ಮಳೆಗಾಲ ಒಣಗಿತು! ಒಂದು ದಿನ ಮಳೆಯು ರಜೆ ಹಾಕಿದರೂ ಬೇಸಿಗೆಯ ಶಾಖದ ಅನುಭವ. ನದಿ, ಕೆರೆ, ಬಾವಿಗಳಲ್ಲಿ ಈಗಲೇ ನೀರಿನ ಮಟ್ಟ ಅತೃಪ್ತಿದಾಯಕ. ಇನ್ನು ಬೇಸಿಗೆಯ ಚಿತ್ರಣ ಹೇಗಿರಬಹುದು? ಊಹಿಸಿದರೆ ಭಯವಾಗುತ್ತದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ನೆರೆಯ ಮಹಾಪೂರಕ್ಕೆ ತುತ್ತಾದರೆ ಮತ್ತೊಂದು ಭಾಗ ಮಳೆಯಿಲ್ಲದೆ ತತ್ತರವಾಗಿದೆ. ಇತ್ತ ಕಾವೇರಿ ಮಾತೆಯ ರೋದನಕ್ಕೆ ಕನ್ನಾಡು ದನಿಸೇರಿಸಿದೆ. ನ್ಯಾಯಾಲಯದ ತೀರ್ಪುು ರೋದನವನ್ನು ಚಿವುಟಿದೆ.
ಬಹುಶಃ ಕನ್ನಾಡಿನ ನೀರಿನ ಒದ್ದಾಟ, ಗುದ್ದಾಟಗಳಲ್ಲಿ ಕಾವೇರಿ ಹೆಚ್ಚು ಸದ್ದು ಮಾಡಿತು. ಎಲ್ಲಾ ಪಕ್ಷಗಳು ಒಗ್ಗೂಡಿದುವು. ಮಾಜಿ ಪ್ರಧಾನಿಗಳು ಟೊಂಕ ಕಟ್ಟಿದರು. ಸಮಸ್ಯೆಯು ದೇಶದ ರಾಜಧಾನಿ ತಲುಪಿತು. ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ರೈತರ ದೊಡ್ಡ ದನಿಗೆ ಆಡಳಿತದ ಜಾಣ ಕುರುಡು, ಕಿವುಡನ್ನು ರೈತ ಶಕ್ತಿಯು ಕಿವಿ ಹಿಂಡಿತು. ನ್ಯಾಯಾಲಯದ ಮುಂದೆ ಸಮರ್ಥವಾಗಿ ವಾದ ಮಂಡಿಸುವ ವಕೀಲರು ಆಕಳಿಸಿದ್ದಿರಬಹುದೇ ಎಂದು ಕನ್ನಾಡಿನ ಜನರಾಡಿಕೊಳ್ಳುತ್ತಿದ್ದಾರೆ.
ಈ ವರುಷ ಬರಗಾಲದಲ್ಲಿ ಕರ್ನಾಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ, ಎಂದು ಜಲ ತಜ್ಞ ರಾಜೇಂದ್ರ ಸಿಂಗ್ ಕೆಂಪು ನಿಶಾನಿ ತೋರುತ್ತಾ ಪ್ರಸ್ತುತ ರಾಜಕೀಯದ ಮೇಲಾಟದತ್ತ ಬೆರಳು ತೋರುತ್ತಾರೆ, ತಮಿಳುನಾಡು ಮತ್ತು ಕರ್ನಾಟಕದ ರಾಜಕಾರಣಿಗಳಿಗೆ ಕಾವೇರಿ ವಿವಾದ ಜೀವಂತ ಇರುವುದೇ ಇಷ್ಟ. ಇದರೊಂದಿಗೆ ಭತ್ತ ಮತ್ತು ಸಕ್ಕರೆಯ ಲಾಬಿ ಸೇರಿದೆ. ಈ ಎರಡೂ ಬೆಳೆಗಳಿಗೆ ನೀರನ್ನು ಒದಗಿಸುವುದು ಕಷ್ಟ ಎಂದು ಎರಡೂ ರಾಜ್ಯಗಳಿಗೆ ಗೊತ್ತಿದೆ. ಸಂಕಷ್ಟ ಗೊತ್ತಿದ್ದೂ ಆ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ವಿವಾದ ಎಬ್ಬಿಸಿ ಅದರ ಲಾಭ ಪಡೆದುಕೊಳ್ಳಲು ರಾಜಕಾರಣಿಗಳಲ್ಲೇ ಪೈಪೋಟಿಯಿದೆ. ಒಟ್ಟೂ ಸಮಸ್ಯೆಯನ್ನು ಮುಂದಿಟ್ಟು ನೋಡುವಾಗ ರಾಜೇಂದ್ರ ಸಿಂಗ್ ಅವರ ಮಾತು ಮರೆತು ಬಿಡುವಂತಹುದಲ್ಲ.
ಕಾವೇರಿ ಮಾತ್ರ ಏಕೆ? ನಮ್ಮ ನಡುವೆ ಹರಿಯುತ್ತಿರುವ ಚಿಕ್ಕಪುಟ್ಟ ನದಿ, ಹಳ್ಳಗಳನ್ನು ಉಳಿಸಿಕೊಳ್ಳುವುದು ಕೂಡಾ ಕಾಲದ ಆವಶ್ಯಕತೆಯಾಗಿದೆ. ಜನವರಿ ತನಕ ಹರಿಯುವ ನದಿಗಳಲ್ಲಿ ಈಗಲೇ ನೀರು ತಳ ಕಂಡಿವೆ. ಕೆಲವು ಹರಿವು ನಿಲ್ಲಿಸಿದೆ. ಇನ್ನೊಂದಿಷ್ಟು ಕೆಲವು ತಿಂಗಳೊಳಗೆ ಒಣಗುತ್ತವೆ. ಹೀಗಿದ್ದೂ ಬೇಸಿಗೆಯ ಪಾಡು? ಕಾವೇರಿ ನೀರು ವಿವಾದಗಳಿಂದ ರೈತರೊಂದಿಗೆ ಬೆಂಗಳೂರು ನಗರವೂ ಒದ್ದಾಡಬೇಕಾಗಿದೆ. ಸರಕಾರ ಹೇಗಾದರೂ ನೀರು ಕೊಡುತ್ತದೆ. ದುಡ್ಡು ಬಿಸಾಡಿದರಾಯಿತು, ಎನ್ನುವ ಮನಃಸ್ಥಿತಿಯುಳ್ಳವರಿಗೆ ಬಹುಶಃ ಈ ಬೇಸಿಗೆಯು ನೀರಿನ ಬಿಸಿಯನ್ನು ಮುಟ್ಟಿಸಬಹುದು. ಹಾಗಾಗದಿರಲಿ.
ಕನ್ನಾಡಿನ ಜಲಯೋಧರು ನೆಲ-ಜಲ ಸಂರಕ್ಷಣೆಯ ಪಾಠವನ್ನು ಒಂದೂವರೆ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಸಂಘಸಂಸ್ಥೆಗಳು ನೀರಿನೆಚ್ಚರ ಮೂಡಿಸುವ ಕೆಲಸ ಮಾಡುತ್ತಿವೆ. ವೈಯಕ್ತಿಕವಾಗಿ ನೀರಿನ ಅರಿವನ್ನು ಮೂಡಿಸುವ, ಯಶೋಗಾಥೆಗಳನ್ನು ದಾಖಲಿಸುವ, ಅವುಗಳನ್ನು ಜನರ ಮನದೊಳಿಗೆ ಹರಿಯಬಿಡುವ ಜಲಯೋಧರ ಸಾಧನೆಗಳು ಅಲಿಖಿತ. ಒಂದು ಕಾಲಘಟ್ಟದಲ್ಲಿ ಜಲಯೋಧರ ಕಾಯಕಗಳಿಗೆ ಗೇಲಿ ಮಾಡುತ್ತಿದ್ದವರು ಇಂದು ಜಲಸಂರಕ್ಷಣೆಯ ಭಾಷಣ ಮಾಡುತ್ತಿದ್ದಾರೆ!
ಎಲ್ಲಾ ಸಮಸ್ಯೆಗಳಿಗೂ ಸರಕಾರದಲ್ಲಿ ಉತ್ತರವಿದ್ದೀತೇ? ಹಕ್ಕುಗಳನ್ನು ಹೋರಾಟ ಮೂಲಕ ಪಡೆಯುತ್ತೇವೆ. ಜತೆಗೆ ನಂನಮ್ಮ ಕರ್ತವ್ಯಗಳನ್ನು ನಾಗರಿಕರಾಗಿ ಎಷ್ಟು ಯೋಚಿಸಿದ್ದೇವೆ? ಆದರೆ ಭಾರತದಲ್ಲಿ 'ಕರ್ತವ್ಯ'ಗಳನ್ನು ಜವಾಬ್ದಾರಿ ಎನ್ನುವ ನೆಲೆಯಲ್ಲಿ ಮೈಮೇಲೆ ಎಳೆದುಕೊಂಡ ಅಜ್ಞಾತ ವ್ಯಕ್ತಿಗಳು ಸಾವಿರಾರು ಮಂದಿ ಇದ್ದಾರೆ. ಅವರೆಂದೂ ವಾಹಿನಿಗಳಿಗೆ ಫೋಸ್ ಕೊಡುವುದಿಲ್ಲ. ತಾವೇ ಸ್ವತಃ ವರದಿ-ಚಿತ್ರಗಳನ್ನು ಪತ್ರಿಕಾಲಯಕ್ಕೆ ಒಪ್ಪಿಸುವುದಿಲ್ಲ. ಅವರದು ಜವಾಬ್ದಾರಿ ಅರಿತ ಕಾಯಕ. ನಿಜಾರ್ಥದ ಸಮಾಜ ಸೇವೆ. ಇದಕ್ಕೆ ಉದಾಹರಣೆ - ಮಹಾರಾಷ್ಟ್ರದ ಸತಾರಾದ ಡಾ.ಅವಿನಾಶ್ ಪೋಲ್. ಗ್ರಾಮಕ್ಕೆ ದನಿಯಾಗಿ ನೀರಿನ ಬರದ ಗುಮ್ಮಕ್ಕೆ ಸಡ್ಡು ಹೊಡೆದ ಸಾಹಸಿ.
ನಾಲ್ಕೈದು ವರುಷದ ಹಿಂದೆ ಮಹಾರಾಷ್ಟ್ರದ ಜಾಲ್ನಾ ನಗರದ ಚಿತ್ರ ಕಣ್ಣೀರು ತರುವಂತಾದ್ದು. ನೀರಿಗಾಗಿ ಒದ್ದಾಟ. ಒಂದುವರೆ ಸಾವಿರ ಕೊಳವೆಬಾವಿಗಳು ಬತ್ತಿದ್ದುವು. ಮನೆಗಳಿಗೆ ವಾರಕ್ಕೊಮ್ಮೆ ರೇಶನ್ ನೀರು. ಅದೂ ಬಂದರೆ ಬಂತು, ಇಲ್ಲದಿದ್ದರೆ ಇಲ್ಲ. ಉದ್ದಿಮೆಗಳು ಷಟರ್ ಇಳೆದಿದ್ದುವು. ಬಹುತೇಕರು ಉದ್ಯೋಗ ಅರಸಿ ಬೇರೆಡೆ ಗುಳೆ ಹೋದರು. ಊರಿಗೆ ರಾಜಕಾರಣಿಗಳು ಬಂದರು, ಕ್ಯಾಮೆರಾಗಳಿಗೆ ಫೋಸ್ ಕೊಟ್ಟರು, ಹೋದರು! ಸಮಸ್ಯೆಯು ಸಮಸ್ಯೆಯಾಗಿಯೇ ಉಳಿಯಿತು.
ಜಾಲ್ನಾ ನಗರದಲ್ಲಿ ಹೂಳು ತುಂಬಿದ ನಾಲ್ಕು ಸರೋವರಗಳಿದ್ದುವು. ದೂರದ ಜಾಯ್ವಾಡಿ ಅಣೆಕಟ್ಟಿನಿಂದ ಸರಕಾರವು ನೀರು ತರುವ ಯೋಜನೆಗೆ ಸಹಿ ಮಾಡಿತ್ತು. ಬರೋಬ್ಬರಿ ಇನ್ನೂರೈವತ್ತು ಕೋಟಿ ರೂಪಾಯಿಯ ಯೋಜನೆ! ಎಲ್ಲಾ ಕಾಮಗಾರಿ ಮುಗಿಯುವಾಗ ಅಣೆಕಟ್ಟಿನಲ್ಲಿ ನೀರಿರಲಿಲ್ಲ! ಒಂದು ವೇಳೆ ಇರುತ್ತಿದ್ದರೂ ಐವತ್ತು ಕಿಲೋಮೀಟರ್ ದೂರದಿಂದ ಪೈಪಿನಲ್ಲಿ ತರಬೇಕಾಗಿತ್ತು. ಏನಿಲ್ಲವೆಂದರೂ ದಿನಕ್ಕೆ ಒಂದು ಲಕ್ಷ ಖರ್ಚು. ಜಾಲ್ನಾಕ್ಕೆ ನೀರು ಪೂರೈಕೆಗಾಗಿಯೇ ಘನೆವಾಡಿ ಸರೋವರವನ್ನು ಆಗಿನ ನಿಜಾಮ ಕಟ್ಟಿಸಿದ್ದರು. ಅದು ಹೂಳು ತುಂಬಿತ್ತು.
ಇಂತಹ ಸಂದರ್ಭದಲ್ಲಿ ಸ್ಥಳೀಯ ಸಂಘಸಂಸ್ಥೆಗಳು ಒಂದಾದುವು. ನೀರಿನ ಬರಕ್ಕೆ ಘನೆವಾಡಿ ಸರೋವರದ ಪುನರ್ಜೀವವೊಂದೇ ಹಾದಿ ಎಂದು ಕಂಡುಕೊಂಡರು. ಸಾಮಾಜಿಕ ಬದ್ಧತೆಯುಳ್ಳ ದಂತವೈದ್ಯ ಡಾ. ಅವಿನಾಶ್ ಪೋಲ್ ಅವರನ್ನು ಸಂಪಕರಿಸಿರು. ಅವಿನಾಶರು ಕಳೆದ ಎರಡು ದಶಕಗಳಿಂದ ನೀರಿನ ಕೆಲಕ್ಕೆ ಹಳ್ಳಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಊರವನ್ನು ಸಂಘಟಿಸಿ, ಶ್ರಮದಾನದ ಮೂಲಕ ಹಳ್ಳಿ ಉದ್ದಾರಕ್ಕೆ ಟೊಂಕ ಕಟ್ಟಿದ್ದಾರೆ. ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.
ಅವಿನಾಶರ ಸಾರಥ್ಯದಲ್ಲಿ ಜಲ ಕಾಯಕ ಶುರು. ಇಲ್ಲಿ ಬೀಳುವ ಮಳೆ ಕೇವಲ ಮುನ್ನೂರರಿಂದ ನಾಲ್ಕುನೂರು ಮಿಲ್ಲಿಮೀಟರ್. ಬಿದ್ದ ಮಳೆ ನೀರನ್ನು ಇಂಗಿಸಲು ಸಾವಿರಗಟ್ಟಲೆ ರಚನೆಗಳ ನಿರ್ಮಾಣಕ್ಕೆ ಸಲಹೆ ನೀಡಿದರು. ಶ್ರಮದಾನದ ಮೂಲಕ ಹಳ್ಳಿ ಒಂದಾಯಿತು. ಹತ್ತೋ ಹದಿನೈದೋ ಲಕ್ಷ ರೂಪಾಯಿ ವ್ಯಯವಾಗುತ್ತಿದ್ದ ಕಾಮಗಾರಿಗಳು ಎರಡೋ ಮೂರೋ ಲಕ್ಷದಲ್ಲೇ ನಿರ್ಮಾಣವಾದುವು. ಅವಿನಾಶರ ಯೋಜನೆಗಳಿಗೆ ಆರಂಭದಲ್ಲಿ ನಿಧಾನ ಸ್ಪಂದನ ದೊರೆತರೂ ಮುಂದೆ ಅದು ಬೀಸುಹೆಜ್ಜೆಯಾಯಿತು.
ಅವಿನಾಶರಿಗೆ ಹಳ್ಳಿ ಸುಧಾರಣೆಯು ಆಸಕ್ತಿಯ ವಿಷಯ. ತನ್ನ ಒತ್ತಡಗಳ ಮಧ್ಯೆ ಕಷ್ಟಗಳಿಗೆ ಕಿವಿಯಾಗುತ್ತಾರೆ. ಮೊದಲ ಭೇಟಿಯಲ್ಲೇ ಅವಿನಾಶ್ ಹಳ್ಳಿಯ ಮೂಲೆ ಮೂಲೆಗಳಿಗೂ ಓಡಾಡುತ್ತಾರೆ. ಜಲಮೂಲಗಳನ್ನು ವೀಕ್ಷಿಸುತ್ತಾರೆ. ಆಗಲೇ ಅಲ್ಲಿ ಆಗಬೇಕಾದ ಕಾರ್ಯಕಗಳತ್ತ ಮಾಸ್ಟರ್ಪ್ಲಾನ್ ಮನದಲ್ಲಿ ಸಿದ್ಧವಾಗುತ್ತದೆ. ಅವಿನಾಶರಿಗೆ ಸರಕಾರಿ ಯೋಜನೆಗಳ ಕುರಿತು ಅಗಾಧ ತಿಳುವಳಿಕೆಯಿದೆ. ಸರಕಾರದ ಕೆಂಪುಪಟ್ಟಿ ಸಂಸ್ಕೃತಿಯ ಬೇಲಿಯನ್ನು ದಾಟಿ ಮುಂದಡಿಯಿಡುವುದು ಕಷ್ಟದ ಕೆಲಸ. ಆದರೆ ಕಚೇರಿಯೊಳಗಿರುವ ಕೆಲವು ಸಮಾಜಮುಖಿ ಮನಸ್ಸಿನವರು ಅವಿನಾಶರ ನಿಸ್ವಾರ್ಥ ದುಡಿಮೆಯನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಸ್ಪಂದಿಸುತ್ತಿದ್ದಾರೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟು ಸರಕಾರಿ ಸ್ಕೀಮನ್ನು ಹಳ್ಳಿಗಳಿಗೆ ಹೊಂದಿಸುತ್ತಿದ್ದಾರೆ.
ಸರಕಾರದ ಯೋಜನೆಗಳನ್ನು ಆಯಾಯ ಹಳ್ಳಿಗೆ ಜೋಡಿಸುವ ಇವರ ಅನನ್ಯ ಸಾಮಥ್ರ್ಯಕ್ಕೆ, ಇವರ ಸಂಪರ್ಕ ವಲಯದ ಹರವಿನ ಬಗ್ಗೆ, ಯೋಜನೆಗಳ ಒಳಹೊರಗಿನ, ವಿಧಿವಿಧಾನಗಳ ತಿಳಿವಳಿಕೆ ಬಗ್ಗೆ ಅಚ್ಚರಿ ಹುಟ್ಟುತ್ತದೆ, ಎನ್ನುತ್ತಾರೆ ಜಲತಜ್ಞ ಶ್ರೀ ಪಡ್ರೆ. ಒಂದು ಹಳ್ಳಿಯಲ್ಲಿ ನೀರಿನ ಕೆಲಸ ಇನ್ನೇನು ಅಂತಿಮ ಹಂತಕ್ಕೆ ಬಂತು ಎಂದಾವಾಗ ಅಲ್ಲಿಂದ ಕಾಲ್ಕೀಳುವುದಿಲ್ಲ. ಆ ಊರಿನ ನೈರ್ಮಲ್ಯ, ನೀರುಳಿತಾಯ, ಬೆಳೆ ಆಯ್ಕೆ, ಶಿಕ್ಷಣ, ಸಾವಯವ ಕೃಷಿ - ಇಂಥ ವಿಚಾರದ ಬಗ್ಗೆಯೂ ಗಮನ ಹರಿಸುತ್ತಾರೆ. ಅವಿನಾಶರು ಮಾಧ್ಯಮದಿಂದ ದೂರ. ತಾವಾಯಿತು, ತಮ್ಮ ಕೆಲಸವಾಯಿತು. ತಾವು ಹಾಕಿದ ಯೋಜನೆಗಳಿಗೆ ಬಲ ಬರಲು ಅವರು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿಲ್ಲ!
ಡಾ. ಅವಿನಾಶರಂತೆ ಅಲ್ಲದಿದ್ದರೂ, ಹಳ್ಳಿ ಪ್ರೀತಿಯ, ಪರಿಸರ ಕಾಳಜಿಯ, ನೀರಿನೆಚ್ಚರದ ಎಷ್ಟು ಮಂದಿ ದುಡಿಯುತ್ತಿಲ್ಲ. ಅದು ಗ್ರಾಮೀಣ ಭಾರತದ ಸಶಕ್ತತೆ. ಈ ಸಶಕ್ತತೆಗೆ ಸರಕಾರದ ಹಂಗಿಲ್ಲ. ರಾಜಕಾರಣಿಗಳ ಮುಲಾಜಿಲ್ಲ. ಇಲ್ಲಿರುವುದು ಅಪ್ಪಟ ಪ್ರೀತಿ. 'ನನ್ನ ಭಾರತ' ಎನ್ನುವ ಅಭಿಮಾನ. ಸರಕಾರದ ಎಷ್ಟು ಮನಸ್ಸುಗಳಿಗೆ ಇಂತಹ ದುಡಿಮೆಗಳು ಅರ್ಥವಾಗುತ್ತವೆ?
(Photo/Information : Shree Padre/Adike Patrike)
(Published in Nelada Nadi coloum/Udayavani)
0 comments:
Post a Comment