Tuesday, December 11, 2018

ಶ್ರೀನಿವಾಸ ರಾವ್ - ಸಾವಿತ್ರಿ ದಂಪತಿಗೆ ಬೋಳಂತಕೋಡಿ ಕನ್ನಡ ಪ್ರಶಸ್ತಿ


                ಕನ್ನಡ ಸಾಹಿತ್ಯ ಪರಿಚಾರಕರು ಮತ್ತು ಮಕ್ಕಳಲ್ಲಿ ಅಕ್ಷರಪ್ರೀತಿ ಮೂಡಿಸುವ ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿ ಇವರು ಸಾಲಿನ 'ಬೋಳಂತಕೋಡಿ ಕನ್ನಡ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ. ದಶಂಬರ 15, ಶನಿವಾರ ಸಂಜೆ 5-00ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಪುತ್ತೂರಿನ 'ಬೋಳಂತಕೋಡಿ ಅಭಿಮಾನಿ ಬಳಗ'ವು ಆಯೋಜಿಸುವ ಸಮಾರಂಭದಲ್ಲಿ ಪುತ್ತೂರು ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಬೋಳಂತಕೋಡಿ ಈಶ್ವರ ಭಟ್ಟರ ಸಂಸ್ಮರಣೆ ನಡೆಯಲಿದೆ.
                ಸಮಾರಂಭದ ಅಧ್ಯಕ್ಷತೆಯನ್ನು ರಾಜೇಶ್ ಪವರ್ ಪ್ರೆಸ್ಸಿನ ಶ್ರೀ ಎಂಎಸ್.ರಘುನಾಥ್ ರಾವ್ ವಹಿಸಲಿದ್ದಾರೆ. ನ್ಯಾಯವಾದಿ ಶ್ರೀ ಕೆ.ಆರ್.ಆಚಾರ್ಯರು ಬೋಳಂತಕೋಡಿಯವರ ಸ್ಮೃತಿ ನಮನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕುರಿತು ಶ್ರೀಮತಿ ಸುಮಂಗಲಾ ರತ್ನಾಕರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷ ಶ್ರೀ ಬಿ.ಐತ್ತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಬೋಳಂತಕೋಡಿ ಕನ್ನಡ ಪ್ರಶಸ್ತಿಯನ್ನು ಹಿಂದಿನ ವರುಷಗಳಲ್ಲಿ ಪಳಕಳ ಸೀತಾರಾಮ ಭಟ್, ಸಿದ್ಧಮೂಲೆ ಶಂಕರನಾರಾಯಣ ಭಟ್ (ದಿ.), ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ(ದಿ.) ಹರೇಕಳ ಹಾಜಬ್ಬ, ಕುಂಞಿಹಿತ್ಲು ಸೂರ್ಯನಾರಾಯಣ ಭಟ್, ಕವಯಿತ್ರಿ ನಿರ್ಮಲಾ ಸುರತ್ಕಲ್ ಮತ್ತು ಕು.ಗೋ.ಉಡುಪಿ ಇವರಿಗೆ ಪ್ರದಾನಿಸಲಾಗಿದೆ.
ಪುಸ್ತಕ ಹಬ್ಬ : ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ದಶಂಬರ 14ರಿಂದ 16 ತನಕ ದಿನಪೂರ್ತಿ 'ಪುಸ್ತಕ ಹಬ್ಬ' ಜರುಗಲಿದ್ದು ಪುಸ್ತಕ ಪ್ರದರ್ಶನ-ಮಾರಾಟ ವ್ಯವಸ್ಥೆಯಿದೆ.
                ಪ್ರಶಸ್ತಿ ಪುರಸ್ಕೃತರ ಪರಿಚಯ : ಮಂಗಳೂರಿನ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್.ರಾವ್ ದಂಪತಿಗಳಿಗೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುವ ಕನ್ನಡ ಕಾಯಕ. ಬದಲಾದ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಅಕ್ಷರಪ್ರೀತಿಯು ಮರೀಚಿಕೆಯಾಗಿದ್ದು, ಶಿಕ್ಷಣದ ಅಡಿಗಟ್ಟು ಪ್ರಾಥಮಿಕ-ಪ್ರೌಢ ಶಿಕ್ಷಣದಲ್ಲಿರುವುದನ್ನು ಮನಗಂಡ ಇವರು ವಿದ್ಯಾರ್ಥಿಗಳಿಗಾಗಿ ಕಥೆ, ಕವನಗಳ ಸಂಕಲನ; ಸಾಹಿತ್ಯಾಭಿರುಚಿ ಮತ್ತು ಓದುವ ಹವ್ಯಾಸವನ್ನು ರೂಢಿಸುವ ಸಾಹಿತ್ಯ ಶಿಬಿರಗಳು, ಮಕ್ಕಳ ಪ್ರತಿಭೆಗಳ ಮುಖವಾಗಿರುವ ಶಾಲಾ ಸಂಚಿಕೆಗಳ ಸ್ಪರ್ಧೆ,  ಮಕ್ಕಳ ಸಾಹಿತಿಗಳಿಗೆ ಪ್ರೋತ್ಸಾಹ, ಕವಿ ಕಾವ್ಯ ಗಾಯನ, ಮಕ್ಕಳ ನಾಟಕೋತ್ಸವ, ಮಕ್ಕಳ ಮೇಳ, ಮಕ್ಕಳ ಸಾಹಿತ್ಯ ವಿಚಾರಗೋಷ್ಠಿ, ಪುಸ್ತಕ ಪ್ರದರ್ಶನ ಹೀಗೆ ಅನ್ಯಾನ್ಯ ಕಲಾಪಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 'ಮಕ್ಕಳು, ಮಕ್ಕಳಿಗಾಗಿ, ಮಕ್ಕಳೇ' ಮಾಡುವ 'ಮಕ್ಕಳ ಧ್ವನಿ' ತುಂಬು ಯಶ ಪಡೆದ ಕಾರ್ಯಕ್ರಮ. ದಶಕದೀಚೆಗೆ ಅವರ ಮನೆಯಲ್ಲಿ ಅಕ್ಷರಗಳು ಕುಣಿದಾಡುತ್ತಿವೆ! ಮಕ್ಕಳೊಂದಿಗೆ ಬೆರೆವ ಶ್ರೀನಿವಾಸ ರಾವ್ ದಂಪತಿಗಳು ಮಕ್ಕಳ ಮನಸ್ಸಿನೊಂದಿಗೆ ಸದಾ ಅನುಸಂಧಾನ ಮಾಡುತ್ತಿರುವ ಅಧ್ಯಾಪಕರು. ಇವರ ಇಳಿ ವಯಸ್ಸಿನ ಕಾಯಕದಲ್ಲಿ ಯುವಕರನ್ನು ನಾಚಿಸುವ ಕ್ರಿಯಾಶೀಲತೆಯಿದೆ.

0 comments:

Post a Comment