Saturday, February 9, 2013

ಹೀಗೂ ಇದ್ದರು ಬ್ಯಾಂಕ್ ವರಿಷ್ಠಾಧಿಕಾರಿ!

               2009. ಮಂಗಳೂರು ಭಾರತೀಯ ಸ್ಟೇಟ್ಬ್ಯಾಂಕಿನ ಅಸಿಸ್ಟಂಟ್ ಜನರಲ್ ಮ್ಯಾನೇಜರ್ (ಏಜಿಎಂ) ಆಗಿದ್ದ ಚೈತನ್ಯರ ಪರಿಚಯ. ವೃತ್ತಿ ಕರ್ತವ್ಯಕ್ಕಾಗಿ ಅವರಲ್ಲಿಗೆ ಭೇಟಿ. ಮೊದಲ ಮಾತುಕತೆಯಲ್ಲೇ ದೊಡ್ಡ ಹುದ್ದೆಯ ಏಜಿಎಂ ಎಂದು ಮರೆತುಹೋಗುವಷ್ಟು ಆಪ್ತತೆ ಆವರಿಸಿತು. ರಕ್ತ ಸಂಬಂಧಕ್ಕಿಂತಲೂ ಅಧಿಕವಾದ ಪ್ರೀತಿ, ವಿಶ್ವಾಸ. ಕೃಷಿ, ಗ್ರಾಮೀಣ ಬದುಕು, ನಿರ್ವಿಷ ಆಹಾರದ ಸುತ್ತ ಚಿಂತನೆಗಳ ಮಾತುಕತೆ. 'ಇಂದು ನಮ್ಮನೆಯಲ್ಲೇ ಊಟ' ಎನ್ನುತ್ತ ತಂಪುಕೋಣೆಯ ಬಾಗಿಲೆಳೆದರು.

               ಬ್ಯಾಂಕಿನ ಹಿಂಬದಿಯಲ್ಲೇ ಮನೆ. ಅಂಗಳಕ್ಕೆ ಕಾಲಿಟ್ಟಾಗ ದಂಗಾಗಿದ್ದೆ. ಬೀನ್ಸ್, ಬದನೆ, ಅಲಸಂಡೆ, ಸೊಪ್ಪು ತರಕಾರಿ, ಒಂದೆಲಗ, ಅವರೆ, ಟೊಮೆಟೋ.. ಹೀಗೆ ಜಾಗ ಖಾಲಿಯಿರುವಲ್ಲೆಲ್ಲಾ ತರಕಾರಿಗಳ ಮಾಲೆ.  'ವರುಷದಲ್ಲಿ ಐದು ತಿಂಗಳು ಸಂತೆಯಿಂದ ತರಕಾರಿ ತರುವುದಿಲ್ಲ. ನಾವೇ ಬೆಳೆಯುತ್ತೇವೆ, ಹೊಟ್ಟೆ ಬಿರಿಯುವಷ್ಟು ತಿನ್ನುತ್ತೇವೆ' ಎಂದು ನಕ್ಕರು. 'ಇದು ನಮ್ಮನೆ ತರಕಾರಿಯದ್ದೇ ಅಡುಗೆ' ಎಂದು ಐದಾರು ಐಟಮನ್ನು ಮಡದಿ ಅನಿತಾ ಬಡಿಸಿದ್ದರು.

                 ಬ್ಯಾಂಕ್ ಅಧಿಕಾರಿಯ ಮನೆಯೆಂದ ಮೇಲೆ ಅಲಂಕಾರಿಕ ಗಿಡಗಳು, ಲಾನ್ ಹುಲ್ಲು, ಕ್ರೋಟನ್, ಗುಲಾಬಿ ಗಿಡಗಳು ಇರಬೇಕಲ್ವಾ. ಅವೆಲ್ಲಾ ದುಬಾರಿ ಹಣ ತೆತ್ತು ತಂದುವುಗಳಾಗಿರಬೇಕು. ಪಾಲನೆಗೊಬ್ಬ ಸಹಾಯಕ. ಗಿಡಗಳಿಗೆ ನೀರುಣಿಕೆ, ಬಿಸಿಲಿಗೆ ಒಣಗದಂತೆ ಕಣ್ಗಾವಲು, ಸತ್ತ ಗಿಡದ ಜಾಗಕ್ಕೆ ತಕ್ಷಣ ಮತ್ತೊಂದು ಗಿಡ ನೆಡುವುದು... ಹೀಗೆ ಕೆಲಸಗಳು. ಅಧಿಕಾರಿ ಬದಲಾದಾಗ ಪುನರ್ ನವೀಕರಣ. ಇದು ನಡೆದು ಬಂದ ಪದ್ಧತಿ.

                  ಚೈತನ್ಯ ಎಂ. ತಲ್ಲೂರು ಏಜಿಎಂ ಆಗಿ ಮನೆಗೆ ಕಾಲಿಟ್ಟ ತಕ್ಷಣ ಮನಕ್ಕೆ ಮುದ ನೀಡದ ಗಿಡ, ಹುಲ್ಲುಗಳನ್ನು ಕಿತ್ತರು. ಸಹಾಯಕರೊಂದಿಗೆ ಸೇರಿ  ಅಗತೆ ಮಾಡಿದರು. ತರಕಾರಿ ಬೀಜಗಳನ್ನು ಊರಿದರು. ಸ್ನೇಹಿತರಿಂದ ಅನುಭವ ಪಡೆದರು. ಅಲ್ಲಿಂದಿಲ್ಲಿಂದ ಗಿಡಗಳನ್ನು ತಂದು ನೆಟ್ಟರು. ಹೊಸ ಅಧಿಕಾರಿಯ ಆಸಕ್ತಿಗೆ ಸಹಾಯಕರು ಸ್ಪಂದಿಸಿದರು. ಗೊಬ್ಬರ ತಂದರು. ಏಜಿಯಂ ಮನೆಯ ಮುಂದೆ ಚಿಕ್ಕ ತರಕಾರಿ ತೋಟ ಎದ್ದಾಗ ಕೌತುಕದ ಕಣ್ಣುಗಳಿಂದ ನೋಡುವ ಮಂದಿ ಹೆಚ್ಚಾದರು. 

                ಕೈತುಂಬಾ ಕಾಂಚಾಣ ಪಡೆವ ಬ್ಯಾಂಕ್ ಅಧಿಕಾರಿ ಯಾಕೆ ಕೈ ಕೆಸರು ಮಾಡಿಕೊಳ್ಳಬೇಕು? ಎಡ ಬಲದಲ್ಲಿ ಸಹಾಯಕರು, ಓಡಾಡಲು ಆಧುನಿಕ ತಂಪು ಕಾರು, ಆಜ್ಞೆ ಮಾಡಿದರೆ ಅಡುಗೆ ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನು ವ್ಯವಸ್ಥೆ ಮಾಡುವ ಸಾಮಥ್ರ್ಯ, ಅಧಿಕಾರ ಇತ್ತು. ಆದರೆ ಬಿಗುಮಾನ ಬದುಕಿನಿಂದ ದೂರವಿರುವುದು ತಲ್ಲೂರರಿಗೆ ಜಾಯಮಾನ. 'ವಿಷ ರಹಿತವಾಗಿ ಆರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎಂಬ ನಿಲುವು. 

               ಮನೆಗೆ ಬಳಸಿಯೂ ಉಳಿಯುವ ತರಕಾರಿಗಳನ್ನು ಬ್ಯಾಂಕಿನ ಸಹೋದ್ಯೋಗಿಗಳಿಗೆ ಹಂಚುತ್ತಿದ್ದರು. ಅತಿಥಿಗಳಿಗೆ ನೀಡುತ್ತಿದ್ದರು. ತರಕಾರಿ ಕತೆಯನ್ನು ಹೇಳುತ್ತಿದ್ದರು. 'ಬ್ಯಾಂಕಿನ ಹೊರಗಡೆ ಕಾಂಕ್ರಿಟ್ ಹಾಕಿಬಿಟ್ಟಿದ್ದಾರೆ. ಇಲ್ಲದಿರುತ್ತಿದ್ದರೆ ತರಕಾರಿ ಬೇಕಾದಷ್ಟು ಸಿಗುತ್ತಿತ್ತು' ಎಂಬ ಸಾತ್ವಿಕ ಅಸಮಾಧಾನವಿತ್ತು. ಪತ್ರಿಕೆಗಳ ಕೃಷಿ ಪುಟಗಳಲ್ಲಿ ಅಪರೂಪದ ತರಕಾರಿ, ಹಣ್ಣುಗಳ ಸುಳಿವು ಸಿಕ್ಕರೆ ಬೆನ್ನಟ್ಟಿ ಪಡೆಯುವ ಆತುರ.

                 ನಿತ್ಯ ಗಿಡಗಳ ಜತೆ ಸ್ನೇಹ, ಆರೈಕೆ, ನೀಗಾ. ಒಂದು ಗಿಡ ಸೊರಗಿದರೂ ಅವರಿಗೆ ನೋವಾಗುತ್ತಿತ್ತು. ಅದರ ಪುನಶ್ಚೇತನಕ್ಕೆ ಕ್ಷಿಪ್ರ ಕ್ರಮ. ಅತಿಥಿಗಳು ಬ್ಯಾಂಕಿಗೆ ಬಂದಾಗ ವೃತ್ತಿ ಮಾತುಕತೆ ಪೂರೈಸಿ, ಮಿಕ್ಕ ಅವಧಿಯಲ್ಲಿ  ತರಕಾರಿ ಬ್ಯಾಂಕಿಂಗಿನದ್ದೇ ಮಾತು. ಗಿಡಗಳನ್ನು ತೋರಿಸಿ, ಒಂದೊಂದರ ಹಿನ್ನೆಲೆಯನ್ನು ಹೇಳುವುದರಲ್ಲಿ ಖುಷಿ, ಸಂಭ್ರಮ. ಅತಿಥಿಗಳು ಹೊರಡುವಾಗ ತರಕಾರಿಗಳ ಪ್ಯಾಕೆಟ್ ಉಡುಗೊರೆ.

                 ತಲ್ಲೂರು ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ಅಧಿಕಾರಿಯಾಗಿದ್ದಾಗ ಸಿಕ್ಕ ಜ್ಞಾನ, ಕೃಷಿಕರೊಂದಿಗೆ ಬೆರೆದ ಅನುಭವಗಳು ಅವರ ಅಂಗಳ ತರಕಾರಿ ಕೃಷಿಯ ಬಂಡವಾಳ. ನಗರದ ಬದುಕಿನ ಧಾವಂತವನ್ನು ಅವರದ್ದೇ ಮಾತಲ್ಲಿ ಕೇಳುವುದು ರೋಚಕ - ಕೊತ್ತಂಬರಿ ಸೊಪ್ಪಿನ ಒಂದು ಕಟ್ಟು, ಶುಂಠಿಯ ತುಂಡು ಬೇಕೆಂದರೂ ದ್ವಿಚಕ್ರವನ್ನು ಚಾಲೂ ಮಾಡಿ ಮಾರುಕಟ್ಟೆ ಹೋಗಲೇಬೇಕು. ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಂ. ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಸಮಸ್ಯೆ. ಯಾರ್ಯಾರದ್ದೋ ಗೊಣಗಾಟ. ಜತೆಗೆ ಮಾಲಿನ್ಯ ಸೇವನೆ. ಅಟ್ಟಿಸಿಕೊಂಡು ಬರುವ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ!

                 ಕೃಷಿ ಆಸಕ್ತಿಯ ವಿಚಾರ ಇಷ್ಟಾದರೆ, ತಲ್ಲೂರರ ಮಾನವೀಯ ಮತ್ತು ದೂರದೃಷ್ಟಿ ಗುರುತರ. ನಗರದ ನೀರಿನ ಬವಣೆ ಬ್ಯಾಂಕಿಗೆ ತಟ್ಟಬಾರದು ಎಂಬ ಉದ್ದೇಶದಿಂದ ಮಳೆಕೊಯ್ಲು ವ್ಯವಸ್ಥೆ ಮಾಡಿದ್ದರು. ತನ್ನ ಸಿಬ್ಬಂದಿಯೋರ್ವರು ಅಕಾಲಿಕವಾಗಿ ಮೃತರಾದಾಗ ಮಮ್ಮಲ ಮರುಗಿದ ಏಜಿಯಂ, ಅವರ ನೆನಪಿಗಾಗಿ ಬ್ಯಾಂಕಿನ ಮುಂಭಾಗದ ಹಸಿರು ಜಾಗಕ್ಕೆ 'ಸುಜಾತ ವನ' ಎಂದು ಹೆಸರಿಟ್ಟು ಗೌರವ ಸಲ್ಲಿಸಿದರು. ಈ ವಿಚಾರವನ್ನು ಆಪ್ತರಲ್ಲಿ ವಿನಾ ಸಿಕ್ಕಸಿಕ್ಕವರಲ್ಲಿ ಹೇಳಿ ಬೆನ್ನುತಟ್ಟಿಸಿಕೊಂಡವರಲ್ಲ.

                 ಬಡವರೆಂದರೆ ಪ್ರೀತಿ. ಬಡತನಕ್ಕೆ ಮರುಕ. ತನ್ನಿಂದಾದ ಸಹಾಯ. ಬ್ಯಾಂಕಿನಿಂದ ಸಿಗಬಹುದಾದ ಪ್ರೋತ್ಸಾಹಗಳಿಗೆ ಕ್ಷಿಪ್ರ ಚಾಲನೆ. ಒಂದು ಉದಾಹರಣೆ ಗಮನಿಸಿ. ರಸ್ತೆಗೆ ತಾಗಿಕೊಂಡೇ ಬ್ಯಾಂಕಿದೆ. ರಸ್ತೆಯನ್ನು ಶುಚಿಗೊಳಿಸುವ ಸರಕಾರಿ ಮಂದಿ ಇದ್ದಾರೆ.  ಅವರು ಶುಚಿಗೊಳಿಸುತ್ತಿದ್ದಾಗ ವಿನಯವಾಗಿ ಮಾತನಾಡಿ, ಬ್ಯಾಂಕಿನ ಮುಂದೆಯೂ ಸ್ವಲ್ಪ ಹೆಚ್ಚೇ ಶುಚಿಗೊಳಿಸುವಂತೆ ವಿನಂತಿಸುತ್ತಿದ್ದರು. ಕ್ಯಾಂಟಿನಿನಿಂದ ಚಹ ಕುಡಿಸುತ್ತಿದ್ದರು. ಜತೆಗೆ ಕಿಸೆಯಿಂದ ಕಾಸೂ ನೀಡುತ್ತಿದ್ದರು.
ಮಾನಸಿಕ ಅಸ್ವ್ವಾಸ್ಥ ಬಾಲಕರ ಶಾಲೆಯೊಂದಕ್ಕೆ ತಲ್ಲೂರು ಭೇಟಿಕೊಡುತ್ತಿದ್ದರು. ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಉಳ್ಳವರಲ್ಲಿ ವಿಚಾರ ತಿಳಿಸಿ, ಸಹಾಯ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಅಲ್ಲಿನ ವಿದ್ಯಾರ್ಥಿಗಳು ರಕ್ಷಾಬಂಧನದ ದಿವಸ ಬ್ಯಾಂಕಿಗೆ ಬಂದು ರಕ್ಷೆ ಕಟ್ಟುವಷ್ಟು ತಲ್ಲೂರು ಅವರ ಮನಸ್ಸನ್ನು ಗೆದ್ದಿದ್ದರು ಎನ್ನುತ್ತಾರೆ ಸಹೋದ್ಯೋಗಿ ಶೋಭಾ ನಾಯಕ್. ಅನಾಥಾಶ್ರಮವೊಂದಕ್ಕೆ ಬ್ಯಾಂಕಿನ ಸಿಬ್ಬಂದಿಗಳಲ್ಲಿ ವಿನಂತಿಸಿ, ಉಪಯೋಗವಿಲ್ಲದ ವಸ್ತ್ರಗಳನ್ನು ಸಂಗ್ರಹಿಸಿ ನೀಡಿದ್ದರು.

                    ತಲ್ಲೂರು ಏಜಿಯಂ ಆಗಿರುವಷ್ಟು ಕಾಲ ಅವರ ಜತೆ ಸಂಪರ್ಕವಿರಿಸಿಕೊಂಡಿದ್ದೆ. ನಾನು ಹೋಗಿರುವಷ್ಟೂ ಸಮಯ ತಂಪುಕೋಣೆಯ ಅವರ ಚೇಂಬರಿನಲ್ಲಿದ್ದುದು ಕಡಿಮೆ. ಗ್ರಾಹಕರೊಂದಿಗೆ ಮಾತನಾಡುತ್ತಾ ಇರುವುದೆಂದರೆ ಖುಷಿ. ಗ್ರಾಹಕರಿಗೆ ಬ್ಯಾಂಕ್ ವ್ಯವಹಾರದಲ್ಲಿ ತೊಂದರೆಯಾಗಬಾರದೆನ್ನುವ ಜಾಗ್ರತೆ. ಹಣಕಟ್ಟುವ ಫಾರ್ಮ್, ಚೆಕ್ಕುಗಳನ್ನು ತುಂಬುವುದು ಅಕ್ಷರ ಸಂಪರ್ಕ ಇಲ್ಲದವರಿಗೆ ತ್ರಾಸ. ಅಂತಹ ಹೊತ್ತಿನಲ್ಲಿ ತಲ್ಲೂರು ಅವರೇ ಫಾರ್ಮನ್ನು ತುಂಬಿದ ಕ್ಷಣಗಳು ನೆನಪಾಗುತ್ತವೆ.
ತನ್ನದು ಉನ್ನತ ಹುದ್ದೆಯಾದರೂ ಸಿಬ್ಬಂದಿಗಳೊಂದಿಗೆ ಆಪ್ತ ನಡವಳಿಕೆ. ಅವರು ಹತ್ತಿರ ಬಂದರೆ ಸಾಕು, ತಮಾಷೆಗಳ ಬುತ್ತಿ. ಇದರಿಂದ ಟೆನ್ಶನ್ ಫ್ರೀ! ಕ್ಷಿಪ್ರವಾಗಿ ಕೆಲಸವಾದಾಗ ಬೆನ್ನುತಟ್ಟುವ, ಆಗದೇ ಇದ್ದಾಗ ಬೆಂಬಲಕ್ಕೆ ನಿಲ್ಲುವ, ಆಕಳಿಕೆಗೆ ಕಟುವಾಗುವ ತಲ್ಲೂರು ಎಲ್ಲರಿಗೂ ಸಲ್ಲುವ ಏಜಿಎಂ.

               ಓಣಂ, ಕ್ರಿಸ್ಮಸ್, ದೀಪಾವಳಿ, ಹೊಸ ವರುಷವನ್ನು ಬ್ಯಾಂಕಿನಲ್ಲಿ ಆಚರಿಸುವುದು ಕಾಲಾವಧಿ ರೂಢಿ. ತಲ್ಲೂರು ಬ್ಯಾಂಕಿಗೆ ಬಂದ ಮೇಲೆ ಈ ಹಬ್ಬಗಳು ನಿಜವಾಗಿಯೂ ಹಬ್ಬಗಳಾದುವು! ಸಂಭ್ರಮ ಪಡೆದುವು. ವೈಭವ ಪಡೆದುವು. ಸಿಬ್ಬಂದಿಗಳು ಮಾತ್ರವಲ್ಲದೆ, ಗ್ರಾಹಕರೂ ಭಾಗವಹಿಸುವಂತಾಯಿತು. ಈ ದಿವಸಗಳಂದು ಭೇಟಿಯಿತ್ತ ಎಲ್ಲರ ಬಾಯಿ ಸಿಹಿಯಾಗುತ್ತಿದ್ದುವು.

              ಬಜ್ಪೆಯಲ್ಲಿ ವಿಮಾನ ದುರಂತವಾದಾಗ ಸಹಕರಿಸಲೆಂದು ತನ್ನ ಬ್ಯಾಂಕಿನ ವಾಹನದೊಂದಿಗೆ  ಸಿಬ್ಬಂದಿಗಳನ್ನು ಕಳುಹಿಸಿಕೊಟ್ಟಿದ್ದರು. ಸಾಮಾಜಿಕ ವಿಚಾರಗಳಲ್ಲಿ ಬೈಲಾ ಮುಂದಿಟ್ಟುಕೊಂಡು ಮೀನಮೇಷ ಎಣಿಸುವ ಅಧಿಕಾರಿ ಇವರಾಗಿರಲಿಲ್ಲ. ತನ್ನ ಮೇಜಿಗೆ ಬಂದ ಪೇಪರುಗಳಿಗೆ ಸಹಿ ಹಾಕಿ ಮಗುಮ್ಮಾಗಿ ಕುಳಿತು, ಕಚೇರಿ ಸಮಯವಾದಾಗ ಕಾರಲ್ಲಿ ಭರ್ರನೆ ಹೊರಟು ಹೋಗುವವರಲ್ಲ. ಅವರೆಂದೂ 'ನನ್ನ ಕೆಲಸ ಇಷ್ಟೇ' ಎನ್ನುತ್ತಾ ಸೀಮಿತ ಕೂಪಕ್ಕೆ ಒಡ್ಡಿಕೊಂಡವರಲ್ಲ.

                 ಎರಡು ವರುಷದ ಹಿಂದೆಯಷ್ಟೇ ಬೆಂಗಳೂರಿಗೆ ವರ್ಗಾವಣೆ ಪಡೆದಿದ್ದ ಚೈತನ್ಯ ಜನವರಿ 8ರಂದು ವಿಧಿವಶರಾದರು. ಒಂದು ರಾಷ್ಟ್ರೀಯ ಬ್ಯಾಂಕಿನ ಹಿರಿಯ ಅಧಿಕಾರಿ ಹೀಗೂ ಇರಬಹುದು ಎನ್ನುವುದಕ್ಕೆ ಚೈತನ್ಯರೇ ಮಾದರಿ. ಕೆಲವು ವರುಷಗಳಿಂದ ದೇಹಾರೋಗ್ಯದ ಕ್ಷಮತೆ ಅವರ ಆಸಕ್ತಿಯನ್ನು ಅಲುಗಾಡಿಸುತ್ತಿದ್ದರೂ, ಅದನ್ನು ಇತರರ ಮುಂದೆ ತೋರಿಸಿಕೊಳ್ಳದ ವ್ಯಕ್ತಿತ್ವ.

               ನಮ್ಮ ನಡುವಿನ ಕೆಲವು ಬ್ಯಾಂಕ್ಗಳಿಗೆ ಕಾಲಿಟ್ಟಾಗ ಗ್ರಾಹಕರೊಂದಿಗಿನ ವ್ಯವಹಾರದ ಗೊಂದಲ, ಬಿಗುಮಾನಗಳನ್ನು ಕಂಡಾಗಲೆಲ್ಲಾ ತಲ್ಲೂರು ನೆನಪಾಗುತ್ತಾರೆ. 'ಬ್ಯಾಂಕಿನಲ್ಲಿ ನನ್ನದು ದೊಡ್ಡ ಹುದ್ದೆಯಾಗಿರಬಹುದು, ಆದರೆ ಹೊಟ್ಟೆಪಾಡಲ್ವಾ ಸಾರ್' ಎಂದ ಅವರ ಮುಕ್ತ ಮತ್ತು ಶುದ್ಧ ಮನಸ್ಸಿಗೆ ಕೋಟಿ ನಮನಗಳು. 

0 comments:

Post a Comment