ಒಂದು ಕಾಲಘಟ್ಟದ ಕೃಷಿಯ ಬದುಕನ್ನು ನೆನಪಿಸೋಣ. ಅಡಿಕೆಯ ದರ ಮೂರಂಕೆ ಏರಿತು. ಗದ್ದೆಗಳ ಮೇಲೆ ತೋಟ ಎದ್ದುವು. ದುಪ್ಪಟ್ಟು ವಿಸ್ತಾರವಾದುವು. ಊರಲ್ಲೆಲ್ಲಾ ಹೊಸ ಹೊಸ ಮಹೇಂದ್ರ ಜೀಪುಗಳು ಓಡಾಡುತ್ತಿದ್ದಾಗ ಕಿಟಕಿಯಿಂದ ಇಣುಕಿ ಬೆರಗಾಗುತ್ತಿದ್ದ ದಿನಗಳು ನೆನಪಾಗುತ್ತವೆ.
ಎರಡಂಕಿಗೆ ದರ ಇಳಿದಾಗ 'ಕೃಷಿಯೇ ಪ್ರಯೋಜನವಿಲ್ಲ' ಎಂದೆವು. 'ಈ ದರದಲ್ಲಿ ಬದುಕಲು ಸಾಧ್ಯವಿಲ್ಲ' ಎಂಬ ವಿಷಾದ. ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ - 'ಪ್ರಯೋಜನವಿಲ್ಲ. ಇನ್ನು ಕೃಷಿ ಸಾಧ್ಯವಿಲ್ಲ' ಎಂಬ ಸಂಭಾಷಣೆ. 'ಓ..ಇಂಥವರು ಎಲ್ಲವನ್ನೂ ಮಾರಿ ರಾಜಧಾನಿಯ ಬಸ್ ಹತ್ತಿ ಆಯಿತಂತೆ'..ಇಂತಹ ಸುದ್ದಿಯನ್ನು ಹೊತ್ತು ತರುವ ಒಂದಷ್ಟು ಸುದ್ದಿವಾಹಕರು.
ಸರಿ, ವೆನಿಲ್ಲಾ ತೋಟಕ್ಕೆ ನುಗ್ಗಿತು. ನಿಜಾರ್ಥದಲ್ಲಿ 'ಚಿನ್ನದ ಬೆಳೆ'! 'ಬಾಳು ಬಂಗಾರ' ಎಂಬ ಕ್ಲೀಷೆಯ ಶೀರ್ಷಿಕೆ ಸತ್ಯವಾದ ಕಾಲ. ಬಳ್ಳಿ, ಬೀನ್ಸ್, ಒಣಬೀನ್ಸ್.. ಹೀಗೆ ಮೊಗೆಮೊಗೆದು ಕಾಂಚಾಣವನ್ನು ಮನೆತುಂಬಿಸಿಕೊಂಡೆವು. ವೆನಿಲ್ಲಾ ಕೃಷಿಯೇ ವೈಭವ ಪಡೆಯಿತು. ಬದುಕಿನ ಸ್ಟೈಲ್ ವೆನಿಲ್ಲಾದ ದರದ ಮೇಲೆ ನಿಶ್ಚಯವಾಗತೊಡಗಿತು. ಆಗಲೇ ಅಡಿಕೆಯ ದರ ಕೈಕೊಟ್ಟ ಪರಿಣಾಮದಿಂದ ಒಂದಷ್ಟು ಹೈರಾಣವಾಗಿದ್ದ ಕೃಷಿಕ ಕುಟುಂಬವನ್ನು ವೆನಿಲ್ಲಾ ಆಧರಿಸಿತು. ಕೋವಿ ಹಿಡಿದು ವೆನಿಲ್ಲಾ ತೋಟವನ್ನು ಕಾಯುವಷ್ಟರ ಮಟ್ಟಿಗೆ ದರ ಏರುತ್ತಾ ಹೋಯಿತು.
ಯಾಕೆ ಲಕ್ಷ್ಮಿ ಮುನಿದಳೋ ಏನೋ! ವೆನಿಲ್ಲಾ ದರವೂ ಕುಸಿಯಿತು. ಅದರ ಇಳುವರಿಯನ್ನು, ದರವನ್ನು ನಂಬಿದ್ದ ಕೃಷಿಕನಿಗೆ ಆಘಾತ. ವೆನಿಲ್ಲಾದ ಏರುದರವನ್ನು ಅವಲಂಬಿಸಿ ಕುಟುಂಬ ಬಜೆಟ್ ರೂಪಿಸಿಕೊಂಡ ಬದುಕಿಗೆ ಬ್ರೇಕ್! ನಾಲ್ಕಂಕೆಯಲ್ಲಿದ್ದ ದರ ಮೂರಂಕೆಗೆ ಇಳಿಯಿತು. ಈ ಮಧ್ಯೆ ಅಡಿಕೆ ಕೃಷಿಯತ್ತ ಅನಾದರ. ಇತ್ತ ವೆನಿಲ್ಲಾವೂ ಜಾರಿತು, ಅಡಿಕೆಯೂ ಕೊಟ್ಟಿತು. ನಂತರ ಹೇಗೋ ಚೇತರಿಸಿದರೆನ್ನಿ.
ಈಗ ಕಾರ್ಮಿಕ ಸಮಸ್ಯೆ. ಕೃಷಿ ಕೆಲಸಗಳಿಗೆ ಜನ ಸಿಗುತ್ತಿಲ್ಲ. ಕೃಷಿ ಸ್ಪೆಷಲಿಸ್ಟ್ಗಳೆಲ್ಲಾ ವೃದ್ಧರಾದರು. ಅವರ ಮಕ್ಕಳಿಗೆ ಕೃಷಿ ಬೇಡ. ನಗರದ ಮೋಹ. ಹೀಗಾಗಿ ಸ್ಪೆಷಲಿಸ್ಟ್ಗಳ ಮಕ್ಕಳು ಸ್ಪೆಷಲಿಸ್ಟ್ ಆಗಲಿಲ್ಲ! ಕೃಷಿ ಕೆಲಸಗಳಿಗೆ ಹಿಂಬೀಳಿಕೆ. ಒಂದು ವೇಳೆ ಕೆಲಸಕ್ಕೆ ಜನ ಸಿಕ್ಕರೂ ದುಬಾರಿ ಸಂಬಳ. ಹೀಗೆ ಒಂದಲ್ಲ ಒಂದು ಸಮಸ್ಯೆಗಳ ಮೂಟೆ ಕೃಷಿಕನ ತಲೆಯಿಂದ ಇಳಿಯುವುದೇ ಇಲ್ಲ. ನಾಲ್ಕು ಮಂದಿ ಜತೆ ಸೇರಿದಾಗಲೆಲ್ಲ 'ಒತ್ತಡ ಬದುಕಿನ' ಪೋಸ್ಟ್ಮಾರ್ಟಂ!
ಕೇವಲ ಕೃಷಿ ಮಾತ್ರವಲ್ಲ, ದೇಶಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಇಂತಹ 'ಒತ್ತಡ'ದ ಬದುಕನ್ನು ಕಾಣಬಹುದು. 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎನ್ನುವುದು ಒಂದು. 'ಕೊರಗುತ್ತಾ ಕೂರುವುದು, ನೆಗೆಟಿವ್ ಮಾತನಾಡುತ್ತಾ ಇರುವುದು' ಇನ್ನೊಂದು.
ಒತ್ತಡಗಳ ಮಧ್ಯೆ ಇದ್ದುದರಲ್ಲಿ ಮುಗುಳ್ನಗು ಮೂಡಿಸುವ ಕೃಷಿಕರೂ ಇಲ್ವಾ. ಅವರಲ್ಲೆಂದೂ ಋಣಾತ್ಮಕವಾದ ಮಾತುಕತೆ, ಚಿಂತನೆಗಳು ಬರುವುದೇ ಇಲ್ಲ. ಬಂದರೂ ಅದು ಮೌನ. 'ಹಾಗೆ ಮಾತನಾಡಿ ಏನೂ ಪ್ರಯೋಜನ? ಪರ್ಯಾಯ ದಾರಿಗಳನ್ನು ನಾವೇ ಕಂಡುಕೊಳ್ಳಬೇಕು' ಎನ್ನುತ್ತಾರೆ ಕೃಷಿಕ ಎಡ್ವರ್ಡ್ ರೆಬೆಲ್ಲೋ.
'ಬೋರ್ಡೋ ಸಿಂಪಡಿಸಲು ಕೆಲಸದವರು ಬರುತ್ತೇನೆಂದು ಹೇಳಿದ್ರು. ಹೇಳಿದ ಸಮಯಕ್ಕೆ ಬರಲೇ ಇಲ್ಲ. ಎಷ್ಟು ದಿನ ಕಾಯುವುದು? ಅವಳು (ಪತ್ನಿ) ಪಂಪು ನಿರ್ವಹಿಸಿದರೆ, ನಾನು ಗೊತ್ತಿದ್ದೋ-ಗೊತ್ತಿಲ್ಲದೆಯೋ ಬೋರ್ಡೋ ಸಿಂಪಡಿಸಿದೆ. ಕ್ರಮೇಣ ರೂಢಿಯಾಯಿತು' ಪತ್ರಕರ್ತ ರಮೇಶ್ ಕೈಂತಜೆ ಹೇಳಿದ ನೆನಪು. ಇರಲಿ. ಇಂತಹ ಒತ್ತಡದ ಸಮಯದಲ್ಲಿ ಮಾನಸಿಕವಾಗಿ 'ಟಾನಿಕ್' ಸಿಕ್ಕರೆ ಚೇತರಿಸಲು ಸಹಕಾರಿ. ಅದ್ಯಾವ ಟಾನಿಕ್?
ಕನ್ನಾಡಿನಲ್ಲಿ ಸರಕಾರಿ ಆಶ್ರಿತವಾಗಿ ಬೆಂಗಳೂರು ಮತ್ತು ಧಾರವಾಡ ಕೃಷಿ ವಿವಿ ವತಿಯಿಂದ ಕೃಷಿ ಮೇಳ ನಡೆಯುತ್ತಿದೆ. ಆದರೆ ಖಾಸಗಿಯಾಗಿ ಜನರ ಸಹಭಾಗಿತ್ವದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಕೃಷಿ ಮೇಳ' ಈ ಎರಡೂ ಮೇಳಗಳನ್ನು ಮೀರಿಸುತ್ತದೆ. ಉಡುಪಿ ಜಿಲ್ಲೆಯ ಕಾರ್ಕಳ ಸನಿಹದ ಬಜಗೋಳಿಯಲ್ಲಿ ಫೆಬ್ರವರಿ 4, 5, ಮತ್ತು 6, 2011ರಂದು 31ನೇ 'ಕೃಷಿ ಮೇಳ' ನಡೆದಿತ್ತು.
'ಕೃಷಿ ಮೇಳವೆಂಬುದು ಕೃಷಿಹಬ್ಬದ ವಾತಾವರಣವನ್ನು ಮೂಡಿಸುತ್ತದೆ. ರೈತರಲ್ಲಿ ಆತ್ಮವಿಶ್ವಾಸವನ್ನು ತುಂಬಿಸಲು ಕೃಷಿಮೇಳಗಳ ಕೊಡುಗೆ ದೊಡ್ಡದು' - ಮೇಳದ ಗೋಷ್ಠಿಯೊಂದರ ಮೂಡಿಬಂದ ಅಭಿಪ್ರಾಯ. ಹೌದು. ಕೃಷಿ ರಂಗದ ಒತ್ತಡಕ್ಕೆ ಕಾರಣ, ಆತ್ಮವಿಶ್ವಾಸದ ಕೊರತೆ. ಅದನ್ನು ಮತ್ತೊಮ್ಮೆ ತುಂಬಿಸಲು ನೆರವಾಗುತ್ತದೆ - ಕೃಷಿಮೇಳಗಳು.
ಕೃಷಿ ಜೀವನ ನಮ್ಮಲ್ಲಿ ಪಾರಂಪರಿಕವಾದುದು. ಅದರೊಂದಿಗೆ ಭಾವನಾತ್ಮಕ ಸಂಬಂಧವೂ ಇದೆ, ಇತ್ತು. ಆದರೆ ಕಾಲದ ಆರ್ಭಟ ಅವನ್ನೆಲ್ಲಾ ನುಂಗಿ ನೊಣೆದಿದೆ. ಅದನ್ನು ಮತ್ತೊಮ್ಮೆ ಹಳಿಗೆ ತರುವ ಕೆಲಸವಾಗಬೇಕು.
'ಸರಿ, ಕೃಷಿಮೇಳಗಳಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ?' ಮಾತಿನ ಮಧ್ಯೆ ಎಷ್ಟೋ ಸಲ ಇಂತಹ ಪ್ರಶ್ನೆಗಳನ್ನು ಆಲಿಸಿದ್ದೆ. ಫಕ್ಕನೆ ನೋಡಿದಾಗ 'ಹೌದಲ್ಲ' ಅಂತ ಅನ್ನಿಸಿದರೂ ತಪ್ಪಲ್ಲ.
ಇದಕ್ಕೆ ಉತ್ತರ - ಬಜಗೋಳಿ ಕೃಷಿ ಮೇಳದಲ್ಲಿ ಪರಮ ಪೂಜ್ಯ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾತುಗಳು - 'ಕೃಷಿಕರಲ್ಲಿ ಸ್ವಾಭಿಮಾನ ಮೂಡಿಸುವುದು ಮತ್ತು ಮಾಹಿತಿ ನೀಡುವುದು ಕೃಷಿ ಮೇಳದ ಉದ್ದೇಶ. ಕೃಷಿಕರು ಪ್ರಗತಿಯ ಪಾಲುದಾರರಾಗಬೇಕು. ಕೃಷಿಯಲ್ಲಿ ಸಮಗ್ರ ಅಭಿವೃದ್ಧಿ ಸಾಧಿಸುವಂತಾದರೆ ರೈತನೇ ಕೇಂದ್ರ ಬಿಂದು. ಭೂಮಿಯೇ ಘಟಕ.'
'ಗ್ರಾಮಾಭಿವೃದ್ಧಿ ಯೋಜನೆಯು ಇಂದು ಕೃಷಿಕರ ಬಾಗಿಲು ತಟ್ಟಿದೆ. ಹಳ್ಳಿಗಳಲ್ಲಿನ ಯುವಕ, ಯುವತಿಯರು ನಗರ ಜೀವನಕ್ಕೆ ಹಾತೊರೆಯುವ ಪ್ರವೃತ್ತಿ ಕಡಿಮೆಯಾಗಿದೆ. ಸ್ವಾವಲಂಬಿ ಬದುಕಿಗೆ ಹತ್ತಿರವಾಗುತ್ತಿದ್ದಾರೆ. ಲಾಭದಾಯಕ ಕೃಷಿ ಮಾಡಲು ಸಾಧ್ಯವಿದೆ ಎಂಬುದನ್ನು ಯೋಜನೆ ತೋರಿಸಿಕೊಟ್ಟಿದೆ.'
'ಗುರುಹಿರಿಯ ಬಗ್ಗೆ ಶೃದ್ಧೆ ಇರಬೇಕು. ದೇವರಲ್ಲಿ ಭಕ್ತಿ ಇರಬೇಕು. ಜೀವನದಲ್ಲಿ ನಂಬಿಕೆ-ವಿಶ್ವಾಸವಿರಬೇಕು' - ನಮ್ಮ ಹಿರಿಯರು ನೀಡಿದ ಉಪದೇಶ. 'ಇವಕ್ಕೆಲ್ಲಾ ಅರ್ಥವಿಲ್ಲ' ಎನ್ನುತ್ತ 'ಬುದ್ದಿವಂತರೆಂದು ಹೇಳಿಕೊಳ್ಳುವ' ನಾವು ಬದಿಗೆ ತಳ್ಳಿದ್ದೇವೆ. ಗ್ರಾಮಾಭಿವೃದ್ಧಿ ಯೋಜನೆಯು 'ಶೃದ್ಧೆ, ಭಕ್ತಿ, ನಂಬುಗೆ ಮತ್ತು ವಿಶ್ವಾಸ'ವನ್ನು ಪುನರ್ರೂಪಿಸುವ ಕೆಲಸ ಮಾಡುತ್ತಿದೆ.
ಇದು ಬದುಕಿನ ವಿಚಾರ. ಇದನ್ನೇ ಕೃಷಿಗೆ ಸಮೀಕರಿಸಿದರೆ - ಕೃಷಿಯಲ್ಲಿ ಶೃದ್ದೆ, ದೈವದಲ್ಲಿ ಭಕ್ತಿ, ಪರಸ್ಪರರಲ್ಲಿ ನಂಬುಗೆ ಮತ್ತು ಕೈಗೊಂಡ ಕಾರ್ಯದಲ್ಲಿ ವಿಶ್ವಾಸ.
1 comments:
http://krishimelabajagoli.blogspot.com/
Post a Comment