Thursday, December 27, 2018

ಮೊಂಟೆಪದವು ಲಕ್ಷ್ಮೀ ಪರಮೇಶ್ವರ ಕಾರಂತ ವಿಧಿವಶ


           ಬಂಟ್ವಾಳ ತಾಲೂಕಿನ ಮೊಂಟೆಪದವು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ 'ಲಕ್ಷ್ಮೀ ಟೀಚರ್' ಎಂದೇ ಪರಿಚಿತರಾಗಿದ್ದ ಲಕ್ಷ್ಮೀ ಪರಮೇಶ್ವರ ಕಾರಂತ (79) ಇವರು 2018 ದಶಂಬರ 25ರಂದು ವಿಧಿವಶರಾದರು. ಲಿಂಗನಾಥ, ವಾಸುದೇವ, ಶ್ರೀಕುಮಾರ್.. ಮೂವರು ಪುತ್ರರು, ಬಂಧುಗಳನ್ನು ಅಗಲಿದ್ದಾರೆ. ಈಚೆಗೆ ಕೆಲವು ವರುಷಗಳಿಂದ ಪುಣಚ ಸನಿಹದ ಅಜ್ಜಿನಡ್ಕದ 'ಓಂಕಾರಮೂಲೆ'ಯಲ್ಲಿ ವಾಸವಾಗಿದ್ದರು.
          ಮೊಂಟೆಪದವು ಶಾಲೆಯಲ್ಲಿ ಪತಿ ಪರಮೇಶ್ವರ ಕಾರಂತರೊಂದಿಗೆ ಗ್ರಾಮೀಣ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ದಂಪತಿಗಳದ್ದು. ಜಾತಿ, ಮತ, ಬೇಧವಿಲ್ಲದೆ ಸಾಮಾನವಾಗಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸಂಸ್ಕಾರ ಪಥದಲ್ಲಿ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿದ್ದರು. ಇವರಿಗೆ ಶಾಲೆಯೂ, ಮನೆಯೂ ಒಂದೇ ಆಗಿತ್ತು. ವ್ಯಾಪಕವಾದ ಸಾರ್ವಜನಿಕ ಸಂಪರ್ಕವಿತ್ತು. ರಜೆ, ಗಂಟೆ, ವೈಯಕ್ತಿಕವಾದ ಸುಖ-ದುಃಖಗಳನ್ನು ನೋಡದ ದುಡಿತ.
             ಲಕ್ಷ್ಮೀ ಕಾರಂತರಿಗೆ ಸಾಹಿತ್ಯ ಅಸಕ್ತಿ ಆಪಾರ. ಕವನ, ಹಾಡುಗಳನ್ನು ಬರೆಯುವುದು ಹವ್ಯಾಸ. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಹುರಿದುಂಬಿಸುತ್ತಿದ್ದರು. ಶಾಲಾ ವಾರ್ಶಿಕೋತ್ಸವಗಳ ಸಂದರ್ಭಗಳಲ್ಲಿ ಪ್ರತಿ ವರುಷ ಹೊಸತನ್ನು ಅಳವಡಿಸಿಕೊಂಡು ಜನಾನುರಾಗಿಯಾಗಿದ್ದರು. 'ಶಾಲೆಯ ಅಧ್ಯಾಪಕ ಒಂದು ಊರಿನ ಕಣ್ಣುಗಳಿದ್ದಂತೆ' ಎನ್ನುವ ಹಿರಿ ಮಾತನ್ನು ಅನುಷ್ಠಾನಿಸಿದ ನೆಗಳ್ತೆ ಇವರದು.
            ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಲ್ಲಿ ವಿಶೇಷಾಸಕ್ತಿ. ಅತಿಥಿಯ ಹೊಟ್ಟೆ ತುಂಬಿದಾಗ ಖುಷಿ ಪಡುವ ಗೃಹಿಣಿ. 2012ರಲ್ಲಿ ಪರಮೇಶ್ವರ ಕಾರಂತರು ವಿಧಿವಶರಾಗಿದ್ದರು. ಆ ಬಳಿಕ ಲಕ್ಷ್ಮೀ ಕಾರಂತರ ದೈಹಿಕವಾಗಿ ಕುಸಿದಿದ್ದರು. ಕಳೆದ ಆರು ವರುಷಗಳಲ್ಲಿ ಸಕ್ರಿಯತೆ ಕೈಕೊಟ್ಟಿತ್ತು.

Sunday, December 16, 2018

‘ಅಗುಳು’ ಕೃತಿಯ ಲೋಕಾರ್ಪಣೆ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶ್ರೀ ಮುಳಿಯ ಜಯಶಂಕರ ಶರ್ಮರು ನನ್ನ ‘ಅಗುಳು’ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಇದು  ಉದಯವಾಣಿ ಅಂಕಣ ಬರಹ ‘ನೆಲದ ನಾಡಿ’ಯ ಸಂಕಲನ. 16 ದಶಂಬರ 2018ರಂದು ಪುತ್ತೂರು ಟೌನ್ ಬ್ಯಾಂಕಿನ ಸಭಾಭವನದಲ್ಲಿ ಲೋಕಾರ್ಪಣೆ. ಕ.ಸಾ.ಪ. ಪುತ್ತೂರು ಘಟಕದ ಬಿ.ಐತ್ತಪ್ಪ ನಾಯ್ಕರ ಅಧ್ಯಕ್ಷತೆ. ಜ್ಞಾನಗಂಗಾ ಪುಸ್ತಕ ಮಳಿಗೆಯ ಶ್ರೀ ಪ್ರಕಾಶ ಕುಮಾರ್ ಕೊಡೆಂಕಿರಿ ಉಪಸ್ಥಿತಿ.

Tuesday, December 11, 2018

ಶ್ರೀನಿವಾಸ ರಾವ್ - ಸಾವಿತ್ರಿ ದಂಪತಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ


                ಕನ್ನಡ ಸಾಹಿತ್ಯ ಪರಿಚಾರಕರು ಮತ್ತು ಮಕ್ಕಳಲ್ಲಿ ಅಕ್ಷರಪ್ರೀತಿ ಮೂಡಿಸುವ ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿ ಇವರು ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ದಶಂಬರ 15, ಶನಿವಾರ ಸಂಜೆ 5-00ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
                ಸಮಾರಂಭದ ಅಧ್ಯಕ್ಷತೆಯನ್ನು ರಾಜೇಶ್ ಪವರ್ ಪ್ರೆಸ್ಸಿನ ಶ್ರೀ ಎಂಎಸ್.ರಘುನಾಥ್ ರಾವ್ ವಹಿಸಲಿದ್ದಾರೆ. ನ್ಯಾಯವಾದಿ ಶ್ರೀ ಕೆ.ಆರ್.ಆಚಾರ್ಯರು ಬೋಳಂತಕೋಡಿಯವರ ಸ್ಮೃತಿ ನಮನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಶ್ರೀಮತಿ ಸುಮಂಗಲಾ ರತ್ನಾಕರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಬಿ.ಐತ್ತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಮತ್ತು ಕು.ಗೋ.ಉಡುಪಿ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದಶಂಬರ 14ರಿಂದ 16 ತನಕ ದಿನಪೂರ್ತಿ 'ಪುಸ್ತಕ ಹಬ್ಬ' ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.
                ಪ್ರಶಸ್ತಿ ಪುರಸ್ಕೃತರ ಪರಿಚಯ : ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿಗಳಿಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಕನ್ನಡ ಕಾಯಕ. ಬದಲಾದ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅಕ್ಷರಪ್ರೀತಿಯು ಮರೀಚಿಕೆಯಾಗಿದ್ದು, ಶಿಕ್ಷಣದ ಅಡಿಗಟ್ಟು ಪ್ರಾಥಮಿಕ-ಪ್ರೌಢ ಶಿಕ್ಷಣದಲ್ಲಿರುವುದನ್ನು ಮನಗಂಡ ಇವರು ವಿದ್ಯಾರ್ಥಿಗಳಿಗಾಗಿ ಕಥೆ, ಕವನಗಳ ಸಂಕಲನ; ಸಾಹಿತ್ಯಾಭಿರುಚಿ ಮತ್ತು ಓದುವ ಹವ್ಯಾಸವನ್ನು ರೂಢಿಸುವ ಸಾಹಿತ್ಯ ಶಿಬಿರಗಳು, ಮಕ್ಕಳ ಪ್ರತಿಭೆಗಳ ಮುಖವಾಗಿರುವ ಶಾಲಾ ಸಂಚಿಕೆಗಳ ಸ್ಪರ್ಧೆ,  ಮಕ್ಕಳ ಸಾಹಿತಿಗಳಿಗೆ ಪ್ರೋತ್ಸಾಹ, ಕವಿ ಕಾವ್ಯ ಗಾಯನ, ಮಕ್ಕಳ ನಾಟಕೋತ್ಸವ, ಮಕ್ಕಳ ಮೇಳ, ಮಕ್ಕಳ ಸಾಹಿತ್ಯ ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಹೀಗೆ ಅನ್ಯಾನ್ಯ ಕಲಾಪಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 'ಮಕ್ಕಳು, ಮಕ್ಕಳಿಗಾಗಿ, ಮಕ್ಕಳೇ' ಮಾಡುವ 'ಮಕ್ಕಳ ಧ್ವನಿ' ತುಂಬು ಯಶ ಪಡೆದ ಕಾರ್ಯಕ್ರಮ. ದಶಕದೀಚೆಗೆ ಅವರ ಮನೆಯಲ್ಲಿ ಅಕ್ಷರಗಳು ಕುಣಿದಾಡುತ್ತಿವೆ! ಮಕ್ಕಳೊಂದಿಗೆ ಬೆರೆವ ಶ್ರೀನಿವಾಸ ರಾವ್ ದಂಪತಿಗಳು ಮಕ್ಕಳ ಮನಸ್ಸಿನೊಂದಿಗೆ ಸದಾ ಅನುಸಂಧಾನ ಮಾಡುತ್ತಿರುವ ಅಧ್ಯಾಪಕರು. ಇವರ ಇಳಿ ವಯಸ್ಸಿನ ಕಾಯಕದಲ್ಲಿ ಯುವಕರನ್ನು ನಾಚಿಸುವ ಕ್ರಿಯಾಶೀಲತೆಯಿದೆ.

Thursday, December 6, 2018

‘ಅಡಿಕೆ ಕೌಶಲ್ಯ ಪಡೆ’ ಶಿಬಿರ



ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಿಪಿಸಿಆರ್ ಐ ಆವರಣದಲ್ಲಿ ‘ಅಡಿಕೆ ಕೌಶಲ್ಯ ಪಡೆ’ ಶಿಬಿರವು ದಶಂಬರ 5ರಂದು ಶುಭಚಾಲನೆಗೊಂಡಿತು. ಸಂಸದ ನಳಿನ್ ಕುಮಾರ್ ಕಟೀಲರು ಉದ್ಘಾಟನೆ ಮಾಡಿದರು. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ‍್ವವಿದ್ಯಾನಿಲಯದ ಕುಲಪತಿ ಡಾ. ಮಂಜುನಾಥ ಕೆ. ನಾಯ್ಕ್ ಅಧ‍್ಯಕ್ಷತೆ ವಹಿಸಿದ್ದರು. ಶಿಬಿರವು ದಶಂಬರ 5 ರಿಂದ 9ರ ತನಕ ನಡೆಯಲಿದೆ. ಮೂವತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ‘ಜೀವ ರಕ್ಷೆಯ ಜೀವ ವಿಮೆ’ ವೀಡೀಯೋವನ್ನು ಶಾಸಕ ಸಂಜೀವ ಮಠಂದೂರು ಅನಾವರಣಗೊಳಿಸಿದರು. ವೀಡಿಯೋವನ್ನು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ಪ್ರಸಾದ್ ಬಲ್ನಾಡ್ ನಿರ್ಮಾಣ ಮಾಡಿದ್ದಾರೆ.
ಶಿಬಿರಕ್ಕೆ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಹಯೋಗ.

Sunday, November 18, 2018

ಓದುವ ಗೀಳು ತಂದ 'ಚಂದಮಾಮ'

 
ಯಾಕೋ.. ಶಾಲಾ ದಿನಗಳಿಂದಲೇ ಪುಸ್ತಕದ ಗೀಳು. ಇದಕ್ಕೆ ಕಾರಣ ಪ್ರಾಥಮಿಕ ಶಾಲೆಯಲ್ಲಿದ್ದ ಚಿಕ್ಕ ಗ್ರಂಥಾಲಯ. ತಿಂಗಳಿಗೆ ಎರಡು ಬಾರಿ ನೀಡುತ್ತಿದ್ದ ಪುಸ್ತಕದ ಓದು. ಕೃಷ್ಣಪ್ಪ ಮಾಸ್ತರರ ಒತ್ತಾಸೆ. ಓದದೆ ಕಲಿಯುವುದೇನನ್ನು ಎಂದು ಓದದ ಸಹಪಾಠಿಗಳಿಗೆ ಬೆತ್ತದ ರುಚಿ ತೋರಿಸಿದ ಆ ದಿನಗಳು ಮರೆಯುವುದಿಲ್ಲ. 

ಹೈಸ್ಕೂಲ್ ಓದುತ್ತಿದ್ದಾಗ ಚಂದಮಾಮ, ಬಾಲಮಿತ್ರ, ಚುಟುಕ.. ಮೊದಲಾದ ನಿಯತಕಾಲಿಕಗಳತ್ತ ಆಸಕ್ತಿ ಹೆಚ್ಚಾಯಿತು. ಒಂದೇ 'ಧಮ್ಮಿನಲ್ಲಿ' ಎಲ್ಲಾ ಪುಟಗಳನ್ನು ಓದುವ ತವಕ, ಚಪಲ. ಕೆಲವೊಮ್ಮೆ ಪತ್ರಿಕೆಗಳಲ್ಲಿ 'ಉಚಿತ ಪುಸ್ತಕಗಳಿಗೆ ಬರೆಯಿರಿ' ಎನ್ನುವ ಜಾಹೀರಾತುಗಳು ಆಸಕ್ತಿದಾಯಕವಾಗಿರುತ್ತಿತ್ತು. ಹೀಗೆ ಪಡೆದ ಪುಸ್ತಕಗಳು ಕೈ ಸೇರಿದಾಗ ನಿರಾಶೆ! 

 ಸುಳ್ಯ ಸನಿಹದ ಪೆರಾಜೆಯು ಒಂದು ಕಾಲಘಟ್ಟದಲ್ಲಿ ತ್ರಿಶಂಕು ಗ್ರಾಮ! ಆಚೆ ಕೊಡಗಿಗೂ ಬೇಡ, ಇತ್ತ ದಕ್ಷಿಣ ಕನ್ನಡವೂ ಸ್ವೀಕರಿಸದ ಹಳ್ಳಿ. ಕೊಡಗಿನ ಭೂಪಟದಲ್ಲಿ ಚಿಕ್ಕ ಬಾಲ! ವಿದ್ಯುತ್ ಶುಲ್ಕ ಪಾವತಿಸಲೂ ದೂರದ ಮಡಿಕೇರಿಗೆ ಹೋಗಬೇಕಾಗಿತ್ತು. ಈಗ ಗ್ರಾಮ ಬೆಳೆದಿದೆ. ಶೈಕ್ಷಣಿಕವಾಗಿ ಮುಂದಿದೆ. ಸೌಕರ್ಯಗಳೆಲ್ಲಾ ಬಂದಿವೆ. 

ಅಂಚೆ ಕಚೇರಿಯ ಪಕ್ಕ ಅಂಚೆ ಮಾಸ್ತರರ ಅಂಗಡಿಯಿತ್ತು. ಅವರು ಯಕ್ಷಗಾನ ಪ್ರಿಯರು. ವೈಯಕ್ತಿಕವಾಗಿ ಹಿತರು. ಅಂಗಡಿಯು ಊರಿನ ಆಗುಹೋಗುಗಳ ಕೇಂದ್ರ! ಅಲ್ಲಿಗೆ ಯಾರೆಲ್ಲಾ ಬರುತ್ತಾರೆ ಎಂದು ಅಂಚೆಯಣ್ಣನಿಗೆ ಗೊತ್ತು. ಅವರು ಪೆಟ್ಟಿಗೆಯೊಂದರಲ್ಲಿ ಅಂಚೆಯನ್ನು ಹಾಕಿಡುತ್ತಿದ್ದರು. ಸಂಬಂಧಪಟ್ಟವರು ಒಯ್ಯುತ್ತಿದ್ದರು. 

ತಂದೆಯ ಆಪ್ತರೊಬ್ಬರು ಚಂದಮಾಮದ ಚಂದಾದಾರರು. ತಿಂಗಳಿಗೊಮ್ಮೆ ಅವರ ಮನೆಗೆ ಹೋಗಿ ಓದುತ್ತಿದ್ದೆ. ಪತ್ರಿಕೆ ಖರೀದಿಸಲು ಆರ್ಥಿಕ ಶಕ್ತಿಯಿಲ್ಲದ ಕಾಲ. ಅಂದು ಅಂಚೆಯಲ್ಲಿ ಬಂದ ಚಂದಮಾಮ ಪುಸ್ತಕವನ್ನು ಬಿಡಿಸಿ ಕುಳಿತು ಓದುತ್ತಿದ್ದೆ. ಇನ್ನೊಬ್ಬರ ಹೆಸರಿಗೆ ಬಂದ ಅಂಚೆಯನ್ನು ಒಡೆಯುವುದು ತಪ್ಪೆಂದು ಗೊತ್ತಿತ್ತು. ಆದರೆ ಓದುವ ಚಟ ಹಾಗೆ ಮಾಡಿಸಿತ್ತು.
ಸ್ವಲ್ಪ ಹೊತ್ತಾಗಿರಬಹುಷ್ಟೇ. ತನಗೆ ಬಂದ ಅಂಚೆಯನ್ನು ಒಯ್ಯಲು ಆ ಅಪ್ತರು ಬಂದರು. ತಕ್ಷಣ ಪುಸ್ತಕವನ್ನು ನೀಡಿದೆ. ಅಲ್ಲಿದ್ದ ಪ್ರತಿಷ್ಠಿತ ವ್ಯಕ್ತಿಯೋರ್ವ, ಹಣ ಕೊಟ್ಟು ಪುಸ್ತಕ ಪರ್ಚೇಸ್ ಮಾಡುವ ಯೋಗ್ಯತೆ ಇಲ್ಲದಿದ್ದ ಮೇಲೆ ಓದುವ ದೊಡ್ಡಸ್ತಿಕೆ ಯಾಕೆ? ನಾಚಿಕೆಯಾಗುವುದಿಲ್ವಾ. ಅನ್ನಬೇಕೇ? ತಲೆ ತಗ್ಗಿಸಿ ಮರಳಿದೆ. 

ಚುಚ್ಚು ಮಾತುಗಳು ಚುಚ್ಚಿತು. ಬಹುಕಾಲ ಚುಚ್ಚುತ್ತಿದ್ದುವು. ತುತ್ತಿಗೂ ತತ್ವಾರವಿದ್ದರೂ 'ಯೋಗ್ಯತೆ'ಯ ಕುರಿತು ತುಂಬಾ ಹಗುರವಾಗಿ ಮಾತನಾಡಿದ್ದರಿಂದ ನೋವು ಅನುಭವಿಸಿದ್ದೆ. ಬಳಿಕ ಐದಾರು ತಿಂಗಳು ಓದುವಿಕೆಗೆ ಸ್ವ-ಘೋಷಿತ ರಜೆ! ಆ ಆಪ್ತರಿಗೆ ಯಾಕೋ ಸಂಶಯ ಬಂದು ಅಷ್ಟೂ ತಿಂಗಳ ಪುಸ್ತಕವನ್ನು ತಂದು ಕೊಟ್ಟರು. 

ಹೈಸ್ಕೂಲ್ ವಿದ್ಯಾಭ್ಯಾಸಕ್ಕಾಗಿ ಪೆರಾಜೆಯಿಂದ ಸುಳ್ಯಕ್ಕೆ ಐದಾರು ಕಿಲೋಮೀಟರ್ ನಿತ್ಯ ಬಸ್ ಪ್ರಯಾಣ. ಬಹುಶಃ ಎರಡೋ ಮೂರು ರೂಪಾಯಿ ಟಿಕೇಟ್. ಹಳೆಯ ಚಂದಮಾಮದ ಸಂಚಿಕೆಗಳು ಅಣಕಿಸುತ್ತಿದ್ದುವು.  ಓದದೆ ಚಡಪಡಿಕೆ. ಮನೆಯಲ್ಲಿ ಹಣ ಕೊಡುವ ಸ್ಥಿತಿಯಿದ್ದಿರಲಿಲ್ಲ. ವಾರದ ಕೊನೆಗೆ ಸುಳ್ಯದಿಂದ ಪೆರಾಜೆಗೆ ಕಾಲ್ನಡಿಗೆ ಜಾಥಾ! ಬಸ್ಸಿನ ಹಣವನ್ನು ಉಳಿಸುತ್ತಿದ್ದೆ. ಅದರಲ್ಲಿ ಚಂದಮಾಮ ಖರೀದಿಸಿ ಓದಲು ಶುರು ಮಾಡಿದೆ. 

ಮೊದಲು ಹಣ ನೀಡಿ ಖರೀದಿಸಿದ ಚಂದಮಾಮದ ಪುಟಗಳಲ್ಲಿ ಕೀಳಾಗಿ, ಹಗುರವಾಗಿ ಮಾತನಾಡಿದರ ಮುಖವೇ ಕಾಣುತ್ತಿತ್ತು. ಮತ್ತೆಂದೂ ಪುಕ್ಕಟೆಯಾಗಿ ಪತ್ರಿಕೆಯನ್ನೋ, ನಿಯತಕಾಲಿಕೆಯನ್ನು ಓದಿಲ್ಲ. ಕೊಂಡು ಓದುವ 'ಯೋಗ್ಯತೆ' ಬಂತು! ನಂತರದ ದಿವಸಗಳಲ್ಲಿ ಒಂದೆರಡು ದಿನಪತ್ರಿಕೆಗಳು ಸಾಥ್ ಆದುವು.  
 
ಹೀಗೆ ರೂಢನೆಯಾದ 'ಕೊಂಡು ಓದುವ' ಹುಚ್ಚು ಅಧರ್ಾಯುಷ್ಯ ದಾಟಿದರೂ ನಿಂತಿಲ್ಲ!  ಅವರ ಚುಚ್ಚು ಮಾತುಗಳು ಆಸಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಯಿತೇನೋ ಹೌದು. ಆದರೆ ಬದುಕಿನಲ್ಲಿ 'ಮಮರ್ಾಘಾತ' ಮಾಡುವಂತಹ ವ್ಯಕ್ತಿಗಳು 'ಹಿತರ' ಸೋಗಿನಲ್ಲಿ ಈಗಲೂ ಇದ್ದಾರೆ. ನಿತ್ಯ ಗೆಜಲುತ್ತಾ ಇರುವುದು ಇಂತಹವರ ಸ್ವಭಾವ. ಅವರು ಕೊಡುವ, ಕೊಟ್ಟ ನೋವು ಫಕ್ಕರೆ ಆರುವುದಿಲ್ಲ.   

          ಹೀಗೆ ಶುರುವಾದ ಪುಸ್ತಕದ ಹುಚ್ಚು ನಿಜಾರ್ಥದ ಹುಚ್ಚಾಗಿ ಪರಿಣಾಮಿಸಿತು. ಚಿಕ್ಕ ಪುಸ್ತಕ ಭಂಡಾರದ ಹುಟ್ಟಿಗೂ ಕಾರಣವಾಯಿತು. (ಲೇಖನದ ಜತೆಗಿರುವ ಚಂದಮಾಮ ಮುಖಚಿತ್ರ  1954 ನವೆಂಬರ ತಿಂಗಳ ಸಂಚಿಕೆಯದ್ದು. ಜಾಲತಾಣ ಕೃಪೆ) 

ಸುದ್ದಿ ಬಿಡುಗಡೆ / ಊರುಸೂರು 7 / 21-10-2018