Thursday, December 9, 2010

ಕಾಫಿ ನಾಡಲ್ಲಿ ತಳಮಳ

ದೇವವೃಂದ - ಮೂಡಿಗೆರೆ ಸನಿಹದ ಹಳ್ಳಿ. ಮುಖ್ಯ ಬೆಳೆ ಕಾಫಿ. 300 ಇಂಚು ಮಳೆ ಬೀಳುವ ಪ್ರದೇಶ. ಹೇರಳ ಹಸುರು ವನರಾಜಿ. ಇದು ಏಲಕ್ಕಿ ಕೃಷಿಯ ಕಣಜ. ನಿಧಾನಕ್ಕೆ ಏಲಕ್ಕಿಗೆ ಕಟ್ಟೆರೋಗ ಬಾಧಿಸಿ ನಾಶ. ಜತೆಗೆ ಮಣ್ಣಿನ ಫಲವತ್ತತೆಯ ಕುಸಿತ. ಆಗ ಕಾಫಿ ಬೋರ್ಡ್ ಕಚೇರಿ ಕಾರ್ಯವೆಸಗುತ್ತಿತ್ತು. 'ಕಾಫಿ ಬೆಳೆದ್ರೆ ಮಾತ್ರ ಸಾಲ ಸಿಗುತ್ತೆ. ಸಾಲ ಮಾಡಿಯಾದರೂ ಕಾಫಿ ಬೆಳೆಯೋಣ' ಎಂಬ ನಿರ್ಧಾರಕ್ಕೆ ಕೃಷಿಕರು ಬಂದರು. ಏಲಕ್ಕಿಯ ಸ್ಥಾನವನ್ನು ಕಾಫಿ ಆವರಿಸಿಕೊಂಡಿತು. ಬದುಕಲು ದಾರಿ ಸಿಕ್ತು. ಮುಂದಿನ ಕಾಫಿ ಕೃಷಿಯ ಕತೆ, ಕೃಷಿಕರ ಚಿತ್ರಣ ನಿಮ್ಮ ಮುಂದಿದೆ' - ಕಾಫಿ ಕೃಷಿಕ ಎಂ.ಜೆ.ದಿನೇಶ್ ತನ್ನೂರಿನ 'ಗತ ದೇವವೃಂದ'ದ ಬದುಕನ್ನು ಕೃಷಿ-ಗ್ರಾಮೀಣ ಪತ್ರಕರ್ತರ ಮುಂದಿಟ್ಟರು.

'ಏಲಕ್ಕಿ ಕೃಷಿ ಇದ್ದಾಗ ಹೈನು, ಕೋಳಿ.. ಮುಂತಾದ ಉಪಕಸುಬಿನೊಂದಿಗೆ ಹಳ್ಳಿ ಬದುಕು ನೆಮ್ಮದಿಯನ್ನು ಕಂಡಿತ್ತು. ಏಲಕ್ಕಿ ಕುಸಿದಾಗ ಅವೆಲ್ಲವೂ ಕೈಕೊಟ್ಟಿತು. ಆಗ ಕಾಫಿ ಏನೋ ಪ್ರವೇಶಿಸಿತು. ರೋಬಸ್ಟಾ ಕಾಫಿ ಗಿಡ ಫಸಲು ನೀಡಲು ಏನಿಲ್ಲವೆಂದರೂ 8-10 ವರುಷ ಬೇಕು. ಆ ಸಮಯದಲ್ಲಿ ಬದುಕಲು ಏನಾದರೂ ದಾರಿ ಬೇಕಲ್ವಾ. ಬೇರೆ ಆದಾಯ ಇಲ್ಲ. ಹಾಗಾಗಿ ಹಂತಹಂತವಾಗಿ ಕಾಡಿನಲ್ಲಿರುವ ನಾಟಾಗಳನ್ನು ಕಡಿದು ಮಾರುವಂತಹ ದುಃಸ್ಥಿತಿ ಬಂದಿತ್ತು'

ಧಾರವಾಡದ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ಶಿಬಿರದ (ಅಕ್ಟೋಬರ್ ೨೭-೩೧) ಸಂದರ್ಭದಲ್ಲಿ ಊರವರ ಕೃಷಿ ದನಿಗೆ ಪತ್ರಕರ್ತರು ಕಿವಿಗೊಟ್ಟರು. 'ಕಾಫಿ ಎಸ್ಟೇಟ್, ಕಾಫಿ ಕೃಷಿಕರು ಅಂದಾಗ ಅಲ್ಲೊಂದು ಶ್ರೀಮಂತ ಲೋಕ ಸೃಷ್ಟಿಯಾಗುತ್ತದೆ, ಸೃಷ್ಟಿಮಾಡಿಕೊಳ್ಳುತ್ತಾರೆ. ಆದರೆ ಬದುಕನ್ನು ಕೆದಕುತ್ತಾ ಸಾಗಿದಂತೆ ಅಲ್ಲೂ ಬಡತನದ ಛಾಯೆ ಗೋಚರಿಸುವಂತಹ ಸನ್ನಿವೇಶಗಳಿವೆ' - ಹೀಗೆ ಅಜ್ಞಾತ ಕಷ್ಟಗಳ ಪೋಸ್ಟ್ಮಾರ್ಟಂ.

ಶಿಬಿರದುದ್ದಕ್ಕೂ ದಿನೇಶ್ ಆಗಾಗ ನೆನಪಿಸಿಕೊಳ್ಳುತ್ತಿರುವ ಈ 'ಶ್ರೀಮಂತಿಕೆ'ಯ ಹಿಂದಿರುವ ಕಹಿಯನ್ನು ಕೆದಕುವುದು ಅಷ್ಟು ಸುಲಭವಾಗಿರಲಿಲ್ಲ. ಕಾಫಿ ಬೆಳೆ ಸಮೃದ್ಧವಾಗಿದ್ದರೂ, ಪ್ರಾಕೃತಿಕ ವಿಕೋಪದಿಂದಾಗಿ ಕೈಗೆ ಬಾರದಂತಹ ಸ್ಥಿತಿ. ಅಕಾಲ ಮಳೆಯು ಕಾಫಿ ಬದುಕನ್ನು ನುಂಗಿ ನೊಣೆಯುತ್ತಿದೆ. ಇಂತಹ ಸ್ಥಿತಿಯಲ್ಲಿ ಯಾವ ಇಲಾಖೆಗಳೂ ಕೃಷಿಕನ ಆಸರೆಗೆ ಬರುವುದಿಲ್ಲ. 'ನೀವು ಕಾಫಿ ಬೆಳೀಬೇಡ್ರಿ' ಎಂಬ ಅಹಂಕಾರದ ಉತ್ತರ.

ಇತ್ತೀಚೆಗಂತೂ ಕೃಷಿ ಕಾರ್ಮಿಕ ಸಮಸ್ಯೆ. ನಗರದಿಂದ ಕಾರ್ಮಿಕರನ್ನು ಕಾಫಿ ಎಸ್ಟೇಟಿಗೆ ಕರೆತರಲಾಗುತ್ತದೆ. ಅವರಿಗೆ ವಾಹನ ವ್ಯವಸ್ಥೆ, ಐಷರಾಮಿ ಊಟೋಪಚಾರ, ಕೈತುಂಬಾ ವೇತನ ಕೊಟ್ಟರೂ ನಿರೀಕ್ಷಿಸಿದ ಕೆಲಸವಾಗುತ್ತಿಲ್ಲ.

ಈಗ ಶುಂಠಿ ಕೃಷಿಯ ಭರಾಟೆ. ವಿಷ ಸಿಂಪಡಣೆ ಮಾಡಿದಷ್ಟೂ ಇಳುವರಿ ಜಾಸ್ತಿಯೆಂಬ ಭ್ರಮೆ. ಕೃಷಿಕ ಸುಧಾಕರ್ ಹೇಳುತ್ತಾರೆ, 'ನಮ್ಮ ಜನಗಳಿಗೆ ಏನಾಗಿದೋ ಗೊತ್ತಿಲ್ಲಾರಿ. ಬೇಕೋ ಬೇಡ್ವೋ, ವಿಷ ಸುರೀತಾನೆ ಇರ್ತಾರೆ. ಈ ಕುರಿತು ಅವರಲ್ಲಿ ಜ್ಞಾನದ ಕೊರತೆಯಿದೆ'.
ಶುಂಠಿಗೆ ದರ ಏರಿದಾಗ ಎಲ್ಲರೂ ಅದನ್ನೇ ನೆಚ್ಚಿಕೊಳ್ಳುತ್ತಾರೆ. ದರ ಬಿದ್ದಾಗ ಬಿಟ್ಟುಬಿಡುತ್ತಾರೆ. ಒಂದೇ ಪ್ರದೇಶದಲ್ಲಿ ಕನಿಷ್ಠ ಐದು ವರುಷ ಸತತವಾಗಿ ಬೆಳೆದರೆ ಶುಂಠಿ ಕೃಷಿಯಲ್ಲಿ ನಷ್ಟವಿಲ್ಲ ಎಂಬ ಅನುಭವ ಮುಂದಿಟ್ಟರು ಜಯರಾಂ ದೇವವೃಂದ.
ಕಾಫಿಯೊಂದಿಗೆ ಕಾಳುಮೆಣಸು ಕೃಷಿ ಬದುಕನ್ನು ಸ್ವಲ್ಪ ಮಟ್ಟಿಗೆ ಆಧರಿಸುತ್ತ್ತಿದೆ. ಆದರೆ ಇಲ್ಲೂ ಇಲಾಖೆಗಳ ಆಟ ತಪ್ಪಿದ್ದಲ್ಲ. 'ಕಾಳುಮೆಣಸು ಸಂಬಾರ ಮಂಡಳಿಯ ವ್ಯಾಪ್ತಿಗೆ ಬರುವುದಿಲ್ಲ-ಇತ್ತ ತೋಟಗಾರಿಕೆಯ ವ್ಯಾಪ್ತಿಗೂ ಬರುವುದಿಲ್ಲ. ಹೀಂಗಾದರೆ ಕೃಷಿಕರು ಎಲ್ಲೋಗ್ಬೇಕು ಸ್ವಾಮೀ' ಸುಧಾಕರ್ ಪ್ರಶ್ನೆ.
ಮೂವತ್ತೈದು ಜಾತಿಯ ದೇಸಿ ತಳಿ ಭತ್ತಗಳು ದೇವವೃಂದದ ಸಂಪನ್ನತೆ. ಆದರೆ ಈಗ ಉಳಿದಿರುವುದು 'ರಾಜಮುಡಿ ಮತ್ತು ದಪ್ಪಭತ್ತ' ತಳಿಯೆರಡು ಮಾತ್ರ. ಇಳುವರಿ ಅಬ್ಬಬ್ಬಾ ಎಂದರೂ ಎಕರೆಗೆ 10-12 ಕ್ವಿಂಟಾಲ್.
'ಮೂರು ವರುಷದಿಂದ ಮಳೆ ಸಿಕ್ಕಾಪಟ್ಟೆ ಬಂತಲ್ವಾ. ಮುಂದಿನ ಐದು ವರುಷ ಮಳೆ ಕೈಕೊಟ್ಟರೆ?' ಹಿರಿಯ ಪತ್ರಕರ್ತ ನಾಗೇಶ್ ಹೆಗಡೆಯವರಿಂದ ಮರುಪ್ರಶ್ನೆ. '2004ರಲ್ಲಿ ನೂರಿಂಚು ಮಳೆ ಬಂತು. ಕಾಫಿ ಬೆಳೆ ಚೆನ್ನಾಗಿತ್ತು. ನಂತರ ಎರಡ್ಮೂರು ವರುಷವೂ ಇದೇ ಪರಸ್ಥಿತಿಯಿತ್ತು. ಬೆಳೆಯಲ್ಲಿ ತೊಂದರೆಯಾಗಲಿಲ್ಲ. ಮಳೆ ಕಡಿಮೆ ಬಂದರೆ ಬೆಳೆ ಚೆನ್ನಾಗಿ ಬರ್ತದೆ ಎಂಬುದು ಗ್ಯಾರಂಟಿ' ಕೃಷಿಕ ದೀಪಕ್ ಸಮಾಧಾನದ ಉತ್ತರ.

ತಮ್ಮೂರಿನ ಹಲವು ಸಮಸ್ಯೆಗಳ ಬಗ್ಗೆ ತಳಸ್ಪರ್ಶಿಯಾಗಿ ಚಿಂತನೆ. ಮೌನದ ಬದುಕಿಗೆ ಮಾತು ಕೊಡುವ ಪ್ರಯತ್ನ. ಪರಿಹಾರ ಹೇಗೆ? 'ಸಮಸ್ಯೆಯಿದೆ. ಇದರೊಳಗೆ ಅವಕಾಶಗಳನ್ನು ನೋಡುವ, ಸೃಷ್ಟಿಸುವ ಅವಕಾಶವಿದೆ' - ದಿನೇಶ್ ಮಾತುಕತೆಗೆ ಹೊಸ ಎಳೆ ತೋರಿದರು.

'ಹೌದ್ರಿ, ದಾರಿಗಳೇನೋ ಇವೆ. ಅದನ್ನು ತೋರಿಸುವವರಾರು? ಯಾವುದನ್ನು ಮಾಡಬೇಕು ಎಂದು ಹೇಳುವವರಾರು? ಸರ್ಕಾರಿ ಗೊಬ್ಬರ ಬಂದಾಗ 'ಸುರಿಯಿರಿ' ಎಂದು ಅಧಿಕಾರಿಗಳು ಹೇಳಿದರು. ಪತ್ರಿಕೆಗಳೂ ಬರೆದುವು. ಗೊಬ್ಬರ ಸುರಿದದ್ದೇ ಬಂತು. ಗಿಡಗಳು ಹಾಂಗೇ ಇವೆ' ಸುಧಾಕರ್ ಹಾಸ್ಯಮಿಶ್ರಿತವಾಗಿ ಹೇಳಿದ್ದರೂ, ಅವರ ನೋವು ಗ್ರಹಿಸಲು ಕಷ್ಟವಾಗಲಿಲ್ಲ.

ಹಲಸು ಅಭಿವೃದ್ದಿ, ಅದರ ಮೌಲ್ಯವರ್ಧನೆ. ಈ ಪ್ರದೇಶಕ್ಕೆ ತಾಳೆ ಸೂಕ್ತವಾಗಬಹುದೋ ಎಂಬ ಕುರಿತು ಅಧ್ಯಯನ. ಅಪ್ಪೆಮಿಡಿ ಕೃಷಿಗೆ ಅವಕಾಶ. ವಾಣಿಜ್ಯ ದೃಷ್ಟಿಯಿಂದ ಲಿಚ್ಚಿ ಹಣ್ಣು ಸೂಕ್ತವಾಗಿದ್ದು, ಅದನ್ನು ಬೆಳೆಯಲು ಪ್ರಚೋದನೆ. ಅಗ್ರಿಟೂರಿಸಂ ಕುರಿತು ಆಲೋಚನೆ, ಇಲ್ಲಿ ಬೆಳೆಯುವ ಭತ್ತ ಯಾ ಅಕ್ಕಿಯನ್ನು 'ದೇವವೃಂದ ಬ್ರಾಂಡ್' ಮಾಡಿಕೊಂಡರೆ ನಗರದಲ್ಲಿ ಒಳ್ಳೆಯ ಮಾರುಕಟ್ಟೆ ಕುದುರಿಸುವತ್ತ ಪ್ರಯತ್ನ.. ಹೀಗೆ ಹಲವಾರು ಪರ್ಯಾಯ ದಾರಿಗಳು ಮಾತುಕತೆಯಲ್ಲಿ ನುಸುಳಿ ಭರವಸೆ ಮೂಡಿಸಿದುವು.
'ಪರ್ಯಾಯ ಕೃಷಿಯ ಕುರಿತು ಚಿಂತನೆ ಮೂಡಿರುವುದು ಆಶಾದಾಯಕ ಬೆಳವಣಿಗೆ. ಹಾಗೆಂತ ಫಕ್ಕನೆ ಬದಲಾವಣೆಯನ್ನು ನಿರೀಕ್ಷಿಸಕೂಡದು. ಭರವಸೆಯನ್ನು, ಆತ್ಮವಿಶ್ವಾಸವನ್ನು ಬೆಳೆಸುವ ಮೋಡೆಲ್ಗಳು ಸೃಷ್ಟಿಯಾಗಬೇಕು. ಅದರ ಫಾಲೋಅಪ್ ಜತೆಜತೆಗೆ ನಡೆಯಬೇಕು' - ಎನ್ನುತ್ತಾ ಮಾತುಕತೆಗೆ ವಿರಾಮ ಹಾಕಿದರು ಹಿರಿಯ ಪತ್ರಕರ್ತ ಶ್ರೀ ಪಡ್ರೆ.
ಕೃಷಿ, ಕೃಷಿ ಬದುಕಿನತ್ತ ಊರವರೇ ಒಂದೇ ಸೂರಿನಡಿ ಮಾತುಕತೆಗೆ ಸಿದ್ಧರಾಗಿರುವುದು ಮತ್ತು ಸಮಸ್ಯೆಯನ್ನು ಹೇಳುತ್ತ ಕೂರುವುದರ ಬದಲು ಅದರ ಪರಿಹರಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ.

0 comments:

Post a Comment