Saturday, February 9, 2013

ಬರದ ಮಧ್ಯೆ ಅರಳುತ್ತಿರುವ ಗುಲಾಬಿ ಕೃಷಿ


              'ಹತ್ತು ಸೆಂಟ್ಸ್ ಜಾಗದಲ್ಲಿ ವ್ಯವಸ್ಥಿತವಾಗಿ ಗುಲಾಬಿ ಕೃಷಿ ಮಾಡಿದರೆ ಐದು ಮಂದಿಯ ಕುಟುಂಬ ಜೀವಿಸಬಹುದು,' ಹುಬ್ಬಳ್ಳಿಯ ಚವರಗುಡ್ಡ ಗ್ರಾಮದ ಕೃಷ್ಣ ಗೋವನಕೊಪ್ಪ ಅವರ ಗುಲಾಬಿ ಮಾರುಕಟ್ಟೆಯ ಯಶವನ್ನು ಕೇಳಿದಾಗ ಉತ್ಪ್ರೇಕ್ಷೆ ಕಾಣಲಿಲ್ಲ.

             ಇವರ ಗುಲಾಬಿ ಕೃಷಿಗೆ ಎರಡನೇ ವಾರ್ಶಿಕೋತ್ಸವ. ರಾಜಧಾನಿಯಿಂದ ಗಿಡಗಳನ್ನು ಆಯ್ಕೆ ಮಾಡಿ ತಂದಿದ್ದರು. ಗುಲಾಬಿ ಕೃಷಿಯ ಅನುಭವವಿಲ್ಲ, ತರಬೇತಿಗೂ ಹೋಗಿಲ್ಲ. ಹುಬ್ಬಳ್ಳಿ ಭಾಗದಲ್ಲಿ ಹಬ್ಬುತ್ತಿರುವ ಕೃಷಿಯನ್ನು ನೋಡಿ, ಪರಿಚಯದ ಕೃಷಿಕರನ್ನು ಮಾತನಾಡಿ ಸ್ವಲ್ಪ ಅನುಭವವನ್ನು ಪಡೆದು ವಿಶ್ವಾಸ ವೃದ್ಧಿಸಿಕೊಂಡರು.

              ಇವರಲ್ಲಿ ಎರಡು ಸಾವಿರದ ನಾಲ್ಕುನೂರು ಗುಲಾಬಿ ಗಿಡಗಳಿವೆ. ನಾಟಿ ಮಾಡುವಾಗಲೇ ಹಟ್ಟಿಗೊಬ್ಬರ. ಬಳಿಕ ವರುಷಕ್ಕೊಮ್ಮೆ ಕುರಿ, ಕೋಳಿ ಗೊಬ್ಬರ. ರಾಸಾಯನಿಕ ಗೊಬ್ಬರ ಹಾಕಿಲ್ಲ. ಹನಿ ನೀರಾವರಿಯಲ್ಲಿ ವಾರಕ್ಕೊಮ್ಮೆ ನೀರುಣಿಕೆ. ನೆಟ್ಟು ತೊಂಭತ್ತು ದಿವಸದಲ್ಲಿ ಹೂ ರೆಡಿ. 'ಹೂವಿಗೆ ರಸ ಹೀರಲು ಬರುವ ನುಸಿಗೆ ತಿಂಗಳಿಗೊಮ್ಮೆ ವಿಷ ಸಿಂಪಡಣೆ ಅನಿವಾರ್ಯ' ಎನ್ನುತ್ತಾ, ಮನದಟ್ಟು ಮಾಡಲು ವಿಷದ ಕರಂಡಕವನ್ನು ತೋರಿಸುತ್ತಾರೆ!

              ವರುಷದಲ್ಲಿ ಆರು ತಿಂಗಳು ಭರ್ಜರಿ ಹೂ. ಐದು ತಿಂಗಳು ಸಾಮಾನ್ಯ. ಜೂನ್ನಿಂದ ಸೆಪ್ಟೆಂಬರ್ ಹೆಚ್ಚು ಹೂ ಪಡೆವ ತಿಂಗಳು. ದಿವಸಕ್ಕೆ ಎರಡು ಸಾವಿರ ಹೂ ಕಟಾವ್ ಮಾಡಿದ್ದೂ ಇದೆ. ಸನಿಹದ ಹುಬ್ಬಳ್ಳಿ ಮಾರುಕಟ್ಟೆ. ನೂರು ಹೂವಿಗೆ ಮುನ್ನೂರೈವತ್ತು ರೂಪಾಯಿಯಿಂದ ಆರು ನೂರು ರೂಪಾಯಿ ತನಕ ದರ.  ಸೀಸನ್ನಲ್ಲಿ ಇಡೀ ದಿವಸ ಕೈತುಂಬಾ ಕೆಲಸ. ಆದರೆ ಸಾಮಾನ್ಯವಾಗಿ ಎರಡು ಮಂದಿ ಎರಡು ತಾಸು ಗುಲಾಬಿ ಜತೆ ಕಳೆದರೆ ಸಾಕು.

               'ಪ್ರೇಮಿಗಳ ವಾರ್ಶಿಕಾಚರಣೆ - ಪ್ರೇಮಿಗಳ ದಿನ - ದಂದು ಒಂದು ಹೂವಿಗೆ ಹತ್ತು ರೂಪಾಯಿ! ಮಾರುಕಟ್ಟೆಗೆ ಬರುವ ಕೆಂಪು ಹೂಗಳು ಕ್ಷಣದಲ್ಲಿ ಖಾಲಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳು ಹುಬ್ಬಳ್ಳಿ ಸುತ್ತ ಬೀಸು ಹೆಜ್ಜೆಯಿಟ್ಟಾಗ  ಗುಲಾಬಿ ಕೃಷಿಯೂ ವೇಗ ಪಡೆಯಿತು. ಕೃಷ್ಣರಂತಹ ಹಲವಾರು ಮಂದಿ ಗುಲಾಬಿ ಕೃಷಿಯನ್ನು ನೆಚ್ಚಿಕೊಂಡರು. ಸಣ್ಣ ಕೃಷಿಕರಿಗೆ ಯೋಜನೆಯು ಆರ್ಥಿಕ ನೆರವನ್ನೂ ನೀಡಿದೆ, ನೀಡುತ್ತಿದೆ. 

              ಕೃಷ್ಣ ಗೋವನಕೊಪ್ಪರಿಗೆ ಗುಲಾಬಿಯೊಂದಿಗೆ ಸಾವಿರಕ್ಕೂ ಮಿಕ್ಕಿ ಕಾಕಡ ಹೂವಿನ ಕೃಷಿಯಿದೆ. ಇದಕ್ಕೆ ನಿರ್ವಹಣಾ ಖರ್ಚು ಕಡಿಮೆಯಂತೆ. 'ಮಳೆಗಾಲ ಆರಂಭವಾದಾಗ ಹೊಗೆ ಮಂಜು ಬರುತ್ತೆ. ಆಗ ಕೀಟ ಧಾಳಿಯಿಡುತ್ತೆ. ಆಗ ವಿಷ ಸಿಂಪಡಣೆ ಬೇಕೇ ಬೇಕು' ಎನ್ನುತ್ತಾರೆ.

              ಕಾಕಡ ಹೂವಿನ ಮೊಗ್ಗನ್ನಾಯಲು ಸಹಾಯಕರು ಬೇಕು. ಒಂದು ಕಿಲೋ ಕಾಕಡ ಮೊಗ್ಗಿಗೆ ಎಂಭತ್ತು ರೂಪಾಯಿಯಿಂದ ನೂರೈವತ್ತರ ತನಕ ದರ. ಸೀಸನ್ನಿನಲ್ಲಿ ಮುನ್ನೂರು ರೂಪಾಯಿ ಆದುದೂ ಇದೆಯಂತೆ. ಮಾರುಕಟ್ಟೆ ಸನಿಹವಿದ್ದುದರಿಂದ ಹೂವಿಗೆ ಮಾರುಕಟ್ಟೆ ಅವಕಾಶ ಧಾರಾಳ. ಹಾಗಾಗಿ ಕೃಷಿಯಲ್ಲಿ ಪರ್ಯಾಯ ಚಿಂತನೆಗೆ ಅವಕಾಶವಾಗಿದೆ.

             'ಇದು ಸರಕಾರಿ ಉದ್ಯೋಗ ಇದ್ದಾಂಗೆ ಸಾರ್' ಎಂದು ಖುಷಿಯಿಂದ ಹೇಳುತ್ತಾರೆ ಕೃಷ್ಣ. ಪ್ರತೀ ತಿಂಗಳೂ ಬೇಸರವಾಗದಷ್ಟು ಪಗಾರ ಕಿಸೆ ಸೇರುತ್ತಿದೆ. 'ಒಂದು ಗುಲಾಬಿ ಹೂವಿಗೆ ಎಲ್ಲಾ ಖರ್ಚು ಸೇರಿದರೆ ಐವತ್ತು ಪೈಸೆ ವೆಚ್ಚವಾಗಬಹುದು. ಮಿಕ್ಕಿದ್ದು ಲಾಭ' ಎಂಬ ಅಂಕಿಅಂಶ ಅವರ ಬೆರಳತುದಿಯಲ್ಲಿದೆ.

               ಕೃಷ್ಣ ಗೋವನಕೊಪ್ಪ ಅವರು ಗುಲಾಬಿ ಕೃಷಿಯಲ್ಲಿ ವೈಜ್ಞಾನಿಕವಾಗಿ ಮಾಡುತ್ತಿದರೆ ದುಪ್ಪಟ್ಟು ಆದಾಯ ಪಡೆಯಬಹುದಿತ್ತು! ಮಣ್ಣಿನ ಫಲವತ್ತತೆ, ನೀರಿನ ಸಂಪತ್ತು ಓಕೆ. ಆದರೆ ನಿರ್ವಹಣೆಯಲ್ಲಿ ಇನ್ನೂ ಸ್ಪಲ್ಪ ಸುಧಾರಿಸಬೇಕು. ಬಹುಶಃ ಸರಿಯಾದ ತರಬೇತಿ ಸಿಕ್ಕರೆ ಈ ಲೋಪವನ್ನು ನಿವಾರಿಸಬಹುದು.

               'ಸುತ್ತುಮುತ್ತಲಿನ ಕೃಷಿಕರಿಗೆ ಇಲಾಖೆಯ ಮೂಲಕ ಆರ್ಥಿಕ ಸಹಕಾರವನ್ನು ನೀಡುವ ಒತ್ತಡವನ್ನು ಯೋಜನೆ ಮಾಡಿದೆ. ಹಾಗಾಗಿ ಎಲ್ಲೆಲ್ಲೋ ಹರಿದು ಹೋಗುತ್ತಿರುವ ಕಿಂಚಿತ್ ಮೊತ್ತ ಕೃಷಿಕರಿಗೆ ಸಿಕ್ಕಿದೆ' ಎನ್ನುತ್ತಾರೆ ಯೋಜನೆಯ ಧಾರವಾಡ ವಲಯ ನಿರ್ದೇಶಕ ಜಯಶಂಕರ ಶರ್ಮ.

                ಬರದ ನಾಡಿನಲ್ಲಿ ಪರ್ಯಾಯ ಬೆಳೆಗಳತ್ತ ಕೃಷಿಕರು ವಾಲುತ್ತಿದ್ದಾರೆ. ಯಾವುದಕ್ಕೆ ಹೆಚ್ಚು ಮಾರುಕಟ್ಟೆ, ಧಾರಣೆ ಸಿಗುತ್ತದೋ ಅದರತ್ತ ಒಲವು. ನೀರಿನ ಸಂಪನ್ಮೂಲವಿದ್ದಲ್ಲಿ ಕೃಷಿ ಗೆದ್ದಿದೆ. ಕಡಿಮೆಯಿದ್ದಲ್ಲಿ ಉಸಿರಾಡುತ್ತಿದೆ.  

0 comments:

Post a Comment