















- ಶ್ರೀ ಪಡ್ರೆ
ಚಿತ್ರ ಸೌಜನ್ಯ : ಮಧುರಾಜ್/ಮಾತೃಭೂಮಿ
ಒಂಭತ್ತು ವರ್ಷ ಹಿಂದಿನ ಆ ದಿನ ಈಗಲೂ ಚೆನ್ನಾಗಿ ನೆನಪಿದೆ. ನಾನು, ಮಾತೃಭೂಮಿ ವರದಿಗಾರ ವೇಣುಗೋಪಾಲ್ ಮತ್ತು ಛಾಯಾಗ್ರಾಹಕ ಮಧುರಾಜ್ ಮುಳಿಯಾರಿನ ಆ ಬಡಪಾಯಿಯ ಮನೆ ಹೊಕ್ಕಿದ್ದೆವು. ಎದುರುಗಡೆ ಚಾಪೆಯಲ್ಲಿ ತಲೆ ಊದಿರುವ ಪುಟ್ಟ ಮಗು ಸೈನಬಾ. ಯಾರ ಕರುಳನ್ನೂ ಹಿಂಡುವ ದೃಶ್ಯ. ನಾವಿಬ್ಬರೂ ಜತೆಯಲ್ಲೇ ಕ್ಲಿಕ್ಕಿಸಿದೆವು.
ಮರುದಿನದಿಂದ ಮಾತೃಭೂಮಿ ಮುಖಪುಟದಲ್ಲಿ ಎಂಡೋಸಲ್ಫಾನ್ ದುರಂತದ ಲೇಖನಸರಣಿ ಆರಂಭಿಸಿದ್ದು ಇದೇ ಚಿತ್ರಕತೆಯಿಂದ. ಕೋಝಿಕ್ಕೋಡಿನ ಬೇಬಿ ಆಸ್ಪತ್ರೆ ಉಚಿತವಾಗಿ ಮಗುವಿನ ಶಸ್ತ್ರಚಿಕಿತ್ಸೆ ಮಾಡಲು ಮುಂದೆಬಂತು. ಅದನ್ನು ಮಾಡಿದ್ದೂ ಆಯಿತು. ಶಸ್ತ್ರಚಿಕಿತ್ಸೆ ಫಲಕಾರಿಯಾದರೂ ಸೈನಬಾ ವಾರಗಳೊಳಗೆ ಪರಲೋಕ ಪಯಣಿಸಿದಳು.
ವಾಣಿನಗರದ ಶ್ರುತಿ ಮತ್ತು ಮುಳಿಯಾರಿನ ಸೈನಬಾರ ಚಿತ್ರ ಎಷ್ಟೊಂದು ಮಾಧ್ಯಮಗಳಲ್ಲಿ ಬೆಳಕು ಕಂಡಿತೆಂದರೆ ಇಂದು ಈ ದುರಂತ ಎಂದಾಕ್ಷಣ ಲಕ್ಷಾಂತರ ಮಂದಿಗೆ ನೆನಪಾಗುವುದು ಈ ಬಾಲೆಯರ ಚಿತ್ರಗಳನ್ನು. ಶ್ರುತಿ ‘ಜೈಪುರ ಕೃತಕ’ಕಾಲಿನೊಂದಿಗೆ ನಡೆದಾಡಿ ಹತ್ತನೆ ಕ್ಲಾಸು ಓದುತ್ತಿದ್ದರೆ, ಸೈನಬಾ ನೆನಪು ಮಾತ್ರ.
ಮಧುರಾಜರ ಮನ ಮಿಡಿಯುವ ಚಿತ್ರಗಳು ಅನಂತರ ಇಡೀ ಕೇರಳ ಪ್ರವಾಸ ಮಾಡಿದುವು. ಐನೂರಕ್ಕೂ ಹೆಚ್ಚು ಎಡೆಗಳಲ್ಲಿ ಈ ಚಿತ್ರಗಳ ಪ್ರದರ್ಶನ ನಡೆಯಿತು! ನಂತರ ಅದೆಷ್ಟೋ ಅಸೈನ್ಮೆಂಟುಗಳಿಗಾಗಿ ದೇಶದುದ್ದಗಲ ಓಡಿದರೂ ಮಧುರಾಜ್ಗೆ ಎಂಡೋ ದುರಂತ ಮರೆಯಲು ಆಗಿಯೇ ಇಲ್ಲ.
ಮಾತೃಭೂಮಿ ಆಯ್ಚಪ್ಪದಿಪ್ಪ್ (ವಾರಪತ್ರಿಕೆ) ಈ ದುರಂತದ ಬಗ್ಗೆ ಹಲವು ಕವರ್ ಸ್ಟೋರಿ ಪ್ರಕಟಿಸಿದೆ. ಆದರೆ ಈ ವಾರದ (ದಶಂಬರ 26) ನೂರು ಪುಟದ ವಿಶೇಷ ಸಂಚಿಕೆ ಈ ದುರಂತದ ಚಿತ್ರ-ವಿವರಗಳಿಗೇ ಮೀಸಲು. 'ಜೀವನಾಶಿನಿ - ನಮಗೆ ಕಾಣಲು ಇಷ್ಟವಿಲ್ಲದ ಚಿತ್ರಗಳು. ಮಧುರಾಜ್ ಸೆರೆಹಿಡಿದ ಭಯಾನಕ ಹತ್ತು ವರ್ಷಗಳು' ಎನ್ನುವುದು ಮುಖಪುಟ ಶೀರ್ಷಿಕೆ.
ಕಾಸರಗೋಡು, ಪಾಲಕ್ಕಾಡ್, ಇಡುಕ್ಕಿ ಜಿಲ್ಲೆಗಳಲ್ಲಿ ಓಡಾಡಿದ ಮಧುರಾಜ್ ಈ ದುರಂತದ ಎಳೆಎಳೆಗಳನ್ನು ಹೃದಯ ತಟ್ಟುವಂತೆ ಚಿತ್ರಿಸಿದ್ದಾರೆ. ಸಂಚಿಕೆಯ ಶಬ್ದಗಳನ್ನೂ ಮೀರಿ ಮಧುರಾಜರ ಚಿತ್ರಗಳು ಸಂವಹಿಸುತ್ತವೆ. ದುರಂತದ ಅಧ್ಯಯನಕ್ಕಾಗಿ ಕಾಸರಗೋಡು ಸಂದರ್ಶಿಸಿದ ಒಂದೂವರೆ ಡಜನ್ ಸಮಿತಿಗಳಲ್ಲಿ ಕೆಲವು ಮಾಡಿದ್ದಕ್ಕಿಂತ ಹೆಚ್ಚಿನ ಸತ್ಯಶೋಧನೆಯನ್ನು ಮಧುರಾಜ್ ಅವರ ಕ್ಯಾಮೆರಾ ಮಾಡಿದೆ.
ಈಗಿನ ಚಿತ್ರಗಳ ಜತೆಗೆ 2001ರಲ್ಲಿ ತೆಗೆದವುಗಳನ್ನೂ ಕೊಟ್ಟಿರುವುದು ಒಟ್ಟಾರೆ ಪರಿಣಾಮ ಹೆಚ್ಚಿಸಿದೆ. ಜೀವನಾಶಿನಿಯ ದೂರಪರಿಣಾಮದ ಕಲ್ಪನೆ ಸಿಗಲು.ಚರ್ಮರೋಗದಿಂದ ಕಂಗೆಟ್ಟ ಮುಳಿಯಾರಿನ ಮತ್ತು ಪಾಲಕ್ಕಾಡುಗಳ ಅನುಕ್ರಮವಾಗಿ ಸುಜಿತ್ ಮತ್ತು ಶಕ್ತಿವೇಲು ಅವರ ಎಳೆ ಚರ್ಮ ಬಿರುಕು ಬಿಟ್ಟ ರೀತಿ ನೋಡಿದರೆ ಸಾಕು
.
ತನ್ನ ಛಾಯಾಗ್ರಾಹಕನ ಪ್ರತಿಭೆ ಮತ್ತು ದೇಶದ ಅತಿ ದೊಡ್ಡ ದುರಂತವೊಂದಕ್ಕೇ ಪೂರ್ತಿ ವಿಶೇಷ ಸಂಚಿಕೆ ಮೀಸಲಿಟ್ಟ ಮಾತೃಭೂಮಿ ವಾರಪತ್ರಿಕೆ ಸಂಪಾದಕರು ಮತ್ತು ಆಡಳಿತ ಅಭಿನಂದನೀಯ. ಮಲೆಯಾಳ ಭಾಷೆಯೋ, ಎಂಡೋ ದುರಂತವೋ ಗೊತ್ತಿಲ್ಲದವರಿಗೂ ಈ ಸಂಚಿಕೆ ಸಂಗ್ರಾಹ್ಯ. ದೇಶದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಂತೂ ದೊಡ್ಡದೊಂದು ಪಾಠ.
5 comments:
ಹೇಗೆ ಪ್ರತಿಕ್ರಯಿಸಬೇಕು ಎಂದು ತಿಳಿಯುತ್ತಿಲ್ಲ. ಛಾಯಾಗ್ರಾಹಕರ ಬಗ್ಗೆ ಅಭಿಮಾನ, ಜಾಢ್ಯ ಹಿಡಿದ ವ್ಯವಸ್ಥೆಯ ಬಗೆಗಿನ ಸಿಟ್ಟು ಎರಡೂ ಏಕಕಾಲಕ್ಕೆ ಬಂತು.
ಕರುಳು ಕತ್ತರಿಸುವ ದೃಶ್ಯಗಳು ...ಮಧುರಾಜ್ ಅವರ ಎಡೆ ಎಷ್ಟು ಗಟ್ಟಿ ಇದೆ.!!! ಚಿತ್ರಗಳೇ ದಿಗಿಲು ಹುಟ್ಟಿಸುವಂತಿದೆ.ಇನ್ನು ಅನುಭವಿಸುವವರ ಪಾಡು... ದೇವರೇ ಏಕೆ ಈ ಪರೀಕ್ಷೆ ..?
ಪೆರಾಜೆಯವರೇ ಧನ್ಯವಾದಗಳು.
ಫೋಟೋ ಎಲ್ಲವನ್ನೂ ವಿವರಿಸಿ ಬಿಟ್ಟಿದೆ.
ಇವತ್ತಿನ (02-02-2011) ಕನ್ನಡಪ್ರಭದಲ್ಲಿ ಕೇಂದ್ರಸರ್ಕಾರ ಎಂಡೋಸಲ್ಫಾನ್ ನಿಂದ ಯಾವ ತೊಂದರೆಯು ಇಲ್ಲ ಎನ್ನುತ್ತಿದೆ. ಜೊತೆಗೆ ಜಾಗತಿಕವಾಗಿ ಇದನ್ನು ನಿಷೇಧಿಸದಿರಲು ಭಾರತ ಸರ್ಕಾರ ಪಣ ತೊಟ್ಟಂತಿದೆ.
ಭಾರತ ಸರ್ಕಾರ ಈ ರೀತಿ ಬೆಂಬಲ ಕೊಡಲು ಕಾರಣವೇನು? ಅದರ ಹಿಂದಿರುವ ರಾಜಕಾರಣಿ ಯಾರು? ಲಾಬಿಕೋರರು ಯಾರು? ಎನ್ನುವುದನ್ನು ಸ್ಪಲ್ಪ ಬಯಲು ಮಾಡಿ.
bahala chennagide
Post a Comment