Sunday, November 6, 2016

ಕೆದಿಲಾಯರ ಕಸಿ ಜಾಣ್ಮೆಗೆ ಅರ್ಧ ಶತಮಾನ

ಕಸಿ ತಜ್ಞ ನಾರಾಯಣ ಕೆದಿಲಾಯ

                  "ಹಿರಿಯರು ಶ್ರಮದಿಂದ ಮಾಡಿಟ್ಟ ಒಂದಿಂಚು ಸ್ಥಳವನ್ನೂ ಮಾರಲು ಹೋಗ್ಬೇಡಿ. ಆಸ್ತಿ ಮಾರುವವರ ಹತ್ರ ನನಗೆ ಅಸಹನೆಯಾಗುತ್ತದೆ," ಕಸಿ ತಜ್ಞ ನಾರಾಯಣ ಕೆದಿಲಾಯರು ಹೇಳುತ್ತಿದ್ದ ಮಾತುಗಳು ಕಾಡುತ್ತದೆ, ಪರಿಹಾಸ್ಯ ಮಾಡುವಾಗ ಎಲ್ಲರಿಗೂ ಸಿಟ್ಟು ಬರ್ತದೆ. ನನಗೆ ಉತ್ಸಾಹ ಇಮ್ಮಡಿಯಾಗುತ್ತದೆ. ಕೆಲಸ ಮಾಡಲು ದುಪ್ಪಟ್ಟು ಶಕ್ತಿ ಬರುತ್ತದೆ. ಸಿಟ್ಟು ಆವರಿಸಿದಾಗ ಉತ್ಸಾಹ ನಾಶವಾಗಬಾರದು. ಕ್ರಮೇಣ ಪರಿಹಾಸ್ಯ ಮಾಡಿದವನು ಮಿತ್ರನೇ ಆಗುತ್ತಾನೆ."
                ಪುತ್ತೂರು ತಾಲೂಕು (ದ.ಕ) ಆಲಂಕಾರಿನ ಬೆದ್ರಾಳ ಕುದ್ಕುಳಿಯ ನಾರಾಯಣ ಕೆದಿಲಾಯರ ಕಸಿಕಾಯಕಕ್ಕೆ  ಆರ್ಧ ಶತಮಾನ. ಇವರು ಕೇವಲ ಗಿಡಗಳಿಗೆ ಕಸಿ ಕಟ್ಟುವವರಲ್ಲ, ಬದುಕಿನ ಮೌಲ್ಯಗಳಿಗೂ ಕಸಿ ಕಟ್ಟುವವರು! ಹಣಕ್ಕಿಂತಲೂ ಮೌಲ್ಯಗಳಿಗೆ ಮಾನ ಕೊಟ್ಟವರು. ತಾನು ನಂಬಿದ ಮೌಲ್ಯಗಳನ್ನು ಬದ್ಧತೆಯ ಅಡಿಗಟ್ಟಿನಲ್ಲಿ ಅನುಷ್ಠಾನಿಸಿದವರು. ಸಾಲ ಸೋಲಗಳಿಲ್ಲದೆ ನಮ್ಮ ಕಾಲ ಮೇಲೆ ನಾವು ನಿಲ್ಲಬೇಕೆನ್ನುವ ಜೀವನಕ್ರಮವನ್ನು ಪ್ರತಿನಿಧಿಸಿದ ಕೆದಿಲಾಯರು ೨೦೧೬ ಅಕ್ಟೋಬರ್ 20ರಂದು ವಿಧಿವಶರಾಗುವಾಗ ತೊಂಭತ್ತಮೂರು ವರುಷ. 
                ಅತಿ ಕಡಿಮೆ ಮೂಲ ಬಂಡವಾಳ ಹೂಡಿ ಕೃಷಿಯಲ್ಲಿ ಹಣ ಸಂಪಾದನೆ ಮಾಡಬಹುದು ಎನ್ನುವುದು ಅವರ ನಂಬಿಕೆಯಾಗಿತ್ತು. ಸಾಲ ಮಾಡಿ ಕೃಷಿ ಮಾಡುವುದಕ್ಕೆ ಬದ್ಧ ವಿರೋಧವಾಗಿದ್ದರು. ಸಾಲ ಮಾಡಿದವ ಏಳಿಗೆಯಾಗಲಾರ. ಅವನ ಲಕ್ಷ್ಯವೆಲ್ಲಾ ಸಾಲವನ್ನು ಮರುಪಾವತಿ ಮಾಡುವುದರಲ್ಲೇ ಕೇಂದ್ರೀಕರಿಸಿರುತ್ತದೆ. ಒಂದು ಸಾಲ ಮುಗಿದಾಗ ಇನ್ನೊಂದು ಸಾಲ. ಹೀಗೆ ಸಾಲದ ಕೂಪದೊಳಗೆ ಸುತ್ತುತ್ತಾ ಆಯುಷ್ಯ ಮುಗಿಸುತ್ತಾನೆ. ಹೀಗಾದರೆ ಏನು ಸಾಧಿಸಿದ ಹಾಗಾಯ್ತು? ಕೆಲವು ವರುಷಗಳ ಹಿಂದೊಮ್ಮೆ ಕಸಿ ತರಬೇತಿ ಕಾರ್ಯಾಗಾರದಲ್ಲಿ ಆಡಿದ ಮಾತು ಮಾರ್ಮಿಕವಾಗಿತ್ತು.
                 ಒಮ್ಮೆ ಮೈತುಂಬ ಸಾಲ ಮಾಡಿಕೊಂಡ ಕೃಷಿಕರೊಬ್ಬರು ಸಾಲ ಮರುಪಾವತಿಗಾಗಿ ತಮ್ಮ ಭೂಮಿಯನ್ನು ಮಾರಲು ನಿರ್ಧರಿಸಿದರು. ಮಾರಿಕೊಡಲು ಕೆದಿಲಾಯರಲ್ಲಿ ವಿನಂತಿಸಿದರು. ಜತೆಗೆ ಕಮಿಶನ್ನಿನ ಆಮಿಷ ಬೇರೆ! ನೀವು ಲಕ್ಷ ರೂಪಾಯಿ ಕೊಟ್ಟರೂ ನಿಮ್ಮ ಜಾಗವನ್ನು ಮಾರಿಸಿ ಕೊಡುವ ಹೊಣೆಯನ್ನು ವಹಿಸಲಾರೆ ಎಂದು ಖಡಕ್ ಆಗಿ ಹೇಳಿದ್ದರು. ನಿಮ್ಮ ಸಾಲಕ್ಕೆ ನೀವು ಹೆದರುವುದು ಬೇಡ, ನಾನು ನೋಡಿ ಕೊಳ್ತೇನೆ ಎಂದು ಹೇಳಿ ಏನೋ ವ್ಯವಸ್ಥೆ ಮಾಡಿದರಂತೆ. ಅವರಿಗೆ ಸ್ವಂತ ದುಡಿಮೆಯಿಂದ ಸಾಲ ತೀರಿಸಿಕೊಳ್ಳುವ 'ಕೆಣಿ'ಗಳನ್ನು ಹೇಳಿದರು. ಕೆದಿಲಾಯರು ಹೇಳಿದಂತೆ ಕೃಷಿ ಮಾಡಿದರು, ಗೆದ್ದರು. ನನ್ನ ಮಾತು ಕೇಳಿ ಅವರು ಜಾಗ ಉಳಿಸಿಕೊಂಡದ್ದೇ ನನಗೆ ಹಣ ಎಂದಿದ್ದರು.
                 ನಿಮ್ಮತ್ರ ಖಾಲಿ ಜಾಗ ಉಂಟೋ? ಎಷ್ಟು ಜಾಗವಿದೆ? ಅದರಲ್ಲಿ ಏನು ನೆಟ್ಟಿದ್ದೀರಿ? - ಈ ಪ್ರಶ್ನೆಗಳಿಲ್ಲದೆ ಮಾತು ಮುಗಿಯುತ್ತಿರಲಿಲ್ಲ. ಬರಡು ನೆಲದಲ್ಲಿ ತೇಗದಂತಹ ಗಿಡಗಳನ್ನು ನೆಡಿ. ಇವೆಲ್ಲಾ ಕೃಷಿಕನ ವಿಮೆ. ಮೊದಲ ನಾಲ್ಕೈದು ವರುಷ ಮಾಡುವ ಆರೈಕೆಯೇ ನಾವು ಕಟ್ಟುವ ಪ್ರೀಮಿಯಂ. ಹದಿನೈದು ಇಪ್ಪತ್ತು ವರುಷಗಳ ಬಳಿಕ ಆ ಪಾಲಿಸಿ ಮೆಚ್ಯುರಿಟಿಯಾಗುತ್ತದೆ. ಕೈತುಂಬಾ ಹಣ ಸಿಗುತ್ತದೆ. ಇದು ಕೆದಿಲಾಯರ ಆರ್ಥಿಕ ಸೂತ್ರ.
                ನಾರಾಯಣ ಕೆದಿಲಾಯರು ಯೌವನದಲ್ಲಿ ವಿಟ್ಲ ಅರಮನೆಯಲ್ಲಿ ಅರ್ಚಕರಾಗಿದ್ದರು. ಒಮ್ಮೆ ಹೂ, ಹಣ್ಣಿನ ಗಿಡಗಳಿಗೆ ಕಸಿ ಕಟ್ಟಲು ಕೇರಳದಿಂದ ತಜ್ಞರು ಆಗಮಿಸಿದ್ದರು.  ಗುಲಾಬಿ, ಮಾವಿನ ಗಿಡಗಳಿಗೆ ಅವರು ಕಸಿ ಮಾಡುವುದನ್ನು ಅವರ ಜತೆಗಿದ್ದು ನೋಡಿದರು, ಕಲಿತರು. ಕಸಿಯ ಸೂಕ್ಷ್ಮಗಳನ್ನು ತಿಳಿದುಕೊಂಡರು. ಪರೀಕ್ಷಾರ್ಥವಾಗಿ ನೋಡಿದ್ದನ್ನು ಮಾಡಿದರು. ಧೈರ್ಯ ಬಂತು. ಕಸಿಯ ಮರ್ಮ ಅಂದು ತಿಳಿದುಕೊಂಡದ್ದರಿಂದ ಅದೇ ನನ್ನ ಮುಂದಿನ ಬದುಕಿಗೆ ದಾರಿಯಾಯಿತು, ಹೆಸರನ್ನು ತಂದು ಕೊಟ್ಟಿತು, ಎಂದಿದ್ದರು.
                 1960ರಿಂದ ಆಲಂಕಾರಿನ ತಮ್ಮ ಕೃಷಿ ಕ್ಷೇತ್ರದಲ್ಲಿ ಕನಸಿನ ಸಾಕಾರಕ್ಕೆ ಶ್ರೀಕಾರ. ಮೊತ್ತಮೊದಲ ಸಾಹಸ - ಉಡುಪಿಯಿಂದ ಎರಡು ಸಾವಿರ 'ಮಟ್ಟುಗುಳ್ಳ' ಸಸಿಗಳನ್ನು ತಂದು ನಾಟಿ ಮಾಡಿದರು. ಉತ್ತಮ ಫಸಲು ದೊರೆಯಿತು.  ಆಗ ಸಾಗಾಟಕ್ಕೆ ವಾಹನಗಳು ತೀರಾ ಕಡಿಮೆ. ಮಂಗಳೂರು ಮಾರುಕಟ್ಟೆಗೆ ಗೂಡ್ಸ್ನಲ್ಲಿ ಗುಳ್ಳವನ್ನು ಕಳುಹಿಸುತ್ತಿದ್ದೆ. ಒಂದು ಬೆಳೆಯಲ್ಲಿ ಹನ್ನೆರಡು ಸಾವಿರ ರೂಪಾಯಿ ಸಿಕ್ಕಿತು. ಆಗದು ದೊಡ್ಡ ಸುದ್ದಿಯಾಯಿತ. ನನ್ನ ಹೆಸರಿನೊಂದಿಗೆ 'ಬದನೆ ಕೆದಿಲಾಯ' ಹೊಸೆಯಿತು ಎಂದು ಬಾಯಿ ತುಂಬಾ ನಕ್ಕ ದಿನಮಾನಗಳು ನೆನಪಾಗುತ್ತದೆ.
                   1980ರಲ್ಲಿ ರಬ್ಬರ್ ಗಿಡಗಳಿಗೆ ಬೇಡಿಕೆ ಶುರು. ಮೂವತ್ತೈದು ಸಾವಿರ ರೂಪಾಯ ಖರ್ಚು ಮಾಡಿ ಜೆಸಿಬಿಯಿಂದ ಜಾಗ ತಟ್ಟು ಮಾಡಿಸಿ ರಬ್ಬರ್ ನರ್ಸರಿ ಶುರು ಮಾಡಿದರು. ಅದರಿಂದ 65000 ರೂಪಾಯಿ ಲಾಭವಾಯಿತು. ನಾವು ಖರ್ಚು ಮಾಡಿದ್ದು ಇದೆಯಲ್ಲಾ, ಅದು ಒಂದು ವರುಷದಲ್ಲಿ ನಮಗೆ ವಾಪಾಸು ಬರಬೇಕು. ಇಂತಹ ಕೆಣಿಗಳನ್ನು ಕೃಷಿಯಲ್ಲಿ ಕಲಿತುಕೊಳ್ಳಬೇಕು. ಆಗ ಮಾತ್ರ ಗೆಲ್ಲುತ್ತೇವೆ ಎನ್ನುವುದು ಕೆದಿಲಾಯರ 'ಕೃಷಿ ಸೂತ್ರ'. 1965ರಿಂದ ಗೇರು ಕಸಿಯತ್ತ ಮನ ಮಾಡಿದ್ದರು.
                  ಆಗಷ್ಟೇ ಕಸಿಯಂತಹ ಹೊಸ ವಿಚಾರಗಳು ಕೃಷಿ ಮೇಳ, ಕೃಷಿ ಕಾರ್ಯಕ್ರಮಗಳಲ್ಲಿ ಸೇರುತ್ತಿದ್ದುವು. ಮಾತುಕತೆಯಲ್ಲೂ ಕಸಿಯದ್ದೇ ವಿಚಾರ. ಒಂದಷ್ಟು ಮಂದಿಗೆ ಕಸಿಯ ಗುಂಗು ಆವರಿಸಿತ್ತು. ಕೆದಿಲಾಯರಿಗೆ ಕಸಿಯ ತರಬೇತಿ ನೀಡಲು ಎಲ್ಲೆಡೆಯಿಂದ ಆಹ್ವಾನ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಸಿಯ ಸೂಕ್ಷ್ಮಗಳ ಪಾಠ ಮಾಡಿದರು. ಕೃಷಿ ಮೇಳ, ಕಾಲೇಜುಗಳಲ್ಲಿ ಉಪನ್ಯಾಸ ಮಾಡಿದರು. ಕಸಿ ಕಟ್ಟುವ ಪ್ರಾಕ್ಟಿಕಲ್ ಕಾರ್ಯಗಾರಗಳಲ್ಲಿ ಭಾಗವಹಿಸಿದರು. ಇದರಿಂದಾಗಿ ಸಾಕಷ್ಟು ಮಂದಿಗೆ ಕಸಿಯ ಒಲವು ಹುಟ್ಟಿತು. ಕೆಲವರು ಸ್ವತಃ ಕಸಿ ಕಟ್ಟಲು ಕಲಿತರು. ನನಗೆ 'ಕಸಿ ಕೆದಿಲಾಯ' ಎನ್ನುವ ಹೆಸರಾಯಿತು, ಖುಷಿಯಿಂದ ಹೇಳುತ್ತಿದ್ದರು.
                    ತಮ್ಮಲ್ಲಿ ಕಸಿ ಮಾವಿನ ಮರ ಫಲ ಬಿಡಲು ಶುರುವಾಗುವಲ್ಲಿಯ ತನಕ ಜನರಿಗೆ ಕಸಿಯ ವಿಚಾರ ಹೇಳಿದರೆ ಏನೋ ಉದಾಸೀನ. ಕಸಿ ಗಿಡ ನೆಡುವವರೂ ಕಡಿಮೆ ಇದ್ದರು. ನರ್ಸರಿಗೆ ಇತರ ಗಿಡಗಳಿಗೆ ಬರುವ ಗಿರಾಕಿಗಳಿಗೆ ಮಾವಿನ ಹಣ್ಣನ್ನು ನೀಡಿ, ಇದು ಕಸಿ ಗಿಡದ ಹಣ್ಣು. ಎಷ್ಟೊಂದು ರುಚಿಯಲ್ವಾ. ನಾಟಿ ತಳಿಗಿಂತ ಕಸಿಯದರಲ್ಲಿ ಫಸಲು ಬಹುಬೇಗ ಬರುತ್ತದೆ. ಒಂದೆರಡು ಗಿಡ ತೆಕ್ಕೊಳ್ಳಿ ಎಂದು ರುಚಿ ತೋರಿಸಿ ಗಿಡ ಮಾರಿದ ಕ್ಷಣಗಳನ್ನು ರೋಚಕವಾಗಿ ಹೇಳುತ್ತಿದ್ದರು.
                       ಕಸಿ ಕಟ್ಟುವ ಜಾಣ್ಮೆ ತಿಳಿಸುವಿರಾ? ಒಮ್ಮೆ ಪ್ರಶ್ನಿಸಿದ್ದೆ. ಒಮ್ಮೆ ಕಸಿ ಕಟ್ಟಲು ನೀವು ಕಲಿತಿರಾ, ಮತ್ತೆಲ್ಲಾ ಗಿಡಗಳಿಗೂ ಮಾಡಬಹುದು. ಒಂದಷ್ಟು ಶ್ರಮ, ಜಾಣ್ಮೆ ಬೇಕಷ್ಟೇ. ಅವೆಲ್ಲಾ ಅನುಭವದಲ್ಲಿ ಬರುವಂಥದ್ದು. ಹಲಸಿಗೆ ಕಸಿ ಕಷ್ಟ. ಅದು ಬಹಳ ಸೂಕ್ಷ್ಮತೆಯನ್ನು ಬೇಡುತ್ತದೆ. ಈ ಭಾಗದಲ್ಲಿ ಮೊದಲು ಹಲಸಿನ ಗಿಡಗಳಿಗೆ ಕಸಿ ಕಟ್ಟಿ ಯಶಸ್ಸಾಗಿದ್ದೇನೆ, ಎಂದು ಉತ್ತರಿಸಿದ್ದರು. ಚಿಕ್ಕು, ರಬ್ಬರ್, ಗುಲಾಬಿ, ಮಾವು, ಹಲಸು.. ಹೀಗೆ ಎಲ್ಲದಕ್ಕೂ ಕಸಿಯ ಟಚ್.
                 ನೆಟ್ಟ ಕಸಿ ಗಿಡ ಸತ್ತುಹೋದರೆ ಅಷ್ಟಕ್ಕೇ ಬಿಡಬಾರದು. ಇನ್ನೊಂದು ಗಿಡ ನೆಟ್ಟು ಪೋಷಿಸಬೇಕು - ಕೆದಿಲಾಯರ ಕಿವಿಮಾತು. ಮಕ್ಕಳೆಲ್ಲಾ ತಂದೆಯವರ ಜತೆಗಿದ್ದು, ಕಲಿತು, ಈಗ ಕಸಿಯ ಎಲ್ಲಾ ಮಗ್ಗುಲುಗಳಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ತಜ್ಞತೆ ರೂಢಿಸಿಕೊಂಡಿದ್ದಾರೆ. ತಮ್ಮ ನರ್ಸರಿಯಲ್ಲಿ ಸ್ವತಃ ಕಸಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಭೇಟಿ ಮಾಡಿದ ನೆನಪನ್ನು ಕೃಷಿಕ ವಸಂತ ಕಜೆ ಜ್ಞಾಪಿಸಿಕೊಂಡರು, ಕೆದಿಲಾಯರದು ಅಡೆತಡೆಯಿಲ್ಲದ, ಅನುಭವಜನ್ಯ ಮಾತುಗಾರಿಕೆ. ಅವರಾಡುವುದರ ಬಗ್ಗೆ ಅವರಿಗೆ ಸಂಶಯವೇ ಇರಲಿಲ್ಲ. ಲಾಭನಷ್ಟಗಳನ್ನು ಅಂಕೆ-ಸಂಖ್ಯೆಗಳ ಸಹಿತ ವಿವರಿಸುತ್ತಿದ್ದರು. ನಂಬಿಕೊಂಡ ಮೌಲ್ಯಗಳ ಜತೆ ರಾಜಿ ಮೋಡಿಕೊಂಡು ದುಡ್ಡ ಸಂಪಾದನೆ ಮಾಡಿದಂತಿಲ್ಲ.
            'ಉತ್ಸಾಹವೇ ಧನ, ಉದಾಸೀನವೇ ದಾರಿದ್ರ್ಯ' ನಾರಾಯಣ ಕೆದಿಲಾಯರ ಅನುಭವ. ತಾನು ಅನುಭವಿಸಿದ ಬದುಕಿನ ಸತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿ. ಈ ಖುಷಿಯ ಭಾವ ಇನ್ನು ನೆನಪು ಮಾತ್ರ. ಅವರ ಚಿರಂಜೀವಿಗಳು ಕೃಷಿಯನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮಣ್ಣಿನೊಂದಿಗಿರುವುದು ಇದೆಯಲ್ಲಾ, ಅದು ಕೆದಿಲಾಯರು ನಂಬಿದ ಸತ್ಯಗಳಿಗೆ ಸಲ್ಲುವ ಮಾನ-ಸಂಮಾನ.Addl Information : Vasanthe Kaje
Published in Udayavani/Nelada Nadi Coloum1 comments:

ನೂತನ ಎಚ್ ಬಿ said...

ಈ ಅಜ್ಜನ ಕತೆ ಕೇಳಿದ ಮೇಲೆ ಕೃಷಿ ಮಾಡುವ ಅನ್ನಿಸ್ತಿದೆ ... ಖಾಲಿ ಜಾಗ ಇದೆಯಾ

Post a Comment