Friday, March 11, 2011

ಮರೆಯಾಗುತ್ತಿದೆ 'ಸ್ಥಳೀಯತೆ'

ಈಚೆಗೆ ಹುಬ್ಬಳ್ಳಿಗೆ ಹೋಗಿದ್ದಾಗ ಮಾಧ್ಯಮ ಪರಿಚಿತರೋರ್ವರ ಮನೆಗೆ ಭೇಟಿ ಕೊಟ್ಟಿದ್ದೆ. ಮನೆಯ ಎಲ್ಲಾ ಸದಸ್ಯರು ಅಪರಿಚಿತರು. ಅವರು ಹಳ್ಳಿಯಿಂದ ಉದ್ಯೋಗ ನಿಮಿತ್ತ ನಗರಕ್ಕೆ ಬಂದು ಏಳೆಂಟು ವರುಷವಾಗಿತ್ತು. ಮಕ್ಕಳೆಲ್ಲಾ ನಗರದಲ್ಲೇ ಓದಿದವರು. 'ಅರ್ಧಕಾಲಿನ ಪ್ಯಾಂಟ್' ನಿತ್ಯ ಉಡುಪು. ಮನೆಗೆ ಆಹ್ವಾನಿಸಿದ ಯಜಮಾನ ತನ್ನ ಮಡದಿ ಮತ್ತು ಇಬ್ಬರು ಮಕ್ಕಳ ಪರಿಚಯ ಮಾಡಿಸಿದರು. ಯಾಂತ್ರಿಕ ನಗುವಿನೊಂದಿಗೆ ನಮಸ್ಕಾರ ವಿನಿಮಯ.

ಒಂದರ್ಧ ನಿಮಿಷದಲ್ಲಿ ತನಗೆ ಸಂಬಂಧಪಟ್ಟ ವಿಚಾರವಲ್ಲವಿದು ಎನ್ನುತ್ತಾ ಮನೆಯೊಡತಿ ಎದ್ದು ಹೋದರೆ, ಮಕ್ಕಳು ತಂತಮ್ಮ ಕೋಣೆ ಸೇರಿದರು.
'ನೀರು ಬೇಕಿತ್ತಲ್ಲಾ' ಅಂದಾಗ ಯಜಮಾನರೇ ಹೋಗಿ ತಂಪು ಪೆಟ್ಟಿಗೆಯಿಂದ ಬಾಟಲ್ ತಂದಿಟ್ಟರು. ಮನೆಯೊಡತಿ ಧಾರಾವಾಹಿಯೊಳಗೆ ಮುಳುಗೇಳುತ್ತಿದ್ದರು. ಉದ್ದೇಶಪೂರ್ವಕವಾಗಿಯೇ ಮಕ್ಕಳ ಕೋಣೆಗೆ ಹೋಗಿ ಮಾತನಾಡಿದರೆ 'ಒಂದು ಮಾರ್ಕಿನ ಪ್ರಶ್ನೆಯ ಉತ್ತರ'ದಂತೆ 'ಹೌದು, ಇಲ್ಲ' ಎಂದಷ್ಟೇ ಉತ್ತರ. ಅವರನ್ನು ಮಾತನಾಡಿಸುವ ಕುರಿತಾದ ಬತ್ತಳಿಕೆಯ ಎಲ್ಲಾ ಅಸ್ತ್ರಗಳೂ ಮುಗಿಯಿತು!

'ಬನ್ನಿ ಹತ್ತಿರದಲ್ಲೇ ಕ್ಯಾಂಟಿನ್ ಇದೆ. ಚಹಾ ಕುಡಿಯೋಣ' ಅನ್ನುತ್ತಾ ಮನೆಯ ಯಜಮಾನ ಕೈಹಿಡಿದು ಒತ್ತಾಯಿಸಿದರು. ಇದೆಲ್ಲಾ ನನಗೆ ವಿಚಿತ್ರವಾಗಿ ಕಂಡಿತು. ಮನೆ ಅಂದಾಗ 'ಚಾ, ಕಾಫಿ, ಉಪಾಹಾರ, ಊಟ, ಮಾತುಕತೆ' ಇದ್ದೇ ಇರಬೇಕಲ್ಲಾ. ಇಲ್ಲಿ ಯಾಕೆ ತದ್ವಿರುದ್ಧ! ಹಾಂ.. 'ಪೇಟೆ ಮನೆ ಅಲ್ವಾ' ಸಮಾಧಾನ ಪಟ್ಟುಕೊಂಡೆ.

ಪರಸ್ಪರ ಮಾತುಕತೆಯಿಲ್ಲ. ಉಪಚಾರ ಇಲ್ಲ. ಸಂವಹನ ಇಲ್ಲ. 'ಗಂಡ, ಹೆಂಡತಿ, ಮಕ್ಕಳು' ಎಂಬ ಪದಗಳು ವ್ಯಕ್ತಿಗಳನ್ನು ಗುರುತಿಸಲು ಮಾತ್ರ. ಬಹುಶಃ ಪೇಟೆ ಮನೆಯಲ್ಲಿ 'ಅಂತಸ್ತು ಕಾಪಾಡಿಕೊಳ್ಳುವುದು' ಎಂಬ ಸ್ವಯಂರೂಢ ಪ್ರಕ್ರಿಯೆಯಿರಬಹುದೋ ಏನೋ?

ಪುತ್ತೂರಿನ ಅನುರಾಗ ವಠಾರದಲ್ಲಿ ಜರುಗಿದ ಸಾಹಿತ್ಯ ಸಂಸ್ಕೃತಿ ಸಲ್ಲಾಪದ ಸಮಾರೋಪ ಉಪನ್ಯಾಸದಲ್ಲಿ ಕುಮಟಾದ ಪ್ರಾಧ್ಯಾಪಕ ಡಾ.ಶ್ರೀಧರ್ ಬಳೆಗಾರ್ ಹೇಳಿದ ವಿಚಾರಗಳು ನನ್ನ ಈ ನೆನಪನ್ನು ಕೆದಕಿದುವು. ಬದುಕಿನಲ್ಲಿ ಮಾತು 'ಕತೆ'ಯಾಗಿ ಬಂದಾಗ ಸ್ಪಷ್ಟವಾದ ಸಂವಹನ. ಎಷ್ಟೋ ಕತೆಗಳು, ಕಾದಂಬರಿಗಳು ಇಂತಹ ಮಾತುಕತೆಗಳಿಂದ ರೂಪಿತವಾದಂತಹುಗಳು. ಜೀವನದಲ್ಲಿ ಮಾತುಕತೆಯೇ 'ಹೌದು-ಇಲ್ಲ'ಗಳಿಗೆ ಸೀಮಿತವಾದರೆ ಎಂತಹ ಕತೆಯನ್ನು ಕಟ್ಟಬಹುದು? ಎಂತಹ ಬದುಕನ್ನು ರೂಪಿಸಬಹುದು?

ಒಂದೆಡೆ ಮಾತುಕತೆಗಳು ಮೌನವಾಗಿವೆ. ಇನ್ನೊಂದೆಡೆ 'ಸ್ಥಳೀಯತೆ'ಗಳು ಕಣ್ಣೆದುರೇ ಕುಸಿಯುತ್ತಿವೆ. ಡಾ.ಶ್ರೀಧರ್ ಅವರು ಸ್ಥಳೀಯತೆ ನಾಶದತ್ತ ಬೀರಿದ ಬೆಳಕಿನ ಒಂದೆಳೆ ಇಲ್ಲಿದೆ:

ಸ್ಥಳೀಯತೆ ಎಂದರೇನು? 'ಯಾವುದನ್ನು ಈ ಆಧುನಿಕ ಜಗತ್ತಿನಲ್ಲಿ ಮೌಲ್ಯ ಅಂತ ಅದನ್ನು ಪಡೆಯುವುದಕ್ಕೆ ಓಡುತ್ತಾ ಇದ್ದೇವೋ, ಆ 'ವೇಗ ಇಲ್ಲದಂತಹ' ನಿಧಾನವಾದ ನೆಮ್ಮದಿಯ ಪ್ರಕ್ರಿಯೆ. ಒಂದಷ್ಟು ಸಂಯಮದಿಂದ ನಿತ್ಯ ಅನುಭವಿಸುವ ವಿಧಾನ. ನಡವಳಿಕೆಯಲ್ಲಿ ಕೃತ್ರಿಮತೆ ಇಲ್ಲದೆ ಕನಿಷ್ಠವಾಗಿ ಇರುವುದು. ಕಷ್ಟವನ್ನು ಸಹಿಸುವಂತಾದ್ದು..'

ಇಂತಹ ಸ್ಥಳೀಯತೆಯನ್ನು ಅಣಕಿಸುವಂತೆ ಪ್ರಸ್ತುತ ಬದುಕಿನ ವೇಗ ಗಣನೆಗೆ ಸಿಕ್ಕದು. ಈ ವೇಗ, ಆವೇಶ, ಒತ್ತಡಗಳೇ 'ಮೌಲ್ಯ ಅಂತ ಗಣಿಸ'ಲ್ಪಡುತ್ತವೆ. ಅದಕ್ಕೆ ಪೂರಕವಾದ ಒಳಸುರಿಗಳನ್ನು ನಗರದ 'ವ್ಯವಸ್ಥೆ'ಗಳು ಪೂರೈಸುತ್ತವೆ. ಮನೆಯೊಳಗೆ ನಡೆಯುವ ಬಹುತೇಕ ವಿಚಾರಗಳನ್ನು ಮಧ್ಯವರ್ತಿಗಳು, ವ್ಯಾಪಾರಿಗಳ ಮೂಲಕ ಪಡೆಯುವ ವ್ಯವಸ್ಥೆಯಿದೆ.

ನಗರದಲ್ಲಿ ಮಧ್ಯಾಹ್ನದ ಹೊತ್ತಿಗೆ ಅತಿಥಿಗಳು ಬಂದಾಗ ಮನೆಯೊಡತಿಗೆ ಚಡಪಡಿಕೆಯಾಗುವುದಿಲ್ಲ. ಟೆನ್ಶನ್ ಆಗುವುದಿಲ್ಲ. ಒಂದು ಕಿಲೋ ಅನ್ನ, ಅರ್ಧ ಲೀಟರ್ ಸಾಂಬಾರ್ ಸಿಗುವ ಅಂಗಡಿಗಳು ಕೈಯಳತೆಯಲ್ಲಿವೆ. ಒಂದು ಫೋನ್ ರಿಂಗ್ ಕೊಟ್ಟರೆ ಸಾಕು, ಹತ್ತೇ ನಿಮಿಷದಲ್ಲಿ ಮನೆಯಂಗಳದಲ್ಲಿ ಹಾರ್ನ್ ಕೇಳುತ್ತದೆ.

ಇತ್ತೀಚೆಗಿನ ವರುಷಗಳಲ್ಲಿ ಕುಟುಂಬ ಸಹಿತ ಉದ್ಯೋಗಕ್ಕಾಗಿ ನಿರಂತರ ವಲಸೆ ಹೋಗುವ ಒಂದಷ್ಟು ಮಂದಿಗಳನ್ನು ಬಸ್ಗಳಲ್ಲಿ ಕಾಣಬಹುದು. ಇವರೆಲ್ಲಾ ನಗರದಲ್ಲಿ ಯಾರದ್ದೋ ಮನೆಯಲ್ಲಿದ್ದುಕೊಂಡು, ಕೆಲಸ ಮಾಡುತ್ತಾ ಇರುತ್ತಾರೆ. ಯಾರದ್ದೋ ಕಟ್ಟಡ ಕಾಮಗಾರಿಯ ಮೂಲಕ ನಗರದ 'ಅಭಿವೃದ್ಧಿ'ಗೆ ಹೆಗಲು ಕೊಡುತ್ತಾರೆ. ಈ ಮಂದಿ ತಮ್ಮ ಹಳ್ಳಿಯ ಬದುಕು, ಪರಿಸರ, ನೆಲ, ತಾನು ನಂಬಿದ ದೈವ, ನೆರೆಕರೆ' ಇವರನ್ನೆಲ್ಲಾ ಬಿಟ್ಟು 'ಅಭಿವೃದ್ಧಿ ಎಂಬ ಹಾರ್ಡ್ ವೇರ್' ಕಟ್ಟುವ ಕೆಲಸದಲ್ಲಿ ನಿರತರಾಗಿರುತ್ತಾರೆ.

ಇನ್ನೊಂದಿಷ್ಟು ಮಂದಿ ಹಳ್ಳಿ ಮನೆಯಿಂದ ಗಂಟುಮೂಟೆ ಕಟ್ಟಿ (ಸೂಟ್ಕೇಸ್ಗಳಲ್ಲಿ) ವೋಲ್ವೋ ಬಸ್ನಲ್ಲಿ ಕುಳಿತಿದ್ದಾರೆ. ಬಸ್ಸಿನ ಹೊರಗಡೆ ಅವರನ್ನು ಬೀಳ್ಕೊಡಲು ಬಂದ ಕುಟುಂಬಸ್ತ್ಥರು ನೆರೆದಿರುತ್ತಾರೆ. ಅವರೆಲ್ಲಾ ನಗರದಲ್ಲಿ 'ಸಾಪ್ಟ್ವೇರ್'ನ್ನು ಅಭಿವೃದ್ಧಿಪಡಿಸಲು ಹೊರಟಿದ್ದಾರೆ.

ಈ ಎರಡೂ ವರ್ಗದ ಜನರನ್ನು ನಗರಕ್ಕೆ ಪ್ರದಾನ ಮಾಡುವುದು ನಮ್ಮ ಹಳ್ಳಿಗಳು. ಕೃಷಿ ಪ್ರಯೋಜನವಿಲ್ಲ, ಹಳ್ಳಿಯ ಬದುಕಿನಲ್ಲಿ ನೆಮ್ಮದಿಯಿಲ್ಲ, ಯಾವುದೇ ವ್ಯವಸ್ಥೆಗಳಿಲ್ಲ ಎನ್ನುತ್ತಾ ಇವರನ್ನು ನಾವೇ ಹಳ್ಳಿಯಿಂದ ದಬ್ಬುತ್ತಿದ್ದೇವೆ. ಅಲ್ಲಲ್ಲಾ.. ಬೀಳ್ಕೊಡುತ್ತಿದ್ದೇವೆ. ಹತ್ತು ಹಲವು ಕನಸುಗಳನ್ನು ಕಟ್ಟಿಕೊಳ್ಳುತ್ತ ನಗರ ಸೇರಿದ ಜೀವಗಳು ಅಲ್ಲಿನ ಉಸಿರುಗಟ್ಟಿಸುವ ವಾತಾವರಣವನ್ನೇ 'ವ್ಯವಸ್ಥೆ' ಅಂತ ಸ್ವೀಕರಿಸಿಕೊಂಡು, ಅದರಲ್ಲಿ ಮೌಲ್ಯವನ್ನು ಕಾಣುತ್ತಾ, ತಾನು ಹುಟ್ಟಿ ಬೆಳೆದ ಹಳ್ಳಿಯನ್ನು ಹಳಿಯುತ್ತಾ ದಿವಸಗಳನ್ನು ಕೊಲ್ಲುತ್ತಾ ಇರುತ್ತಾರೆ!

ಈ ರೀತಿಯ ನಗರದ ವ್ಯವಸ್ಥೆಯನ್ನು ಅಭಿವೃದ್ಧಿ ಎನ್ನುತ್ತಾ ಮಾಧ್ಯಮಗಳು, ರಾಜಕಾರಣಿಗಳು, ಶಿಕ್ಷಣ ವ್ಯವಸ್ಥೆಗಳು ಸದಾ ನೀರೆರೆಯುತ್ತವೆ. ಹಳ್ಳಿ ಮರೆತ ಮಂದಿ ನಗರದಲ್ಲಿ 'ಸೆಟ್ಲ್' ಆಗುತ್ತಾರೆ. ಅವರ ಕುಟುಂಬ ಬೆಳೆಯುತ್ತದೆ. ಆ ಮನೆಯ ಮಂದಿಗೆ 'ಮಾತುಕತೆ' ದೂರವಾಗುತ್ತದೆ. ಹಳ್ಳಿ ಅಸಹ್ಯವಾಗುತ್ತದೆ.

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿರುವ 'ಪ್ರಜ್ಞಾವಂತ' ತರಕಾರಿ ವ್ಯಾಪಾರಿ ಡೇವಿಡ್, 'ನಗರಕ್ಕೆ ಹಳ್ಳಿಯಿಂದ ಸಂಪನ್ಮೂಲಗಳು ಹರಿಯುತ್ತದೆ. ನಗದಾಗುತ್ತದೆ. ಅಲ್ಲೇ ಅದು ಟರ್ನ್ ಓವರ್ ಆಗುತ್ತಾ ಇರುತ್ತದೆ. ಅದು ನಗದಾಗಿ ಹಳ್ಳಿಯತ್ತ ಹರಿದು ಬರುತ್ತಿದ್ದರೆ ಇಂದು ಹಳ್ಳಿಗಳ ಸಂಕಷ್ಟ ಇಷ್ಟೊಂದು ಭೀಕರ ಇರುತ್ತಿರಲಿಲ್ಲ' ಎಂದು ಮಾತಿನ ಮಧ್ಯೆ ಹೇಳಿದರು. 'ಸ್ಥಳೀಯತೆ' ಯಾಕೆ ನಾಶವಾಗುತ್ತಿದೆ ಎಂಬುದಕ್ಕೆ ಉತ್ತರದ ಚಿಕ್ಕ ಎಳೆ ಇದರಲ್ಲಿದೆಯಲ್ವಾ.

1 comments:

Govinda Nelyaru said...

ಚೆನ್ನಾಗಿತ್ತು. ಕಾರಂತರೇ

'ನೀರು ಬೇಕಿತ್ತಲ್ಲಾ' ಅಂದಾಗ ಯಜಮಾನರೇ ಹೋಗಿ ತಂಪು ಪೆಟ್ಟಿಗೆಯಿಂದ ಬಾಟಲ್ ತಂದಿಟ್ಟರು -) ನೀವು ಅದನ್ನು ನೋಡಲು ಹುಬ್ಬಳ್ಳಿಗೆ ಹೋಗಬೇಕಾಗಿರಲಿಲ್ಲ. ನಮ್ಮ ಹಳ್ಳಿಯಲ್ಲೂ ಕಾಣಬಹುದಾಗಿದೆ. ನಮ್ಮ ಸಮಾಜದ ನಡೆ ಊಹಿಸುವಾಗ ಭಯವಾಗುತ್ತದೆ.

Post a Comment