Wednesday, January 5, 2011

ಮಲೆಯಾಳಂ ವಾಹಿನಿಯಲ್ಲಿ ಕನ್ನಾಡಿನ ಕೃಷಿ

ಮಲೆಯಾಳದ ಅಮೃತ ಟಿವಿ ವಾಹಿನಿಯ ಕೃಷಿ ಕಾರ್ಯಕ್ರಮ 'ಹರಿತ ಭಾರತಂ'. ಸೋಮವಾರದಿಂದ ಗುರುವಾರ ತನಕ ಪ್ರತಿ ಸಂಜೆ 5 ಗಂಟೆಗೆ ಪ್ರಸಾರವಾಗುತ್ತದೆ.

ಕಳೆದ ತಿಂಗಳು ಹರಿತ ಭಾರತಂ ತಂಡವು ಅದರ ಮುಖ್ಯಸ್ಥ ಸಾಜ್ ಕುರಿಯನ್ ನೇತೃತ್ವದಲ್ಲಿ ಕನ್ನಾಡಿಗೆ ಬಂದು ಇಲ್ಲಿನ ಕೃಷಿ ಯಶೋಗಾಥೆ, ಮೌಲ್ಯವರ್ಧನೆ, ಯಂತ್ರಾವಿಷ್ಕಾರದಂತಹ ಸಾಧನೆಗಳನ್ನು ಚಿತ್ರಿಸಿತ್ತು
.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಂಧದ ಕೃಷಿಯ ಹರಿಕಾರ ಕಡೆಶ್ವಾಲ್ಯದ ಶ್ಯಾಮ ಶಾಸ್ತ್ರಿ ಬಡೆಕ್ಕಿಲ ಅವರ ಬಗೆಗಿನ ಕಂತು ನಿನ್ನೆ (ಜ.4) ಪ್ರಸಾರವಾದರೆ, ಇಂದು (ಜ.5) ಸುಳ್ಯ ಬೀರಮಂಗಲದ ರಾಜಿ.ಆರ್.ಕೆ.ಭಟ್ ಅವರ ಕೊಕೊ ಜೆಲ್ಲಿ, ಚಾಕೊಲೇಟ್, ಜಿಂಜರ್
ಲಿಲ್ಲಿ ಮೌಲ್ಯವರ್ಧನೆ ಕತೆಗಳನ್ನು ಪ್ರಸಾರ ಮಾಡಿತು. ಕೊಕೊ ಜೆಲ್ಲಿಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ಅಡಿಕೆ ಪತ್ರಿಕೆ.

ನಾಳಿನ (ಜ.6) 'ಹರಿತ ಭಾರತಂ'ನಲ್ಲಿ ಮಿಲ್ಕ್ ಮಾಸ್ಟರ್ ರಾಘವ ಗೌಡ ಅವರ ಹಾಲು ಹಿಂಡುವ ಯಂತ್ರ, ಜ.10ರಂದು ಅನಂತಾಡಿಯ ಸುರೇಶ ಗೌಡರ ಕೃಷಿ, 11ರಂದು ಅಮೈ ಮಹಾಲಿಂಗ ನಾಯ್ಕರ ಏಕ ವ್ಯಕ್ತಿ ಕೃಷಿ ಸಾಧನೆ, 12ರಂದು ಮಾಣಿಮೂಲೆಯ ಸುರಂಗ ನೀರಿನಿಂದ ನಡೆಯುವ ಕೃಷಿಯ ಬಗೆಗಿನ ಕಂತುಗಳು ಪ್ರಸಾರವಾಗಲಿವೆ.

ಸಾಜ್ ಕುರಿಯನ್ ಅವರ ಕತೆ ಹೇಳುವ ರೀತಿ, ಸಾಧಕ ರೈತನ ಸಾಧನೆ - ಮಾತುಗಳಿಗೆ ಒತ್ತು ಕೊಡುವ ರೀತಿ, ರಾಜ್ಯದ ಯಶೋಗಾಥೆಗಳನ್ನು ದೇಶಮಟ್ಟದಲ್ಲಿ ಪ್ರಸಕ್ತವೆನಿಸುವಂತೆ ಹೆಣೆಯುವ ಜಾಣ್ಮೆ ಎಲ್ಲಾ ಕಾರ್ಯಕ್ರಮಗಳಲ್ಲಿ ಎದ್ದು ಕಾಣುವ ಅಂಶ. ಮೆಚ್ಚಲೇಬೇಕಾದ ಪ್ರೆಸೆಂಟೇಶನ್.

ರೈತರನ್ನು ಹತ್ತಿರ ಕುಳ್ಳಿರಿಸಿ, 'ನಿಮ್ಮ ಕೃಷಿಯ ಬಗ್ಗೆ ಹೇಳ್ರಿ' ಎಂದು ಶುರುವಾಗುವ ಸಂದರ್ಶನಗಳು ಇದರಲ್ಲಿ ಇಲ್ಲವೇ ಇಲ್ಲ!

1 comments:

RAJ said...

ಮಲಯಾಳಂ ವಾಹಿನಿಗಳಿಂದ ಕನ್ನಡ ವಾಹಿನಿಯವರು ಕಲಿಯುವಂತಹುದು ಹಲವಿದೆ.. ಕೇವಲ ಸಿನಿಮ ಪ್ರೆಕ್ಷಕರನ್ನಷ್ಟೇ ಓಲೈಸುವ ವ್ಯಾಪಾರಿ ಬುದ್ದಿಯ ಕನ್ನಡ ವಾಹಿನಿಯವರು ಇಂಥಹ ಕಾರ್ಯಕ್ರಮಗಳನ್ನು ನೋಡುವುದು ಒಳಿತು. ಇದಕ್ಕಾಗಿ ಪ್ರೇಕ್ಷಕರ ಅಭಿರುಚಿಯನ್ನು ಬೆಳೆಸುವ ಕಾರ್ಯವು ಆಗಬೇಕಿದೆ . ಕೇವಲ ಬೆಂಗಳೂರಿಗರು ಮಾತ್ರ ಮನುಷ್ಯರೆಂದು ತಿಳಿವ ಭಾವನೆ ಹೋಗಬೇಕಾಗಿದೆ.

Post a Comment