Sunday, January 9, 2011

ಆಸರೆಗೆ ಕಾಯುತ್ತಿದೆ, ಈ ಕುಟುಂಬ



ಸುಬ್ರಾಯ ಆಚಾರ್ ಅವರಿಗೆ ಕುಲುಮೆ ಅನ್ನ ಕೊಡುವ ವೃತ್ತಿ. ಪತ್ನಿ, ತಂಗಿ ಮತ್ತು ಆರು ಮಕ್ಕಳಿಗೆ ತಾನೇ ಆಸರೆ. ಸ್ವಂತದ್ದಾದ ಭೂಮಿಯಿಲ್ಲ. ಕೊಕ್ಕಡ ಸಮೀಪದ ಉಪ್ಪಾರಪಳಿಕೆಯಲ್ಲಿ ತಿಂಗಳಿಗೆ ಐನೂರು ರೂಪಾಯಿ ತೆತ್ತು ಬಾಡಿಗೆ ಮನೆಯಲ್ಲಿ ವಾಸ.

ಗಂಡನ ಸಂಪಾದನೆಯೊಂದಿಗೆ ಮಡದಿ ಪ್ರೇಮಾ ಬೀಡಿ ಕಟ್ಟು ಅಷ್ಟಿಷ್ಟು ಸಂಪಾದನೆ. ತಂಗಿ ಶಾರದಾರಿಗೆ ಕಳೆದ ಹತ್ತು ವರುಷದಿಂದ ಬುದ್ದಿಮಾಂದ್ಯತೆ ಆವರಿಸಿತ್ತು. ಕಾರಣ, ಸುಮಾರು ಇಪ್ಪತ್ತು ವರುಷಗಳಿಂದ ಈ ಪ್ರದೇಶದಲ್ಲಿ ಗೇರು ತೋಟಗಳಿಗೆ ಸಿಂಪಡಿಸುತ್ತಿದ್ದ ಎಂಡೋಸಲ್ಪಾನ್ ವಿಷದ ಮಳೆಯ ಪರಿಣಾಮ.
ಸುಬ್ರಾಯ ಆಚಾರ್ ಮೂರು ತಿಂಗಳ ಹಿಂದೆ ಹೃದಯಾಘಾತದಿಂದ ಮರಣಿಸಿದರು. ಸಂಸಾರದ ಆಧಾರ ಸ್ತಂಭ ಕಳಚಿತು. ಸ್ವಜಾತಿ ಸಂಘಟನೆಯು ಅಚಾರರ ಅಂತ್ಯಸಂಸ್ಕಾರ ಮೊದಲಾದ ವಿಧಿಗಳಿಗೆ ಸ್ಪಂದಿಸಿತು.

ಇಡೀ ಕುಟುಂಬದ ಹೊಣೆ ಪ್ರೇಮಾ ಹೆಗಲಿಗೆ ಜಾರಿತು. ನಾದಿನಿ, ಒಂದೂವರೆ ವರುಷದ ಕಂದಮ್ಮನ ಸಹಿತ ಆರು ಮಕ್ಕಳ ಜವಾಬ್ದಾರಿ. ಸ್ವಂತದ್ದಾದ ಸೂರಿಲ್ಲ. ತಿಂಗಳಿಗೆ ಐನೂರು ರೂಪಾಯಿ ತೆತ್ತು ಬಾಡಿಗೆ ಕೊಡುವಷ್ಟು ಶಕ್ತರಲ್ಲ. ತಾನೊಬ್ಬಳೇ ಬೀಡಿಕಟ್ಟಿ, ಮನೆಯನ್ನು ನಿಭಾಯಿಸಿ ಜೀವನ ಹೊರೆಯುವುದೊಂದು ಸವಾಲು.
ಈ ಮಧ್ಯೆ ಕಳೆದ ಫೆಬ್ರವರಿಯಲ್ಲಿ ಎಂಡೋಸಲ್ಪಾನ್ ಮೂಲಕ ಅಶಕ್ತರಾದವರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಸ್ಥಳೀಯ ಎಂಡೋ ಹೋರಾಟಗಾರ ಶ್ರೀಧರ ಗೌಡ ಶ್ರಮಿಸಿದ್ದರು. ಅದರಂತೆ ನಾದಿನಿ ಶಾರದಾರಿಗೂ ಪರಿಹಾರ ಸಿಕ್ಕಿತ್ತು.
ಇದಕ್ಕೆ ಹೋರಾಡಿದ ಶ್ರೀಧರ್, ಪ್ರೇಮಾ ಕುಟುಂಬದ ಕಣ್ಣೀರ ಬದುಕಿಗೆ ಸ್ಪಂದಿಸಿದರು. ಸರಕಾರಿ ವರಿಷ್ಠರೊಂದಿಗೆ - ಒಂದು ರೀತಿಯಲ್ಲಿ ಹೋರಾಟವನ್ನೇ ಮಾಡಿ - ಕೊಕ್ಕಡ ಸಮೀಪದ ಪುದ್ಯಂಗದಲ್ಲಿ ಮೂರು ಸೆಂಟ್ಸ್ ಜಾಗ ಹೊಂದಿಸಿದರು. ಒಂದಷ್ಟು ದಾನಿಗಳಿಂದ ಹಣ ಸಂಗ್ರಹಿಸಿ ಚಿಕ್ಕ ತಗಡಿನ ಸೂರಿನ ಮನೆಯನ್ನು ನಿರ್ಮಿಸಲು ನೆರವಾದರು. ಬೀದಿಯಲ್ಲಿದ್ದ ಕುಟುಂಬ ಸೂರಿನೊಳಗೆ ನೆಲೆಸಿತು. ಪಂಚಾಯತ್ ಮಾನವೀಯ ನೆಲೆಯಲ್ಲಿ ನೀರಿನ ಸಂಪರ್ಕ ನೀಡಿತು.

ತಂದೆಯೊಂದಿಗೆ ಇದ್ದು ಅಷ್ಟಿಷ್ಟು ಕುಲುಮೆ ಕೆಲಸಗಳನ್ನು ಕಲಿತ ಹದಿನಾರು ವಯಸ್ಸಿನ ಮಗ ಗಣೇಶ ಬದುಕು ನಿಭಾವಣೆಗಾಗಿ ಅಮ್ಮನಿಗೆ ನೆರವಾದ. ಉಪ್ಪಾರಪಳಿಕೆ ಬಸ್ನಿಲ್ದಾಣದ ಒಂದು ಪಾಶ್ರ್ವದಲ್ಲಿ ಕುಲುಮೆ ಕೆಲಸ ಶುರು ಮಾಡಿದ. 'ದಿವಸಕ್ಕೆ ನೂರು ರೂಪಾಯಿ ಸಂಪಾದನೆಯಾದರೆ ಹೆಚ್ಚು.' ಎನ್ನುತ್ತಾರೆ ಪ್ರೇಮಾ.

ಈಚೆಗೆ ಗಣೇಶನಿಗೆ ಕೈನೋವಿನಿಂದಾಗಿ ಕೆಲಸ ಮಾಡಲು ಅಸಾಧ್ಯವಾಗಿತ್ತು. ಆಗ ನೆರೆಮಂದಿ ಸಹಾಯಕ್ಕೆ ಧಾವಿಸಿದ್ದರು. 'ಒಬ್ಬ ಮಹನೀಯರು ಇಪ್ಪತ್ತೈದು ಕಿಲೋ ಅಕ್ಕಿ ನೀಡಿದರೆ, ಮತ್ತೋರ್ವರು ಆಸ್ಪತ್ರೆಗೆ ಕರೆದೊಯ್ಯಲು ಕಾರಿನ ವ್ಯವಸ್ಥೆ ಮಾಡಿ, ಆಸ್ಪತ್ರೆಯ ಬಿಲ್ಲನ್ನೂ ನೀಡಿದರು' ಎನ್ನುವಾಗ ಪ್ರೇಮಾರಿಗೆ ದುಃಖ ಉಮ್ಮಳಿಸಿ ಬರುತ್ತದೆ.

ಭೂ-ಸೂರು ರಹಿತ ಈ ಕುಟುಂಬಕ್ಕೆ 'ಎಪಿಎಲ್' ಕಾರ್ಡ್ ಸರಕಾರ ನೀಡಿದೆ! 'ಏನೂ ಇಲ್ಲದ ನಮಗೆ ಎಪಿಎಲ್ ಕಾರ್ಡ್ ಹೇಗೆ ಕೊಟ್ಟರು' ಪ್ರೇಮಾ ಪ್ರಶ್ನಿಸುತ್ತಾರೆ. ಇದರಿಂದಾಗಿ ಎಂಡೋಪೀಡಿತರಾದ ಶಾರದಾ ಅವರಿಗೆ ಸರಕಾರದಿಂದ ನೀಡಲ್ಪಸುವ ಒಂದು ಸಾವಿರ ರೂಪಾಯಿ ಮಾಸಾಶನವು ಆಡಳಿತಾತ್ಮಕ ಸಮಸ್ಯೆಯಿಂದಾಗಿ ಇನ್ನೂ ಬಂದಿಲ್ಲ!

ಮನೆಗೆ ಭದ್ರವಾದ ಗೋಡೆಯಿಲ್ಲ. ಮಡಲಿನ ತಟ್ಟಿಯ ರಕ್ಷಣೆ. ಕೆಲವೊಂದು ಸಲ ಮನೆಯೊಳಗೆ ಹಾವು ಬರುವುದೂ ಇದೆ. ಹೀಗಾಗಿ ಹೊಟ್ಟೆಹೊರೆಯುವ ಸಮಸ್ಯೆಯೊಂದಿಗೆ ಮನೆಮಂದಿಯ ರಕ್ಷಣೆಯೂ ಪ್ರೇಮಾ ಕೈಯಲ್ಲಿದೆ.

ಮಗನ ಅಷ್ಟಿಷ್ಟು ಕುಲುಮೆ ಕೆಲಸದ ಸಂಪಾದನೆ ಮತ್ತು ತಾನು ಬೀಡಿ ಕಟ್ಟಿ ಗಳಿಸುವ ಪುಡಿಗಾಸು - ಇವಿಷ್ಟೇ ಪ್ರೇಮಾ ಕುಟುಂಬದ ಹೊಟ್ಟೆಗೆ ಅನ್ನವನ್ನುಣಿಸಲು ಹೆಣಗಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತಿಂಗಳಿಗೆ ಐನೂರು ರೂಪಾಯಿಗಳ ಮಾಸಾಶನ ಬರುತ್ತಿದೆ.

'ನಾನು ಉಪವಾಸವಿದ್ದರೂ ತೊಂದರೆಯಿಲ್ಲ, ಮಕ್ಕಳು ಹಸಿದಿರಬಾರದು. ಆದರೆ ಕೆಲವೊಂದು ಸಲ ಮಕ್ಕಳ ಕೈತುತ್ತಿಗೂ ತೊಂದರೆಯಾಗುತ್ತಿದೆ' ಎಂದು ಕಣ್ಣೊರೆಸಿಕೊಳ್ಳುತ್ತಿದ್ದಾರೆ. ದೊಡ್ಡ ಮಗಳು ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಅಮ್ಮನಿಗೆ ನೆರವಾಗುತ್ತಿದ್ದಾಳೆ.
ಪ್ರೇಮ ಕುಟುಂಬಕ್ಕೆ ಈಗ ಅನುಕಂಪ ಬೇಡ, ಬೇಕಾಗಿರುವುದು ನೆರವಿನ ಆಸರೆ. ತಕ್ಷಣಕ್ಕೆ ಆಗಬೇಕಾದುದು ಸ್ವಂತದ್ದಾದ ಮನೆ, ವೃತ್ತಿ ಮುಂದುವರಿಸಲು ಕುಲುಮೆ ಮನೆ. ಸರಕಾರ, ಖಾಸಗಿಯವರು ಈ ಬಗ್ಗೆ ಸಹಾಯ ಹಸ್ತ ಕೊಟ್ಟರೆ ಒಂದು ಕುಟುಂಬ ಉಳಿದೀತು.

(ವಿಳಾಸ : ಪ್ರೇಮಾ, ದಿವಂತ ಸುಬ್ರಾಯ ಆಚಾರ್ ಅವರ ಹೆಂಡತಿ, ಪುದ್ಯಂಗ ಮನೆ, ಅಂಚೆ ; ಕೊಕ್ಕಡ, ಬೆಳ್ತಂಗಡಿ ತಾಲೂಕು - ದ.ಕ.ಜಿಲ್ಲೆ)

0 comments:

Post a Comment