Tuesday, June 19, 2018

ಲಂಬ ಕೊಳವೆಬಾವಿಗಿಂತ ಸುಸ್ಥಿರ ಅಡ್ಡಬೋರು


               
                ಕರಾವಳಿಯಲ್ಲಿ `ಅಡ್ಡಬೋರು' ಸದ್ದು ಮಾಡುತ್ತಿದೆ! ಇದು ಲಂಬವಾಗಿ ಕೊರೆಯುತ್ತಾ ಪಾತಾಳಕ್ಕೆ ಕನ್ನ ಹಾಕುವುದಿಲ್ಲ. ಬಾವಿ, ಕೆರೆಯೊಳಗೆ ಅಡ್ಡವಾಗಿ ಕೊರೆಯುತ್ತಾ ಮೇಲ್ಸ್ತರದ ನೀರನ್ನು ಸಂಗ್ರಹಿಸಿಕೊಡುವ ತಂತ್ರಜ್ಞಾನ. 
                ಪ್ರತೀ ವರುಷವೂ ಅಂತರ್ಜಲ ಇಳಿಯುತ್ತಿದೆ. ನೀರಿನ ಮೂಲಗಳು ಬತ್ತುತ್ತಿವೆ. ಕೊಳವೆ ಬಾವಿ ಕೊರೆತವೇ ಅಂತಿಮ ಆಯ್ಕೆಯಾಗುತ್ತಿದೆ. ಒಂದು ವಿಫಲವಾದರೆ ಮತ್ತೊಂದು, ಇನ್ನೊಂದು. ಲಕ್ಷಗಟ್ಟಲೆ ಹಣ ವ್ಯಯ. ಸರಿ, ಕೊಳವೆ ಬಾವಿ ಕೊರೆದಾಗ ಸುತ್ತಲಿನ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆಯಾದುದು ರಾತ್ರಿ ಬೆಳಗಾಗುವಾಗ ಆಗುವ ಕ್ಷಿಪ್ರ ಬದಲಾವಣೆ. ಕೊಳವೆಬಾವಿಗಳ ವಿಫಲ ಕತೆಗಳು ಸರಕಾರಿ ಕಡತಗಳಲ್ಲಿ ರಾಶಿರಾಶಿ ಇವೆ. ಅಡ್ಡ ಬೋರ್ ಹಾಗಲ್ಲ, ಅದೊಂದು ಸುಸ್ಥಿರ ವಿಧಾನ.
                ರಾಜಸ್ಥಾನದ ಅಡ್ಡಬೋರು ತಂತ್ರಜ್ಞ ಗೋವಿಂದ ರಾಮ್ ಭಾಯಿ ಜನವರಿ ಮೊದಲ ವಾರ ಪುತ್ತೂರಿಗೆ ಆಗಮಿಸಿದ್ದರು. ಅಡಿಕೆ ಪತ್ರಿಕೆಯ ಕೋರಿಕೆಯಂತೆ ಕೃಷಿಕರೊಂದಿಗೆ ಮಾತುಕತೆ ನಡೆಸಿದ್ದರು. ತಾಂತ್ರಿಕ ವಿಚಾರಗಳ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಇಲ್ಲಿನ ಕೃಷಿಕರ ಕೋರಿಕೆ ಮತ್ತು ಆಹ್ವಾನದಂತೆ ಅಡ್ಡಬೋರು ಕೊರೆತದ ಪರಿಕರಗಳೊಂದಿಗೆ ಮತ್ತೆ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯತಿನ ಕಾಟುಕುಕ್ಕೆ ಗ್ರಾಮದಲ್ಲಿ ಅವರ ಕೊರೆ ಯಂತ್ರ ಚಾಲೂಗೊಂಡಿದೆ. ಜಿಲ್ಲೆಯ ಹಾಗೂ ನೆರೆಯ ಊರಿನ ಕೃಷಿಕರು ಉತ್ಸಾಹ ತೋರುತ್ತಿದ್ದಾರೆ. 
                ರಾಜಸ್ಥಾನದಲ್ಲಿ ಅರೆಯಾಂತ್ರಿಕ ಅಡ್ಡಬೋರು ಕೊರೆಯುವ ತಂತ್ರಜ್ಞಾನವು ಎರಡು ದಶಕಗಳಿಂದ ಬಳಕೆಯಾಗುತ್ತಿದೆ. ಅಡ್ಡಬೋರಿನಿಂದ ಬಾವಿಯ ಒಳಗಡೆ ಮತ್ತು ಗುಡ್ಡಕ್ಕೆ ಅಡ್ಡವಾಗಿ ಸುಲಭವಾಗಿ ಕಿರು ಕೊಳವೆಬಾವಿ ತೋಡಬಹುದು. ಬಾವಿ, ಕೆರೆಗಳ ನೀರನ್ನು ಬತ್ತಿಸಿಯೂ ಕೊರೆತ ಸಾಧ್ಯ. ಗಟ್ಟಿಕಲ್ಲು ಸಿಗದಿದ್ದರೆ ಮುನ್ನೂರು ಅಡಿ ವರೆಗೂ ಕೊರೆಯುವ ವ್ಯವಸ್ಥೆ ಇದೆ. ಲಂಬವಾಗಿ ಕೊರೆಯುವ ಕೊಳವೆಬಾವಿಗಿಂತ ಇದು ಸುಸ್ಥಿರ ಮತ್ತು ಮರುಪೂರಣ ಮಾಡುವುದು ಸುಲಭ.
                ಕೃಷಿಕ ಗೋವಿಂದ ರಾಮ್ ಭಾಯ್ ರಾಜಸ್ಥಾನದ ನಾಗೋರ್ ಜಿಲ್ಲೆಯವರು ತಮ್ಮ ಭೂಮಿಯಲ್ಲಿ ತೋಡಿದ ಬಾವಿಯು ಮುನ್ನೂರು ಅಡಿಗಿಳಿದಾಗ ಅಲ್ಪಸ್ವಲ್ಪ ನೀರು ಸಿಕ್ಕಿದರೂ ನಂತರದ ದಿವಸಗಳಲ್ಲಿ ಕಡಿಮೆಯಾಗಿತ್ತು. ಮುಂದಿನ ಹಾದಿ ಕಾಣದಿದ್ದಾಗ ಅಡ್ಡಬೋರು ಕೊರೆಯುವುದೊಂದೇ ಅಂತಿಮ ದಾರಿ. ಕೊರೆತಕ್ಕೆ ಬೇಕಾದ ಯಂತ್ರವನ್ನು ನಗರದಿಂದ ಹೊಂದಾಣಿಸಿಕೊಂಡರು. ತಾವೇ ಸ್ವತಃ ಕೊರೆದರು. ಸಿಕ್ಕ ನೀರಿನ ಸಂಪನ್ಮೂಲದಿಂದ ಧೈರ್ಯ ಬಂತು. ಮುಂದೆ ಅಡ್ಡಬೋರು ಕೊರೆತವು ವೃತ್ತಿಯಾಗಿ ಬದುಕಿಗಂಟಿತು.
                ವೃತ್ತಿಯ ವ್ಯಾಪ್ತಿ ಹಿರಿದಾಯಿತು. ಮಹಾರಾಷ್ಟ್ರದಲ್ಲಿ ಕೈತುಂಬಾ ಕೆಲಸ ಸಿಕ್ಕಿತು. ನಂತರದ ದಿವಸಗಳಲ್ಲಿ ವೈದ್ಯರೊಬ್ಬರ ಆಹ್ವಾನದಂತೆ ಗೋವಾ ಪ್ರವೇಶ. ಗೋವಾದಲ್ಲಿ ಅಡ್ಡಬೋರು ಕೊರೆತಕ್ಕೆ ದೊಡ್ಡ ಅವಕಾಶ. ಇಲ್ಲಿ ಅಡ್ಡಬೋರಿನಿಂದಾಗಿ ಕೃಷಿಗೆ ಬಳಸುವಷ್ಟು ಜಲ ಲಭ್ಯತೆ ಜಾಸ್ತಿಯಾಗಿದೆ. ಸುಮಾರು ಮುನ್ನೂರು ಅಡ್ಡ ಬೋರುಗಳನ್ನು ಬಾವಿಯ ಒಳಗೆ ಕೊರೆಯಲಾಗಿದೆ.
            ಗೋವಿಂದ ಭಾಯ್ ಅವರಲ್ಲಿ ನಾಲ್ಕು ತಂಡಗಳಿವೆ. ಬಾವಿ ತೋಡುವುದು, ಬಾವಿಯ ತಳದಿಂದಲೇ ರಿಂಗ್ ಕಟ್ಟುತ್ತಾ ಬರುವುದು ಮತ್ತು ಅಡ್ಡಬೋರು ಕೊರೆತ - ಮೂರು ಕೆಲಸಗಳು ಪ್ರಧಾನ. ನಾಲ್ಕು ತಂಡಗಳಲ್ಲಿ ಎರಡು ತಂಡ ಅಡ್ಡಬೋರನ್ನೂ ಕೊರೆಯುತ್ತದೆ. ಬಾವಿ ತೆಗೆಯುವಾಗ ಎತ್ತುಯಂತ್ರದಿಂದ ಮಣ್ಣನ್ನು ಮೇಲಕ್ಕೆ ತರುತ್ತಾರೆ. ಬಾವಿಯ ಒಳಗೇನೇ ನಿರ್ಮಿಸುವ ಇವರ ರಿಂಗುಗಳು ತುಂಬಾ ಸದೃಢ.
                ರಾಜಸ್ಥಾನದಲ್ಲಿ ಅನೇಕ ವರುಷಗಳಿಂದ ಯಾಂತ್ರಿಕ ಅಡ್ಡಬೋರು ವ್ಯವಸ್ಥೆಯು ಬಳಕೆಯಲ್ಲಿದೆ. ಬಾವಿ,  ಕೆರೆಯ ತಳಕ್ಕೆ ಯಂತ್ರವನ್ನು ಇಳಿಸಿ ಅಡ್ಡಬೋರು ಕೊರೆಯುತ್ತಾರೆ. ಬಾವಿಯ ನೆಲಮಟ್ಟದಿಂದ ಒಂದು-ಎರಡಡಿ ಎತ್ತರದಲ್ಲಿ ಅಡ್ಡಕ್ಕೆ ಕೊರೆತ. ಮುನ್ನೂರು ಅಡಿಯ ವರೆಗೂ ಕೊರೆದದ್ದಿದೆ. ಗಟ್ಟಿಯಾದ ಶಿಲೆಕಲ್ಲು ಸಿಕ್ಕರೆ ಕೊರೆತ ತ್ರಾಸ. ಅಡ್ಡಬೋರು ತಂತ್ರಜ್ಞಾನವು ಇವರ ಶೋಧನೆಯಲ್ಲ. ಮಾನವ ಶಕ್ತಿಯಿಂದ ಕೊರೆದ ಉದಾಹರಣೆಗಳು ಸಾಕಷ್ಟಿವೆ. ಈಗೆಲ್ಲವೂ ಯಾಂತ್ರಿಕೃತಗೊಂಡಿವೆ. ರಾಜಸ್ಥಾನದಲ್ಲಿ ಅಡ್ಡ ಬೋರು ಕೊರೆಯುವ ತಂಡಗಳು ನೂರಾರು ಇವೆ.
                ``ನಮ್ಮಲ್ಲಿ ಮುನ್ನೂರು ಅಡಿ ಕೊರೆತ ಬೇಕಾಗದು. ನೂರು ಅಡಿಯಲ್ಲೇ ಮೇಲ್ಸ್ತರದ ನೀರನ್ನು ಹಿಡಿದಿಡಬಹುದು. ಹಾಗೆಂತ ಎಲ್ಲಾ ಕಡೆ ನೀರು ಸಿಗಬಹುದೆನ್ನುವ ಗ್ಯಾರಂಟಿ ಇಲ್ಲ. ನೀರಿನ ಸಮಸ್ಯೆಗೆ ಇದೇನೂ ಅಂತಿಮ ಪರಿಹಾರವಲ್ಲ. ಸಿಕ್ಕಸಿಕ್ಕಲ್ಲಿ ಕೊರೆಯುವಂತಹುದಲ್ಲ. ಎತ್ತರದ ಗುಡ್ಡ, ಜಮೀನಿನ ಪಕ್ಕಗಳಲ್ಲಿ ನೀರು ಪಡೆಯುವ ಸಾಧ್ಯತೆ ನಿಚ್ಚಳವಾಗಿದೆ. ಎಲ್ಲೆಲ್ಲಾ ಸುರಂಗ ನೀರು ಕೊಡಬಹುದೋ, ಅಲ್ಲೆಲ್ಲಾ ಅಡ್ಡಬೋರೂ ಯಶವಾಗಬಹುದು.'' ಎನ್ನುತ್ತಾರೆ ಜಲತಜ್ಞ ಶ್ರೀಪಡ್ರೆ.
                ಮೇಲ್ಸ್ತರದ ನೀರು ಪಡೆಯಲು ಕೂಡಾ ಒಂದಷ್ಟು ಅಡಿಗಟ್ಟು ಮಾಡಿಕೊಳ್ಳಬೇಕು. ಎಲ್ಲಿ ಅಡ್ಡಬೋರು ಕೊರೆಯುತ್ತೇವೋ ಅಲ್ಲೆಲ್ಲಾ ಜಲಾನಯನ ಕೆಲಸಗಳು ಆಗಲೇಬೇಕು. ಎತ್ತರದ ಜಾಗದಲ್ಲಿ ನೀರಿಂಗಿಸುವ ಪ್ರಕ್ರಿಯೆ ನಡೆದು ಒರತೆಯನ್ನು ಬಲಪಡಿಸಬೇಕು. ಹೀಗೆ ಮಾಡಿದಾಗ ಮಳೆ ಬಂದು ಹದಿನೈದು ದಿವಸದಲ್ಲೇ ಒರತೆ ವರ್ಧಿಸುವುದನ್ನು ಕಾಣಬಹುದು. ಹಿನ್ನೆಲೆಯಲ್ಲಿ ಅಡ್ಡಬೋರು ವ್ಯವಸ್ಥೆಯನ್ನು ಹೀಗೆ ವ್ಯಾಖ್ಯಾನಿಸಬಹುದೇನೋ - ``ಅಡ್ಡಬೋರು ಮೇಲ್ಸ್ತರದ ನೀರನ್ನು ಹಿಡಿದು ಕೊಡುತ್ತದೆ. ಲಂಬ ಕೊಳವೆಬಾವಿಯು ಪಾತಾಳದ ನೀರನ್ನು ಹೀರಿ ಹೀರುತ್ತದೆ!''
                ಈಗ ಯೋಚಿಸಿ. ಯಾವುದು ಸುಸ್ಥಿರ? ಅಡ್ಡ ಬೋರು ಕೊರೆದಲ್ಲಿ ಕುಸಿಯುವ ಭಯವಿಲ್ಲ. ಒಂದು ವೇಳೆ ಅಂತಹ ಸುಳಿವು ಸಿಕ್ಕರೆ ತೂತು ಮಾಡಿದ ಪಿ.ವಿ.ಎಸ್.ಪೈಪನ್ನು ಕೇಸಿಂಗ್ ಪೈಪುಗಳಂತೆ ತೂರಿಸಬಹುದು. ಕೊಳವೆ ಬಾವಿಯ ನೀರನ್ನು ಮೇಲಕ್ಕೆ ಹಾಕಲು ಗರಿಷ್ಠ ಅಶ್ವಶಕ್ತಿಯ ಪಂಪ್ ಬೇಕು, ವಿದ್ಯುತ್ ಬೇಕು. ಸಾವಿರಗಟ್ಟಲೆ ಖರ್ಚು. ಅಡ್ಡ ಬೋರಿನಿಂದ ಪಡೆದ ನೀರನ್ನು ಸಾಮಾನ್ಯ ಬಾವಿಯಿಂದ ಹೇಗೆ ಎತ್ತುತ್ತೇವೋ ಅದರಂತೆ ಪಡೆಯಬಹುದು. ಸಿಕ್ಕಷ್ಟು ನೀರನ್ನು ದೀರ್ಘಕಾಲ ನಂಬಬಹುದು.
                `` ಯಾಂತ್ರೀಕೃತ ತಂತ್ರಜ್ಞಾನ ಹೊಸತಲ್ಲ. ರಾಜಸ್ಥಾನದ ಬೇರೆ ಬೇರೆ ಭಾಗಗಳಲ್ಲಿ ಮೂರು ದಶಕದ ಚರಿತ್ರೆಯಿದೆ. ತಂತ್ರಜ್ಞಾನವನ್ನು ಹಿತ-ಮಿತವಾಗಿ ಬಳಸುವಂತಾಗಬೇಕು. ಕಂಡಲ್ಲೆಲ್ಲಾ ತೆಗೆದರೆ ಫಲಿತಾಂಶ ಬಾರದು. ಮಳೆಗಾಲದಲ್ಲಿ ಕೊರೆತ ಕಷ್ಟ. ಬೇಸಿಗೆಯಲ್ಲಿ ಕಡಿಮೆ ನೀರಿದ್ದಾಗ ಪಂಪ್ ಮಾಡಿ ತೆಗೆದು ಕೊರೆಯುತ್ತಾರೆ.'' ಎನ್ನುತ್ತಾರೆ ಶ್ರೀ ಪಡ್ರೆ. ನೀರೇ ಇಲ್ಲ ಅಂತಾದಾಗ ಸಿಗರೇಟಿನಷ್ಟು ಗಾತ್ರದಲ್ಲಾದರೂ ನೀರು ಹರಿದು ಬಂದರೆ ಕುಡಿ ನೀರಿಗೆ ಅಡ್ಡಾಡಬೇಕಾಗಿಲ್ಲವಲ್ಲ!
                ಗೋವಿಂದ ರಾಮ್ ಭಾಯ್ ಅವರೊಂದಿಗಿನ ಸಂವಾದದಲ್ಲಿ ಪ್ರಶ್ನೆಗಳು - ``ಅಡ್ಡ ಬೋರು ಕೊರೆಯುತ್ತಿದ್ದಾಗ ಅದು ಇನ್ನೊಬ್ಬರ ಜಾಗದಲ್ಲಿ ಕೊರೆದಾಗ ಅವರಿಂದ ತಕರಾರು ಬಂದರೆ? ಕರ್ಗಲ್ಲು ಕಟ್ಟಿದ ಬಾವಿಗೆ ಅಡ್ಡ ಬೋರ್ ವ್ಯವಸ್ಥೆ ಮಾಡಬಹುದೇ?'' - ಸಣ್ಣ ಜಾಗವಿದ್ದರೆ ಸರಿ, ನೂರು ಅಡಿಗಿಂತ ಹೆಚ್ಚು ಕರಾವಳಿ ಭೂ ಪ್ರದೇಶದಲ್ಲಿ ಬೇಕಾಗದು. ಕರ್ಗಲ್ಲು ಕಟ್ಟಿದ ಬಾವಿಗೆ ಅಡ್ಡ ಬೋರು ವ್ಯವಸ್ಥೆ ಕಷ್ಟ ಎಂದಿದ್ದರು. ಅಡ್ಡ ಬೋರು ಕೊರೆತದಿಂದ ಲಂಬವಾಗಿ ಕೊಳವೆಬಾವಿ ಕೊರೆದಾಗ ರಾಚುವ ನೆರೆಯವರ ಶಾಪದಿಂದ ಬಚಾವಾಗಬಹುದು! ಆಸುಪಾಸಿನ ಜಲಮೂಲಗಳಿಗೆ ಹಾನಿಯಿಲ್ಲ.
            ``ಆರು ಅಡಿ ವ್ಯಾಸಕ್ಕಿಂತ ಕಡಿಮೆ ಸುತ್ತಳತೆಯ ಬಾವಿಗೆ ಕೊರೆಯಂತ್ರವನ್ನು ಇಳಿಸಲು ಆಗದು. ಯಂತ್ರ ಪರಿಕರಗಳನ್ನು ಬಾವಿ ಯಾ ಕೆರೆಯ ಸನಿಹಕ್ಕೆ ಸುಲಭವಾಗಿ ಸಾಗಿಸಲು ರಸ್ತೆಯ ವ್ಯವಸ್ಥೆ ಬೇಕು. ಕೊರೆಯಂತ್ರಕ್ಕೆ ಏಳು ಆಶ್ವ ಶಕ್ತಿಯ ಮೋಟಾರು ಇರುವುದರಿಂದ ಯಂತ್ರದ ಕುಲುಕಾಟ - ವೈಬ್ರೇಶನ್ - ಜಾಸ್ತಿ. ಹಾಗಾಗಿ ಯಂತ್ರಕ್ಕೆ ಗೋಡೆಯ ಆಧಾರ ಬೇಕಾಗುತ್ತದೆ. ಕೊರೆಯುವ ಮಣ್ಣು ಹೊರಬರಲು ಸತತ ನೀರು ಪೂರೈಕೆಯೂ ಬೇಕು'' ಎನ್ನುವ ಸೂಕ್ಷ್ಮವನ್ನು ಗೋವಿಂದ ಭಾಯ್ ಹೇಳುತ್ತಾರೆ. ಮಲೆನಾಡಿನ ಹಲವೆಡೆ ತಂತ್ರಜ್ಞಾನ ಬಳಸಿ ಅಡ್ಡ ಬೋರು ಕೊರೆಯುವುದರ ಜತೆಗೆ ಅದರ ಜಲಾನಯನ ಪ್ರದೇಶದಲ್ಲಿ ಮಳೆನೀರಿಂಗಿಸಿ ಕೊಟ್ಟರೆ ಜಲ ಲಭ್ಯತೆ ಸುಧಾರಿಸಲು ಸಾಧ್ಯ.
            ಮೂರು ದಶಕದ ಹಿಂದೆಯೇ ಕರಾವಳಿಯಲ್ಲಿ ಕೈಚಾಲಿತ ಅಡ್ಡಬೋರು ತಂತ್ರಜ್ಞಾನದ ಮೂಲಕ ಪರಿಚಿತರಾದವರು ವಿಟ್ಲ ಸನಿಹದ ಮಹಮ್ಮದ್. ಅವರು ಎಷ್ಟು ಪ್ರಸಿದ್ಧರಾದರೆಂದರೆ ಅವರ ಹೆಸರಿನೊಂದಿಗೆ ವೃತ್ತಿಯು ಹೊಸೆದು `ಅಡ್ಡಬೋರು ಮಹಮ್ಮದ್' ಆದರು. ಅವರಿಗೂ ಹೀಗೆ ಕರೆಸಿಕೊಳ್ಳಲು ಇಷ್ಟ! ಅಡಿಕೆ ಪತ್ರಿಕೆಯೇ ಇವರ ಸಾಧನೆಗೆ  ಹೆಚ್ಚಿನ ಬೆಳಕು ಹಾಕಿತ್ತು. ಮಾಹಿತಿ ರಾಯಚೂರಿನ ಎಸ್.ನಾಗರೆಡ್ಡಿಯವರನ್ನು ಸೆಳೆದಿತ್ತು. ಕೊಯಂಬತ್ತೂರಿನಲ್ಲಿ ವಿದ್ಯುತ್ ಚಾಲಿತ ಅಡ್ಡಬೋರು ಕೊರೆಯುವ ತಂಡವನ್ನು ಸಂಪರ್ಕಿಸಿದ್ದರು. ಕಾಲದಲ್ಲಿ ನಾಗರೆಡ್ಡಿಯವರು ತನ್ನ ಕೆರೆಗೆ ಆರು ಅಡ್ಡಬೋರು ಕೊರೆಸಿದ್ದರು.

0 comments:

Post a Comment