Wednesday, January 27, 2016

ಅಕ್ಷರಗಳ ಹಂಗಿಲ್ಲದ 'ಪ್ರೇಮಾಯಣ'

                ಕೃಷಿ ಕುಟುಂಬದ ಪ್ರೇಮ ಓದಿದ್ದು ಮೂರನೇ ತರಗತಿ. ಅಮ್ಮನೊಂದಿಗೆ ಹೊಲದ ಕೆಲಸಗಳಿಗೆ ಮೊದಲಾದ್ಯತೆ. ಸಮಯ ಸಿಕ್ಕರೆ ಮಾತ್ರ ಶಾಲೆಯ ಸಹವಾಸ. ತಲೆಗಿದ್ದರೆ ಕಾಲಿಗಿಲ್ಲ. ತುತ್ತಿಗೂ ಎಡಬಲ ನೋಡುವ ಅಸಬಲತೆ. ಕಾಯಿಪಲ್ಲೆ ಬೆಳೆದು ಮಾರಿ ಸಿಕ್ಕಿದ ಕಾಸಿನಿಂದ ಕುಟುಂಬದ ಸದಸ್ಯರ ಹೊಟ್ಟೆ ತಂಪಾಗುತ್ತಿತ್ತು. ಒಂದು ಕಾಲಘಟ್ಟದಲ್ಲಿ ಹೊಲವೂ ಕೈಬಿಟ್ಟಿತು. ಬದುಕು ಮೂರಾಬಟ್ಟೆಯಾಯಿತು.
              ಸ್ವಂತ ನೆಲೆಯಿಲ್ಲ. ಕೂಡಿಟ್ಟ ಸಂಪತ್ತಿಲ್ಲ. ನೆರೆಹೊರೆಯು ನಿಜಾರ್ಥದಲ್ಲಿ 'ಹೊರೆ'ಯಾಯಿತು. ಬಂಧುಗಳ ಸಂಪರ್ಕದ ಅಂತರ ಹಿರಿದಾಯಿತು. ಹುಟ್ಟೂರು ಶಿರಗುಪ್ಪಿ ನಾಗರಹಳ್ಳಿಗೆ ವಿದಾಯ. ಹೊಟ್ಟೆಪಾಡಿಗಾಗಿ ಹುಬ್ಬಳ್ಳಿಗೆ ವಲಸೆ. ಅಲ್ಲೋ ಇಲ್ಲೋ ದುಡಿತ. ಭವಿಷ್ಯದ ನಿರೀಕ್ಷೆಗಳಿಲ್ಲ. ಅಂದಂದಿನದೇ ಚಿಂತೆ. ಹೊಟ್ಟೆಪಾಡಿಗಾಗಿ ಪ್ರೇಮ ಅವಿರತವಾಗಿ ಗಡಿಯಾರ ನೋಡದೆ ದುಡಿದರು. ಏಳು ವರುಷ ಗೃಹಸ್ಥರೊಬ್ಬರ ಮನೆಯಲ್ಲಿ ಮನೆವಾರ್ತೆಯ ಕಾಯಕ. ದುಡಿಯುತ್ತಾ ಎಲ್ಲಾ ಕೆಲಸಗಳನ್ನು ಕಲಿತರು. ಗುಡಿಸುವಲ್ಲಿಂದ ಅಡುಗೆ ಮಾಡುವ ತನಕ.
               ನನಗೆ ಅಮ್ಮ ಕೆಲಸ ಕಲಿಸಿ ಕೊಟ್ಟಿಲ್ಲ. ಅಮ್ಮನಿಂದ ಕೇಳಿ ಕಲಿಯುವ ವಯಸ್ಸೂ ಅಲ್ಲ. ಆದರೆ ಮನೆಯ ಒಡತಿ ಅಮ್ಮನಂತೆ ಕೈಹಿಡಿದು ಕಲಿಸಿದರು, ಎನ್ನುವಾಗ ಪ್ರೇಮ ಭಾವುಕರಾಗುತ್ತಾರೆ. ಆದರೆ ಒಂದೇ ಸಮಸ್ಯೆ! ಮನೆಯವರು ಮನೆಯೊಳಗಿದ್ದರೆ ಮಾತ್ರ ಪ್ರೇಮಾ ಸ್ವತಂತ್ರಳು. ಮನೆಬಿಟ್ಟು ಅವರೇನಾದರೂ ಹೊರಗೆ ಹೋಗುವ ಸಂದರ್ಭ ಬಂದಾಗ ಬೀಗ ಹಾಕಿ ಹೋಗುತ್ತಿದ್ದರು. ಮನೆಯೊಳಗೆ ಪ್ರೇಮಾ ಬಂಧಿ! ಬಹುಶಃ ಹೆಣ್ಣೊಬ್ಬಳ ರಕ್ಷಣೆಗಾಗಿ ಹೀಗೆ ಮಾಡಿದ್ದಿರಬಹುದು.
                ಆ ಮನೆಗೆ ಗಿರೀಶ್ ಶಿವಶಂಕರಪ್ಪ ಮೂಗಬಸ್ತ್ ಕೇಬಲ್ ನಿರ್ವಹಣೆಗಾಗಿ ಬರುತ್ತಿದ್ದರು. ಒಂದು ಶುಭಕ್ಷಣದಲ್ಲಿ ಎರಡೂ ಕಣ್ಣುಗಳು ಮಾತನಾಡಿತು. ಭಾವಗಳು ಮಿಳಿತವಾದುವು. ಹೃದಯದ ಭಾಷೆಗಳು ಪ್ರೀತಿಯಲ್ಲಿ ಒಂದಾಯಿತು. ಅಲ್ಲಿಂದ ಪ್ರೇಮಾ ಬದುಕಿಗೆ ಹೊಸ ತಿರುವು. ಈ ಮಧ್ಯೆ ಹೋಟೆಲ್ ಒಂದರಲ್ಲಿ ಚಪಾತಿ ಮಾಡುವ ಕೆಲಸಕ್ಕೆ ಸೇರಿದರು. ಗಂಟೆಗೆ ಮುನ್ನೂರೈವತ್ತಕ್ಕೂ ಮಿಕ್ಕಿ ಚಪಾತಿ ತಯಾರಿ! ಉಂಡೆಕಟ್ಟಿದ ಹಿಟ್ಟನ್ನು ಚಪಾತಿಯಾಕಾರಕ್ಕೆ ರಟ್ಟಿಸಿ, ಬೇಯಿಸಿ ಕ್ಷಿಪ್ರವಾಗಿ ಚಪಾತಿ ತಯಾರಿಸುವ ಸೂಕ್ಷ್ಮ ಜಾಣ್ಮೆಯಲ್ಲಿ ಪ್ರೇಮಾ ಗೆದ್ದಿದ್ದರು.
              ಒಂದು ಹಂತದಲ್ಲಿ ಹಳ್ಳಿ ಮರೆತುಹೋಯಿತು. ಬಂಧುಗಳು ದೂರವಾದರು. ಕೃಷಿಯಂತೂ ಮರೀಚಿಕೆ. ಸಣ್ಣ ಮಟ್ಟದಲ್ಲಿ ಬಟ್ಟೆ ವ್ಯಾಪಾರ ಮಾಡಿದರು. ಹೇಳುವಂತಹ ಲಾಭವಾಗಲಿಲ್ಲ. ಗಂಡನ ಕೇಬಲ್ ಸಂಬಂಧಿ ಕೆಲಸಗಳಿಂದ ನಷ್ಟವಾಯಿತು. ಲಕ್ಷ ರೂಪಾಯಿಗೂ ಮಿಕ್ಕಿ ಕೈಜಾರಿತು. ಮುಂದೇನು? ಗೊತ್ತುಗುರಿಯಿಲ್ಲ. ಪರಿಚಯಸ್ಥರ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಎಂಟ್ರಿ ಪಡೆದರು. ಅದೂ ಇವರ ಕೈಹಿಡಿಯಲಿಲ್ಲ. ಗಂಡ-ಹೆಂಡತಿ ಒಮ್ಮತದಿಂದ 'ಖಾನಾವಳಿ' ತೆರೆಯಲು ನಿರ್ಧಾರ.
            ವಿದ್ಯಾಭ್ಯಾಸವಿಲ್ಲದ ಪ್ರೇಮಾ ಅವರಿಗೆ ಆರ್ಥಿಕ ವ್ಯವಹಾರ ಕಷ್ಟ. ಬರೆಯಲು ಗೊತ್ತಿಲ್ಲ. ಓದಲಂತೂ ದೂರ! ಖಾನಾವಳಿ ತೆರೆದರೆ ನಿರ್ವಹಣೆ ಹೇಗೆ? ಆರಂಭದಲ್ಲಿ ಯೋಚನೆ ಬಂದಿತ್ತು. ಅಸಾಕ್ಷರ ಕೊರತೆಯನ್ನು ಮೆಟ್ಟಿ ನಿಂತರು. ಹುಬ್ಬಳ್ಳಿ ಸುತ್ತ ಏನಿಲ್ಲವೆಂದರೂ ನಲವತ್ತೈದಕ್ಕೂ ಮಿಕ್ಕಿ ಖಾನಾವಳಿಗಳಿವೆ. ಸಾವಿರಗಟ್ಟಲೆ ವಿದ್ಯಾರ್ಥಿಗಳಿದ್ದಾರೆ. ನಲವತ್ತು ಕಾಲೇಜುಗಳಿವೆ. ಯಾಕೆ ಹೆದರ್ಬೇಕು? ಕಡಿಮೆ ಬಾಡಿಗೆ ನೆಲೆಯಲ್ಲಿ ಉದಾರಿ ಭಟ್ಟರೊಬ್ಬರು ಕಟ್ಟಡವನ್ನು ಬಿಟ್ಟುಕೊಟ್ಟರು. 2012ರಲ್ಲಿ ಖಾನಾವಳಿ ಶುರು ಮಾಡಿದ್ವಿ. ಆರಂಭದಲ್ಲಿ ಇಪ್ಪತ್ತು ಊಟಕ್ಕೆ ಗಿರಾಕಿಯಿತ್ತು. ಈಗ ಇನ್ನೂರು ದಾಟಿದೆ, ಎಂದಾಗ ಗಿರೀಶ್ ಮುಖವರಳುತ್ತದೆ. ಸಾಗಿ ಬಂದ ದಾರಿಯತ್ತ ಒಮ್ಮೆ ತಿರುಗಿನೋಡಿ ಕಣ್ಣುಮಿಟುಕಿಸಿದರು ಪ್ರೇಮಾ, ಸಾರ್, ಹಳ್ಳಿಯಲ್ಲೇ ಇರುತ್ತಿದ್ದರೆ ಇನ್ನೊಬ್ಬರ ಹಂಗಿನಲ್ಲಿ ಜೀವಿಸಬೇಕಾಗಿತ್ತು. ಕೃಷಿ ಇರುತ್ತಿದ್ದರೆ ಬೇರೆ ಮಾತು. ಈಗ ನಮ್ಮದು ಸ್ವಾವಲಂಬಿ ಬದುಕು.
             ಈ ಮಧ್ಯೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಂಪರ್ಕ. ಯೋಜನೆಯಡಿಯಲ್ಲಿ ಬರುವ ಉಳಿತಾಯ, ಸಂಸ್ಕಾರ, ನೈತಿಕ ಶಿಕ್ಷಣದತ್ತ ಒಲವು. ಓದಲು, ಬರೆಯಲು ತ್ರಾಸವಾದರೂ ನೋಡಿ ತಿಳಿವ, ವಿಚಾರಗಳತ್ತ ಅಪ್ಡೇಟ್ ಅಗುವ ಜ್ಞಾನ ಪ್ರೇಮಾರಿಗಿತ್ತು. ಯೋಜನೆಯ ಸಂಘಟನೆ ಶುರುವಾಯಿತು. ಕೆಲವೇ ಸಮಯದಲ್ಲಿ ಪ್ರೇಮಾ ಸಂಘದ ಮುಖ್ಯಸ್ಥೆಯಾದರು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಯಿತು. ಬದುಕುವ ಕಲೆಗೆ ಸಂಸ್ಕಾರ ಬಂತು. ಸ್ವಂತ ಕಾಲ ಮೇಲೆ ನಿಲ್ಲುವ ಛಾತಿ ನಿಜಕ್ಕೂ ಬೆರಗು. ಕ್ಷಿಪ್ರವಾಗಿ ಗ್ರಹಿಸುವ, ಅನುಷ್ಠಾನಿಸುವ ಅವರ ಜಾಯಮಾನ ಅವರನ್ನು ಇಷ್ಟೆತ್ತರಕ್ಕೆ ಬೆಳೆಸಿದೆ, ಎನ್ನುತ್ತಾರೆ ಯೋಜನೆಯ ದಿನೇಶ್.
             2013. ಜಿಲ್ಲಾ ಮಟ್ಟದ ಕೃಷಿ ಉತ್ಸವ. ಗಂಡನೊಂದಿಗೆ ಖಾನಾವಳಿ ತೆರೆದಿದ್ದರು. ಕೃಷಿ ಉತ್ಸವದ ಮಹಿಳಾ ವಿಚಾರಮಂಥನ ಕಲಾಪದಲ್ಲಿ ಪ್ರೇಮಾರಿಗೆ ಮಾತನಾಡುವ ಅವಕಾಶ ದೊರೆಯಿತು. ಮೌನವಾಗಿದ್ದ ಕಷ್ಟದ ಯಶೋಗಾಥೆಯಂದು ಮಾತಾಯಿತು. ಓದಲು, ಬರೆಯಲು ಬರುವುದಿಲ್ಲವೆಂಬ ಕೀಳರಿಮೆ ದೂರವಾಯಿತು. ಜೀವನಪಥದ ಒಂದೊಂದು ಘಟನೆಗಳು ಯಶೋಯಾನಕ್ಕೆ ಪೋಣಿಕೆಯಾಗಿ 'ಪ್ರೇಮಾಯಣ'ವಾಯಿತು!  ಕತೆಗೆ ಕಿವಿಯಾದ ಶ್ರೋತೃಗಳ ಕಣ್ಣಂಚಿನಲ್ಲಿ ನೀರು! ಪಟಪಟನೆ, ಭಾವನಾತ್ಮಕವಾಗಿ, ಸ್ಪಷ್ಟ ಶಬ್ದಗಳಲ್ಲಿ ಅಳುಕಿಲ್ಲದೆ ಮಾತನಾಡಿದರು. ಅವಳು ಹಾಗೆ ಮಾತನಾಡಬಹುದೆಂದು ಯೋಚಿಸಿರಲಿಲ್ಲ. ಅವಳಿಗೆ ಧೈರ್ಯವಿದೆ, ಛಲವಿದೆ, ಪತಿ ಗಿರೀಶ್ ಸಾಥ್.
            ಕೃಷಿ ಉತ್ಸವ ಕಳೆದು ಒಂದೆರಡು ತಿಂಗಳಾಗಿರಬಹುದಷ್ಟೇ. ಎಂ.ಬಿ.ಎ. ವಿದ್ಯಾರ್ಥಿಗಳಿಗೆ ಉಪನ್ಯಾಸ ಕೊಡುವಂತೆ ಡಾ.ವೀರೇಂದ್ರ ಹೆಗ್ಗಡೆಯವರಿಂದ ಸೂಚನೆ. ಎಲ್ಲಿಯ ಮೂರನೇ ಕ್ಲಾಸ್! ಎಲ್ಲಿಯ ಎಂ.ಬಿ.ಎ.! ಒಂದು ಕ್ಷಣ ಮಾತು ಮೂಕವಾಯಿತಂತೆ. ಆ ದಿನ ನನ್ಮನೆಗೆ ಕಾರು ಕಳುಹಿಸಿದ್ರು. ಕಾಲೇಜಿನಲ್ಲಿ ರಾಜಾತಿಥ್ಯ ನೀಡಿದ್ರು. ಪುಷ್ಪವೃಷ್ಟಿ ಮಾಡಿದ್ರು. ಮುಜುಗರದಿಂದ ಮುದ್ದೆಯಾಗಿದ್ದೆ. ಇಷ್ಟು ದೊಡ್ಡ ಆತಿಥ್ಯವನ್ನು ಪಡೆಯುವ ಯೋಗ್ಯತೆ ನನಗಿದೆಯಾ? ನನ್ನಲ್ಲೇ ಪ್ರಶ್ನಿಸಿದೆ. ನನ್ನ ಕತೆಯನ್ನು ಪ್ರಸ್ತುತಪಡಿಸಿದೆ. ಕತೆ ಮುಗಿಯುವಾಗ ಮಕ್ಕಳ ಮುಖ ಸಣ್ಣದಾಗಿತ್ತು. ನನ್ನ ಮುಖ ಅರಳಿತ್ತು. ಹೊರಡುವಾಗ ಅನ್ನಿಸಿತು, ನಾನೂ ಕಲಿಯಬೇಕಾಗಿತ್ತು, ಎನ್ನುತ್ತಾ ಪ್ರೇಮಾ ಮೌನವಾದರು. ಆ ಮೌನದಿಂದ ಹೊರಬರಲು ಐದಾರು ನಿಮಿಷಗಳೇ ಬೇಕಾಗಿತ್ತು.
            ಪ್ರೇಮಾ ದಂಪತಿಗೆ ಖಾನಾವಳಿ ಆತ್ಮವಿಶ್ವಾಸದ ಬದುಕನ್ನು ನೀಡಿದೆ. ಛಲ ಮತ್ತು ಸ್ಪಷ್ಟ ಗುರಿಯಿದ್ದರೆ ಬದುಕನ್ನು ಎದುರಿಸಬಹುದೆನ್ನುವ ಪಾಠ ಕಲಿಸಿದೆ. ಇದು ಇಪ್ಪತ್ತನಾಲ್ಕು ಗಂಟೆ ಜಾಬ್ ಸಾರ್. ಹತ್ತು ಮಂದಿ ಕೆಲಸದವರಿದ್ದಾರೆ. ಮೊದಲು ನಾಲ್ಕು ಮಂದಿ ಇದ್ದರು. ಖಾನಾವಳಿಯ ಆಹಾರದ ರುಚಿ ಮತ್ತು ಗುಣಮಟ್ಟದಿಂದಾಗಿ ವಿದ್ಯಾರ್ಥಿಗಳು, ನಾಗರಿಕರು ಹುಡುಕಿ ಬರ್ತಾರೆ. ಜಾಗ ಸಾಕಾಗ್ತ ಇಲ್ಲ. ವಿಸ್ತರಿಸಬೇಕು ಎಂದಿದ್ದೇವೆ, ಹೊಸ ಸುಳಿವು ಕೊಟ್ಟಾಗ ಪ್ರೇಮಾ ದನಿಗೂಡಿಸಿದರು, ಖಾನಾವಳೀಯ ತಿಂಗಳ ವ್ಯವಹಾರದಲ್ಲಿ ಇಬ್ಬರಿಗೂ ಸಂಬಳ ನಿಗದಿ. ನಮಗಿಬ್ಬರಿಗೂ ತಲಾ ನಲವತ್ತು ಸಾವಿರ ರೂಪಾಯಿಯಂತೆ ಸಂಬಳ ಮೀಸಲಿರಿಸಿದ್ದೇವೆ. ಯಾವ ಉದ್ಯೋಗದಲ್ಲಿ ಇಷ್ಟು ನೆಮ್ಮದಿ ಮತ್ತು ಭರವಸೆ ಇದೆ ಹೇಳಿ?.
            ಪ್ರೇಮಾರಿಗೆ ಮಂಜುನಾಥ, ಸದಾನಂದ ಇಬ್ಬರು ಮಕ್ಕಳು. ಅಮ್ಮನಾಗಿ ಮಕ್ಕಳಿಗೆ ಅಕ್ಷರಗಳನ್ನು ಹೇಳಿಕೊಟ್ಟಿಲ್ಲ ಎನ್ನುವ ಖೇದವಿದೆ. 'ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು' - ಉರುಹೊಡೆವ ಶಿಕ್ಷಣದ ಸಾಲುಗಳಿವು. ಪ್ರೇಮಾರಿಗೆ ಮಾತ್ರ ಈ ಸಾಲುಗಳು ತಿರುವು-ಮುರುವು. ಅಮ್ಮನಿಗೆ ಅಕ್ಷರ ಗೊತ್ತಿಲ್ಲ ಅಂತ ಮಕ್ಕಳಿಗೂ ಗೊತ್ತು. ಮಕ್ಕಳು ಅಕ್ಷರ ಕಲಿಯುವಾಗ ನಾನೂ ಅವರೊಂದಿಗೆ ಕಲಿತೆ. ಸಹಿ ಮಾಡಲು ಮಕ್ಕಳೇ ಕಲಿಸಿದ್ರು. ನನಗೆ ಮಕ್ಕಳೇ ಗುರು. ಹಾಗೆಂತ ಎಳೆಮನಸ್ಸುಗಳು ಎಂದೂ ನನ್ನನ್ನು ಹಗುರವಾಗಿ ಕಂಡಿಲ್ಲ. ಪ್ರೀತಿಸುತ್ತಾರೆ. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನು ಬೇಕು, ಎನ್ನುವಾಗ ಜತೆಗಿದ್ದ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ ಕಣ್ಣೊರೆಸಿಕೊಂಡರು.
             ಸಮಾಜವು ಪ್ರೇಮಾರನ್ನು ಗುರುತಿಸುತ್ತಿದೆ. ಸ್ವಂತ ಕಾಲಬಲ ಮತ್ತು ರಟ್ಟೆಬಲದ ಬದುಕು ಗೌರವ ತಂದುಕೊಟ್ಟಿದೆ. ಇನ್ನೊಬ್ಬರ ಮುಂದೆ ಕೈ ಚಾಚುವಂತಹ ದುಃಸ್ಥಿತಿಯನ್ನು ತಪ್ಪಿಸಿದೆ. ಎಲ್ಲೋ ಕಳೆದುಹೋಗುತ್ತಿದ್ದ ಜೀವನದ ಹಳಿಯು ಖಾನಾವಳಿಯಲ್ಲಿ ಒಟ್ಟು ಸೇರಿದೆ. ಹಲವು ಪದವಿಗಳ ವಿದ್ಯಾಭ್ಯಾಸ ಒಂದೇ ಜೀವನದ ಅಂತಿಮ ಲಕ್ಷ್ಯವಲ್ಲ. ಅನಕ್ಷರಸ್ಥೆಯೂ ಸಮಾಜದಲ್ಲಿ ಗೌರವದಿಂದ ಬಾಳಬಹುದು ಎನ್ನುವ ದೊಡ್ಡ ಸಂದೇಶವನ್ನು ಮೂವತ್ತಮೂರರ ಹರೆಯದ ಪ್ರೇಮಾ ನೀಡಿದ್ದಾರೆ. ಪ್ರೇಮಾರಲ್ಲೀಗ ಅಕ್ಷರಗಳೇ ಮರುಗುತ್ತಿವೆ!
    ಮಾತಿನ ಮಧ್ಯೆ ಒಂದು ಮಾತು ಸೇರಿಸಿದರು, ಸ್ವಂತ ಹೊಲ ತೆಕ್ಕೊಂಡು ಕೃಷಿ ಮಾಡ್ಬೇಕ್ರಿ. ಇದು ಮಣ್ಣಿನ ಸೆಳೆತ.

(ಉದಯವಾಣಿಯ 'ನೆಲದನಾಡಿ' ಅಂಕಣದಲ್ಲಿ ಪ್ರಕಟ)


0 comments:

Post a Comment