Monday, February 4, 2013

ನೂಲಿನ ಎಳೆಯ ಬಿಸಿಯುಸಿರು

                   ಹುಬ್ಬಳ್ಳಿಯ ಯಾವುದೇ ಜವುಳಿ ಅಂಗಡಿಗೆ ಹೋಗಿ, 'ಶಿಗ್ಲಿ ಸಾರಿ ಕೊಡ್ರಿ' ಅನ್ನಿ. ಶಿಗ್ಲಿ ಸೀರೆ ಕೇಳುವುದೆಂದು ಅಭಿಮಾನ. ನಿಮಗೆ ವಿಶೇಷ ಆತಿಥ್ಯ! ಆಯ್ಕೆಗಾಗಿ ರಾಶಿ ರಾಶಿ ಸೀರೆ ಗುಡ್ಡೆ ಹಾಕಿಬಿಡ್ತಾರೆ. ಸೀರೆಯ ಗುಣಮಟ್ಟದ ಬಗ್ಗೆ ಎಲ್ಲರಿಗೂ ಖಾತ್ರಿ. 'ಇಳಕಲ್ ಸೀರೆ'ಯನ್ನು ಹೆಣ್ಮಕ್ಕಳು ಹೇಗೆ ಮೆಚ್ಚಿಕೊಳ್ತಾರೋ, ಅದೇ ರೀತಿ ಶಿಗ್ಲಿ ಸೀರೆಗೂ ಮಣೆ. ಸೀರೆಯನ್ನು ನೋಡಿಯೇ 'ಇದು ಶಿಗ್ಲಿ ಬ್ರಾಂಡ್' ಎಂದು ಗುರುತಿಸುವಷ್ಟು ಅಪ್ಪಟತನ.
'                  ಸಾರ್, ಸುತ್ತುಮುತ್ತೆಲ್ಲಾ ಮಳೆಯಿಲ್ಲದೆ ಬರ ಕಾಡಿದೆ. ಉಣ್ಣಲು ಕಾಳಿಲ್ಲ, ತುತ್ತಿಗೂ ತತ್ವಾರ. ಯುವಕರಿಗೆ ಉದ್ಯೋಗವಿಲ್ಲ. ಎಲ್ಲರೂ ಗುಳೆ ಹೋಗಿದ್ದಾರೆ. ಆದರೆ ನಮ್ಮ ಶಿಗ್ಲಿಯ ಜನರು ಮಾತ್ರ ಸೇಫ್' ಇಂಬ ಖುಷಿ ಹನುಮಂತಪ್ಪ ಈಶ್ವರಪ್ಪ ಕೊಪ್ಪದ್ ಅವರದು. ಯಾಕೆಂದರೆ ಶಿಗ್ಲಿ ಹಳ್ಳಿಯು ನೇಕಾರಿಕೆಯಲ್ಲಿ ಸ್ವಾವಲಂಬಿ. ಪ್ರತೀ ಕೈಗೂ ಉದ್ಯೋಗ. ಬರದ ಹೊಡೆತದಿಂದ ದೂರ. ನಿರುಮ್ಮಳ ಬದುಕು.

                        ಗದಗ ಜಿಲ್ಲೆಯ ಶಿಗ್ಲಿಗೆ ಹುಬ್ಬಳ್ಳಿಯಿಂದ ಐವತ್ತು ಕಿಲೋಮೀಟರ್ ದೂರ. ನೇಕಾರಿಕೆಯು ಪಾರಂಪರಿಕ ವೃತ್ತಿ ಕಸುಬು. ಒಂದು ಕಾಲಘಟ್ಟದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮಗ್ಗಗಳನ್ನು ಹೊಂದಿದ್ದ ನೇಕಾರಿಕಾ ಊರೆಂದರೂ ಉತ್ಪ್ರೇಕ್ಷೆಯಲ್ಲ. ನೇಕಾರಿಕೆ ಜಾತಿ ವೃತ್ತಿಯಾದರೂ ಈಗದು ಉದ್ಯೋಗ! ಎಲ್ಲಾ ಮನೆಗಳಲ್ಲೂ ಹೊಟ್ಟೆಪಾಡಿಗಾಗಿ ಉದ್ಯೋಗ.

                      ಹನುಮಂತಪ್ಪ ಈಶ್ವರಪ್ಪ ಅರುವತ್ತರ ಯುವಕ. ಮಡದಿ ಶೈಲಜಾ. ಮಗಳು ನವೀನಾ. ಮಗ ನವೀನ ಕೊಪ್ಪದ. ನಾಲ್ಕು ದಶಕಕ್ಕೂ ಮೀರಿದ ಅನುಭವ ಹೊಂದಿದ ಕುಟುಂಬ. ಕೈಚಾಲಿತ ಮಗ್ಗದಿಂದ ಸೀರೆ ತಯಾರಿಸಿ ಮಾರಾಟ. ಅದರಿಂದಲೇ ಬದುಕು ರೂಪೀಕರಣ. ಮೊದಲು ಕಾಲಲ್ಲಿ ತುಳಿದು ಯಂತ್ರವನ್ನು ಚಾಲೂ ಮಾಡಬೇಕಿತ್ತು. ಈಗದು ಯಾಂತ್ರೀಕರಣಗೊಂಡು ತನುಶ್ರಮ ಕಡಿಮೆಯಾಗಿದೆ.

                     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಘಟಕದಿಂದ ನೀಡಿದ ಸಾಲದ ಪರಿಣಾಮವಾಗಿ ಸಣ್ಣ ನೇಕಾರಿಕೆ ವೃತ್ತಿಗೆ ಶಿಗ್ಲಿಯಲ್ಲಿ ಬೀಸು ಹೆಜ್ಜೆ. ಹನುಮಂತಪ್ಪ ಸಾಲದ ಫಲಾನುಭವಿ. ಚಿಕ್ಕ ಚಿಕ್ಕ ಗುಂಪಿನ ಮೂಲಕ ಪ್ರಗತಿಬಂಧು ಘಟಕಗಳ ನಿರ್ವಹಣೆ. ಒಂದೊಂದು ಮಗ್ಗ ಹೊಂದಿದವರಿಗೆ ಇನ್ನೊಂದನ್ನು ಹೊಂದುವ ಅವಕಾಶ. ಕಚ್ಚಾವಸ್ತುಗಳ ಖರೀದಿ, ಹೊಸ ಮಗ್ಗಗಳ ಸ್ಥಾಪನೆಗಾಗಿ ಯೋಜನೆಯು ಮನೆಬಾಗಿಲಲ್ಲಿ ಸಾಲದ ಸಹಕಾರವನ್ನು ನೀಡುತ್ತಿದೆ.

                       ಸನಿಹದ ಬೆಟಗೇರಿ ನಗರವು 'ಬಣ್ಣದ ನಗರ'ವೆಂದು ಪ್ರಸಿದ್ಧ. ಸೀರೆಗೆ ಬಳಕೆಯಾಗುವ ಹತ್ತಿಯ ನೂಲುಗಳು ಸಿಗುವ ಸ್ಥಳ. ಸೀರೆ ನೇಯ್ದು ಮರಳಿ ಇವರಿಗೇ ನೀಡಬಹುದು; ಇಲ್ಲವೇ ಹುಬ್ಬಳ್ಳಿ, ಬೆಳಗಾಂವ್ ಮಾರುಕಟ್ಟೆಗೂ ನೀಡಬಹುದು. ಬೆಟಗೇರಿಯಲ್ಲಿ ನಿರಂತರ ಕಚ್ಚಾವಸ್ತುಗಳ ಪೂರೈಕೆಯಿಂದಾಗಿ ನೇಕಾರಿಕೆ ನಿರಂತರ, ಜೀವಂತ.

                          ಯಾರು ರಖಂ ಆಗಿ ಸೀರೆ ಕೊಳ್ಳುತ್ತಾರೋ, ಅವರೇ ವಿನ್ಯಾಸವನ್ನು ಆಯ್ಕೆ ಮಾಡುತ್ತಾರೆ. ಕಾಲಕಾಲಕ್ಕೆ ಬದಲಾಗುವ ವಿನ್ಯಾಸಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ. ಹತ್ತಿ ನೂಲಿನ ದರದಲ್ಲಿ ದಿನೇ ದಿನೇ ಏರುಗತಿ. ಹನುಮಂತಪ್ಪ ಹೇಳುತ್ತಾರೆ, ಒಂದೆರಡು ವರುಷದ ಹಿಂದೆ ಐದು ಕಿಲೋ ಹತ್ತಿ ನೂಲಿಗೆ ಒಂದು ಸಾವಿರದ ಆರುನೂರು ರೂಪಾಯಿ ಇದ್ದರೆ, ಪ್ರಸ್ತುತ ಮೂರು ಸಾವಿರದ ನೂರು ರೂಪಾಯಿ. ಆದರೆ ಸೀರೆಯ ದರ ಮಾತ್ರ ಏರಿಸುವಂತಿಲ್ಲ!

                        ವೇತನ ಕೊಟ್ಟು ಸಹಾಯಕರ ಅವಲಂಬನದಿಂದ ಮಾಡುವ ವೃತ್ತಿ ಇದಲ್ಲ. ಸ್ವದುಡಿಮೆಯೇ ಸಂಪನ್ಮೂಲ. ಮನೆಮಂದಿಯೆಲ್ಲರ ಜಂಟಿ ಕಾಯಕ. 'ಒಂದು ಸೀರೆ ನೇಯಲು ಏನಿಲ್ಲವೆಂದರೂ ಒಂದು ದಿವಸ ಬೇಕು. ಸಿಗುವುದು ಮಾತ್ರ ಕಡಿಮೆ ರೊಕ್ಕ' ಎಂಬ ವಿಷಾದ. ಸಾದಾ ಸೀರೆಗೆ ಸುಮಾರು ಮುನ್ನೂರೈವತ್ತು ರೂಪಾಯಿ. ಅದರಲ್ಲೇ ಅಲ್ಪಸ್ವಲ್ಪ ವಿನ್ಯಾಸದ ಚಿತ್ತಾರದ ಸೀರೆಗೆ ಏಳುನೂರು ರೂಪಾಯಿ. ದರ ಏರಿಸಿದರೆ ಬೇಡಿಕೆ ಕಡಿಮೆಯಾಗಬಹುದೆಂಬ ಭಯ. ಸೀರೆ ಖರೀದಿಸುವವರಿಗೆ ತಯಾರಿ ಕಷ್ಟಗಳು ಬೇಕಿಲ್ಲವಲ್ಲಾ..

                       ಕೃಷಿ ಉತ್ಪನ್ನಗಳ ಧಾರಣೆಯನ್ನು ವ್ಯಾಪಾರಿಗಳು ನಿಗದಿ ಮಾಡುತ್ತಾರೆ. ಮನೆ-ಭೂಮಿಗಳ ಮಾರಾಟ ದರವನ್ನು ಮಧ್ಯವರ್ತಿಗಳು ನಿಶ್ಚಯ ಮಾಡುತ್ತಾರೆ. ಶಿಗ್ಲಿಯಲ್ಲಿ ಸೀರೆಯ ದರವನ್ನು ಉತ್ಪಾದಕರೇ ನಿಗದಿ ಮಾಡುತ್ತಾರೆ! ಪರಸ್ಪರ ಎಲ್ಲರೂ ಮಾತನಾಡಿಕೊಂಡು ಸಮಾನ ದರವನ್ನು ಫಿಕ್ಸ್ ಮಾಡಿ ಮಾರುತ್ತಾರೆ. ಇದೊಂದು ಉತ್ತಮ ಪ್ರಕ್ರಿಯೆ. ನಮ್ಮ ಕೃಷಿ ಉತ್ಪನ್ನಗಳಿಗೂ ಇಂತಹ ವ್ಯವಸ್ಥೆ ಬಂದರೆ ಎಷ್ಟೊಂದು ಒಳಿತಲ್ವಾ.

                       ಕಾಲಕಾಲಕ್ಕೆ ವಿನ್ಯಾಸಗಳು ಬದಲಾಗುತ್ತಲೇ ಇರುತ್ತದೆ. ಒಂದೊಂದು ವಿನ್ಯಾಸಕ್ಕೆ ಒಂದೊಂದು ಕಾಲದಲ್ಲಿ ಡಿಮ್ಯಾಂಡ್. ಯಾವಾಗ ಯಾವುದಕ್ಕೆ ಬೇಡಿಕೆ ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ವಿನ್ಯಾಸವನ್ನು ಮಾರುಕಟ್ಟೆ ನಿಶ್ಚಯ ಮಾಡುತ್ತದೆ. ಅದನ್ನು ಒಪ್ಪಿಕೊಳ್ಳಲೇಬೇಕು. ಅದೇನೂ ತಲೆನೋವಿನ ಕೆಲಸವಲ್ಲ. 'ಉತ್ಪಾದಕನಿಂದ ಗ್ರಾಹಕನ ಕೈಗೆ ಸೀರೆಯೊಂದು ತಲಪುವಾಗ ವ್ಯಾವಹಾರಿಕವಾಗಿ ಆರು ಮಂದಿಯ ಕೈ ದಾಟಿರುತ್ತದೆ. ಮುನ್ನೂರೈವತ್ತು ರೂಪಾಯಿಯ ಸೀರೆ ಗ್ರಾಹಕನಿಗೆ ಸಿಗುವಾಗ ಎಷ್ಟಾಗಬಹುದು ನೀವೇ ಅಂದಾಜಿಸಿ' ಎನ್ನುತ್ತಾರೆ ಹನುಮಂತಪ್ಪ. ಸೀರೆ ಅಂತ ಏನು, ನಮ್ಮೆಲ್ಲಾ ಕೃಷಿ ಉತ್ಪನ್ನಗಳ ಗತಿ ಮತ್ತು ಕತೆ ಇಷ್ಟೇ.

                       ಹತ್ತಿ ಸೀರೆ ತಯಾರಾಗುವ ಊರಲ್ಲೇ ಹತ್ತಿ ನೂಲಿನ ಸೀರೆಯನ್ನು ಉಡುವವರಿಲ್ಲ! ಕೇವಲ ಹೊಟ್ಟೆಪಾಡಿಗಾಗಿ ಸೀರೆ ತಯಾರಿ. 'ನೂರು ರೂಪಾಯಿಗೆ ಮಾರುಕಟ್ಟೆಯಲ್ಲಿ ರಂಗು ರಂಗಿನ ಉತ್ತಮ ಸೀರೆ ಸಿಗುವಾಗ ದುಬಾರಿ ಬೆಲೆ ತೆತ್ತು ಸೀರೆ ಇಷ್ಟಪಡುವುದಿಲ್ಲ. ಇದು ಹತ್ತಿಯಷ್ಟು ಹಗುರ. ಆದರೆ ಹತ್ತಿ ನೂಲಿನ ಸೀರೆ ಭಾರವಲ್ವಾ. ಅಷ್ಟೊಂದು ಭಾರದ ಸೀರೆಯನ್ನು ಉಡುವವರಿಲ್ಲ. ಉಟ್ಟರೆ ಹೆಣ್ಮಕ್ಕಳು ಸ್ಥೂಲವಾಗಿ ಕಾಣುತ್ತಾರೆ' ಮಾತಿನ ಮಧ್ಯೆ ನಗುತ್ತಾ ಶೈಲಜಾ ಹೇಳಿದರು. ಹಾಗೆಂತ ಉಡುವವರೇ ಇಲ್ವಾ, ಇದ್ದಾರೆ - ಮದುವೆ, ಜಾತ್ರೆಗಳಂತಹ ಸಂಭ್ರಮದಲ್ಲಿ ಮಗ್ಗದ ಸೀರೆ ಧರಿಸುವುದು ಪ್ರತಿಷ್ಠೆ. ಈ ಪ್ರತಿಷ್ಠೆ ಬದುಕಿನಲ್ಲೂ ಬರುತ್ತಿದ್ದರೆ..? ಪ್ರತಿಷ್ಠೆಗಳು ಬದುಕಿಗೆ ಪೂರಕವಾಗಿದ್ದರೆ ಚೆಲುವು.

                          ಹಾಗಿದ್ದರೆ ಸೀರೆ ಉಡುವವರು ಯಾರು? 'ಸಾರ್, ಸೀರೆಗೆ ಹೊರ ರಾಜ್ಯಗಳಲ್ಲಿ ಭಾರೀ ಬೇಡಿಕೆ. ನಗರ ಪ್ರದೇಶದ ಹೆಣ್ಮಕ್ಕಳು ತುಂಬಾ ಇಷ್ಟಪಡುತ್ತಾರೆ' ದನಿ ಸೇರಿಸಿದರು ನವೀನಾ. ಹೌದಲ್ವಾ. ಮನೆಬಳಕೆಗೆ ಉಡಲು ನಗರದ ಸಾರಿ. ನಗರದವರಿಗೆ ಉಡಲು ತಂಮನೆ ತಯಾರಿಯ ಸಾರಿ. ತಯಾರಿಸುವವರಿಗೆ ಉಪಯೋಗಿಸಲು ಮಾನಸಿನ ಅಡ್ಡಿ. 'ಮಗ್ಗದ ಸೀರೆಯನ್ನು ಉಟ್ಟರೆ ಪ್ರಾಯದವರು ಉಟ್ಟಂತೆ ಕಾಣುತ್ತದಂತೆ, ಪ್ರಾಯ ಹೆಚ್ಚಾದಂತೆ ತೋರುತ್ತದಂತೆ'! ಹಾಗಾಗಿ ಮೂರು ದಶಕಗಳಿಂದ ಮಗ್ಗದ ಸೀರೆಯನ್ನು ನಿತ್ಯ ಉಡುವ ಪದ್ದತಿ ಶಿಗ್ಲಿಯಲ್ಲಿಲ್ಲ. ಐವತ್ತು ಮೀರಿದ ಹಿರಿಯರಿಗಾದರೂ ಇಷ್ಟವಾಗುತ್ತದಲ್ಲಾ. ಅದೇ ಸಮಾಧಾನ. ಎಲ್ಲವೂ ನಗರಗಳಿಗೆ ರವಾನೆ.
'                      ಕೈಮಗ್ಗದ ಸೀರೆಗೆ ಬೇಡಿಕೆ ಬರಬೇಕಾದರೆ ಟೀವೀಯಲ್ಲಿ ಬರಬೇಕು ಸಾರ್. ಧಾರಾವಾಹಿಗಳಲ್ಲಿ ತಾರೆಯರು ಉಟ್ಟುಕೊಂಡು ನಟನೆ ಮಾಡಬೇಕು. ಆಗ ಹೆಣ್ಮಕ್ಕಳು ಸೀರೆಯನ್ನು ಒಪ್ಪುತ್ತಾರೆ' ಎಂದರು ವಿಷಾದದಿಂದ ಹನುಮಂತಪ್ಪ. ಹೌದಲ್ಲಾ, ವಾಹಿನಿಗಳು ನಮಗೆಲ್ಲಾ ದಾರಿ ತೋರುವ ಗುರು! ಅವಕ್ಕೆ ನಮ್ಮ ಉಡುಗೆ ತೊಡುಗೆಗಳು ಹೇಗಿರಬೇಕು ಎಂದು ನಿರ್ಧರಿಸುವ ಹಿರಿ ಸ್ಥಾನ! ತಾರೆಯರಂತೆ ಉಡುಪು ತೊಡುವ, ವ್ಯಕ್ತಿತ್ವವನ್ನು ಅನುಸರಿಸುವ ನಮ್ಮ ಜೀವನ ಶೈಲಿ, ವರ್ತನೆಗಳು ಬದಲಾದರೆ; ಉಡುವ ಸೀರೆ, ತೊಡುವ ಉಡುಪು, ಪ್ಯಾಂಟ್-ಷರ್ಟ್ ಗಳ ಆಯ್ಕೆ ನಮ್ಮ ಕೈಯಲ್ಲಿರುತ್ತದೆ. ಇಲ್ಲದಿದ್ದರೆ ವಾಹಿನಿಗಳ, ತಾರೆಯರ ಡ್ರೆಸ್ಕೋಡಿಗೆ ಹೊಂದಿಕೊಳ್ಳಬೇಕಾದ ಪ್ರಾರಬ್ಧ! ಇಳಕಲ್ ಸೀರೆ, ಶಿಗ್ಲಿ ಸೀರೆ ಉಟ್ಟು ಧಾರಾವಾಹಿಗಳಲ್ಲೋ, ಸಿನಿಮಾದಲ್ಲೋ ನಟಿಸುವ ತಾರೆಯರು ಬಹುಬೇಗ ಕಾಣಿಸಿಕೊಳ್ಳಲಿ.

                     ಶಿಗ್ಲಿಯಲ್ಲಿ ಪಾರಂಪರಿಕ ಮಗ್ಗಗಳ ಸದ್ದಿನ ನಡುವೆ, ಸುಧಾರಿತ ಯಾಂತ್ರೀಕೃತ ಮಗ್ಗಗಳೂ ಸದ್ದು ಮಾಡುತ್ತಿವೆ. ಆಧುನಿಕ ಆಸಕ್ತಿಗೆ ಅನುಗುಣವಾಗಿ ಹೊಸ ವಿನ್ಯಾಸಗಳನ್ನು ರೂಪಿಸುವ ಮಗ್ಗಗಳತ್ತ ಹೆಣ್ಮಕ್ಕಳು ಆಸಕ್ತರಾಗುತ್ತಿದ್ದಾರೆ. ಆಧುನಿಕ ಮಗ್ಗದ ಯಂತ್ರಗಳು ಕಾಲಕ್ಕೆ ಅಪ್ಡೇಟ್ ಆಗುತ್ತಿರುತ್ತದೆ. ಇಂತಹ ಮಗ್ಗಗಳಲ್ಲಿ ಸೀರೆಗಳನ್ನು ಮುಂಗಡವಾಗಿ ಕಾದಿರಿಸುವ ವ್ಯವಸ್ಥೆ ಹೆಜ್ಜೆಯೂರುತ್ತಿದೆ. ಹಳ್ಳಿಯ ಸಂಪಾದಿತ ಹಣ ಹಳ್ಳಿಯಲ್ಲೇ ವಿನಿಯೋಗ. ಸ್ಥಳದಲ್ಲೇ ಉದ್ಯೋಗ. ಹಂಗಿಲ್ಲದ ಸ್ವಾವಲಂಬಿ ಬದುಕು.
'                    ಟೀವೀಯ ಧಾರಾವಾಹಿಗಳಲ್ಲಿ ನಟಿಸುವ ತಾರೆಯರು ಶಿಗ್ಲಿ ಸೀರೆಯುಡಬೇಕು' ಎಂಬ ಹನುಮಂತಪ್ಪನವರ ಮಾತಲ್ಲಿ ವಿಷಾದದ ಗುಡ್ಡೆಯೇ ಕಾಣುತ್ತದೆ. ಆರು ದಶಕಗಳ ಬದುಕನ್ನು ಕಂಡ ಅವರ ಕಣ್ಣುಗಳಲ್ಲಿ ತನ್ನೂರಿನ ಸಂಸ್ಕೃತಿಯ ಇಳಿಲೆಕ್ಕ ಕಾಣಲು ಕಷ್ಟವೇನಿಲ್ಲ. ಇದು ಶಿಗ್ಲಿ ಹಳ್ಳಿಯೊಂದರ ಕತೆಯಲ್ಲ, ಎಲ್ಲಾ ಹಳ್ಳಿಯ ಕತೆ.

0 comments:

Post a Comment