Tuesday, January 19, 2016

ಸಂತೆಯಲ್ಲಿ ಚಿಗುರುವ ಸ್ವಾವಲಂಬಿಯ ಸ್ವಾಭಿಮಾನ

               ವಾರದ ಸಂತೆಯಲ್ಲೊಮ್ಮೆ ಕಣ್ಣೋಡಿಸಿ. ಗ್ರಾಹಕರನ್ನು ಆಕರ್ಶಿಸಲು ಗುಲ್ಲೆಬ್ಬಿಸುತ್ತಾ ವ್ಯವಹಾರ ಕುದುರಿಸುವ ವ್ಯಾಪಾರಿಗಳ ಜಾಣ್ಮೆ ಹತ್ತಿರದಿಂದ ನೋಡಬೇಕು. ಇವರ ಮಧ್ಯೆ ಗುಲ್ಲಿಗೆ ಕಿವುಡಾಗಿ, ಮಾತನ್ನು ಮೌನವಾಗಿಸಿ ಗ್ರಾಹಕರನ್ನು ಸೆಳೆಯುವ ಅಮ್ಮಂದಿರು. ಇವರದು ಏಕಾಂಗಿ ವ್ಯಾಪಾರ. ತಾವೇ ಬೆಳೆದ ಬೆಳೆಯನ್ನು ಮಾರುವ ಖುಷಿ. ನೂರು, ಸಾವಿರ ರೂಪಾಯಿ ಕೈಗೆ ಬಂದರೆ ಕೋಟಿ ಸಿಕ್ಕಿದ ಆನಂದ. ಸಂತೆಯಲ್ಲಿ ಇವರದು ಕಾಲಮಿತಿ ವ್ಯವಹಾರ. ವಸ್ತುವಿನ ತಾಜಾತನವನ್ನು ಇಚ್ಚಿಸುವ, ಗುಣಮಟ್ಟವನ್ನು ಬಯಸುವ ಗ್ರಾಹಕರು. ಇವರ ಅಸ್ತಿತ್ವ ಸಂತೆಯಲ್ಲಿ ದಾಖಲಾಗುವುದಿಲ್ಲ.
               ವೀಳ್ಯದೆಲೆ, ತರಕಾರಿ, ಹೂ, ಸೊಪ್ಪು, ಹಣ್ಣುಗಳನ್ನು ಬೆಳೆದು ಸ್ವತಃ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದ್ದರಿಂದ ನಷ್ಟವಾಗುವ ಪ್ರಮಾಣ ಕಡಿಮೆ. ಹಾಗೆಂತ ಸಂತೆಯಲ್ಲಿ ಕಿರುಕುಳ ತಪ್ಪಿದ್ದಲ್ಲ! ದೊಡ್ಡ ತಿಮಿಂಗಿಲಗಳು ಸಣ್ಣವನ್ನು ನುಂಗಿದ ಹಾಗೆ! ದೊಡ್ಡ ವ್ಯಾಪಾರಿಗಳ ಕಂಠತ್ರಾಣದ ಮಧ್ಯೆ ಕ್ಷೀಣ ಧ್ವನಿ ಎಬ್ಬಿಸುವ ಇವರದು ಮೂಕ ರೋದನ. ವ್ಯಾಪಾರ ಮಾಡುವ ಜಾಗದ ತಕರಾರಿನಿಂದ ತೊಡಗಿ ದರ ನಿಗದಿ ತನಕ ಲಾಬಿಗೆ ಮಣಿಯಬೇಕಾದ ಸಂದಿಗ್ಧತೆಗಳೂ ಬರುವುದುಂಟು.
               ಮೈಸೂರು ಸಮೀಪದ ಹಳ್ಳಿ ಸಂತೆಗೊಮ್ಮೆ ಬಂಧುವೊಬ್ಬರೊಂದಿಗೆ ಹೋಗಿದ್ದೆ.  ನಸುಕು ಏರುವ ಮೊದಲೇ ಬರೋಬ್ಬರಿ ವ್ಯವಹಾರ. ಹಸಿರು ತರಕಾರಿಗಳ ಮೇಲಾಟ. ಒಂದೆಡೆ ಸುಮಾರು ಅರುವತ್ತೈದು ಎಪ್ಪತ್ತು ಮೀರಿದ ವಯೋವೃದ್ಧೆಯೋರ್ವರು  ಕೊತ್ತಂಬರಿ ಸೊಪ್ಪಿನ ಕಟ್ಟುಗಳನ್ನಿಟ್ಟು ಕುಳಿತಿದ್ದರು. ಕೊತ್ತಂಬರಿ ಸೊಪ್ಪಿನಲ್ಲಿ ಎಷ್ಟು ಲಾಭವಾದೀತೆಂದು ಊಹಿಸಿ. ಒಂದು ಕಟ್ಟಿಗೆ ಹತ್ತು ರೂಪಾಯಿ. ತಾಜಾ ಸೊಪ್ಪಲ್ವಾ, ಸಹಜವಾಗಿ ಗಿರಾಕಿಗಳು ಆಕರ್ಶಿತರಾಗಿದ್ದಾರೆ. ಅವರ ಮುಗ್ಧತೆಗೆ ಮಾರುಹೋಗಿ ಮಾತನಾಡಿಸಿದೆ. ಲಾಭದ ಪ್ರಶ್ನೆಯಲ್ಲ. ಕೈಖರ್ಚಿಗೆ ಹಣ ಬೇಕಲ್ಲ ಮಗಾ. ಇನ್ನೊಬ್ಬರಲ್ಲಿ ಬೇಡ್ಬಾರ್ದು ಎನ್ನುತ್ತಾ ಹಣದ ಎಣಿಗೆಯಲ್ಲಿ ಮಗ್ನರಾದರು.
             ಅವರ ಸ್ವಾಭಿಮಾನದ ಮಾತು ಆಗಾಗ್ಗೆ ಕಾಡುತ್ತದೆ. ಮಗ, ಸೊಸೆ, ಅಳಿಯ, ಮೊಮ್ಮಗಳಂದಿರ ಸಂಸಾರ. ವ್ಯಾಪಾರ ಮಾಡಬೇಕೆಂದೇನೂ ಇಲ್ಲ. ಕೈಖರ್ಚಿಗೆ ಎಷ್ಟು ಬೇಕಾಗಬಹುದು. ನೂರೋ, ಇನ್ನೂರೋ ಅಷ್ಟೇ. ತನಗೆ ಬೇಕಾದಷ್ಟು ಹಣವನ್ನು ತಾನೇ ಗಳಿಸುವ ಮನೋನಿರ್ಧಾರದ ಮುಂದೆ ನಿಜಕ್ಕೂ ಕುಬ್ಜನಾದೆ. ವ್ಯಾಪಾರ ಮುಗ್ದು ಹೋಯಿತು. ’ನಾನು ಬರ್ತೇನೆ’  ಎನ್ನುತ್ತಾ ಹೊರಟರು. ಅರಳಿದ ಮುಖದ ಮರೆಯಲ್ಲಿ ಸ್ವಾವಲಂಬಿ ಬದುಕಿನ ಸಂದೇಶ ಇಣುಕುತ್ತಿತ್ತು.
              ಇಂತಹ ಅಮ್ಮಂದಿರಿಗೆ ಬದುಕನ್ನು ಕಟ್ಟಿಕೊಳ್ಳುವ ಛಾತಿಯಿದೆ, ಸಂಪನ್ಮೂಲವಿದೆ, ಅವಕಾಶವಿದೆ.  ಎಲ್ಲಕ್ಕಿಂತಲೂ ಮುಖ್ಯವಾಗಿ  ಬೆಳೆದ ವಸ್ತುಗಳನ್ನು ಮಾರುವ ಮನೋದೃಢತೆಯಿದೆ. ಇವರಿಗೆ ಸಬ್ಸಿಡಿ ಗೊತ್ತಿಲ್ಲ, ಬೇಕಾಗಿಲ್ಲ. ಸರಕಾರದ ಸಹಾಯಧನ, ಸಹಕಾರಗಳ ಫೈಲುಗಳು ಇವರಲ್ಲಿಗೆ ನುಗ್ಗುವುದಿಲ್ಲ. ತಮ್ಮ ಪಾಡಿಗೆ ತಾವಿದ್ದುಕೊಳ್ಳುವ ಅಪ್ಪಟ ಮುಗ್ಧತೆಗಳೇ ಹಳ್ಳಿಯ ಜೀವಾಳ. ಕನ್ನಾಡಿನ ಸಂತೆಗಳು ಅಪ್ಪಟ ಹಸಿರು ಮನಸ್ಸುಗಳನ್ನು ಸೃಷ್ಟಿಸುತ್ತವೆ. ಅದು ಹಳ್ಳಿಯ ತಾಕತ್ತು.
ಮೈಸೂರಿನ ಸಂತೆಯಲ್ಲಿ ನೋಡಿದ ಸ್ವಾವಲಂಬಿ ಬದುಕಿನ ಗಾಥೆಯು ಕಾಲ ಬಯಸುವ, ಬೇಡುವ ಸೆಳಕು. ಬದುಕನ್ನು ಎತ್ತರಿಸುವ ಸೆಳಕುಗಳ ಬಳುಕಿಗೆ ಬೆಳಕು ಹಾಕುವ ವ್ಯವಸ್ಥೆಗಳು ವಿರಳ. ಯಾಕೆಂದರೆ ಆ ಯಶವು ಸದ್ದು ಮಾಡುವುದಿಲ್ಲ, ಸದ್ದಾಗುವುದಿಲ್ಲ. ಸರಿ, ಹರಿಹರಕ್ಕೆ ಭೇಟಿ ನೀಡಿದ್ದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಮಾಲಿನಿ ಹೆಗ್ಡೆಯವರೊಂದಿಗೆ ಸ್ವಾವಲಂಬಿ  ಮನಸ್ಸುಗಳ ಅನುಭವಗಳನ್ನು ಮೆಲುಕು ಹಾಕುತ್ತಿದ್ದೆ. ಕೆಂಚನಹಳ್ಳಿಯ ಕೆಂಚಮ್ಮ ಅವರ ಬದುಕಿಗೆ ಹೆಗ್ಡೆಯವರು ಕನ್ನಡಿಯಾದರು.
              ಹದಿನಾರು ಗುಂಟೆ ಮನೆಗೆ ಹೊಂದಿಕೊಂಡಿರುವ ಜಾಗ ಮತ್ತು ಒಂದೆಕ್ರೆ ಗದ್ದೆ. ಗಂಡ ಹನುಮಂತಪ್ಪ. ಇಬ್ಬರು ಮಕ್ಕಳು. ನೂರಾರು ಕೂಲಿ ಕಾರ್ಮಿಕರಿಗೆ ಹನುಮಂತಪ್ಪ ಯಜಮಾನರಾಗಿದ್ದರು. ತಮಗೆಷ್ಟು ಮಂದಿ ಬೇಕು ಎಂದರೆ ಸಾಕು, ಶ್ರಮಿಕರನ್ನು ಒದಗಿಸುವ ವ್ಯವಸ್ಥೆ. ಅದಕ್ಕೊಂದಿಷ್ಟು ಪಗಾರ. ಕಾರ್ಮಿಕ ಅಭಾವ ತಲೆದೋರಿದಾಗ ಈ ವೃತ್ತಿಗೆ ವಿದಾಯ. ಕೂಲಿ ಮಾಡುವುದು ಅವಮಾನ! ಮಡದಿ ಕೆಂಚಮ್ಮ ಗಂಡನ ಆಸರೆಗೆ ನಿಂತರು. ಅನ್ಯಾನ್ಯ ಕಾರಣಗಳಿಂದಾಗಿ ಭತ್ತದ ಬೇಸಾಯ ಕೈಕೊಡುತ್ತಿತ್ತು. ಗದ್ದೆಯನ್ನು ಗುತ್ತಿಗೆಗೆ ನೀಡಿದ್ದರು.
                ಹದಿನಾರು ಗುಂಟೆಯಲ್ಲಿ ಹೊಸ ಕೃಷಿಗೆ ಶ್ರೀಕಾರ. ಆ ಭಾಗಕ್ಕೆ ಹೂವಿನ ಕೃಷಿ ಅಪರೂಪ. ಗ್ರಾಮಾಭಿವೃದ್ಧಿ ಯೋಜನೆಯಿಂದ ತರಬೇತಿ. ಹೂ ಕೃಷಿ ಮಾಡುವವರಲ್ಲಿಗೆ ಅನುಭವಕ್ಕಾಗಿ ಪ್ರವಾಸ. ಕೆಂಚಮ್ಮರಿಗೆ ವಿಶ್ವಾಸವೃದ್ಧಿ. ಗುಲಾಬಿ ಹೂಗಳ ಮೂರು ತಳಿಗಳನ್ನು ಆಯ್ಕೆ ಮಾಡಿ ನೂರು ಗಿಡಗಳನ್ನು ನೆಟ್ಟು ಆರೈಕೆ ಮಾಡಿದರು. ಆರೇ ತಿಂಗಳಲ್ಲಿ ಒಂದೊಂದು ಹೂ ಹಣವನ್ನು ಕೊಟ್ಟಿತು! ಸ್ಥಳೀಯ ಹರಿಹರದಲ್ಲಿ ಹೂವಿನ ಮಾರುಕಟ್ಟೆ. ಏನಿಲ್ಲವೆಂದರೂ ದಿವಸಕ್ಕೆ ಐನೂರು ರೂಪಾಯಿ ರೊಕ್ಕ ಕೈಯೊಳಗೆ ಬರುತ್ತದೆ.
                ಹನುಮಂತಪ್ಪನವರು ಧಾರವಾಡಕ್ಕೆ ಹೋಗಿದ್ದಾಗ ಕಾಲು ಕಿಲೋ ನುಗ್ಗೆ ಬೀಜ ತಂದಿದ್ದರು. ಆಸಕ್ತರಿಗೆ ಹಂಚಿದ್ದರು. ಈಗವರಲ್ಲಿ ನಲವತ್ತು ನುಗ್ಗೆ ಮರಗಳಿವೆ. ಒಂದೊಂದು ಕಾಯಿಯೂ ಏಟಿಯಂ. ವಾರಕ್ಕೊಮ್ಮೆ ಇನ್ನೂರು ಕಾಯಿ ಮಾರುತ್ತಾರೆ. ಐನೂರರಿಂದ ಆರು ನೂರು ರೂಪಾಯಿ ಸಂಪಾದನೆ. ಅದೂ ತಾನು ಬಳಸಿ, ಬೀಗರಿಗೆ ಕೊಟ್ಟು, ಆಪ್ತೇಷ್ಟರಿಗೆ ಹಂಚಿ ಮಿಕ್ಕಿದ್ದು. ’ಇದು ಹಿಂಡುವ ಎಮ್ಮೆ. ದಿನಾ ಕರಿತಾ ಬೇಕ”, ಎಂದರು.
              ಋತುಮಾನಕ್ಕನುಗುಣವಾಗಿ ತರಕಾರಿ ಬೆಳೆಯುತ್ತಾರೆ. ಅದರಲ್ಲೂ ವಾರಕ್ಕೆ ಎಂಟುನೂರು ರೂಪಾಯಿಯಿಂದ ಒಂದು ಸಾವಿರ ಗಳಿಕೆ. ಆರು ಗುಂಟೆ ಜಾಗದಲ್ಲಿ ಎಂಟು ತಿಂಗಳಲ್ಲಿ ತರಕಾರಿಯಿಂದಲೇ ಮೂವತ್ತೆರಡು ಸಾವಿರ ತೆಗ್ದೆ, ಖುಷಿ ಹಂಚಿಕೊಂಡರು. ಒಂದು ಆಕಳಿದೆ. ಹಾಲು ಮಾರಾಟದಿಂದ ತಿಂಗಳಿಗೆ ಐದು ಸಾವಿರ ರೂಪಾಯಿ ಖಚಿತ. ಎರೆತೊಟ್ಟಿ ಮಾಡಿಕೊಂಡಿದ್ದಾರೆ. ಯೋಜನಾಬದ್ಧವಾಗಿ ಕೃಷಿ ಮಾಡುವ ಜಾಣ್ಮೆಯನ್ನು ಗ್ರಾಮಾಭಿವೃದ್ದಿ ಯೋಜನೆ ಕಲಿಸಿಕೊಟ್ಟಿದೆ.
ತರಕಾರಿ, ಹೂಗಳನ್ನು ಕೆಂಚಮ್ಮ ವಾರದ ಸಂತೆಯಲ್ಲಿ ಕುಳಿತು ಮಾರುತ್ತಾರೆ. ಆರಂಭದಲ್ಲಿ ಹಗುರವಾಗಿ ಮಾತನಾಡುತ್ತಿದ್ದರಂತೆ. ಗೇಲಿ ಮಾಡುತ್ತಿದ್ದರಂತೆ. ಬದುಕಿನ ಬಂಡಿ ಏರಿದ ಮೇಲೆ ಇಂತಹ ಮಾತುಗಳನ್ನು ಕೆಂಚಮ್ಮ ಕೇಳಿಸಿಕೊಂಡಿಲ್ಲ. ಬೆಳ್ಳಂಬೆಳಿಗ್ಗೆ ಸಂತೆಗೆ ಹೋದರೆ ಹನ್ನೆರಡು ಗಂಟೆಯೊಳಗೆ ಐಟಂ ಖಾಲಿ. ನುಗ್ಗೆ ಕೋಡಿಗೆ ಬೇಡಿಕೆ. ಹಬ್ಬದ ಸಮಯದಲ್ಲಿ ಹೂವಿಗೆ ಏರುದರ. ಚಿಕ್ಕ ಚಿಕ್ಕ ಆದಾಯಗಳು ಕೆಂಚಮ್ಮರ ಬದುಕಿನಲ್ಲಿ ನಗು ಮೂಡಿಸಿದೆ. ಚಿಕ್ಕ ಕೃಷಿಯಿಂದ ಶ್ರೀಮಂತಿಕೆ ಬಂದಿಲ್ಲ. "ನಮ್ಮ ಜಾಗ, ನಮ್ಮ ದುಡಿಮೆ. ಇದು ರಾಜ ಬದುಕಲ್ವಾ", ಎಂದರು. ಕೆಂಚಮ್ಮರ ಮಾತು ಮುಗಿಯುವಷ್ಟರಲ್ಲಿ ಅನೇಕ ಶ್ರೀಮಂತ ಶುಷ್ಕ ಮನಸ್ಸುಗಳು ಮನದಲ್ಲಿ ಹಾದು ಹೋಗಿ ಮುದುಡಿದುವು!
             ಇವರ ಬದುಕಿನಲ್ಲಿ ಏನೂ ಸಂದೇಶ ಕಾಣದೇ ಇರಬಹುದು. ಸ್ವಾವಲಂಬಿಯಾಗಿ ಹಂಗಿಲ್ಲದೆ ಬದುಕಬೇಕೆಂಬ ಬದ್ಧತೆಯಿದೆಯಲ್ಲಾ, ಅದು ಜೀವನೋತ್ಸಾಹ. ಕೆಂಚಮ್ಮ ದಂಪತಿಗಳ ದುಡಿಮೆಗಳು ಆ ಊರಿನಲ್ಲಿ ಮಾತಿಗೆ ವಿಷಯ. ಇಂತಹ ಬದ್ಧತೆಯ ಬದುಕಿನ, ತಮ್ಮ ಕಾಲ ಮೇಲೆ ನಿಲ್ಲಬೇಕೆಂಬ ಛಾತಿಯ ಸಾವಿರಾರು ಕುಟುಂಬಗಳ ಯಶೋಗಾಥೆಗಳು ಕನ್ನಾಡಿನ ಆತ್ಮಹತ್ಯೆಗೆ ಉತ್ತರವಾಗಲಾರದೇ?  ಸಮಸ್ಯೆಗಳನ್ನು ವೈಭವೀಕರಿಸದೆ ಜಾಣ್ಮೆಯಿಂದ ಎದುರಿಸಿ ನಗುತ್ತಿರುವ ಜೀವನ ಪದ್ಧತಿಗಳು ಒತ್ತಡದ ಬದುಕಿಗೆ ಉತ್ತರವಾಗಲಾರದೇ? ಸರಕಾರದ ಮುಂದೆ ಕೈಚಾಚದೆ, ಸಹಾಯಧನಗಳ ಹಿಂದೆ ಓಡದೆ, ಸಬ್ಸಿಡಿಗಳಿಗೆ ಅಲೆದಾಡದ ಈ ಬದುಕಿನಲ್ಲಿ ನೆಮ್ಮದಿ ಕಾಣುವುದಿಲ್ಲವೇ?
               ಒಂದೆಡೆ ನಿದ್ದೆಗೆಡಿಸುವ ಕೋಟಿಗಳ ಲೆಕ್ಕಗಳು ಹುಟ್ಟುಹಾಕುವ ರಾದ್ದಾಂತಗಳಿಗೆ ಎಣೆಯಿಲ್ಲ. ಮತ್ತೊಂದೆಡೆ ಮರ್ಯಾದೆಯ ಬದುಕಿಗಾಗಿ ಪಡುವ ಒದ್ದಾಟ. ಒಂದು ರೂಪಾಯಿ ಗಳಿಸಲು ಪರದಾಟ. ಹಳ್ಳಿಯ ಇಂತಹ ಚಿತ್ರಗಳು ಆಡಳಿತ ವ್ಯವಸ್ಥೆಗಳ ಕಡತದೊಳಗೆ ಕ್ಲಿಕ್ ಆಗವುದಿಲ್ಲ. ಒಂದು ವೇಳೆ ಹಳ್ಳಿಗಳ ಉದ್ಧಾರಕ್ಕಾಗಿ ಆರ್ಥಿಕ ಸಹಕಾರಗಳು ಹರಿದು ಬಂತೆನ್ನಿ. ಅಬ್ಬಾ.. ಅದನ್ನು ಮಧ್ಯದಲ್ಲೇ ಹರಿದು ಮುಕ್ಕುವ ಭ್ರಷ್ಟ ಕೈಗಳಿಗೆ ಭದ್ರ ಕಣ್ಗಾವಲು ಇದೆ! ಈ ಮಧ್ಯೆ ಯೋಜನೆಗಳಿಗೆ ಸಹಿ ಬೀಳುತ್ತಾ ಇರುತ್ತವೆ. ಕಾಗದಗಳಲ್ಲಿ ಹಳ್ಳಿಗಳು ಉದ್ಧಾರವಾಗುತ್ತಾ ಇರುತ್ತವೆ! ಶ್ರಮಜೀವಿಗಳ ದುಡಿತಕ್ಕೆ ವಿಶ್ರಾಂತಿಯೇ ಇರುವುದಿಲ್ಲ. ಕೆಂಚಮ್ಮನಂತಹ ಬದ್ಧತೆಯ ಸ್ವಾವಲಂಬಿ ಬದುಕು ನಿಜಾರ್ಥದಲ್ಲಿ ಗ್ರಾಮೀಣ ಭಾರತದ  ಉಸಿರು.0 comments:

Post a Comment