"ಕೃಷಿಯು ಕೈಗಾರಿಕೆಯಾಗಬಾರದು. ಜೀವನ ವಿಧಾನವಾಗಬೇಕು. ಕೈಗಾರಿಕೆಯಾದರೆ ಕೃಷಿ ನಾಶವಾಗುತ್ತದೆ," ಎಂದು ಅಡ್ಡೂರು ಶಿವಶಂಕರ ರಾಯರು (91) ನಾಲ್ಕು ದಶಕದ ಹಿಂದೆಯೇ ಎಚ್ಚರಿಸಿದುದು ಈಗ ಸತ್ಯವಾಗುತ್ತಿದೆ! ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾ 'ಮಾಡಿ-ಬೇಡಿ'ಗಳನ್ನು ಹೇಳಿದ ಕೃಷಿಕ ವಿಜ್ಞಾನಿ.
ಅಡ್ಡೂರು ಸ್ವಾತಂತ್ರ್ಯ ಹೋರಾಟಗಾರ. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಆದ್ಯ ಸಂಘಟಕ. ಬಾಲ್ಯದಲ್ಲೇ ಬಡತನ ಕಷ್ಟದ ಸ್ವಾನುಭವಿ. ಗ್ರಾಮೀಣ ಭಾರತದ ಬದುಕಿನತ್ತ ಕಳಕಳಿ. ಭಾರತೀಯ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತಗಳು ತನ್ನ ಯೋಚನೆಗಳನ್ನು ಸ್ಪರ್ಶಿಸುತ್ತಿದ್ದುದರಿಂದ ಪಕ್ಷವನ್ನು ಒಪ್ಪಿಕೊಂಡು ಅದರ ಬೆಳವಣಿಗೆಯ ಅಡಿಗಲ್ಲಾದರು.
ಕನ್ನಾಡಿನಾದ್ಯಂತ ಬಡವರ ದನಿಯಾದರು. ಕಾರ್ಮಿಕ ಹೋರಾಟದ ನಾಯಕರಾದರು. ಸೆರೆಮನೆ ಸೇರಿದರು. ಪಕ್ಷ ನಿಷೇಧವಾದಾಗ ಭೂಗತರಾಗಿ ಹಳ್ಳಿ, ಕೇರಿಗಳಲ್ಲಿ ವಾಸ. ಅನ್ನ ನೀರಿಲ್ಲದ ದುಡಿತ. ಪಕ್ಷ ಹೋಳಾದಾಗ ಮರುಗಿದರು. ಯಾರ ಪರವೂ ನಿಲ್ಲದೆ ಹೊರಗೆ ಬಂದರು.
ಕೃಷಿ ಮತ್ತು ಕೃಷಿಕನನ್ನು ದೇಶದ ಆಡಳಿತ ವ್ಯವಸ್ಥೆಗಳು 'ಯೂಸ್ ಅಂಡ್ ಥ್ರೋ' ಮಾಡುತ್ತಾ ಬದುಕಿನೊಂದಿಗೆ ಆಟವಾಡುತ್ತಿವೆ. ಅದಕ್ಕಾಗಿ ಕೃಷಿಕನೇ ರೂಪಿಸುವ ನೀತಿ ಬೇಕು, ಎಂಬ ಯೋಜನೆ ಮನದಲ್ಲಿತ್ತು. ಪಕ್ಷದಿಂದ ದೂರ ನಿಂತ ಬಳಿಕ ಯೋಜನೆಯನ್ನು ಗಟ್ಟಿ ಮಾಡಲು ಅಡ್ಡೂರಿನ ಸ್ವಂತ ಭೂಮಿಯಲ್ಲಿ ಕೃಷಿಗಿಳಿದರು.
ಕೃಷಿ ಸಂಸ್ಕೃತಿಯನ್ನು ಹುಟ್ಟು ಹಾಕುವಂತಹ, ರಕ್ಷಿಸುವಂತಹ ಹೋರಾಟಗಳು ಹಳ್ಳಿಗಳಲ್ಲಾಗಬೇಕು. ಬೇಡಿಕೆಗಳೇ ಮುಖ್ಯವಾಗಿರುವ ಹೋರಾಟಗಳಿಂದ ಮನಸ್ಸುಗಳು ಒಂದಾಗಲಾರವು, ಇವರ ನಿಲುವುಗಳು, ಮುಂದೆ ಕೃಷಿ ಕೆಲಸಗಳಲ್ಲಿ ಕಾಣುತ್ತಿತ್ತು. ಎಲ್ಲಾ ಕೆಲಸಗಳಲ್ಲೂ ಕೃಷಿ ಸಮುದಾಯದ ಹಿತಾಸಕ್ತಿ.
1960ನೇ ಇಸವಿ. ಪೊಳಲಿ ಸನಿಹದ ಅಡ್ಡೂರಿನಲ್ಲಿ ಪಾಲಿಗೆ ಸಿಕ್ಕಿದುದು ಆರೆಕ್ರೆ 'ಮುಳೀಪಡ್ಪು' ಭೂಮಿ. ಫಲವತ್ತಲ್ಲದ ಜಂಬಿಟ್ಟಿಗೆ ಮಣ್ಣು. ಅಡಿಕೆ ಕೃಷಿಯ ಹೊರತಾಗಿ ಮಿಶ್ರ ಕೃಷಿಯತ್ತ ನೀಲನಕ್ಷೆ. ಮೊದಲಿಗೆ ಗಂಗಬೊಂಡಂ, ಜಾವಾ, ಫಿಲಿಫೈನ್ಸ್, ಅಂಡಮಾನ್ ಜಾಯಿಂಟ್, ಮಲೇಶಿಯಾ.. ಹೀಗೆ ವಿವಿಧ ತೆಂಗು ತಳಿಗಳ ಅಭಿವೃದ್ಧಿ. ಜತೆಗೆ ಕಾಳಪ್ಪಾಡಿ, ಬೆನೆಟ್ ಆಲ್ಫಾನ್ಸೋ, ಬಾದಾಮಿ, ಪೈರಿ.. ಉತ್ತಮ ತಳಿಯ ಮಾವಿನ ಗಿಡಗಳ ನಾಟಿ. ತೆಂಗಿನ ಮಧ್ಯೆ ಗೇರು, ಚಿಕ್ಕು, ದೀವಿಹಲಸು, ಲವಂಗ ಗಿಡಗಳು. ತೋಟದ ಒಂದು ಬದಿಯಲ್ಲಿ ಬಿದಿರು ಸಂಸಾರ.
ಕೃಷಿ ಇಲಾಖೆಗಳ ಸಲಹೆಯಂತೆ ಭತ್ತದಲ್ಲಿ ಜಪಾನ್ ಕೃಷಿ ಪದ್ಧತಿ ಅಳವಡಿಕೆ. ರಾಸಾಯನಿಕ ಗೊಬ್ಬರ, ಸಿಂಪಡಣೆಗಳ ಪ್ರಯೋಗ. ಒಂದು ವರ್ಷ ಇಳುವರಿ ಹೆಚ್ಚು ಬಂದರೂ, ನಂತರದ ವರ್ಷಗಳಲ್ಲಿ ಕಡಿಮೆಯಾಗುತ್ತಾ ಬಂದುವು. ಇದು ರಾಸಾಯನಿಕದ ಮಹಿಮೆ ಎಂದು ಬಾಯಿತುಂಬಾ ನಕ್ಕ ದಿವಸಗಳು ನೆನಪಾಗುತ್ತವೆ.
'ನಿಮ್ಮ ಮಣ್ಣು ಚೆನ್ನಾಗಿದೆ. (ಫಲವತ್ತಾಗಿಲ್ಲ ಎಂಬುದು ಅಡ್ಡೂರರಿಗೆ ಗೊತ್ತಿತ್ತು) ನೆಲಗಡಲೆ ಬೆಳೆದು ಲಾಭ ಪಡೆಯಿರಿ, ಅಧಿಕಾರಿಗಳಿಂದ ಮನವೊಲಿಕೆ. ನೆಲಗಡಲೆ ಕೃಷಿಗೆ ಶ್ರೀಕಾರ. ಕಟಾವ್ ಹಂತಕ್ಕೆ ಬಂದಾಗ ಎಲ್ಲಿದ್ದವೋ ಏನೋ ಇರುವೆಗಳ ಧಾಳಿ. 'ಒಂದು ಸೇರು ಕಡಲೆ ಸಿಕ್ಕಿಲ್ಲ ಮಾರಾಯ್ರೆ,' ಎಂದಿದ್ದರು. ನೆಲಗಡಲೆ ಕೃಷಿಯ ಫೈಲ್ ಮುಚ್ಚಿದಾಗ, ಜೋಳ ಬೆಳೆಯುವತ್ತ ಆಸಕ್ತರಾಗಿ ಉತ್ತಮ ತಳಿಯ ಜೋಳ ಬೆಳೆದರು. ಆಳೆತ್ತರದ ಸಸಿಗಳು. ಕಾಳುಕಟ್ಟುವ ಹೊತ್ತಿಗೆ ಗಿಳಿಗಳ ಸೈನ್ಯ ಆಕ್ರಮಣ. ಕೈಗೆ ಬಂದ್ರೂ ಬಾಯಿಗೆ ಬರಲಿಲ್ಲ.
ಹಿತೈಷಿಯೊಬ್ಬರ ಸಲಹೆಯಂತೆ 'ಸೀ-ಐಲ್ಯಾಂಡ್' ಹತ್ತಿಯ ಕೃಷಿ ಮಾಡಿದರು. ಖರ್ಚು-ವೆಚ್ಚದ ಲೆಕ್ಕ ಸರಿಸಮವಾಗಿತ್ತು. ಆಗ ಸರಕಾರ ಹತ್ತಿ ಪ್ಯಾಕೇಜನ್ನು ರದ್ದು ಮಾಡಿತ್ತು. ಹಲವಾರು ಸಿಂಪಡಣೆಯನ್ನು ಬೇಡುತ್ತಿದ್ದ ಹತ್ತಿಯ ಸಹವಾಸ ಹಿತವಾಗದೆ ವಿದಾಯ. ಬಳಿಕ ಕಬ್ಬು, ರಾಗಿಗಳ ಸರದಿ.
ಅಡ್ಡೂರು ಚಿತ್ತ ಕಾಡು ಮರಗಳ ಕೃಷಿಯತ್ತ ಹೊರಳಿತು. ಮಾಹಿತಿಗಾಗಿ ಇಲಾಖೆಗಳ ಭೇಟಿ. ಆಪ್ತರ ಸಂಪರ್ಕ. ಮರ ಬೆಳೆದರೂ ಅದನ್ನು ಕಡಿಯಲು ಸರಕಾರದ ಕಿರಿಕಿರಿ ತಪ್ಪಿದ್ದಲ್ಲ. ಕಡಿಯದ ಮರದಿಂದ ನನಗೆ ಏನು ಪ್ರಯೋಜನ? ಮೊಳಕೆಯಲ್ಲೇ ಮರ ಕೃಷಿಯ ಆಸೆ ಕಮರಿತು ಮ್ಯಾಂಜಿಯಂ, ಸಾಗುವಾನಿ.. ಮೊದಲಾದ ಮರಗಳು ಹದಿನೈದು ವರುಷಗಳಲ್ಲಿ ಒಳ್ಳೆಯ ಆದಾಯ ಬರುತ್ತದೆ ಎಂಬ ಪ್ರಚಾರವಿದೆಯಲ್ಲಾ ಅದೆಲ್ಲಾ ಸುಳ್ಳು. ಕೃಷಿಕರನ್ನು ದಾರಿ ತಪ್ಪಿಸುವ ಪ್ರಚಾರ, ಅಡ್ಡೂರರ ಖಡಕ್ ಮಾತಿನಲ್ಲಿ ಸಂದೇಶವಿಲ್ವಾ.
ತನ್ನೂರಿನ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಶಿಕ ಉತ್ಸವ ಎಪ್ರಿಲಿನಲ್ಲಿ ನಡೆಯುತ್ತಿದೆ. ಜಾತ್ರೆಯ ದಿವಸಕ್ಕೆ ಇಳುವರಿ ಬರುವಂತೆ ಕೃಷಿಕರು ಕಲ್ಲಂಗಡಿ ಬೆಳೆಯುತ್ತಾರೆ. ಇದರ ಮೂಲ ತಳಿಯ ರುಚಿ ಸಪ್ಪೆ. ಬಾಯಾರಿಕೆ ನೀಗುತ್ತಿತ್ತಷ್ಟೇ. ಸಪ್ಪೆ ಕಲ್ಲಂಗಡಿಯ ಬದಲಿಗೆ ಸಿಹಿಯದನ್ನು ಬೆಳೆದರೆ ಹೇಗೆ?
ಬೀಜ ಮಾರಾಟಗಾರರ ಸಂಪರ್ಕ. ಫರೂಕ್ಕಾಬಾದಿ, ಫೈಜಾಬಾದಿ, ಶುಗರ್ಬೇಬಿ, ಅಶಾಯಿ ಯಮಾಟೋ, ಮಧು ತಳಿಗಳ ಬೀಜಗಳು ಸಿಕ್ಕಿತು. ಪರೀಕ್ಷಾರ್ಥವಾಗಿ ಬೆಳೆದರು. ಇದರಲ್ಲಿ ಅಶಾಯಿ ಯಮಾಟೋ ಮತ್ತು ಮಧು ತಳಿಗಳ ಕಲ್ಲಂಗಡಿಯಿಂದ ಬಾಯಿ ಸಿಹಿಯಾಯಿತು. ಜನರು ಮುಗಿಬಿದ್ದು ತಿಂದರು. ಕಾಸು ಮಾತ್ರ ಕೈಗೆ ಬರಲಿಲ್ಲ.
ಮುಂದಿನ ವರುಷ ಕಂಪೆನಿಯಿಂದಲೇ ಬೀಜ ತರಿಸಿ ಕೃಷಿ ಮಾಡಬೇಕಾಗಿತ್ತು. ಬೀಜದ ದರವೂ ದುಬಾರಿ. ಕೃಷಿಕರು ಉಮೇದು ತೋರಲಿಲ್ಲ. ಹೈಬ್ರಿಡ್ ಬೀಜವನ್ನು ತನ್ನಲ್ಲೇ ತಯಾರಿ ಮಾಡಲು ಕಂಪೆನಿ ಜತೆಗೆ ಒಪ್ಪಂದ ಮಾಡಿಕೊಂಡು ಕಲ್ಲಂಗಡಿ ಬೆಳೆದರು. ಅದೇನೂ ಹೇಳುವಂತಹ ಖುಷಿ ಕೊಡಲಿಲ್ಲ.
ಅಡ್ಡೂರರ ಜತೆ ಅವರ 'ಕೃಷ್ಣಾ ಫಾರ್ಮ್’ ನಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಹೇಳಿದ ನೆನಪು, ರಾಸಾಯನಿಕ ಗೊಬ್ಬರ, ವಿಷ ಸಿಂಪಡಣೆಯನ್ನು ಸರಕಾರವು ಕೃಷಿಕರ ಕೈಗೆ ಕೊಟ್ಟಿತು. ಒಂದಷ್ಟು ಸಮಯದ ಬಳಿಕ ಸಾವಯವ ಕೃಷಿ ಮಾಡಿ ಉತ್ಪತ್ತಿ ಚೆನ್ನಾಗಿ ಬರುತ್ತದೆ. ಯಾರನ್ನು ನಂಬಲಿ ಮಾರಾಯ್ರೆ. ಸೊಪ್ಪಿನ ಗುಡ್ಡಗಳೇ ಇಲ್ಲದ ಮೇಲೆ ಹೇಗೆ ಸಾವಯವ ಕೃಷಿ ಮಾಡಲಿ.
ಐವತ್ತರ ದಶಕದಲ್ಲಿ ಮದ್ರಾಸು ಪ್ರಾಂತ್ಯದ ಕೃಷಿ ನಿರ್ದೇಶಕರೊಬ್ಬರು ಭಾರತದ ರೈತನಿಗೆ ಗ್ಲಿರಿಸೀಡಿಯಾ ದೊಡ್ಡ ಕೊಡುಗೆ ಎಂದಿದ್ದರು. ಗ್ರಾಮಸೇವಕರು, ಇಲಾಖೆ ಅಧಿಕಾರಿಗಳು ನೆಡಲು ಒತ್ತಾಯ ಮಾಡಿದ್ದರು. ಗದ್ದೆಯ, ತೋಟದ ಬದುಗಳಲ್ಲಿ ಗ್ಲಿರಿಸೀಡಿಯಾ ನೆಟ್ಟಾಗ ಗೇಲಿ ಮಾಡಿದವರು ಹೆಚ್ಚು. ಈಗದು ವ್ಯಾಪಕವಾಗಿದೆ.
ಅಡ್ಡೂರು ಶಿವಶಂಕರ ರಾಯರಿಗೆ ಕೃಷಿ ವಿಜ್ಞಾನಿಗಳು, ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯವಿತ್ತು. ಸೆಮಿನಾರು, ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಭಾಷಣಗಳನ್ನು ಕೇಳಿ ಬರುವವರಲ್ಲ, ವಿಚಾರದ ಸತ್ಯಾಸತ್ಯತೆಗಳನ್ನು ಪೋಸ್ಟ್ಮಾಟಂ ಮಾಡುತ್ತಿದ್ದರು. ಸಭೆಗಳಲ್ಲಿ ಪ್ರಶ್ನೆ ಕೇಳಲು ಎದ್ದುನಿಂತಾಗ ಬೆವರದ ಅಧಿಕಾರಿಗಳು ಕಡಿಮೆ! ವಿವಿಧ ಪ್ರಯೋಗಗಳನ್ನು ತನ್ನ ಭೂಮಿಯಲ್ಲಿ ಮಾಡುತ್ತಿದ್ದುದರಿಂದ ಅದನ್ನು ನೋಡಲು ಕೃಷಿಕರು, ಇಲಾಖೆಯವರು ಕ್ಷೇತ್ರ ಭೇಟಿ ಮಾಡುತ್ತಿದ್ದರು.
ಅಡ್ಡೂರು ಅವರಿಗೆ ಪುಸ್ತಕವು ಎರಡನೇ ಸಂಗಾತಿ. ಮೂರು ಸಾವಿರಕ್ಕೂ ಮಿಕ್ಕಿದ ಪುಸ್ತಕ ಸಂಗ್ರಹ. ಶೋಕಿಗಾಗಿ ಅಲ್ಲ, ಓದಿ ಮನನಿಸಿದ್ದಾರೆ. ವಿಚಾರಗಳನ್ನು ಹಂಚಿಕೊಂಡಿದ್ದಾರೆ. "ತಂದೆಯವರ ಪುಸ್ತಕ ಓದಿನ ಹವ್ಯಾಸದಿಂದಾಗಿ ನಮಗೂ ಪುಸ್ತಕ ಓದುವ ಹುಚ್ಚು ಬಂದುಬಿಟ್ಟಿದೆ," ಎನ್ನುತ್ತಾರೆ ಚಿರಂಜೀವಿ ಅಡ್ಡೂರು ಕೃಷ್ಣ ರಾವ್. ಯಾವುದೇ ಸಮಾರಂಭಕ್ಕೆ ಹೋದಾಗಲೂ ನೋಟ್ಸ್ ಮಾಡಿಟ್ಟುಕೊಳ್ಳುವುದು ರಾಯರ ಅಭ್ಯಾಸ. ಎಲ್ಲಾ ನೋಟ್ಸ್ಗಳನ್ನು ಮುಂದಿಟ್ಟುಕೊಂಡು ಬರೆಯಲು ಶುರು ಮಾಡಿದರೆ ಬಹುಶಃ ಅದೇ ದಕ್ಷಿಣ ಕನ್ನಡದ ಕೃಷಿಯ ಇತಿಹಾಸವಾಗಬಹುದೇನೋ?
ಕೃಷಿ ಪ್ರವಾಸ, ಸಂಘಟನೆಗಳ ರೂಪೀಕರಣದಲ್ಲಿ ಅನುಭವ ವಿಸ್ತಾರ ಪಡೆದ ಅಡ್ಡೂರರು, "ಕೃಷಿಕನಾದವನಿಗೆ ಹೆಂಡತಿ, ಮಕ್ಕಳು ಮನೆಯಲ್ಲಿದ್ದುಕೊಂಡು, ಕೃಷಿಯ ಸಹಾಯ ಮಾಡಿಕೊಂಡಿದ್ದರೇನೇ ಸಂತೃಪ್ತಿ, ಸಮಾಧಾನ, ಖುಷಿ. ಆ ಭಾಗ್ಯ ನನಗಿರಲಿಲ್ಲ," ಎನ್ನುವಾಗ ಅವರ ಕಣ್ಣಂಚಿನಲ್ಲಿ ಜಿನುಗಿದ ನೀರನ್ನು ಕಂಡಿದ್ದೆ. ಇಡೀ ಬದುಕನ್ನು ಒಂದೇ ವಾಕ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
ಬದುಕಿನ ಪಥದಲ್ಲಿ ಸಿಗುವ ಜ್ಞಾನವನ್ನೆಲ್ಲಾ ಆಪೋಶನ ಮಾಡುವ ಅವ್ಯಕ್ತ ಶಕ್ತಿಯನ್ನು ಹೊಂದಿದ್ದ ಅಡ್ಡೂರು ಶಿವಶಂಕರ ರಾಯರು ಫೆ.19, 2013ರಂದು ವಿಧಿವಶರಾದರು. ಅರಸಿ ಬಂದ ಅವಕಾಶಗಳನ್ನೆಲ್ಲಾ ನಿರಾಕರಿಸಿ ಸಾಧನೆಯ ಜತೆಗೆ ಸರಸವಾಡಿದ್ದಾರೆ. ಸಾಮಾನ್ಯರ ಮಧ್ಯೆ ಸದ್ದಿಲ್ಲದೆ ಅಸಾಮಾನ್ಯರಾಗಿ ಬೆಳೆದರು. ಆದರ್ಶಗಳು ಮರೀಚಿಕೆಯಾಗುವ ಈ ದಿನಮಾನದಲ್ಲಿ ಅಡ್ಡೂರರು 'ಬದುಕಿ ಬಾಳಿದ ಮಾದರಿ ಬದುಕಿನ' ಚಿತ್ರವನ್ನು ಬಿಟ್ಟುಹೋಗಿದ್ದಾರೆ.
0 comments:
Post a Comment