ಕೃಷಿ ಉತ್ಸವದ ಪ್ರದರ್ಶನವೊಂದರಲ್ಲಿ ಭತ್ತದ ಕೃಷಿಯ ಪರಿಕರ, ಸಾಂಪ್ರದಾಯಿಕ ಮನೆಯ ಮಾದರಿ, ನಿತ್ಯ ಬದುಕಿನ ವ್ಯವಸ್ಥೆಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆಯಿತ್ತು. ಅದನ್ನು ನೋಡುವ, ವಿಮರ್ಶಿಸುವ, ಗತ ಕಾಲವನ್ನು ಜ್ಞಾಪಿಸಿಕೊಳ್ಳುವ ಅಮ್ಮಂದಿರು ನೋಟಕರಾಗಿದ್ದರು. ಆಧುನಿಕ ಜೀವನಶೈಲಿಯತ್ತ ಹೊರಳುವ ಕಾಲಘಟ್ಟದಲ್ಲಿ ಪ್ರಾತ್ಯಕ್ಷಿಕೆಯು ಪಾರಂಪರಿಕ ಬದುಕನ್ನು ಅಣಕಿಸಿದಂತೆ ಭಾಸವಾಯಿತು.
'ಬದುಕಿಗೆ ಅಂಟಿಕೊಂಡಿದ್ದ ಭತ್ತದ ಕೃಷಿಯನ್ನು ಡೆಮೋದಲ್ಲೇ ನೋಡಬೇಕಷ್ಟೇ. ಹೀಗಾದರೆ ಉಣ್ಣುವುದೇನನ್ನು' ಎಂದು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸುತ್ತಿದ್ದ ಮಹನೀಯರೊಬ್ಬರನ್ನು ಮಾತಿಗೆಳೆದೆ. 'ತೊಂದರೆಯಿಲ್ಲ ಮಾರಾಯ್ರೆ, ಅಕ್ಕಿಯನ್ನು ಅಂಗಡಿಯಿಂದ ತಂದರಾಯಿತು' ಎನ್ನಬೇಕೇ. ಹಣ ನೀಡಿದರೆ ಎಲ್ಲವೂ ಅಂಗಡಿಯಲ್ಲಿ ಸಿಗುತ್ತದೆ ಎಂಬ ಮೈಂಡ್ಸೆಟ್ ಬಹುತೇಕರಲ್ಲಿ ನೋಡುತ್ತೇವೆ.
ಸರಿ, ಅಂಗಡಿಯಿಂದಲೇ ತರೋಣ. ಅಂಗಡಿಗೆ ಎಲ್ಲಿಂದ ಬರಬೇಕು. ರೈತ ಬೆಳೆದರೆ ಮಾತ್ರ ಹೊಟ್ಟೆ ತುಂಬುತ್ತದೆ. ನೆಲ, ಜಲದಂತಹ ಪ್ರಾಕೃತಿಕ ವ್ಯವಸ್ಥೆಗಳು ಕೈಕೊಟ್ಟರೆ ಹೊಟ್ಟೆಯ ಮೇಲೆ ಒದ್ದೆ ಬಟ್ಟೆ. ಹೊಸ ಹೊಸ ಕೃಷಿಗಳ ವಲಸೆಯಿಂದ ಈಗಾಗಲೇ ಭತ್ತದ ಕೃಷಿ ಹೈರಾಣವಾಗಿದೆ. ಹೊರ ರಾಜ್ಯವನ್ನು ನಂಬಿ ಅನ್ನದ ಬಟ್ಟಲು ಎಷ್ಟು ದಿವಸ ಕಾಯಬಹುದು?
ಭತ್ತದ ಕೃಷಿ ಬದುಕಿನೊಂದಿಗೆ ಹೊಸೆದ ಕೃಷಿ. ವರ್ಷಪೂರ್ತಿ ಉಣ್ಣಲು ಭತ್ತದ ಸಂಗ್ರಹ ಮನೆಯೊಳಗಿದ್ದರೆ ಆತ ಶ್ರೀಮಂತ. ಹಿಂದೆಲ್ಲಾ ವಿವಾಹ ಸಂದರ್ಭದಲ್ಲಿ ಭತ್ತದ ಗಣತಿಯಂತೆ ವೈಯಕ್ತಿಕ ಪ್ರತಿಷ್ಠೆಗಳು ಸ್ಥಾಪಿತವಾಗುತ್ತವೆ. 'ಯಾವಾಗ ಕ್ಯಾಲ್ಕ್ಯುಲೇಟರ್ ಕೈಗೆ ಬಂತೋ ಅಂದಿನಿಂದ ಭತ್ತದ ಬೇಸಾಯ ಹಿಂದೆ ಬಂತು' ಎಂಬ ಅಮೈ ದೇವರಾಯರ ಮಾತು ಸಾರ್ವಕಾಲಿಕ.
ಭತ್ತದ ಕೃಷಿಯು ಲೆಕ್ಕ ಬರೆದಿಟ್ಟು ಮಾಡುವಂತಹುದಲ್ಲ ಎಂಬ ವಾಸ್ತವ ಹಿರಿಯರಿಗೆ ಗೊತ್ತಿತ್ತು. 'ಭತ್ತದ ಕೃಷಿ ಮಾಡದ ಕೃಷಿಕ ಕೃಷಿಕನಲ್ಲ' ಎಂದು ಕಟುವಾಗಿ ಕೀರ್ತಿಶೇಷ ಚೇರ್ಕಾಡಿಯವರು ಪ್ರತಿಪಾದಿಸುತ್ತಿದ್ದರು. 'ಮೊದಲು ಹೊಟ್ಟೆಯ ಪೂಜೆ, ಮಿಕ್ಕಿದ್ದೆಲ್ಲಾ ಬಳಿಕ..' ಎನ್ನುವ ಪಾಣಾಜೆಯ ವೆಂಕಟ್ರಾಮ ದೈತೋಟ.. ಇವರೆಲ್ಲರ ನುಡಿಗಳು ಭತ್ತದ ಸಂಸ್ಕೃತಿ, ಬದುಕಿನತ್ತ ಹಿನ್ನೋಟ ಬೀರುತ್ತವೆ.
ಪ್ರಸ್ತುತ ಕಾಲಘಟ್ಟದಲ್ಲಿ ತುತ್ತಿಗೆ ತತ್ವಾರವಿಲ್ಲ! ಎಲ್ಲದಕ್ಕೂ ಹಣವೇ ಮಾನದಂಡ. ಯಾವುದೇ ಮುಜುಗರವಿಲ್ಲದೆ, ಮಾನ-ಸಂಮಾನಗಳ ಗೊಡವೆಗೆ ಹೋಗದೆ ನೆಲ, ಜಲಗಳನ್ನು ಆಪೋಶನ ಮಾಡುವ ಪ್ರಭೃತಿಗಳಿರುವ ನಾಡಿನಲ್ಲಿ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುವುದು ಅಜ್ಞಾನವಾಗಬಹುದೇನೋ? ಬಟ್ಟಲಿನಲ್ಲಿ ಅನ್ನದ ಒಂದು ಅಗುಳನ್ನು ಉಣದೆ ಬಿಟ್ಟರೆ, ಚೆಲ್ಲಿದರೆ 'ಅನ್ನ ಬಿಡಬೇಡಿ, ನಂತರ ಬೇಡುವ ಸ್ಥಿತಿ ಬರಬಹುದು' ಎಂದು ಹಿರಿಯರು ಹೇಳುತ್ತಿದ್ದ ಸಾತ್ವಿಕ ಆಕ್ರೋಶದ ಮಾತುಗಳು ಆರ್ಥಶೂನ್ಯ ಅಂತ ಅನ್ನಿಸುವ ಕಾಲಮಾನದಲ್ಲಿದ್ದೇವೆ.
ಒಂದೊಂದು ಭತ್ತದ ಕಾಳು ಮುತ್ತಿಗೆ ಸಮಾನವೆಂದು ಭಾವಿಸಿ, ಅದನ್ನು ಆಯ್ದು, ಗಂಜಿ ಮಾಡಿ ಹೆಂಡತಿ ಮಕ್ಕಳನ್ನು ಬೆಳೆಸಿದ, ಉಳಿಸಿದ ಶ್ರಮಜೀವಿಗಳು ಮಾತಿಗೆ ಸಿಗುತ್ತಾರೆ. ಅನ್ನಕ್ಕೆ ತತ್ವಾರವಾದಾಗ ಹಲಸಿನ ಸೊಳೆಯ ಖಾದ್ಯಗಳಿಂದ ಹೊಟ್ಟೆ ತುಂಬಿಸಿಕೊಂಡ ದಿನಗಳನ್ನು ನೆನಪಿಸುವವರು ಧಾರಾಳ.
ಒಂದೆರಡು ಉದಾಹರಣೆಯನ್ನು ಮುಳಿಯದ ಜ್ಯಾಕ್ ಶರ್ಮರು ನೆನಪಿಸಿದರು. ಭತ್ತ ಕಟಾವ್ ಆಗಿ, ತೆನೆಯಿಂದ ಭತ್ತವನ್ನು ಬೇರ್ಪಡಿಸಿ, ಜಳ್ಳು-ಕಾಳನ್ನು ಪ್ರತ್ಯಪ್ರತ್ಯೇಕವಾಗಿ ಮಾಡುತ್ತಾರೆ. ಹೀಗೆ ಮಾಡುವಾಗ ಅಂಗಳದ ಮಣ್ಣಿನಲ್ಲಿ, ಚಿಕ್ಕ ಕಲ್ಲುಗಳ ಎಡೆಯಲ್ಲಿ ಉದುರಿದ ಭತ್ತದ ಕಾಳುಗಳನ್ನು ಆಯುವುದು ಹೇಗೆ? ಹತ್ತಿಯ ಬಟ್ಟೆಯನ್ನು ಕರವಸ್ತ್ರದಾಕಾರಕ್ಕೆ ಕತ್ತರಿಸುವುದು. ಎಲ್ಲೆಲ್ಲಿ ಕಾಳುಗಳು ಉದುರಿದುವೋ, ಅಲ್ಲಿಗೆ ಕರವಸ್ತ್ರವನ್ನು ಹಿಡಿದರೆ ಆಯಿತು. ಭತ್ತದ ಕಾಳಿನ ಹೊರಮೈಯಲ್ಲಿ ಸೂಕ್ಷ್ಮ ರೋಮಗಳಿರುವುದರಿಂದ (ಜುಂಗು) ಹತ್ತಿಯ ವಸ್ತ್ರಕ್ಕೆ ಕಾಳು ಬಹುಬೇಗ ಅಂಟಿಕೊಳ್ಳುತ್ತದೆ. ಹೀಗೆ ಒಂದೊಂದೇ ಕಾಳುಗಳನ್ನು ಆಯುವ ದಿನಗಳಿದ್ದುವು.
ತೆನೆಯಿಂದ ಭತ್ತವನ್ನು ಬೇರ್ಪಡಿಸಿದ ಬಳಿಕವೂ ಅಪಕ್ವ ಕಾಳುಗಳು ಬೇರ್ಪಡದೆ ಉಳಿದಿರುತ್ತವೆ. ಸ್ವಲ್ಪ ಕಾಲದ ನಂತರ ತೆನೆ ಪೂರ್ತಿ ಸೊರಗುತ್ತದೆ. ಇದರಿಂದ ಕಾಳುಗಳನ್ನು ಆಯುವುದು ಶ್ರಮ ಬೇಡುವ ಕೆಲಸ. ಹೀಗೆ ಲಭ್ಯವಾದ ಭತ್ತವೇ ಈ ಕಾಯಕಕ್ಕಿರುವ ವೇತನ. ಈ ಭತ್ತಕ್ಕೆ 'ಬೈತ್ತ ಬಾರ್' ಎಂದರೆ, ಇದರ ಗಂಜಿಗೆ 'ಬೈತ್ತರಿತ ಗಂಜಿ' ಎನ್ನುತ್ತಿದ್ದರು. ಗಂಜಿ, ತಿಂಡಿಗಳನ್ನು ಮಾಡಲು ಬಳಕೆ. ಇದರ ಅಕ್ಕಿಯ ಆಹಾರವನ್ನು ಸೇವಿಸುವವರು ಕಡು ಬಡವರು ಎಂದು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದ ಕಾಲವನ್ನು ಶರ್ಮರು ಜ್ಞಾಪಿಸಿದಾಗ, ಭತ್ತದ ಕಾಳು ಬದುಕನ್ನು ಹೇಗೆ ಭದ್ರವಾಗಿ ಆಧರಿಸುತ್ತಿತ್ತು ಎನ್ನುವ ಗಾಢತೆಗೆ ಆಕರ ನೋಡಬೇಕಾಗಿಲ್ಲ.
ಕಾಲ ಬದಲಾದಂತೆ ಜೀವನ ಶೈಲಿಯೂ ಬದಲಾಗಿದೆ. ಅನ್ನದ ಬದಲಿಗೆ ಸಿದ್ಧ ಆಹಾರಗಳು ಲಭ್ಯ. ಹಣ ಚೆಲ್ಲಿದರೆ ಆಯಿತು, ನಮಗೆ ಬೇಕಾದವುಗಳನ್ನು ಪಡೆಯುವ ವ್ಯವಸ್ಥೆಗಳಿವೆ. ಹೀಗೆ ಸ್ವೀಕರಿಸುವ ಆಹಾರಗಳನ್ನು ದೇಹ ಸ್ವೀಕರಿಸುತ್ತದೋ ಇಲ್ಲವೋ ಎಂಬ ಕಾಳಜಿ ಬೇಕಾಗಿಲ್ಲ. ಅಸೌಖ್ಯವಾದರೆ ಮೆಡಿಕಲ್ ಶಾಪ್ಗಳಿವೆ, ಆಸ್ಪತ್ರೆಗಳಿವೆ. ಹಣ ಇದ್ದಾಗ ಬೇರ್ಯಾವ ಚಿಂತೆ ಯಾಕೆ ಹೇಳಿ? 'ಸಾರ್, ಕೃಷಿಯನ್ನು ಹಣದಿಂದ ಮಾಡಬಹುದು. ಬದುಕನ್ನೂ ರೂಪಿಸಬಹುದು. ಆರೋಗ್ಯವನ್ನು ಹಣ ತರಲಾರದು. ಅದು ನಮ್ಮ ವಿವೇಚನೆಯಿಂದಲೇ ರೂಪುಗೊಳ್ಳಬೇಕು' ಯುವ ಕೃಷಿಕ ಅನಿಲ್ ಬಳೆಂಜರ ಯೋಚನೆಯಲ್ಲಿ ಹುರುಳಿದೆಯಲ್ವಾ.
ಎರಡು ತಿಂಗಳಿನಿಂದ ಕನ್ನಾಡಿನಲ್ಲಿ ಅಕ್ಕಿಗೆ ಬರ. ನೀರು ಕೈಕೊಟ್ಟದ್ದರಿಂದ ಭತ್ತದ ಕೃಷಿಗೆ ಇಳಿಲೆಕ್ಕ. ಅತ್ತ ತಮಿಳುನಾಡಿನಿಂದ ಹೊಸ ವರಸೆ. ಅಕ್ಕಿಯ ಕೊರತೆಯ ಸುದ್ದಿಗಳು ಮಾಧ್ಯಮಗಳಲ್ಲಿ ಬಂದುದೇ ತಡ, ವ್ಯಾಪಾರಿ ವಲಯದ ಲೆಕ್ಕಾಚಾರಗಳು ಚುರುಕಾದುವು. ಮಾರುಕಟ್ಟೆಯಲ್ಲಿ ಅಕ್ಕಿಗೆ ಇನ್ನಿಲ್ಲದ ಒತ್ತಡ ತಂತ್ರಗಳ ರೂಪುರೇಷೆಗಳು ಸಿದ್ಧವಾದುವು. ಅಕ್ಕಿಯ ದರ ದಿಢೀರನೆ ಏರಿದುವು. ಸರಕಾರದಿಂದ ಬೆಂಬಲ ಬೆಲೆಯ ಘೋಷಣೆಯ ಪ್ರಹಸನ. ಇಲಾಖೆಗಳು ವ್ಯಾಪಾರಿಗಳ ಮೇಲೆ, ವ್ಯಾಪಾರಿಗಳು ರೈತರ ಮೇಲೆ ಕೆಸರೆರೆಚಾಟ. ಅಕ್ಕಿ ಪೂರೈಸುವಂತೆ ಅಧಿಕಾರಿಗಳಿಂದ ಸುಗ್ರೀವಾಜ್ಞೆ. ಪರಿಣಾಮ ಶೂನ್ಯ. ಬೆಲೆ ದಿನೇ ದಿನೇ ಎರುಗತಿ. ಸಾಮಾನ್ಯರ ಬದುಕು ದಿನೇ ದಿನೇ ಇಳಿಗತಿ.
ಭತ್ತದ ಕೃಷಿಯ ಇಳಿಲೆಕ್ಕಕ್ಕೆ ಪಕ್ಕದ ಕೇರಳದ ಕಡೆ ಕತ್ತು ವಾಲಿಸಿ. 2010-11ರಲ್ಲಿ ಹಿಂದಿನ ವರುಷಕ್ಕೆ ಹೋಲಿಸಿದರೆ ಭತ್ತದ ಉತ್ಪಾದನೆಯಲ್ಲಿ 76000 ಟನ್ ಕಡಿಮೆ. ಕೃಷಿ ಭೂಮಿಗಳ ವಿಸ್ತೀರ್ಣದಲ್ಲೂ 21,000 ಹೆಕ್ಟೇರ್ ಕುಸಿತ. ಉತ್ಪಾದನೆ 5.9 ಲಕ್ಷ ಟನ್. ಅಕ್ಕಿಗಾಗಿ ಹೊರ ರಾಜ್ಯಗಳ ಅವಲಂಬನೆ. ಹತ್ತು ವರುಷದ ಅವಧಿಯಲ್ಲಿ ಭತ್ತದ ಕೃಷಿಯ ಶೇ.35ರಷ್ಟು ಭೂಮಿ ಹಡಿಲಾಗಿದೆ.
ಇದು ದೇವರ ನಾಡಿನ ಚಿತ್ರ. ಕನ್ನಾಡು ಇದಕ್ಕಿಂತಲೂ ಶೋಚನೀಯ. ಭತ್ತದ ಕಣಜವಾದ ಕರಾವಳಿಯ ಬಹುತೇಕ ತಾಲೂಕುಗಳಲ್ಲಿ ಗದ್ದೆಗಳು ಮಾಯವಾಗಿವೆ. ಇಲ್ಲಿ ಭತ್ತದ ಕೃಷಿಯನ್ನು ಪ್ರಾತ್ಯಕ್ಷಿಕೆಯಲ್ಲೇ ನೋಡಬೇಕಷ್ಟೇ. 'ಮಾರುಕಟ್ಟೆಯಲ್ಲಿ ದರದ ಏರುಗತಿ ನೋಡಿದರೆ ಭವಿಷ್ಯದಲ್ಲಿ ಕಾರ್ಪೋರೇಟ್ ವಲಯ ಭತ್ತದ ಕೃಷಿಗೆ ಒಲವು ತೋರಿದರೆ ಆಶ್ಚರ್ಯವಿಲ್ಲ', ಐಟಿ ಉದ್ಯೋಗಿಯೊಬ್ಬರ ಮನದ ಮಾತು. ಹೀಗಾದರೆ ಈಗ ರಬ್ಬರ್ ಕೃಷಿಯ ವಿಸ್ತರಣೆಯ ಧಾವಂತದ ಇನ್ನೊಂದು ಮಗ್ಗುಲಿನ ದರ್ಶನವಾಗಲು ದೂರ ಸಾಗಬೇಕಾಗಿಲ್ಲ.
ವಿದ್ಯುತ್ ಕೈಕೊಡುತ್ತಿದೆ. ಜಲ ಪಾತಾಳಕ್ಕಿಳಿಯುತ್ತಿದೆ. ಡೀಸಿಲ್, ಸೀಮೆಎಣ್ಣೆಯ ಸುದ್ದಿಯನ್ನು ಮಾತನಾಡದಿರುವುದೇ ಲೇಸು. ಈ ಶಕ್ತಿ ಮೂಲಗಳ ಹೊರತಾಗಿ ಕೃಷಿಯನ್ನು ಪ್ರಕೃತ ಯೋಚಿಸುವಂತಿಲ್ಲ, ಯೋಜಿಸುವಂತಿಲ್ಲ. ಅನ್ನದ ಬಟ್ಟಲು ತುಂಬಿ ತುಳುಕದಿದ್ದರೂ ಚಿಂತೆಯಿಲ್ಲ, ಹೊಟ್ಟೆ ತುಂಬುವಷ್ಟಾದರೂ ತುಂಬಿದರೆ ಸಾಕು. ಈ ಆಶಯವು ಹಾರೈಕೆಯಲ್ಲೇ ಮುದುಡಬಾರದು.
ಈ ವಿಷಾದಗಳ ಮಧ್ಯೆ ಭವಿಷ್ಯದ ಭೀಕರತೆಯ ಅರಿವುಳ್ಳ ಕೃಷಿಕರು ಮನೆ ಬಳಕೆಗಾಗಿ ಭತ್ತದ ಬೇಸಾಯವನ್ನು ಪುನರಪಿ ಆರಂಭಿಸಿರುವುದು ಮುಖದ ನೆರಿಗೆಯನ್ನು ಸಡಿಲಗೊಳಿಸಿದೆ. ಎಲ್ಲರಂತೆ ಇವರಿಗೂ ಸಮಸ್ಯೆಯಿದೆ. ಖರ್ಚುವೆಚ್ಚಗಳಿವೆ. ಇವರಲ್ಲೂ ಕ್ಯಾಲ್ಕ್ಯುಲೇಟರ್ ಮಾತ್ರವಲ್ಲ, ಗಣಕ ಯಂತ್ರವೂ ಇದೆ! ಇಷ್ಟಿದ್ದೂ 'ನಮ್ಮ ಊಟದ ಬಟ್ಟಲಿಗೆ ನಾವೇ ಬೆಳೆದ ಅಕ್ಕಿ' ಎನ್ನುವ ಚಿಕ್ಕ ಚಿಕ್ಕ ಖುಷಿಗಳು ಕಾಲದ ಅನಿವಾರ್ಯತೆ. ಒಂದು ಕಿಲೋ ಅಕ್ಕಿಗಾಗಿ ಕೃಷಿಕ ಅಂಗಡಿ ಮುಂದೆ ಕ್ಯೂ ನಿಲ್ಲುವ ದುರವಸ್ಥೆಯನ್ನು ಸ್ವೀಕರಿಸುವ ದಿನಗಳು ಬಾರದಿರಲಿ.
ಭಾರತದಲ್ಲಿ ಇನ್ನೊಂದು ಮಹಾಯುದ್ಧ ಆಗುವುದಾದರೆ ಅದು ನೀರಿಗಾಗಿ ಮಾತ್ರ! ನೀರಿದ್ದರೆ ಬದುಕು. ಬದುಕೇ ನೀರಾಗಿ ಕೊಚ್ಚಿಹೋದರೆ ಉಳಿಯುವುದು ಶೂನ್ಯ. ಇಂತಹ ಶೂನ್ಯದತ್ತ ಬದುಕು ವಾಲುತ್ತಿದೆ. ಅದನ್ನು ಮತ್ತೊಮ್ಮೆ ಹಳಿಗೆ ತರುವ ಕೆಲಸ ಮಾಡಬೇಕು. ಮಾಡಬೇಕಾದವರು ಯಾರು? ಸರಕಾರವಲ್ಲ, ಆಡಳಿತ ವ್ಯವಸ್ಥೆಯಲ್ಲ.