Thursday, January 28, 2016

ಬರದ ಭರತಕ್ಕೆ ಭರಮ ಊರಿದ ಹೆಜ್ಜೆ

             "ಕೃಷಿ ಮಾತ್ರ ಸಾವಯವ ಆದರೆ ಸಾಲಕು. ನಮ್ಮ ಆಹಾರ, ಜನಜೀವನ, ಮನೆ-ಮಂದಿಯ ಬದುಕು ಎಲ್ಲವೂ ಸಾವಯವ ಆಗಬೇಕು," ಗದಗ ಜಿಲ್ಲೆಯ ದೇವೇಂದ್ರಗೌಡ ದ್ಯಾಮನಗೌಡ ಭರಮಗೌಡ್ರ  - ಡಿ.ಡಿ.ಭರಮಗೌಡ್ರ (Bharama Goudra D.D.) - ಖಡಕ್ ಆಗಿ ಹೇಳುವ 'ಸಾವಯವ ಮಾತು.' ಇಂತಹ ಮಾತು ೨೦೧೬ ಜನವರಿ 13ರಂದು ಮೌನವಾಯಿತು. ಭರಮ ಗೌಡ್ರು ದೂರವಾದರು. ಇವರು ಮಳೆಯಾಶ್ರಿತದಲ್ಲಿ ಸಾವಯವ ಕೃಷಿ ಪದ್ದತಿ ಅಳವಡಿಸಿ ಯಶ ಕಂಡ ಕೃಷಿಕ. ನಾಲ್ಕು ದಶಕಗಳ ಕಾಲ ಕನ್ನಾಡಿನಲ್ಲಿ ಸಾವಯವ ಕೃಷಿ ಪದ್ಧತಿ ಮತ್ತು ಆ ಕುರಿತು ಗಟ್ಟಿಯಾದ ನಂಬುಗೆ ಹುಟ್ಟುವಂತೆ ಮಾಡಿದವರಲ್ಲಿ ಮುಖ್ಯರು.
                ಗದಗ ಜಿಲ್ಲೆಯ ಈ ರೈತ ರಾಜ್ಯ, ದೇಶ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಪರಿಚಿತ. ಖಚಿತ ಮಾತಿನ, ಹರಿತ ವಿಚಾರಗಳ ಗನಿ. ಇವರಲ್ಲಿ ಥಿಯರಿಗಳಿಗೆ ಮಾನ್ಯತೆಯಿಲ್ಲ. ತಾನು ಅನುಸರಿಸಿ ಯಶಕಂಡ  ಮಾಹಿತಿಗಳನ್ನು ಹಂಚುತ್ತಿದ್ದರು ತೊಂಭತ್ತರ ದಶಕದಲ್ಲಿ ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮ ರಾವ್ ಪ್ರತಿಷ್ಠಾನದೊಂದಿಗೆ ಕಾರ್ಯನಿರ್ವಹಣೆ. ಸಹಜ ಸಮೃದ್ಧ, ಇಕ್ರಾ, ಧರಿತ್ರಿ ಹಾಗೂ ಅಂತಾರಾಷ್ಟ್ರೀಯ ಸಾವಯವ ಸಂಘಟನೆಗಳಲ್ಲಿ ಸಕ್ರಿಯ. ಕೃಷಿ ಅನುಭವಗಳ ಲೇಖನಗಳು ಜನಪ್ರಿಯ.
               2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಪಟ್ಟಿಯಲ್ಲಿ ಭರಮ ಗೌಡ್ರ ಹೆಸರಿತ್ತು. ಸರಕಾರದಿಂದ ಯಾವ ಮಾಹಿತಿಯೂ ಹೋಗಿರಲಿಲ್ಲ. ಪತ್ರಿಕೆಯಲ್ಲಿ ಪ್ರಕಟವಾಗಿತ್ತಷ್ಟೇ.  ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಕಾಲಕ್ಕೆ ಆಗಮಿಸಿದ್ದರು. ಸರಕಾರಿ ಆದೇಶ ಕೈಯಲ್ಲಿ ಇಲ್ಲದ್ದರಿಂದ ಪ್ರವೇಶಕ್ಕೆ ಕೊಕ್. ಪತ್ರಿಕೆಯ ವರದಿ ತೋರಿಸಿದರೂ ಪ್ರಯೋಜನವಾಗಲಿಲ್ಲ. ನಾಗೇಶ ಹೆಗಡೆಯವರೂ ಪ್ರಶಸ್ತಿ ಸ್ವೀಕಾರಕ್ಕೆ ಬಂದಿದ್ದರು. ಭರಮ ಗೌಡ್ರ ಅವಸ್ಥೆಯನ್ನು ನೋಡಿ ಅವರನ್ನು ಒಳಗೆ ಎಳಕ್ಕೊಂಡರು! ಬಳಿಕ 'ಪ್ರಶಸ್ತಿ ಫಜೀತಿ'ಯನ್ನು ರೋಚಕವಾಗಿ ಹೇಳುತ್ತಿದ್ದರು. ಸರಕಾರಿ ವ್ಯವಸ್ಥೆಯ ಅನಾದರ ಮುಖವನ್ನು ಹಳಿಯುತ್ತಿದ್ದರು.
                ಕಳೆದ ವರುಷ ಉತ್ತರ ಕರ್ನಾಟಕದಲ್ಲಿ ಮಳೆ ಕೈಕೊಟ್ಟಿತ್ತು. ಬರವನ್ನು ಎದುರಿಸುವಂತಾಯಿತು. ಬರ ನಿರೋಧಕ ಜಾಣ್ಮೆ ಮತ್ತು ಕೃಷಿ ಕ್ರಮವನ್ನು ಭರಮ ಗೌಡ್ರು ಅನುಭವದಿಂದ ಹೇಳುತ್ತಿದ್ದರು : ಕೃಷಿ ಕ್ರಮ ಮತ್ತು ಬದುಕಿನಲ್ಲಿ ಯೋಜನೆ ಹಾಕಿಕೊಳ್ಳದೆ ರೈತರು ಕಷ್ಟಕ್ಕೆ ಒಳಗಾಗುತ್ತಾರೆ. ಹೇಳುವವರು ಯಾರು? ಸಮಸ್ಯೆ ಬಂದಾಗ ಪರಿಹಾರವನ್ನು ಕಂಡುಕೊಳ್ಳುವ ಅಥವಾ ಪೂರ್ವಭಾವಿ ಚಿಂತನೆಗಳನ್ನು ಮಾಡದೆ  ಅದನ್ನು ವೈಭವೀಕರಿಸುವುದರಲ್ಲೇ ಆಸಕ್ತಿ. ನಮ್ಮ ರಾಜಕಾರಣವೂ ಸಾಥ್ ನೀಡುತ್ತದೆ. ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ತೊಂದರೆಯಿಲ್ಲ. ರಾಜಕಾರಣ ಮಾತ್ರ ಬಿಡರು.. ಬೆಂಗಳೂರಿನ ಸಮಾರಂಭವೊಂದರಲ್ಲಿ ಸೋದಾಹರಣವಾಗಿ ಖಾರವಾಗಿ ಹೇಳಿದ್ದರು.
              'ಮೇವಿಲ್ಲ ಎನ್ನುವವರು ರೈತರೇ ಅಲ್ಲ' - ಭರಮಗೌಡ್ರ ಪ್ರತಿಪಾದನೆ. ಮೇವಿನ ಬೆಳೆ ಹಾಕದೆ ಮೆಕ್ಕೆ ಜೋಳ, ಬಿಟಿ ಹತ್ತಿ ಹಾಕುವವರಿಗೆ ಯಾವಾಗಲೂ ಮೇವಿನ ಕೊರತೆ! ಸರ್ಕಾರ ಮೇವು ಒದಗಿಸುತ್ತದೆ ಎನ್ನುವುದು ಸುಳ್ಳು. ಸರಕಾರ ತರಿಸುವ ಮೇವು ಎಂತಹುದು? ದಪ್ಪ ಕಡ್ಡಿಯ ಗೋಧಿ ಹುಲ್ಲು, ಪುಡಿ ಪುಡಿಯಾದ ಭತ್ತದ ಹುಲ್ಲು.. ಇದನ್ನು ಜಾನುವಾರುಗಳು ಇಷ್ಟಪಡುವುದಿಲ್ಲ. ರೈತನಾದವನು ಎರಡು ವರುಷಕ್ಕೆ ಬೇಕಾಗುವಷ್ಟು ಹೊಟ್ಟು, ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು. ಹಿಂದಿನವರಲ್ಲಿ ಭವಿಷ್ಯದ ಆಪತ್ತಿನ ದೃಷ್ಟಿಕೋನವಿತ್ತು.
               ವಿಶ್ವವಿದ್ಯಾಲಯಗಳ ಸಂಶೋಧನೆಗಳನ್ನು ಪ್ರಶ್ನಿಸುತ್ತಿದ್ದರು. "ಅತಿ ಕಡಿಮೆ ಮಳೆಯಲ್ಲೂ ಬೆಳೆಯುವ ಬೆಳೆಗಳ ಮೇಲೆ ಯಾಕೆ ಸಂಶೋಧನೆ ಮಾಡುವುದಿಲ್ಲ? ಆಹಾರ ಧಾನ್ಯ ಅಂದರೆ ಗೋಧಿ, ಅಕ್ಕಿ ಇಷ್ಟೇ. ನಾವು ಬರವನ್ನು ಸರಕಾರ, ಕೃಷಿ ವಿವಿಗಳ ಮೇಲೆ ಹಾಕಿ ಕೂರುವ ಪ್ರಮೇಯವೇ ಇಲ್ಲ. ಅವರನ್ನು ನಂಬಿದರೆ ಕೆಟ್ಟೆವು. ಅವರು ರೈತರಿಗೆ ಮಾರ್ಗದರ್ಶನ ಮಾಡುವುದಕ್ಕಿಂತ ಹಾದಿ ತಪ್ಪಿಸುವುದೇ ಹೆಚ್ಚು. ರೈತನಿಗೆ ಬರವನ್ನು ನಿಭಾಯಿಸುವ ಸಾಮಥ್ರ್ಯವಿದೆ.  ಅವರು ಸರಕಾರದ ಮೇಲೆ ಅವಲಂಬನೆ ಆಗಿದ್ದಾರೆ. ರೈತರ ತಾಕತ್ತು ಕಡಿಮೆಯಾಗಲು ಸರಕಾರವೇ ಕಾರಣ. ಅವರ ಆತ್ಮವಿಶ್ವಾಸವನ್ನೇ ನಾಶ ಮಾಡಿದೆ," ಎಂದು 'ಸಹಜ ಸಾಗುವಳಿ' ಪತ್ರಿಕೆಯ ಲೇಖನವೊಂದರಲ್ಲಿ ಗೌಡ್ರು ಉಲ್ಲೇಖಿಸಿದ್ದಾರೆ.
               ಕೃಷಿ ಅರಣ್ಯ ಮತ್ತು ಕೃಷಿಗಿರುವ ನೇರ ಸಂಬಂಧವನ್ನು ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು. ಕೃಷಿಕ ಬುದ್ಧಿಪೂರ್ವಕವಾಗಿ ಮಾಡುವ ಕೆಲವೊಂದು ತಪ್ಪುಗಳನ್ನು ಭರಮ ಗೌಡ್ರು ಎತ್ತಿ ಹೇಳುತ್ತಿದ್ದರು. "ನಾವು ಯಾವಾಗ ಅಧಿಕ ಇಳುವರಿ ಬೆಳೆಗಳಿಗೆ ಬಂದೆವೋ ಆಗ ಹೊಲದಲ್ಲಿ ಮರಗಿಡಗಳಿದ್ದರೆ ಬೆಳೆ ಇಳುವರಿ ಕಡಿಮೆಯಾಗುತ್ತದೆ ಎಂದು ಕಡಿಯಲು ಮುಂದಾದೆವು. ಗೋಮಾಳಗಳನ್ನು ಒತ್ತುವರಿ ಮಾಡಿದೆವು. ಅರಣ್ಯಗಳು ನುಣುಪಾದ ಮೇಲೆ ಮಂಗ, ಚಿಗರಿ, ತೋಳ, ಆನೆ.. ಗಳು ಹೊಲಗಳಿಗೆ ನುಗ್ಗಿದುವು. ಅವುಗಳ ಮನೆಯನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿದ್ದೇವೆ. ಈಗವು ನಮ್ಮ ಮನೆಗೆ ನುಗ್ಗುತ್ತಿವೆ. ಮುಂದೆ ನಮ್ಮಲ್ಲೇ ವಾಸ ಮಾಡುತ್ತವೇನೋ?"
             ಕೃಷಿಯ ಜತೆ ಯಾವುದೆಲ್ಲಾ ಮರಗಳಿರಬೇಕು ಎನ್ನುವ ಸ್ಪಷ್ಟ ಜ್ಞಾನ ಅವರಲ್ಲಿತ್ತು. ಅವೆಲ್ಲಾ ಲೋಕ ಸುತ್ತಿ ಪಡೆದ ಸ್ವಾನುಭವಗಳು. ಕೃಷಿಯ ಜತೆ ಮರಗಿಡಗಳ ಜೋಡಣೆಯನ್ನು ಜಾಣ್ಮೆಯಿಂದ ನಿಭಾಯಿಸಬೇಕು. ಹಿಂದೆಲ್ಲಾ ಬರಗಾಲ ಮಹಾಪೂರಗಳು ಬಂದರೂ ತಾಳಿಕೊಳ್ಳುವಂತಹ ಸಸ್ಯಗಳಿದ್ದವು. ಈಗ ಯಾವ ಹೊಲಕ್ಕೆ ಹೋದರೂ ಮರಗಿಡಗಳಿಲ್ಲ. ಕೃಷಿಗೆ ಎಷ್ಟು ಮಹತ್ವ ಕೊಡುತ್ತೇವೆಯೋ ಅಷ್ಟೇ ಮಹತ್ವ ಮರಗಿಡಗಳಿಗೂ ಕೊಡಬೇಕು. ದುಡ್ಡಿನ ಹಿಂದೆ ಬಿದ್ದು ತಾಳೆ, ನೀಲಗಿರಿ, ಅಕೇಸಿಯಾ ಬೆಳೆಯಲು ಹೋದರೆ ಅಧೋಗತಿ ಖಂಡಿತ. ಯಾವುದನ್ನೇ ಬೆಳೆಯಿರಿ, ಅದು ಆಹಾರವಾಗಬೇಕು. ಮೇವು ಇರಬೇಕು. ಭೂಮಿಯ ಸತ್ವ ಉಳಿಯಬೇಕು.
            ವಿಜ್ಞಾನದ ಬಗ್ಗೆ ಭರಮ ಗೌಡ್ರಿಗೆ ಅಪಾರ ನಂಬುಗೆಯಿತ್ತು. ಆದರೆ ಕೆಲವೊಂದು ಬಾರಿ ವಿಜ್ಞಾನಿಗಳ ಯೋಚನೆ, ಹೇಳಿಕೆಗಳು ಅವರನ್ನು ಕೆರಳಿಸುತ್ತಿತ್ತು. "ಗೆದ್ದಲು ನಿಯಂತ್ರಣದ ಬಗ್ಗೆ ವಿಜ್ಞಾನಿಗಳು 'ಹೌ ಟು ಕಂಟ್ರೋಲ್ ವೈಟ್ ಅ್ಯಂಟ್ ಫ್ರಂ ಫಾರಂ ಲ್ಯಾಂಡ್' ಎಂದು ಗೆದ್ದಲು ನಿಯಂತ್ರಣದ ಬಗ್ಗೆ ಹೇಳುವುದು ವಿಚಿತ್ರ. ಗೆದ್ದಲುಗಳು ಸತ್ತ ಕಟ್ಟಿಗೆಯನ್ನು ತಿನ್ನಲು ಯತ್ನಿಸುತ್ತದೆಯೇ ವಿನಾ ಜೀವಂತ ಬೆಳೆಯನ್ನು ತಿನ್ನಲು ಸಾಧ್ಯವೇ ಇಲ್ಲ. ಗೆದ್ದಲು ಜಮೀನನ್ನು ಫಲವತ್ತತೆಯನ್ನಾಗಿ ಮಾಡುತ್ತದೆ. ಅದನ್ನು ಕೊಲ್ಲುವ ಅವಶ್ಯಕತೆಯಿಲ್ಲ. ಎಲ್ಲಿ ಸತ್ತ ವಸ್ತು ಇರುತ್ತದೋ ಅಲ್ಲಿಗೆ ಹೋಗುತ್ತದೆ. ಇಂತಹ ಸಹಜ ವಿಚಾರಗಳು ಯಾಕೆ ಅರ್ಥಮಾಡಿಕೊಳ್ಳುವುದಿಲ್ಲ?" ಪ್ರಶ್ನಿಸುತ್ತಾರೆ. ರೈತನ ಜಾಣ್ಮೆ, ರೈತನ ಭಾಷೆ ಅರ್ಥವಾಗಬೇಕಾದರೆ ವಿಜ್ಞಾನಿಯೂ ರೈತನಾಗಿರಬೇಕು ಎನ್ನುತ್ತಿದ್ದರು.
             ಕುಲಾಂತರಿ ತಂತ್ರಜ್ಞಾನ ಆಂದೋಳನದಲ್ಲಿ ಗೌಡ್ರು ತೊಡಗಿಸಿಕೊಂಡಿದ್ದರು. ಜೈವಿಕ ತಂತ್ರಜ್ಞಾನ ಬಳಸಿ ಬೆಳೆದ ಆಹಾರ ಕ್ಯಾನ್ಸರಿಗೂ ಕಾರಣವಾಗಬಲ್ಲುದು. ಅಮೆರಿಕಾ, ಚೀನ, ಇಂಡೋನೇಶ್ಯಾ ಹಾಗೂ ಬ್ರೆಜಿಲ್ನಂತಹ ದೇಶಗಳು ಈ ಅಂಶಗಳನ್ನು ಮನಗಂಡಿವೆ. ಆದರೆ ಕೃಷಿಯೇ ಕಸುಬಾಗಿರುವ ನಮ್ಮ ದೇಶದಲ್ಲಿ ಪ್ರಚಾರ ಮಾಡುವ ಬಹುರಾಷ್ಟ್ರೀಯ ಕಂಪೆನಿಗಳು ನಡೆಸಿರುವ ಹುನ್ನಾರವನ್ನು ವಿರೋಧಿಸಬೇಕಾಗಿದೆ. ಕಂಪೆನಿಗಳ ಕೆಲಸದಿಂದ ನಿವೃತ್ತಿ ಹೊಂದಿದ ನಂತರವಷ್ಟೇ ವಿಜ್ಞಾನಿಗಳು 'ಕುಲಾಂತರಿ ಬೀಜಗಳು ಅಪಾಯಕಾರಿ' ಎಂದು ಸಾರುತ್ತಾರೆ ಎನ್ನುವ ಸತ್ಯವನ್ನು ಜನತೆಯ ಮುಂದಿಡಲು ಮುಜುಗರ ಪಟ್ಟಿರಲಿಲ್ಲ.
              1990, ಸೆಪ್ಟೆಂಬರ್ 13-16. ಅಡಿಕೆ ಪತ್ರಿಕೆಯು ಕೊಪ್ಪದಲ್ಲಿ ಕೃಷಿ-ಗ್ರಾಮೀಣ ಪತ್ರಿಕೋದ್ಯಮ ಶಿಬಿರ ಏರ್ಪಡಿಸಿತ್ತು. ಭರಮ ಗೌಡ್ರು ಶಿಬಿರಾರ್ಥಿಯಾಗಿ ಆಗಮಿಸಿದ್ದರು. ಅವರ ಆಡು ಭಾಷೆ, ಹಾಸ್ಯ ಪ್ರವೃತ್ತಿ, ಊಟೋಪಚಾರ, ವಿಚಾರಗಳ ನಿಖರತೆ, ಆವರಿಸಿಕೊಳ್ಳುವ ಆಪ್ತತೆಗಳು ಎಲ್ಲರನ್ನೂ ಮೋಡಿ ಮಾಡಿದ್ದುವು. ಖಾರ ಹಸಿಮೆಣಸಿನ ಕಾಯನ್ನು ಜಗಿದು ಖಾರಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವುದನ್ನು ತೋರಿಸಿದ ಆ ದಿನಮಾನಗಳನ್ನು ಹೇಗೆ ಮರೆಯಲಿ?
              ’ಸಹಜ ಸಾಗುವಳಿ’ ಪತ್ರಿಕೆಯ ಸಂಪಾದಕೀಯ ಸಲಹೆಗಾರರಾಗಿದ್ದ ಭರಮ ಗೌಡ್ರು ನಿಜಾರ್ಥದಲ್ಲಿ ಅನುಭವದ ಗನಿ. ಕೃಷಿಯ ಎಲ್ಲಾ ಅಪ್ಡೇಟ್ಗಳು ಅವರಲ್ಲಿತ್ತು. ದೇಶ, ವಿದೇಶದೆಲ್ಲೆಡೆ ಓಡಾಡುತ್ತಿದ್ದರು. ಸಾವಯವ ಕೃಷಿಯನ್ನು ಪ್ರತಿಪಾದಿಸುತ್ತಿದ್ದರು. ಅವರ ಬದುಕು, ಕೃಷಿ ನೋಟ ಮತ್ತು ಕೃಷಿಯ ಸ್ವಾನುಭವಗಳು ಪುಸ್ತಕ ರೂಪದಲ್ಲಿ ಇಕ್ರಾ ಸಂಸ್ಥೆಯು ಪ್ರಕಟಿಸಲಿದೆ, ಎಂದು ಸಹಜ ಸಾಗುವಳಿಯ ಸಂಪಾದಕಿ ವಿ.ಗಾಯತ್ರಿ ಹೊಸ ಸುಳಿವನ್ನು ನೀಡಿದರು.
               ನೇಗಿಲ ಭಾಷೆಯನ್ನು ಕನ್ನಾಡಿನುದ್ದಕ್ಕೂ ಪಸರಿಸಿದ ಭರಮಗೌಡ್ರು ಮೂಡಿಸಿದ ಸಾವಯವ ಹೆಜ್ಜೆ ಚಿಕ್ಕದಲ್ಲ, ತ್ರಿವಿಕ್ರಮ ಹೆಜ್ಜೆ.

(ಉದಯವಾಣಿಯ ನೆಲದ ನಾಡಿ ಅಂಕಣದಲ್ಲಿ ಪ್ರಕಟ 21-1-2016)


Wednesday, January 27, 2016

ಅಕ್ಷರಗಳ ಹಂಗಿಲ್ಲದ 'ಪ್ರೇಮಾಯಣ'

                ಕೃಷಿ ಕುಟುಂಬದ ಪ್ರೇಮ ಓದಿದ್ದು ಮೂರನೇ ತರಗತಿ. ಅಮ್ಮನೊಂದಿಗೆ ಹೊಲದ ಕೆಲಸಗಳಿಗೆ ಮೊದಲಾದ್ಯತೆ. ಸಮಯ ಸಿಕ್ಕರೆ ಮಾತ್ರ ಶಾಲೆಯ ಸಹವಾಸ. ತಲೆಗಿದ್ದರೆ ಕಾಲಿಗಿಲ್ಲ. ತುತ್ತಿಗೂ ಎಡಬಲ ನೋಡುವ ಅಸಬಲತೆ. ಕಾಯಿಪಲ್ಲೆ ಬೆಳೆದು ಮಾರಿ ಸಿಕ್ಕಿದ ಕಾಸಿನಿಂದ ಕುಟುಂಬದ ಸದಸ್ಯರ ಹೊಟ್ಟೆ ತಂಪಾಗುತ್ತಿತ್ತು. ಒಂದು ಕಾಲಘಟ್ಟದಲ್ಲಿ ಹೊಲವೂ ಕೈಬಿಟ್ಟಿತು. ಬದುಕು ಮೂರಾಬಟ್ಟೆಯಾಯಿತು.
              ಸ್ವಂತ ನೆಲೆಯಿಲ್ಲ. ಕೂಡಿಟ್ಟ ಸಂಪತ್ತಿಲ್ಲ. ನೆರೆಹೊರೆಯು ನಿಜಾರ್ಥದಲ್ಲಿ 'ಹೊರೆ'ಯಾಯಿತು. ಬಂಧುಗಳ ಸಂಪರ್ಕದ ಅಂತರ ಹಿರಿದಾಯಿತು. ಹುಟ್ಟೂರು ಶಿರಗುಪ್ಪಿ ನಾಗರಹಳ್ಳಿಗೆ ವಿದಾಯ. ಹೊಟ್ಟೆಪಾಡಿಗಾಗಿ ಹುಬ್ಬಳ್ಳಿಗೆ ವಲಸೆ. ಅಲ್ಲೋ ಇಲ್ಲೋ ದುಡಿತ. ಭವಿಷ್ಯದ ನಿರೀಕ್ಷೆಗಳಿಲ್ಲ. ಅಂದಂದಿನದೇ ಚಿಂತೆ. ಹೊಟ್ಟೆಪಾಡಿಗಾಗಿ ಪ್ರೇಮ ಅವಿರತವಾಗಿ ಗಡಿಯಾರ ನೋಡದೆ ದುಡಿದರು. ಏಳು ವರುಷ ಗೃಹಸ್ಥರೊಬ್ಬರ ಮನೆಯಲ್ಲಿ ಮನೆವಾರ್ತೆಯ ಕಾಯಕ. ದುಡಿಯುತ್ತಾ ಎಲ್ಲಾ ಕೆಲಸಗಳನ್ನು ಕಲಿತರು. ಗುಡಿಸುವಲ್ಲಿಂದ ಅಡುಗೆ ಮಾಡುವ ತನಕ.
               ನನಗೆ ಅಮ್ಮ ಕೆಲಸ ಕಲಿಸಿ ಕೊಟ್ಟಿಲ್ಲ. ಅಮ್ಮನಿಂದ ಕೇಳಿ ಕಲಿಯುವ ವಯಸ್ಸೂ ಅಲ್ಲ. ಆದರೆ ಮನೆಯ ಒಡತಿ ಅಮ್ಮನಂತೆ ಕೈಹಿಡಿದು ಕಲಿಸಿದರು, ಎನ್ನುವಾಗ ಪ್ರೇಮ ಭಾವುಕರಾಗುತ್ತಾರೆ. ಆದರೆ ಒಂದೇ ಸಮಸ್ಯೆ! ಮನೆಯವರು ಮನೆಯೊಳಗಿದ್ದರೆ ಮಾತ್ರ ಪ್ರೇಮಾ ಸ್ವತಂತ್ರಳು. ಮನೆಬಿಟ್ಟು ಅವರೇನಾದರೂ ಹೊರಗೆ ಹೋಗುವ ಸಂದರ್ಭ ಬಂದಾಗ ಬೀಗ ಹಾಕಿ ಹೋಗುತ್ತಿದ್ದರು. ಮನೆಯೊಳಗೆ ಪ್ರೇಮಾ ಬಂಧಿ! ಬಹುಶಃ ಹೆಣ್ಣೊಬ್ಬಳ ರಕ್ಷಣೆಗಾಗಿ ಹೀಗೆ ಮಾಡಿದ್ದಿರಬಹುದು.
                ಆ ಮನೆಗೆ ಗಿರೀಶ್ ಶಿವಶಂಕರಪ್ಪ ಮೂಗಬಸ್ತ್ ಕೇಬಲ್ ನಿರ್ವಹಣೆಗಾಗಿ ಬರುತ್ತಿದ್ದರು. ಒಂದು ಶುಭಕ್ಷಣದಲ್ಲಿ ಎರಡೂ ಕಣ್ಣುಗಳು ಮಾತನಾಡಿತು. ಭಾವಗಳು ಮಿಳಿತವಾದುವು. ಹೃದಯದ ಭಾಷೆಗಳು ಪ್ರೀತಿಯಲ್ಲಿ ಒಂದಾಯಿತು. ಅಲ್ಲಿಂದ ಪ್ರೇಮಾ ಬದುಕಿಗೆ ಹೊಸ ತಿರುವು. ಈ ಮಧ್ಯೆ ಹೋಟೆಲ್ ಒಂದರಲ್ಲಿ ಚಪಾತಿ ಮಾಡುವ ಕೆಲಸಕ್ಕೆ ಸೇರಿದರು. ಗಂಟೆಗೆ ಮುನ್ನೂರೈವತ್ತಕ್ಕೂ ಮಿಕ್ಕಿ ಚಪಾತಿ ತಯಾರಿ! ಉಂಡೆಕಟ್ಟಿದ ಹಿಟ್ಟನ್ನು ಚಪಾತಿಯಾಕಾರಕ್ಕೆ ರಟ್ಟಿಸಿ, ಬೇಯಿಸಿ ಕ್ಷಿಪ್ರವಾಗಿ ಚಪಾತಿ ತಯಾರಿಸುವ ಸೂಕ್ಷ್ಮ ಜಾಣ್ಮೆಯಲ್ಲಿ ಪ್ರೇಮಾ ಗೆದ್ದಿದ್ದರು.
              ಒಂದು ಹಂತದಲ್ಲಿ ಹಳ್ಳಿ ಮರೆತುಹೋಯಿತು. ಬಂಧುಗಳು ದೂರವಾದರು. ಕೃಷಿಯಂತೂ ಮರೀಚಿಕೆ. ಸಣ್ಣ ಮಟ್ಟದಲ್ಲಿ ಬಟ್ಟೆ ವ್ಯಾಪಾರ ಮಾಡಿದರು. ಹೇಳುವಂತಹ ಲಾಭವಾಗಲಿಲ್ಲ. ಗಂಡನ ಕೇಬಲ್ ಸಂಬಂಧಿ ಕೆಲಸಗಳಿಂದ ನಷ್ಟವಾಯಿತು. ಲಕ್ಷ ರೂಪಾಯಿಗೂ ಮಿಕ್ಕಿ ಕೈಜಾರಿತು. ಮುಂದೇನು? ಗೊತ್ತುಗುರಿಯಿಲ್ಲ. ಪರಿಚಯಸ್ಥರ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಎಂಟ್ರಿ ಪಡೆದರು. ಅದೂ ಇವರ ಕೈಹಿಡಿಯಲಿಲ್ಲ. ಗಂಡ-ಹೆಂಡತಿ ಒಮ್ಮತದಿಂದ 'ಖಾನಾವಳಿ' ತೆರೆಯಲು ನಿರ್ಧಾರ.
            ವಿದ್ಯಾಭ್ಯಾಸವಿಲ್ಲದ ಪ್ರೇಮಾ ಅವರಿಗೆ ಆರ್ಥಿಕ ವ್ಯವಹಾರ ಕಷ್ಟ. ಬರೆಯಲು ಗೊತ್ತಿಲ್ಲ. ಓದಲಂತೂ ದೂರ! ಖಾನಾವಳಿ ತೆರೆದರೆ ನಿರ್ವಹಣೆ ಹೇಗೆ? ಆರಂಭದಲ್ಲಿ ಯೋಚನೆ ಬಂದಿತ್ತು. ಅಸಾಕ್ಷರ ಕೊರತೆಯನ್ನು ಮೆಟ್ಟಿ ನಿಂತರು. ಹುಬ್ಬಳ್ಳಿ ಸುತ್ತ ಏನಿಲ್ಲವೆಂದರೂ ನಲವತ್ತೈದಕ್ಕೂ ಮಿಕ್ಕಿ ಖಾನಾವಳಿಗಳಿವೆ. ಸಾವಿರಗಟ್ಟಲೆ ವಿದ್ಯಾರ್ಥಿಗಳಿದ್ದಾರೆ. ನಲವತ್ತು ಕಾಲೇಜುಗಳಿವೆ. ಯಾಕೆ ಹೆದರ್ಬೇಕು? ಕಡಿಮೆ ಬಾಡಿಗೆ ನೆಲೆಯಲ್ಲಿ ಉದಾರಿ ಭಟ್ಟರೊಬ್ಬರು ಕಟ್ಟಡವನ್ನು ಬಿಟ್ಟುಕೊಟ್ಟರು. 2012ರಲ್ಲಿ ಖಾನಾವಳಿ ಶುರು ಮಾಡಿದ್ವಿ. ಆರಂಭದಲ್ಲಿ ಇಪ್ಪತ್ತು ಊಟಕ್ಕೆ ಗಿರಾಕಿಯಿತ್ತು. ಈಗ ಇನ್ನೂರು ದಾಟಿದೆ, ಎಂದಾಗ ಗಿರೀಶ್ ಮುಖವರಳುತ್ತದೆ. ಸಾಗಿ ಬಂದ ದಾರಿಯತ್ತ ಒಮ್ಮೆ ತಿರುಗಿನೋಡಿ ಕಣ್ಣುಮಿಟುಕಿಸಿದರು ಪ್ರೇಮಾ, ಸಾರ್, ಹಳ್ಳಿಯಲ್ಲೇ ಇರುತ್ತಿದ್ದರೆ ಇನ್ನೊಬ್ಬರ ಹಂಗಿನಲ್ಲಿ ಜೀವಿಸಬೇಕಾಗಿತ್ತು. ಕೃಷಿ ಇರುತ್ತಿದ್ದರೆ ಬೇರೆ ಮಾತು. ಈಗ ನಮ್ಮದು ಸ್ವಾವಲಂಬಿ ಬದುಕು.
             ಈ ಮಧ್ಯೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಂಪರ್ಕ. ಯೋಜನೆಯಡಿಯಲ್ಲಿ ಬರುವ ಉಳಿತಾಯ, ಸಂಸ್ಕಾರ, ನೈತಿಕ ಶಿಕ್ಷಣದತ್ತ ಒಲವು. ಓದಲು, ಬರೆಯಲು ತ್ರಾಸವಾದರೂ ನೋಡಿ ತಿಳಿವ, ವಿಚಾರಗಳತ್ತ ಅಪ್ಡೇಟ್ ಅಗುವ ಜ್ಞಾನ ಪ್ರೇಮಾರಿಗಿತ್ತು. ಯೋಜನೆಯ ಸಂಘಟನೆ ಶುರುವಾಯಿತು. ಕೆಲವೇ ಸಮಯದಲ್ಲಿ ಪ್ರೇಮಾ ಸಂಘದ ಮುಖ್ಯಸ್ಥೆಯಾದರು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಬದುಕುವ ಕಲೆಗೆ ಸಂಸ್ಕಾರ ಬಂತು. ಸ್ವಂತ ಕಾಲ ಮೇಲೆ ನಿಲ್ಲುವ ಛಾತಿ ನಿಜಕ್ಕೂ ಬೆರಗು. ಕ್ಷಿಪ್ರವಾಗಿ ಗ್ರಹಿಸುವ, ಅನುಷ್ಠಾನಿಸುವ ಅವರ ಜಾಯಮಾನ ಅವರನ್ನು ಇಷ್ಟೆತ್ತರಕ್ಕೆ ಬೆಳೆಸಿದೆ, ಎನ್ನುತ್ತಾರೆ ಯೋಜನೆಯ ದಿನೇಶ್.
             2013. ಜಿಲ್ಲಾ ಮಟ್ಟದ ಕೃಷಿ ಉತ್ಸವ. ಗಂಡನೊಂದಿಗೆ ಖಾನಾವಳಿ ತೆರೆದಿದ್ದರು. ಕೃಷಿ ಉತ್ಸವದ ಮಹಿಳಾ ವಿಚಾರಮಂಥನ ಕಲಾಪದಲ್ಲಿ ಪ್ರೇಮಾರಿಗೆ ಮಾತನಾಡುವ ಅವಕಾಶ ದೊರೆಯಿತು. ಮೌನವಾಗಿದ್ದ ಕಷ್ಟದ ಯಶೋಗಾಥೆಯಂದು ಮಾತಾಯಿತು. ಓದಲು, ಬರೆಯಲು ಬರುವುದಿಲ್ಲವೆಂಬ ಕೀಳರಿಮೆ ದೂರವಾಯಿತು. ಜೀವನಪಥದ ಒಂದೊಂದು ಘಟನೆಗಳು ಯಶೋಯಾನಕ್ಕೆ ಪೋಣಿಕೆಯಾಗಿ 'ಪ್ರೇಮಾಯಣ'ವಾಯಿತು!  ಕತೆಗೆ ಕಿವಿಯಾದ ಶ್ರೋತೃಗಳ ಕಣ್ಣಂಚಿನಲ್ಲಿ ನೀರು! ಪಟಪಟನೆ, ಭಾವನಾತ್ಮಕವಾಗಿ, ಸ್ಪಷ್ಟ ಶಬ್ದಗಳಲ್ಲಿ ಅಳುಕಿಲ್ಲದೆ ಮಾತನಾಡಿದರು. ಅವಳು ಹಾಗೆ ಮಾತನಾಡಬಹುದೆಂದು ಯೋಚಿಸಿರಲಿಲ್ಲ. ಅವಳಿಗೆ ಧೈರ್ಯವಿದೆ, ಛಲವಿದೆ, ಪತಿ ಗಿರೀಶ್ ಸಾಥ್.
            ಕೃಷಿ ಉತ್ಸವ ಕಳೆದು ಒಂದೆರಡು ತಿಂಗಳಾಗಿರಬಹುದಷ್ಟೇ. ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡುವಂತೆ ಡಾ.ವೀರೇಂದ್ರ ಹೆಗ್ಗಡೆಯವರಿಂದ ಸೂಚನೆ. ಎಲ್ಲಿಯ ಮೂರನೇ ಕ್ಲಾಸ್! ಎಲ್ಲಿಯ ಎಂ.ಬಿ.ಎ.! ಒಂದು ಕ್ಷಣ ಮಾತು ಮೂಕವಾಯಿತಂತೆ. ಆ ದಿನ ನನ್ಮನೆಗೆ ಕಾರು ಕಳುಹಿಸಿದ್ರು. ಕಾಲೇಜಿನಲ್ಲಿ ರಾಜಾತಿಥ್ಯ ನೀಡಿದ್ರು. ಪುಷ್ಪವೃಷ್ಟಿ ಮಾಡಿದ್ರು. ಮುಜುಗರದಿಂದ ಮುದ್ದೆಯಾಗಿದ್ದೆ. ಇಷ್ಟು ದೊಡ್ಡ ಆತಿಥ್ಯವನ್ನು ಪಡೆಯುವ ಯೋಗ್ಯತೆ ನನಗಿದೆಯಾ? ನನ್ನಲ್ಲೇ ಪ್ರಶ್ನಿಸಿದೆ. ನನ್ನ ಕತೆಯನ್ನು ಪ್ರಸ್ತುತಪಡಿಸಿದೆ. ಕತೆ ಮುಗಿಯುವಾಗ ಮಕ್ಕಳ ಮುಖ ಸಣ್ಣದಾಗಿತ್ತು. ನನ್ನ ಮುಖ ಅರಳಿತ್ತು. ಹೊರಡುವಾಗ ಅನ್ನಿಸಿತು, ನಾನೂ ಕಲಿಯಬೇಕಾಗಿತ್ತು, ಎನ್ನುತ್ತಾ ಪ್ರೇಮಾ ಮೌನವಾದರು. ಆ ಮೌನದಿಂದ ಹೊರಬರಲು ಐದಾರು ನಿಮಿಷಗಳೇ ಬೇಕಾಗಿತ್ತು.
            ಪ್ರೇಮಾ ದಂಪತಿಗೆ ಖಾನಾವಳಿ ಆತ್ಮವಿಶ್ವಾಸದ ಬದುಕನ್ನು ನೀಡಿದೆ. ಛಲ ಮತ್ತು ಸ್ಪಷ್ಟ ಗುರಿಯಿದ್ದರೆ ಬದುಕನ್ನು ಎದುರಿಸಬಹುದೆನ್ನುವ ಪಾಠ ಕಲಿಸಿದೆ. ಇದು ಇಪ್ಪತ್ತನಾಲ್ಕು ಗಂಟೆ ಜಾಬ್ ಸಾರ್. ಹತ್ತು ಮಂದಿ ಕೆಲಸದವರಿದ್ದಾರೆ. ಮೊದಲು ನಾಲ್ಕು ಮಂದಿ ಇದ್ದರು. ಖಾನಾವಳಿಯ ಆಹಾರದ ರುಚಿ ಮತ್ತು ಗುಣಮಟ್ಟದಿಂದಾಗಿ ವಿದ್ಯಾರ್ಥಿಗಳು, ನಾಗರಿಕರು ಹುಡುಕಿ ಬರ್ತಾರೆ. ಜಾಗ ಸಾಕಾಗ್ತ ಇಲ್ಲ. ವಿಸ್ತರಿಸಬೇಕು ಎಂದಿದ್ದೇವೆ, ಹೊಸ ಸುಳಿವು ಕೊಟ್ಟಾಗ ಪ್ರೇಮಾ ದನಿಗೂಡಿಸಿದರು, ಖಾನಾವಳೀಯ ತಿಂಗಳ ವ್ಯವಹಾರದಲ್ಲಿ ಇಬ್ಬರಿಗೂ ಸಂಬಳ ನಿಗದಿ. ನಮಗಿಬ್ಬರಿಗೂ ತಲಾ ನಲವತ್ತು ಸಾವಿರ ರೂಪಾಯಿಯಂತೆ ಸಂಬಳ ಮೀಸಲಿರಿಸಿದ್ದೇವೆ. ಯಾವ ಉದ್ಯೋಗದಲ್ಲಿ ಇಷ್ಟು ನೆಮ್ಮದಿ ಮತ್ತು ಭರವಸೆ ಇದೆ ಹೇಳಿ?.
            ಪ್ರೇಮಾರಿಗೆ ಮಂಜುನಾಥ, ಸದಾನಂದ ಇಬ್ಬರು ಮಕ್ಕಳು. ಅಮ್ಮನಾಗಿ ಮಕ್ಕಳಿಗೆ ಅಕ್ಷರಗಳನ್ನು ಹೇಳಿಕೊಟ್ಟಿಲ್ಲ ಎನ್ನುವ ಖೇದವಿದೆ. 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು' - ಉರುಹೊಡೆವ ಶಿಕ್ಷಣದ ಸಾಲುಗಳಿವು. ಪ್ರೇಮಾರಿಗೆ ಮಾತ್ರ ಈ ಸಾಲುಗಳು ತಿರುವು-ಮುರುವು. ಅಮ್ಮನಿಗೆ ಅಕ್ಷರ ಗೊತ್ತಿಲ್ಲ ಅಂತ ಮಕ್ಕಳಿಗೂ ಗೊತ್ತು. ಮಕ್ಕಳು ಅಕ್ಷರ ಕಲಿಯುವಾಗ ನಾನೂ ಅವರೊಂದಿಗೆ ಕಲಿತೆ. ಸಹಿ ಮಾಡಲು ಮಕ್ಕಳೇ ಕಲಿಸಿದ್ರು. ನನಗೆ ಮಕ್ಕಳೇ ಗುರು. ಹಾಗೆಂತ ಎಳೆಮನಸ್ಸುಗಳು ಎಂದೂ ನನ್ನನ್ನು ಹಗುರವಾಗಿ ಕಂಡಿಲ್ಲ. ಪ್ರೀತಿಸುತ್ತಾರೆ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು, ಎನ್ನುವಾಗ ಜತೆಗಿದ್ದ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ ಕಣ್ಣೊರೆಸಿಕೊಂಡರು.
             ಸಮಾಜವು ಪ್ರೇಮಾರನ್ನು ಗುರುತಿಸುತ್ತಿದೆ. ಸ್ವಂತ ಕಾಲಬಲ ಮತ್ತು ರಟ್ಟೆಬಲದ ಬದುಕು ಗೌರವ ತಂದುಕೊಟ್ಟಿದೆ. ಇನ್ನೊಬ್ಬರ ಮುಂದೆ ಕೈ ಚಾಚುವಂತಹ ದುಃಸ್ಥಿತಿಯನ್ನು ತಪ್ಪಿಸಿದೆ. ಎಲ್ಲೋ ಕಳೆದುಹೋಗುತ್ತಿದ್ದ ಜೀವನದ ಹಳಿಯು ಖಾನಾವಳಿಯಲ್ಲಿ ಒಟ್ಟು ಸೇರಿದೆ. ಹಲವು ಪದವಿಗಳ ವಿದ್ಯಾಭ್ಯಾಸ ಒಂದೇ ಜೀವನದ ಅಂತಿಮ ಲಕ್ಷ್ಯವಲ್ಲ. ಅನಕ್ಷರಸ್ಥೆಯೂ ಸಮಾಜದಲ್ಲಿ ಗೌರವದಿಂದ ಬಾಳಬಹುದು ಎನ್ನುವ ದೊಡ್ಡ ಸಂದೇಶವನ್ನು ಮೂವತ್ತಮೂರರ ಹರೆಯದ ಪ್ರೇಮಾ ನೀಡಿದ್ದಾರೆ. ಪ್ರೇಮಾರಲ್ಲೀಗ ಅಕ್ಷರಗಳೇ ಮರುಗುತ್ತಿವೆ!
    ಮಾತಿನ ಮಧ್ಯೆ ಒಂದು ಮಾತು ಸೇರಿಸಿದರು, ಸ್ವಂತ ಹೊಲ ತೆಕ್ಕೊಂಡು ಕೃಷಿ ಮಾಡ್ಬೇಕ್ರಿ. ಇದು ಮಣ್ಣಿನ ಸೆಳೆತ.

(ಉದಯವಾಣಿಯ 'ನೆಲದನಾಡಿ' ಅಂಕಣದಲ್ಲಿ ಪ್ರಕಟ)


Wednesday, January 20, 2016

ಕಾನೂನಿನೊಳಗೆ ನಲುಗುತ್ತಿರುವ 'ಕಲ್ಪರಸ'ಕ್ಕೆ ಎಂದು ಶಾಪಮೋಕ್ಷ?

  ಇದು ತೆಂಗು ಅಭಿವೃದ್ಧಿ ಮಂಡಳಿಯ ಜಾಹೀರಾತು - ನೀರಾ ಆರೋಗ್ಯಕ್ಕೆ ಉತ್ತಮ ಪೇಯ ಎಂದು ಅಧಿಕೃತವಾಗಿ ಘೋಷಿಸಿದೆ.

                "ಡೈರಿ ಹಾಲಿಗಿಂತ ತೆಂಗಿನ ಹಾಲಿನಲ್ಲಿ ಸತ್ತ್ವಾಂಶ ಹೆಚ್ಚು. ನಿಯಸಿನ್ ಅಥವಾ ವಿಟಾಮಿನ್3 ಪೋಷಕಾಂಶವಿದೆ. ಡೈರಿದ್ದರಲ್ಲಿರುವುದಕ್ಕಿಂತ ಕಬ್ಬಿಣ ಮತ್ತು ತಾಮ್ರದ ಅಂಶವೂ ತೆಂಗಿನ ಹಾಲಿನಲ್ಲಿ ಹೆಚ್ಚು. ಡೈರಿ ಹಾಲಲ್ಲಿರುವ ಲ್ಯಾಕ್ಟೋಸ್ ಎನ್ನುವ ಸಕ್ಕರೆ ಇದರಲ್ಲಿಲ್ಲ. ಇದನ್ನು ಕರಗಿಸಲು ಕೆಲವರಿಗೆ ಕಷ್ಟವಾಗುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಇರುವವರು ತೆಂಗಿನ ಹಾಲನ್ನು ಬಳಸಬಹುದು," ಎನ್ನುತ್ತದೆ,  ಕೊಚ್ಚಿಯಲ್ಲಿರುವ ಭಾರತೀಯ ತೆಂಗು ಮಂಡಳಿ. ಇತ್ತೀಚೆಗೆ ಸುವಾಸಿತ 'ಕುಡಿಯಲು ಸಿದ್ಧ' ತೆಂಗಿನ ಹಾಲನ್ನು ಮೂರು ಪರಿಮಳಗಳಲ್ಲಿ ಮಂಡಳಿಯು ಉತ್ಪಾದಿಸಿದೆ. ನಿಕಟಭವಿಷ್ಯದಲ್ಲಿ ಕಾಫಿ ಮತ್ತು ಬಾದಾಮ್ ಪರಿಮಳದ ಪಾನೀಯ ಬಿಡುಗಡೆಯಾಗುತ್ತದೆ.
              ದ.ಕ. ಜಿಲ್ಲೆಯ ಬಂಟ್ವಾಳ ಪುಣಚದಲ್ಲಿ 'ತೆಂಗು ಉತ್ಪಾದಕರ ಸಂಘ'ವನ್ನು ಕಾಸರಗೋಡು ಸಿಪಿಸಿಆರ್ಐ ನಿರ್ದೇಶಕ ಡಾ.ಪಿ.ಚೌಡಪ್ಪನವರು ಉದ್ಘಾಟಿಸಿ ಮಾತನಾಡುತ್ತಿದ್ದಾಗ ತೆಂಗು ಮಂಡಳಿಯ ಮಾತು ನೆನಪಾಯಿತು. ಚೌಡಪ್ಪ ಹೇಳುತ್ತಾರೆ, ತೆಂಗಿನ 'ನೀರಾ' ಸೇವನೆಗೆ ಮಾನಸಿಕ ತಡೆಯಿದೆ. ಶೇಂದಿ ಅಂತ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ನೀರಾಕ್ಕೆ 'ಕಲ್ಪರಸ' ಅಂತ ಹೆಸರಿಸಿದ್ದೇವೆ. ಉತ್ತಮ ಪೋಷಕಾಂಶವುಳ್ಳ ಕಲ್ಪರಸವನ್ನು ಮರದಿಂದ ಇಳಿಸಲು ಸರಕಾರದ ಪರವಾನಿಗೆ ಇಲ್ಲ. ಸರಕಾರ ಲೈಸನ್ಸ್  ಕೊಟ್ಟುಬಿಟ್ಟರೆ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ! ಸಂಘವನ್ನು ರೈತ ಸಂಘ- ಹಸಿರುಸೇನೆ, ಮಂಗಳೂರು ತೆಂಗು ಉತ್ಪಾದಕರ ಜಿಲ್ಲ ಫೆಡರೇಶನ್ ಆಯೋಜಿಸಿದ್ದುವು.
             ತೆಂಗಿನಕಾಯಿಗೆ ಖುಷಿ ದರವಿಲ್ಲ. ಮಾರುಕಟ್ಟೆಗೆ ಒಯ್ದ ತೆಂಗನ್ನು ದರವಿಲ್ಲದೆ ಮರಳಿ  ಮನೆಗೆ ತಂದ ಕೃಷಿಕರಿದ್ದಾರೆ. ಜಾಣ್ಮೆಯನ್ನು ಬಳಸಿ ಮೌಲ್ಯವರ್ಧಿತ ಉತ್ಪನ್ನವನ್ನು ಮಾಡಿ ಉತ್ತಮ ದರವನ್ನು ಪಡೆದ ಯಶೋಗಾಥೆಗಳು ದೇಶವಲ್ಲ, ವಿದೇಶದಲ್ಲೂ ಆಸಕ್ತಿ ಹುಟ್ಟಿಸುತ್ತದೆ. ಕನ್ನಾಡಿನಲ್ಲಿ ತೆಂಗಿನ ತಾಜಾ ಎಣ್ಣೆ (ತೆಂತಾ ಎಣ್ಣೆ -  ವರ್ಜಿನಲ್ ಕೊಕನಟ್ ಆಯಿಲ್) ತಯಾರಿಸುವ ಉದ್ದಿಮೆಗಳು ಮನೆ ಮಟ್ಟದಿಂದ ಫ್ಯಾಕ್ಟರಿ ತನಗೆ ಬೆಳೆದಿವೆ. ಫಿಲಿಪ್ಪೈನ್ಸ್ಗೆ ಭೇಟಿ ನೀಡಿದ್ದ ಶಿರಸಿಯ ಕೃಷಿಕ ಬಾಲಚಂದ್ರ ಹೆಗಡೆ ಸಾಯಿಮನೆ ಮಾತಿಗೆ ಸಿಕ್ಕಾಗ ಹೇಳಿದ್ದರು, ನಾವಿಲ್ಲಿ ಶ್ಯಾವಿಗೆ ಮಾಡಿದಷ್ಟೇ ಸುಲಭದಲ್ಲಿ ಅಲ್ಲಿ ಮನೆಮನೆಗಳ ಹಿಂಕೋಣೆಗಳಲ್ಲಿ ಕುಟುಂಬ ಸದಸ್ಯರೇ ತೆಂತಾ ಎಣ್ಣೆ ಹಿಂಡುತ್ತಾರೆ. ಕಳೆದ ಅರ್ಧ ದಶಕದಲ್ಲಿ ಅಲ್ಲಿ ತೆಂತಾ ಘಟಕಗಳ ಸಂಖ್ಯೆ ಆರು ಸಾವಿರ ಮೀರಿದೆ.
              ಫಿಲಿಪೈನ್ಸ್ನಲ್ಲಿ ತೆಂಗಿನ ಮರವೊಂದು ವರುಷಕ್ಕೆ ಹನ್ನೆರಡು ಸಾವಿರ 'ಪಿಸೋ' ಮೌಲ್ಯದ ತೆಂಗಿನ ಸಕ್ಕರೆ ಕೊಡುತ್ತದೆ! (ಒಂದು ಫಿಲಿಪೈನ್ಸ್ ಪಿಸೋ ಅಂದರೆ ಭಾರತದ 1.37 ರೂ.) ಈ ಮರದಿಂದ ಕೊಬ್ಬರಿ ತಯಾರಿಸಿದರೆ ಸಿಗುವುದು ಕೇವಲ ಮುನ್ನೂರ ಇಪ್ಪತ್ತು ಪಿಸೋ. ಅಲ್ಲಿನ ಜೆರ್ರಿ ತಾರೆ ಕುಟುಂಬವು ದೇಶದಲ್ಲೇ ಹೆಚ್ಚು ಸಕ್ಕರೆ ಮತ್ತು ಸಿರಪ್ ತಯಾರಿಸುತ್ತಾರೆ. ಅವರ ಅನುಭವ ನೋಡಿ. ತೆಂಗಿನ ಮರವು ವರುಷಕ್ಕೆ ಸುಮಾರು ನಾಲ್ಕು ನೂರ ಎಂಭತ್ತು ಲೀಟರ್ 'ಕೊಕ್ಕೊ ಸ್ಯಾಪ್' (ನೀರಾ) ಉತ್ಪಾದಿಸುತ್ತದೆ. ಇನ್ನೂ ಅರಳದ ತೆಂಗಿನ ಹೂವಿನಿಂದ ಸಂಗ್ರಹಿಸುವ ದ್ರವವಿದು. ಒಂದು ಕಿಲೋ ಸಕ್ಕರೆ ಆಗಲು ಎಂಟು ಕಿಲೋ ನೀರಾ ಬೇಕು. ನಾಲ್ಕು ನೂರ ಎಂಭತ್ತು ಲೀಟರಿನಲ್ಲಿ ಅರುವತ್ತು ಕಿಲೋ ಸಕ್ಕರೆ.  ಮಾರುಕಟ್ಟೆ ದರ ಕಿಲೋಗೆ ಇನ್ನೂರು ಪಿಸೋ. ಒಂದು ಹೆಕ್ಟಾರಿನಲ್ಲಿ ನೂರ ನಲವತ್ತು ಮರಗಳು. ಕೇವಲ ತೆಂಗಿನಕಾಯಿ, ಎಳನೀರು ಮಾರಾಟದಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಥಿರತೆ ಕಾಣಲು ಕಷ್ಟಸಾಧ್ಯ. ಮೌಲ್ಯವರ್ಧನೆಯಿಂದ ಬೆಲೆಯೂ ವರ್ಧಿಸುತ್ತದೆ ಎನ್ನುವುದಕ್ಕೆ ವಿಶ್ವಾದ್ಯಂತ ಅನೇಕ ಯಶೋಗಾಥೆಗಳಿವೆ.
              ಅರ್ಥಿಕ ತಜ್ಞ ಡಾ. ವಿಘ್ನೇಶ್ವರ ವಮರ್ುಡಿಯವರು ತೆಂಗಿನ ವಿಶ್ವದರ್ಶನವನ್ನು ಮಾಡಿಸುತ್ತಾರೆ : ತೊಂಭತ್ತು ರಾಷ್ಟ್ರಗಳಲ್ಲಿ ತೆಂಗು ಉತ್ಪನ್ನಗಳ ಮಾರಾಟ ಜಾಲವಿದೆ. ಭಾರತದ ಹದಿನೆಂಟು ರಾಜ್ಯಗಳಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಾಗುತ್ತಿವೆ. ಕರ್ನಾಟಕ, ಕೇರಳ, ತಮಿಳುನಾಡು ಮುಂಚೂಣಿಯಲ್ಲಿದೆ. ಎಂಭತ್ತ ನಾಲ್ಕು ರಾಷ್ಟ್ರಗಳಿಗೆ ಉತ್ಪನ್ನಗಳು ರಫ್ತಾಗುತ್ತಿವೆ. ತೆಂಗಿನಪುಡಿ ಸೇರಿಸಿದ ಪಾನ್ 'ಕೊಕೊನಟ್ ಬೀಡಾ'ವು ನಮ್ಮ ದೇಶದ ಪಾನ್ ರುಚಿಪ್ರಿಯರ ಉದರ ಸೇರುತ್ತಿದೆ. ಹುಡುಕಿ ಬರುವ  ಗ್ರಾಹಕರಿದ್ದಾರೆ. ನಗರಗಳಲ್ಲಿ ತೆಂಗಿನ ಸಣ್ಣ ಹೋಳಿಗೆ ಎರಡು ರೂಪಾಯಿ ದರ. ಒಂದು ತೆಂಗಿನಲ್ಲಿ ಇಪ್ಪತ್ತು ಹೋಳು ಎಂದಾದರೂ ಒಂದು ತೆಂಗಿನಕಾಯಿಗೆ ನಲವತ್ತು ರೂಪಾಯಿ! ಇದು ಮೌಲ್ಯವರ್ಧನೆಯ ತಾಕತ್ತು.
                 ಎಳನೀರು ಶಕ್ತಿಶಾಲಿ ಪೇಯ. ಉಳ್ಳವರು ಮಾತ್ರ ಕುಡಿಯುತ್ತಾರೆ ಎನ್ನುವ ಕಾಲಘಟ್ಟವಿತ್ತು. ಕೊಳ್ಳುವ ಸಾಮಥ್ರ್ಯ ಹೆಚ್ಚಾದಂತೆ ಎಳನೀರಿನ ಬಳಕೆ ಹೆಚ್ಚಾಗುತ್ತದೆ. ಹಗಲಿಡೀ ದುಡಿವ ಶ್ರಮಿಕರಿಗೂ ಒಂದೆರಡು ಎಳನೀರು ಕುಡಿದು ದೇಹಾರೋಗ್ಯವನ್ನು ಕಾಪಾಡಿಕೊಳ್ಳುವಷ್ಟು ಅರಿವು ಮೂಡಿದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಅಂಗಡಿಯಲ್ಲಿ ಬೊಂಡವನ್ನು ಮುಂಗಡ ಕಾದಿರಿಸುತ್ತಾರೆ. ಅದರಲ್ಲೂ ಸ್ಥಳೀಯ ಎಳನೀರು ಮಾರುಕಟ್ಟೆಗೆ ಬಂದರೆ ಸಾಕು, ತಕ್ಷಣದಲ್ಲಿ ಖಾಲಿ ಖಾಲಿ!                      
             ಬಾಟ್ಲಿಯಲ್ಲಿ ಸಿಗುವ ಬಣ್ಣ ಬಣ್ಣದ ನೀರಿಗಿಂತ ಆರೋಗ್ಯದಾಯಕ ಎನ್ನುವ ಕಾಳಜಿಯಿದೆ. ಪೊಳ್ಳಾಚಿಯಿಂದ ಮಂಗಳೂರು ಮಾರುಕಟ್ಟೆಗೆ ವಾರಕ್ಕೆ ಎರಡು ಲಾರಿ ಲೋಡು ಗೆಂದಾಳಿ ಎಳನೀರು ಬರುತ್ತದೆ! ಒಂದು ಗೆಂದಾಳಿ ಎಳನೀರಿಗೆ 30-35 ರೂಪಾಯಿ. ಮೀಯಪದವಿನ ಡಾ.ಡಿ.ಸಿ.ಚೌಟರು ತನ್ನ ತೋಟದ ಎಳನೀರನ್ನು ಸ್ಥಳೀಯವಾಗಿ ಮಾರುತ್ತಾರೆ. ಕೊಂಡಾಣದ ಚಂದ್ರಶೇಖರ ಗಟ್ಟಿಯವರು ಮಾರುಕಟ್ಟೆ ಮಾಡಲೆಂದೇ ತೆಂಗಿನ ತೋಟ ಎಬ್ಬಿಸಿದ್ದಾರೆ.
                 ಕೇರಳದ ಮಂಜೇಶ್ವರ ಕಡಂಬಾರಿನಲ್ಲಿ ಎಳನೀರು ಪ್ಯಾಕೇಜಿಂಗ್ ಉದ್ದಿಮೆಯೊಂದು ಒಂದೂವರೆ ವರುಷದಿಂದ ಸದ್ದಾಗುತ್ತಿದೆ. ಯುವಕ ಸಫ್ವಾನ್ ಮೊದಿನ್ ಅವರ ಕನಸು. ಗ್ಲೋಬಲ್ ಅಸೋಸಿಯೇಟ್ಸ್ - ಉದ್ದಿಮೆ ಹೆಸರು. 'ಪುಶ್ ಡ್ರಿಂಕ್ಸ್' ಹೆಸರಿನಲ್ಲಿ ಉತ್ಪನ್ನ ತಯಾರಿಸುತ್ತಿದ್ದಾರೆ. ಕಾಲು ಲೀಟರ್ ಎಳೆನೀರಿನ ಬಾಟಲ್ನಲ್ಲಿ ಸೂಪರ್ ಮಾರ್ಕೆಟಿನಲ್ಲಿ ಲಭ್ಯ. ಈ ಉತ್ಪನ್ನಕ್ಕೆ ಒಂಭತ್ತು ತಿಂಗಳ ತಾಳಿಕೆ. ಎಲ್ಲವೂ ಯಂತ್ರಚಾಲಿತ. ತೆಂಗು ಅಭಿವೃದ್ಧಿ ಮಂಡಳಿಯ ತಂತ್ರಜ್ಞಾನ. ಸ್ಥಳೀಯವಾಗಿ ಸ್ವಲ್ಪ ಪ್ರಮಾಣದಲ್ಲಿ  ಎಳನೀರು ಸಂಗ್ರಹ. ಮಿಕ್ಕಂತೆ ಕೇರಳ, ತಮಿಳುನಾಡಿನಿಂದ ತರಿಸಿಕೊಳ್ಳುತ್ತಾರೆ. ಯುರೋಪು ದೇಶಕ್ಕೆ ರಫ್ತು ಮಾಡುವಷ್ಟು ಸದೃಢವಾಗಿದೆ.
              ಕರಾವಳಿ ಮೂಲಕ ಮುಂಬಯಿಗ ರಘುನಂದನ್ ಕಾಮತ್ ಅಂದರೆ ಫಕ್ಕನೆ ಪರಿಚಯ ಸಿಗದು. ಆದರೆ 'ನ್ಯಾಚುರಲ್ ಐಸ್ಕ್ರೀಂ' ಅನ್ನಿ. ಎಲ್ಲರಿಗೂ ಗೊತ್ತು. ಐಸ್ಕ್ರೀಮಿಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಲಸಿನ ಹಣ್ಣನ್ನು ಒಯ್ದ ಸಾಹಸಿ. ಎಳನೀರಿನಲ್ಲಿರುವ ಗಂಜಿ(ಬಾವೆ)ಯನ್ನು ತೆಗೆದು ಐಸ್ಕ್ರೀಮಿನಲ್ಲಿ ಬಳಸುವ ಉದ್ದಿಮೆ ಕ್ಲಿಕ್ ಆಗಿದೆ. ಇದಕ್ಕಾಗಿ ಹಿಂದಿನ ವರುಷ ತುಂಡರಿಸಿದ ಎಳನೀರಿನ ಸಂಖ್ಯೆ ಆರು ಲಕ್ಷ! ಕೃಷಿ ಲೇಖಕ ಪಡಾರು ಒಂದು ಅಂಕೆಸಂಖ್ಯೆಯನ್ನು ಹೇಳುತ್ತಾರೆ, ದೇಶಾದ್ಯಂತ ದಿನಕ್ಕೆ ಸುಮಾರು ಹದಿನೈದು ಸಾವಿರ ಲೀಟರ್ ನೇಚುರಲ್ ಐಸ್ಕ್ರೀಮನ್ನು ಕಾಮತರು ತಮ್ಮ ಔಟ್ಲೆಟ್ ಮೂಲಕ ಗ್ರಾಹಕರಿಗೆ ತಿನ್ನಿಸುತ್ತಾರೆ. ಅದರಲ್ಲಿ ಸೀತಾಫಲಕ್ಕೆ ಮೊದಲ ಮಣೆ. ನಂತರದ ಸ್ಥಾನ ಎಳನೀರಿನದು.
              ಸಿಪಿಸಿಆರ್ಐ ಯೋಚನೆಯ 'ಕಲ್ಪರಸ'ವನ್ನು ಪ್ರಸಿದ್ಧೀಕರಿಸಲು ಕೃಷಿಕರು ಆಸಕ್ತರಾಗಿದ್ದಾರೆ. ಕರ್ನಾಟಕದಲ್ಲಿ ಕಾನೂನು ತೊಡಕಿದೆ. ಎಲ್ಲರೂ ನೀರಾ ಇಳಿಸುವಂತಿಲ್ಲ. ನಮ್ಮ ತೋಟದ ತೆಂಗಿನ ಮರದಿಂದ ಕಲ್ಪರಸವನ್ನು ಇಳಿಸಲು ನಾವು ಸರಕಾರದ ಮುಂದೆ ನಿಲ್ಲಬೇಕಾ? ನಮಗೆ ಹಕ್ಕಿಲ್ವಾ? ವಿಧಾನಸೌಧದ ಅಧಿಕಾರಿಗಳು ಪರ್ಮಿಶನ್ ಕೊಡ್ತೇವೆ ಅಂತ ಹೇಳಿ ವರುಷಗಳೇ ಸಂದಿವೆ. ಬಜೆಟಿನಲ್ಲೂ ಪ್ರಸ್ತಾವವಾಗಿದೆ. ಹಾಗಾಗಿ ಕಲ್ಪರಸ ಉದ್ದಿಮೆಯನ್ನು ಸ್ಥಾಪಿಸುವ ನನ್ನ ನಿರ್ಧಾರವನ್ನು ಬದಲಿದೆ, ಎಂದು ವಿಷಾದಿಸುತ್ತಾರೆ, ಕೃಷಿಕ ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್.
             ರಾಜೇಶ್ ವಿಷಾದದಲ್ಲೂ ಅರ್ಥವಿದೆ. ನಮ್ಮ ಕಾನೂನುಗಳೇ ನಮಗೆ ತೊಡಕು. ಕೃಷಿ, ಕೃಷಿಕ, ಮಾರುಕಟ್ಟೆಯು ಹಳಿಯಲ್ಲಿ ಸಂಚರಿಸದೆ ಕಂಪಿಸುತ್ತಿದೆ. ಪರ್ಯಾಯ ಬದುಕನ್ನು ರೂಪಿಸಲು ಸಂಪನ್ಮೂಲಗಳಿವೆ. ಇದನ್ನು ಕ್ರೋಢೀಕರಿಸುವ ಮನಸ್ಸುಗಳಿವೆ. ಕಾನೂನಿನ ತೊಡಕು, ಸರಕಾರದ ನೀತಿ, ಅಧಿಕಾರಿಗಳ ಕರಾಮತ್ತು.. ಹೀಗೆ ವಿವಿಧ ವ್ಯವಸ್ಥೆಗಳು ಕೃಷಿಕರ ಮನಸ್ಸನ್ನು ಮುದುಡಿಸುತ್ತಿವೆ. ಕಲ್ಪರಸಕ್ಕೆ ಉತ್ತಮ ಅವಕಾಶಗಳಿದ್ದು, ಜನ ಸ್ವೀಕೃತಿಯೂ ಉತ್ತಮವಾಗಿದೆ. ಹಾಗಾಗಿ ಕಲ್ಪರಸ ಅಥವಾ ನೀರಾ ಇಳಿಸಲು ಪರವಾನಿಗೆ ನೀಡಿದರೆ ಮೌಲ್ಯವರ್ಧಿತ ಉತ್ಪನ್ನವೊಂದು ತೆಂಗು ಕೃಷಿಕರ ಬಾಳಿನಲ್ಲಿ ಮುಗುಳ್ನಗೆ ಮೂಡಿಸಬಹುದು.


Tuesday, January 19, 2016

ಸಂತೆಯಲ್ಲಿ ಚಿಗುರುವ ಸ್ವಾವಲಂಬಿಯ ಸ್ವಾಭಿಮಾನ

               ವಾರದ ಸಂತೆಯಲ್ಲೊಮ್ಮೆ ಕಣ್ಣೋಡಿಸಿ. ಗ್ರಾಹಕರನ್ನು ಆಕರ್ಶಿಸಲು ಗುಲ್ಲೆಬ್ಬಿಸುತ್ತಾ ವ್ಯವಹಾರ ಕುದುರಿಸುವ ವ್ಯಾಪಾರಿಗಳ ಜಾಣ್ಮೆ ಹತ್ತಿರದಿಂದ ನೋಡಬೇಕು. ಇವರ ಮಧ್ಯೆ ಗುಲ್ಲಿಗೆ ಕಿವುಡಾಗಿ, ಮಾತನ್ನು ಮೌನವಾಗಿಸಿ ಗ್ರಾಹಕರನ್ನು ಸೆಳೆಯುವ ಅಮ್ಮಂದಿರು. ಇವರದು ಏಕಾಂಗಿ ವ್ಯಾಪಾರ. ತಾವೇ ಬೆಳೆದ ಬೆಳೆಯನ್ನು ಮಾರುವ ಖುಷಿ. ನೂರು, ಸಾವಿರ ರೂಪಾಯಿ ಕೈಗೆ ಬಂದರೆ ಕೋಟಿ ಸಿಕ್ಕಿದ ಆನಂದ. ಸಂತೆಯಲ್ಲಿ ಇವರದು ಕಾಲಮಿತಿ ವ್ಯವಹಾರ. ವಸ್ತುವಿನ ತಾಜಾತನವನ್ನು ಇಚ್ಚಿಸುವ, ಗುಣಮಟ್ಟವನ್ನು ಬಯಸುವ ಗ್ರಾಹಕರು. ಇವರ ಅಸ್ತಿತ್ವ ಸಂತೆಯಲ್ಲಿ ದಾಖಲಾಗುವುದಿಲ್ಲ.
               ವೀಳ್ಯದೆಲೆ, ತರಕಾರಿ, ಹೂ, ಸೊಪ್ಪು, ಹಣ್ಣುಗಳನ್ನು ಬೆಳೆದು ಸ್ವತಃ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದ್ದರಿಂದ ನಷ್ಟವಾಗುವ ಪ್ರಮಾಣ ಕಡಿಮೆ. ಹಾಗೆಂತ ಸಂತೆಯಲ್ಲಿ ಕಿರುಕುಳ ತಪ್ಪಿದ್ದಲ್ಲ! ದೊಡ್ಡ ತಿಮಿಂಗಿಲಗಳು ಸಣ್ಣವನ್ನು ನುಂಗಿದ ಹಾಗೆ! ದೊಡ್ಡ ವ್ಯಾಪಾರಿಗಳ ಕಂಠತ್ರಾಣದ ಮಧ್ಯೆ ಕ್ಷೀಣ ಧ್ವನಿ ಎಬ್ಬಿಸುವ ಇವರದು ಮೂಕ ರೋದನ. ವ್ಯಾಪಾರ ಮಾಡುವ ಜಾಗದ ತಕರಾರಿನಿಂದ ತೊಡಗಿ ದರ ನಿಗದಿ ತನಕ ಲಾಬಿಗೆ ಮಣಿಯಬೇಕಾದ ಸಂದಿಗ್ಧತೆಗಳೂ ಬರುವುದುಂಟು.
               ಮೈಸೂರು ಸಮೀಪದ ಹಳ್ಳಿ ಸಂತೆಗೊಮ್ಮೆ ಬಂಧುವೊಬ್ಬರೊಂದಿಗೆ ಹೋಗಿದ್ದೆ.  ನಸುಕು ಏರುವ ಮೊದಲೇ ಬರೋಬ್ಬರಿ ವ್ಯವಹಾರ. ಹಸಿರು ತರಕಾರಿಗಳ ಮೇಲಾಟ. ಒಂದೆಡೆ ಸುಮಾರು ಅರುವತ್ತೈದು ಎಪ್ಪತ್ತು ಮೀರಿದ ವಯೋವೃದ್ಧೆಯೋರ್ವರು  ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನಿಟ್ಟು ಕುಳಿತಿದ್ದರು. ಕೊತ್ತಂಬರಿ ಸೊಪ್ಪಿನಲ್ಲಿ ಎಷ್ಟು ಲಾಭವಾದೀತೆಂದು ಊಹಿಸಿ. ಒಂದು ಕಟ್ಟಿಗೆ ಹತ್ತು ರೂಪಾಯಿ. ತಾಜಾ ಸೊಪ್ಪಲ್ವಾ, ಸಹಜವಾಗಿ ಗಿರಾಕಿಗಳು ಆಕರ್ಶಿತರಾಗಿದ್ದಾರೆ. ಅವರ ಮುಗ್ಧತೆಗೆ ಮಾರುಹೋಗಿ ಮಾತನಾಡಿಸಿದೆ. ಲಾಭದ ಪ್ರಶ್ನೆಯಲ್ಲ. ಕೈಖರ್ಚಿಗೆ ಹಣ ಬೇಕಲ್ಲ ಮಗಾ. ಇನ್ನೊಬ್ಬರಲ್ಲಿ ಬೇಡ್ಬಾರ್ದು ಎನ್ನುತ್ತಾ ಹಣದ ಎಣಿಗೆಯಲ್ಲಿ ಮಗ್ನರಾದರು.
             ಅವರ ಸ್ವಾಭಿಮಾನದ ಮಾತು ಆಗಾಗ್ಗೆ ಕಾಡುತ್ತದೆ. ಮಗ, ಸೊಸೆ, ಅಳಿಯ, ಮೊಮ್ಮಗಳಂದಿರ ಸಂಸಾರ. ವ್ಯಾಪಾರ ಮಾಡಬೇಕೆಂದೇನೂ ಇಲ್ಲ. ಕೈಖರ್ಚಿಗೆ ಎಷ್ಟು ಬೇಕಾಗಬಹುದು. ನೂರೋ, ಇನ್ನೂರೋ ಅಷ್ಟೇ. ತನಗೆ ಬೇಕಾದಷ್ಟು ಹಣವನ್ನು ತಾನೇ ಗಳಿಸುವ ಮನೋನಿರ್ಧಾರದ ಮುಂದೆ ನಿಜಕ್ಕೂ ಕುಬ್ಜನಾದೆ. ವ್ಯಾಪಾರ ಮುಗ್ದು ಹೋಯಿತು. ’ನಾನು ಬರ್ತೇನೆ’  ಎನ್ನುತ್ತಾ ಹೊರಟರು. ಅರಳಿದ ಮುಖದ ಮರೆಯಲ್ಲಿ ಸ್ವಾವಲಂಬಿ ಬದುಕಿನ ಸಂದೇಶ ಇಣುಕುತ್ತಿತ್ತು.
              ಇಂತಹ ಅಮ್ಮಂದಿರಿಗೆ ಬದುಕನ್ನು ಕಟ್ಟಿಕೊಳ್ಳುವ ಛಾತಿಯಿದೆ, ಸಂಪನ್ಮೂಲವಿದೆ, ಅವಕಾಶವಿದೆ.  ಎಲ್ಲಕ್ಕಿಂತಲೂ ಮುಖ್ಯವಾಗಿ  ಬೆಳೆದ ವಸ್ತುಗಳನ್ನು ಮಾರುವ ಮನೋದೃಢತೆಯಿದೆ. ಇವರಿಗೆ ಸಬ್ಸಿಡಿ ಗೊತ್ತಿಲ್ಲ, ಬೇಕಾಗಿಲ್ಲ. ಸರಕಾರದ ಸಹಾಯಧನ, ಸಹಕಾರಗಳ ಫೈಲುಗಳು ಇವರಲ್ಲಿಗೆ ನುಗ್ಗುವುದಿಲ್ಲ. ತಮ್ಮ ಪಾಡಿಗೆ ತಾವಿದ್ದುಕೊಳ್ಳುವ ಅಪ್ಪಟ ಮುಗ್ಧತೆಗಳೇ ಹಳ್ಳಿಯ ಜೀವಾಳ. ಕನ್ನಾಡಿನ ಸಂತೆಗಳು ಅಪ್ಪಟ ಹಸಿರು ಮನಸ್ಸುಗಳನ್ನು ಸೃಷ್ಟಿಸುತ್ತವೆ. ಅದು ಹಳ್ಳಿಯ ತಾಕತ್ತು.
ಮೈಸೂರಿನ ಸಂತೆಯಲ್ಲಿ ನೋಡಿದ ಸ್ವಾವಲಂಬಿ ಬದುಕಿನ ಗಾಥೆಯು ಕಾಲ ಬಯಸುವ, ಬೇಡುವ ಸೆಳಕು. ಬದುಕನ್ನು ಎತ್ತರಿಸುವ ಸೆಳಕುಗಳ ಬಳುಕಿಗೆ ಬೆಳಕು ಹಾಕುವ ವ್ಯವಸ್ಥೆಗಳು ವಿರಳ. ಯಾಕೆಂದರೆ ಆ ಯಶವು ಸದ್ದು ಮಾಡುವುದಿಲ್ಲ, ಸದ್ದಾಗುವುದಿಲ್ಲ. ಸರಿ, ಹರಿಹರಕ್ಕೆ ಭೇಟಿ ನೀಡಿದ್ದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಮಾಲಿನಿ ಹೆಗ್ಡೆಯವರೊಂದಿಗೆ ಸ್ವಾವಲಂಬಿ  ಮನಸ್ಸುಗಳ ಅನುಭವಗಳನ್ನು ಮೆಲುಕು ಹಾಕುತ್ತಿದ್ದೆ. ಕೆಂಚನಹಳ್ಳಿಯ ಕೆಂಚಮ್ಮ ಅವರ ಬದುಕಿಗೆ ಹೆಗ್ಡೆಯವರು ಕನ್ನಡಿಯಾದರು.
              ಹದಿನಾರು ಗುಂಟೆ ಮನೆಗೆ ಹೊಂದಿಕೊಂಡಿರುವ ಜಾಗ ಮತ್ತು ಒಂದೆಕ್ರೆ ಗದ್ದೆ. ಗಂಡ ಹನುಮಂತಪ್ಪ. ಇಬ್ಬರು ಮಕ್ಕಳು. ನೂರಾರು ಕೂಲಿ ಕಾರ್ಮಿಕರಿಗೆ ಹನುಮಂತಪ್ಪ ಯಜಮಾನರಾಗಿದ್ದರು. ತಮಗೆಷ್ಟು ಮಂದಿ ಬೇಕು ಎಂದರೆ ಸಾಕು, ಶ್ರಮಿಕರನ್ನು ಒದಗಿಸುವ ವ್ಯವಸ್ಥೆ. ಅದಕ್ಕೊಂದಿಷ್ಟು ಪಗಾರ. ಕಾರ್ಮಿಕ ಅಭಾವ ತಲೆದೋರಿದಾಗ ಈ ವೃತ್ತಿಗೆ ವಿದಾಯ. ಕೂಲಿ ಮಾಡುವುದು ಅವಮಾನ! ಮಡದಿ ಕೆಂಚಮ್ಮ ಗಂಡನ ಆಸರೆಗೆ ನಿಂತರು. ಅನ್ಯಾನ್ಯ ಕಾರಣಗಳಿಂದಾಗಿ ಭತ್ತದ ಬೇಸಾಯ ಕೈಕೊಡುತ್ತಿತ್ತು. ಗದ್ದೆಯನ್ನು ಗುತ್ತಿಗೆಗೆ ನೀಡಿದ್ದರು.
                ಹದಿನಾರು ಗುಂಟೆಯಲ್ಲಿ ಹೊಸ ಕೃಷಿಗೆ ಶ್ರೀಕಾರ. ಆ ಭಾಗಕ್ಕೆ ಹೂವಿನ ಕೃಷಿ ಅಪರೂಪ. ಗ್ರಾಮಾಭಿವೃದ್ಧಿ ಯೋಜನೆಯಿಂದ ತರಬೇತಿ. ಹೂ ಕೃಷಿ ಮಾಡುವವರಲ್ಲಿಗೆ ಅನುಭವಕ್ಕಾಗಿ ಪ್ರವಾಸ. ಕೆಂಚಮ್ಮರಿಗೆ ವಿಶ್ವಾಸವೃದ್ಧಿ. ಗುಲಾಬಿ ಹೂಗಳ ಮೂರು ತಳಿಗಳನ್ನು ಆಯ್ಕೆ ಮಾಡಿ ನೂರು ಗಿಡಗಳನ್ನು ನೆಟ್ಟು ಆರೈಕೆ ಮಾಡಿದರು. ಆರೇ ತಿಂಗಳಲ್ಲಿ ಒಂದೊಂದು ಹೂ ಹಣವನ್ನು ಕೊಟ್ಟಿತು! ಸ್ಥಳೀಯ ಹರಿಹರದಲ್ಲಿ ಹೂವಿನ ಮಾರುಕಟ್ಟೆ. ಏನಿಲ್ಲವೆಂದರೂ ದಿವಸಕ್ಕೆ ಐನೂರು ರೂಪಾಯಿ ರೊಕ್ಕ ಕೈಯೊಳಗೆ ಬರುತ್ತದೆ.
                ಹನುಮಂತಪ್ಪನವರು ಧಾರವಾಡಕ್ಕೆ ಹೋಗಿದ್ದಾಗ ಕಾಲು ಕಿಲೋ ನುಗ್ಗೆ ಬೀಜ ತಂದಿದ್ದರು. ಆಸಕ್ತರಿಗೆ ಹಂಚಿದ್ದರು. ಈಗವರಲ್ಲಿ ನಲವತ್ತು ನುಗ್ಗೆ ಮರಗಳಿವೆ. ಒಂದೊಂದು ಕಾಯಿಯೂ ಏಟಿಯಂ. ವಾರಕ್ಕೊಮ್ಮೆ ಇನ್ನೂರು ಕಾಯಿ ಮಾರುತ್ತಾರೆ. ಐನೂರರಿಂದ ಆರು ನೂರು ರೂಪಾಯಿ ಸಂಪಾದನೆ. ಅದೂ ತಾನು ಬಳಸಿ, ಬೀಗರಿಗೆ ಕೊಟ್ಟು, ಆಪ್ತೇಷ್ಟರಿಗೆ ಹಂಚಿ ಮಿಕ್ಕಿದ್ದು. ’ಇದು ಹಿಂಡುವ ಎಮ್ಮೆ. ದಿನಾ ಕರಿತಾ ಬೇಕ”, ಎಂದರು.
              ಋತುಮಾನಕ್ಕನುಗುಣವಾಗಿ ತರಕಾರಿ ಬೆಳೆಯುತ್ತಾರೆ. ಅದರಲ್ಲೂ ವಾರಕ್ಕೆ ಎಂಟುನೂರು ರೂಪಾಯಿಯಿಂದ ಒಂದು ಸಾವಿರ ಗಳಿಕೆ. ಆರು ಗುಂಟೆ ಜಾಗದಲ್ಲಿ ಎಂಟು ತಿಂಗಳಲ್ಲಿ ತರಕಾರಿಯಿಂದಲೇ ಮೂವತ್ತೆರಡು ಸಾವಿರ ತೆಗ್ದೆ, ಖುಷಿ ಹಂಚಿಕೊಂಡರು. ಒಂದು ಆಕಳಿದೆ. ಹಾಲು ಮಾರಾಟದಿಂದ ತಿಂಗಳಿಗೆ ಐದು ಸಾವಿರ ರೂಪಾಯಿ ಖಚಿತ. ಎರೆತೊಟ್ಟಿ ಮಾಡಿಕೊಂಡಿದ್ದಾರೆ. ಯೋಜನಾಬದ್ಧವಾಗಿ ಕೃಷಿ ಮಾಡುವ ಜಾಣ್ಮೆಯನ್ನು ಗ್ರಾಮಾಭಿವೃದ್ದಿ ಯೋಜನೆ ಕಲಿಸಿಕೊಟ್ಟಿದೆ.
ತರಕಾರಿ, ಹೂಗಳನ್ನು ಕೆಂಚಮ್ಮ ವಾರದ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಆರಂಭದಲ್ಲಿ ಹಗುರವಾಗಿ ಮಾತನಾಡುತ್ತಿದ್ದರಂತೆ. ಗೇಲಿ ಮಾಡುತ್ತಿದ್ದರಂತೆ. ಬದುಕಿನ ಬಂಡಿ ಏರಿದ ಮೇಲೆ ಇಂತಹ ಮಾತುಗಳನ್ನು ಕೆಂಚಮ್ಮ ಕೇಳಿಸಿಕೊಂಡಿಲ್ಲ. ಬೆಳ್ಳಂಬೆಳಿಗ್ಗೆ ಸಂತೆಗೆ ಹೋದರೆ ಹನ್ನೆರಡು ಗಂಟೆಯೊಳಗೆ ಐಟಂ ಖಾಲಿ. ನುಗ್ಗೆ ಕೋಡಿಗೆ ಬೇಡಿಕೆ. ಹಬ್ಬದ ಸಮಯದಲ್ಲಿ ಹೂವಿಗೆ ಏರುದರ. ಚಿಕ್ಕ ಚಿಕ್ಕ ಆದಾಯಗಳು ಕೆಂಚಮ್ಮರ ಬದುಕಿನಲ್ಲಿ ನಗು ಮೂಡಿಸಿದೆ. ಚಿಕ್ಕ ಕೃಷಿಯಿಂದ ಶ್ರೀಮಂತಿಕೆ ಬಂದಿಲ್ಲ. "ನಮ್ಮ ಜಾಗ, ನಮ್ಮ ದುಡಿಮೆ. ಇದು ರಾಜ ಬದುಕಲ್ವಾ", ಎಂದರು. ಕೆಂಚಮ್ಮರ ಮಾತು ಮುಗಿಯುವಷ್ಟರಲ್ಲಿ ಅನೇಕ ಶ್ರೀಮಂತ ಶುಷ್ಕ ಮನಸ್ಸುಗಳು ಮನದಲ್ಲಿ ಹಾದು ಹೋಗಿ ಮುದುಡಿದುವು!
             ಇವರ ಬದುಕಿನಲ್ಲಿ ಏನೂ ಸಂದೇಶ ಕಾಣದೇ ಇರಬಹುದು. ಸ್ವಾವಲಂಬಿಯಾಗಿ ಹಂಗಿಲ್ಲದೆ ಬದುಕಬೇಕೆಂಬ ಬದ್ಧತೆಯಿದೆಯಲ್ಲಾ, ಅದು ಜೀವನೋತ್ಸಾಹ. ಕೆಂಚಮ್ಮ ದಂಪತಿಗಳ ದುಡಿಮೆಗಳು ಆ ಊರಿನಲ್ಲಿ ಮಾತಿಗೆ ವಿಷಯ. ಇಂತಹ ಬದ್ಧತೆಯ ಬದುಕಿನ, ತಮ್ಮ ಕಾಲ ಮೇಲೆ ನಿಲ್ಲಬೇಕೆಂಬ ಛಾತಿಯ ಸಾವಿರಾರು ಕುಟುಂಬಗಳ ಯಶೋಗಾಥೆಗಳು ಕನ್ನಾಡಿನ ಆತ್ಮಹತ್ಯೆಗೆ ಉತ್ತರವಾಗಲಾರದೇ?  ಸಮಸ್ಯೆಗಳನ್ನು ವೈಭವೀಕರಿಸದೆ ಜಾಣ್ಮೆಯಿಂದ ಎದುರಿಸಿ ನಗುತ್ತಿರುವ ಜೀವನ ಪದ್ಧತಿಗಳು ಒತ್ತಡದ ಬದುಕಿಗೆ ಉತ್ತರವಾಗಲಾರದೇ? ಸರಕಾರದ ಮುಂದೆ ಕೈಚಾಚದೆ, ಸಹಾಯಧನಗಳ ಹಿಂದೆ ಓಡದೆ, ಸಬ್ಸಿಡಿಗಳಿಗೆ ಅಲೆದಾಡದ ಈ ಬದುಕಿನಲ್ಲಿ ನೆಮ್ಮದಿ ಕಾಣುವುದಿಲ್ಲವೇ?
               ಒಂದೆಡೆ ನಿದ್ದೆಗೆಡಿಸುವ ಕೋಟಿಗಳ ಲೆಕ್ಕಗಳು ಹುಟ್ಟುಹಾಕುವ ರಾದ್ದಾಂತಗಳಿಗೆ ಎಣೆಯಿಲ್ಲ. ಮತ್ತೊಂದೆಡೆ ಮರ್ಯಾದೆಯ ಬದುಕಿಗಾಗಿ ಪಡುವ ಒದ್ದಾಟ. ಒಂದು ರೂಪಾಯಿ ಗಳಿಸಲು ಪರದಾಟ. ಹಳ್ಳಿಯ ಇಂತಹ ಚಿತ್ರಗಳು ಆಡಳಿತ ವ್ಯವಸ್ಥೆಗಳ ಕಡತದೊಳಗೆ ಕ್ಲಿಕ್ ಆಗವುದಿಲ್ಲ. ಒಂದು ವೇಳೆ ಹಳ್ಳಿಗಳ ಉದ್ಧಾರಕ್ಕಾಗಿ ಆರ್ಥಿಕ ಸಹಕಾರಗಳು ಹರಿದು ಬಂತೆನ್ನಿ. ಅಬ್ಬಾ.. ಅದನ್ನು ಮಧ್ಯದಲ್ಲೇ ಹರಿದು ಮುಕ್ಕುವ ಭ್ರಷ್ಟ ಕೈಗಳಿಗೆ ಭದ್ರ ಕಣ್ಗಾವಲು ಇದೆ! ಈ ಮಧ್ಯೆ ಯೋಜನೆಗಳಿಗೆ ಸಹಿ ಬೀಳುತ್ತಾ ಇರುತ್ತವೆ. ಕಾಗದಗಳಲ್ಲಿ ಹಳ್ಳಿಗಳು ಉದ್ಧಾರವಾಗುತ್ತಾ ಇರುತ್ತವೆ! ಶ್ರಮಜೀವಿಗಳ ದುಡಿತಕ್ಕೆ ವಿಶ್ರಾಂತಿಯೇ ಇರುವುದಿಲ್ಲ. ಕೆಂಚಮ್ಮನಂತಹ ಬದ್ಧತೆಯ ಸ್ವಾವಲಂಬಿ ಬದುಕು ನಿಜಾರ್ಥದಲ್ಲಿ ಗ್ರಾಮೀಣ ಭಾರತದ  ಉಸಿರು.



Monday, January 18, 2016

ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ

             ಮಕ್ಕಳಿಗೆ ಪರಿಸರ ಪಾಠ ಹೇಳುವುದು ಬಹಳ ಇಷ್ಟದ ಕೆಲಸ, ಆದರೆ ಇದನ್ನು ಕೆಮರಾ ಮುಂದೆ ಹೇಳುವುದಕ್ಕೆ ಬೇಸರ. ಮತ್ತೆ ಮತ್ತೆ ಶರ್ಟ್ ಬದಲಿಸುತ್ತಾ ಚಿತ್ರೀಕರಣಕ್ಕೆ ನಿಲ್ಲುವುದು ಬಹಳ ಬೇಜಾರು ತಂದಿತ್ತು. ಮರದ ಕತೆ ಹೇಳುತ್ತಾ ಸಸ್ಯ ವಿಸ್ಮಯ ವಿವರಿಸುತ್ತಾ 4 -5 ದಿನ ಕಳೆಯಿತು. ಒಂದು 15 ನಿಮಿಷದ ಸಾಕ್ಷ್ಯ ಚಿತ್ರಕ್ಕೆ ಸಮಯ ಜಾಸ್ತಿಯಾಯ್ತು, ಮನಸ್ಸು ಕೃಷಿ ಪ್ರವಾಸದ ಕಾಯಕ ನೆನಪಿಸಿ ಕೆಮರಾದಿಂದ ದೂರ ಓಡಲು ಹಂಬಲಿಸುತ್ತಿತ್ತು.
              'ಸರ್, ಈಗ ನಿಮಗೆ ಬೇಜಾರಾಗುತ್ತೆ , ನಂತ ನಿಮಗೆ ಖುಷಿಯಾಗುತ್ತೆ ' ಎಂದರು ಚಿತ್ರ ನಿರ್ಮಾಪಕರಾದ ಮೈಸೂರು ವಿಶ್ವವಿದ್ಯಾಲಯದ EMRC(Educational Multimedia Research Centre University of Mysore). ಗೋಪಿನಾಥ್.
               ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ನಡೆಯುವ ದೇಸಿ ಜ್ಞಾನದ ಪರಿಸರ ಶಿಕ್ಷಣ ಪ್ರಯೋಗದ ಕುರಿತು ಮೈಸೂರು ವಿವಿಯ ಎಮ್ ಆರ್ ಸಿ 'Kaanmane-Nurturing Nature' ಕಿರು ಚಿತ್ರ ನಿರ್ಮಿಸಿತ್ತು. ಇದು ಇಂದು ಆರನೇ ರಾಷ್ಟ್ರೀಯ ವಿಜ್ಞಾನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದೇಶದ ವಿವಿಧ ಭಾಗಗಳಿಂದ ಬಂದ 144 ಚಿತ್ರಗಳಲ್ಲಿ 12 ಚಿತ್ರಗಳನ್ನು ಪ್ರದರ್ಶನ,ಸ್ಪರ್ಧೆಗೆ ಆಯ್ಕೆಮಾಡಲಾಗಿದೆ. ಇದರಲ್ಲಿ ಕಾನ್ಮನೆ ಚಿತ್ರವೂ ಒಂದಾಗಿದೆ. ಬರುವ ಫೆಬ್ರುವರಿ 9-12 ರವರೆಗೆ ಮುಂಬೈದಲ್ಲಿ ನಡೆಯಲಿರುವ ವಿಜ್ಞಾನ ಚಿತ್ರೋತ್ಸವದಲ್ಲಿ ಇದು ಪ್ರದರ್ಶನಗೊಳ್ಳಲಿದೆ.
            ಖ್ಯಾತ ಬರಹಗಾರ ಮಿತ್ರ , EMRC ನಿರ್ದೇಶಕ ಡಾ.ನಿರಂಜನ ವಾನಳ್ಳಿ ಇದನ್ನು ನಿರ್ದೇಶಿಸಿದ್ದಾರೆ.ರಾಷ್ಟ್ರೀಯ ವಿಜ್ಞಾನ ಚಲನ ಚಿತ್ರೋತ್ಸವಕ್ಕೆ ಕಾನ್ಮನೆ ಸಾಕ್ಷ್ಯ ಚಿತ್ರ ಅಯ್ಕೆಯಾಗಿರುವದು ನನಗಂತೂ ಸಂತಸ ತಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಣ್ಯವಾಸಿಗಳ ನೆಲಮೂಲ ಜ್ಞಾನವನ್ನು ಪರಿಸರ ಶಿಕ್ಷಣಕ್ಕೆ ಬಳಸುವ ಪ್ರಯತ್ನಕ್ಕೆ ಸಿಕ್ಕದೊಡ್ಡ ಪ್ರೋತ್ಸಾಹ ಇದಾಗಿದೆ.