Saturday, September 25, 2010

ದೆಹಲಿಯೆಂಬ ಬೆರಗು

* ಶಿವರಾಂ ಪೈಲೂರು, ದೆಹಲಿ

ರಾಜಧಾನಿಯಲ್ಲಿ ಒಂದೇ ಸಮನೆ ಸುರಿಯುತ್ತಿದ್ದ ಮಳೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಯಮುನೆ, ತಾಸುಗಟ್ಟಲೆ ಟ್ರಾಫಿಕ್ ಜಾಮ್. ಸುತ್ತೆಲ್ಲ ಡೆಂಘಿ, ಚಿಕೂನ್ ಗುನ್ಯಾ, ಜತೆಗೆ ಕಣ್ಣುಜ್ವರ.

ಕಾಮನ್ವೆಲ್ತ್ ಮುಖ್ಯ ಸ್ಟೇಡಿಯಂ ಎದುರು ನಿರ್ಮಾಣಗೊಳ್ಳುತ್ತಿದ್ದ ಕಾಲ್ಸೇತುವೆ ಮುರಿದು ಬಿತ್ತು. ಇತ್ತ ಜಾಮಿಯಾ ಮಸೀದಿ ಎದುರು ತೈವಾನಿಗರಿಗೆ ಗುಂಡೇಟು. ಆಕಾಶವೇ ದೆಹಲಿಯ ತಲೆಮೇಲೆ ಬಿತ್ತೋ ಎಂಬಂತಿರುವ ವರದಿಗಳು ಚಾನೆಲ್ಲುಗಳಲ್ಲಿ ಎಡೆಬಿಡದೆ ಪ್ರಸಾರಗೊಳ್ಳುತ್ತಿದ್ದವು. ಒಂದು ಚಾನೆಲ್ ಅಂತೂ ’ಗೇಮ್ಸ್ ರದ್ದುಮಾಡುವುದೊಂದೇ ನಮಗಿರುವ ದಾರಿ; ಇನ್ನೇನು ಗೇಮ್ಸ್ ರದ್ದಾಗಿಯೇ ಬಿಡುತ್ತದೆ’ ಎನ್ನುತ್ತಿತ್ತು. ಮಿಂಚಂಚೆಯಲ್ಲಿ ಜೋಕ್ಸ್ ಮಹಾಪೂರ. ವಿದೇಶಗಳಲ್ಲಿರುವ ನಮ್ಮ ಜನರಿಂದ ಫೇಸ್ ಬುಕ್ ನಲ್ಲಿ ’ಭಾರತದಲ್ಲೇನಾಗುತ್ತಿದೆ?!’ ಎಂಬ ಪ್ರಶ್ನೆಗಳು. ಅದಕ್ಕೆ ಇಲ್ಲಿನವರ ಉತ್ತರ ’ಶೇಮ್ ಶೇಮ್’. ನಮ್ಮದು ಇದೇ ಜಾಯಮಾನ!!’

ಈ ಮಧ್ಯೆ, ಕಾಮನ್ವೆಲ್ತ್ ವಿಲೇಜಿಗೆ ಬಂದ ಮೊದಲ ತಂಡ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚಿ ಮಾತನಾಡಿದ್ದು ಪತ್ರಿಕೆಯ ಮೂಲೆಯೊಂದರಲ್ಲಿ ಸಣ್ಣದಾಗಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲೆ ಸೇನಾ ಇಂಜಿನಿಯರುಗಳು ಕಾಲ್ಸೇತುವೆಯನ್ನು ನಾಲ್ಕೇ ದಿನಗಳಲ್ಲಿ ಕಟ್ಟುತ್ತಾರಂತೆ ಎಂಬ ವರದಿಯೂ ಬಂತು. ಎಲಾ ಅಂದುಕೊಂಡೆ.

ಸುಮಾರು ದಿನಗಳ ಬಳಿಕ ಇಂದು ದೆಹಲಿಯಲ್ಲಿ ಬೆಚ್ಚಗಿನ ಬಿಸಿಲು. ನಾನು ಮಧ್ಯಾಹ್ನ ಊಟ ಮುಗಿಸಿದವನೇ ದೆಹಲಿಯೊಳಕ್ಕೆ ನಡೆದುಬಿಟ್ಟೆ. ಕತ್ತಲಾಗಿ ನಸು ಹಳದಿಯ ದೊಡ್ಡ ಚಂದಿರ ಕಾಣಿಸಿಕೊಳ್ಳುವಾಗ ಮಿಂಟೋ ರೋಡಿಗೆ ವಾಪಸಾಗಿ ಬರೆಯಲು ಕೂತಿದ್ದೇನೆ.

ನಾನು ಇಂದು ನೋಡಿದ ದೆಹಲಿ ನಿಜಕ್ಕೂ ಚೇತೋಹಾರಿ. ಎಲ್ಲ ಟೀಕೆಗಳಿಗೂ ಉತ್ತರಿಸುವ ತವಕದಲ್ಲಿ ದೆಹಲಿ ಮೈಗೊಡವಿ ಎದ್ದಿತ್ತು. ಕಾನಾಟ್ ಪ್ಲೇಸಿನ ಎಂಪೋರಿಯಾದ ಎದುರು ಉದ್ದಕ್ಕೂ ಕುಶಲಕರ್ಮಿಗಳು ಬಿದಿರಿನಿಂದ ನಾನಾಬಗೆಯ ರಚನೆಗಳನ್ನು ರೂಪಿಸುತ್ತಿದ್ದರು. ಒಂದೊಂದೂ ವೈಶಿಷ್ಟ್ಯಪೂರ್ಣ. ನಾನು ಅಂತಹ ರಚನೆಗಳನ್ನು ಈ ವರೆಗೆ ನೋಡಿಯೇ ಇಲ್ಲ. ನಾಲ್ಕಾರು ಎಂಪೋರಿಯಂಗಳ ಒಳಹೊಕ್ಕೆ. ಗೇಮ್ಸ್ ಬ್ಯಾಡ್ಜಿನ ಮಂದಿ ಆಗಲೇ ಖರೀದಿಯಲ್ಲಿ ತೊಡಗಿದ್ದರು. ರಾಜಸ್ತಾನದ ಮಳಿಗೆಯಲ್ಲಿ ವಸ್ತ್ರಗಳ ವರ್ಣವೈವಿಧ್ಯ ನೋಡುತ್ತ ಅವರು ಎಷ್ಟೊಂದು ಖುಷಿಪಡುತ್ತಿದ್ದರು!

ಹಾಗೆಯೇ ಸಂಸದ್ ಮಾರ್ಗ ಹಿಡಿದರೆ. ಅದು ಸೈಕಲ್ ಸ್ಪರ್ಧೆಗೆ ಅಣಿಯಾಗುತ್ತಿತ್ತು. ರಸ್ತೆಯ ಎರಡೂ ಬದಿ ಹೊಸದಾಗಿ ಹಾಕಿದ್ದ ಹುಲ್ಲುಹಾಸು ಸಣ್ಣಗೆ ಚಿಗಿತುಕೊಂಡಿತ್ತು. ಒಂದೆಡೆ ಸಾಲಾಗಿ ಬೆಳ್ಳಗಿನ ಡೇರೆಗಳನ್ನು ಜೋಡಿಸುತ್ತಿದ್ದರು. ಅಲ್ಲೇ ಸಮೀಪ ಹೊಚ್ಚ ಹೊಸದಾದ ದೈತ್ಯಾಕಾರದ ಜನರೇಟರುಗಳು. ಕಾಮನ್ವೆಲ್ತ್ ಗೇಮ್ಸ್ ಕಚೇರಿ ಎದುರಿನ ಎಲೆಕ್ಟ್ರಾನಿಕ್ ಫಲಕ
ಕ್ರೀಡಾಕೂಟಕ್ಕೆ ಇನ್ನು ಏಳೇ ದಿನ ಬಾಕಿ ಎಂದು ಸಾರಿ ಹೇಳುತ್ತಿತ್ತು.


ಮುಂದೆ ನಡೆದರೆ ಪಟೇಲ್ ಚೌಕ ಒಪ್ಪವಾಗಿತ್ತು. ಪಾರಿವಾಳಗಳು ತಮ್ಮ ಪಾಡಿಗೆ ತಾವು ಕಾಳು ತಿನ್ನುತ್ತ ಭರ್ರನೆ ಹಾರಿಹೋಗುತ್ತ ಮತ್ತೆ ಕಾಳಿನತ್ತ ಇಳಿದು ಬರುತ್ತಿದ್ದವು. ನಮ್ಮ ಕಚೇರಿ ಎದುರಿನ ರಾಜಮಾರ್ಗ ಶಿಸ್ತಾಗಿ ಗಂಭೀರವಾಗಿತ್ತು. ಮಸೀದಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಎದುರು ಆಕರ್ಷಕ ವಿನ್ಯಾಸದಲ್ಲಿ ಗಿಡಗಳನ್ನು ನೆಡಲಾಗಿತ್ತು. ಅಲ್ಲಿರುವ ಮೂರ್ನಾಲ್ಕು ಗೂಡಂಗಡಿಗಳು ಹೊಸ ರೂಪದಲ್ಲಿ ಶೋಭಿಸುತ್ತಿದ್ದವು.

ಸಂಜೆಯಾಗುತ್ತ ಇಂಡಿಯಾ ಗೇಟ್ ತಲುಪಿದರೆ ಅಲ್ಲಿ ದೆಹಲಿಗೆ ದೆಹಲಿಯೇ ನೆರೆದಿತ್ತು. ಫೊಟೋ ಸೆಶನ್ನುಗಳು ಬಿರುಸಾಗಿ ನಡೆಯುತ್ತಿದ್ದವು. ಮಕ್ಕಳು, ಹುಡುಗರು, ಹುಡುಗಿಯರು ನಾಳೆದಿನ ಐಸ್ ಕ್ರೀಂ ಸಿಗಲಾರದೋ ಎಂಬಂತೆ ಮುಗಿಬಿದ್ದು ಐಸ್ ಕ್ರೀಂ ಕೊಳ್ಳುತ್ತಿದ್ದರು. ಅಲ್ಲಿ ಅದೇನು ಲವಲವಿಕೆ! ನಾನು ಮನಸ್ಸಿಲ್ಲದ ಮನಸ್ಸಿನಿಂದ ಬಸ್ಸು ಹತ್ತಿದೆ.

ಇಂದಿನ ದೆಹಲಿ ನೋಡಿದರೆ ಉಳಿದಿರುವ ಏಳು ದಿನಗಳಲ್ಲಿ ರಾಜಧಾನಿ ಸಾಕಷ್ಟು ಸುಂದರಗೊಳ್ಳುವುದರಲ್ಲಿ ಸಂದೇಹವೇನೂ ಇಲ್ಲ. ನಾವೆಲ್ಲ ಅಭಿಮಾನಪಟ್ಟುಕೊಳ್ಳುವ ಹಾಗೆ ಗೇಮ್ಸ್ ಸಾಕಾರಗೊಳ್ಳಲಿ ಎಂತ ಹಾರೈಕೆ. ಉದ್ಘಾಟನಾ ಸಮಾರಂಭದಲ್ಲಿ ರೆಹಮಾನ್ ಹಾಡಿಗಾಗಿ ಕಾಯುತ್ತಿದ್ದೇನೆ.

1 comments:

ಸೀತಾರಾಮ. ಕೆ. / SITARAM.K said...

ಚೆಂದದ ಕಾಮೆಂಟರಿ...
ನಮ್ಮ ಭಾರತೀಯ ತಲೆಗಳು ಕೊನೆಕಾಲದಲ್ಲಿ ಮಾಡುವ ತಯಾರಿ...ವಹಾ...ಚಿತ್ತಾರವನ್ನೇ ಬದಲಿಸುವ೦ತಹುದು.. ಇದು ನಮ್ಮ ಶಕ್ತಿ ಕೂಡಾ..
ನಮಸ್ಕಾರ.

Post a Comment