Thursday, September 9, 2010

ವಿಷಕಂಠ ಪುತ್ರ ವಿಷಮುಕ್ತ!


ದೇಶವ್ಯಾಪಿ ಗಣೇಶ ಹಬ್ಬ ನಡೆಯುತ್ತಿದೆ. ತಿಂಗಳುಗಟ್ಟಲೆ ಗಣೇಶನ ಆರಾಧನೆ. ಕಲಾವಿದರ ಕೈಚಳಕದಲ್ಲಿ ವಿವಿಧ ವೈವಿಧ್ಯ ಗಣೇಶನ ಮೂರ್ತಿಗಳು ಸಿದ್ಧವಾಗುತ್ತಿವೆ.

ಮೂರ್ತಿ ರಚನೆಗೆ ಆವೆಮಣ್ಣು ಮುಖ್ಯ. ಅಲಂಕಾರಕ್ಕೆ, ಸೌಂದರ್ಯಕ್ಕೆ ಡಿಸ್ಟೆಂಪರ್, ಪೈಂಟ್, ಮೆಟಾಲಿಕ್ ಪುಡಿ, ವಿವಿಧ ಬಗೆಯ ಅಂಟು, ಮಿರುಗುವ ಪುಡಿ.. ಇನ್ನೂ ಏನೇನೋ..? ಪರಿಣಾಮ..? 'ಇದು ಅನಿವಾರ್ಯ' ಎಂದು ಪ್ರತಿಪಾದಿಸುವರೂ ಇಲ್ಲದಿಲ್ಲ.
ಇಲ್ನೋಡಿ. ಇವರು ಧಾರವಾಡದ ಸಾಧನಕೇರಿಯ ಮಂಜುನಾಥ್. ಎಲ್ಲಾ ಕಲಾವಿದರಂತೆ ಇವರೂ ಗಣೇಶನ ಮೂರ್ತಿಯನ್ನು ರಚಿಸುತ್ತಾರೆ! ಮೂರ್ತಿಗೆ ಬಳಸುವ ಬಣ್ಣಗಳನ್ನು ವನಸ್ಪತಿಗಳಿಂದ ತಾವೇ ತಯಾರಿಸಿ ಬಳಸುತ್ತಾರೆ. ಪೂರ್ತಿ ಪರಿಸ್ನೇಹಿ.

ಕುಂಕುಮ ಮತ್ತು ರಕ್ತಚಂದನದಿಂದ 'ಕೆಂಪುಬಣ್ಣ', ಗರಿಕೆ ಹುಲ್ಲು, ನೆಲಬೇವು ಮುಂತಾದ ಹಸಿರು ಎಲೆಗಳಿಂದ 'ಹಸಿರು ಬಣ್ಣ', ಲೋಳೆಸರ ಮತ್ತು ಇದ್ದಿಲು ಬಳಸಿ 'ಕಪ್ಪು ಬಣ್ಣ' ತಯಾರಿ. ಮೂರ್ತಿಯ ಮೈಬಣ್ಣಕ್ಕೆ ಆಶ್ವಗಂಧ, ಶ್ರೀಗಂಧ, ಕೇಸರಿಯ ಬಳಕೆ. ಅಂತೆಯೇ ಇತರ ಬಣ್ಣಗಳು ಕೂಡಾ. 'ಹದಿನೈದು ವನಸ್ಪತಿಗಳಿಂದ ಬಣ್ಣ ತಯಾರಿಸುತ್ತೇನೆ. ಗಣೇಶ ಗರಿಕೆ ಪ್ರಿಯ. ಹಾಗಾಗಿ ಹಸಿರು ಬಣ್ಣಕ್ಕೆ ಗರಿಕೆಯನ್ನೇ ಪ್ರಧಾನವಾಗಿ ಆಯ್ದುಕೊಂಡಿದ್ದೇನೆ. ಔಷಧೀಯ ಗುಣವಿರುವ ಯಾವುದೇ ಹಸಿರೆಲೆಯಿಂದ ಹಸಿರು ಬಣ್ಣ ತಯಾರಿಸುತ್ತೇನೆ' ಎನ್ನುತ್ತಾರೆ ಮಂಜುನಾಥ್.

ಗಣೇಶನ ಆರಾಧನೆ ಮುಗಿದು ನೀರಿನಲ್ಲಿ ಮೂರ್ತಿಯನ್ನು ವಿಸರ್ಜಿಸುತ್ತೇವೆ. ಮೂರ್ತಿಗೆ ಬಳಿದ ಪೈಂಟ್ನಲ್ಲಿರುವ ರಾಸಾಯನಿಕಗಳು ನೀರಿನೊಂದಿಗೆ ಬೆರೆತು ವಿಷಮಯವಾಗುತ್ತದೆ. ಈ ಕುರಿತಾಗಿ 'ಗಣೇಶ ಹಬ್ಬದ ಸಮಯದಲ್ಲಿ' ದೇಶಾದ್ಯಂತ ಕೂಗು ಕೇಳುತ್ತೇವೆ. ಮಂಜುನಾಥರ ಗಣಪತಿಯಲ್ಲಿ ಈ ಆಪಾಯವಿಲ್ಲ.

ವರುಷದ ಹಿಂದೆ ಮಾದರಿಯಾಗಿ ಈ ಪ್ರಯೋಗ ಮಾಡಿದ್ದರು. ಕಳೆದ ಸಲ ಧಾರವಾಡ ಸುತ್ತಮುತ್ತ ಸುಮಾರು ಹದಿನೈದು ಸಾರ್ವಜನಿಕ ಉತ್ಸವಗಳ ಗಣೇಶನನ್ನು 'ಸಾವಯವ'ಗೊಳಿಸಿದ್ದಾರೆ! ಅಂದ್ರೆ ವಿಷರಹಿತಗೊಳಿಸಿದ್ದಾರೆ!

ಮನೆ ಆರಾಧನೆಗೆ ಬಳಸುವ ಸುಮಾರು ಇನ್ನೂರರಷ್ಟು ಸಣ್ಣ ಗಾತ್ರದ ಗಣಪತಿ ಮತ್ತು ಸಾರ್ವಜನಿಕವಾಗಿ ಆಚರಿಸುವ ಐವತ್ತಕ್ಕೂ ಮಿಕ್ಕಿ ದೊಡ್ಡ ಗಾತ್ರದ ಗಣಪತಿಯನ್ನು ಮಂಜುನಾಥ್ ನಿರ್ಮಿಸುತ್ತಾರೆ. 'ಗಣೇಶ ಮೂರ್ತಿಯಲ್ಲಿ ಹೆಚ್ಚು ಸ್ಥಳ ಆವರಿಸುವಷ್ಟು ವಸ್ತ್ರದಿಂದಲೇ ಅಲಂಕಾರ ಮಾಡುತ್ತೇನೆ. ಸ್ಕಿನ್ ಕಾಣುವಲ್ಲಿ ಮಾತ್ರ ಪೈಂಟ್. ಇಡೀ ಮೂರ್ತಿಗೆ ಬಣ್ಣ ಬಳಿಯುವುದಿಲ್ಲ' ಎನ್ನುತ್ತಾರೆ.

ಮನೆಯಲ್ಲಿ ಆರಾಧಿಸುವ ಸಣ್ಣ ಗಾತ್ರದ ಗಣೇಶನನ್ನು ಯಾಕೆ 'ಸಾವಯವ'ಗೊಳಿಸಬಾರದು? ಮಂಜುನಾಥ್ ಹೇಳುತ್ತಾರೆ -'ಮೊದಲಿಗೆ ಮನೆಮಂದಿಗೆ ಪರಿಸರದ ಅರಿವು, ಪ್ರೀತಿ ಬೇಕು ಹಾಗಿದ್ದರೆ ಓಕೆ. ಸಾರ್ವಜನಿಕ ಗಣೇಶೋತ್ಸವದಲ್ಲಾದರೆ ಸಾಕಷ್ಟು ಜನರು ಬರುತ್ತಾರೆ. ವನಸ್ಪತಿಗಳನ್ನು ಬಳಸಿ ತಯಾರಿಸಿದ ಮೂರ್ತಿ ಎಂದು ಪ್ಲೆಕ್ಸಿಗಳನ್ನು ಹಾಕುವುದರಿಂದ ಜನರು ಗಮನಿಸುತ್ತಾರೆ. ಕರಪತ್ರಗಳಿಂದ ಪ್ರಚಾರ ಮಾಡುತ್ತೇನೆ. ಒಟ್ಟಿನಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಹಿಂದಿರುವ ಆಶಯ. ಜತೆಗೆ ಹೊಟ್ಟೆಪಾಡೂ ಕೂಡಾ' ಎನ್ನುತ್ತಾರೆ ಮಂಜುನಾಥ್. ಸ್ಥಳೀಯ 'ಕ್ರಿಯಾಶೀಲ ಗೆಳೆಯರು' ಇವರ ಬೆಂಬಲಕ್ಕಿದ್ದಾರೆ. ಬಹಳಷ್ಟು ಪರಿಸರಪ್ರಿಯರ ಪ್ರೋತ್ಸಾಹವಿದೆ. ಈ ಅರಿವು ಮನೆ ತನಕ ತಲುಪಲು ಗಣೇಶನ ಪ್ರಸಾದದೊಂದಿಗೆ ಕರಪತ್ರವನ್ನೂ ನೀಡುವ ಆಲೋಚನೆಯಲ್ಲಿದ್ದಾರೆ.

ಮಂಜುನಾಥರ 'ವನಸ್ಪತಿ ಗಣಪತಿ' ವಿಗ್ರಹಗಳಿಗೆ ಉಳಿದೆಡೆಗಿಂತ ದರ ಜಾಸ್ತಿ. ಸಣ್ಣವಿಗ್ರಹಕ್ಕೆ 100-200 ರೂಪಾಯಿ ಮತ್ತು ದೊಡ್ಡದಕ್ಕೆ 500-1000ದಷ್ಟು ವ್ಯತ್ಯಾಸ ದರವಿದೆ. 'ಇದಕ್ಕೆ ಕಾರಣ, ವನಸ್ಪತಿಗಳನ್ನು ಸಂಗ್ರಹ ಮಾಡಲು ವೆಚ್ಚವಾಗುತ್ತದೆ. ಗ್ರಹಿಸಿದಾಗ ಸಿಗುವುದಿಲ್ಲ. ಹುಡುಕಾಟ ಹೆಚ್ಚು ಶ್ರಮ ಮತ್ತು ವೆಚ್ಚ ಬೇಡುವಂತಾದ್ದು' ಎನ್ನುತ್ತಾರೆ.

ಅದಕ್ಕೆ ಅವರು ಕೊಡುವ ಸುಲಭೋಪಾಯವೂ ಪರಿಸ್ನೇಹಿ! 'ನೀವು ಗಣೇಶನಿಗೆ ಪ್ರಿಯವಾಗಲಿ ಎನ್ನುತ್ತಾ ಸಾವಿರಾರು ರೂಪಾಯಿಯ ಸುಡುಮದ್ದುಗಳನ್ನು ಸಿಡಿಸುತ್ತೀರಷ್ಟೇ. ಅದನ್ನು ಸ್ವಲ್ಪ ಕಡಿಮೆ ಮಾಡಿ. ಹಾಗೆ ಉಳಿದ ಮೊತ್ತವನ್ನು ವಿಗ್ರಹಕ್ಕೆ ವಿನಿಯೋಗಿಸಿ. ಇದರಿಂದ ಪರಿಸರ ನಾಶವೂ ಕಡಿಮೆಯಾಗುತ್ತದೆ. ಆರೋಗ್ಯಕ್ಕೂ ಹಾನಿಯಿಲ್ಲ'!

ತಮ್ಮ ಮನೆಯಲ್ಲಿ 25-30 ಆಯಿಲ್ ಪೆಯಿಂಟಿಂಗ್ ಗಣೇಶನ ಮೂರ್ತಿಯೊಂದಗೆ ಒಂದು ವನಸ್ಪತಿ ಗಣೇಶನನ್ನೂ ಪ್ರದರ್ಶನಕ್ಕಾಗಿ ಇಟ್ಟಿದ್ದರು. ಜನರು ಲೈಕ್ ಮಾಡಿದ್ದು ವನಸ್ಪತಿ ಗಣೇಶನನ್ನು! 'ಅದರಲ್ಲಿ ಪ್ರಕೃತಿಯ ಜೀವಂತಿಕೆ ಇದೆ' ಎನ್ನುತ್ತಾರೆ ಮಂಜುನಾಥರ ತಂದೆ ಮಲ್ಲಯ್ಯ ಹಿರೇಮಠ್.

ಕೆಲವು ಸರಕಾರಿ ಇಲಾಖೆಗಳು, ಅರಣ್ಯ ಇಲಾಖೆ, ಆರಕ್ಷಕ ಠಾಣೆ, ಜಲಮಂಡಳಿಗಳಲ್ಲಿ ಮಂಜುನಾಥರ 'ವನಸ್ಪತಿ ಗಣಪ'ನ ಆರಾಧನೆ ನಡೆಯುತ್ತಿದೆ. ಜಲಮಂಡಳಿಗಳಂತಹ ಇಲಾಖೆಗಳು ಹೆಚ್ಚು ಮುತುವರ್ಜಿ ವಹಿಸಬೇಕೆಂಬುದು ಇವರ ಅಭಿಲಾಷೆ.

1 comments:

ಸೀತಾರಾಮ. ಕೆ. / SITARAM.K said...

ಮಂಜುನಾಥರ ಕಾಳಜಿ ಮೆಚ್ಚುವಂತಹುದು. ಇದಕ್ಕೆ ಇನ್ನು ಪ್ರಚಾರ ದೊರೆಯಬೇಕು.

Post a Comment