Friday, August 22, 2014

ಐಟಿ ದುಡ್ಡು ಕೊಡುತ್ತದೆ, ಯೌವನ ಕೊಡುವುದಿಲ್ಲ!

              "ರಾತ್ರಿ ಪಾಳಿಯ ವೃತ್ತಿ ಮುಗಿಸಿ ಮನೆ ಸೇರಿದಾಗ ಮಗನನ್ನು ಶಾಲಾ ವಾಹನದೊಳಗೆ ತಳ್ಳಿ ಮಡದಿ ಉದ್ಯೋಗಕ್ಕೆ ತೆರಳಿರುತ್ತಾಳೆ. ಸಂಜೆ ಅವರಿಬ್ಬರು ಮನೆಗೆ ಬಂದಿರುವಾಗ ನಾನು ಡ್ಯೂಟಿಗೆ ತೆರಳಿರುತ್ತೇನೆ.  ಮೊಬೈಲಿನಲ್ಲಿ ಮನೆ ನಿರ್ವಹಣೆಯ ಮಾತುಕತೆ. ರವಿವಾರ ಎಲ್ಲರೂ ಜತೆಯಾಗುತ್ತೀವಿ. ಮಕ್ಕಳ ಪಾಲಿಗೆ ನಾನೊಬ್ಬ ಅಪರಿಚಿತ. ಮಕ್ಕಳ ಬಾಲ್ಯದೊಂದಿಗೆ ಬೆರೆಯುವ ದಿನಗಳನ್ನು ಉದ್ಯೋಗ ಕಸಿದುಕೊಂಡಿರುತ್ತದೆ" ಈಗ ಕೃಷಿಕರಾಗಿದ್ದು, ಹಿಂದೆ ಐಟಿ ಉದ್ಯೋಗದಲ್ಲಿದ್ದ ಲಕ್ಷ್ಮಣ್ ಕಳೆದ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
                ಲಕ್ಷ್ಮಣ ಮೂಲತಃ ಸುಳ್ಯ ತಾಲೂಕು (ದ.ಕ.) ಗುತ್ತಿಗಾರು ಸನಿಹದ ದೇವಸ್ಯದವರು. ಕೃಷಿ ಪಾರಂಪರಿಕ ವೃತ್ತಿ. ಇಂಜಿನಿಯರಿಂಗ್ ಕಲಿಕೆ ಬಳಿಕ ರಾಜಧಾನಿ ಸೆಳೆಯಿತು. ಬೆಂಗಳೂರಿನ ಹಿಂದುಸ್ಥಾನ್ ಏರಾನಾಟಿಕ್ಸ್ ಲಿ., ಹೆಚ್.ಎ.ಎಲ್.)ಯಲ್ಲಿ ಡಿಸೈನ್ ಇಂಜಿನಿಯರ್ ಆಗಿ ಏಳು ವರುಷ, ಐಟಿ ಕಂಪೆನಿಯೊಂದರಲ್ಲಿ ಏಳೆಂಟು ವರುಷ ದುಡಿತ. ತನ್ನ ಜಾಯಮಾನಕ್ಕೆ ಒಗ್ಗದ ಸೂಟುಬೂಟಿನ ಜೀವನಕ್ಕೆ ಒಗ್ಗಿಸಿಕೊಳ್ಳುವ ಮಾನಸಿಕತೆ.
                 ವಿಮಾನ ಕಂಪೆನಿಯಲ್ಲಿದ್ದಾಗ ಲಕ್ಷ್ಮಣ್ ಎಲ್ಲರಿಗೂ ಅಚ್ಚುಮೆಚ್ಚು. ಹಸಿರು, ಕೃಷಿಯ ಸುತ್ತ ಅವರ ಮಾತುಕತೆ. ವಸತಿಗೃಹದ ಸುತ್ತಲೂ ಹಸುರೆಬ್ಬಿಸಿದ್ದರು. ಇವರ 'ವೀಕೆಂಡ್' ಭಿನ್ನ. ನಗರದಲ್ಲಿ ಕೃಷಿ ಹಿನ್ನೆಲೆಯ ಯಾವುದೇ ಕಾರ್ಯಕ್ರಮಗಳಿಗೆ ಹಾಜರ್. ಜೇನು, ಹೈನು ತರಬೇತಿಗಳಿಗೆ ಭಾಗಿ. ಕೃಷಿ ಮೇಳಗಳಲ್ಲಿ ಸುತ್ತಾಟ. ಸ್ನೇಹಿತರೊಂದಿಗೆ ಅನುಭವಗಳ ವಿನಿಮಯ. ಪಾಸ್ಬುಕ್ಕಿನಲ್ಲಿ ಕಾಂಚಾಣ ನಲಿಯುತ್ತಿದ್ದರೂ ಮನಸ್ಸು ತನ್ನೂರಿನ ಹೊಲ, ತೋಟ, ಹಸಿರಿನತ್ತ ಸುತ್ತುತ್ತಿದ್ದುವು. ತನ್ನ ಬಾಳಿಗೆ ದಿವ್ಯಶ್ರೀ ಪ್ರವೇಶವಾದ ಬಳಿಕವಂತೂ ಅವರ ಯೋಜನೆ, ಯೋಚನೆಗಳೆಲ್ಲವೂ ನಗರದ ಹೊರಗಿನ ಕೃಷಿ, ಹಸಿರಿನ ಸುತ್ತ ರಿಂಗಣಿಸುತ್ತಿದ್ದುವು.
                ದಿವ್ಯಶ್ರೀ ಕೃಷಿ ಹಿನ್ನೆಲೆಯವರು. ಅವರ ಹಿರಿಯರೆಲ್ಲಾ ಹಳ್ಳಿ ಬಿಟ್ಟು ಪಟ್ಟಣ ಸೇರಿದವರು. ನಗರ ಸೇರಿದ ಬಳಿಕ ಸಹಜವಾಗಿ ಕೃಷಿ ಸಂಸ್ಕೃತಿ ಮಸುಕಾಯಿತು. ಬಾಲ್ಯದಿಂದಲೇ ಕೃಷಿಯ ಬದುಕಿನೊಂದಿಗೆ ಬೆಳೆದ ದಿವ್ಯಶ್ರೀ ಕೂಡಾ ನಗರದ ವಾತಾವರಣಕ್ಕೆ ಒಗ್ಗಿಸಿಕೊಂಡವರು. ಲಕ್ಷ್ಮಣ್ ಕೈಹಿಡಿದ ಬಳಿಕ ಇಬ್ಬರ ಆಸಕ್ತಿಗಳೂ ಮಿಳಿತವಾದುವು. ಎಷ್ಟೋ ಸಾರಿ ಬೆಂಗಳೂರಿನ ಒತ್ತಡದ ವಾತಾವರಣದಲ್ಲಿ ಒದ್ದಾಡುತ್ತಾ ಅಸಹನೆಯಿಂದಿದ್ದ ಅವರಿಗೆ ಐಟಿ ಬಿಟ್ಟು ಹಳ್ಳಿಗೆ ಹೋಗೋಣ ಎಂದು ಸಲಹೆ ಮಾಡಿದ್ದೆ ಎನ್ನುತ್ತಾರೆ.
                ನಗರಕ್ಕೆ ಯುವಕರನ್ನು ಆಧುನಿಕ ತಂತ್ರಜ್ಞಾನಗಳ ರಂಗಿನ ಲೋಕವು ಸೆಳೆದುಕೊಳ್ಳುತ್ತದೆ ಅಲ್ವಾ,' ಎನ್ನುವ ನನ್ನ ಕುತೂಹಲವನ್ನು ಲಕ್ಷ್ಮಣ್ ಗಂಭೀರವಾಗಿ ಪರಿಗಣಿಸಿದ್ದರು -
              "ನನ್ನ ಅಪ್ಪನಿಗೆ ಮಗ ಇಂಜಿನಿಯರ್ ಆಗ ಬೇಕೂಂತ ಆಸೆಯಿತ್ತು. ಇಂಜಿನಿಯರ್ ಪದವಿ ಪಡೆದೆ. ನಗರ ಸೇರಿದೆ. ಒತ್ತಡದ ಬದುಕನ್ನು ಅಪ್ಪಿಕೊಂಡೆ. ಅತ್ತಿತ್ತ ತಿರುಗಲು ಹೆಣಗಾಡಬೇಕಾದ ಪುಟ್ಟ ಕ್ಯಾಬಿನ್ನೊಳಗೆ ವೃತ್ತಿ ಜೀವನ. ಪರಸ್ಪರ ಮಾತುಕತೆಯಿಲ್ಲ, ನಗೆಯಿಲ್ಲ, ಭಾವನೆಗಳ ವಿನಿಮಯವಿಲ್ಲ, ಮಣಗಟ್ಟಲೆ ಭಾರ ತಲೆ ಮೇಲೆ ಕುಳಿತಂತಿರುವ ಶುಷ್ಕತೆ. ಹೊತ್ತು ಹೊತ್ತಿಗೆ ಆಹಾರವನ್ನು ಹೊಟ್ಟೆಗಿಳಿಸಿಕೊಳ್ಳುವುದು. ಆರೋಗ್ಯ ವ್ಯತ್ಯಾಸವಾದರೆ ಕಂಪೆನಿಯ ಆಸ್ಪತ್ರೆ ಕಾಯುತ್ತಾ ಇರುತ್ತದೆ!
             ಕೃಷಿಯಲ್ಲಿ ಗೌರವವಿಲ್ಲ, ಯಾರೂ ಮರ್ಯಾಾದೆ ಕೊಡುವುದಿಲ್ಲ ಎನ್ನುವ ಭಾವನೆ. ಮಗ ಉನ್ನತ ಹುದ್ದೆಯಲ್ಲಿದ್ದರೆ 'ನಾನು ಇಂತಹವನ ಅಪ್ಪ' ಎನ್ನುವಲ್ಲಿ ಖುಷಿಯೇನೋ? ಐಟಿ ಉದ್ಯೋಗದಲ್ಲಿ ಸಿಗುವ ಗೌರವ, ಹಣ ಕೃಷಿಯಲ್ಲಿ ಖಂಡಿತಾ ಸಿಗದು. ಆದರೆ ಕಳೆದುಕೊಂಡ ಜೀವನ, ಹಾಳಾದ ಆರೋಗ್ಯ ಮತ್ತೆ ಸಿಗದು. ಗೊತ್ತಾಗುವಾಗ ಮಾತ್ರೆಗಳ ಸಂಬಂಧ ಗಟ್ಟಿಯಾಗಿರುತ್ತದೆ. ಬಹುತೇಕ ಹೆತ್ತವರಿಗೆ ಐಟಿ ಉದ್ಯೋಗದ ಬವಣೆಗಳ ಅರಿವಿಲ್ಲ. ಅಂತಸ್ತು ಮತ್ತು ಭವಿಷ್ಯ ಜೀವನದ ಭದ್ರತೆ ಎನ್ನುವ ಮರೀಚಿಕೆ ಆವರಿಸಿರುತ್ತದೆ. ಇಂತಹ ಉದ್ಯೋಗಕ್ಕೆ ಸಮಾಜವೂ ಬೆಂಬಲಿಸುತ್ತದೆ, ಸಂಭ್ರಮಿಸುತ್ತದೆ. ಉದ್ಯೋಗದ ಸಿರಿತನವನ್ನು ಆರಾಧನೆ ಮಾಡುವ ಹಂತಕ್ಕೆ ತಲುಪುತ್ತದೆ.
                  ಮೋಹಕವಾದ ಐಟಿ ಕ್ಷೇತ್ರವು ನಮ್ಮ ದೂರದೃಷ್ಟಿಯನ್ನು ಕಸಿದುಕೊಳ್ಳುತ್ತದೆ. ವೃತ್ತಿ ಸಂತೃಪ್ತಿಯಿಲ್ಲ. ಸ್ಪಷ್ಟವಾದ ಗುರಿಯಿಲ್ಲ. ಕುಟುಂಬ ಸುಖವಿಲ್ಲ. ಎಳೆ ವಯಸ್ಸಿಯಲ್ಲಿ ಹೆಚ್ಚು ದುಡ್ಡು ಬಂದಾಗ ಹೇಗೆ ಖರ್ಚುು ಮಾಡುವುದೆನ್ನುವ ಜ್ಞಾನವಿಲ್ಲ. ವೀಕೆಂಡಿಗೆ ಸುಖ-ಸಂತೋಷಕ್ಕಾಗಿ ವೆಚ್ಚಗಳ ಹೊಳೆ. ಏರಿಕೆಯಾಗುವ ಸ್ನೇಹಿತರ ಗಡಣ. ಹತ್ತು ಹಲವು ವ್ಯಸನಗಳು ಅಂಟುವುದು ಇಂತಹ ಹೊತ್ತಲ್ಲೇ.  ಸರಿ-ತಪ್ಪುಗಳನ್ನು ಹೇಳುವ ಮಂದಿ ಜತೆಗಿಲ್ಲ. ಕಲಿಕೆಯ ಹಂತದಲ್ಲಿ ಕಟ್ಟಿಕೊಂಡ ಕನಸುಗಳು ಗರಿಕೆದರಿ ತೇಲುತ್ತಿದ್ದಂತೆ ಬದುಕಿನ ಸುಖವು ಜಾರುವುದು ಅರಿವಿಗೆ ಬಂದಿರುವುದಿಲ್ಲ. ಸ್ಥಿತಪ್ರಜ್ಞತೆಯನ್ನು ಎಳವೆಯಲ್ಲೇ ಅಂಟಿಸಿಕೊಂಡವರಿಗೆ ಇವುಗಳ ಭಯವಿಲ್ಲ ಬಿಡಿ!
               ಅಂತಸ್ತು ಹೆಚ್ಚಿದಂತೆ ಬದುಕಿನ ವ್ಯವಸ್ಥೆಗಳೂ ಹೈ-ಫೈ ಆಗಬೇಕಷ್ಟೇ. ಐಟಿ ಉದ್ಯೋಗಿಗಳಿಗೆ ಸಾಲ ಕೊಡಲು ಬ್ಯಾಂಕುಗಳು ತುದಿಗಾಲಲ್ಲಿ  ನಿಂತಿರುತ್ತವೆ. ಸಾಲ ತೆಕ್ಕೊಂಡು ಕೋಟಿಗಟ್ಟಲೆ ಸುರಿದು ಜಾಗ ಖರೀದಿಸಿ, ಐಷರಾಮದ ಮನೆ ನಿರ್ಮಾಣ ಮಾಡಿಕೊಳ್ಳುತ್ತಾರೆ. ಮಗನ ಹಿತಕ್ಕಲ್ಲವಾ, ಒಂದಷ್ಟು ದುಡ್ಡು ಹೆತ್ತವರಿಂದಲೂ ಕೊಡಲ್ಪಡುತ್ತದೆ. 'ಮಗ ಸೆಟ್ಲ್' ಆಗಿದ್ದಾನೆ ಎನ್ನುವ ಹಿಗ್ಗು ಹೆತ್ತವರಲ್ಲಿ ಜೀವಂತವಾಗಿರುವಾಗಲೇ, ನಿವೃತ್ತಿಯ ಹಂತಕ್ಕೆ ತಲುಪುತ್ತಾನೆ. ಮನೆಗಾಗಿ ಮಾಡಿದ್ದ ಬ್ಯಾಂಕ್ ಸಾಲವೂ ಆಗಷ್ಟೇ ಚುಕ್ತಾ ಆಗಿರುತ್ತದೆ!
                 ನಗರದಲ್ಲೇ ಹುಟ್ಟಿ ಬೆಳೆದು ಬದುಕನ್ನು ರೂಪಿಸಿಕೊಳ್ಳುತ್ತಿರುವ ಐಟಿ ಉದ್ಯೋಗಿಗಳು ಬೇರೆಲ್ಲಿಗೆ ಹೋಗಲಿ? ಅವರಿಗದು ಅನಿವಾರ್ಯ. ಹೊಟ್ಟೆಪಾಡಿಗಾಗಿ ಉದ್ಯೋಗ. ಹಳ್ಳಿಯಲ್ಲಿ ತೋಟ ಗದ್ದೆಗಳಿದ್ದು, ಅದನ್ನೆಲ್ಲಾ ಮಾರಿ ನಗರ ಸೇರಿದ ಎಷ್ಟೋ ಕುಟುಂಬವಿಂದು ಮಮ್ಮಲ ಮರುಗುತ್ತಿರುವುದನ್ನು ಹತ್ತಿರದಿಂದ ಬಲ್ಲೆ. ಪುನಃ ಹಳ್ಳಿಗೆ ಹೋಗುವಂತಿಲ್ಲ. ಕೃಷಿಯಲ್ಲಿ ಸುಖವಿಲ್ಲ, ನೆಮ್ಮದಿಯಿಲ್ಲ ಎನ್ನುತ್ತಾ ಸಮಸ್ಯೆಯ ಮೂಟೆಯನ್ನು ಗಗನಕ್ಕೇರಿಸಿದವರೇ, 'ಛೆ.. ತಪ್ಪು ಮಾಡಿಬಿಟ್ಟೆವು, ಹಳ್ಳಿಯ ತೋಟ ಮಾರಬಾರದಿತ್ತು,' ಎನ್ನುವವರೂ ಇಲ್ಲದಿಲ್ಲ. ಆಗ ಕಾಲ ಮಿಂಚಿಹೋಗಿರುತ್ತದೆ..."
               ಲಕ್ಷ್ಮಣ ಐಟಿ ಬದುಕಿನಲ್ಲಿದ್ದೂ, ಅಲ್ಲಿನ ಕಾಣದ ಬದುಕನ್ನು ವಿವರಿಸುತ್ತಾ ಹೋಗುತ್ತಿದ್ದಂತೆ ಮಾತು ಮೌನವಾಗುತ್ತದೆ. ರೋಚಕತೆಯ ವೈಭವವನ್ನೇ ಕಾಣುತ್ತಿದ್ದ ಐಟಿ ಉದ್ಯೋಗ ವೈಯಕ್ತಿಕ ಬದುಕನ್ನು ಕಸಿಯುತ್ತಿದೆ. ಹೀಗಿದ್ದರೂ ’ಇದ್ದಷ್ಟು ದಿನ ಸಂತೋಷದಿಂದ ಇರಬೇಕು. ಹಳ್ಳಿಯಲ್ಲಿದ್ದು ಏನು ಮಾಡಲಿಕ್ಕಿದೆ? ಆ ಕಷ್ಟ ಯಾರಿಗೆ ಬೇಕು. ಬದುಕಿನಲ್ಲಿ ಹಣವೇ ಮುಖ್ಯ” ಎಂದು ಬಾಯಿ ಮುಚ್ಚಿಸುವ ಕಂಠತ್ರಾಣಿಗಳೂ ಇದ್ದಾರಲ್ಲಾ!
                ಐಟಿ ವೃತ್ತಿಯನ್ನು ಲಕ್ಷ್ಮಣ್ ಹಳಿಯುತ್ತಿಲ್ಲ, ವಿರೋಧಿಸುತ್ತಿಲ್ಲ. ಬಂಗಾರದ ಪಂಜರದ ಉದ್ಯೋಗ ಕೈತುಂಬಾ ದುಡ್ಡು ಕೊಡುತ್ತದೆ. ಬದುಕನ್ನು ಹಸನಾಗಿಸುತ್ತದೆ. ಬಡತನದಿಂದ ಮೇಲೆದ್ದು ಬಂದ ಕುಟುಂಬಕ್ಕೆ ಆಸರೆಯಾಗುತ್ತದೆ. ಒಂದು ಕಾಲ ಘಟ್ಟದ ಕೃಷಿ ಬದುಕನ್ನು ಐಟಿ ಆಧರಿಸಿದುದು ಮರೆಯುವಂತಿಲ್ಲ. ದೇಶಕ್ಕೆ ಐಟಿ ಕ್ಷೇತ್ರದಿಂದ ಉತ್ತಮ ಲಾಭ. ಉದ್ಯೋಗಿಗಳಿಗೂ ಪ್ರಯೋಜನ. ಆದರೆ ಕಳೆದುಹೋದ ಸಂಬಂಧ, ಆರೋಗ್ಯ ಮರುಭರ್ತಿ ಹೇಗೆ? ಎಂದು ಪ್ರಶ್ನಿಸುತ್ತಾರೆ.
                 ಕೃಷಿಕರಾಗಿದ್ದೂ ತಮ್ಮ ಮಕ್ಕಳನ್ನು ಐಟಿ ವೃತ್ತಿಗೆ ತಳ್ಳುವ ವ್ಯವಸ್ಥೆಯತ್ತ ಅಸಹನೆಯಿದೆ. ಕೃಷಿಯಲ್ಲಿ ಕೈತುಂಬಾ ಸದ್ದಾಗುವ ಕಾಂಚಾಣ ಕುಣಿಯದಿರಬಹುದು. ಆದರೆ ಬದುಕಿನಲ್ಲಿ ಎಂದೂ ಬತ್ತದ ಆರೋಗ್ಯವನ್ನು ಅನುಭವಿಸಬಹುದು ಎನ್ನುವ ಸತ್ಯ ಮನಗಂಡಿದ್ದಾರೆ. ಬಹುತೇಕ ಹಿರಿಯರ ಮನಃಸ್ಥಿತಿಯೂ ಇದುವೇ. ಆದರೆ ಯಾರೂ ಮಾತನಾಡುವುದಿಲ್ಲವಷ್ಟೇ. ತನ್ನ ಬದುಕು ಕುಸಿಯುತ್ತಿರುವುದನ್ನು ಅರಿತ ಲಕ್ಷ್ಮಣ್ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಎರಡು ವರುಷವಾಯಿತು. ಹಳ್ಳಿ ಮನೆಗೆ ಬಂದರು. ತನ್ನ ತೀರ್ಥರೂಪರು ನಡೆದಾಡಿದ ತೋಟದೆಲ್ಲೆಡೆ ಓಡಾಡಿದರು. ಅವರ ಕನಸನ್ನು ಮುಂದುವರಿಸುವ ಸಂಕಲ್ಪ ಮಾಡಿದರು. ತೋಟವನ್ನು ವ್ಯವಸ್ಥಿತವಾಗಿ ರೂಪಿಸುವತ್ತ ಚಿತ್ತ.
                  ಹನ್ನೆರಡು ಹಸುಗಳುಳ್ಳ ಡೈರಿ ತೆರೆದರು. ಪ್ಯಾಕೆಟ್ ಹಾಲಿಗೆ ಒಗ್ಗಿಕೊಂಡವರು ಲಕ್ಷ್ಮಣರ ಹಸುವಿನ ಹಾಲನ್ನು ಸವಿದರು. ಬೇಡಿಕೆ ಹೆಚ್ಚಾಯಿತು. ಅವರ ಕನಸಿನ ಆಧುನಿಕ ಹಟ್ಟಿ ನಿರ್ಮಾಣವಾಗುತ್ತಿದೆ. ನಗರದಿಂದ ಪುನಃ ಹಳ್ಳಿಗೆ ಬಂದು ಮಣ್ಣನ್ನು ಮುಟ್ಟಿದಾಗ, ಮೆಟ್ಟಿದಾಗ ಬೆನ್ನು ತಟ್ಟುವ ಮನಸ್ಸುಗಳ ಕೊರತೆಯನ್ನು ಕಂಡುಕೊಂಡರು. ಗೇಲಿ ಮಾಡುವ ಮುಖಗಳ ದರ್ಶನ. 'ನೋಡಿ, ಕೃಷಿಯಲ್ಲಿ ಎಷ್ಟು ಕಷ್ಟ ಇದೆಯೆಂದು ನಿಮಗೆ ಗೊತ್ತಾಗುತ್ತೆ, ಎಂದು ಗುಮ್ಮನನ್ನು ಛೂ ಬಿಡುವ ಮಂದಿ. 'ನಾವಿಲ್ಲಿ ಒದ್ದಾಡುತ್ತಾ ಇಲ್ವಾ,' ಕೀಳರಿಮೆಯ ಕೂಪದೊಳಗಿನ ಮಾತುಗಳು.
                  ಲಕ್ಷ್ಮಣರ ಮುಂದೆ ಸ್ಪಷ್ಟ ಗುರಿಯಿದೆ. ತನ್ನ ಸುಖ-ಆರೋಗ್ಯದಾಯಕ ಬದುಕಿಗೆ ಕೃಷಿಯೊಂದೇ ದಾರಿ. ನಗರದಲ್ಲಿ ಓದುತ್ತಿದ್ದ ಮಕ್ಕಳೀಗ ಹಳ್ಳಿಯ ಶಾಲೆಯಲ್ಲಿ ಓದು ಮುಂದುವರಿಸಿದ್ದಾರೆ. ಸಮಾಜದ ಚುಚ್ಚು ಮಾತುಗಳ ಮಧ್ಯೆ ಕೃಷಿಯಲ್ಲಿ ಸುಭಗತೆಯನ್ನು ತೋರಿ ಮಾದರಿಯಾಗಬೇಕೆನ್ನುವ ಛಲವಿದೆ. ’ಐಟಿ ಉದ್ಯೋಗ ದುಡ್ಡು ಕೊಡಬಹುದು ಸಾರ್, ಆದರೆ ಯೌವನ ಕೊಡುವುದಿಲ್”, ಎನ್ನುವ ಲಕ್ಷ್ಮಣರಲ್ಲಿ ಸಮಯ ಕೊಲ್ಲುವ ಫೇಸ್ಬುಕ್ ಅಕೌಂಟ್ ಇಲ್ಲ!


3 comments:

ramesh delampady said...

Heard that he is in to dairy farming in a very big way.Waiting for the completion of his project

Mrs. Anitha Ashok said...

good U Turn towards life

ಶ್ರೀಧರ್. ಎಸ್. ಸಿದ್ದಾಪುರ. said...

ನಿಮಗೆ ಶುಭವಾಗಲಿ. ನಿಮ್ಮಂತಹ ಯುವಕರ ಸಂತತಿ ಹೆಚ್ಚಲಿ. ನಮ್ಮ ಹಳ್ಳಿಗಳು ಉದ್ದಾರವಾಗಲಿ.

Post a Comment