಸಿನ ಹಣ್ಣಿನ ವ್ಯವಹಾರ. ತುಂಬಾ ಬ್ಯುಸಿ.' ಅಂತೆಯೇ ಶೆಟ್ಟಿಕೊಪ್ಪದ ವರ್ಗೀಸ್ ಅವರ ಮರಗೆಣಸು, ಬಾಳೆಕಾಯಿ, ಶುಂಠಿ ಈಗ ನಗರಕ್ಕೆ ಬರುತ್ತಿದೆ.'

ಎಲ್ಲಾ ಹಳ್ಳಿಗಳಲ್ಲಿ ಚಿಕ್ಕಚಿಕ್ಕ ಅಂಗಡಿ, ಗೂಡಂಗಡಿಗಳು ತಲೆಎತ್ತಿವೆ. `ಹೇಗೂ ಬಸ್ ಇದೆ. ಐಟಂ ಮುಗಿದಾಗ ಬಸ್ನ ಚಾಲಕರಿಗೋ, ನಿರ್ವಾಹಕರಿಗೋ ಸಣ್ಣ ಶುಲ್ಕ ನೀಡಿದರಾಯಿತು. ಇನ್ನೊಂದು ಟ್ರಿಪ್ನಲ್ಲಿ ರೆಡಿ.' ದೂರವಾಣಿ ಜಾಲ ವಿಸ್ತೃತವಾಗಿರುವುದಿರಂದ ಒಂದು ದೂರವಾಣಿ ಕರೆಯಲ್ಲಿ ಸಾಮಗ್ರಿಗಳನ್ನು ತರಿಸಲು ಸಾಧ್ಯ. ಪೇಟೆ ದರದಲ್ಲೇ ಹಳ್ಳಿಯಲ್ಲೂ ಪೂರೈಕೆ.

ಸಹಕಾರಿ ಸಾರಿಗೆ ಬಸ್ ಮತ್ತು ಹಳ್ಳಿ ಬದುಕು - ಇವೆರಡು ಒಂದೇ ಗಾಡಿಯ ಜೋಡೆತ್ತುಗಳು! ಒಂದನ್ನು ಬಿಟ್ಟು ಒಂದಿಲ್ಲ. ಅಷ್ಟು ಅನ್ಯೋನ್ಯತೆ, ವಿಶ್ವಾಸ. 'ಇದು ನಮ್ಮ ಬಸ್ ಕಣ್ರೀ' 80ರ ಅಜ್ಜ ಮಹಾದೇವ ಬಾಯಿತುಂಬಾ ವೀಳ್ಯ ಜಗಿಯುತ್ತಾ ಅಂದಾಗ ಅವರ ಕಣ್ಣುಗಳಲ್ಲಿ ಹೊಳಪು! ಒಂದು ವೇಳೆ ಬಸ್ ಅರ್ಧ ದಾರಿಯಲ್ಲಿ ಹಾಳಾಗಿ ಕೈಕೊಟ್ಟಿತೆನ್ನಿ. 'ಆಗ ಸುತ್ತುಮುತ್ತಲಿನ ಜನರ ನೆರವು-ಸಹಕಾರ ಮರೆಯುವಂತಿಲ್ಲ. ಊಟ-ತಿಂಡಿ ಅಲ್ಲೇ. ನಮ್ಮನ್ನು ಅಷ್ಟು ಗೌರವದಿಂದ ನೋಡಿಕೊಳ್ಳುತ್ತಾರೆ' ಎಂದು ನೆನೆಯುತ್ತಾರೆ ಮಹೇಶ್.

ಹೊಸ ಊರಿಗೆ ಬಸ್ ಶುರು ಮಾಡುವಲ್ಲಿ ಸಸಾದ ಹಳ್ಳಿಕಾಳಜಿ ಗುರುತರ. ಜನಗಳಿಗೆ ಯಾವ ಸಮಯ ಪೇಟೆಗೆ ಬರಲು ಅನುಕೂಲ ಎಂಬ ಸರ್ವೆ. ಊರಿನ ಜನಸಂಖ್ಯೆ, ಜನರ ಆವಶ್ಯಕತೆಯ ದಾಖಲಾತಿ. ಸಂಬಂಧಿತ ಸರಕಾರಿ ವರಿಷ್ಠರಿದ್ದೇ ಕ್ಷೇತ್ರಭೇಟಿ. ನಂತರವಷ್ಟೇ ಬಸ್ ಓಡಾಟ. ಮಧ್ಯಮವರ್ಗದವರೇ ಹೆಚ್ಚು ಪ್ರಯಾಣಿಸುವ ಕಾರಣ ಕನಿಷ್ಠ ದರ. 'ಇತ್ತೀಚೆಗೆ ಎರಡು ಬಾರಿ ಡೀಸಿಲ್ ದರವನ್ನು ಸರಕಾರ ಹೆಚ್ಚಿಸಿದರೂ ನಾವು ಟಿಕೇಟ್ ದರವನ್ನು ಹೆಚ್ಚಿಸಿಲ್ಲ.' ಎನ್ನುತ್ತಾರೆ ಜಿ.ಆರ್.ವಿಶ್ವನಾಥ್.

'ಸರಕಾರ ಈಗಾಗಲೇ ನಮ್ಮ ಕೆಲಸಗಳನ್ನು ಮೆಚ್ಚಿ ಅನುದಾನಗಳನ್ನು ಕೊಟ್ಟಿದೆ. ಕೆಎಸ್ಆರ್ಟಿಸಿಗೆ ನೀಡುವ ಸಬ್ಸಿಡಿ ವ್ಯವಸ್ಥೆಯ ಶೇ.10ನ್ನು ನಮಗೂ ನೀಡಿದರೆ ಈಗಿನ ದರಕ್ಕಿಂತಲೂ ಕಡಿಮೆ ದರ ನಿಗದಿಪಡಿಸಬಹುದು' ಎಂಬ ಅಭಿಪ್ರಾಯ ಅಧ್ಯಕ್ಷರದು.
ಹಳ್ಳಿ ಅಭಿವೃದ್ಧಿಗೆ ಅಂಚೆಯೂ ಮುಖ್ಯ. ಬಸ್ ಓಡುವಲ್ಲೆಲ್ಲಾ ಅಂಚೆ ಚೀಲ ಹೊತ್ತೊಯ್ಯುತ್ತದೆ. ಅಷ್ಟೇ ಕಾಳಜಿಯಿಂದ ಅಂಚೆ ಕಚೇರಿಗೆ ನೀಡುತ್ತದೆ, ಪಡೆಯುತ್ತದೆ.

ಗ್ಯಾರೇಜ್ನಲ್ಲಿ ಕಬ್ಬಿಣ ತ್ಯಾಜ್ಯಗಳು ಧಾರಾಳ. ಇದನ್ನು ಉಪಯೋಗಿಸಿ ಕತ್ತಿ, ನೇಗಿಲು....ಗಳನ್ನು ತಯಾರಿಸುವುದು, ಹಳೆ ಟಯರ್ನಿಂದ ಬುಟ್ಟಿ ತಯಾರಿಕೆ - ನಿಕಟ ಯೋಜನೆಗಳು. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ ಸಜ್ಜು. ಈ ಸಂದರ್ಭದಲ್ಲಿ - ನಮ್ಮ ಹಳ್ಳಿಯಲ್ಲಿ ಓಡುವ ಸರಕಾರಿ ಬಸ್ಸನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. 'ಬಂದರೆ ಬಂತು, ಇಲ್ಲದಿದ್ದರೆ ಇಲ್ಲ' ಎಂಬಂತಹ ಸ್ಥಿತಿ. ಅರ್ಧದಲ್ಲಿ ಕೈಕೊಟ್ಟರೆ ವಾರಗಟ್ಟಲೆ ಕೊಕ್! ಒಂದೆರಡು ವಾರ ಕಳೆದಾಗ ಜನ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ! ನಂತರ ಬಸ್ಸೇ ನಾಪತ್ತೆ!

ಗ್ರಾಮಾಭಿವೃದ್ಧಿ, ಹಳ್ಳಿಯ ಏಳಿಗೆ ಅಂದರೆ ಕೋಟಿಗಟ್ಟಲೆ ಸುರಿಯಬೇಕಾಗಿಲ್ಲ. ಕಟ್ಟಡಗಳನ್ನು ಕಟ್ಟಬೇಕಾಗಿಲ್ಲ. ಸಾಲ ಕೊಡಬೇಕಾಗಿಲ್ಲ. ಕನಿಷ್ಠ ಸೌಕರ್ಯಗಳನ್ನು ಜನರಿಗೆ ಕೊಡಿ. ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಸಸಾ ಮಾಡಿದ್ದು ಕೂಡಾ ಅದನ್ನೇ. 'ಕಾಳಜಿ, ವಿಶ್ವಾಸ' ಶಬ್ದಕ್ಕೆ ಸಸಾದ 'ಸೇವೆ'ಗಿಂತ ಹೆಚ್ಚಿನ ದೃಷ್ಟಾಂತ ಬೇಕಾ?

ಯೂನಿಯನ್-ಡಿಮ್ಯಾಂಡ್ ಇಲ್ಲಿಲ್ಲ.
ಸಸಾದಲ್ಲಿ ಕಾರ್ಮಿಕರೇ ಮಾಲಿಕರು. ಇವರ ಪರಿಶ್ರಮ-ನಿಷ್ಠೆಯೇ ಮೂಲ ಬಂಡವಾಳ. ಕಾರ್ಮಿಕ ನಾಯಕ ಕೆ.ಸುಂದರೇಶ್ (ದಿ.) ಮುಂದಾಳ್ತನದಲ್ಲಿ ಶುರುವಾದ ಸಂಸ್ಥೆಯ ಕಲ್ಪನೆ ಸಾಕಾರಗೊಂಡುದು 1991 ಮಾರ್ಚಿನಲ್ಲಿ. ಹನ್ನೊಂದು ಮಂದಿಯ ಆಡಳಿತ ಮಂಡಳಿ. ಯಾರು ನೌಕರರೋ ಅವರೆಲ್ಲಾ ಸದಸ್ಯರು. ಶಾಲೆಗೆ ಹೋಗುವ ವಿಕಲಚೇತನ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಪ್ರಯಾಣ. ಚಿಕ್ಕಮಕ್ಕಳಿಗೆ ರಿಯಾಯಿತಿ. ತನ್ನ ನೌಕರರಿಗೆ, ನೌಕರ ಕುಟುಂಬದವರಿಗೆ ಉಚಿತ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ 50 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಬಂದ ವಿದಾರ್ಥಿಗಳಿಗೆ ಪುರಸ್ಕಾರ...ಹೀಗೆ ಹತ್ತು ಹಲವು ಕೊಡುಗೆಗಳು. ತನ್ನ ನೌಕರರಿಗೆ ಉತ್ತಮ ವೇತನ, ಶಾಸನಬದ್ಧ ಸೌಲಭ್ಯ, ಸಾಮೂಹಿಕ ವಿಮಾಯೋಜನೆ, ಪಿಂಚಣಿ ನೀಡಿದೆ. ಕವಚ ನಿರ್ಮಾಣ ಹೊರತುಪಡಿಸಿ ಮಿಕ್ಕಲ್ಲಾ ಸರ್ವಸೌಲಭ್ಯ ಹೊಂದಿದ ಸಸಾ ಸ್ವಂತ ಕಟ್ಟಡ ಹೊಂದಿದೆ. ಯೂನಿಯನ್-ಡಿಮ್ಯಾಂಡ್ ಇಲ್ಲದ ಸಂಸ್ಥೆ. ಶ್ರೀಗಳಾದ ಎ.ಎಸ್.ದಿವಾಕರ್, ಸಿ,ಎಚ್.ಕಮಲಾಕ್ಷ, ಬಿ.ಬಿ.ಬಳ್ಳೂರು, ಚಿಕ್ಕೇಗೌಡ, ಎಸ್.ಸಿ.ತಮ್ಮಪ್ಪ ಗೌಡ - ಸೇವೆಗೈದ ಹಿಂದಿನ ಅಧ್ಯಕ್ಷರುಗಳು. ಈಗಿನ ಅಧ್ಯಕ್ಷ ಬಿ.ಎನ್.ಮಹೇಶ್.

( ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೮ರ ಪ್ರಶಸ್ತಿ ಪಡೆದ ಬರೆಹ-
೨೦೦೮ರಲ್ಲಿ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು.)

Monday, August 2, 2010

ಸಾತ್ವಿಕ ಆಹಾರದ ಸಮರ್ಥ ಪ್ರತಿಪಾದಕ

'ಇಂದು ಯಾವುದೇ ಆಸ್ಪತ್ರೆಯಲ್ಲಿ ನೋಡಿ. ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಶೇ.80ರಷ್ಟು ಮಂದಿ ಮಲಬದ್ಧತೆ ಸಮಸ್ಯೆಗೆ ಒಳಪಟ್ಟವರು. ಕಾರಣ, ನಮ್ಮ ಆಹಾರ ಪದ್ಧತಿ. ಮೈದಾ ಬಳಸಿದ ತಿಂಡಿಗಳು, ಪಾಲಿಶ್ ಮಾಡಿದ ಅಕ್ಕಿಯ ಬಳಕೆ, ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದಿರುವುದು, ವ್ಯಾಯಾಮ ಮತ್ತು ವಿಶ್ರಾಂತಿಗಳಲ್ಲಿ ಸಮತೋಲವಿಲ್ಲದಿರುವುದೇ ಇದಕ್ಕೆ ಕಾರಣ' - ಹೀಗೆ ಹಲವು ವೇದಿಕೆಗಳಿಂದ ಪ್ರತಿಪಾದಿಸುತ್ತಿದ್ದವರು ಡಾ.ಪಳ್ಳತ್ತಡ್ಕ ಕೇಶವ ಭಟ್ಟರು.

'ಶಾಲೆಗಳಲ್ಲಿ ಎಳೆಯ ಮಕ್ಕಳು ಬಾಲ್ಯದಲ್ಲೇ ಮಲ-ಮೂತ್ರಗಳನ್ನು ತಡೆಹಿಡಿದುಕೊಳ್ಳುವಂತಹ ವಾತಾವರಣವಿದೆ. ಮಂದೆ ಇಂತಹ ಮಕ್ಕಳು ಮಲಬದ್ಧತೆಯ ಸಮಸ್ಯೆಗೆ ಒಳಗಾಗುವುದಂತೂ ಖಂಡಿತ. ಹಾಗಾಗಿ ಶಾಲೆಗಳಲ್ಲಿ ವ್ಯವಸ್ಥೆ ಬದಲಾಗಬೇಕು' - ವರುಷದ ಹಿಂದೆ ಪುತ್ತೂರಿನ 'ಸಮೃದ್ಧಿ' ಬಳಗವು ಆಯೋಜಿಸಿದ ಸಭೆಯಲ್ಲಿ ಡಾ.ಭಟ್ ಹೇಳಿದ ನೆನಪು. ಇವರು ಮಾತನಾಡುವ ಪ್ರತೀ ವಿಷಯದಲ್ಲೂ ಭವಿಷ್ಯದ ಎಚ್ಚರಿಕೆಯ ಗಂಟೆ.

ಡಾ. ಕೇಶವ ಭಟ್ ಈಗ ವಿಧಿವಶ. (ಭಾರತದವರಾಗಿದ್ದು, ತನ್ನ ಬಹುತೇಕ ಜೀವಿತವನ್ನು ಕಡಲಾಚೆ ಕಳೆದ ಇವರ ಮರಣವೂ (೨೫-೭-೨೦೧೦) ಕಡಲಾಚೆಯೇ ಆಗಿಹೋಯಿತು! ಮರಣದ ಹೊತ್ತಿಗೆ ಅವರಿಗೆ 71 ವಯಸ್ಸು. ಇವರು ಸಸ್ಯವಿಜ್ಞಾನಿ. ರಾಷ್ಟ್ರದಾಚೆಗೂ ತನ್ನ ವಿಚಾರಗಳಿಂದ ಜನಮನದಲ್ಲಿ ಚಿಂತನೆಯ ಬೀಜ ಬಿತ್ತಿದವರು. ಭೂಗೋಳ, ಖಗೋಳ, ವೈದ್ಯಕೀಯ.. ಹೀಗೆ ಯಾವುದೇ ಕ್ಷೇತ್ರದ ಬಗ್ಗೆ ಅಧ್ಯಯನಾಧಾರಿತವಾಗಿ ಮಾತನಾಡುವುದರಿಂದಲೇ ಕೇಶವ ಭಟ್ಟರ ವಿಚಾರಗಳಿಗೂ 'ಮಾನ' ಬಂದಿದೆ. ಡಾ.ಭಟ್ ಮೂವತ್ತೈದು ಬಾರಿ ವಿಶ್ವಪರ್ಯಟನೆ ಮಾಡಿದ್ದಾರೆ. ಎಂಭತ್ತೈದು ದೇಶಗಳನ್ನು ಸುತ್ತಿದ್ದಾರೆ. ಹದಿನೇಳು ಭಾಷೆಗಳಲ್ಲಿ ಪ್ರಾವಿಣ್ಯತೆ. ಸ್ವಾಧ್ಯಾಯ, ಸ್ವಾನುಭವ ಮತ್ತು ಸಾಧನೆ - ಯಶಸ್ವೀ ಬದುಕಿನ ಗುಟ್ಟು.

ಮೂಲತಃ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸನಿಹದ ಪಳ್ಳತಡ್ಕದವರು. ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಕಲಿಕೆ. ಉಡುಪಿ ಎಂ.ಜಿ.ಎಂ.ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸ; ಮದರಾಸಿನಲ್ಲಿ ಬಿಎಸ್ಸಿ, ಎಂಎಸ್ಸಿ, ಪಿಎಚ್ಡಿ ತನಕದ ಉನ್ನತ ವ್ಯಾಸಂಗ. ಒರಿಯಂತೆ ವಿಶ್ವವಿದ್ಯಾಲಯದಲ್ಲಿ ಸುಮಾರು ಎರಡು ದಶಕ ಪ್ರಾಧ್ಯಾಪಕರಾಗಿ ಸೇವೆ. ನಿವೃತ್ತಿಯ ಬಳಿಕ ಸಸ್ಯಶಾಸ್ತ್ರ ಸಂಶೋಧನೆ. ವೆನಿಜುವೆಲಾ ಸರಕಾರವು ಒಂದುಸಾವಿರ ಹೆಕ್ಟೇರಿಗೂ ಮಿಕ್ಕಿದ ಕಾಡನ್ನು ಭಟ್ಟರಿಗೆ ಸಂಶೋಧನೆಗಾಗಿ ನೀಡಿತ್ತು.
'ಸರಳ ಚಿಕಿತ್ಸೆಯಿಂದ ಸಮಗ್ರ ಚಿಂತನದೆಡೆಗೆ' - ಕನ್ನಡದಲ್ಲಿ ಬೆಳಕು ಕಂಡ ಜನಪ್ರಿಯ ಕೃತಿ. ಸಸ್ಯಗಳ ಪರಿಚಯ, ಅವುಗಳ ಬಳಕೆ, ಬೆಳೆವ ಕ್ರಮ, ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ಆಹಾರ ಕ್ರಮಗಳ ಕುರಿತಾಗಿ ಸ್ಪಾನಿಷ್ ಭಾಷೆಯಲ್ಲಿ ಹಲವು ಪುಸ್ತಕಗಳು ಪ್ರಕಟವಾಗಿದ್ದು, ಅವುಗಳು ಆಂಗ್ಲ, ಫ್ರೆಂಚ್ ಭಾಷೆಗಳಿಗೆ ತರ್ಜುಮೆಗೊಂಡಿವೆ. ಕಾಂತಾವರ ಕನ್ನಡ ಸಂಘವು ಭಟ್ಟರ ಪರಿಚಯ ಪುಸ್ತಿಕೆಯೊಂದನ್ನು ಪ್ರಕಟಿಸದೆ.

ವೈಜ್ಞಾನಿಕ ದೃಷ್ಟಿಕೋನ

'ಭೂಮಿ ಗೋಳಾಕಾರವಾಗಿಲ್ಲ. ಆಧುನಿಕ ವೈದ್ಯ ಪದ್ದತಿಯಲ್ಲಿರುವ ರಕ್ತಪರೀಕ್ಷೆ ಅಸಂಗತ ಮತ್ತು ಅನಗತ್ಯ, ವಿಜ್ಞಾನದ ಅವೈಜ್ಞಾನಿಕ ಪ್ರತಿಪಾದನೆ, ನ್ಯೂಟನ್ನನ ಸಿದ್ಧಾಂತ.. ಹೀಗೆ' - ಭಟ್ಟರ ವಿಚಾರಗಳು, ಬೇರೆ ಬೇರೆ ಆಕರಗಳು, ವ್ಯವಸ್ಥೆಗಳು ನೀಡಿದ ಸ್ಥಾಪಿತ ಸತ್ಯಗಳನ್ನು ಅಣಕಿಸುತ್ತಿವೆ!

ಹೃದಯಾಘಾತ ಹೇಗೆ ಉಂಟಾಗುತ್ತದೆ ಎಂಬುದರ ಕುರಿತು ಒಂದೆಡೆ ಹೀಗೆ ಹೇಳುತ್ತಾರೆ - 'ಮಾನವನ ಶರೀರದಲ್ಲಿ ಶೇ.10 ಸೂಕ್ಷ್ಮಾಣು ಜೀವಿಗಳು; ಶೇ.20 ಎಲುಬು, ಮಾಂಸ, ಕಣಭಿತ್ತಿಗಳಂತಹ ಘನವಸ್ತುಗಳು, ಶೇ.70 ದ್ರವ. ಇದರಲ್ಲಿ ಶೇ.10 ರಕ್ತ. ಉಳಿದ ಶೇ.90 ರಸಸಾಗರ. ಮಾನವನ ಮಿದುಳು ಶರೀರದ ಶೇ.19 ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಆದರೆ ಮಿದುಳಿನ ಜೀವಕಣಗಳಿಗೆ ರಕ್ತದ ಸಂಪರ್ಕವಿಲ್ಲ. ಅನ್ನನಾಳದ ಒಳಪದರ, ಕಣ್ಣಿಗೆ ತೇವಭರಿತ ಹೊರಪದರ, ಅಂತೆಯೇ ಇತರ ಅಂಗಗಳಲ್ಲಿಯೂ ಇರುವ ಜೀವಕಣಗಳಿಗೂ ರಕ್ತ ಸಂಪರ್ಕವಿಲ್ಲ. ಇವುಗಳೆಲ್ಲಾ ರಸಸಾಗರದಲ್ಲಿ ಮುಳುಗಿರುವುದು ಗಮನಾರ್ಹ.'

'ಅಪಧಮನಿ, ಅಭಿಧಮನಿ ಹಾಗೂ ಹೃದಯದ ರಕ್ತದಲ್ಲಿ ಪೋಷಕಾಂಶಗಳು ಕಂಡುಬಂದಿಲ್ಲ, ಬದಲಾಗಿ ಕಶ್ಮಲವೇ ತುಂಬಿದೆ! ರಕ್ತದ ಚಲನೆಯನ್ನು ಗಮನಿಸಿದರೆ ಹೃದಯದಿಂದ ಹೊರಟ ಕಶ್ಮಲಯುಕ್ತ ರಕ್ತ ಅಪಧಮನಿಗಳ ಮೂಲಕ ಯಕೃತ್, ಮೂತ್ರಜನಕಾಂಗಗಳು, ಚರ್ಮ, ಶ್ವಾಶಕೋಶಗಳು ಮತ್ತು ಪ್ಲೀಹ ಇವುಗಳಲ್ಲಿ ಕಶ್ಮಲಗಳನ್ನು ಬಿಟ್ಟುಕೊಡುತ್ತದೆ. ಇನ್ನೂ ಹೆಚ್ಚು ಕೊಳೆಗಳಿದ್ದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ ರಕ್ತನಾಳದ ಒಳಮೈಯಲ್ಲಿ ಕೊಳೆ ಸಂಗ್ರಹವಾಗಿ ರಕ್ತದ ಚಲನೆಗೆ ತಡೆಯಾಗಬಹುದು. ಕಶ್ಮಲರಹಿತ ರಕ್ತ ಮತ್ತೆ ಬಳಕೆಯಾಗಬಹುದಾದ ಭಾಗ ಅಭಿಧಮನಿಯ ಮೂಲಕ ಹೃದಯದೆಡೆಗೆ ಹರಿಯುವುದು. ರಕ್ತನಾಳಗಳು ಒಡೆದೆ ಮಾತ್ರ ಜೀವಕಣಗಳಿಗೆ ರಕ್ತದ ಸಂಪರ್ಕ ಏರ್ಪಡುತ್ತದೆ. ಇದರಿಂದ ಹೃದಯಾಘಾತಗಳು ಸಂಭವಿಸುತ್ತದೆ'. ಇಂತಹ ವೈದ್ಯ ವಿಜ್ಞಾನಕ್ಕೆ ಸವಾಲಾಗುವಂತಹ ವಿಚಾರಗಳನ್ನು ನಿರ್ಭೀತಿಯಿಂದ ಹೇಳುವುದರಲ್ಲಿ ಅವರಿಗೆ ಅಳುಕಿರಲಿಲ್ಲ.

'ವೈದ್ಯ ವಿಜ್ಞಾನದ ದಾರಿಯನ್ನೇ ಬಹುತೇಕರು ಒಪ್ಪಿರುವುದರಿಂದ ಇಂತಹ ವಿಚಾರಗಳು ವಿವಾದಕ್ಕೆ ಎಡೆಯಾಗುವುದಿಲ್ಲವೇ' ಒಮ್ಮೆ ಔಪಚಾರಿಕವಾಗಿ ಪ್ರಶ್ನಿಸಿದ್ದೆ. 'ನಾನು ಸಂಶೋಧನೆಗಳಿಂದ ಕಂಡುಕೊಂಡ ಸತ್ಯವನ್ನು ಸಮಾಜದ ಮುಂದೆ ಹೇಳುವುದರಲ್ಲಿ ಅಳುಕೇಕೆ' ಎಂದು ಮರುಪ್ರಶ್ನೆ ಹಾಕಿದ್ದು ನೆನಪಾಗುತ್ತದೆ.

ನಮ್ಮ ಪರಿಸರ ಮತ್ತು ಶಿಕ್ಷಣದ ಕುರಿತು ಒಂದೆಡೆ ಭಟ್ ಬರೆಯುತ್ತಾರೆ - 'ಮಾಧ್ಯಮಗಳ ಪ್ರಚಾರ ವೈಖರಿಯಿಂದ ಇಂದಿನ ಸಮಾಜ ಯಂತ್ರತಂತ್ರಗಳ ದಾಸನಾಗಿ ಉಳಿದಿದೆ. ಕೈಗಾರಿಕಾ ಮುನ್ನಡೆಯಿಂದ ಪರಿಸರ ಮಾಲಿನ್ಯ ಪರಮಾವಧಿಗೆ ತಲುಪಿದೆ. ರಾಸಾಯಿನಿಕ ತ್ಯಾಜ್ಯಗಳನ್ನು ಸಾಗರದ ಆಳಕ್ಕೆ ಇಳಿಸುತ್ತೇವೆ. ವಾತಾವರಣ, ಜಲಾವರಣ, ಶಿಲಾವರಣಗಳಲ್ಲಿ ಎರಚಿದ ತ್ಯಾಜ್ಯಗಳು ಸಾಗರ ಗರ್ಭದಲ್ಲಿ ಸೇರಿ ಧ್ರುವಗಳತ್ತ ಹರಿದಿವೆ. ಇದರಿಂದಾಗಿ ಹಿಮಗೆಡ್ಡೆಗಳ ತಳ ಕರಗುತ್ತಿದೆ. ಪರಿಸರ ಮಾಲಿನ್ಯವು ಮಾನವನನ್ನು ವಿನಾಶದತ್ತ ಎಳೆದೊಯ್ಯುವಂತಿದೆ.'

ಆಹಾರ ಕ್ರಮದಲ್ಲಿ ಬದಲಾವಣೆ

ಡಾ.ಭಟ್ ವಿಚಾರ ಸಂಕಿರಣಗಳ ಮೂಲಕ, ಕಾರ್ಯಾಗಾರಗಳ ಮೂಲಕ ಆರೋಗ್ಯ ಸಂರಕ್ಷಣೆಯ ಕಾಳಜಿಯ ಅರಿವನ್ನು ಹುಟ್ಟುಹಾಕುತ್ತಿದ್ದರು. ಜನರನ್ನು ಕಾಡುತ್ತಿರುವ ವಿವಿಧ ಪ್ರಮುಖ ಆರೋಗ್ಯ ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ನಮ್ಮ ಆಹಾರದಲ್ಲಿ ಆಗಬೇಕಾದ ಬದಲಾವಣೆಯನ್ನು ಸೂಚಿಸುತ್ತಿದ್ದರು.

'ಆರೋಗ್ಯವೇ ಭಾಗ್ಯ' ಅವರ ಸರಳ ಸೂತ್ರ. ನಮ್ಮಲ್ಲಿ ಮಿತಿಮೀರಿ ಸಂಗ್ರಹವಾಗಿರುವ ಶಾರೀರಿಕ-ಮಾನಸಿಕ ಕಲ್ಮಶಗಳನ್ನು ದೂರೀಕರಿಸಬೇಕಾದುದು ಮೊದಲಾದ್ಯತೆ. ಆಹಾರ, ವಿಹಾರ, ವ್ಯಾಯಾಮ, ವಿರಾಮ ಹಾಗೂ ಚಿಂತನೆಗಳು ದೇಹ ಪ್ರಕೃತಿಗೆ ಹೊಂದಿಕೊಂಡಿರುವುದೇ 'ಪ್ರಕೃತಿ ಜೀವನ ಕ್ರಮ'. ಈ ವಿಚಾರದ ಸುತ್ತ ಅವರ ಚಿಂತನೆಗಳು ಸುತ್ತುತ್ತಿತ್ತು.

ಮೈಸೂರಿನ 'ಪ್ರಜೀವಾ' ಬಳಗಕ್ಕೆ ಡಾ.ಭಟ್ ಸಂಪನ್ಮೂಲ ವ್ಯಕ್ತಿ. ಪ್ರಜೀವಾದ ಪ್ರಕಾಶಕಿ ಶ್ರೀಮತಿ ವಿಜಯಲಕ್ಷ್ಮೀ ಅವರು ಕೇಶವ ಭಟ್ಟರನ್ನು ಜ್ಞಾಪಿಸಿಕೊಂಡದ್ದು ಹೀಗೆ - 'ನಗರದಲ್ಲಿ ನಡೆಯುವಂತಹ ಕಾರ್ಯಾಗಾರದಲ್ಲಿ ಸಾಕಷ್ಟು ಮಂದಿ ಇವರ 'ಸಹಜ ಜೀವನ - ಸಾತ್ವಿಕ ಆಹಾರ' ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ. ನಮಗೀಗ ಔಷಧಿಗಳೇ ಆಹಾರಗಳಾಗಿವೆ. ಆಹಾರಗಳು ಔಷಧಿಯಾಗಬೇಕು. ನಮ್ಮ ಅಡುಗೆ ಮನೆಗಳು ಔಷಧಾಲಯವಾಗಬೇಕು. ಅಂದರೆ ರೋಗವನ್ನು ದೂರವಿಡುವ ಆಹಾರಗಳು ಅಲ್ಲಿ ತಯಾರಾಗಬೇಕು ಎನ್ನುತ್ತಿದ್ದರು. ಕಾರ್ಯಾಗಾರಗಳಲ್ಲಿ ತಾವೇ ಪತ್ನಿ ದೇವಕಿ ಅಮ್ಮ ಅವರೊಂದಿಗೆ ಆಹಾರದ ಡೆಮೋ ಮಾಡುತ್ತಿದ್ದರು.'

'ಅಕ್ಕಿ ಕುಟ್ಟಿದಾಗ ಸಿಗುತ್ತದಲ್ಲಾ, 'ತೌಡು' - ಅದು ಉತ್ಕೃಷ್ಟ. ಅದಕ್ಕೆ ಬೆಲ್ಲ ಸೇರಿಸಿ ಮಾಡಿದ ಸಿಹಿ, ಅನಾನಸು ಸಿಪ್ಪೆಯ ಜಾಮ್, ಕಾಯಿ ಪಪ್ಪಾಯಿ ಸಿಪ್ಪೆಯ ಚಟ್ನಿ - ಇವೆಲ್ಲಾ ಆಹಾರದ ರೂಪದಲ್ಲಿ ಹೊಟ್ಟೆಯೊಳಗೆ ಸೇರಿ ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತವೆ' - ಎನ್ನುತ್ತಿದ್ದರು.

'ಸಕ್ಕರೆ ಬಳಕೆ' ಆರೋಗ್ಯಕ್ಕೆ ಹಾನಿಕರ. ಬೆಲ್ಲವನ್ನು ಬಳಸಲು ಅವರ ಅಡ್ಡಿಯಿಲ್ಲ. ಸಕ್ಕರೆ ಬಳಸಿ ಮಾಡುವಂತಹ ಯಾವುದೇ ಪಾನೀಯಕ್ಕೆ ಸಕ್ಕರೆ ಬದಲಿಗೆ ಜೇನುತುಪ್ಪವನ್ನು ಬಳಸಬಹುದು. ಕಾಫಿ, ಚಹದ ಬದಲು ಕಷಾಯ ಸೇವೆ ಯೋಗ್ಯ - ಹೀಗೆ ಆರೋಗ್ಯದ ಪ್ರತೀಯೊಂದು ಸೂಕ್ಷ್ಮ ವಿಚಾರಗಳನ್ನು ಹೇಳುವುದಲ್ಲದೆ, ತಾನೇ ಸ್ವತಃ ಅನುಷ್ಠಾನಿಸಿ ತೋರಿಸಿದ್ದಾರೆ.
ಒಟ್ಟಿನಲ್ಲಿ 'ರೋಗಕ್ಕೆ ಚಿಕಿತ್ಸೆಯಿಲ್ಲ. ಚಿಕಿತ್ಸೆ ಬೇಕಾಗಿರುವುದು ರೋಗಿಗೆ. ರೋಗಿ ತನ್ನ ಆಹಾರ ಮತ್ತು ಇತರ ಶಾರೀರಿಕ ವ್ಯವಹಾರವನ್ನು ಸರಿಪಡಿಸಿಕೊಂಡರೆ ರೋಗವನ್ನು ದೂರವಿಡಬಹುದು' - ಡಾ.ಭಟ್ಟರ ಆಹಾರ ವಿಚಾರಗಳ ಒಟ್ಟೂ ಸಾರ.

ಡಾ.ಪಳ್ಳತಡ್ಕ ಕೇಶವ ಭಟ್ ಈಗ ನಮ್ಮಿಂದ ದೂರವಾಗಿದ್ದಾರೆ. ಅವರು ಬಿಟ್ಟು ಹೋದ ವಿಚಾರಗಳು ಜೀವಂತ. ನಾವು ಒಪ್ಪುತ್ತೇವೋ, ಬಿಡುತ್ತೇವೋ ಅದು ನಮ್ಮ ಬೌದ್ಧಿಕ ಹರವಿಗೆ ಬಿಟ್ಟ ವಿಚಾರ. ತನ್ನ ಜೀವಿತದಲ್ಲಿ ಪರಿಸರ ಸಂರಕ್ಷಣೆ, ಬದುಕಿನಲ್ಲಿ ಆಹಾರ, ಇದರಿಂದ ಆರೋಗ್ಯ ಮತ್ತು ತಾನು ಕಂಡುಕೊಂಡ ವಿಜ್ಞಾನದ ಸತ್ಯಗಳನ್ನು ಪ್ರಪಂಚದ ಮುಂದೆ 'ವಿವಾದಗಳು ಬಂದೀತು' ಎಂಬ ಜಾಗೃತ ಪ್ರಜ್ಞೆಯಿಂದ ಬಿಚ್ಚಿಟ್ಟ ಹಿರಿಯ ಚೇತನಕ್ಕಿದು ಅಕ್ಷರನಮನ.