ಹಲಸಿನ ಮರದ ಎಲೆಯಿಂದ ತಯಾರಿಸಿದ 'ಕೊಟ್ಟೆ'ಯಲ್ಲಿ ಮಾಡಿದ ತಿಂಡಿ 'ಕೊಟ್ಟೆ ಕಡುಬು'. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರಚಲಿತ. ಸಮಾರಂಭಗಳಲ್ಲಿ ಕಡುಬಿಗೆ ಎತ್ತರದ ಸ್ಥಾನ. ಕೊಟ್ಟೆಗೆ 'ತೊಟ್ಟೆ, ಮೂಡೆ' ಎಂದೂ, ಕಡುಬಿಗೆ 'ಕೊಟ್ಟಿಗೆ' ಎನ್ನುವುದೂ ಇದೆ.
ಕೊಟ್ಟೆ ತಯಾರಿಸುವುದು ಜಾಣ್ಮೆ ಕೆಲಸ. ಹಲಸಿನ ನಾಲ್ಕು ಎಲೆಗಳ ತುದಿಗಳನ್ನು ಚಿಕ್ಕ ಕಡ್ಡಿ ಸಹಾಯದಿಂದ ಮೊದಲು ಜೋಡಿಸುತ್ತಾರೆ. ನಂತರ ವೃತ್ತಾಕಾರವಾಗಿ (ಎಲೆಯ ಹಿಂಭಾಗ ಕೊಟ್ಟೆಯ ಒಳಮೈಗೆ ಬರುವಂತೆ) ಎಲೆಗಳನ್ನು ಜೋಡಿಸುತ್ತಾ ಬಂದಾಗ 'ಕೊಟ್ಟೆ' ಸಿದ್ಧ. ರುಬ್ಬಿದ ಅಕ್ಕಿಹಿಟ್ಟನ್ನು ಕೊಟ್ಟೆಯೊಳಗೆ ತುಂಬಿ ಹಬೆಯಲ್ಲಿ ಬೇಯಿಸಿದರೆ 'ಕೊಟ್ಟೆ ಕಡುಬು' ರೆಡಿ. ಬೆಂದ ಬಳಿಕ ಎಲೆಗಳನ್ನು ತೆಗೆಯಬೇಕು. ಕಡುಬಿನ ಮೇಲೆ ಎಣ್ಣೆ ಯಾ ತುಪ್ಪ ಹಾಕಿ, ಚಟ್ನಿಯೊಂದಿಗೆ ಸವಿಯಲು ಕುಳಿತರೆ ಐದಾರು ಕಡುಬು ಹೊಟ್ಟೆಗಿಳಿಯುವುದು ಗ್ಯಾರಂಟಿ.
ಹಲಸಿನ ಎಲೆಯ ಕೊಟ್ಟೆಯನ್ನು ಹಳ್ಳಿಯಲ್ಲಿ ಮನೆಯಲ್ಲೇ ತಯಾರಿಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ತಯಾರಿಸುವುದು ಶ್ರಮ ಬೇಡುವ ಕೆಲಸ. ಆಗುಂಬೆಯ ಬಾಲಕೃಷ್ಣ ನಾಯಕರು ಕಳೆದ ಒಂಭತ್ತು ವರುಷದಿಂದ 'ಕೊಟ್ಟೆ' ತಯಾರಿಸುತ್ತಾರೆ. ಹೆಂಡತಿ ರಾಧಿಕಾ ಸಾಥ್. ದಿವಸಕ್ಕೆ ಏನಿಲ್ಲವೆಂದರೂ 250-300 ಖಾಯಂ ಗಿರಾಕಿಗಳು. ನೂರು ಕೊಟ್ಟೆಗೆ 60-80 ರೂಪಾಯಿ.
ಆಗುಂಬೆ ಸುತ್ತಮುತ್ತಲಿನ ಹೋಟೆಲ್ ಅಲ್ಲದೆ; ಶಿವಮೊಗ್ಗ, ತೀರ್ಥಹಳ್ಳಿಯ ಹೋಟೆಲ್ಗಳಲ್ಲಿ ಸಿಗುವ ಕಡುಬಿಗೆ ಬಳಸಿದ ಕೊಟ್ಟೆ ನಾಯಕರದು. ಬಸ್ ಮೂಲಕ ಕಳುಹಿಸಿಕೊಡುತ್ತಾರೆ. ಚಾಲಕ, ನಿರ್ವಾಹಕರು ಪರಿಚಿತರಾದ್ದರಿಂದ ಶುಲ್ಕದ ಕಿರಿಕಿರಿ ಕಡಿಮೆ! ಮನೆಗೆ ನೆಂಟರು ಬಂದರೆ ಕೊಟ್ಟೆಗಾಗಿ ಓಡಿ ಬರುವ ಗ್ರಾಹಕರಿದ್ದಾರೆ. ಆತ್ಮೀಯರಿಗೆ ಉಚಿತವಾಗಿ ನೀಡುವುದೂ ಇದೆ!
ಹಲಸಿನ ಎಲೆಯನ್ನು ಆಯುವುದು ಮುಖ್ಯ ಕೆಲಸ. ಸಿದ್ಧವಾದ ಕೊಟ್ಟೆಯನ್ನು ಪ್ಲಾಸ್ಟಿಕ್ಕಿಚೀಲದೊಳಗಿಟ್ಟರೆ ಮಳೆಗಾಲದಲ್ಲಾದರೆ ನಾಲ್ಕೈದು ದಿವಸ ತಾಳಿಕೆ. ಬೇಸಿಗೆಯಲ್ಲಿ ಎರಡೇ ದಿವಸ. 'ಫ್ರೆಶ್ ಎಲೆಯಲ್ಲಿ ತಯಾರಿಸಿದ ಕೊಟ್ಟೆಕಡುಬು ತಿನ್ನಲು ರುಚಿ' ಎನ್ನುತ್ತಾರೆ ರಾಧಿಕಾ ನಾಯಕ್. 'ಆಗುಂಬೆ ಸುತ್ತಮುತ್ತ ವಿಪರೀತ ಮಳೆ ಬೀಳುವ ಕಾರಣ ಎಲೆಯ ಮೇಲೆ ಪಾಚಿ ಅಂಟಿಕೊಂಡಿರುತ್ತದೆ. ಹಾಗಾಗಿ ಈ ಸಮಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲೆಯನ್ನು ಆಯ್ದುಕೊಳ್ಳುತ್ತೇನೆ' ಎನ್ನುತ್ತಾರೆ ನಾಯಕರು.
ಕೊಟ್ಟೆ ತಯಾರಿಸಲು ಪೊರಕೆಯ ಕಡ್ಡಿಯನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ನಾಯಕರು ಓಟೆ ಬಿದಿರನ್ನು ಆಯ್ಕೆಮಾಡುತ್ತಾರೆ. ಕಾರಣ, ಎಷ್ಟಾದರೂ ಪೊರಕೆಯಲ್ವಾ..! ಅರ್ಧ ಅಡಿಯಷ್ಟು ಉದ್ದದ ಸಪೂರ ಕಡ್ಡಿಗಳನ್ನು ಮೊದಲೇ ಮಾಡಿಟ್ಟುಕೊಂಡು, ಕೊಟ್ಟೆ ಮಾಡುವಾಗ ಬೇಕಾದಷ್ಟು ಗಾತ್ರಕ್ಕೆ ತುಂಡರಿಸಿಕೊಳ್ಳುತ್ತಾರೆ.
ವರುಷದಲ್ಲಿ ಒಂಭತ್ತು ತಿಂಗಳು ಕೆಲಸ. ಗಣಪತಿ ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚು. ಎರಡು ಸಾವಿರದ ತನಕ ಆರ್ಡರ್ ಬಂದುಬಿಡುತ್ತದೆ. ಆಗ ಕೈತುಂಬಾ ಕೆಲಸ. ಕೆಲವು ಹಬ್ಬದ ಸಮಯದಲ್ಲೂ ನಿತ್ಯ ತಯಾರಿಸುವ ಕೊಟ್ಟೆಯಲ್ಲದೆ ಹೆಚ್ಚುವರಿಯಾಗಿ ಮಾಡಬೇಕಾಗುತ್ತದೆ.
'ದನಗಳ ಕೆಲಸ, ನಾಟಿಔಷಧ, ರೈನ್ಕೋಟ್ ತಯಾರಿ, ಮನೆವಾರ್ತೆಗಳ ಮಧ್ಯೆ ಸ್ವಲ್ಪ ಹೊತ್ತು ಕೊಟ್ಟೆ ರೆಡಿ ಮಾಡಲು ಹೊಂದಿಸಿಕೊಳ್ಳುತ್ತೇವೆ. ಹೆಚ್ಚು ಆರ್ಡರ್ ಬಂದರೆ ಕಷ್ಟ. ಮೊದಲೇ ಹೇಳಿದರೆ ಮಾಡಿಟ್ಟುಕೊಳ್ಳಬಹುದು' ಎನ್ನುತ್ತಾರೆ ಬಾಲಕೃಷ್ಣ ನಾಯಕ್. (94831 66247) ಹಪ್ಪಳ, ಉಪ್ಪಿನಕಾಯಿ ಅವರ ಇನ್ನಿತರ ಗೃಹ ಉತ್ಪನ್ನಗಳು.
ಮಂಗಳೂರಿನಲ್ಲೂ ಕೊಟ್ಟೆ ತಯಾರಿಸುವ ಕೆಲವು ಕುಟುಂಬಗಳಿವೆ. ನಗರದ ಪ್ರತಿಷ್ಠಿತ ಹೋಟೆಲ್ಗಳು ಕೊಟ್ಟೆಯೊಂದಕ್ಕೆ ಎರಡೂವರೆಯಿಂದ ಮೂರು ರೂಪಾಯಿ ನೀಡಿ ಖರೀದಿಸಿ ಕೊಟ್ಟೆ ಕಡುಬು ತಯಾರಿಸುತ್ತಿವೆ.
0 comments:
Post a Comment