Wednesday, April 10, 2013

ಹೊರ ಕೆಲಸವೀಗ ಹಗುರ



           
                 "ಇಸ್ರೆಲಿನಲ್ಲಿ ಕೃಷಿ ಕೆಲಸಗಳಲ್ಲಿ ಟ್ರಾಕ್ಟರುಗಳನ್ನು ಬಳಸುವುದು ರೂಢಿ. ಜತೆಗೆ ತೋಟಗಳಲ್ಲಿ ಎಲವೇಟರ್ಗಳು (ಮೇಲೆತ್ತುವ ಯಂತ್ರ) ಕಂಡುಬರುತ್ತವೆ. ವಾಹನದ ಮೇಲೆ ಎಲವೇಟರ್ಗಳನ್ನಿಟ್ಟು ಇಪ್ಪತ್ತರಿಂದ ಮೂವತ್ತು ಅಡಿ ಎತ್ತರದ ಮರದಲ್ಲಿರುವ ಹಣ್ಣುಗಳನ್ನು ಕೊಯ್ಯಬಹುದು. ನಮ್ಮೂರಿನಲ್ಲಾದರೆ ಅಡಿಕೆ ಮರಗಳಿಗೆ ಬೋರ್ಡೋ ದ್ರಾವಣವನ್ನೂ ಸಿಂಪಡಿಸಬಹುದೇನೋ? ಸಣ್ಣ ಮರಗಳಾದರೆ ಅಡಿಕೆ ಗೊನೆ ಕೊಯ್ಯಲೂ ಓಕೆ," ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ, ಕೃಷಿ ಯಂತ್ರಗಳ ವಸ್ತುಪ್ರದರ್ಶನಕ್ಕಾಗಿ ಇಸ್ರೆಲಿಗೆ ಹೋದಾಗಿನ ಕ್ಷಣಗಳನ್ನು ನೆನಪುಮಾಡಿಕೊಂಡರು.

                      ಚೀನಾ, ಇಸ್ರೆಲ್.. ದೇಶಗಳಲ್ಲಿ ಯಂತ್ರಗಳ ಬಳಕೆ ಅನನ್ಯ. ಕೃಷಿಯಲ್ಲಿ ಕಾರ್ಮಿಕ ಸಮಸ್ಯೆಯ ಸುಳಿವು ಸಿಕ್ಕುವ ಮೊದಲೇ ಇವೆಲ್ಲಾ ಯಂತ್ರಗಳತ್ತ ದೊಡ್ಡ ಹೆಜ್ಜೆಯೂರಿವೆ. ನಮ್ಮೂರಲ್ಲಿ ಕೃಷಿ ಕಾರ್ಮಿಕ ಸಮಸ್ಯೆ ಬರುವ ಮೊದಲೂ, ಬಂದಾಗಲೂ ನಿರ್ಲಿಪ್ತರಾಗಿದ್ದೆವು. ಸಮಸ್ಯೆ ಬಂದು ಹತ್ತು ವರುಷಗಳ ನಂತರ ನಿಧಾನಕ್ಕೆ ಕಣ್ಣುಜ್ಜಿಕೊಳ್ಳುತ್ತಾ ಎದ್ದಿದ್ದೇವೆ, ಕಳೆದ ವರುಷ ಪುತ್ತೂರಿನಲ್ಲಿ ಜರುಗಿದ ಯಂತ್ರಮೇಳವನ್ನು ಉದ್ಘಾಟಿಸಿದ ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರ ಮಾತು ಪಸ್ತುತ ದಿನಗಳಿಗೆ ಕನ್ನಡಿ.

                     ಕೃಷಿಕರಿಗೆ ಕಂಪನಿ ಪ್ರಣೀತ ಯಂತ್ರಗಳ ಖರೀದಿ ಎಟುಕದ ದ್ರಾಕ್ಷಿ. ಸಾವಿರವಲ್ಲ, ಲಕ್ಷಕ್ಕೂ ಮಿಕ್ಕಿ ರೂಪಾಯಿಗಳ ವ್ಯವಹಾರ. ಸಬ್ಸಿಡಿಗಾಗಿ ಸರಕಾರಿ ಇಲಾಖೆಗಳ ಮೆಟ್ಟಿಲು ಹತ್ತಿದರೆ ಗೋಳು. ಫೈಲುಗಳ ಹಿಂದೆ ಓಡಾಡಿ ಹೈರಾಣ. ಈ ಮಧ್ಯೆ ಕೃಷಿಕರೇ ಸಣ್ಣಪುಟ್ಟ ಆವಿಷ್ಕಾರಗಳನ್ನು ಮಾಡಿ ಕೃಷಿ ಕೆಲಸಗಳನ್ನು ಹಗುರ ಮಾಡಿಕೊಂಡಿದ್ದಾರೆ. ಅವರವರ ಆವಶ್ಯಕತೆಗಳಿಗಾಗಿ ಮಾಡಿಕೊಂಡಿರುವ, ಆವಿಷ್ಕಾರಗಳು ಕೃಷಿಕರ ಒಲವು ಗಳಿಸಹತ್ತಿದೆ.
     
                     ದ್ವಿಚಕ್ರ ವಾಹನಕ್ಕೆ ಪ್ರತ್ಯೇಕವಾದ ಛೇಂಬರ್ ಫಿಕ್ಸ್ ಮಾಡಿಟ್ಟು ಸಾಗಾಟ ಕೆಲಸಗಳನ್ನು ಹಗುರ ಮಾಡಿಕೊಂಡಿರುವುದು ಈಚೆಗಿನ ಬೆಳವಣಿಗೆ. ಐದು ವರುಷದ ಹಿಂದೆ ಶಿರಸಿಯ ಬಾಲಚಂದ್ರ ಹೆಗಡೆ ಸಾಯಿಮನೆ ಫಿಲಿಪ್ಪೈನ್ಸ್ ಪ್ರವಾಸ ಹೋಗಿದ್ದರು. ಅಲ್ಲಿ ದ್ವಿಚಕ್ರ ಗಾಡಿಗಳನ್ನು ಸಾಗಾಟ ಕೆಲಸಕ್ಕೆ ಅನುಕೂಲವಾಗುವಂತೆ ಮಾರ್ಪಾಟು ಮಾಡಿದ ಐಡಿಯಾವನ್ನು ತಂದರು. ತನ್ನ ಹಳೆ ಎಂ-80 ದ್ವಿಚಕ್ರವನ್ನು ಪ್ರಯೋಗಕ್ಕೆ ಒಳಪಡಿಸಿ, ಅದಕ್ಕೆ 'ಟುಕ್ ಟುಕ್ ಗಾಡಿ' ಅಂತ ಹೆಸರಿಟ್ಟರು. ಈ ಐಡಿಯಾ ಉತ್ತರ ಕನ್ನಡದ ಕೃಷಿಕರನ್ನು ಸೆಳೆಯಿತು. ಹತ್ತಾರು ಮಂದಿ ಗಾಡಿಯನ್ನು ತಮ್ಮೂರಿನ ವರ್ಕ್ ಶಾಪಿನಲ್ಲಿ ತಯಾರಿಸಿಕೊಂಡರು.

                     ಅಧಿಕ ಭಾರವನ್ನು ಎಳೆಯುವ ಲ್ಯಾಂಬಿ ರಿಕ್ಷಾ ಈಗ ಕಣ್ಮರೆ. ಬಜಾಜ್ಗಳದ್ದೇ ಕಾರುಬಾರು. ಏರು ರಸ್ತೆಯಲ್ಲಿ ಇಬ್ಬರನ್ನು ಕೂರಿಸಿಕೊಂಡರೆ ಎಳೆಯಲು ಉಸಿರೆಳೆಯುತ್ತದೆ. ಅಂತಹುದಲ್ಲಿ ಅಳಿದುಳಿದ, ಕ್ಷಣಗಣನೆಯಲ್ಲಿರುವ ಲ್ಯಾಂಬಿ ರಿಕ್ಷಾಗಳು ಗಾಡಿಗಳಾಗಿ ಪರಿವರ್ತನೆಗೊಂಡು ತೋಟದೊಳಗೆ ಅಂತರ್ ಸಾಗಾಟಕ್ಕೆ ಬಳಕೆಯಾಗುತ್ತಿದೆ.

                   ಐದಡಿ ಅಗಲದ ಜಾಗದಲ್ಲಿ ರಿಕ್ಷಾಗಾಡಿ ಅತ್ತಿತ್ತ ಸಲೀಸಾಗಿ ಸಂಚರಿಸುವುದರಿಂದ ರಸ್ತೆಗೆಂದೇ ಅಡಿಕೆ ಮರಗಳನ್ನು ಕಡಿಯಬೇಕಾದ್ದಿಲ್ಲ. ಕಾಂಪೋಸ್ಟ್ ಗೊಬ್ಬರ, ಸೊಪ್ಪು ತೋಟಕ್ಕೆ ಒಯ್ಯಲು; ತೋಟದಿಂದ ಅಡಿಕೆ, ತೆಂಗಿನಕಾಯಿ, ಬಾಳೆದಿಂಡು..ಗಳು ಅಂಗಳ ಸೇರುತ್ತವೆ. ಟಿಪ್ಪರ್ ಆಗಿಯೂ ಪರಿವರ್ತಿಸಿದ್ದಾರೆ. ಹಾಗಾಗಿ ಅನ್ಲೋಡಿಗೆ ಪ್ರತ್ಯೇಕ ಸಹಾಯಕರು ಬೇಡ. ಸುಮಾರು ಮೂರು ಕ್ವಿಂಟಾಲ್ ಭಾರ ಹೊರುವ ಸಾಮಥ್ರ್ಯ.

                 ಯಾಂತ್ರೀಕೃತ ತಳ್ಳು ಗಾಡಿಗಳತ್ತ ಬಹುಜನರ ಚಿತ್ತ. ಸ್ವಯಂ ಚಾಲಿತ ಕೈಗಾಡಿಗಳಲ್ಲಿ 'ಮೋಟೋಕಾರ್ಟ್’ ಹೆಸರು ಮುಂದಿದೆ. ಸಾಗರದ ಹೆಗಡೆ ಆಗ್ರೋ ಇಂಪೆಕ್ಸ್' ತಯಾರಕ ಸಂಸ್ಥೆ. ತನುಶ್ರಮ ಕಡಿಮೆಗೊಳಿಸುವ ಅಂತರ್ ಸಾಗಾಟ ವಾಹನ. ಪ್ರತೀ ಅಡಿಕೆ ಮರದ ಬುಡದವರೆಗೂ ಹೋಗಬಲ್ಲ ಇಂಜಿನ್ ಚಾಲಿತ; ಕೆಸರು, ಏರು ರಸ್ತೆಯಲ್ಲೂ ಸಾಗಬಲ್ಲ ಶಕ್ತಿಶಾಲಿ ಇಂಜಿನ್ ಹೊಂದಿದ ಮತ್ತೊಂದು - ಹೀಗೆ ಎರಡು ಮಾದರಿಗಳು. ಒಂದೂವರೆ ಕ್ವಿಂಟಾಲ್ ಭಾರ ಹೊರುವ ಸಾಮಥ್ರ್ಯ.

                   ಒಂದು ಕಾರ್ಟ್ ನಾಲ್ಕು ಆಳುಗಳ ಕೆಲಸ ಮಾಡುತ್ತದೆ. ಅಂದರೆ ದಿನಕ್ಕೆ ಒಂದು ಸಾವಿರ ರೂಪಾಯಿ ಉಳಿಸುತ್ತದೆ ಎನ್ನುವುದು ಕೃಷಿಕರ ಅನುಭವ,' ಎನ್ನುತ್ತಾರೆ ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ತೀರ್ಥಹಳ್ಳಿ ಕುಂಟುವಳ್ಳಿಯ ವೀಟೆಕ್, ಬೆಂಗಳೂರಿನ ಡೋಲ್ಫಿನ್.. ಮೊದಲಾದ ಮೋಟಾರು ಚಾಲಿತ ಗಾಡಿಯನ್ನು ಮಾಡಿಕೊಬಲ್ಲ ವರ್ಕ್ ಶಾಪನ್ನು ಹೊಂದಿದವರು.

                      ಕಿನ್ಯದ (ದ.ಕ.) ಸಮೀರ ರಾವ್ ಅವರ ಶ್ರಮ ಉಳಿಸುವ ಕೈಗಾಡಿ 'ಕೃಷಿ ಮಿತ್ರ'ದ ಅನುಶೋಧಕರು. ಅಡ್ಯನಡ್ಕದ ವಾರಣಾಶಿ ಸಂಶೋಧನಾ ಪ್ರತಿಷ್ಠಾನಕ್ಕೆ ಇದರ ತಯಾರಿ ಮತ್ತು ಮಾರುಕಟ್ಟೆಯ ಹೊಣೆ. ರಬ್ಬರ್ ಟಯರಿನ ಏಕಚಕ್ರ. ತಲೆಹೊರೆ ಸಮಸ್ಯೆಯನ್ನು ಹಗುರ ಮಾಡಿದ, ಕೃಷಿಕರ ಒಲವು ಹೆಚ್ಚು ಪಡೆದ ಕೃಷಿಕಾವಿಷ್ಕಾರವಿದು. ತೋಟದಲ್ಲಿ ಒಮ್ಮೆಲೆ ಮೂರ್ನಾಲ್ಕು ಹೊರೆ ಅಡಿಕೆ ಗೊನೆ ಜೀಪಿನ ಬಳಿ ಸಾಗಿಸಲು ಸಹಕಾರಿ. ರಬ್ಬರ್ ಹಾಲು ಸಂಗ್ರಹಿಸಿ ಟಿಪ್ಪರ್ ರಿಕ್ಷಾದ ಬಳಿಗೆ ತರಲೂ ಉಪಯೋಗಿ, ಎಂಬ ಅನುಭವ ಹಿರಿಯ ಪತ್ರಕರ್ತ ಶಂಕರ್ ಸಾರಡ್ಕ ಅವರದು.

                    ಗಾಡಿಗಳಲ್ಲಿ ದ್ವಿಚಕ್ರ, ತ್ರಿಚಕ್ರದವುಗಳ ನಿರ್ಮಾಣ ಕಂಡುಬರುತ್ತದೆ. ಮಾರುತಿ ಓಮ್ನಿ, ಟೆಂಪೋ, ಜೀಪ್, ಟ್ರಾಕ್ಟರ್ಗಳನ್ನು ಬಳಸಿಕೊಂಡು ಶ್ರಮ ಹಗುರ ಮಾಡುವ ಚಿಕ್ಕಪುತ್ತ ಅನುಶೋಧನೆಗಳು ತೋಟದಲ್ಲಾಗುತ್ತಿವೆ. ತಮ್ಮ ಅಗತ್ಯಗಳನ್ನು ಪೂರೈಸಲು ಕೃಷಿಕರ ಜಾಣ್ಮೆಯಿಂದ ಸಿದ್ಧವಾದ ಇವಕ್ಕೆ ಆರ್ಥಿಕ ಬೆಂಬಲ, ಮಾರುಕಟ್ಟೆ ಒದಗಿದರೆ ದೇಶದ ಕೃಷಿ ಮತ್ತು ಆರ್ಥಿಕ ಕ್ಷೇತ್ರಕ್ಕೆ ದೊಡ್ಡ ಸಂಪನ್ಮೂಲ.

0 comments:

Post a Comment