Saturday, January 22, 2011

ಸ್ವಲ್ಪ ಅಡ್ಜಸ್ಟ್ ಮಾಡಿ!

ಮೈಸೂರು ಸಮೀಪದ ಅರಳುಕುಪ್ಪೆಯಲ್ಲಿ ಬೀಗರ ಔತಣ ಮುಗಿಸಿ ಮರಳುತ್ತಿದ್ದ ಮ್ಯಾಕ್ಸಿಕ್ಯಾಬ್ ಕೆರೆಗೆ ಉರುಳಿ ಮೂವತ್ತೊಂದು ಮಂದಿಯನ್ನು ಬಲಿತೆಗೆಯಿತು! ಮನಕಲಕುವ ಘಟನೆ. ವಾಹಿನಿಗಳಲ್ಲಿ, ಮಾಧ್ಯಮಗಳಲ್ಲಿ ಬರುವ ವರದಿಯನ್ನು ನೋಡುವಾಗಲೇ 'ಛೇ.. ಹೀಗಾಗಬಾರದಿತ್ತು' ಎಂದು ಮುಖ ಸಣ್ಣದು ಮಾಡುತ್ತೇವೆ. ಕೆರೆಯಿಂದ ಚಿಕ್ಕ ಕಂದಮ್ಮನ ಶವವನ್ನು ಎತ್ತಿ ತರುತ್ತಿದ್ದ ದೃಶ್ಯವನ್ನು ನೋಡುತ್ತಿದ್ದಾಗ ನಮ್ಮ ಕರುಳೂ ಚುರ್ರೆನ್ನುತ್ತದೆ. ದುರಂತದಲ್ಲಿ ಮರಣಿಸಿದ ಎಲ್ಲಾ ಚೇತನಗಳಿಗೂ ಕಂಬನಿ.

ಇಂತಹ ಸಂದರ್ಭಗಳಲ್ಲಿ ಸಾರ್ವಜನಿಕರು, ಮೃತಪಟ್ಟ ಕುಟುಂಬದವರು ಒತ್ತಡಕ್ಕೋ, ಭಾವೋದ್ರೇಕಕ್ಕೋ ಒಳಗಾಗುವುದು ಸಹಜ. ಅವರನ್ನು ಸಾಂತ್ವನ ಪಡಿಸಿ, ದುಃಖವನ್ನು ಕಡಿಮೆಗೊಳಿಸುವ ಪ್ರಯತ್ನ ನಡೆಯಬೇಕು. ವಾಹಿನಿಗಳಲ್ಲಿ ನೋಡಿದಂತೆ; ಒಂದೆಡೆ ಕುಟುಂಬಸ್ಥರ ದುಃಖ ನೇಪಥ್ಯದಲ್ಲಿ ಕಂಡುಬಂದರೆ, ಮತ್ತೊಂದೆಡೆ ಸಾರ್ವಜನಿಕರ ಆಕ್ರೋಶ, ಅಭಿಪ್ರಾಯಗಳ ಸುರಿಮಳೆ.
'ರಸ್ತೆ ಸರಿಯಾಗಿರುತ್ತಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ', 'ಕರೆಯ ಸುತ್ತ ತಡೆಗಟ್ಟವಿರುತ್ತಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು', 'ಹೊಣೆ ಹೊತ್ತ ಜಿಲ್ಲಾಧಿಕಾರಿಗಳು ರಾಜೀನಾಮೆ ನೀಡಬೇಕು', 'ಅಧಿಕಾರಿಗಳನ್ನು ಕಿತ್ತೊಗೆಯಬೇಕು'.. ಇಂತಹ ಹಲವಾರು ಹೇಳಿಕೆಗಳ ಬಿತ್ತರ.

ಪರಿಸ್ಥಿತಿ ಕೈಮೀರಿ ಹೋದ ಬಳಿಕ 'ಹಾಗಾಗಬೇಕಿತ್ತು' ಎನ್ನುವ ಉಪದೇಶಗಳು ನೂರಾರು. 'ಇನ್ನು ಹೇಗಾಗಬೇಕು' ಎಂಬ ಕಡೆಗೆ ಚಿತ್ತಹರಿಸಬೇಕಾದ್ದೇ. ಹಾಗಾಗುತ್ತಿಲ್ಲ. ಬರೇ ಹೇಳಿಕೆಗಳಲ್ಲೇ ಪ್ರಕರಣ ಮುಗಿದುಹೋಗುತ್ತದೆ. ಜತೆಗೆ ಇಂತಹ ಸಂದರ್ಭವನ್ನು 'ಜಾಣ್ಮೆ'ಯಿಂದ 'ತಮ್ಮ ಲಾಭಕ್ಕಾಗಿ' ತಿರುಗಿಸಿಕೊಳ್ಳುವ ಎಷ್ಟು ಮಂದಿಬೇಕು. ಈ ಮಧ್ಯೆ ದುರಂತದ ಕುರಿತು ಸಾರ್ವಜನಿಕರೇ ದೂರು ದಾಖಲಿಸಿದ್ದಾರೆ ಎಂಬುದು ಸಮಾಧಾನಕರವಾದ ವಿಚಾರ.

ಸರಿ, ಅಲ್ಲಿನ ಎಲ್ಲಾ ವಿಚಾರಗಳನ್ನು ಮಾನಿಸೋಣ. ಆಡಳಿತ, ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರಿಗೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದುದು ಕರ್ತವ್ಯ. ಇವರು ಕರ್ತವ್ಯವಿಮುಖರಾದಾಗ ಸಾರ್ವಜನಿಕರಿಂದ ಪ್ರತಿಭಟನೆ ತಪ್ಪಲ್ಲ. ಮುಂದೆ ಇಂತಹ ಸಾವು ನೋವಿನ ಅಪಘಾತ ನಡೆಯದಿರಲಿ.

ಆದರೆ ಇಲ್ಲಿ 'ಜವಾಬ್ದಾರಿ' ಎನ್ನುವುದು 'ಸಾರ್ವಜನಿಕ'ರೆಂದು ಹೇಳಿಕೊಳ್ಳುವ ನಮಗೆಷ್ಟಿದೆ? ದುರಂತಗಳು ಸಂಭವಿಸಿದಾಗ ವಾಹಿನಿಗಳ ಮೈಕ್ಗೆ ಮುಖ ಕೊಟ್ಟು ಹೇಳಿಕೆ ಕೊಟ್ಟಲ್ಲಿಗೆ ಮುಗಿಯಿತೇ? ಮೃತಪಟ್ಟ ಕುಟುಂಬದ ಕಣ್ಣೀರು ಒರೆಸುವ ಸಣ್ಣ ಕೆಲಸವನ್ನಾದರೂ ಮಾಡುತ್ತೇವೆಯೇ?

ಮೈಸೂರಿನ ದುರಂತದಲ್ಲಿ ಮ್ಯಾಕ್ಸಿಕ್ಯಾಬ್ನಲ್ಲಿ ನಿಗದಿತ ಮಂದಿಗಿಂತ ಹೆಚ್ಚು ಜನರನ್ನು ಚಾಲಕ ತುಂಬಿಸಿದ್ದ. ಈಚೆಗಿನ ಕೆಲವು ದುರಂತಗಳನ್ನು ಗಮನಿಸಿದಾಗ ಓವರ್ ಲೋಡ್ ಪ್ರಕರಣಗಳೇ ಜಾಸ್ತಿ. ಸ್ವಲ್ಪ 'ಅಡ್ಜೆಸ್ಟ್ ಮಾಡುವಾ' ಎಂದು ಚಾಲಕನನ್ನು ಅಡ್ಜೆಸ್ಟ್ ಮಾಡುವ ಜಾಣತನ ನಮ್ಮೆಲ್ಲರಲ್ಲೂ ಇದೆ ತಾನೆ.

ಮದುವೆ ದಿಬ್ಬಣದ ವಾಹನವನ್ನೇ ಉದಾಹರಣೆಗೆ ತೆಕ್ಕೊಳ್ಳಿ. ಹತ್ತೋ ಹದಿನೈದೋ ಮಂದಿ ಹಿಡಿಯುವ ಜೀಪಿನಲ್ಲಿ ಮೂವತ್ತು ಮಂದಿಯ 'ಅಡ್ಜೆಸ್ಟ್'. ಐವತ್ತೋ ಅರುವತ್ತೋ ಮಂದಿ ಸಾಧ್ಯತೆಯ ಸಾಮಾನ್ಯ ಬಸ್ಸಲ್ಲಿ ನೂರಕ್ಕೂ ಮಿಕ್ಕಿ ಮಂದಿಯ ಭಾರ! 'ಸ್ವಲ್ಪ ಎಡ್ಜಸ್ಟ್ ಮಾಡ್ಕೊಳ್ಳಿ' ಎನ್ನುತ್ತಾ ಹಿಂದಿನಿಂದ ತಳ್ಳಿ ತುಂಬಿಸುವ ಪರಿ!

ಹೆಚ್ಚು ಬೇಡ, ಒಂದು ಕಾಲಘಟ್ಟದಲ್ಲಿ ಪುತ್ತೂರು-ವಿಟ್ಲ ಕಾರು ಸರ್ವೀಸ್ ಇತ್ತಲ್ಲಾ. ಬಹುತೇಕ ಮಂದಿ ಪ್ರಯಾಣಿಸಿದವರೇ! ಇಪ್ಪತ್ತೈದಕ್ಕೂ ಮಿಕ್ಕಿ ಮಂದಿ ಕುಳಿತ ಕಾರಿನಲ್ಲಿ ನಾನೂ ಕುಳಿತು ಪ್ರಯಾಣಿಸಿದ ನೆನಪು ಹಸುರಾಗಿದೆ. ಕಾರು ಇಳಿಯುವಾಗ 'ಕಾಲು ನನ್ನದೋ, ನಿಮ್ಮದೋ' ಎಂದು ಕೇಳುವಷ್ಟರ ತನಕ ಮರಗಟ್ಟಿಹೋಗಿರುತ್ತದೆ!

ನನ್ನೂರು ಪೆರಾಜೆಯಿಂದ ಸುಳ್ಯಕ್ಕೆ ಐದು ಕಿಲೋಮೀಟರ್. ಬೆಳಿಗ್ಗೆ ಏಳುಕಾಲಕ್ಕೆ ವಾಸುದೇವ ಎಂಬವರ 'ಚಿರಂಜೀವಿ' ರಿಕ್ಷಾ ಹೊರಡುತ್ತಿತ್ತು. ಈ ರಿಕ್ಷಾಕ್ಕಾಗಿ ಇಪ್ಪತ್ತಕ್ಕೂ ಮಿಕ್ಕಿ ಕಾದಿರುತ್ತಾರೆ! ಎಲ್ಲರಿಗೂ ಅರ್ಜಂಟ್. 'ಅಡ್ಜಸ್ಟ್ ಮಾಡುವಾ' ಎನ್ನುತ್ತಾ; ಚಾಲಕನ ಎಡಬದಿಯಲ್ಲಿ ಇಬ್ಬರು, ಬಲಭಾಗದಲ್ಲಿ ಒಬ್ಬರು, ಮಿಕ್ಕವರು ಹಿಂಬದಿ.. ಈ ರೀತಿ ಅಡ್ಜಸ್ಟ್ ಮಾಡಿದ್ದರಿಂದ ಒಂದೆರಡು ಬಾರಿ ಅಪಘಾತವೂ ಆಗಿತ್ತು. ಒಂದಷ್ಟು ಮಂದಿ ಬ್ಯಾಂಡೇಜ್ ಹಾಕಿ ತಿಂಗಳುಗಟ್ಟಲೆ ಮನೆಯಲ್ಲಿ ಕುಳಿತುದೂ ಇದೆ. 'ಮಾರ್ಗ ಸರಿಯಿಲ್ಲ ಮಾರಾಯ್ರೆ, ವಾಸುವಿನದ್ದು ಹಳೆ ರಿಕ್ಷಾವಲ್ವಾ' - ಬೆಡ್ನಲ್ಲಿ ಮಲಗಿದ್ದವರ ಅಭಿಪ್ರಾಯ! ಕೊನೆಗೆ ರಿಕ್ಷಾ ಅಪಘಾತವೊಂದರಲ್ಲೇ ಊರಿನಲ್ಲಿ ಆಪದ್ಬಾಂಧವನಂತಿದ್ದ ವಾಸು ಇಹಲೋಕ ತ್ಯಜಿಸಿದ.

ದ್ವಿಚಕ್ರ ವಾಹನಗಳನ್ನು ನೋಡಿ. ಯಾವಾಗಲೂ ಅವಸರ. ಐದು ಮಂದಿಯನ್ನು ಕುಳ್ಳಿರಿಸಿ ಏನಿಲ್ಲವೆಂದರೂ ಅರುವತ್ತು ಕಿಲೋಮೀಟರ್ ವೇಗದಲ್ಲಿ ಪುತ್ತೂರು ಪೇಟೆಯಲ್ಲಿ ಸಾಗುವ ದೃಶ್ಯ ಕಣ್ಣ ಮುಂದಿದೆ. ಏನಾದರೂ ಅಪಘಾತವಾದರೆ 'ರೋಡ್ ಸರಿಯಿಲ್ಲ ಮಾರಾಯ್ರೆ, ಈ ಅಧಿಕಾರಿಗಳು ಏನು ಮಾಡ್ತಾರೆ, ಯಾವುದೂ ಸರಿಯಿಲ್ಲ! ಎಂಬ ಸರ್ಟಿಫಿಕೇಟ್. ಇಬ್ಬರಿಗೆ ಪರವಾನಿಗೆ ಇರುವ ದ್ವಿಚಕ್ರದಲ್ಲಿ ಐದು ಮಂದಿಗೆ ಲೆಸೆನ್ಸ್ ಕೊಟ್ಟವರಾರು?

'ಅಡ್ಜಸ್ಟ್ ಮಾಡುವ' ಅಭ್ಯಾಸ ಕಡಿಮೆಯಾದಷ್ಟೂ ಅಪಘಾತಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದೆನೋ? ಕಡಿಮೆ ಮಾಡುವವರಾರು? 'ಪ್ರಜ್ಞಾವಂತ ನಾಗರಿಕ'ರೆಂದಿಸಿದ ನಾವೇ. ಹೀಗೆಂದಾಗ 'ಬೇಗ ಹೋಗಬೇಡ್ವಾ. ಡ್ಯೂಟಿಗೆ ಲೇಟಾಗುತ್ತೆ. ಮದುವೆ ಮುಹೂರ್ತಕ್ಕೆ ಸರಿಯಾಗಿ ತಲುಪಬೇಡ್ವಾ' ಇಂತಹ ಅಡ್ಡಮಾತುಗಳು ಧಾರಾಳ. ಅಡ್ಡಮಾತುಗಳು ಎಷ್ಟೆಷ್ಟು ವೇಗದಲ್ಲಿ ನಮ್ಮಲ್ಲಿ ರಾಚಿ ಬರ್ತವೋ, ಅಷ್ಟಷ್ಟು ಬೇಗ ಅಂತಕನಿಗೆ ಆಹ್ವಾನ ಕೊಟ್ಟಂತೆ!

1 comments:

Govinda Nelyaru said...

ಜನರಿಗೆ ಅದರ ಸದುಪಯೋಗ ಅರ್ಥಮಾಡಿಕೊಳ್ಳುವ ಮೊದಲು ಸಿಕ್ಕ ಈ ವಾಹನಗಳು ಮತ್ತು ಮೊ-ಬೈಲುಗಳು ಈ ಅನಾಹುತಗಳಿಗೆ ಕಾರಣ. ಐದು ಜನ ಸಾಗುವ ದ್ವಿಚಕ್ರ ವಾಹನದವರಿಗೆ ಹಿತ ನುಡಿ ಹೇಳಬೇಡಿ. ಏಕ್ದಂ ಇನ್ನೂರು ಸಂಪಾದಿಸುವ ಅವರು ನಿಮ್ಮನ್ನು ಆಸ್ಪತ್ರೆಯಲ್ಲಿ ಮಲಗಿಸಿಬಿಟ್ಟಾರು.

Post a Comment