Saturday, January 15, 2011

ಕೇರಳ : ಎಂಡೋ ವಿರುದ್ಧ ಒಗ್ಗಟ್ಟಿನ ಜನದನಿ

ಭೂಪಾಲ್ ಅನಿಲ ದುರಂತದ ದಿನಗಳು ಮಸುಕಾಗುತ್ತಿವೆ. ಅದಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ 'ಎಂಡೋಸಲ್ಫಾನ್ ದುರಂತ' ಕೇರಳದ ಹಲವಾರು ಕುಟುಂಬಗಳ ಬದುಕಿನ ಸುಖವನ್ನೆಲ್ಲಾ ಕಸಿದುಕೊಂಡಿದೆ.
ಕೇರಳದ ಕಾಸರಗೋಡು, ಪಾಲಕ್ಕಾಡ್ ಮತ್ತು ಇಡುಕ್ಕಿ ಜಿಲ್ಲೆಗಳು ಹಾಗೂ ಕರ್ನಾಟಕದ ಕೊಕ್ಕಡ, ಪಟ್ರಮೆ ಮತ್ತು ಸುತ್ತಲಿನ ಗ್ರಾಮಗಳು - ಈ ದುರಂತದ ಎದ್ದು ಕಾಣುವ ಊರುಗಳು. ಇಲ್ಲಿನ ಒಂದೊಂದು ಮನೆಯಲ್ಲೂ ಒಂದೊಂದು ಕರುಣಾಜನಕ ಕತೆ.
ಏನಿದು ಎಂಡೋಸಲ್ಫಾನ್ ದುರಂತ? ಗೇರು ಮರದ ಹೂಗಳಿಗೆ ಚಹಾ ಸೊಳ್ಳೆಯ ಬಾಧೆ ಬರುವುದುಂಟು. ಇದನ್ನೇ ದೊಡ್ಡದಾಗಿಸಿ, ಈ ಸೊಳ್ಳೆಯೆದುರು ಬೃಹತ್ ಪ್ರಮಾಣದಲ್ಲಿ ಎಂಡೋಸಲ್ಫಾನ್ ವಿಷ ಬಳಕೆಯಾಯಿತು. ಕಾಸರಗೋಡಿನಲ್ಲಂತೂ ಅಲ್ಲಿನ ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ ಹೆಲಿಕಾಪ್ಟರ್ ಮೂಲಕ ಈ ವಿಷದ ಮಳೆಗರೆಯಿತು. ಸಿಂಪಡಿಸಿದ ವಿಷವು ನೀರು, ಭೂಮಿ, ಗಾಳಿ ಎಲ್ಲದರಲ್ಲೂ ಸೇರಿಕೊಂಡಿತು. ಹತ್ತಾರು ರೀತಿಗಳಲ್ಲಿ ದೇಹವನ್ನು ಪ್ರವೇಶಿಸುವ ಈ ವಿಷ ಕೇಂದ್ರ ನರಮಂಡಲಕ್ಕೆ ಸಂಬಂಧಿಸಿದ ಮತ್ತು ಇನ್ನಿತರ ಹಲವು ರೀತಿಯ ರೋಗಗಳನ್ನು ತರುತ್ತದೆ. ಇಲ್ಲಿ ಈ ವಿಷ ಮಳೆ 1975ರಿಂದ 2000ನೇ ಇಸವಿಯ ತನಕ ನಿರಂತರವಾಗಿ ನಡೆದಿತ್ತು. ವರ್ಷಕ್ಕೆ ಮೂರು ಸಲ. ಕೊನೆಕೊನೆಗೆ ಎರಡು ಬಾರಿ.
ಜಗತ್ತಿನ ಬೇರೆಲ್ಲೂ ಇಪ್ಪತ್ತೈದು ವರ್ಷ 'ವಿಷ ಮಳೆ' ಸುರಿದದ್ದು ಗೊತ್ತಿಲ್ಲ. ಅಲ್ಲಿ ಈವರೆಗೆ ಏನಿಲ್ಲವೆಂದರೂ 60-70 ಸಿಂಪಡಣೆ ಆಗಿರಬಹುದು! ಈಚೆಗೆ ಕೇಂದ್ರ ಸಚಿವರೊಬ್ಬರು ಕಾಸರಗೋಡಿಗೆ ಬಂದಿದ್ದಾಗ, 'ಇಲ್ಲಿನ ದುರಂತಕ್ಕೆ ಎಂಡೋಸಲ್ಫಾನ್ ಕಾರಣವೆಂದು ಖಚಿತವಾಗಿ ಸಿದ್ಧಗೊಂಡಿಲ್ಲ' ಎಂಬ ಹೇಳಿಕೆ ಕೊಟ್ಟರು. ಅಲ್ಲಿವರೆಗೆ ಕಾಸರಗೋಡಿಗೆ ಮೀಸಲಾಗಿದ್ದ ಎಂಡೋಸಲ್ಫಾನ್
ವಿರುದ್ಧ ಹೋರಾಟ ಇಡೀ ರಾಜ್ಯಕ್ಕೆ ಹಬ್ಬಿತು. ತಾರಕಕ್ಕೆ ಏರಿತು.
ವಿವಾದ ತಲೆಯೆತ್ತಿ ಒಂದು ದಶಕದ ನಂತರ - ಅಂದರೆ ಇಂದಿವರೆಗೂ - ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರನ್ನು ಪತ್ತೆ ಹಚ್ಚುವ ಸೂಕ್ತ ರೀತಿಯ ಸಮೀಕ್ಷೆ ನಡೆದಿಲ್ಲ. ಅವಸರಕ್ಕೆ ಅರ್ಧಂಬರ್ಧ ಸಮೀಕ್ಷೆಗಳಷ್ಟೇ ನಡೆದಿವೆ. ಕಾರ್ಯಕರ್ತರ ಅಂದಾಜಿನಲ್ಲಿ ಜಿಲ್ಲೆಯ ಎಂಡೋ ಪೀಡಿತರ ಸಂಖ್ಯೆ ಅಂದಾಜು ಎಂಟು ಸಾವಿರ ಮೀರಬಹುದು.

ಶೂನ್ಯ ಮುನ್ನೆಚ್ಚರಿಕೆ

ಭಾರತ ಸರಕಾರದ ಕೀಟನಾಶಕ ನಿಯಮಗಳ ಪ್ರಕಾರ ವೈಮಾನಿಕ ಸಿಂಪಡಣೆ ಮಾಡುವಾಗ ಏನೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೋ ಅವನ್ನೆಲ್ಲಾ ಪೂರ್ತಿ ಗಾಳಿಗೆ ತೂರಿದ್ದಾರೆ. ಒಂದು ಉದಾಹರಣೆ ಹೇಳುವುದಾದರೆ ಕೀಟನಾಶಕ ಸಿಂಪಡಣಾ ನಿಯಮದ ಪ್ರಕಾರ ಮುಂಜಾನೆ ಮತ್ತು ಸಂಜೆ ಗಾಳಿಯ ವೇಗ ಕನಿಷ್ಠ ಇರುವಾಗ ಮಾತ್ರ ಸಿಂಪಡಿಸಬಹುದು. ಅದರೆ ತೋಟದ
ಬೆಳೆಗಳ ನಿಗಮ (ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ) ದಿನವಿಡೀ ವಿಷವನ್ನು ಸಿಂಪಡಿಸಿತ್ತು!
ಗೇರು ಮರಗಳ ಹಸಿರು ಕೊಡೆಯ ಹತ್ತು ಅಡಿ ಹೆಚ್ಚು ಎತ್ತರದಲ್ಲಿ ಸಿಂಪಡಣಾ ವಿಮಾನ ಹಾರಿಸಬಾರದು. ಆದರೆ ಗುಡ್ಡ ಮತ್ತು ಕೊಳ್ಳಗಳಿಂದ ಕೂಡಿದ ಕಾಸರಗೋಡಿನಂತಹ ಭೂಪ್ರಕೃತಿಯಲ್ಲಿ ಇದನ್ನು ಅನುಸರಿಸುವುದು ಅಸಾಧ್ಯ. ಕಾಸರಗೋಡಿನ ಹಳ್ಳಿಗಳನ್ನು ಸಂದರ್ಶಿಸಿದ ಪ್ರತಿಯೊಬ್ಬ ತಜ್ಞರೂ 'ಇಂಥ ಜಾಗದಲ್ಲಿ (ಭೂಪ್ರಕೃತಿಯಲ್ಲಿ) ವೈಮಾನಿಕ ಸಿಂಪಡಣೆ ಶುದ್ಧ ತಪ್ಪು' ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂದ ಮೇಲೆ ವೈಮಾನಿಕ ಸಿಂಪಡಣೆಗೆ ಅನುಮತಿ ಕೊಟ್ಟ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಈ
ಪ್ರದೇಶವನ್ನು ನೋಡಿಯೇ ಇರಲಿಲ್ಲವೇ?
ದೆಹಲಿಯ ಕೇಂದ್ರ ಕೀಟನಾಶಕ ಮಂಡಳಿಯಿಂದ ವೈಮಾನಿಕ ಸಿಂಪಡಣೆಗೆ ಲಿಖಿತ ಅನುಮತಿ ಅಗತ್ಯ. '92ರ ನಂತರ ನಾವು ಯಾವುದೇ ಏಜೆನ್ಸಿಗೂ ಈ ಅನುಮತಿ ಕೊಟ್ಟಿಲ್ಲ' ಎಂದು ಮಂಡಳಿ ಸಾರಿ ಹೇಳುತ್ತಿದೆ. ಅಂದ ಮೇಲೆ 93 ರ ನಂತರ ನಡೆದ ವೈಮಾನಿಕ ಸಿಂಪಡಣೆಯೆಲ್ಲಾ ಅಕ್ರಮ ಮತ್ತು ಶಿಕ್ಷಾರ್ಹವಾದದಲ್ಲವೇ?

ಹದ್ದಿಲ್ಲದ ವಿಷ ಬಳಕೆ

ಹೊರ ಜಗತ್ತಿನ ಮಟ್ಟಿಗೆ ಈ ದುರಂತ ಕಾಸರಗೋಡಿಗಷ್ಟೇ ಸೀಮಿತವಾಗಿತ್ತು. ಕೇರಳದ ಚುರುಕಿನ ಮಾಧ್ಯಮಗಳ ಸತತ ಛಲದಿಂದಾಗಿ ಪ್ರಸ್ತುತ ಪಾಲ್ಘಾಟ್ ಜಿಲ್ಲೆಯ ಮಾವಿನ ತೋಪುಗಳಲ್ಲಿ, ಇಡುಕ್ಕಿ ಜಿಲ್ಲೆಯ ಚಹಾ ಮತ್ತು ಏಲಕ್ಕಿ ತೋಟಗಳ ಸುತ್ತಮುತ್ತಲೂ ನೂರಾರು ಕಾಯಿಲೆಗ್ರಸ್ಥರಿರುವುದು ಪತ್ತೆಯಾಯಿತು. ದಶಕದ ಈಚೆಗೆ ಈ ಎರಡೂ ಜಿಲ್ಲೆಗಳಲ್ಲಿ ಕೈಪಂಪುಗಳನ್ನು ಬಳಸಿ ಎಂಡೋಸಲ್ಫಾನ್ ಧಾರಾಳವಾಗಿ ಸಿಂಪಡಿಸಲಾಗುತ್ತಿದೆ.
ಕಾಸರಗೋಡಿನಲ್ಲಿ ಕಂಡಷ್ಟೇ ಕರುಣಾಜನಕವಾಗಿ ಕಾಣುವ ಅಥವಾ ಅದಕ್ಕಿಂತಲೂ ಹೀನಾಯ ಅವಸ್ಥೆಯ ರೋಗಿಗಳ ಚಿತ್ರಗಳನ್ನು ಮಾಧ್ಯಮಗಳು ಹೊರಗೆಳೆದಿವೆ. ಹೀಗೆ ಕೇರಳದ ಮೂರು ಜಿಲ್ಲೆಗಳಲ್ಲಿ ಸಿಂಪಡಣೆ ಪರಿಣಾಮವಾಗಿ ಎಂಡೋಸಲ್ಫಾನ್ ಅತೀವ ಹಾನಿ ಉಂಟುಮಾಡಿದೆ.
ಕೇರಳದ ಉಳಿದ ಜಿಲ್ಲೆಗಳೂ ಎಂಡೋಸಲ್ಫಾನ್ ಮತ್ತು ಅದರಂತಹ ಮಾರಕ ಕೀಟನಾಶಕಗಳ ಹಾವಳಿಯಿಂದ ಮುಕ್ತವಾಗಿಲ್ಲ. ಅದು ಹೇಗೆ ಗೊತ್ತೇ? ಕೇರಳ ತರಕಾರಿ, ಅಕ್ಕಿ ಮತ್ತು ಇನ್ನಿತರ ಆಹಾರ ವಸ್ತುಗಳ ಮಟ್ಟಿಗೆ ಪರಾವಲಂಬಿ ರಾಜ್ಯ. ಇಲ್ಲಿಗೆ ತಮಿಳುನಾಡಿನ ಪೊಳ್ಳಾಚಿ ಮತ್ತು ಕರ್ನಾಟಕಗಳಿಂದ ಧಾರಾಳ ತರಕಾರಿ ಪೂರೈಕೆಯಗುತ್ತಿದೆ. ತರಕಾರಿಗಳ ಕೃಷಿಯಲ್ಲಿ ಬಳಕೆಯಾಗುವ ಮಾರಕ ವಿಷಗಳ ಪೈಕಿ ಎಂಡೋಸಲ್ಪಾನ್ನದೇ ಮೇಲುಗೈ.
ತಮಿಳುನಾಡಿನಿಂದ ಟೆಂಪೋಗಟ್ಟಲೆ ಬರುವ ಬೇವಿನೆಲೆಗೂ ಕೂಡಾ ಅವ್ಯಾಹತ ವಿಷ ಸಿಂಪಡಣೆ. ಇವನ್ನೆಲ್ಲಾ ಮಲೆಯಾಳದ ವಾಹಿನಿಗಳು ಚಿತ್ರೀಕರಿಸಿ ಜನರ ಮುಂದೆ ಇಡುತ್ತಲಿವೆ. ಇನ್ನೂ ಒಂದು ವಿಪರ್ಯಾಸವಿದೆ. ಕೇರಳದಲ್ಲಿ ಎಂಡೋಸಲ್ಫಾನ್ನ ಮೇಲೆ ನಿಷೇಧವಿದ್ದರೂ ಕೊಚ್ಚಿಯಲ್ಲಿ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಇನ್ಸೆಕ್ಟಿಸೈಡ್ಸ್ ಲಿ., ನಲ್ಲಿ ಈ ವಿಷದ ಉತ್ಪಾದನೆ ಎಗ್ಗಿಲ್ಲದೆ ಸಾಗುತ್ತಲೇ ಇದೆ!
ಎಂಡೋಸಲ್ಫಾನ್ನಿಂದ ಕಾಯಿಲೆಗಳು ಬಂದಿರುವುದು ಕೇರಳದಲ್ಲಿ ಮಾತ್ರ ಎಂಬ ಆಡಳಿತದ, ಕೀಟನಾಶಕ ಕಂಪೆನಿಗಳ ವಾದ ಸರಿಯಲ್ಲ. ಕರ್ನಾಟಕದ ಬೆಳ್ತಂಗಡಿ ತಾಲೂಕಿನ ಕೊಕ್ಕಡ, ಪಟ್ರಮೆ ಮತ್ತು ನೆರೆಯ ಗ್ರಾಮಗಳಲ್ಲಿ ಕಾಸರಗೋಡಿನಲ್ಲಿ ಇರುವಂತಹ ಎಲ್ಲಾ ಕಾಯಿಲೆಗಳೂ ಇವೆ. ಇಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಈ ವಿಷದ ಮಳೆ ಸುರಿಸಿತ್ತು.
'ವೈಮಾನಿಕ ಸಿಂಪಡಣೆ ಆದಲ್ಲಿ ಮಾತ್ರ ಸಮಸ್ಯೆ ಸೃಷ್ಟಿಯಾಗುತ್ತದೆ, ಕೈಸಿಂಪಡಣೆ ಪರವಾಗಿಲ್ಲ' ಎಂಬುದೂ ಶುದ್ಧ ತಪ್ಪು. ಪಾಂಡಿಚೇರಿಯ ಆರೋವಿಲೆಯಲ್ಲಿ ಗೇರು ತೋಟಕ್ಕೆ ಕೃಷಿಕರೇ ಕೈ ಸಿಂಪಡಣೆ ಮಾಡಿದಲ್ಲಿ ಇಂತಹುದೇ ಸಮಸ್ಯೆಗಳಿವೆ. ಹೊರಲೋಕಕ್ಕೆ ಅಷ್ಟಾಗಿ ತಿಳಿಯದಿದ್ದರೂ, ಡಾರ್ಜಿಲಿಂಗಿನ ಚಹಾ ತೋಟಗಳಲ್ಲೂ ಧಾರಾಳ ಸಂತ್ರಸ್ತರು ನರಳುತ್ತಿದ್ದಾರೆ.

ಎಂಡೋ ಪ್ರತಾಪ!

ಗಮನಿಸಬೇಕಾದ ಮುಖ್ಯ ಅಂಶವೆಂದರೆ ತೀವ್ರ ವಿಷಕ್ಕೂ, ನಿಧಾನ ವಿಷಕ್ಕೂ ವ್ಯತ್ಯಾಸವಿದೆ. ಬಹು ಸಣ್ಣ ಪ್ರಮಾಣದಲ್ಲಿ ಶ್ವಾಸೋಚ್ಛ್ವಾಶ, ಚರ್ಮ ಅಥವಾ ಆಹಾರದ ಮೂಲಕ ದೇಹ ಸೇರುವ ವಿಷ ತನ್ನ ಪ್ರತಾಪ ತೋರಿಸಲು ತಿಂಗಳುಗಳಲ್ಲ, ವರ್ಷಗಳನ್ನೇ ತೆಗೆದುಕೊಂಡೀತು. ಅದು ತುಂಬಾ ನಿಧಾನ ಕ್ರಿಯೆ.
ಎಂಡೋಸಲ್ಫಾನ್ ಕೇಂದ್ರ ನರಮಂಡಲವನ್ನು ಬಾಧಿಸುತ್ತದೆ. ಇದರಿಂದ ಆಪಸ್ಮಾರ, ಚರ್ಮರೋಗ, ಸ್ತ್ರೀಯರಲ್ಲಿ ಬಂಜೆತನ, ಖಿನ್ನತೆ, ವಿಕಲಚೇತನ ಮಕ್ಕಳ ಜನನ, ಹೀಗೆ ಹತ್ತಾರು ಸಮಸ್ಯೆಗಳು. ಅದೆಷ್ಟೋ ವರುಷಗಳ ನಂತರ ವಿಷದ ದುಷ್ಪರಿಣಾಮ ಕಾಣಿಸಿಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಕೈಮೀರಿರುತ್ತದೆ. ಆ ಹಂತದಲ್ಲಿ ಚಿಕಿತ್ಸೆಯಿಂದ ದೊಡ್ಡ ಸುಧಾರಣೆ ದುರದೃಷ್ಟವಶಾತ್ ಆಗದು.
ರೋಗ ನಿರೋಧಕ ಶಕ್ತಿ ಉಡುಗಿ ಹೋಗುವುದು ಇಂತಹ ಕೀಟನಾಶಕಗಳ ಇನ್ನೊಂದು ದುಷ್ಪರಿಣಾಮ. ಉದಾಹರಣೆಗೆ, ಜ್ವರ ಬರುವ ವ್ಯಕ್ತಿಗೆ ಅದು ಆಗಾಗ ಬರುತ್ತಲೇ ಇರುತ್ತದೆ. ವರ್ಷವಿಡೀ ಡಾಕ್ಟರನ್ನು ಭೇಟಿಯಾಗಿ ಔಷಧ ನುಂಗುತ್ತಲೇ ಇರಬೇಕಾಗುತ್ತದೆ.
ಕೀಟನಾಶಕಗಳ ಕಾರಣದಿಂದ ತಲೆದೋರುವ ಕಾಯಿಲೆಗಳು ಪ್ರತ್ಯೇಕವಾದುದಲ್ಲ. ಉದಾಹರಣೆಗೆ ಹೇಳುವುದಾರೆ, ಹೈಡ್ರೋಕೆಫಾಲಸ್ ಎನ್ನುವ ಮಕ್ಕಳ ತಲೆ ಊದಿಕೊಳ್ಳುವ ಕಾಯಿಲೆ ಎಂಸೋಸಲ್ಫಾನ್ನಲ್ಲೂ ಬರಬಹುದು, ಬೇರೆ ಕಾರಣದಿಂದಲೂ ಬರಬಹುದು. ನಿಧಾನ ವಿಷದ ಪರಿಣಾಮದಿಂದ ಹುಟ್ಟುವ ಕಾಯಿಲೆಗಳನ್ನು ಖಚಿತವಾಗಿ ಇದರಿಂದಲೇ ಎಂದು ಹೇಳುವುದು ಕಷ್ಟ. ಸಮಾಜದಲ್ಲಿ ಈ ಕಾಯಿಲೆಗೂ ಕೀಟನಾಶಕಕಕ್ಕೂ ಸಂಬಂಧ ಗುರುತು ಹಚ್ಚುವುದು ಸುಲಭದ ಕೆಲಸವಲ್ಲ.
ಕೇರಳದ ಪ್ಲಾಂಟೇಶನ್ ಕಾರ್ಪೋರೇಶನನಿನ ಉದಾಹರಣೆ ತೆಗೆದುಕೊಳ್ಳಿ. ತನ್ನ ಕಾರ್ಮಿಕರು ಕೈಯಿಂದಲೇ ಈ ವಿಷವನ್ನು ಕದಡುತ್ತಾರೆ. 'ಇವರಿಗಾಗಲೀ, ಇವರ ಮಕ್ಕಳಿಗಾಗಲೀ ಏನೇನೂ ಕಾಯಿಲೆ ಬಂದಿಲ್ಲ' ಎಂದು ಕಾರ್ಪೋರೇಶನ್ ಸಮಿತಿಗಳ ಮುಂದೆ ಕೊಚ್ಚಿಕೊಂಡಿತ್ತು. ಕಾರ್ಮಿಕರ ಬಾಯಿ ಮುಚ್ಚಿಸಿ ಇಂತಹ ಹೇಳಿಕೆಗಳನ್ನು ಕೊಡಿಸಿ ವೀಡಿಯೊ ಚಿತ್ರಿಸಿ ತೋರಿಸುತ್ತಿತ್ತು. ಈಗ ನೋಡಿ, ಈ ಕಾರ್ಮಿಕರಲ್ಲಿ ಶೇ.70 ವರೆಗೂ ಗಂಭೀರ ಕಾಯಿಲೆಗಳಿವೆ. ಅದೆಷ್ಟೋ ಮಂದಿ ತೀರಿಹೋಗಿದ್ದಾರೆ - ಎಂದು ಇದೇ ಕಾರ್ಮಿಕರ ಸಂಘಟನೆ ಈಗ ದೂರುತ್ತಿದೆ.
ಹಾಗಾಗಿ ಎಂಡೋಸಲ್ಫಾನ್ ಮಾತ್ರವಲ್ಲ, ಇಂತಹ ಮಾರಕ ಕೀಟನಾಶಕಗಳ ಅಮಿತ ಪ್ರಯೋಗ ಮಾಡುವ ಊರುಗಳ ಜನರು ಎಚ್ಚರಗೊಳ್ಳಬೇಕು. ಇಂತಹ ಅಭ್ಯಾಸವನ್ನು ನಿಲ್ಲಿಸುವುದೇ ಸೂಕ್ತ. ನಿಮ್ಮ ಸುತ್ತುಮುತ್ತಲೂ ಅತಿ ಸಿಂಪಡಣೆ ಮಾಡಿದ ವಾತಾವರಣದಲ್ಲಿ ಕಾಯಿಲೆಗಳು ಇಷ್ಟರಲ್ಲೇ ಮೂಡುತ್ತಿರಲೂಬಹುದು.
ಕೇರಳ ಸರಕಾರ ಈಚೆಗೆ ಎಚ್ಚೆತ್ತು ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ಘೋಷಿಸಿದೆ. ಕಾಯಿಲೆ ಬಿದ್ದು ಹಾಸಿಗೆ ಹಿಡಿದವರಿಗೆ ಎರಡು ಸಾವಿರ ರೂಪಾಯಿ ಮಾಶಾಸನ, ಎರಡು ರೂಪಾಯಿಗೆ ರೇಶನ್ ಅಕ್ಕಿ, ವೈದ್ಯಕೀಯ ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ಘೋಷಿಸಿದೆ. ಮನೆ ಇಲ್ಲದವರಿಗೆ ಮನೆ, ಜಾಗ ಇಲ್ಲದವರಿಗೆ ಜಾಗ. ಕೇಂದ್ರ ಸಹಾಯ ಪಡೆದು ಇವರಿಗೆ ವಿಶೇಷ ಪ್ಯಾಕೆಜ್ ರೂಪಿಸುವ ಕುರಿತು ಮುಖ್ಯಮಂತ್ರಿಗಳಾದ ಅಚ್ಯುತಾನಂದನ್ ಭರವಸೆ ಕೊಟ್ಟಿದ್ದಾರೆ. ನಿಕಟ ಭವಿಷ್ಯದಲ್ಲಿ ಸರ್ವಪಕ್ಷಗಳ ನಿಯೋಗವೊಂದು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಎಂಡೋ ನಿಷೇಧಕ್ಕಾಗಿ ಒತ್ತಾಯಿಸಲಿದೆ.

ಅಧ್ಯಯನವಲ್ಲ, ಕ್ರಮ ಬೇಕು

ದುರಂತದ ಬಗ್ಗೆ ಇನ್ನು ಅಧ್ಯಯನ ಬೇಡ ಎಂದು ಒತ್ತಿ ಹೇಳುತ್ತಿರುವ ಕೇರಳದ ರಾಜಕೀಯ ಪಕ್ಷಗಳು, 'ಅಧ್ಯಯನ ಸಮಿತಿಗಳನ್ನು ಕಾಸರಗೋಡಿನ ಮಣ್ಣಿನಲ್ಲಿ ಕಾಲೂರಲು ಬಿಡುವುದಿಲ್ಲ' ಎಂದು ಎಚ್ಚರಿಸಿದ್ದಾರೆ. ಸರಕಾರದ ಪರಿಹಾರ ಕ್ರಮಗಳು, ಸಂತ್ರಸ್ತರನ್ನು ತಲುಪುವ ಮೊದಲೇ ಮಠಗಳು, ಸೇವಾ ಸಂಸ್ಥೆಗಳು ಮತ್ತು ದಾನಿಗಳು ಸಹಾಯಹಸ್ತದೊಂದಿಗೆ ಕಾಸರಗೋಡಿಗೆ ಬರುತ್ತಿದ್ದಾರೆ. ಮಾತಾ ಅಮೃತಾನಂದಮಯೀ ಮಠವು ಕಾಸರಗೋಡಿನ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮುನ್ನೂರು ಮನೆಗಳನ್ನು ಕಟ್ಟಿಸಿಕೊಡುವುದರ ಜತೆಗೆ ಇನ್ನೂ ಹಲವು ಪರಿಹಾರ ಕ್ರಮಗಳನ್ನು ಘೋಷಿಸಿವೆ. ಶಾಲೆ ಮಕ್ಕಳೂ ಕೂಡಾ ತರಕಾರಿಯೆಂದಾಕ್ಷಣ 'ಅದರಲ್ಲಿ ಎಂಡೋಸಲ್ಫಾನ್ ಇರಬಹುದೇ' ಎಂದು ಪ್ರಶ್ನೆ ಕೇಳುವಷ್ಟರ ಮಟ್ಟಿಗೆ ಸಾಮಾನ್ಯ ಕೇರಳಿಗರು ವಿಷಗಳ ಬಗ್ಗೆ ಬೆಚ್ಚಿ ಬಿದ್ದಿದ್ದಾರೆ.
ಇಂದು ಕರ್ನಾಟಕದಲ್ಲಿ ಎಂಡೋಸಲ್ಫಾನ್ ಮತ್ತು ಇತರ ಮಾರಕ ವಿಷಗಳ ಬಳಕೆಯ ರೀತಿ ಮತ್ತು ಪ್ರಮಾಣ ನೋಡಿದರೆ 'ಇಂದು ಕೇರಳ, ನಾಳೆ ಕರ್ನಾಟಕ' ಎನ್ನದೆ ವಿಧಿಯಿಲ್ಲ. ನಮ್ಮ ರಾಜ್ಯದಲ್ಲೂ ಪಂಜಾಬಿನಲ್ಲಿರುವಂತೆ 'ಕ್ಯಾನ್ಸರ್ ರೈಲು' ಓಡದಿರಬೇಕಾದರೆ, ಕೇರಳ ಮಾದರಿಯ ಶಾಪಗ್ರಸ್ತ ಜೀವಚ್ಛವಗಳು ಕಾಣಿಸದಿರಬೇಕಾದರೆ ಕರ್ನಾಟಕ ಈಗಿಂದೀಗಲೇ ಎಚ್ಚರವಾಗಬೇಕಾಗಿದೆ. ಒಂದು ವೇಳೆ ಸರಕಾರಕ್ಕೆ ಇದು ಗಂಭೀರ ವಿಷಯ ಎಣಿಸದಿದ್ದರೆ ಆ ಭಾವನೆ ಹುಟ್ಟಿಸುವಷ್ಟು ಒತ್ತಡ ಜನರಿಂದ ಬರಬೇಕಾಗಿದೆ.
ಒಗ್ಗಟ್ಟಿನ ಜನದನಿ
ಕಳೆದ ಒಂದು ತಿಂಗಳಿನಿಂದೀಚೆಗೆ ಕೇರಳದ ಉದ್ದಗಲದಲ್ಲಿ ಎಂಡೋಸಲ್ಫಾನ್ ವಿರುದ್ಧ ಮೂಡಿಬಂದ ಜನದನಿ ಉಚ್ಛ್ರಾಯಕ್ಕೆ ಏರಿದೆ. ಅಚ್ಚು ಮಾಧ್ಯಮಗಳು ಎಂಡೋಸಲ್ಪಾನ್ನ ವಿಶೇಷ ಸಂಚಿಕೆಗಳನ್ನು ತರಲು ಪೈಪೋಟಿ ನಡೆಸುತ್ತಿವೆ.
ಅಚ್ಚು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಂತೂ ಜನಪರವಾದ ನಿಲುವು ತಳೆದು ಸಾಕಷ್ಟು ಕೆಲಸ ಮಾಡುತ್ತಿವೆ. ಇಂಡಿಯ ವಿಷನ್ ಎಂಬ ಖಾಸಗಿವಾಹಿನಿಯಂತೂ ಎಂಡೋಸಲ್ಫಾನ್ ವಿರುದ್ಧ ಸಾರ್ವಜನಿಕ ಆಸಕ್ತಿಯ ಜಾಹೀರಾತುಗಳನ್ನು ಪ್ರದರ್ಶಿಸುತ್ತಿದೆ. 'ಈ ಮಾರಿಯನ್ನು ಹೊಡೆದೋಡಿಸೋಣ' ಎಂಬ ಫಲಕವನ್ನು ಸದಾ ಪ್ರದರ್ಶಿಸುತ್ತಿರುತ್ತದೆ. ಗುಪ್ತ ಕ್ಯಾಮೆರಾಗಳ ಮೂಲಕ ಮತ್ತು ತನಿಖೆಗಳ ಮೂಲಕ ಹೊಸ ಹೊಸ ವಿಷಯಗಳನ್ನು ಹೊರ ಹಾಕಲು ಅಚ್ಚು ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳ ನಡುವೆಯೇ ಪೈಪೋಟಿ ನಡೆದಿದೆ. ಕೇರಳದ ಈ ಮಾದರಿಯನ್ನು ಕರ್ನಾಟಕವೂ ಅನುಸರಿಸಬೇಕಾದ ಅಗತ್ಯವಿದೆ.
ಸಾಹಿತಿ ಅಂಬಿಕಾ ಸುತನ್ ಮಾಂಙಆಡ್ 'ಎಣ್ಮಕಜೆ' ಎಂಬ ಹೆಸರಿನ 'ಡಾಕ್ಯೂ -ಫಿಕ್ಶನ್' ರಚಿಸಿದ್ದಾರೆ. ಈ ಕೃತಿ ಇಷ್ಟರಲ್ಲೇ ಮೂರು ಮುದ್ರಣಗಳನ್ನು ಕಂಡಿದೆ. ತನಗೆ ಬಂದ ರಾಯಧನವನ್ನೆಲ್ಲಾ ಮಾಂಙಆಡ್ ಕಾಯಿಲೆಗ್ರಸ್ಥ ರೋಗಿಗಳಿಗೆ ಹಂಚಿದ್ದಾರೆ. 'ಎಣ್ಮಕಜೆ' ಕನ್ನಡಕ್ಕೂ ತರ್ಜುಮೆಯಾಗಿ ಓದುಗರ ಕೈ ಸೇರಿದೆ.
ರಾಜ್ಯದ ಉದ್ದಗಲದಲ್ಲಿ ದಿನನಿತ್ಯ ಈ ಬಗ್ಗೆ ಸಭೆಗಳು ಧರಣಿಗಳು, ಬೀದಿ ನಾಟಕಗಳು ನಡೆಯುತ್ತಿವೆ. ಈ ಕೀಟನಾಶಕವನ್ನು ನಿಷೇಧಿಸಬೇಕು ಎಂಬ ಬಗ್ಗೆ ಎಲ್ಲಾ ಪಕ್ಷಗಳು ಒಂದೇ ಸ್ವರದಲ್ಲಿ ಮಾತನಡುತ್ತಿರುವುದು ಗಮನಾರ್ಹ.
'ಈಚೆಗಿನ ವರುಷಗಳಲ್ಲಿ ಬಹುದೊಡ್ಡ ವಿವಾದವೊಂದರಲ್ಲಿ ರಾಜ್ಯವಿಡೀ ಬಹುತೇಕ ಒಂದೇ ಸ್ವರದಲ್ಲಿ ಮಾತನಾಡುತ್ತಿರುವುದು ಇದೇ ಮೊದಲೇನೋ. ಇದು ಶುಭಸೂಚಕ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಬೊಟ್ಟು ಮಾಡಿ ತೋರಿಸುತ್ತಾರೆ.

0 comments:

Post a Comment