Wednesday, February 16, 2011

ಸೈಕಲ್ ಜಾಥಾದ ಮೂಲಕ ಎಂಡೋ ಜಾಗೃತಿ


ಕೇರಳದಲ್ಲಿ ಎಂಡೋಸಲ್ಪಾನ್ ವಿಷದ ವಿರುದ್ಧದ ಜನದನಿ ಸರಕಾರದ ನಿದ್ದೆಗೆಡಿಸಿದೆ. ಇತ್ತ ಕರ್ನಾಟಕದಲ್ಲೂ ನಿಷೇಧದ ಸುದ್ದಿ. ಎಂಡೋ ವಿರುದ್ಧ ಸುದ್ದಿಯಾಗದ ಸುದ್ದಿಗಳು ಹಲವು. ಅವೆಲ್ಲಾ ಮಾನವೀಯ ಮಿಡಿತದಿಂದಲೋ, ಸಾಮಾಜಿಕ ಜವಾಬ್ದಾರಿಯಿಂದಲೋ ಆಗುವಂತಾದ್ದು.
ಈಚೆಗೆ ಕೊಲ್ಲಂನ ಅಮೇಶ್, ಶಮ್ನಾದ್ ಇಬ್ಬರು ಯುವಕರು ಕಾಸರಗೋಡು ಜಿಲ್ಲೆಯ ವಾಣಿನಗರಕ್ಕೆ ಸೈಕಲ್ನಲ್ಲಿ ಬಂದಿಳಿದರು. ಇವರೇನೂ ಚಾರಣಕ್ಕೆ ಬಂದವರಲ್ಲ, ಪ್ರವಾಸ ಹಚ್ಚಿಕೊಂಡವರಲ್ಲ. ಇವರದು 'ಎಂಡೋ ವಿರುದ್ಧದ ಜನಜಾಗೃತಿ'.

ಸೈಕಲಿನ ಮುಂಭಾಗದಲ್ಲಿ 'ಬ್ಯಾನ್ ಎಂಡೋಸಲ್ಫಾನ್-ಸೇವ್ ವಿಕ್ಟಿಮ್ಸ್', ಹಿಂಭಾಗದಲ್ಲಿ 'ಕೊಲ್ಲಂ ಟು ಕಾಸರಗೋಡು' ಶೀರ್ಷಿಕೆ ಹೊತ್ತ ಎರಡು ಫಲಕಗಳು. ಎಂಡೋ ಘೋರತೆಯನ್ನು ಶಾಲಾ ಮಕ್ಕಳಿಗೆ ತಿಳಿಹೇಳುವುದು ಮುಖ್ಯ ಉದ್ದೇಶವಾದರೂ ಸಂದರ್ಭ ಬಂದಾಗಲೆಲ್ಲಾ ಸಾರ್ವಜನಿಕರಲ್ಲೂ ಬಿಂಬಿಸಿದ್ದಾರೆ.

2011 ಜನವರಿ 13ರಂದು ಕೊಲ್ಲಂನಿಂದ ಇವರ ಜಾಥಾ ಶುರು. ಸುಮಾರು ಒಂದು ಸಾವಿರ ಕಿಲೋಮೀಟರ್ ಪ್ರಯಾಣ. 32ಕ್ಕೂ ಮಿಕ್ಕಿ ಶಾಲೆಗಳ ಭೇಟಿ. ದಾನಿಗಳು ನೀಡಿದ ಅಲ್ಪ ಸಹಾಯದಿಂದ ಖರ್ಚು ನಿಭಾವಣೆ. ಪಟ್ಟನಂತಿಟ್ಟ, ಆಲಪ್ಪುಳ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮೂಲಕ ಸಾಗಿ ಬಂದ ಜಾಥಾ ವಾಣಿನಗರದಲ್ಲಿ ಸಮಾಪನ.

ಕಣ್ಣೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಇವರೊಡನೆ 'ನೀವು ಕಣ್ಣೂರಿನ ಎಲ್ಲಾ ಶಾಲೆಗಳಿಗೂ ಹೋಗಿ ಜಾಗೃತಿ ಮೂಡಿಸುತ್ತೀರಾ?' ಎಂದು ಕೇಳಿದರಂತೆ. 'ಬಹುಶಃ ಆಗುವುದಿಲ್ಲ' ಎಂದು ಉತ್ತರಿಸಿದಾಗ 'ಪರವಾಗಿಲ್ಲ, ಆ ಕೆಲಸ ನಾವು ಮಾಡ್ತೀವಿ' ಎಂದರಂತೆ ಆ ಎಳೆಯರು!
ಕೊಲ್ಲಂನವರಾದ ಅಮೇಶ್ ಇಲೆಕ್ಟ್ರಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಪಡೆದ ಹವ್ಯಾಸಿ ಛಾಯಾಚಿತ್ರಕಾರ. ಶಮ್ನಾದ್ ದ್ವಿತೀಯ ವರ್ಷದ ಫಿಸಿಕ್ಸ್ ವಿದ್ಯಾರ್ಥಿ. ಅಲ್ಪಸ್ವಲ್ಪ ಹಣ ಕೂಡಿಸಿ ಎರಡು ಹಳೆಯ ಸೈಕಲನ್ನು ಜಾಥಾಕ್ಕೆ ಬಳಸಿದ ಇವರು, ವಾಣಿನಗರದಲ್ಲಿ ಜಾಥಾ ಕೊನೆಗಳಿಸಿದರು. ಬಳಿಕ ಸೈಕಲನ್ನು ವಾಣಿನಗರ ಮತ್ತು ಸ್ವರ್ಗದ ಎರಡು ಶಾಲೆಗಳಿಗೆ ಕೊಟ್ಟರು. ಜಾಥಾದ ಮಧ್ಯೆ ಸಂಗ್ರಹವಾದ ಹಣದಲ್ಲಿ ಖರ್ಚಾಗಿ ಮಿಕ್ಕಿದ ಮೊತ್ತವನ್ನು ಎಂಡೋ ಸಂತ್ರಸ್ತರಿಗೆ
ನೀಡಿದ್ದಾರೆ.

ಪಾಲಕ್ಕಾಡ್ನ ಮುದಲಮ್ಮಾಡದಲ್ಲಿ ಸುಮಾರು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದ ಮಾವಿನ ತೋಟಕ್ಕೆ ಎಂಡೋಸಲ್ಫ್ಪಾನ್ ಸಿಂಪಡಿಸಿದ ಪರಿಣಾಮವಾಗಿ ಅನೇಕ ಮಂದಿ ಸಂತ್ರಸ್ತರಾಗಿದ್ದಾರೆ. ಈ ದುರಂತವನ್ನು ಪ್ರಪಂಚಕ್ಕೆ ತೆರೆದಿಡುವ ಉದ್ದೇಶದಿಂದ ಸಾಕ್ಷ್ಯಚಿತ್ರವೊಂದರ ತಯಾರಿಯಲ್ಲಿದ್ದಾರೆ.

'ಕೀಟನಾಶಕ ಕಂಪೆನಿಗಳು ಎಂಡೋ ದುರಂತವನ್ನು ಮರೆಮಾಚುತ್ತಿರುವ ಹುನ್ನಾರಗಳ ಮಧ್ಯೆ ಈ ಯುವಕರ ಸಾಹಸ ಯುವಜನತೆಗೆ ಸ್ಪೂರ್ತಿ' ಎಂದು ಪ್ರಶಂಸಿದ್ದಾರೆ ಹಿರಿಯ ಪತ್ರಕರ್ತ 'ಶ್ರೀ' ಪಡ್ರೆ ಮತ್ತು ಡಾ.ವೈ.ಎಸ್.ಮೋಹನ್ ಕುಮಾರ್.

1 comments:

G S Srinatha said...

ಪೆರಾಜೆಯವರಿಗೆ ನಮಸ್ಕಾರ,
ಶ್ರೀಯುತ ಮಾಚಿಕೊಪ್ಪರವರು ತಮ್ಮ ಬ್ಲಾಗಿನಲ್ಲಿ ಎಂಡೋವನ್ನು ಸಮರ್ಥಿಸಿಕೊಂಡಿದ್ದಾರೆ. ಅವರ ಪ್ರಕಾರ ಬೇರೆ ಕ್ರಿಮಿನಾಷಕಗಳಿಗೆ ಹೋಲಿಸಿದರೆ "ಎಂಡೋ ಕಡಿಮೆ ವಿಷಕಾರಿ". ಹೆಚ್ಚಿನ ವಿವರಗಳಿಗೆ ಅವರ ಬ್ಲಾಗಿನ ಲೇಖನವನ್ನು ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ : http://machikoppa.blogspot.com/2011/03/blog-post.html

Post a Comment