'ನಮ್ಮ ಧಾರ್ಮಿಕ ವರಿಷ್ಠರು ನೀನ್ಯಾಕೆ ಪ್ರಾರ್ಥನೆಗೆ ಬರುವುದಿಲ್ಲ ಎಂದು ಒತ್ತಾಯಿಸುತ್ತಾರೆ. ನಡೆಯಲಾಗದ, ಮಾತನಾಡಲಾಗದ ಮಗ ಸಂತೋಷನನ್ನು ಬಿಟ್ಟು ಹೇಗೆ ಹೋಗಲಿ. ನನ್ನ ಪಾಲಿಗೆ ಈಗ ಇವನೇ ದೇವರು' ಎನ್ನುತ್ತಾ ಮಗನ ಆರೈಕೆಯಲ್ಲಿ ತೊಡಗುತ್ತಾರೆ ಗ್ರೇಸಿ ಡಿ'ಸೋಜ.
ಗ್ರೇಸಿಯವರ ಮಗ ಸಂತೋಷ್ ಮಿನೆಜಸ್ ಇಪ್ಪತ್ತರ ಹರೆಯದ ಯುವಕ. ದೃಷ್ಟಿ ಮತ್ತು ಶ್ರವಣ ಶಕ್ತಿ ಚೆನ್ನಾಗಿದೆ. ಬಾಲ್ಯಕ್ಕಂಟಿದ ಅಂಗವೈಕಲ್ಯ ಮತ್ತು ಬುದ್ಧಿಮಾಂದ್ಯತೆಯಿಂದ ಸಂತೋಷ್ ನಡೆದಾಡುವುದು ಬಿಡಿ, ಎದ್ದು ಕುಳಿತುಕೊಳ್ಳಲೂ ಅಮ್ಮನ ಆಸರೆ ಬೇಕು. ಸಂತೋಷನಿಗೆ ತೆಂಡೂಲ್ಕರ್ ಅಂದರೆ ಇಷ್ಟ. ವಿಷ್ಣುವಿರ್ಧನ್ ಫಿಲಂ ಅಂದರೆ ಖುಷಿ. ಆ ಸಂತೋಷವನ್ನು ಹಂಚಿಕೊಳ್ಳಲು ಅವನಿಂದಾಗುತ್ತಿಲ್ಲ. ಭಾವನೆಗಳನ್ನು ವ್ಯಕ್ತಪಡಿಸಲು ಹೊರಡುವಾಗ, ಪಾಪ ಮುಖದ ಮಾಂಸಪೇಶಿಗಳ ಮೇಲೆ ನಿಯಂತ್ರಣವಿಲ್ಲದ ಕಾರಣ ಆತನ ಮುಖ ಹೇಗೆಹೇಗೋ ಆಗುತ್ತದೆ. ನೋಡುವವರಿಗೆ ಅಯ್ಯೋ ಅನಿಸುತ್ತದೆ.
ಸುಬ್ರಹ್ಮಣ್ಯ ಹದಿನಾರರ ಕಟ್ಟುಮಸ್ತಿನ ಯುವಕ. ಬುದ್ಧಿಮಾಂದ್ಯ. ದಿನವಿಡೀ ಟೇಪ್ನಲ್ಲಿ ಹಾಡು ಕೇಳುತ್ತಾ, ಮಾತನಾಡುತ್ತಾ ಅಮ್ಮ, ತಂಗಿಯನ್ನು ಗೋಳಾಡಿಸುತ್ತಾ ಇರುತ್ತಾನೆ. ತಿಂಗಳ ಔಷಧಿಗೆ ಎರಡು ಸಾವಿರ ರೂಪಾಯಿ ಸಾಕಾಗುವುದಿಲ್ಲ. 'ಆತನ ನರದೋಷದಿಂದಾಗಿ ಹೀಗಾಗಿದ್ದಾನೆ' ಎಂದು ದುಃಖಿಸುತ್ತಾರೆ ತಂದೆ ಗಣೇಶ ರಾವ್.
ಇನ್ನೋರ್ವ ದುರದೃಷ್ಟಶಾಲಿ ಹದಿನಾಲ್ಕರ ಬಾಲಕ ಹರೀಶ್ ಏಳನೇ ತಿಂಗಳ ಶಿಶುವಿದ್ದಾಗ ಬಂದ ಜ್ವರದಿಂದ ಚೇತರಿಸಲೇ ಇಲ್ಲ. ನೋಡುನೋಡುತ್ತಿದ್ದಂತೆ ಕೈಕಾಲುಗಳು ಮುರುಟಿದುವು! ನಡೆದಾಡಲೂ ಕಷ್ಟವಾಗುವ ಸ್ಥಿತಿ. ಏನನ್ನಾದರೂ ಆಧರಿಸಿ ಎದ್ದು ನಿಲ್ಲುವುದೇ ಹರಸಾಹಸ. ನಡೆದಾಡಲು ಆಗುವುದಿಲ್ಲ. ಚಲಿಸಬೇಕಾದರೆ ತೆವಳುವುದೊಂದೇ ದಾರಿ.
ಕಾಣುವಾಗ ಅರುವತ್ತು ವರುಷವಾದವರಂತೆ ಕಾಣುವ ಮುವತ್ತೆಂಟರ ಶಾರದಾ ಕಳೆದ ಹತ್ತು ವರುಷಗಳಿಂದ ಬುದ್ಧಿಮಾಂದ್ಯೆ. ತನ್ನಣ್ಣ ಮೂರು ತಿಂಗಳ ಹಿಂದೆ ಮರಣಿಸಿ ಬಳಿಕ, ನಾದಿನಿ ಪ್ರೇಮಾ ಈಗ ಇವರ ರಕ್ಷಕಿ. ತನ್ನ ಆರು ಮಕ್ಕಳೊಂದಿಗೆ ಇವರನ್ನೂ ಪ್ರತ್ಯೇಕ ನಿಗಾದೊಂದಿಗೆ ಇಡಬೇಕಾದ ದುಃಸ್ಥಿತಿ.
ಮುದುಡಿದ ಕುಸುಮಗಳು
ಇವು ವಿಷಮಳೆಯಿಂದ ಜರ್ಝರಿತವಾದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ, ಪಟ್ರಮೆ ಮತ್ತು ನಿಡ್ಲೆ ಗ್ರಾಮಗಳ ಕೆಲವು ಉದಾಹರಣೆ ಮಾತ್ರ. ಇಂತಹ ಮಕ್ಕಳು, ಬುದ್ಧಿಮಾಂದ್ಯತೆಯವರು ಜೀವಚ್ಛವವಾಗಿ ಬದುಕು ಸವೆಸುತ್ತಿದ್ದಾರೆ. ಇಲ್ಲಿರುವ ಮುದುಡಿದ ಕುಸುಮಗಳು ನಾಲ್ಕುನೂರಕ್ಕೂ ಹೆಚ್ಚು. ಈ ಕುಟುಂಬಗಳಲ್ಲಿಂದು ನಗುವಿಲ್ಲ, ನೆಮ್ಮದಿಯಿಲ್ಲ. ಇವರಿಗೆ ಸಾಂತ್ವನ ಹೇಳುವವರಿಲ್ಲ. ಇಲ್ಲಿ ಇರುವುದು ಕರುಳು ಹಿಂಡುವ ದೃಶ್ಯ ಮತ್ತು ಭೂತಾಕಾರದ ಪ್ರಶ್ನಾ ಚಿಹ್ನೆ ಮಾತ್ರ.
ಹಾಸಿಗೆ ಹಿಡಿದ ರೋಗಿಯ ಆರೈಕೆಗೆ ಒಬ್ಬರಾದರೂ ಬೇಕೇ ಬೇಕು ಅಂದ ಮೇಲೆ ಆರೈಕೆಗೆ ನಿಂತವರಿಗೂ ಸಂಪಾದನೆ ಇಲ್ಲ. ನಿಕಟ ಬಂಧುಗಳ ಮದುವೆ ಮತ್ತಿತರ ಸಮಾರಂಭಗಳಿಗೂ ಹೋಗಲು ಆಗದ ಸಂಕಟ. ಮನೆಗೆ ಅತಿಥಿಗಳನ್ನು ಬರಮಾಡಿಕೊಳ್ಳುವುದು ಮುಜುಗರ.
ಮಕ್ಕಳ ಆರೈಕೆಗೆ ಸಿಗುವುದು ಅಮ್ಮ ಮಾತ್ರ. ಇವರ ಸ್ಥಾನದಲ್ಲೊಮ್ಮೆ ನಿಂತು ನೋಡಿ. ಕಾಯಿಲೆ ಗುಣವಾಗುವುದಿಲ್ಲ. ಚೇತರಿಸುವುದಿಲ್ಲ ಎಂದು ಗೊತ್ತಿದ್ದರೂ ಆರೈಕೆ ಮಾಡದಿರಲು ಆಗುತ್ತದೆಯೇ? ಹೆತ್ತ ಕಂದಮ್ಮನ ಕುರಿತಾದ ವಿವಿಧ ಕನಸುಗಳನ್ನು ಕಟ್ಟಿದ ಆ ಅಮ್ಮ, ಕನಸು ಭಗ್ನವಾದಾಗ ಪಡುವ ಸಂಕಟ
ಹೊರಪ್ರಪಂಚಕ್ಕೆ ತಿಳಿಸುತ್ತಾಳೆಯೇ? ಎಷ್ಟೇ ಸಾಂತ್ವನ, ಪರಿಹಾರ, ಕೊಡುಗೆಗಳನ್ನು ಕೊಟ್ಟರೂ ಅವಳಿಗದು 'ಕ್ಷಣಿಕ'ವಷ್ಟೇ.
ಮನೆಯ ಯಜಮಾನ ದಿನವಿಡೀ ದುಡಿದು ಅಷ್ಟಿಷ್ಟು ಸಂಪಾದಿಸಿ ಮನೆಗೆ ಬಂದಾಗ ಮನೆಮಕ್ಕಳ ದಾರುಣ ಸ್ಥಿತಿಯು ಅವನನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಈ ಮನೋವ್ಯಥೆಯನ್ನು ಯಾರಲ್ಲೂ ಹೇಳಿಕೊಳ್ಳುವಂತಿಲ್ಲ, ಹೇಳಿಕೊಂಡರೂ ಪ್ರಯೋಜನವಾಗುವಂತಿಲ್ಲ.
ಶಾಲಾಭ್ಯಾಸವನ್ನು ಮೊಟಕುಗೊಳಿಸಿ ತನ್ನ ಸಹೋದರರ ಆರೈಕೆಗೆ ನಿಲ್ಲುವ ಎಷ್ಟು ಮಕ್ಕಳು ಬೇಕು? ಒಂದು ವೇಳೆ ಶಾಲೆಗೆ ಹೋದರೂ ಸರಿಯಾಗಿ ಅಭ್ಯಾಸ ಮಾಡಲಾಗದೆ, ಹೋಂ ವರ್ಕ್ ಮಾಡಲಾಗದೆ ಒದ್ದಾಡುವ ಎಳೆಯ ಮನಸ್ಸುಗಳು ಅರಳುವುದರ ಬದಲು ಮುರುಟುತ್ತವೆ.
ಇದು ಕರ್ನಾಟಕ ಗೇರು ಅಭಿವೃದ್ಧಿ ನಿಗಮವು (ಕೆಸಿಡಿಸಿ) ಎರಡು ದಶಕಕ್ಕೂ ಹೆಚ್ಚು ಕಾಲ ಇಲ್ಲಿ ಹೆಲಿಕಾಪ್ಟರ್ ಮುಖಾಂತರ ಸುರಿಸಿದ ವಿಷಮಳೆಯ ಅನಂತರದ ಫಲ. ಏನಿದು ವಿಷದ ಮಳೆ? ಗೇರು ಮರದ ಹೂಗಳಿಗೆ 'ಚಹ ಸೊಳ್ಳೆ' ಬರುವುದಿದೆ. ಇದರ ನಿಯಂತ್ರಣಕ್ಕೆ ಎಂಡೋಸಲ್ಫಾನ್ ಅಥವಾ ಅದಕ್ಕೆ ಸಮನಾದ ವಿಷವನ್ನು ವೈಮಾನಿಕವಾಗಿ ಸಿಂಪಡಿಸುತ್ತಾರೆ.
ಇಲ್ಲಿರುವುದು ಎಂಟುನೂರು ಹೆಕ್ಟೇರ್ ಗೇರು ತೋಪು. ಯಾರೋ ತಿನ್ನಬೇಕಾದ ಒಂದಷ್ಟು ಟನ್ ಗೋಡಂಬಿ ಉತ್ಪಾದನೆಗಾಗಿ ಈ ಮೂರು ಗ್ರಾಮಗಳು ತೆತ್ತ ಬೆಲೆ ಅಗಾಧ. ಮನೆಮನೆಗಳಲ್ಲಿ ಬುದ್ಧಿಮಾಂದ್ಯತೆ, ಬಂಜೆತನ, ಚರ್ಮರೋಗ, ಮೂರ್ಛೆ ರೋಗ, ಜನ್ಮತಃ ಅಂಗವೈಕಲ್ಯ, ರೋಗನಿರೋಧಕ ಶಕ್ತಿಹರಣ - ಹೀಗೆ ಒಂದಲ್ಲ ಒಂದಲ್ಲ ಸಮಸ್ಯೆಗಳು.
ಇಲ್ಲಿನ ಗೇರು ತೋಪು ಪ್ರತ್ಯೇಕವಾಗಿ ಒತ್ತಟ್ಟಿಗೆ ಇಲ್ಲ. ನಡುನಡುವೆ ಜನವಸತಿ, ಗದ್ದೆ, ಕೆರೆ, ಬಾವಿ, ತೋಟಗಳಿವೆ. ಇಂಥ ಜಾಗಗಳಲ್ಲಿ ವೈಮಾನಿಕ ಸಿಂಪಡಣೆ ಮಾಡಲೇ ಬಾರದು ಎಂಬ ನಿಯಮವಿದೆ. ಅವೆಲ್ಲಾ ಗಾಳಿಗೆ ತೂರಿ ಹೋಗಿವೆ.
ಇಲ್ಲಿರುವವರು ಬಹುತೇಕ ಬಡವರು. ಆರ್ಥಿಕವಾಗಿ ಹಿಂದುಳಿದವರು. ಕೆಲವೊಂದು ರೋಗವು ಔಷಧವನ್ನು ಅಪೇಕ್ಷಿಸಿದರೆ, ಮಿಕ್ಕಂತೆ ಎಲ್ಲವೂ 'ಅನುಭವಿಸಲೇ' ಬೇಕಾದಂತಹ ಕಾಯಿಲೆಗಳು!
ಹೋರಾಟಕ್ಕೆ ನಾಂದಿ
'ಕಳೆದ ದಶಕದೀಚೆಗೆ ಇಲ್ಲಿ ಹತ್ತಕ್ಕೂ ಮಿಕ್ಕಿ ಆತ್ಮಹತ್ಯೆಗಳಾಗಿವೆ, ಬ್ಲಡ್ ಕ್ಯಾನ್ಸರ್ಗಳು ಪತ್ತೆಯಾಗಿವೆ. ಎಂದರೆ ನಂಬ್ತೀರಾ' ಎನ್ನುತ್ತಾರೆ ಎಂಡೋಸಲ್ಫಾನ್ ನಿಷೇಧ ಹೋರಾಟದ ಮುಂಚೂಣಿಯಲ್ಲಿರುವ ಶ್ರೀಧರ ಗೌಡ. ನೇರವಾಗಿ ಎಂಡೋ ವಿಷಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲದಿರಬಹುದು. ಆದರೆ ಹಿಂದೆ ಬಡತನದ ಕುರಿತಾದ, ರೋಗದ ಕುರಿತಾದ ಮಾನಸಿಕ ಒತ್ತಡಗಳು ಕೆಲಸ ಮಾಡಿವೆ.
ಇಲ್ಲಿ ಎಂಡೋಸಲ್ಪಾನ್ ವಿರೋಧಿ ಹೋರಾಟಕ್ಕೆ ಹರಿದಾಸ್ ಮರ್ಲಜೆ, ಜೋಸೆಫ್ ಪಿರೇರಾ, ಡಾ.ಮೋಹನ್ದಾಸ್ ಗೌಡ.. ಮೊದಲಾದ ಗಣ್ಯರು ಆರಂಭಕಾಲದಲ್ಲಿ ನೇತೃತ್ವ ಕೊಟ್ಟವರು. ಈಗ ಶ್ರೀಧರ್ ಗೌಡ ಹೋರಾಟದ ಮುಂಚೂಣಿಯಲ್ಲಿದ್ದಾರೆ.
ಕರ್ನಾಟಕದ ಈ ದುರಂತ ಒಂದು ದಶಕಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಮಾಧ್ಯಮಗಳು ಈ ದುರಂತದ ಆಳಕ್ಕೆ ಅನುಗುಣವಾದಂತಹ ವರದಿಗಳನ್ನು ಹೊರತರಲಿಲ್ಲ. ಸುದ್ದಿಗಳು ಪ್ರಕಟವಾದರೂ ಅವೆಲ್ಲಾ ಪ್ರಾದೇಶಿಕ ಪುಟಗಳಲ್ಲೇ ಸ್ಥಾನ ಪಡೆದಿತ್ತು. ಜನಪ್ರತಿನಿಧಿ ಮತ್ತು ಸರಕಾರಗಳು ಗೊತ್ತಿಲ್ಲದಂತೆ ನಟಿಸಿದ್ದೇ ಹೆಚ್ಚು.
ಇತ್ತ ಕೇರಳದಿಂದ ಎಂಡೋಸಲ್ಫಾನ್ ದುರಂತ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದುವು. ಅಲ್ಲಿಯ ಕಾಯಿಲೆ ಲಕ್ಷಣಗಳಂತೆ ಇಲ್ಲೂ ಇರುವ ಕಾರಣ ಇದು ವಿಷದ ಮಳೆಯ ಪರಿಣಾಮ ಎಂದರಿಯಲು ಹೆಚ್ಚು ದಿವಸ ಬೇಕಾಗಲಿಲ್ಲ. ಹೋರಾಟಕ್ಕೆ ಅಣಿಯಾದರು. ಊರಿನ ರಸ್ತೆ, ಸೇತುವೆ ಮೊದಲಾದ ಆವಶ್ಯಕ ಸೌಲಭ್ಯಗಳ ಒತ್ತಾಯಕ್ಕೆ ರೂಪುಗೊಂಡ 'ಸಂಯುಕ್ತ ಸಂಘ ಸಂಸ್ಥೆಗಳು, ಉಪ್ಪಾರಪಳಿಕೆ' - ಸಂಸ್ಥೆಯಿಂದ ಎಂಡೋ ಹೋರಾಟಕ್ಕೆ ನಾಂದಿ.
ಎಂಟುನೂರು ಎಕ್ರೆ ಗೇರು ತೋಪನ್ನು ಅರಣ್ಯ ಇಲಾಖೆಯು ಗೇರು ಅಭಿವೃದ್ಧಿ ನಿಗಮಕ್ಕೆ ದೀರ್ಘಾವಧಿಗೆ ಲೀಸ್ಗೆ ವಹಿಸಿಕೊಟ್ಟಿತ್ತು. ಆರಂಭದಲ್ಲಿ ಇಲಾಖೆ ಸ್ಪಂದಿಸಿದರೂ, ನಂತರದ ದಿವಸಗಳಲ್ಲಿ 'ಅದು ನಮ್ಮದಲ್ಲ, ಅರಣ್ಯದವರನ್ನು ಕೇಳಿ ಎಂದಿತು. ಅವರನ್ನು ಕೇಳಿದಾಗ ನಿಗಮದವರನ್ನು ಕೇಳಿ' ಎನ್ನುತ್ತಾ ಜಾರಿಕೊಂಡುದೇ ಹೆಚ್ಚಂತೆ!
ಡಾ.ಅಬ್ದುಲ್ ಕಲಾಂ ಅವರ ರಾಷ್ಟ್ರಪತಿಗಳಾಗಿದ್ದಾಗ ಕೊಕ್ಕಡದ ಎಂಡೋ ಸ್ಥಿತಿಯನ್ನು ಮನವರಿಕೆ ಮಾಡಲಾಗಿತ್ತು. ಜತೆಗೆ ಹತ್ತು ಸಾವಿರಕ್ಕೂ ಮಿಕ್ಕಿ ಕಾರ್ಡು ಚಳುವಳಿಯೂ ನಡೆದಿತ್ತು. ವಿಷಯದ ಗಾಢತೆಯನ್ನರಿತ ಡಾ.ಕಲಾಂ ಅವರು ಸ್ಪಂದಿಸಿ ಜಿಲ್ಲಾಧಿಕಾರಿಗೆ ಆದೇಶಿಸಿದರು. ಜಿಲ್ಲಾಧಿಕಾರಿಗಳಿಂದ ಫೈಲ್ ತಹಶೀಲ್ದಾರ್ ಟೇಬಲಿಗೆ ಬಂತು. ಆದರೆ ರೋಗಿಗಳ ಸಂಖ್ಯೆ ಗೊತ್ತು ಮಾಡುವ ಸಮೀಕ್ಷೆ ನಡೆದುದು ತೀರಾ ಈಚೆಗೆ. 'ಆಗ ಸ್ಪಷ್ಟವಾಗಿ ಗೊತ್ತಾಯಿತು; ಕೊಕ್ಕಡದಲ್ಲಿ 251, ಪಟ್ರಮೆಯಲ್ಲಿ 103 ಮತ್ತು ನಿಡ್ಲೆಯಲ್ಲಿ 75 ಪೀಡಿತರು ಬಳಲುತ್ತಿರುವ ವಿಚಾರ' ಎನ್ನುತ್ತಾರೆ ಶ್ರೀಧರ್.
ಕಳೆದ ವರುಷ ಇಲ್ಲಿನ ಪರಿಸ್ಥಿತಿಯನ್ನು, ಪೀಡಿತರ ಶೋಚನೀಯ ಬದುಕನ್ನು ಚಿತ್ರೀಕರಿಸಿ ಈಗ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಯವರಿಗೆ ನೀಡಲಾಯಿತು. ಈ ವರುಷದ ಆರಂಭದಲ್ಲಿ ಶೋಭಾ ಅವರು ಈ ದುರಂತದ ಹಿಂದೆ ವೈಯಕ್ತಿಕ ಆಸಕ್ತಿ ವಹಿಸಿ ಕೊಕ್ಕಡಕ್ಕೆ ಬಂದರು, ರೋಗಗ್ರಸ್ತರ ಮನೆಗೆ ಭೇಟಿ ನೀಡಿದರು. ಪರಿಸ್ಥಿತಿಯ ಅವಲೋಕನ ಮಾಡಿದರು. ಸಮಸ್ಯೆಯ ಗಾಢತೆಯನ್ನು ಮನದಟ್ಟು ಮಾಡಿಕೊಂಡರು. ಒಟ್ಟೂ ಪರಿಣಾಮವಾಗಿ 211 ಕುಟುಂಬದ 232 ಪೀಡಿತರಿಗೆ ಐವತ್ತು ಸಾವಿರ ರೂಪಾಯಿಯಂತೆ ಪರಿಹಾರ ಸಿಗ್ತು. ಜತೆಗೆ ಶೇ.70ಕ್ಕೂ ಮಿಕ್ಕಿ ಪೀಡಿತರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿಯಂತೆ ಮಾಸಿಕ ಸಹಕಾರವೂ ಮಂಜೂರಾಯಿತು ಎನ್ನುತ್ತಾರೆ ಶ್ರೀಧರ್
.
ಬೇಕು, ದೀರ್ಘಕಾಲಿಕ ವ್ಯವಸ್ಥೆ
ಪರಿಹಾರದ ಬಳಿಕ ಯಾವೊಬ್ಬ ಮಂತ್ರಿಯಾಗಲೀ, ಅಧಿಕಾರಿಯಾಗಲೀ ಇತ್ತ ಕಡೆ ಸುಳಿದಿಲ್ಲ. ಇದು ಕೇವಲ ತಾತ್ಕಾಲಿಕ ಸಾಂತ್ವನ ಮಾತ್ರ. ಈ ಮಂದಿಯ ದೀರ್ಘಕಾಲೀನ ಪುನರ್ವಸತಿಗೆ ಒಂದು ನೀಲ ನಕಾಶೆ ಆಗಬೇಕು. ಸ್ಥಳದಲ್ಲೇ ಚಿಕಿತ್ಸೆ ಕೊಡಿಸುವ, ಈ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಮತ್ತು ಮಕ್ಕಳಿಗೆ ವಿಶೇಷ ರೀತಿಯ ಶಿಕ್ಷಣ ಕೊಡುವ ಶಾಲೆಗಳು ಈ ಪರಿಸರದಲ್ಲಿ ಆರಂಭ ಆಗಬೇಕಿದೆ.
ಮೊನ್ನೆ ಫೆಬ್ರವರಿಯಲ್ಲಿ ಮುಖ್ಯಮಂತ್ರಿಯವರು ಬಂದು ಒಂದಷ್ಟು ಆರ್ಥಿಕ ಸಹಾಯ ಕೊಟ್ಟ ನಂತರ ಮುಂದಿನ ಪರಿಹಾರ ಕ್ರಮಗಳ ಬಗ್ಗೆ ಏನೂ ನಡೆದಂತಿಲ್ಲ. ಈ ಪ್ರದೇಶದಲ್ಲಿನ ವಿಷಾಂಶವನ್ನು ಕುಗ್ಗಿಸುವ ಡಿ-ಟಾಕ್ಸಿಫಿಕೇಶನ್ ಯತ್ನಗಳು ನಡೆಯಬೇಕು. ತಮ್ಮದಲ್ಲದ ತಪ್ಪಿನಿಂದ ಜೀವನವಿಡೀ ನರಳಬೇಕಾದ ಈ ನತದೃಷ್ಟರಿಗೆ ಕೆಸಿಡಿಸಿ, ರಾಜ್ಯ ಮತ್ತು ಕೇಂದ್ರದ ಕೃಷಿ ಇಲಾಖೆಗಳು ಹಾಗೂ ಎಂಡೋಸಲ್ಫಾನ್ ತಯಾರಕ ಕಂಪೆನಿಗಳು ಸೇರಿ ನಷ್ಟ ಪರಿಹಾರ ಕೊಡಬೇಕಿದೆ.
ಇತ್ತ ನೆರೆಯ ಕೇರಳದಲ್ಲಿ ಹಾಸಿಗೆ ಹಿಡಿದ ಎಂಸೋಸಲ್ಫಾನ್ ಪೀಡಿತರಿಗೆ ಸರಕಾರ ಎರಡು ಸಾವಿರ ರೂಪಾಯಿಗಳ ಮಾಸಿಕ ಸಹಾಯ ಘೋಶಿಸಿದೆ. ಕಿಲೋಗೆ ಎರಡು ರೂಪಾಯಿ ಅಕ್ಕಿ, ಭೂಮಿ ಇಲ್ಲದವರಿಗೆ ಭೂಮಿ, ಮನೆ ಇಲ್ಲದವರಿಗೆ ಮನೆ, ಮೊಬೈಲ್ ಚಿಕಿತ್ಸಾ ವ್ಯಾನ್ ಇತ್ಯಾದಿಗಳನ್ನು ಕೊಡಮಾಡಿದೆ. ಕೇಂದ್ರ ಸಹಾಯದಿಂದ ಇಂತಹವರಿಗಾಗಿಯೇ ವಿಶೇಷ ಪ್ಯಾಕೇಜ್ ಒಂದನ್ನು ರೂಪಿಸಹೊರಟಿದೆ. ಸರಕಾರದ ನೆರವು ತಲಪುವ ಮೊದಲೇ ಸೇವಾಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ಮತ್ತು ಸ್ವಾಮೀಜಿ ಮೊದಲಾದವರು ತಮ್ಮ ವತಿಯಿಂದ ಸಹಾಯವನ್ನು ತಲಪಿಸಲು ತೊಡಗಿದ್ದಾರೆ.
ಕೇರಳದ ಮೂಲೆ ಮೂಲೆಗೂ ಈ ದುರಂತದ ಎಳೆಎಳೆಗಳನ್ನು ಸಾರಿ ಹೇಳಿದ ಕೇರಳದ ಮಾಧ್ಯಮಗಳ ಜನಪರ ಕಾಳಜಿಯನ್ನು ಶ್ಲಾಘಿಸಲೇಬೇಕು. ಈ ಮೂರು ನತದೃಷ್ಟ ಗ್ರಾಮಗಳ ಕಂಗೆಟ್ಟ ಕುಟುಂಬಗಳಿಗೆ ಸಾಂತ್ವನ ಹೇಳುವುದರಲ್ಲಿ ನಾವು ಕನ್ನಾಡ ಮಂದಿ, ಮಾಧ್ಯಮಗಳು ಮತ್ತು ಸರಕಾರ ಪೂರ್ತಿ ಹಿಂದೆ ಬಿದ್ದಿದ್ದೇವೆ ಎಂದು ಹೇಳದೆ ವಿಧಿಯಿಲ್ಲ. ಈ ತಪ್ಪನ್ನು ನಾವೆಲ್ಲರೂ ಸೇರಿ ಇನ್ನಾದರೂ ತಿದ್ದಿಕೊಳ್ಳಬೇಕಿದೆ.