Friday, March 1, 2013

ಬದುಕಿನ ಕೈತಾಂಗು ಈ ಕೃಷಿಮೇಳ


            ಬೆಂಗಳೂರು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯವು ವರುಷಕ್ಕೊಮ್ಮೆ ಅದ್ದೂರಿ ಕೃಷಿಮೇಳವನ್ನು ಆಯೋಜಿಸುತ್ತದೆ. ಐನೂರಕ್ಕೂ ಮಿಕ್ಕಿದ ಮಳಿಗೆಗಳು, ಸಮಸ್ಯೆಯತ್ತ ನೋಟ ಬೀರುವ ಗೋಷ್ಠಿಗಳು, ಸಾಧಕರಿಗೆ ಪ್ರಶಸ್ತಿಗಳು, ದೂರದೂರಿನ ಕೃಷಿಕರ ಭಾಗಿ, ನಾಡಿನ ದೊರೆಗಳ ಅಣಿಮುತ್ತುಗಳು.. ಹೀಗೆ ಮೂರ್ನಾಲ್ಕು ದಿವಸಗಳಲ್ಲಿ ಕೃಷಿಯದ್ದೇ ವಾತಾವರಣ. ಕೃಷಿ ಖುಷಿಯ ಮಾತುಕತೆ. ರಾಜ್ಯ ಮಟ್ಟದಲ್ಲಿ ನಡೆಯುವ ಯಶಸ್ವೀ ಕೃಷಿಮೇಳ.

                ನಮ್ಮ ನಡುವೆ ಧುತ್ತೆಂದು ರೂಪುಗೊಳ್ಳುವ ಸರಕಾರಿ ಪ್ರಣೀತ ಕೃಷಿ ಉತ್ಸವಗಳ ಗೋಷ್ಠಿಯಲ್ಲೊಮ್ಮೆ ಇಣುಕಿ. ಪ್ರೇಕ್ಷಕರಿಗಿಂತ (ಕೃಷಿಕರು) ಹೆಚ್ಚು ಮಂದಿ ವೇದಿಕೆಯಲ್ಲಿರುತ್ತಾರೆ. 'ಅವರೆ.. ಇವರೇ..' ಎನ್ನುತ್ತಾ ಶುರುವಾಗುವ ಕೊರೆತಗಳು ಕೃಷಿಕನನ್ನು ಟಚ್ ಮಾಡುವುದಿಲ್ಲ! 'ನಾವು ಜಾಹೀರಾತು ನೀಡಿದ್ದೀವಿ. ಇಲಾಖೆಗಳಿಗೆ ಆಮಂತ್ರಣ ಕೊಟ್ಟಿದ್ದೀವಿ, ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದೀವಿ..' ಹೀಗೆ ಕೃಷಿಕ ಅನುಪಸ್ಥಿತಿಗೆ ಸಬೂಬು ಹೇಳುವ ಮಾಮೂಲಿ ಸರಕಾರಿ ಖಯಾಲಿ ಉತ್ತರಗಳು.

                ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ವರುಷಕ್ಕೊಮ್ಮೆ ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಮಟ್ಟದ ಕೃಷಿ ಮೇಳ ನಡೆಸುತ್ತಿದೆ. ಸರಕಾರಿ ಕೃಷಿ ಉತ್ಸವಗಳ ವರಿಷ್ಠರು ಈ ಮೇಳದಲ್ಲಿ ಮನಃಪೂರ್ವಕ ಭಾಗವಹಿಸಬೇಕು. ಇಲ್ಲಿನ ಕಾರ್ಯಹೂರಣವನ್ನು ದಾಖಲಿಸಿ, ತಮ್ಮ ಮೇಳದಲ್ಲಿ ಮಾಮೂಲಿ 'ಶಿಷ್ಟಾಚಾರ'ವನ್ನು ಸಡಿಲಗೊಳಿಸಿ ಅನುಷ್ಠಾನಕ್ಕೆ ಪ್ರಯತ್ನಿಸಿದಾಗ ಉತ್ಸವಗಳ ಸ್ವರೂಪವೇ ಬದಲಾಗಿ ಬಿಡಬಹುದು. ರೈತ 'ಶೋಪೀಸ್' ಆಗುವುದರ ಬದಲು, ಆತನ ಮಾತಿಗೆ ಕಿವಿಯಾದಾಗ ಭಾವನೆಗಳು ಅನುಭವ ಕಥನ ಹೇಳುತ್ತವೆ.

                ಸರಕಾರಿ ಕಾರ್ಯಕ್ರಮದ ಇನ್ನೊಂದು ಮಗ್ಗುಲು ನೋಡೋಣ. ಕೃಷಿಕರ ಏಳ್ಗೆಗಾಗಿ ತರಬೇತಿ, ವಿಚಾರ ಸಂಕಿರಣಗಳು ಇಲಾಖೆಗಳ, ಸಂಶೋಧನಾ ಕೇಂದ್ರಗಳ ಪ್ಲೆಕ್ಸಿಯಡಿ ನಡೆಯುತ್ತವೆ. ಕೃಷಿಕರಿಗೆ ಅರ್ಥವಾಗದ, ಅಪ್ಡೇಟ್ ಆಗದ (!) ಪವರ್ಪಾಯಿಂಟ್ ಪ್ರಸ್ತುತಿ. ಆಂಗ್ಲ ಭಾಷೆಯಲ್ಲೇ ಮಾತನಾಡುವ ಹಿರಿತನ, ಹಿರಿಯ ವರಿಷ್ಠರಿಂದ ಬೋಧನೆ. ಉದ್ಘಾಟನೆ ಮುಗಿಯುವಾಗ ಭೋಜನ ಶಾಲೆಯಲ್ಲಿ ಅನ್ನದ ಬಟ್ಟಲು ಸದ್ದು ಮಾಡುತ್ತವೆ. ಮಿಕ್ಕುಳಿದ ಹೊತ್ತಲ್ಲಿ 'ಕೃಷಿಕ ಉದ್ಧಾರ'ದ ಕಲಾಪಗಳು. ಈ ವ್ಯವಸ್ಥೆಗಳು ಗೊತ್ತಿರುವ ಬಹಳಷ್ಟು ಕೃಷಿಕರು ದೂರವುಳಿಯುತ್ತಾರೆ.

                ಈ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿಮೇಳವನ್ನು ತೂಗಿ ನೋಡಿದರೆ ಕೃಷಿಕನಿಗಿಲ್ಲಿ ಮೊದಲ ಮಣೆ. ಆತನ ಮಾತಿಗೆ ಮನ್ನಣೆ. ಸುಖ ದುಃಖಗಳ ವಿನಿಮಯ. ಕೃಷಿಯ ಸೋಲಿನ ಕಥನ. ಗೆಲುವಿನ ದಾರಿ. ಮೂರು ದಿವಸಗಳ ಮೇಳದಲ್ಲಿ ಹಳ್ಳಿ ಸೊಗಡಿನ ವಾತಾವರಣ ರೂಪೀಕರಣ. ಕೃಷಿಕ ಇಲ್ಲಿ ಭಾಗವಹಿಸುವುದಲ್ಲ, ಸ್ವಯಂಪ್ರೇರಿತವಾಗಿ ತೊಡಗಿಸಿಕೊಳ್ಳುವಿಕೆ.

                ಕೃಷಿ ಯಶೋಗಾಥೆಗಳಿಗೆ ಮೇಳದಲ್ಲಿ ಆದ್ಯತೆ. ಗೋಷ್ಠಿಗಳಲ್ಲಿ ಸಮಕಾಲೀನ ಸಮಸ್ಯೆ, ಸ್ಥಿತಿಗಳ ಪ್ರಸ್ತುತಿ. ವೇದಿಕೆಯಲ್ಲಿ ಕೃಷಿಕರೊಂದಿಗೆ ವಿಜ್ಞಾನಿಗಳಿರುತ್ತಾರೆ, ಅಧಿಕಾರಿಗಳಿರುತ್ತಾರೆ, ಅನುಭವಿಗಳಿರುತ್ತಾರೆ. ಬರೇ ಕೊರೆತವಾಗದೆ ಅನುಭವದ ರಸಪಾಕಗಳು ಪ್ರೇಕ್ಷಕರೊಂದಿಗೆ ಅನುಸಂಧಾನ ಮಾಡುತ್ತವೆ. ಕೃಷಿಯಲ್ಲಿ ಹೊಸ ಹೆಜ್ಜೆಯಿರಿಸಿದ ಕೃಷಿಕನಿಗೆ ಹುರುಪು. ಖುಷಿಯಿಂದ ಕೃಷಿಯಲ್ಲಿರಲು ಅನುವು ಮಾಡಿ ಕೊಡುವಷ್ಟು ಗೋಷ್ಠಿಗಳು ಸಂಪನ್ನವಾಗುವುದು ಮೇಳದ ಹೈಲೈಟ್ಸ್.

                ಗೋಷ್ಠಿಯಿಂದಾಗಿಯೇ ಖುಷಿ, ಸಮಸ್ಯೆ ಪರಿಹಾರ ಸಾಧ್ಯವೇ? ಪ್ರಶ್ನೆ ಸಹಜ. ಪ್ರಕೃತ ಕಾಲಘಟ್ಟದ ಕೃಷಿಕ್ಷೇತ್ರವನ್ನು ಗಮನಿಸಿ. ಸಮಸ್ಯೆಗಳಿವೆ ನಿಜ. ಬಹುತೇಕ ಸಮಸ್ಯೆಗೆ ಪರಿಹಾರವು ಕೈಗೆಟಕುವ ಅಂತರದಲ್ಲಿವೆ. ಕಾಲದ ಬದಲಾವಣೆಯಿಂದಾಗಿ ಇನ್ನೊಂದಿಷ್ಟು ನೆನೆಗುದಿಯಲ್ಲಿವೆ. ಸಮಸ್ಯೆಯನ್ನೇ ವೈಭವೀಕರಿಸುತ್ತಾ, ಅದಕ್ಕೆ ಪರಿಹಾರ, ಪರ್ಯಾಯ ದಾರಿಯನ್ನು ಹುಡುಕದೇ ಇರುವವರಿಗೆ ಗೋಷ್ಠಿಗಳು ನೀರಸವಾದರೆ ಆಶ್ಚರ್ಯವಿಲ್ಲ.

                 ಕೃಷಿಯ ಸಂಕಟದ ಸಮಯದಲ್ಲಿ ತಮ್ಮ ಮಿತಿಯಲ್ಲಿ ಪರ್ಯಾಯ ಮಾರ್ಗವನ್ನು ಕಂಡುಕೊಂಡ ಎಷ್ಟೊಂದು ಕೃಷಿಕರು ಇಲ್ಲ. ಇಂತಹವರ ಅನುಭವ ವಿನಿಮಯ ಗೊಣಗಾಟವನ್ನು ಸ್ವಲ್ಪ ಮಟ್ಟಿಗೆ ಹಗುರಗೊಳಿಸುವಲ್ಲಿ ಸಹಕಾರಿ. ಕೃಷಿಯಲ್ಲಿ ಸೋತವರು, ತಾನೆಲ್ಲಿ ಸೋತಿದ್ದೇನೆ ಎನ್ನುವ ಅನುಭವ ಇದೆಯಲ್ಲಾ, ಅದು ಇನ್ನೊಬ್ಬರಿಗೆ ಕೈತಾಂಗು.

                 ಇಂತಹ ಕೈತಾಂಗಿನ ಕೆಲಸವನ್ನು ಮಾಡುತ್ತಿದೆ, ಗ್ರಾಮಾಭಿವೃದ್ಧಿ ಯೋಜನೆ. ಅದರ ಮುಖವಾಣಿಯಾಗಿ ಕೃಷಿ ಮೇಳ ದೂರದೂರಿನ ಕೃಷಿಕರನ್ನು ಮೇಳದ ಮೂಲಕ ಒಗ್ಗೂಡಿಸುತ್ತಿದೆ. ಯಶೋಗಾಥೆಗಳನ್ನು ಮುಂದಿಡುತ್ತಿದೆ. ಸಾಧಕ ರೈತರನ್ನು ಗೌರವಿಸುತ್ತಿದೆ. ಮೇಳ ನಡೆಯುವ ಊರಿನ ಮರೆಯುವ, ಮರೆತುಹೋದ ವಿಚಾರಗಳಿಗೆ ಪ್ರಾತ್ಯಕ್ಷಿಕೆಯ ರೂಪ ಕೊಟ್ಟು, ಬದುಕನ್ನು ಇನ್ನೊಮ್ಮೆ ಓದಲು ನೆನಪಿಸುತ್ತದೆ.

                  ಕಮ್ಮಾರಿಕೆ, ಭತ್ತ ಕುಟ್ಟುವುದು, ಕುಂಬಾರಿಕೆ, ಮುಡಿ ಕಟ್ಟುವುದು, ಮುಟ್ಟಾಳೆ ತಯಾರಿ, ಬಿದಿರು-ಕಾಡುಬಳ್ಳಿಗಳ ಮೂಲಕ ಬುಟ್ಟಿಗಳನ್ನು ಹೆಣೆಯುವುದು, ನೇಗಿಲು, ನೊಗ.. ಹಳ್ಳಿಯ ಈ ಕೌಶಲಗಳು ಮರೆಯಾಗುತ್ತಿದ್ದು ಕಾಲದ ಕಥನಗಳಾಗಿವೆ. ಅವನ್ನೆಲ್ಲಾ ಪ್ರಾತ್ಯಕ್ಷಿಕೆಯಲ್ಲಿ ಮತ್ತೆ ನೋಡುವ ಅವಕಾಶ! 'ಓ.. ಇದೆಲ್ಲಾ ನಮ್ಮ ಕಾಲದಲ್ಲಿ ಅನ್ನ ನೀಡುವ ಉಪಾಧಿಗಳಾಗಿದ್ದುವು' ಎನ್ನುವ ಹಿರಿಯರು, 'ಹೀಗೂ ಇದೆಯಾ, ಅವೆಲ್ಲಾ ಎಲ್ಲಿ ಹೋದುವು' ಎನ್ನುವ ಕಾನ್ವೆಂಟ್ ಹುಡುಗನ ಪ್ರಶ್ನೆಗೆ ಪೆಚ್ಚಾಗುವ ಅಮ್ಮಾಪ್ಪ. ಪ್ರಾತ್ಯಕ್ಷಿಕೆಯಲ್ಲಾದರೂ ಉಳಿದುಕೊಂಡಿವೆಯಲ್ಲಾ.. ಅದೇ ಸಮಾಧಾನ.

                    ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಸಂಕಟದ ದಿವಸವನ್ನು ಗ್ರಹಿಸಿಕೊಂಡೇ ತನ್ನ ಕಾರ್ಯವನ್ನು ಕನ್ನಾಡಿನಾದ್ಯಂತ ವಿಸ್ತರಿಸುತ್ತಿದೆ. ಹಳ್ಳಿಗಳಿಗೆ ನುಗ್ಗಿದೆ. ಮನೆಯನ್ನು ಪ್ರವೇಶಿಸಿದೆ. ಸಂಸ್ಕಾರದ ಪಾಠ ಮಾಡಿದೆ. ಬದುಕಿನ ಸುಭಗತೆಯನ್ನು ಹೇಳಿದೆ. ಉಡುವ ಉಡುಪಿನಿಂದ, ಅನ್ನದ ಬಟ್ಟಲಿನ ತನಕದ ಶುಚಿ-ರುಚಿಯತ್ತ ಗಮನ ಹರಿಸಿದೆ. ಹಾಗಾಗಿಯೇ ಹಳ್ಳಿ ಮನೆಗೊಮ್ಮೆ ಹೋದರೆ ಸಾಕು; ನಗುಮುಖದ ಸ್ವಾಗತ, ಬಾಯಾರಿಕೆ, ಉಭಯಕುಶಲೋಪರಿ.. ಇಷ್ಟು ಸಂಸ್ಕಾರ ಸಿಕ್ಕ ಮಹಿಳೆಯರು ಮೇಳದಲ್ಲಿ ವ್ಯವಸ್ಥಿತವಾಗಿ ಭಾಗವಹಿಸುವುದನ್ನು ಕಾಣಬಹುದು.

                    ನಡೆಯುವ ಗೋಷ್ಠಿಗಳಲ್ಲಿ ಶಿಸ್ತುಬದ್ಧ ನಡವಳಿಕೆ. ಕಲಾಪಗಳು ಎಷ್ಟು ಅರ್ಥವಾಗಿವೆ, ಅರ್ಥವಾಗುತ್ತವೆ ಎಂಬುದು ಬೇರೆ ಮಾತು. ಆದರೆ ಭಾಗವಹಿಸಿದವರಲ್ಲಿ ಬೆರಳೆಣಿಕೆಯ ಮಂದಿಗಾದರೂ ಹೊಕ್ಕ ವಿಚಾರಗಳು ದೊಡ್ಡ ಬದಲಾವಣೆ ತರಬಲ್ಲುದು. ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಳದಲ್ಲಿ ಇಂತಹ ಅರಿವನ್ನು ಬಿಂಬಿಸುವ ಕೆಲಸಗಳು ನಿರಂತರ.
ಮದ್ಯಪಾನ ಚಟದಿಂದ ದೂರಮಾಡುವ ಶಿಬಿರಗಳು ಯೋಜನೆಯ ಯಶಸ್ವೀ ಕಾರ್ಯಹೂರಣ. ಒಡೆದುಹೋದ ಕುಟುಂಬಗಳು ಒಂದಾಗುವ ಸ್ಥಿತಿ, ದಂಪತಿ ಸಮಸ್ಯೆ, ಕುಟುಂಬದ ಸಮಸ್ಯೆಗಳಿಗೆ ಪ್ರತ್ಯಪ್ರತ್ಯೇಕ ಗಮನ. ಕೃಷಿ ಮೇಳದ ಎರಡನೇ ದಿನದೊಂದು ಗೋಷ್ಠಿಯಲ್ಲಂತೂ ಸಾಮಾಜಿಕ ಸಮಸ್ಯೆಗಳ ನಿವಾರಣಾ ಯಶೋಗಾಥೆಗಳ ಪ್ರಸ್ತುತಿ. ಗಂಡನ ಕುಡಿತವನ್ನು ಬಿಡಿಸಿ, ಸಂತೋಷದಿಂದಿರುವ ಹೆಂಡತಿ ವೇದಿಕೆಯಲ್ಲಿ ತನ್ನ ಯಶವನ್ನು ಹೇಳುತ್ತಾ ಹೋದಂತೆ ಭಾವಗಳು ಮಾತನಾಡುತ್ತವೆ. ಬುದ್ಧಿ ಚುರುಕಾಗುತ್ತವೆ. ಆ ಮಾತಿನ ಸಂದೇಶಗಳು ಇನ್ನೊಂದು ಕುಟುಂಬಕ್ಕೆ ಹಿತವಚನವಾಗುತ್ತವೆ.

                  ಕೃಷಿ ಅಂದರೆ ಹೊಲದಲ್ಲಿ ದುಡಿಯುವ ಪ್ರಕ್ರಿಯೆ ಮಾತ್ರವಲ್ಲ. ಅದರಲ್ಲಿ ಕೃಷಿಕನ ಕುಟುಂಬವಿದೆ, ನೆರೆಕರೆಯಿದೆ, ಪರಿಸರವಿದೆ, ನೋವು ನಲಿವಿದೆ, ಸಮಸ್ಯೆಯಿದೆ. ಇವೆಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ಕೃಷಿ ಮೇಳ ನಡೆಯುತ್ತದೆ. ಕೃಷಿ, ಕೃಷಿಕನಿಗೆ ಇದ್ದಷ್ಟೇ ಮಹತ್ವ ಕೃಷಿ ಕುಟುಂಬಕ್ಕೂ ಕೊಟ್ಟಿರುವುದು ಮೇಳದ ಧನಾಂಶ. ಮೂರು ದಿವಸ ನಡೆಯುವ ಮೇಳದಲ್ಲಿ ಯೋಜನೆಯ ರೂವಾರಿ ಡಾ.ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಕಲಾಪಗಳಲ್ಲಿ ಉಪಸ್ಥಿತರಿರುತ್ತಾರೆ. ಈ ಸಲದ ಕೃಷಿ ಮೇಳವು ಕುಮಟಾದಲ್ಲಿ (ಫೆಬ್ರವರಿ 21 ರಿಂದ 23ರ ತನಕ) ನಡೆದಿತ್ತು. ಇದು ಮೂವತ್ತಮೂರನೇ ಮೇಳ.

                  ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿ ಹಿರಿದಾಗುತ್ತಿದೆ. ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸುತ್ತಿದೆ. ಕ್ಷೇತ್ರ ಹಿರಿದಾಗುತ್ತಿದ್ದಂತೆ ಯಶೋಗಾಥೆಗಳನ್ನು ವರುಷದ ಕೃಷಿ ಮೇಳದಲ್ಲಿ ಬಿಂಬಿಸಲು ತ್ರಾಸ. ಅದಕ್ಕಾಗಿ ವಲಯ, ಗ್ರಾಮ, ತಾಲೂಕು ಮಟ್ಟದ ಕೃಷಿ ಮೇಳಗಳನ್ನು ಆಯೋಜಿಸುತ್ತಿದೆ. ಸ್ಥಳಿಯ ಕೃಷಿ, ಸಮಸ್ಯೆ, ಮೌಲ್ಯವರ್ಧನೆ, ಮಾರುಕಟ್ಟೆ ವ್ಯವಸ್ಥೆಯತ್ತ ಯೋಜಿಸಲು, ಯೋಚಿಸಲು ತಾಲೂಕಿನೊಳಗೆ ನಡೆಯುವ ಮೇಳಗಳು ಸಹಕಾರಿ.

                  'ಇದರಿಂದಾಗಿ ಪಕ್ಕದ ಮನೆಯವನ, ನೆರೆಯ ಗ್ರಾಮದವನ ಕೃಷಿ ವ್ಯವಸ್ಥೆಗಳು, ಯಶೋಗಾಥೆಗಳನ್ನು ತಿಳಿಯಲು ಸಹಾಯವಾಗುತ್ತದೆ' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ನಡೆಯುವ ಮೇಳಕ್ಕೆ ಪೂತರ್ಿಯಾಗಿ ಸ್ಥಳಿಯ ಸಂಪನ್ಮೂಲಗಳ ಬಳಕೆ. ಚಪ್ಪರದಿಂದ ತೊಡಗಿ ಊಟದ ವರಗೆ ಕೃಷಿಕರ ಸ್ವಯಂ ಸೇವೆ. ಮಳಿಗೆಗಳತ್ತ ವಿಶೇಷ ಗಮನ. ಯೋಜನೆಯ ಹಿರಿತನದಲ್ಲಿ ಕೃಷಿಕರೇ ಕೃಷಿಕರಿಗಾಗಿ ಕೃಷಿಕರಿಗೋಸ್ಕರ ನಡೆಸುವ ಕೃಷಿ ಮೇಳ.

                    ಗ್ರಾಮಾಭಿವೃದ್ಧಿ ಯೋಜನೆಯ ಮೇಳಗಳಲ್ಲಿ ಕೃಷಿ, ಕೃಷಿಕರನ್ನು ಗೌರವದಿಂದ ಕಾಣಲಾಗುತ್ತದೆ. ಹಾಗಾಗಿ ವಿವಿಧ ಇಲಾಖೆಗಳು, ಸರಕಾರಿ ಅಧಿಕಾರಿಗಳೂ 'ಪ್ರೀತಿಯಿಂದ' ಭಾಗವಹಿಸುತ್ತಾರೆ. ಯಾಕೆ ಹೇಳಿ? ಕೃಷಿಕರು ಧಾರಾಳ ಸೇರುತ್ತಾರೆ, ತಂತಮ್ಮ ಇಲಾಖೆಯ ಯೋಜನೆಗಳನ್ನು ಈ ಮೂಲಕವಾದರೂ ತಲುಪಿಸೋಣ. ರಾಜಕೀಯ ನೇತಾರರೂ ಕೃಷಿ ಮೇಳಗಳಲ್ಲಿ ಭಾಗವಹಿಸುತ್ತಾರೆ. ಅವರ ಮನದಿಂಗಿತ ಅರ್ಥಮಾಡಿಕೊಳ್ಳಲು ಕಷ್ಟವೇನಿಲ್ಲ!


0 comments:

Post a Comment