ರಾಜಧಾನಿಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ 'ಸಹಜ ಸಮೃದ್ಧ'ದ (ಸಸ) ಸಾರಥ್ಯದಲ್ಲಿ ಅಕ್ಕಿ ಮೇಳ. ಹತ್ತಾರು ತಳಿಗಳ ಸಂಗ್ರಹ. ಮಳಿಗೆಯೊಂದರಲ್ಲಿ ಅಮ್ಮಂದಿರು ಅಕ್ಕಿ ಖರೀದಿ ಮಾಡುತ್ತಾ, 'ಇದರ ಅನ್ನ ಮಾಡುವುದು ಹೇಗೆ? ಹೇಳಿ ಕೊಡ್ರಿ, ಬರ್ಕೊಳ್ತೇವೆ' ಎಂದು ಶಾಂತಾರಾಮರಿಗೆ ದುಂಬಾಲು ಬಿದ್ದರು. ಅಮ್ಮಂದಿರಿಗೂ ಅನ್ನ ಮಾಡಲು ಹೇಳಿ ಕೊಡ್ಬೇಕಾ? 'ಅನ್ನ ಏನ್ ಸಾರ್, ಪಾಯಸ ಮಾಡುವ ಕ್ರಮವನ್ನು ಹೇಳಿಕೊಡ್ಬೇಕು. ಅದಕ್ಕಾಗಿಯೇ ಯಾವ್ಯಾವ ತಳಿಗಳ ಅಕ್ಕಿಯ ಅನ್ನವನ್ನು ಹೇಗೆ ಮಾಡ್ಬೇಕು ಅಂತ ಕರಪತ್ರವನ್ನೇ ಮುದ್ರಿಸಿದ್ದೀವಿ' ಎಂದರು ಸಸದ ಕೃಷ್ಣಪ್ರಸಾದ್.
ಅಮ್ಮನಿಂದ ಮಗಳಿಗೆ ಅಡುಗೆಯ ಜ್ಞಾನ ಹರಿದು ಬರಬೇಕು. ಅದು ಥಿಯರಿ ಅಲ್ಲ, ಪ್ರಾಕ್ಟಿಕಲ್. ಜತೆಯಲ್ಲಿದ್ದು ಕಲಿಯುವಂತಾದ್ದು. ಅಮ್ಮನೇ ಅಡುಗೆ ಮನೆಗೆ ಬಾರದಿದ್ದರೆ? ಕಲಿಯುವ ಬಗೆಯೆಂತು? ಮಗಳು ಅತ್ತೆ ಮನೆ ಸೇರಿದಾಗ ಗಲಿಬಿಲಿ, ಕಂಗಾಲು. ಅಲ್ಲೂ ಅದೇ ಸ್ಥಿತಿಯಿದ್ದರೆ ಓಕೆ. ಇಲ್ಲದಿದ್ದರೆ? ಪರಿಸ್ಥಿತಿ ಊಹಿಸಿ. 'ಗಂಡ ಸಹಕಾರ ಮಾಡಬೇಡ್ವಾ' ಅಂತ ವಾದವನ್ನು ಮುಂದಿಡಬಹುದು. ಆದರೆ ಜ್ಞಾನಗ್ರಹಿಕೆಗೆ ವಾದಗಳು ಮಾನದಂಡವಲ್ಲ.
ನಗರದ ಜಂಜಾಟದ ಮಧ್ಯೆ ಅರೋಗ್ಯದೊಂದಿಗೆ ವೈಯಕ್ತಿಕವಾದ ಬದುಕು ಕಳೆದು ಹೋಗುತ್ತದೆ. ಹೊಟ್ಟೆ ಹಸಿವಾದರೆ ಹೋಟೆಲ್ ಇದೆ. ದುಡ್ಡಿದೆಯಲ್ಲಾ, ಬಿಸಾಕಿದರಾಯಿತು! ಸಾಕಷ್ಟು ಮಂದಿಯಲ್ಲಿ ಇಂತಹ 'ಅಹಂ' (ಅಲ್ಲ, ಗುಣ) ಪದಪ್ರಯೋಗದ ಬಳಕೆಯನ್ನು ಕೇಳಿದ್ದೇನೆ. ಗಡದ್ದು ಉಂಡು ತೇಗಿದರೆ ಆಯಿತು. ಅಡುಗೆ ಮನೆಯ ಉಸಾಬರಿ ಯಾಕಲ್ವಾ. ಯಾವಾಗ ಅಡುಗೆ ಮನೆಯ ಮರೆವು ಆಗುತ್ತೋ, 'ಅನ್ನ ಮಾಡುವುದು ಹೇಗೆ' ಎಂಬ ಅಸಹಾಯಕತೆ ಇನ್ನಷ್ಟು ಗಟ್ಟಿಯಾಗುತ್ತದೆ.
ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಪರಿಚಿತರೊಬ್ಬರ ಮನೆ ಭೇಟಿ. ಮಕ್ಕಳಿಬ್ಬರು ಅಧ್ಯಯನ ನಿರತರು. ಮನೆಯೊಡತಿ ಕಂಪೆನಿಯಲ್ಲಿ ಹಗಲಿಡೀ ದುಡಿದು ಸುಸ್ತಾಗಿ ಒರಗಿದ್ದರು. ಯಜಮಾನ ಇನ್ನಾವುದೋ ವ್ಯಾವಹಾರಿಕ ಚಿಂತೆ. ಉಭಯ ಕುಶಲೋಪರಿಯ ಬಳಿಕ, ಬನ್ನಿ, ಹತ್ತಿರದಲ್ಲಿ ಹೋಟೆಲ್ ಇದೆ. 'ಹೊಟ್ಟೆ ತುಂಬಿಸಿ' ಬರೋಣ. ಅವಳಿಗೆ ಕೊಂಡೂ ಬರೋಣ ಎನ್ನಬೇಕೆ. ಸರಿ, ದಂಪತಿಗೆ ದುಡಿತ ಅನಿವಾರ್ಯವೆಂದು ಸ್ವೀಕರಿಸೋಣ. ಮನೆ ಮಕ್ಕಳ ಹಸಿದ ಹೊಟ್ಟೆಗೆ ಅಡುಗೆ ಮನೆಯಲ್ಲೇ ಆಹಾರ ತಯಾರಾದರೆ ಅದು ಅಮೃತವಾಗದೇ? ಹೋಟೆಲ್ನಲ್ಲೂ 'ಅಡುಗೆಮನೆಯಿದೆ' ಎಂಬ ಅಡ್ಡ ಮಾತಿಗೆ ಏನು ಹೇಳಲಿ?
ಅಕ್ಕಿ ಮೇಳದಲ್ಲಿ 'ಅನ್ನ ಮಾಡಲು ಕಲಿವ' ಹೊಸ ಅಮ್ಮಂದಿರು. ಈಗಷ್ಟೇ ಗಂಡನ ಮನೆ ಸೇರಿದವರು. 'ನಮಗೂ ಬ್ರೋಷರ್ ಕೊಡಿ' ಎನ್ನುವಾಗ ಅಯ್ಯೋ ಅನ್ನಬೇಕಷ್ಟೇ. ಬದುಕಿನ ಈ ಸ್ಥಿತಿಯನ್ನು ಪ್ರಶ್ನಿಸುವಂತಿಲ್ಲ. ಫ್ಯಾಷನ್ ಬದುಕಿನ ಅಲಿಖಿತ ರೂಪ. ಅಡುಗೆ ಮನೆಯಲ್ಲಿ 'ರೆಡಿ ಟು ಈಟ್'ನಲ್ಲಿ ಅಮ್ಮಂದಿರ ಪಾತ್ರ ಇದೆಯೇ? 'ಕುಕ್ ಟು ಈಟ್'ನಲ್ಲಾದರೆ 'ಅಮ್ಮನ ಕೈರುಚಿ' ಇದೆ. ಆಗಲೇ ಆರೋಗ್ಯ.
ಮೇಳದಲ್ಲಿ ಪಾಲಿಶ್ ಮಾಡದ ಕೆಂಪಕ್ಕಿಗೆ ಬೇಡಿಕೆ. ಪಾಯಸಕ್ಕೆ ಸೂಕ್ತವಾಗುವ 'ಕಪ್ಪಕ್ಕಿ', ಇನ್ನೊಂದು ಸಕ್ಕರೆ ಕಾಯಿಲೆಯವರೂ ಸ್ವೀಕರಿಸಬಹುದಾದ ಡಯಾಬಿಟೀಸ್ ರೈಸ್. ಅಕ್ಕಿಯ ಹೆಸರಿನೊಂದಿಗೆ ಕಾಯಿಲೆಯ ಹೆಸರೂ ಥಳಕು ಹಾಕಿಕೊಂಡಿದೆ! ಸುಲಭದಲ್ಲಿ ಆರ್ಥವಾಗಬೇಕಲ್ವಾ. 'ಪಾಲಿಶ್ ಮಾಡದ' ಅಕ್ಕಿಯ ಅನ್ನದ ಸೇವನೆಗೆ ವ್ಯೆದ್ಯರ ಸಲಹೆಯೂ ಇದೆ.
'ನನ್ನ ಮೊಮ್ಮಗಳೀಗ ಎಲ್.ಕೆ.ಜಿ. ಅವಳಿಗೆ ಕೆಂಪಕ್ಕಿಯ ಅನ್ನವನ್ನು ಮಧ್ಯಾಹ್ನದ ಊಟಕ್ಕೆ ಬುತ್ತಿಯಲ್ಲಿ ಹಾಕಿ ಕಳುಹಿಸುತ್ತಿದ್ದೆವು. ಕೆಂಪು ವರ್ಣದ ಅನ್ನವನ್ನು ನೋಡಿದ ಇತರ ಪುಟಾಣಿಗಲ್ಲಿ ಅಸಹ್ಯ! ಅವರಲ್ಲಿ ಬಿಸ್ಕತ್ತೋ, ಇನ್ನೇನೋ ಕುರುಕುರು ಇರುತ್ತಿದ್ದುವು. ಗೇಲಿ ಮಾಡಿದರಂತೆ. ಅಲ್ಲಿಂದ ಈ ಮಗು ಕೆಂಪಕ್ಕಿ ಅಂದರೆ ಮಾರುದ್ದ,' ಸಸದ ಅಧ್ಯಕ್ಷ ಎನ್. ಆರ್.ಶೆಟ್ಟರು ಕಥೆ ಹೇಳಿ ಮುಗಿಸುವಾಗ ವಿಷಾದದ ಛಾಯೆ. ನಮ್ಮ ಸುತ್ತಮುತ್ತಲಿನ ವಿಚಾರಗಳು ಮಗುವಿನ ಮೇಲೆ ಬೀರುವ ಪರಿಣಾಮದ ಒಂದು ಎಳೆಯಷ್ಟೇ.
ಶೆಟ್ಟರು ಇನ್ನೊಂದು ಸಂದರ್ಭವನ್ನು ಜ್ಞಾಪಿಸಿಕೊಂಡರು. ಬೆಂಗಳೂರಿನಲ್ಲಿ ಆಯುರ್ವೇದದ ಕುರಿತು ಅಖಿಲ ಭಾರತ ಸಮ್ಮೇಳನ. ಔಷಧೀಯ ಗುಣಗಳ ಅಕ್ಕಿ ಮತ್ತು ಕಿರುಧಾನ್ಯಗಳ ಪ್ರದರ್ಶನದ ಉಸ್ತುವಾರಿ ಹತ್ತಿದ್ದರು 'ಓ.. ಈ ಅಕ್ಕಿ ಎಲ್ಲಿ ಸಿಗುತ್ತದೆ?', 'ನವರ, ಕರಿಗಜಿವಿಲಿಯನ್ನು ರೋಗಿಗಳಿಗೆ ಸ್ವೀಕರಿಸುವಂತೆ ಹೇಳಬಹುದಾ?', ವೈದ್ಯ ಬಂಧುಗಳ ಚೋದ್ಯ. ಪಾರಂಪರಿಕವಾದ ಔಷಧೀಯ ಭತ್ತದ ತಳಿಗಳು ಹಿರಿಯರಲ್ಲಿ ಕಂಠಸ್ತ. ಬಳಕೆಯ ಅರಿವು ಸಾಮಾನ್ಯರಿಗೆ ಬಿಡಿ, ವೈದ್ಯರಿಗೂ ಇಲ್ಲವಲ್ಲಾ - ವಿಷಾದಿಸುತ್ತಾರೆ.
ಅಕ್ಕಿಮೇಳದಲ್ಲಿ ಮಹಿಳೆಯರ ಪಾಲುಗಾರಿಕೆ ಹೆಚ್ಚು. ಅದರಲ್ಲೂ ಮೂವತ್ತೈದರ ಒಳಗಿನವರು. ಅಕ್ಕಿ ಖರೀದಿಯ ಹಿಂದೆ 'ಆಹಾರದೊಂದಿಗೆ ಆರೋಗ್ಯದ ಕಾಳಜಿ'. ಅಕ್ಕಿ ಅಂದರೆ ಸೋನಾ ಮಸ್ಸೂರಿ. ಬೇರೆಯದು ಗೊತ್ತಿಲ್ಲ, ಬೇಕಾಗಿಲ್ಲ. ಅದು ಬಿಳಿಯದಾಗಿರಬೇಕು. ಆಗಷ್ಟೇ ಅಂಗಡಿಯಿಂದ ತಂದಿರಬೇಕು. ಅನ್ನವು ಶ್ವೇತವರ್ಣದಲ್ಲಿ ಉದುರು ಉದುರಾಗಿರಬೇಕು. ಪ್ಯಾಕೆಟ್ ಒಡೆದು ಕುಕ್ಕರಿಗೆ ಹಾಕುವಾಗ ಸಿಗುವ ಆನಂದ ವರ್ಣನಾತೀತ.. - ಈ ರೀತಿಯ 'ಮೈಂಡ್ ಸೆಟ್' ದೂರವಾಗಬೇಕು. ಆಗಲೇ ಆರೋಗ್ಯದ ಕುರಿತು ಮಾತನಾಡಲು ಅರ್ಹತೆ ಬರುತ್ತದಷ್ಟೇ.
ಸಸವು 'ವಿಷ ಸಿಂಪಡಿಸದೆ' ಭತ್ತ ಬೆಳೆಯಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಬೆಳೆದ ಭತ್ತವನ್ನು ಖರೀದಿಸಿ, ಮಿಲ್ನಲ್ಲಿ ಅಕ್ಕಿ ಮಾಡಿ ಗ್ರಾಹಕರಿಗೆ ಒದಗಿಸುವ ರೈತಸ್ನೇಹಿ ಕೆಲಸ ಮಾಡುತ್ತಿದೆ. ಒಂದು, ಐದು, ಹತ್ತು, ಐವತ್ತು ಕಿಲೋದ ಪ್ಯಾಕೆಟ್ಗಳು. ಹೆಚ್ಚು ಲಾಭಾಂಶ ಇಲ್ಲದ ವ್ಯವಹಾರ. ಕೇಳಿ/ಹುಡುಕಿ ಬರುವ ಗ್ರಾಹಕರನ್ನು ಹೊಂದಿರುವುದು ವಿಶ್ವಾಸಾರ್ಹತೆಯ ದ್ಯೋತಕ. ಭತ್ತವನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿ, ಅವುಗಳಲ್ಲಿರುವ ಪೌಷ್ಠಿಕಾಂಶಗಳನ್ನು ದಾಖಲಿಸಿ ಕೇಳಿದಾಗ ಒದಗಿಸುವ ವ್ಯವಸ್ಥೆ.
'ಈ ಅಕ್ಕಿಯ ಬ್ರಾಂಡ್ ಯಾವುದು? ಎಕ್ಸ್ಪಾಯಿರಿ ಡೇಟ್ ಯಾವಾಗ? ಎಂ.ಆರ್.ಪಿ.ಎಷ್ಟು?' ಹೀಗೆ ಇಂಗ್ಲಿಷ್ ಜಾತಕವನ್ನು ಅಪೇಕ್ಷಿಸುವವರೂ ಇಲ್ಲದಿಲ್ಲ. ಇಂತಹವರಿಗೆ ಅಕ್ಕಿಯ, ಆರೋಗ್ಯದ ಕುರಿತು ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಎನ್.ಆರ್.ಶೆಟ್ಟರು. ಆದರೆ ನಗರದ ಹಳ್ಳಿ ಮೂಲದ ಮಂದಿಗೆ ಪಾರಂಪರಿಕ ಅಕ್ಕಿಯ ರುಚಿ ಗೊತ್ತು.
ಅಕ್ಕಿಮೇಳದಲ್ಲಿ ಗಮನ ಸೆಳೆದಿರುವುದು ವಿವಿಧ ಭತ್ತದ ತಳಿಗಳ ಪ್ರದರ್ಶನ. ಒರಿಸ್ಸಾ ಮೂಲದ 'ನಾರಿಕೇಳಾ' ಮತ್ತು 'ಕಾಳಜೀರಾ', ಖಾನಾಪುರ ಮೂಲದ ಬಾಣಂತಿ ಭತ್ತ 'ಕರಿಗಜಿವಿಲಿ' ಮತ್ತು 'ಕಪ್ಪು ಭತ್ತ', ಶಿರಸಿ-ಸೊರಬಾ ನದಿ ತೀರದ ಆಳ ನೀರಿನ ಭತ್ತ 'ಕರಕಂಠಕ', ಮಹಾರಾಷ್ಟ್ರ ಮೂಲದ ರೈತ ಸಂಶೋಧಿತ ತಳಿ 'ಎಚ್.ಎಂ.ಟಿ'.. ಇನ್ನೂ ಅನೇಕ. ಕೋಲಾರ-ಬೆಂಗಳೂರು ಗ್ರಾಮಾಂತರ ಪ್ರದೇಶದ 'ಭೈರನೆಲ್ಲು' ಇದರ ಭತ್ತವನ್ನು ಕುಟ್ಟಿ, ಹಾಲು ತೆಗೆದು, ಬೆಲ್ಲ ಸೇರಿಸಿ ಮಾಡಿದ ಬರ್ಫಿಯನ್ನು ಎದೆನೋವಿರುವವರಿಗೆ ನೀಡಿದರೆ ನೋವು ಶಮನವಾಗುತ್ತದಂತೆ.
ವಿಪ್ರೋ ಐಟಿಗಳಲ್ಲಿ ಸಾವಯವದ ಹುಡುಕಾಟ ಶುರುವಾಗಿದೆ. ಸಸವು ಮಳಿಗೆ ತೆರೆದಿದೆ. ಇನ್ನೂರಕ್ಕೂ ಮಿಕ್ಕಿ ಐಟಿ ಲೋಕದ ಬಂಧುಗಳು ಆರೋಗ್ಯ ಕಾಳಜಿಯತ್ತ ಹೊರಳಿದ್ದಾರೆ! ಇಂಪೋಸಿಸ್ನವರಿಗೂ ಒಲವು. ಎಲ್ಲರಿಗೂ ಗೊತ್ತಿದೆ, ನಾವು ಮಾಡುತ್ತಿರುವ ಉದ್ಯೋಗ, ಕೈತುಂಬಾ ಸಿಗುವ ಸಂಬಳ ಕಾಸು - ಬದುಕನ್ನು ಆಧರಿಸುತ್ತಿದೆ, ಆದರೆ ಆರೋಗ್ಯವನ್ನಲ್ಲ. ಅದು ಹಾಳಾದರೆ ಕಂಪೆನಿಯೂ ಮರುಭರ್ತಿ ಮಾಡಲಾರದು. ಅವರವರೇ ದಾರಿ ಕಂಡುಕೊಳ್ಳಬೇಕಷ್ಟೇ.
1 comments:
ಆಧುನಿಕ ಜೀವನಶೈಲಿಯನ್ನು ವಿವಿಧ ದೃಷ್ಟಿಕೋನದಲ್ಲಿ ಪರಿಚಯಿಸಿ, ವ್ಯಾಖ್ಯಾನಿಸಿದ್ದೀರಿ. ಉತ್ತಮ ಮಾಹಿತಿ ಹಾಗೂ ಸಂದೇಶವುಳ್ಳ ಲೇಖನ.
Post a Comment