ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜಕ್ಕೆ ವಿಶೇಷ ಗೌರವ. ದೆಹಲಿಯ ಕೆಂಪುಕೋಟೆಯ ಮೇಲೆ ನಿತ್ಯ ರಾರಾಜಿಸುವ ಧ್ವಜವು ರಾಷ್ಟ್ರಭಾವವಿದ್ದ ಮನಸ್ಸುಗಳಿಗೆ ಪುಳಕದ ಅನುಭವ ನೀಡುತ್ತದೆ. ಇತ್ತ ಹಳ್ಳಿಯ ಪಂಚಾಯತಿನಲ್ಲೂ ಅದೇ ಭಾವ, ಏಕಗೌರವ.
ರಾಷ್ಟ್ರಧ್ವಜದ ಹಿಂದೆ ಬಿಗು ಕಾನೂನಿದೆ. ಬೆಳೆಯುವ ಹತ್ತಿಯಿಂದ ತೊಡಗಿ ಧ್ವಜವನ್ನು ಹಾರಿಸುವ ವರೆಗಿನ ನಡವಳಿಕೆಗಳಿಗೆ ಸಂಹಿತೆಯಿದೆ. ಈ ಪರ್ವದಿನಗಳಲ್ಲಿ ಮಾತ್ರ ಅಲ್ಲೋ ಇಲ್ಲೋ ಕಾನೂನಿನ ಹೆಸರನ್ನು ಉಲ್ಲೇಖಿಸುವುದನ್ನು ಕಾಣುತ್ತೇವೆ. ಅದೂ ಧ್ವಜ ತಲೆಕೆಳಗಾಗಿ ಹಾರಿದಾಗ! ಆಗ ಕಾನೂನು ಪುಸ್ತಕ ತೆರೆಯಲ್ಪಡುತ್ತದೆ, ಸಂಬಂಧಪಟ್ಟವರಲ್ಲಿ ಪುಸ್ತಕ ಲಭ್ಯವಿದ್ದರೆ..!
ಆಗ ನೋಡಿ, ರಂಪಾಟ. ವಿಧಾನಸೌಧದಲ್ಲೂ ಅನುರಣನ. ಉಗ್ರಶಬ್ದಗಳಲ್ಲಿ ಖಂಡಿಸುವ ಪರಿ. ಇದನ್ನು ವಾಹಿನಿಗಳು ದಿನಪೂರ್ತಿ ಜಗ್ಗುತ್ತವೆ. ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ. ಬಿಸಿಬಿಸಿ ಚರ್ಚೆಯಾಗುತ್ತವೆ. ಇಲಾಖೆಯ ಮುಖ್ಯಸ್ಥರ ಮುಖದ ನೆರಿಗೆ ಬಿಗುವಾಗುತ್ತದೆ. ಸಿಬ್ಬಂದಿಯನ್ನು ಹೊಣೆ ಮಾಡಿದಲ್ಲಿಗೆ ಪ್ರಹಸನಕ್ಕೆ ತೆರೆ.
ಎಷ್ಟು ಸರಕಾರಿ ಕಚೇರಿಯಲ್ಲಿದೆ ಧ್ವಜ ಸಂಹಿತೆ? ಇದ್ದರೂ ಓದುವ ಮಂದಿ ಓದ್ದಾರಾ? ಅಲ್ಲ, ಬಿಡಿಸಿ ನೋಡಿದ್ದಾರಾ? ಇಂತಹ ಒಂದು ಪುಸ್ತಕ ಇದೆ ಎಂದಾದರೂ ಗೊತ್ತಿದೆಯಾ? ಅವರೆಲ್ಲಾ ಓದುತ್ತಿದ್ದರೆ ಧ್ವಜ ತಲೆಕೆಳಗಾಗಿ ಹಾರುತ್ತಿರಲಿಲ್ಲ. ಸಿಬ್ಬಂದಿಗಳು ಅಮಾನತು ಆಗುತ್ತಿರಲಿಲ್ಲ. ನಮ್ಮ ಬದುಕನ್ನು ನಮಗೆ ಓದಲು ತಿಣುಕಾಡುತ್ತಿರುವಾಗ ಕಾನೂನನ್ನು ಓದಲು, ಗೌರವಿಸಲು ಪುರುಸೊತ್ತು ಎಲ್ಲಿದೆ ಅಲ್ವಾ.
ದೇಶದ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ಒಂದು ಅಂಕದ ಪ್ರಶ್ನೆಯನ್ನು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸಿ. ಉತ್ತರ ಸಿಕ್ಕರೆ ಭಾಗ್ಯ! ವಿದ್ಯಾರ್ಥಿಗಳೇಕೆ, ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲೇ ಕೇಳಿ. ಉತ್ತರ ಸಿಗಬಹುದೆನ್ನುವ ವಿಶ್ವಾಸದಿಂದ ನಾನಂತೂ ದೂರ. ಅಪಕ್ವವನ್ನೇ ಪಕ್ವತೆಯೆಂದು ವಾದಿಸುವ ಕಾಲಘಟ್ಟದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರವನ್ನು ನಿರೀಕ್ಷಿಸುವುದೂ ಅಪಕ್ವವಾದಿತೇನೋ?
2013ರ ಸ್ವಾತಂತ್ರ್ಯ ದಿನಾಚರಣೆ. ಹುಬ್ಬಳ್ಳಿ ಬೆಂಗೇರಿಯ ಸ್ನೇಹಿತರ ಮನೆಯಲ್ಲಿದ್ದೆ. ಅನತಿ ದೂರದಲ್ಲಿತ್ತು, ದೇಶವೇ ಹೆಮ್ಮೆ ಪಡುವಂತಹ 'ರಾಷ್ಟ್ರಧ್ವಜ ನಿರ್ಮಾಣ ಘಟಕ'. ಅಲ್ಲಿನ ಶಿಸ್ತು, ಶ್ರದ್ಧೆ, ಭಕ್ತಿ-ಭಾವ ಎಲ್ಲವೂ ಗಂಟಲ ಮೇಲಿನದ್ದಾಗಿರಲಿಲ್ಲ. ಬಹುಶಃ ಧ್ವಜವೊಂದರ ಹಿಂದೆ ಭಾವನೆಗಳು ಮಡುಗಟ್ಟಿರುವುದು, ಅದಕ್ಕೆ ಸಂಬಂಧಪಟ್ಟ ಕಾನೂನುಗಳು ಪಾಲಿತವಾಗುತ್ತಿರುವುದು ಬಹುಶಃ ಇಲ್ಲಿ ಮಾತ್ರವೇನೋ?
'ಸಾರ್, ರಾಷ್ಟ್ರಧ್ವಜ ತಯಾರಾಗೋ ಊರಿದು. ಸ್ವಾತಂತ್ರೋತ್ಸವದಂದು ಧ್ವಜವನ್ನು ತಲೆಕೆಳಗು ಮಾಡಿ ಹಾರಿಸಿಬಿಟ್ರಲ್ಲಾ,' ಎನ್ನುವ ವಿಷಾದದೊಂದಿಗೆ ಘಟಕದ ಮುಖ್ಯಸ್ಥ ಆರ್.ವಿ.ಮುತಾಲಿಕ್ ದೇಸಾಯಿ ಸ್ವಾಗತಿಸುತ್ತಾ, 'ನಮ್ಮವರಿಗೆ ಧ್ವಜದ ಹಿಂದುಮುಂದಿನ ಮಾಹಿತಿಯಿಲ್ಲ. ಮೂರು ಬಣ್ಣಗಳಲ್ಲಿ ಯಾವುದು ಮೇಲಿರಬೇಕು, ಯಾವುದು ಕೆಳಗಿರಬೇಕು ಎನ್ನುವ ಕನಿಷ್ಠ ಜ್ಞಾನವೂ ಇಲ್ಲವಲ್ಲ' ಎಂದು ಗೊಣಗಾಡುತ್ತಾ ದೇಸಾಯಿಯವರು ಘಟಕದೊಳಗೆ ಕರೆದೊಯ್ದರು.
ಧ್ವಜದ ಆಯ ಅಳತೆಗೂ ಪ್ರಮಾಣಗಳಿವೆ. ಕೆಂಪುಕೋಟೆ, ರಾಷ್ಟ್ರಪತಿ ಭವನಗಳಲ್ಲಿ ಬಳಸುವ ಧ್ವಜವನ್ನು ಇತರೆಡೆ ಬಳಸುವಂತಿಲ್ಲ. ವಿಧಾನಸೌಧಕ್ಕೊಂದು ಅಳತೆಯ ಧ್ವಜವಾದರೆ, ಜಿಲ್ಲಾಧಿಕಾರಿ ಕಚೇರಿಗೆ ಇನ್ನೊಂದು ಅಳತೆಯ ಧ್ವಜ. ಸಚಿವರ ಕಾರಿನಲ್ಲಿ ಹಾರಾಡುವ ಧ್ವಜಕ್ಕೂ ಕಾನೂನಿನಲ್ಲಿ ಅಳತೆಯಿದೆ. ಎಲ್ಲೂ ಅಳತೆ ತಪ್ಪುವಂತಿಲ್ಲ. ತಪ್ಪಿದರೆ ಶಿಕ್ಷೆ ಕಟ್ಟಿಟ್ಟದ್ದು!?
ಪ್ಲಾಸ್ಟಿಕ್ ಧ್ವಜಗಳು ಬೇಕಾಬಿಟ್ಟಿ ಹಾರಾಡುತ್ತಿವೆಯಲ್ಲ ಎಂದದಕ್ಕೆ ದೇಸಾಯಿ ಹೇಳುತ್ತಾರೆ, ಧ್ವಜ ಕಾನೂನಿನಲ್ಲಿ ಕಾಟನ್ ಬಟ್ಟೆಯಿಂದ ತಯಾರಾದ ಧ್ವಜವನ್ನೇ ಬಳಸಬೇಕು. ಪ್ಲಾಸ್ಟಿಕ್ಕಿಗೆ ಅವಕಾಶವಿಲ್ಲ. ಅದು ಶಿಕ್ಷಾರ್ಹ. ಶಿಕ್ಷೆಯನ್ನು ಕೊಡೋವ್ರಿಗೆ ಕಾನೂನಿನ ಅರಿವು ಇಲ್ಲದಿದ್ದರೆ ಅವರೆಲ್ಲಿ ಶಿಕ್ಷೆ ಕೊಡ್ತಾರೆ? ಬಳಸುವ ಅಂಗಡಿಯವ್ರಿಗೂ ಕಾನೂನು ಗೊತ್ತಿಲ್ಲ. ತಿಳಿಹೇಳುವವರು ಯಾರು?'.
ಕಳೆದ ಜನವರಿಯಲ್ಲಿ ದೇಸಾಯಿ ದೆಹಲಿಗೆ ಹೋಗಿದ್ದರು. ಪ್ರದರ್ಶನವೊಂದರಲ್ಲಿ ಮಳಿಗೆ ತೆರೆದಿದ್ದು, ರಾಷ್ಟ್ರಪತಿಗಳೊಂದಿಗೆ ಕಳೆದ ಕ್ಷಣವನ್ನು ನೆನಪು ಮಾಡಿಕೊಳ್ಳುತ್ತಾ, 'ನಮ್ಮ ಭವನದಲ್ಲಿ ನಿಮ್ಮೂರಲ್ಲಿ ತಯಾರಾದ ಧ್ವಜ ಹಾರಾಡ್ತಿದೆ' ಅಂದರಂತೆ. ದೇಸಾಯಿಗೆ ಮೂರು ನಿಮಿಷ ಮಾತನಾಡುವ ಅವಕಾಶವೂ ಲಭ್ಯವಾಗಿತ್ತು.
ಇಪ್ಪತ್ತೊಂದು ಅಡಿ ಉದ್ದ, ಹದಿನಾಲ್ಕಡಿ ಅಗಲದ ಧ್ವಜ ದೊಡ್ಡದು. ಆರಿಂಚು ಉದ್ದ ನಾಲ್ಕಿಂಚು ಅಗಲದ ಧ್ವಜ ಚಿಕ್ಕದು. ಹುಬ್ಬಳ್ಳಿ ಘಟಕದಲ್ಲಿ ಒಂಭತ್ತು ವಿವಿಧ ಅಳತೆಯ ಧ್ವಜ ತಯಾರಾಗುತ್ತಿವೆ. ತಿಂಗಳಿಗೆ ಸುಮಾರು ಇಪ್ಪತ್ತು ಲಕ್ಷಕ್ಕೂ ಮಿಕ್ಕಿ ಉತ್ಪಾದನೆ. ವಿವಿಧ ರಾಜ್ಯಗಳಲ್ಲಿರುವ ಖಾದಿ ಮಳಿಗೆಗಳ ಮೂಲಕ ವಿತರಣೆ. ಕನ್ನಾಡಿನ ಐವತ್ತೆರಡು ಘಟಕಗಳ ಮೂಲಕ ಧ್ವಜಗಳು ಹಳ್ಳಿ ತಲಪುತ್ತದೆ.
ಹತ್ತಿ ಬೆಳೆಯುವಲ್ಲಿಂದ ಧ್ವಜ ಸಿದ್ಧಗೊಳ್ಳುವ ವಿವಿಧ ಮಜಲುಗಳಲ್ಲಿ ಹದಿನೆಂಟು ವಿಧದ ಪರೀಕ್ಷೆಗಳು. ಎಳೆ, ತೂಕ, ಬಣ್ಣದ ಪ್ರಮಾಣ; ಧ್ವಜದ ಉದ್ದಗಲ, ಹೊಲಿಗೆ, ಬಣ್ಣದ ಗುಣಮಟ್ಟ, ಚಕ್ರ.. ಹೀಗೆ. ಒಂದರಲ್ಲಿ ಅನುತ್ತೀರ್ಣವಾದರೂ ರಿಜೆಕ್ಟ್. 'ಕಟ್ಟುನಿಟ್ಟುಗಳನ್ನು ಮೀರುವಂತಿಲ್ಲ. ಹಾಗಾಗಿ ಶೇ.20ರಷ್ಟು ಉತ್ಪನ್ನಗಳು ರಿಜೆಕ್ಟ್ ಆಗುವುದೇ ಹೆಚ್ಚು' ಎನ್ನುತ್ತಾರೆ.
ಘಟಕದಲ್ಲಿ ಬಹುತೇಕ ಕೆಲಸಗಾರರು ಸ್ವ-ಸಹಾಯ ಸಂಘಗಳ ಮಹಿಳಾ ಸದಸ್ಯರು. ಬೇಡಿಕೆಯಿದ್ದಾಗ ಅಹೋರಾತ್ರಿ ದುಡಿತ. ಶ್ರಮಕ್ಕೆ ತಕ್ಕ ಫಲಿತ. ಘಟಕದೊಳಗೆ ಚಪ್ಪಲಿ ಧರಿಸಬಾರದು, ಧ್ಜಜ ಸಿದ್ಧವಾಗುತ್ತಿರುವಾಗ ತುಳಿಯಬಾರದು.. ಮೊದಲಾದ ಮಾನದಂಡಗಳನ್ನು ಪಾಲಿಸುತ್ತಾರೆ. ಎಲ್ಲಾ ಶ್ರಮಿಕರಿಗೂ ಧರಿಸಲು ಖಾದಿ ಉಡುಪು.
ಹರಿದ, ಕೊಳೆಯಾದ, ಡ್ಯಾಮೇಜ್ ಧ್ವಜಗಳ ಮರುಬಳಕೆಯಿಲ್ಲ. ಹರಿದುದನ್ನು ಪುನಃ ಹೊಲಿಗೆ ಹಾಕುವಂತಿಲ್ಲ. ಮತ್ತೆ ಹೊಸತನ್ನೇ ಬಳಸಬೇಕು. ದೇಸಾಯಿ ಒಂದು ಘಟನೆ ಜ್ಞಾಪಿಸಿದರು - ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹರಿದ ಧ್ವಜವನ್ನು ತಂದು, 'ಹೊಲಿದು ಕೊಡಿ' ಎಂದರು. 'ಹರಿದ ಧ್ವಜವನ್ನು ಹೊಲಿಯುವುದು ಕಾನೂನನ್ನು ಉಲ್ಲಂಘಿಸಿದಂತೆ. ಹಾಗಾಗಿ ಹೊಸದಾಗಿ ಖರೀದಿಸಿ' ಎಂದರು. 'ಯಾವ ಕಾನೂನಿನಲ್ಲಿದೆ? ಏನಾಗ್ತದೆ', ಕೊಡ್ರಿ' ಎನ್ನುವ ಇಲಾಖಾ ಮರ್ಜಿಯ ಭಾಷಾ ಪ್ರಯೋಗ. ದೇಸಾಯಿ ಧ್ವಜ ಸಂಹಿತೆಯನ್ನು ತೋರಿಸಿದಾಗ ಅಧಿಕಾರಿ ದಂಗು. ಕಾನೂನಿಗೆ ಶರಣಾಗತಿ. ಹೊಸ ಧ್ವಜದ ಖರೀದಿ.
ಬಳಸುವ ಬಟ್ಟೆ ಕೈಮಗ್ಗದ್ದಾಗಿರಬೇಕು. ಹತ್ತಿಯೂ ಸಾವಯವದಲ್ಲೇ ಬೆಳೆದಿರಬೇಕು. ಅದಕ್ಕೆ ಹಾಕುವ ಬಣ್ಣವೂ ಕೃತಕವಾಗಿರಬಾರದು. ಕೈಚಾಲಿತವಾಗಿ ಬಣ್ಣ ಲೇಪನ. ಇದಕ್ಕೆ ಯಂತ್ರಗಳು ಲಭ್ಯವಾದರೂ ಬಳಸುವಂತಿಲ್ಲ. ಜಯಧರ್ ಅರಳೆ ತಳಿಯದ್ದೇ ಹತ್ತಿ ಬೆಳೆಯಲು ಕೃಷಿಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅದರಂತೆ ಬೆಳೆದು ಕೊಡುತ್ತಾರೆ. ಅಲ್ಲೇ ದಾರ, ಬಟ್ಟೆ ಸಿದ್ಧಗೊಳಿಸಿ ಹುಬ್ಬಳ್ಳಿಯ ಘಟಕಕ್ಕೆ ಬರುತ್ತದೆ. ಇಲ್ಲಿ ಪುನಃ ಬಟ್ಟೆಯ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ತಯಾರಿಯಲ್ಲಿ ಚಿಕ್ಕ ವ್ಯತ್ಯಾಸವಾದರೂ ತಿರಸ್ಕರಿಸುತ್ತೇವೆ' ಎನ್ನುತ್ತಾರೆ ದೇಸಾಯಿ.
ಧ್ವಜಸಂಹಿತೆಯಂತೆ ಧ್ವಜಗಳ ಪ್ರಚಾರಕ್ಕೆ ಪತ್ರಿಕೆಯಲ್ಲಿ ಜಾಹೀರಾತು ನೀಡುವಂತಿಲ್ಲ! ಶಾಲೆ, ಇಲಾಖೆಗಳ ಅಧಿಕಾರಿ ಮಟ್ಟದಲ್ಲಷ್ಟೇ ಅರಿವು ಮೂಡಿಸುವ ಕೆಲಸವಾಗಬೇಕು. ಈಚೆಗೆ ತಾಲೂಕು, ಜಿಲ್ಲಾ ಪಂಚಾಯತಿಗಳಲ್ಲಿ ಪ್ರತಿ ದಿವಸ ಧ್ವಜ ಏರಿಸಬೇಕೆನ್ನುವ ಆದೇಶದಿಂದ ಒಂದಷ್ಟು ಸಣ್ಣ ಪ್ರಮಾಣದಲ್ಲಿ ಧ್ವಜದ ಅರಿವು ಮೂಡುತ್ತಿದೆ. 'ಈ ಆದೇಶದಿಂದಾಗಿ ಮೂವತ್ತು ಲಕ್ಷಕ್ಕೂ ಮಿಕ್ಕಿ ಧ್ವಜಗಳನ್ನು ನಾವೇ ಸಿದ್ದಪಡಿಸಬೇಕು.' ಎನ್ನುವ ಖುಷಿ ದೇಸಾಯಿಯವರದು.
ಮುತಾಲಿಕ್ ದೇಸಾಯಿ ನಲವತ್ತೆರಡು ದೇಶಗಳ ಧ್ವಜ ಸಂಹಿತೆಯನ್ನು ಅಭ್ಯಸಿಸಿದ್ದಾರೆ. ಎಲ್ಲಾ ಮಾಹಿತಿಗಳು ನಾಲಗೆ ತುದಿಯಲ್ಲಿವೆ. ಬಾಲ್ಯದಿಂದಲೇ ಖಾದಿ, ದೇಶಗಳ ಒಲವಿದ್ದ ಇವರು ಖಾದಿಯನ್ನು, ಧ್ವಜವನ್ನು ಪ್ರೀತಿಸುತ್ತಾರೆ. ಧ್ವಜಸಂಹಿತೆಯು ಎಲ್ಲಾ ನಾಗರಿಕರಿಗೂ ತಿಳಿಯಬೇಕೆನ್ನುವ ಹಪಾಹಪಿ. ಹಾಗಾಗಿ ನೀಡುವ ಧ್ವಜದ ಪ್ಯಾಕೆಟ್ ಒಳಗಡೆ ಕನಿಷ್ಟ ಮಾಹಿತಿಯನ್ನು ಅಚ್ಚುಹಾಕಿಸುವ ಯೋಚನೆಯಿದೆ.
ರಾಷ್ಟ್ರಧ್ವಜ ಅವರೋಹಣವಾಗುವಾಗ ಭಕ್ತಿ ಶ್ರದ್ಧೆಗಳನ್ನು ಕ್ಷಣಿಕವಾಗಿ ಆವಾಹಿಸಿಕೊಳ್ಳುತ್ತೇವೆ. ಆ ಕ್ಷಣಕ್ಕೆ ಮರೆತುಬಿಡುತ್ತೇವೆ. ವೇದಿಕೆಯಲ್ಲಿ ದೇಶದ, ಸಂದುಹೋದ ನಾಯಕರ ಕುರಿತು ಭಾಷಣ ನಡೆಯುತ್ತದೆ. ಸಂಜೆಯಾಗುವಾಗ ಎಲ್ಲವೂ ಮಾಮೂಲಿ. ಶಿಸ್ತಿನ ಮೂಟೆಯೊಳಗೆ ಬಂಧಿತವಾದ ಮನಸ್ಸುಗಳಿಗೆ ಆ ದಿವಸದ ಕಲಾಪಗಳು 'ಪಾಠದಿಂದ ಬಿಡುಗಡೆಯಾದ ಸಂತೃಪ್ತಿ'ಯಷ್ಟನ್ನೇ ನೀಡುತ್ತದೆ.
ಪ್ರಾಥಮಿಕ ಶಾಲೆಯ ಪಾಠಗಳಲ್ಲಿ ರಾಷ್ಟ್ರಧ್ವಜದ ಪಾಠಗಳನ್ನು ಓದಿದ ನೆನಪಾಗುತ್ತದೆ. ಐದಂಕ ಕೊಡುವ ರಾಷ್ಟ್ರಗೀತೆಯನ್ನು ಬರೆಯುವ ಪ್ರಶ್ನೆಗಳಿರುತ್ತಿದ್ದುವು. ಆಶೋಕ ಚಕ್ರ, ಧ್ವಜದ ಬಣ್ಣಗಳಿಗೆ ನಿರ್ದಿಷ್ಟ ಅರ್ಥವಾಪ್ತಿಗಳಿದ್ದುವು. ಅವೆಲ್ಲವೂ ಸಂಹಿತೆಯೊಳಗೆ ಅಡಗಿವೆಯಷ್ಟೇ. ಅವೇನಾದರೂ ಪಠ್ಯಕ್ಕೆ ಬಂದುಬಿಟ್ಟರೆ ಮತೀಯ, ಜಾತೀಯ, ಪ್ರಾಂತೀಯ ಕೊಳಚೆ ಅಂಟಿ ಗುಲ್ಲಾಗುತ್ತದೆ. ಹಾಗಾಗಿ ಧ್ವಜಸಂಹಿತೆ ವಿಚಾರಗಳು ಹತ್ತಿಯ ನೂಲಿನ ಎಳೆಯಲ್ಲಿ ಬಂಧಿಯಾಗಿದೆ!
ಕನ್ನಾಡಿನಲ್ಲಿ ಬೆಳೆಯುವ ಹತ್ತಿಯಿಂದಲೇ ನಮ್ಮ ರಾಷ್ಟ್ರಧ್ವಜ ಸಿದ್ಧವಾಗುತ್ತಿದೆ ಎನ್ನುವ ಖುಷಿಗೆ ಮಸುಕು ಬಾರದು. ಅದೂ ನೆಲದ ನಾಡಿ ಗೊತ್ತಿದ್ದ ಮನಸ್ಸುಗಳಿಗೆ.
(ಉದಯವಾಣಿಯ 23-1-2014ರ ಸಂಚಿಕೆಯ 'ನೆಲದ ನಾಡಿ' - Nelada Nadi -ಅಂಕಣದಲ್ಲಿ ಪ್ರಕಟ)
-
(ನಾನು ಸಂದರ್ಶನಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿನ ಮುಖ್ಯ ನಿರ್ವಹಣೆ ಘಟಕದ ಮುಖ್ಯಸ್ಥ ಆರ್.ವಿ.ಮುತಾಲಿಕ್ ದೇಸಾಯಿ ಅವರದ್ದಾಗಿತ್ತು. ಈಗ ಹೊಸಬರು ಬಂದಿದ್ದಾರಂತೆ)