ಮಡಿಕೇರಿಯ ಕೃಷಿಕ, ಇಂಜಿನಿಯರ್ ಶಿವಕುಮಾರ್ ಮನೆಯಲ್ಲಿ ಮಧ್ಯಾಹ್ನದೂಟ. ಅವರಮ್ಮ ಶಶಿಕಲಾ ಬದನೆಯ ಸಾಂಬಾರು ಬಡಿಸುತ್ತಾ ಕೊನೆಗೆ ರುಚಿ ಹೇಳುವಂತೆ ತಾಕೀತು ಮಾಡಿದರು. ಹೋಳು ತಿನ್ನುತ್ತಿದ್ದಂತೆ ಬದನೆಯ ಒಳಮಾಸಿನ ರಚನೆಯಲ್ಲಿ ವ್ಯತ್ಯಾಸವಿರುವುದು ಅನುಭವಕ್ಕೆ ಬಂತು. ಉಳಿದ ಬದನೆಗಿಂತ ರುಚಿಯಲ್ಲಿ ವ್ಯತ್ಯಾಸವಿಲ್ಲ, ಆದರೆ ಗಂಟಲಲ್ಲಿಳಿಯುವಾಗ ಸಣ್ಣಗೆ ಚೊಗರಿನ ಅನುಭವ. ಇದು ಮುಸುಕಿನ ಬದನೆ.
ಕೊಡಗರಹಳ್ಳಿಯ ಸ್ನೇಹಿತ ರಾಜೇಶ್ ಮುಸುಕಿನ ಬದನೆ ಬೆಳೆಯುತ್ತಿದ್ದು, ಅವರು ಬೀಜ ನೀಡಿದ್ದರು. ಶಿವಕುಮಾರ್ ಗಾಳಿಬೀಡಿನ ತನ್ನ ತೋಟದಲ್ಲಿ ಬೆಳೆದರು. ತೋಟದ ಕೆಲಸವನ್ನು ನಿರ್ವಹಿಸುವ ನಾರಾಯಣರಿಂದ ಆರೈಕೆ. ಗಿಡಗಳು ಚೆನ್ನಾಗಿ ಬೆಳೆದವು. ಕಾಯಿ ಬಿಡಲು ಆರು ತಿಂಗಳು ಬೇಕಾಯಿತು. ಐದು ಗಿಡಗಳಿದ್ದರೆ ವಾರಕ್ಕೆ ಮೂರು ದಿವಸ ಇದರದ್ದೇ ಸಾಂಬಾರ್, ಪಲ್ಯ ಮಾಡಬಹುದು ಎನ್ನುವ ಶಿಫಾರಸು.
ಆರಂಭದಲ್ಲಿ ಗೊಬ್ಬರ, ನೀರು ಕೊಟ್ಟು ಗಿಡ ಬೆಳೆಸಿದರೆ ಮತ್ತೆ ತೊಂದ್ರೆಯಿಲ್ಲ. ಆಮೇಲೆ ನೀರು ಆಗಾಗ್ಗೆ ಕೊಟ್ರೂ ಸಾಕಾಗುತ್ತದೆ, ಎಂಬ ಅನುಭವ ಶಿವಕುಮಾರ್ ಅವರದು. ಬೀಜಗಳಿಗೆ ಯಾವುದೇ ಉಪಚಾರ ಬೇಕಾಗಿಲ್ಲ. ಮೊಳಕೆ ಬಂದು ಐದರಿಂದ ಆರು ತಿಂಗಳಲ್ಲಿ ಕಾಯಿ ಬಿಡಲು ಶುರು. ಎರಡರಿಂದ ಮೂರು ವರುಷದ ವರೆಗೂ ನಿರಂತರ ಕಾಯಿ ಬಿಡುವ ಸಾಮಥ್ರ್ಯ.
ಕಾಯಿಯ ಅರ್ಧ ಭಾಗವನ್ನು ಆವರಿಸುವ ಮುಸುಕು (ಕವಚ) ಇರುವುದರಿಂದಲೋ ಏನೋ ಇದಕ್ಕೆ ಮುಸುಕಿನ ಬದನೆ ಎಂದು ಹೆಸರು ಬಂದಿರಬಹುದು. ದೊಡ್ಡ ಹೈಬ್ರೀಡ್ ಟೊಮೆಟೋ ಗಾತ್ರ. ಮೊಟ್ಟೆ ಹಣ್ಣಿನ ಗಾತ್ರಕ್ಕೂ ಹೋಲಿಸಬಹುದು. ಇದರ ಎಲೆಗಳು ಥೇಟ್ ದತ್ತೂರದ ಎಲೆಯ ಹಾಗೆ. ಗಿಡದ ಗಂಟು ಗಂಟಿನಲ್ಲಿ ಚಿಗುರು. ಮುಳ್ಳುಗಳಿಲ್ಲ. ಒಂದಡಿ ಎತ್ತರಕ್ಕೆ ಬೆಳೆಯುತ್ತದೆ. ಬದನೆ ಬಲಿತು ಮಾಗುವಾಗ ಅರಶಿನ ಬಣ್ಣವಾಗಿ, ಕೊನೆಗೆ ಕಪ್ಪಾಗುತ್ತದೆ.
"ಇದಕ್ಕೆ ರೋಗವಿಲ್ಲ ಸಾರ್, ಯಾವುದೇ ರೋಗ ಅಟ್ಯಾಕ್ ಆಗಿಲ್ಲ. ಮುಸುಕಿನ ಬದನೆ ಜತೆಗೆ ಊರಿನ ಬದನೆಯನ್ನೂ ನೆಟ್ಟಿದ್ವಿ. ಅದು ರೋಗದಿಂದಾಗಿ ಕಾಯಿ ಕೊಡಲೇ ಇಲ್ಲ." ನಾರಾಯಣ ಬೇಸರ. ಕೆಲವೊಂದು ಬದನೆ ತಳಿಗಳಲ್ಲಿ ಕಾಯಿಕೊರಕ ಹುಳದ ಬಾಧೆಯಿಂದಾಗಿ ಕಾಯಿ ಸಿಕ್ಕರೂ ಉಪಯೋಗಕ್ಕಿಲ್ಲ. ಮುಸುಕಿನ ಬದನೆಗೆ ಕಾಯಿಕೊರಕ ಬಾಧೆ ಇಲ್ಲ. ಬಹುಶಃ ಇದು ಈ ಭಾಗಕ್ಕೆ ಹೊಸದಲ್ವಾ. ಒಂದೆರಡು ವರುಷದಲ್ಲಿ ಹುಳಕ್ಕೆ ರುಚಿ ಸಿಕ್ಕಿ ಇದಕ್ಕೂ ಬಾರದು ಎನ್ನುವಂತಿಲ್ಲ,' ಶಿವಕುಮಾರ್ ಗುಮಾನಿ.
ಖಾದ್ಯ ಮಾಡುವಾಗ ಹೋಳುಗಳನ್ನು ಹುಳಿ ಮಜ್ಜಿಗೆಯಲ್ಲಿ ಸ್ವಲ್ಪ ಹೊತ್ತು ನೆನಸಿದರೆ ಚೊಗರು (ಕನೆರು) ಬಿಟ್ಟುಕೊಡುತ್ತದೆ. ಪದಾರ್ಥ ಮಾಡುವಾಗ ಬೆಲ್ಲ ಸೇರಿಸಿಕೊಂಡರೆ ಚೊಗರು ನಾಪತ್ತೆ. ಖಾದ್ಯಕ್ಕೆ ಎಳೆಯ ಕಾಯಿ ಓಕೆ. ಸಾಂಬಾರು, ಕಾಯಿಹುಳಿ, ಪಲ್ಯಕ್ಕೆ ಹೊಂದುತ್ತದೆ.
ಕಡಿಮೆ ನೀರು ಬೇಡುವ ತಳಿ. ಹೆಚ್ಚು ಆರೈಕೆ ಬೇಡ. ಹಿತ್ತಿಲಿನಲ್ಲಿ ಒಂದೆರಡು ಗಿಡವಿದ್ದರೆ ಸದಾ ಕಾಯಿ ಬಿಡುತ್ತಿರುತ್ತದೆ. "ಕೊಡಗಿನ ಭಾಗದಲ್ಲಿ ತರಕಾರಿಯನ್ನು ಆಯ್ಕೆ ಮಾಡಲು ಬಹುತೇಕರಿಗೆ ಗೊತ್ತಿಲ್ಲ. ಮಾಮೂಲಿ ಬೀನ್ಸ್, ಟೊಮೆಟೋ, ಹೂಕೋಸು, ಆಲೂಗೆಡ್ಡೆ.. ಇತ್ಯಾದಿ. ಹೊಸದನ್ನು ಹುಡುಕುವ ಮನಸ್ಸು ಬೇಕು," ಎನ್ನುವ ಶಿವಕುಮಾರ್, ಮುಸುಕಿನ ಬದನೆಗೆ ಕುದನೆಯನ್ನು ಕಸಿ ಮಾಡುವ ಯೋಚನೆಯಲ್ಲಿದ್ದಾರೆ.
ಈಚೆಗೆ ಮಡಿಕೇರಿ ಸಂತೆಗೆ ಬಂದ ಉದ್ದ ಗಾತ್ರದ ಟೊಮೆಟೋ ಇವರ ಕಣ್ಣಿಗೆ ಬಿತ್ತು. ಅದನ್ನು ಕ್ಲಿಕ್ಕಿಸಿ ಮಿಂಚಂಚೆಯಲ್ಲಿ ಆಸಕ್ತರಿಗೆ ರವಾನಿಸಿದರು. ಕರಿಂಗಾಣದ ಡಾ. ಕೆ.ಎಸ್.ಕಾಮತರು ಇದು ’ಇಟೆಲಿ ಟೊಮೆಟೋ’ ಎಂದು ಪತ್ತೆ ಮಾಡಿದರು. ಮುಂದಿನ ತಳಿ ಅಭಿವೃದ್ಧಿಗೆ ಇಟೆಲಿ ಟೊಮೆಟಾದ ಡಾಟಾ ಶಿವಕುಮಾರರ ಕಂಪ್ಯೂ ಸೇರಿತು.
ವೃತ್ತಿ ಸಂಬಂಧಿ ವಿಚಾರವಾಗಿ ಓಡಾಡುತ್ತಾ ಇರುವ ಶಿವಕುಮಾರರ ಜೋಳಿಗೆಯಲ್ಲಿ ಕ್ಯಾಮರಾ ತಪ್ಪುವುದೇ ಇಲ್ಲ. ತನಗೆ ಹೊಸತು ಕಂಡರೆ ಸಾಕು, ಕ್ಲಿಕ್ಕಿಸಿ ಕಂಪ್ಯೂ ಸೇರಿಸಿ ಅದರ ಹಿಂದೆ ಬೀಳುತ್ತಾರೆ. ಡಾಟಾ ಸಂಗ್ರಹಿಸುತ್ತಾರೆ. ಅವರ ಈ ವಿಶೇಷ ಹವ್ಯಾಸದಿಂದಾಗಿಯೇ ಅವರ ಗಾಳಿಬೀಡು ಮತ್ತು ಪೆರಿಯಪಟ್ಟಣ ತೋಟಗಳಲ್ಲಿ ವಿವಿಧ ಹಣ್ಣು, ತರಕಾರಿ, ಸಸ್ಯಗಳ ಸಂಗ್ರಹಗಳಿವೆ. (94480 05614)
0 comments:
Post a Comment