Thursday, December 27, 2018

ಮೊಂಟೆಪದವು ಲಕ್ಷ್ಮೀ ಪರಮೇಶ್ವರ ಕಾರಂತ ವಿಧಿವಶ


           ಬಂಟ್ವಾಳ ತಾಲೂಕಿನ ಮೊಂಟೆಪದವು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದ 'ಲಕ್ಷ್ಮೀ ಟೀಚರ್' ಎಂದೇ ಪರಿಚಿತರಾಗಿದ್ದ ಲಕ್ಷ್ಮೀ ಪರಮೇಶ್ವರ ಕಾರಂತ (79) ಇವರು 2018 ದಶಂಬರ 25ರಂದು ವಿಧಿವಶರಾದರು. ಲಿಂಗನಾಥ, ವಾಸುದೇವ, ಶ್ರೀಕುಮಾರ್.. ಮೂವರು ಪುತ್ರರು, ಬಂಧುಗಳನ್ನು ಅಗಲಿದ್ದಾರೆ. ಈಚೆಗೆ ಕೆಲವು ವರುಷಗಳಿಂದ ಪುಣಚ ಸನಿಹದ ಅಜ್ಜಿನಡ್ಕದ 'ಓಂಕಾರಮೂಲೆ'ಯಲ್ಲಿ ವಾಸವಾಗಿದ್ದರು.
          ಮೊಂಟೆಪದವು ಶಾಲೆಯಲ್ಲಿ ಪತಿ ಪರಮೇಶ್ವರ ಕಾರಂತರೊಂದಿಗೆ ಗ್ರಾಮೀಣ ಶಾಲೆಯೊಂದನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ದಂಪತಿಗಳದ್ದು. ಜಾತಿ, ಮತ, ಬೇಧವಿಲ್ಲದೆ ಸಾಮಾನವಾಗಿ ಶಾಲೆಯನ್ನು, ವಿದ್ಯಾರ್ಥಿಗಳನ್ನು ಸಂಸ್ಕಾರ ಪಥದಲ್ಲಿ ಮುನ್ನಡೆಸಿದ್ದರು. ವಿದ್ಯಾರ್ಥಿಗಳ ನೆಚ್ಚಿನ ಅಧ್ಯಾಪಕರಾಗಿದ್ದರು. ಇವರಿಗೆ ಶಾಲೆಯೂ, ಮನೆಯೂ ಒಂದೇ ಆಗಿತ್ತು. ವ್ಯಾಪಕವಾದ ಸಾರ್ವಜನಿಕ ಸಂಪರ್ಕವಿತ್ತು. ರಜೆ, ಗಂಟೆ, ವೈಯಕ್ತಿಕವಾದ ಸುಖ-ದುಃಖಗಳನ್ನು ನೋಡದ ದುಡಿತ.
             ಲಕ್ಷ್ಮೀ ಕಾರಂತರಿಗೆ ಸಾಹಿತ್ಯ ಅಸಕ್ತಿ ಆಪಾರ. ಕವನ, ಹಾಡುಗಳನ್ನು ಬರೆಯುವುದು ಹವ್ಯಾಸ. ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳನ್ನು ಸಾಹಿತ್ಯದತ್ತ ಹುರಿದುಂಬಿಸುತ್ತಿದ್ದರು. ಶಾಲಾ ವಾರ್ಶಿಕೋತ್ಸವಗಳ ಸಂದರ್ಭಗಳಲ್ಲಿ ಪ್ರತಿ ವರುಷ ಹೊಸತನ್ನು ಅಳವಡಿಸಿಕೊಂಡು ಜನಾನುರಾಗಿಯಾಗಿದ್ದರು. 'ಶಾಲೆಯ ಅಧ್ಯಾಪಕ ಒಂದು ಊರಿನ ಕಣ್ಣುಗಳಿದ್ದಂತೆ' ಎನ್ನುವ ಹಿರಿ ಮಾತನ್ನು ಅನುಷ್ಠಾನಿಸಿದ ನೆಗಳ್ತೆ ಇವರದು.
            ಮನೆಗೆ ಬಂದ ಅತಿಥಿಗಳನ್ನು ಆದರಿಸುವುದರಲ್ಲಿ ವಿಶೇಷಾಸಕ್ತಿ. ಅತಿಥಿಯ ಹೊಟ್ಟೆ ತುಂಬಿದಾಗ ಖುಷಿ ಪಡುವ ಗೃಹಿಣಿ. 2012ರಲ್ಲಿ ಪರಮೇಶ್ವರ ಕಾರಂತರು ವಿಧಿವಶರಾಗಿದ್ದರು. ಆ ಬಳಿಕ ಲಕ್ಷ್ಮೀ ಕಾರಂತರ ದೈಹಿಕವಾಗಿ ಕುಸಿದಿದ್ದರು. ಕಳೆದ ಆರು ವರುಷಗಳಲ್ಲಿ ಸಕ್ರಿಯತೆ ಕೈಕೊಟ್ಟಿತ್ತು.

0 comments:

Post a Comment