Wednesday, April 10, 2013

ಕೃಷಿ ಡೈರಿ : ಬದುಕಿನ ಪ್ರತಿಬಿಂಬ


            "ಹದಿಮೂರು ರೂಪಾಯಿಗೆ ಒಂದು ಪವನ್ ಚಿನ್ನ ಸಿಗುತ್ತಿದ್ದ ಕಾಲವಿನ್ನೂ ನೆನಪಿದೆ. ಕೃಷಿ, ಕುಟುಂಬ ವೆಚ್ಚಗಳ ಪೈಸೆ ಪೈಸೆ ಲೆಕ್ಕಗಳ ದಾಖಲೆಯನ್ನು ನನ್ನ ತಂದೆ, ಅಜ್ಜ ಬರೆದಿಡುತ್ತಿದ್ದರು," ಹಿರಿಯ ಕೃಷಿಕ ಕರಿಂಗಾಣದ ಡಾ.ಕೆ.ಎಸ್.ಕಾಮತ್ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾ, 'ಬದಲಾದ ಕಾಲಘಟ್ಟದಲ್ಲಿ ಬರೆಯುವುದು ಬಿಡಿ, ಓದುವ ಹವ್ಯಾಸನ್ನು ಕಳಕೊಳ್ಳುತ್ತಿದ್ದೇವೆ,' ಎಂದು ವಿಷಾದಿಸುತ್ತಾರೆ.

               ದೈನಂದಿನ ಖರ್ಚು ವೆಚ್ಚ, ಆದಾಯ, ಮನೆಯ ಆಗುಹೋಗುಗಳನ್ನು ಪುಸ್ತಕಗಳಲ್ಲಿ ಹಿರಿಯರು ಒಪ್ಪವಾಗಿ ಬರೆದಿಡುತ್ತಿದ್ದರು. ಬರೆದಿಟ್ಟ ಲೆಕ್ಕಪತ್ರಗಳನ್ನು ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಪರಿಶೀಲಿಸಿ, ಕೃಷಿ ಅಭಿವೃದ್ಧಿಯ ಯೋಜನೆಗಳನ್ನು ರೂಪಿಸುತ್ತಿದ್ದರು. ಇಂದಿಗೂ ಕೆಲವು ಪಾರಂಪರಿಕ ಮನೆಗಳಲ್ಲಿ ಶತಮಾನ ದಾಟಿದ ಲೆಕ್ಕಪುಸ್ತಕಗಳು ಕಂಡುಬರುತ್ತದೆ.

                ಕಳೆದ ಕಾಲದ ಲೆಕ್ಕದ ಓದು ಆ ಕಾಲಘಟ್ಟದ ಬದುಕನ್ನು ಬಿಂಬಿಸುತ್ತದೆ. ಹವ್ಯಾಸಗಳನ್ನು ಪ್ರತಿನಿಧಿಸುತ್ತದೆ. ಸಮಷ್ಠಿ ಕುಟುಂಬದ ಸಮಭಾವಗಳಿಗೆ ಸಾಕ್ಷಿಯಾಗುತ್ತದೆ. ಮನೆಯ ಕಾಲಾವಧಿ ಧಾರ್ಮಿಕ ಕಾಯಕಗಳಿಗೆ ಆಕರವಾಗುತ್ತದೆ. ಕೃಷಿ ಚಟುವಟಿಕೆಗಳ ಸುಭಗತೆಗೆ ಕೈಪಿಡಿಯಾಗುತ್ತದೆ.

                ಬದುಕು ಪಲ್ಲಟಗೊಳ್ಳುತ್ತಾ ಹೋದಂತೆ ಲೆಕ್ಕಗಳನ್ನು ಬರೆದಿಡುವ ಹವ್ಯಾಸಕ್ಕೆ ಮಸುಕಾಯಿತು. ವರುಷಕ್ಕೊಮ್ಮೆ ಡೈರಿ ಮಾರುಕಟ್ಟೆಯಿಂದ ತಂದರೂ ಬಿಡಿಸಲಾಗದಷ್ಟು ಬ್ಯುಸಿ. ಕೃಷಿಯ ಖರ್ಚು-ವೆಚ್ಚಗಳ ದಾಖಲೆಗಳು ಬಾಯಲ್ಲುಳಿದು, ಮಾಸದೊಳಗೆ ಮರೆವಿನ ಮರೆ ಸೇರುತ್ತದೆ.

                ಪುಣ್ಚಪ್ಪಾಡಿಯ (ದ.ಕ.) ಕೃಷಿಕ, ಉಪನ್ಯಾಸಕ ವಿವೇಕ ಆಳ್ವ ಮರೆತುಹೋಗುತ್ತಿರುವ ವ್ಯವಸ್ಥೆಯೊಂದಕ್ಕೆ ಕಾಯಕಲ್ಪದ ಯತ್ನ ಮಾಡಿದ್ದಾರೆ. ಲೆಕ್ಕಗಳನ್ನು ಬರೆದಿಡುವ ಮೂಲಕ ನಮಗೆ ನಾವೇ ಆಡಿಟರ್ ಆಗಬೇಕೆನ್ನುವ ದೂರದೃಷ್ಟಿ. ಕಳೆದ ವರುಷ ಚೊಚ್ಚಲವಾಗಿ ಹೊರತಂದ ಡೈರಿಯ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರುಷವೂ 'ಏಕ ಸೈನಿಕ' ಶ್ರಮದಿಂದ ಪ್ರಕಟಿಸಿದ್ದಾರೆ.

                 ಡೈರಿಯಲ್ವಾ, ದಶಂಬರ ಕೊನೆಗೆ ಮಾರುಕಟ್ಟೆಯಲ್ಲೂ ಸಿಗುತ್ತೆ. ಕೆಲವು ಉದ್ಯಮ ಸಂಸ್ಥೆಗಳಲ್ಲಿ ಪುಕ್ಕಟೆಯಾಗಿಯೂ ಸಿಗುತ್ತೆ. ಏನು ಮಹಾ?, ಡೈರಿಯ ವಿಚಾರ ಮಾತನಾಡುವ ಮೊದಲೇ ತೀರ್ಪು ಕಾಯ್ದಿರಿಸುವ ಬದಲು, ತೀರ್ಪು ಕೊಟ್ಟುಬಿಡುವ ಎಷ್ಟೋ ಮಂದಿಯನ್ನು ವಿವೇಕ ಆಳ್ವರು ಕಂಡಿದ್ದಾರೆ! ಇದು ತಾರೀಕು, ಸಂವತ್ಸರ, ವಾರ, ತಿಥಿ, ಕರಣ, ಘಳಿಗೆಯನ್ನು ಪ್ರತಿಯೊಂದು ಹಾಳೆಯಲ್ಲಿ ಬರೆದ ಸಿದ್ಧ ನಮೂನೆಯ ಡೈರಿಯಲ್ಲ. ಇದರಲ್ಲಿ ಕೃಷಿ, ಕೃಷಿಕರು ಪಾಲಿಸಬೇಕಾದ ಮೂಲಭೂತ ವಿಚಾರಗಳನ್ನು ತಮ್ಮ ವಿವೇಚನೆಯ ಮಿತಿಯಲ್ಲಿ ವಿವೇಕ ಆಳ್ವರು ಬಿಂಬಿಸಿದ್ದಾರೆ.

                  ಇದು ಮಾಹಿತಿ ಯುಗ. ಮೌಸ್ ಕ್ಲಿಕ್ಕೊಂದರಲ್ಲಿ ವಿಶ್ವವೇ ಕಂಪ್ಯೂನಲ್ಲಿ ಇಳಿದುಬಿಡುವಷ್ಟು ವೇಗದಲ್ಲಿದ್ದೇವೆ. 'ಎಲ್ಲವೂ ನೆಟ್ಟಿನಲ್ಲಿ ಸಿಗುತ್ತೆ' ಎಂದು ಮನಸ್ಸನ್ನು ಹಗುರ ಮಾಡಿಕೊಳ್ಳುವ ದಿನಮಾನಗಳು. ಕೃಷಿಯ ವಿಚಾರಕ್ಕೆ ಬಂದಾಗ ಎಷ್ಟು ಮಾಹಿತಿಗಳು ಕೃಷಿಕರಿಗೆ ತಲಪುತ್ತದೆ, ಎಟಕುತ್ತದೆ? ಈ ಹಿನ್ನೆಲೆಯಲ್ಲಿ ವಿವೇಕ ಆಳ್ವರು ಕೃಷಿಯ ಪ್ರಾಥಮಿಕ ವಿಚಾರಗಳನ್ನು ಸುಲಭ ಮತ್ತು ಸರಳವಾಗಿ ನೀಡುವ ಪ್ರಯತ್ನವನ್ನು ಮಾಡಿರುವುದು ಶ್ಲಾಘನೀಯ. ನೂರ ನಲವತ್ತು ಪುಟದ ಡೈರಿಯಲ್ಲಿ ಖಾಲಿ ಹಾಳೆಗಳೇ ಇಲ್ಲ!

                 ಲೆಕ್ಕಪತ್ರಗಳ ದಾಖಲಾತಿ ಮಾಡುವ ಮಾದರಿಗಳನ್ನು ನೀಡಿದ್ದಾರೆ. ಅದರಲ್ಲಿ ಸೇರಲೇಬೇಕಾದ ವಿದ್ಯುತ್, ಅಡುಗೆ ಅನಿಲ, ದೂರವಾಣಿ, ಪತ್ರಿಕೆ, ಮೊಬೈಲ್, ನೀರಿಗಾದ ವೆಚ್ಚಗಳನ್ನು ಬರೆದಿಡಲು ಪ್ರತ್ಯೇಕ ಕಾಲಂ ವ್ಯವಸ್ಥೆ. ಕೃಷಿ ಚಟುವಟಿಕೆಗಳಲ್ಲಿ ಬಳಸಲ್ಪಡುವ ಪರಿಕರಗಳ ಮಾಹಿತಿಗಳು ಸುಲಭದಲ್ಲಿ ಸಿಗಲು ದಾಖಲಾತಿಯೊಂದೇ ದಾರಿ. ಜತೆಗೆ ಬೆಳೆಗಳ ಮಾಹಿತಿ, ಕುಟುಂಬದ ದಾಖಲೆ, ಸಾಲದ ಮತ್ತು ಪಾಲಿಸಿಗಳ ವಿವರ, ಭೂ ದಾಖಲಾತಿ, ವಾಹನ, ಜಾನುವಾರು - ಇವೆಲ್ಲವೂ ಡೈರಿ ಪುಟವನ್ನು ತಿರುವಿದಾಗ ಕೃಷಿಕರಿಗೆ ಸುಲಭದಲ್ಲಿ ಸಿಗುವಂತಾಗಬೇಕು ಎನ್ನುವ ಆಶಯ.

                ಸರಕಾರಿ ಪ್ರಣೀತವಾದ ಮಾಹಿತಿಗಳು ಪ್ರಾಥಮಿಕ ಜ್ಞಾನದ ಹಸಿವನ್ನಷ್ಟೇ ನೀಗಿಸಬಹುದು. ಭತ್ತದ ಕೃಷಿಯಲ್ಲಿ ಯಾಂತ್ರೀಕೃತ ನಾಟಿ, ಸುಧಾರಿತ ಬಾಳೆ ಬೇಸಾಯ, ಔಷಧೀಯ ಮತ್ತು ಸುಗಂಧದ್ರವ್ಯ ಬೆಳೆಗಳು, ಭಾರತೀಯ ಗೋತಳಿಗಳು, ಜೇನು ಕೃಷಿ, ಸಿಗಡಿ ಕೃಷಿ, ವೈಜ್ಞಾನಿಕ ಬೋರ್ಡೋ ದ್ರಾವಣ ತಯಾರಿ ಕ್ರಮ..ಗಳ ಪ್ರಸ್ತುತಿ.

                 ಹಳ್ಳಿಮದ್ದು, ಹಳ್ಳಿಯಡುಗೆ, ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ಉತ್ಪಾದನಾ ತಾಂತ್ರಿಕತೆ, ಕೋಳಿ ಸಾಕಣೆ, ಉಡುಪಿ ಮಲ್ಲಿಗೆ, ಕಲ್ಲಂಗಡಿ ಕೃಷಿ.. ಹೀಗೆ ನಂನಮ್ಮ ಅಭಿರುಚಿಗೆ ತಕ್ಕಂತೆ ಮಾಹಿತಿಗಳ ನಿರೂಪಣೆ. ಸಂವತ್ಸರಗಳು, ನಕ್ಷತ್ರಗಳು, ಪ್ರಮುಖ ವಿಳಾಸಗಳು, ದೂರವಾಣಿ ಸಂಖ್ಯೆಗಳನ್ನು ನೀಡಿದ್ದಾರೆ. ಕೃಷಿಕರ ಅನುಭವಗಳನ್ನು ಮುಂದಿನ ವರುಷದ ಡೈರಿಯಲ್ಲಿ ದಾಖಲಿಸಬೇಕೆನ್ನುವುದು ಅವರ ಆಶಯ.

                ಪ್ರತಿಯೊಬ್ಬ ಕೃಷಿಕನೂ ಕೃಷಿಗೆ ಸಂಬಂಧಪಟ್ಟ ದಾಖಲೆಗಳನ್ನು ವ್ಯವಸ್ಥಿತ ರೂಪದಲ್ಲಿ ಬರೆದಿಟ್ಟುಕೊಂಡರೆ ತನ್ನ ಲಾಭ ನಷ್ಟಗಳನ್ನು, ಮುಂದಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುಕೂಲವಾಗುತ್ತದೆ. ಸಮಸ್ಯೆಗಳು ಬಂದಾಗ ಸರಕಾರದೊಂದಿಗೆ ವ್ಯವಹರಿಸಲು ಸಹಕಾರಿಯಾಗುತ್ತದೆ, ಡೈರಿ ರಚನೆಯ ಹಿಂದಿನ ಆಶಯವನ್ನು ವಿವರಿಸುತ್ತಾರೆ ವಿವೇಕ್.

                    ಇವರು ಸ್ವಯಂ ಆಸಕ್ತಿಯಿಂದ ಕೃಷಿ ಡೈರಿ ಮತ್ತು ಮಾಹಿತಿ ಪುಸ್ತಕವನ್ನು ಪ್ರಕಟಿಸಿದ್ದಾರೆ. ಆವರ ಶ್ರಮವನ್ನು ಶ್ಲಾಘಿಸಿ ಬೆನ್ನುತಟ್ಟುವುದರೊಂದಿಗೆ ಪುಸ್ತಕವನ್ನೂ ಖರೀದಿಸಿದರೆ ಅದು ಶ್ರಮಕ್ಕೆ ಕೊಡುವ ಪ್ರತಿಫಲ. ಪುಸ್ತಕದ ಬೆಲೆ ನೂರ ಹತ್ತು ರೂಪಾಯಿ.

                   ಆಸಕ್ತರಿಗಾಗಿ ವಿವೇಕ ಆಳ್ವರ ಸಂಪರ್ಕ : 94492 68383


0 comments:

Post a Comment