Tuesday, June 19, 2018

ಕೃಷಿಕರ ಮಂದಿರದಲ್ಲಿ ಪುತ್ತಳಿಯ ಭಾವಬಂಧ

                ಒಂದೊಂದು ಧರ್ಮ, ಮತಗಳಿಗೂ ಆರಾಧನಾ ಕೇಂದ್ರಗಳಿವೆ. ಕೃಷಿಕರ ಪಾಲಿಗೆ ಕ್ಯಾಂಪ್ಕೋ ಸಂಸ್ಥೆಯೇ ಮಂದಿರ ಯಾ ದೇವಾಲಯ!

                 ಹೀಗಂದವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು. ಪುತ್ತೂರಿನ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿಯಸೌಲಭ್ಯ ಸೌಧ ಶುಭ ಚಾಲನೆಯ ಸಂದರ್ಭ. ಇಲ್ಲಿ ಶಬ್ದಾರ್ಥಕ್ಕಿಂತಲೂ ಅದರೊಳಗಿರುವ ಅಂತರಾರ್ಥ ಗ್ರಾಹ್ಯ. ಕೃಷಿಕರು ಕಟ್ಟಿ ಬೆಳೆಸಿದ ಕೃಷಿಕರ ಸಂಸ್ಥೆಯು ಕೃಷಿಕರ ಪಾಲಿಗೆ ಎಂದಿಗೂ, ಎಂದೆಂದಿಗೂ ದೇವಾಲಯಕ್ಕೆ ಸಮಾನ.
                ಕ್ಯಾಂಪ್ಕೋ ಸಂಸ್ಥೆಯ ಹುಟ್ಟಿಗೆ ಶ್ರೀಕಾರ ಬರೆದವರು ಕೀರ್ತಿಶೇಷ ವಾರಣಾಶಿ ಸುಬ್ರಾಯ ಭಟ್. ಆರಂಭದ ಕಾಲಘಟ್ಟದಲ್ಲಿ ಕೃಷಿಕರು ವಾರಣಾಶಿಯವರ ಬೆನ್ನ ಹಿಂದೆ ನಿಂತು ಕ್ಯಾಂಪ್ಕೋವನ್ನು ಕಟ್ಟುವಲ್ಲಿ ಹಿಂಬಲ ನೀಡಿದರು. ಇದು ವಾರಣಾಶಿಯವರ ಛಲಕ್ಕೆ ದೊಡ್ಡ ಅಡಿಗಟ್ಟಾಯಿತು. 1973ರಲ್ಲಿ ಕ್ಯಾಂಪ್ಕೋ ಸ್ಥಾಪನೆಯಾಯಿತು. ಮತ್ತಿನದು ಇತಿಹಾಸ.
                ಸೌಲಭ್ಯ ಸೌಧದ ಉದ್ಘಾಟನೆಯಂದು ವಾರಣಾಶಿ ಸುಬ್ರಾಯ ಭಟ್ಟರ ಶಿಲಾ ಪುತ್ತಳಿಯ ಅನಾವರಣ. ಕೃಷಿಕ ಸಾಧಕನಿಗೆ ಸಂದ ಮಹತ್ ಗೌರವ. “ದೇಶದಲ್ಲಿ ಕೃಷಿಕರ ಪುತ್ತಳಿ ಎಲ್ಲಿದೆ? ಎಲ್ಲಾದರೂ ಸ್ಥಾಪನೆಯಾದುದು ನೋಡಿದಿರಾ? ಇದು ವಿಪರ್ಯಾಸವಲ್ವಾಎಂದು ಮಿತ್ರ ನರೇಂದ್ರ ರೈ ದೇರ್ಲರು ಗಟ್ಟಿ ದನಿಯಲ್ಲಿ ಹೇಳುತ್ತಿದ್ದ ಮಾತುಗಳು ಸಂದರ್ಭದಲ್ಲಿ ನೆನಪಾದುವು.
          ಹೌದಲ್ಲಾ... ರಾಜಕೀಯ, ಧಾರ್ಮಿಕ, ಸಾಮಾಜಿಕ.. ಮೊದಲಾದ ಕ್ಷೇತ್ರಗಳ ಸಾಧಕರ ಪುತ್ತಳಿಗಳನ್ನು  ನೋಡುತ್ತೇವೆ. ಸ್ವ-ದುಡಿಮೆಯಿಂದ ಸಮಾಜಕ್ಕೆ ಅನ್ನ ನೀಡುವ ರೈತರಿಗೆ ಪುತ್ತಳಿಯ ಭಾಗ್ಯ ಎಲ್ಲಿದೆ? ಪುತ್ತಳಿ ಬಿಡಿ, ಬದುಕಿರುವಾಗಲೇ ಸಾಧನೆಗೆ ಬೆಳಕೊಡ್ಡುವ, ಗೌರವಿಸುವ ವ್ಯವಸ್ಥೆಗಳು ಎಷ್ಟಿವೆ? ಗೌರವದಿಂದ ಬದುಕಲು ಬೇಕಾದ ಕನಿಷ್ಠ ಸೌಲಭ್ಯವನ್ನಾದರೂ ಪ್ರಾಮಾಣಿಕತೆಯಿಂದ ನೀಡುತ್ತಿದ್ದೇವಾ? ವ್ಯವಸ್ಥೆಗಳ ಆತ್ಮವಿಮರ್ಶೆಗಳಿಗಿದು ಹೂರಣ.
          ಕ್ಯಾಂಪ್ಕೋ ತನ್ನ ಸ್ಥಾಪಕಾಧ್ಯಕ್ಷರನ್ನು ಪುತ್ತಳಿ ಸ್ಥಾಪನೆ ಮೂಲಕ ಗೌರವಿಸಿದೆ. ಎಲ್ಲಾ ಕೃಷಿಕರು ಅಭಿಮಾನ ಪಡಬೇಕಾದ ವಿಚಾರ. ಸಹಕಾರಿ ಕ್ಷೇತ್ರಕ್ಕೆ ಸಂದ ಮಾನ. ಕೃಷಿ ಕ್ಷೇತ್ರಕ್ಕೆ ಸಂಮಾನ. “ಪುತ್ತಳಿ ಸ್ಥಾಪನೆಯು ಬಹುಕಾಲದ ಕನಸು. ಅದು ನನಸಾಗಿದೆ. ಕ್ಯಾಂಪ್ಕೋ ಸಂಸ್ಥೆಯನ್ನು ಅವರು ಬೆವರಿನ ಬಲದಿಂದ ಕಟ್ಟಿದ್ದಾರೆ,” ಎಂದು ಜ್ಞಾಪಿಸಿಕೊಳ್ಳುತ್ತಾರೆ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ.
           ಸಂಸ್ಮರಣೆ, ಪುತ್ತಳಿ, ಸಾಕ್ಷ್ಯಚಿತ್ರ ಇವೆಲ್ಲಾ ಹಿರಿಯರನ್ನು ನೆನಪಿಸುವ ಉಪಾಧಿಗಳು. ಒಂದು ಕಾಲಘಟ್ಟದಲ್ಲಿ ಅವರೊಂದಿಗೆ ದುಡಿದ, ಸ್ಪಂದಿಸಿದ ಮನಸ್ಸುಗಳಿಗೆ ಸಾಧನೆಗಳು ತಿಳಿದಿರುತ್ತದೆ. ತಲೆಮಾರು ಬದಲಾದಾಗ ಸಹಜವಾಗಿ ಹಿಂದಿನದು ಇತಿಹಾಸವಾಗುತ್ತದೆ. ಇತಿಹಾಸದ ಸ್ಪಷ್ಟನೆಗೆ ಇಂತಹ ಉಪಾಧಿಗಳು ಸಹಕಾರಿ. ತಲೆಮಾರಿನಿಂದ ತಲೆಮಾರಿಗೆ ಇತಿಹಾಸವನ್ನು ದಾಟಿಸುವ ಕೆಲಸಗಳನ್ನಿವು ಮಾಡುತ್ತವೆ. ಹಿನ್ನೆಲೆಯಲ್ಲಿ ವಾರಣಾಶಿಯವರ ಪುತ್ತಳಿಯ ಹಿಂದೆ ಅಧ್ಯಯನಕ್ಕೆ ಬೇಕಾದ ಸರಕುಗಳಿವೆ.
            ಸುಬ್ರಾಯ ಭಟ್ಟರುಕ್ಯಾಂಪ್ಕೋ ಬ್ರಹ್ಮ. 1970 ದಶಕದ ಸ್ಥಿತಿಯನ್ನೊಮ್ಮೆ ಮನಸ್ಸಿಗೆ ತೆಕ್ಕೊಳ್ಳಿ. ಅಡಿಕೆ ಮಾರುಕಟ್ಟೆಯ ಹಾವೇಣಿಯಾಟ, ವರ್ತಕರ ಕಣ್ಣುಮುಚ್ಚಾಲೆ, ಮಧ್ಯವರ್ತಿಗಳ ಚಾಲಾಕಿತನ, ಸರಕಾರದ ನೀತಿ, ಅಡಿಕೆಯ ಅತಿ ಉತ್ಪಾದನೆ. ಪರಿಣಾಮ, ಅಡಿಕೆ ಬೆಲೆ ಕುಸಿತ. ಕೃಷಿ ಬದುಕು ಡೋಲಾಯಮಾನ. ಇಂತಹ ಹೊತ್ತಲ್ಲಿ - 1973ರಲ್ಲಿ - ಕನಸಿನ ಸಂಸ್ಥೆಯ ಸ್ಥಾಪನೆ.
           ಉದ್ಘಾಟನೆಯಂದೇ ಮಾರುಕಟ್ಟೆಗೆ ಜಿಗಿತ. ವರ್ತಕರು ಒಂದೊಂದು ರೂಪಾಯಿ ಏರಿಸಿದಾಗಲೂ ಕ್ಯಾಂಪ್ಕೋ ಎದೆಯೊಡ್ಡಿತು. ಕುಸಿತ ಕಂಡಾಗ ಕೃಷಿಕರಿಗೆ ತೊಂದರೆಯಾಗದಂತೆ ನೋಡಿಕೊಂಡಿತು. ಕೃಷಿಕರ ವಿಶ್ವಾಸ ಗಳಿಸುತ್ತಾ ಬೆಳೆದ ಕ್ಯಾಂಪ್ಕೋ ಈಗ ದೇಶ ವಿಖ್ಯಾತ. ಅಡಿಕೆ ಬೆಳೆಗಾರರ ಆಪದ್ಬಾಂಧವ. ಪ್ರಚಾರ, ಕ್ರೆಡಿಟ್ಗಳ ಪರಿವೆಯೇ ಇಲ್ಲದೆ, ಬದ್ಧತೆಯಿಂದ ತನ್ನ ಪಾಡಿಗೆ ಸಾಧನೆ ಮಾಡುತ್ತಾ ಹೋದರು. ಇಂತಹ ಅತ್ಯಪೂರ್ವ ಗುಣಕ್ಕೆ ಇವರಂತಹ ಉದಾಹರಣೆಗಳು ದೇಶದಲ್ಲೇ ಹೆಚ್ಚು ಇರಲಾರದು.
            ಶಿಕ್ಷಣ ತಜ್ಞ ಸಿ.ಹೆಚ್.ಕೃಷ್ಣಶಾಸ್ತ್ರಿ (ದಿ.) ಇವರು ಹೇಳುತ್ತಿದ್ದ ಒಂದು ಘಟನೆಯು ವಾರಣಾಶಿಯವರ ಕೃಷಿಕಪರ ಬದ್ಧತೆಗೆ ಮಾದರಿ. ಸುಬ್ರಾಯ ಭಟ್ ಕ್ಯಾಂಪ್ಕೋ ಅಧ್ಯಕ್ಷರಾದ ಸಮಯದಲ್ಲಿ ಅವರಿಗೆ ಸಂಮಾನದ ಪ್ರಸ್ತಾವದೊಂದಿಗೆ ಹೋಗಿದ್ದರು.  ಎಷ್ಟು ಖರ್ಚು ಬರಬಹುದು?’ ಭಟ್ಟರ ಪ್ರಶ್ನೆ. ‘ಸುಮಾರು ಹದಿನೈದು ಸಾವಿರಎಂದಿದ್ದರು. ‘ನೀವೊಂದು ಕೆಲಸ ಮಾಡಿ. ಅಷ್ಟು ಮೊತ್ತದ ಕ್ಯಾಂಪ್ಕೋ ಶೇರು ಖರೀದಿಸಿ. ಮೂಲಕ ಸಂಸ್ಥೆ ಬೆಳೆಸಿ. ಇದೇ ನನಗೆ ಗೌರವಎಂದರು!
          ಬೃಹತ್ ಅಡಿಕೆ ಖರೀದಿಗೆ ಹೊರಟಾಗ ಕ್ಯಾಂಪ್ಕೋದಲ್ಲಿ ಬೇಕಾದಷ್ಟು ಹಣವಿರಲಿಲ್ಲ. ಸುಬ್ರಾಯ ಭಟ್ ಅಲ್ಲಿಂದಿಲ್ಲಿಂದ ಹೊಂದಾಣಿಕೆ ಮಾಡಿದರು. ಅಡಿಕೆ ಹಾಕಿದ ಕೃಷಿಕರನ್ನುನಾಳೆ ಬಾಎನ್ನುವುದು ಇವರ ಜಾಯಮಾನವಲ್ಲ. ಸಂಪನ್ಮೂಲಕ್ಕಾಗಿ ಬ್ಯಾಂಕುಗಳ ಸಂಪರ್ಕ. “ತುರ್ತಾಗಿ ಒಂದು ಕೋಟಿ ರೂಪಾಯಿ ಬೇಕಿತ್ತು. ಭಟ್ಟರು ಸಿಂಡಿಕೇಟ್ ಬ್ಯಾಂಕಿನ ಕೆ.ಕೆ.ಪೈ ಅವರನ್ನು ಭೇಟಿಯಾಗಿದ್ದರು. ಕೋಟಿ ರೂಪಾಯಿ ಅಂದಾಗ ಪೈಗಳ ಮನಸ್ಸು ಹಿಂದೇಟು ಹಾಕಿತ್ತು, ಕ್ಯಾಂಪ್ಕೋದ ಮಾಜಿ ಅಧ್ಯಕ್ಷ ಕೆ. ರಾಮ ಭಟ್ ಉರಿಮಜಲು ಜ್ಞಾಪಿಸಿಕೊಳ್ಳುತ್ತಾರೆ, “ನೀವು ಹಣ ಕೊಡದಿದ್ದರೆ ಸಂಸ್ಥೆಯನ್ನು ಮುಚ್ಚುತ್ತೇವೆಎಂದ ಭಟ್ಟರ ಸವಾಲಿನ ಮುಂದೆ ಪೈಗಳಿಗೆ ಇಲ್ಲ ಎನ್ನಲಾಗಲಿಲ್ಲ. ನಾಳೆ ಎಂಟು ಗಂಟೆಗೆ ಬನ್ನಿ. ಹಣ ರೆಡಿಯಾಗಿರುತ್ತದೆ ಎಂದಿದ್ದರು.”
            ಹಣಕಾಸಿನ ವಿಚಾರದಲ್ಲಿ ಭಟ್ಟರು ಸದಾ ಎಚ್ಚರ. ವೆಚ್ಚದಲ್ಲಿ ಕಟ್ಟುನಿಟ್ಟಿನ ಹಿಡಿತ. ಮನೆಯಿಂದ ಕಚೇರಿಗೆ ಬರಲು ಸ್ವಂತ ಕಾರಿನ ಬಳಕೆ. ಇದು ಸಂಸ್ಥೆಯ ಕೆಲಸಕ್ಕೆ ಮಾತ್ರ ಬಳಕೆ. ಅಧ್ಯಕ್ಷರಿಗೆಂದು ಹವಾ ನಿಯಂತ್ರಿತ ಕಾರಾಗಲೀ, ಲಕ್ಸುರಿ ವಾಹನವಾಗಲೀ ಇರಲಿಲ್ಲ. ಆಗಿನ ಆಡಳಿತ ನಿರ್ದೇಶಕ .. ದೇಸಾಯಿ ಭಟ್ಟರ ಶ್ರಮವನ್ನು ಕಂಡದ್ದು ಹೀಗೆ : “ಅವರ ಕೆಲಸ ಕಾಗದ ಪೆನ್ನುಗಳಿಗೆ ಸೀಮಿತವಲ್ಲ. ಬೆಳಗಿನ ಎಂಟು ಗಂಟೆಗೆ ಪ್ರತ್ಯಕ್ಷರಾದರೆ ರಾತ್ರಿ ಹತ್ತರ ವರೆಗೂ ಕಚೇರಿಯಲ್ಲಿ ಕಾರ್ಯಮಗ್ನರಾಗಿರುತ್ತಿದ್ದರು. ವಾರದಲ್ಲಿ ಇಂಥ ದಿನಗಳೇ ಹೆಚ್ಚು. ಬ್ಯಾಂಕುಗಳ ಜತೆ ವ್ಯವಹರಿಸುವಲ್ಲಿ ಸರಕಾರಗಳನ್ನು ಸಂಪರ್ಕಿಸುವಲ್ಲಿ, ಸ್ವತಃ ಹಾಜರ್. ಶಾಖೆಗಳ ಪರಿಶೀಲನೆ, ಗೋದಾಮುಗಳ ವೀಕ್ಷಣೆ, ಸಮಸ್ಯೆಗಳ ಪರಿಹಾರ ಅನ್ವೇಷಣೆ-ಎಲ್ಲದರಲ್ಲಿಯೂ ಮುಂದಾಳು.”
            “ವಾರಣಾಶಿಯವರು ಲೆಕ್ಕದಲ್ಲಿ ಪಕ್ಕಾ. ಎಲ್ಲವೂ ಬೆರಳ ತುದಿಯಲ್ಲಿ. ಪೈಸೆಯಿಂದ ಕೋಟಿಯ ವರೆಗೆ ಅವರ ಸಿಕ್ಸ್ತ್ ಸೆನ್ಸ್ ಸದಾ ಜಾಗೃತಎನ್ನುತ್ತಾರೆ ಕ್ಯಾಂಪ್ಕೋದ ನಿವೃತ್ತ ಡಿಜಿಎಂ (ಲೆಕ್ಕ) ಕೆದುಂಬಾಡಿ ಗಣಪತಿ ಭಟ್. ”ಚಾಕೊಲೇಟ್ ಫ್ಯಾಕ್ಟರಿ ಶುರು ಮಾಡುವ ಸಂದರ್ಭ. ಮಾರುಕಟ್ಟೆಯ ಬಗ್ಗೆ ಚರ್ಚೆಯಾಗುತ್ತಿತ್ತು. ದರ ನಿಗದಿ ಮಾಡುವಾಗ ಒಂದು ಎಕ್ಲೇರ್ ಚಾಕೊಲೇಟಿಗೆ ಅರ್ಧ ಪೈಸೆ ವ್ಯತ್ಯಾಸವಾಗಿತ್ತು. ತಕ್ಷಣ ಸುಬ್ರಾಯ ಭಟ್ಅರ್ಧ ಪೈಸೆ ಎನ್ನುವ ತಾತ್ಸಾರಕೂಡದು. ಒಂದು ಲೋಡು ಚಾಕೋಲೇಟಿನಲ್ಲಿ ನಷ್ಟ ಎಷ್ಟಾಯಿತು, ಲೆಕ್ಕ ಹಾಕಿದ್ದೀರಾ?  ಹತ್ತು ಸಾವಿರ ರೂಪಾಯಿ ಖೋತಾಎಂದಾಗ ಎಲ್ಲರೂ ಬೆಚ್ಚಿಬಿದ್ದರು. ಲೆಕ್ಕದಲ್ಲಿ ಹತ್ತು ರೂಪಾಯಿ ವ್ಯತ್ಯಾಸವಾದರೂ ಅವರು ಸಹಿಸುತ್ತಿರಲಿಲ್ಲ. ಒಮ್ಮೆ ಲೆಕ್ಕ ಬರೆಯುವಾಗ ಹತ್ತು ರೂಪಾಯಿ ತಪ್ಪಿದ್ದಕ್ಕೆ ಒಬ್ಬರು ಸಿಬ್ಬಂದಿಯನ್ನು ವಜಾ ಮಾಡಿದ್ದರು. ಪ್ರಾಮಾಣಿಕತೆಯ ಬಗೆಗಿನ ನಿಷ್ಠುರ ನಿಲುವು.
              ಅಡಿಕೆಯೊಂದಿಗೆ ಕೊಕ್ಕೋ ಬೆಳೆಸಿಅಡಿಗಡಿಗೆ ಕೊಡುತ್ತಿದ್ದ ಸಲಹೆ. ಕೊಕ್ಕೋ ಬೆಳೆಸಲು ಪ್ರೋತ್ಸಾಹಿಸಿದ ಚಾಕೋಲೇಟ್ ಕಂಪೆನಿಯೊಂದು ಎಂಭತ್ತರ ದಶಕದಾರಂಭದಲ್ಲಿ ಅನಾಮತ್ತಾಗಿ ರೈತರಿಂದ ಕೊಕ್ಕೋ ಖರೀದಿ ನಿಲ್ಲಿಸಿತು. ಕೊಕ್ಕೋ ಕೊಳ್ಳುವವರೇ ಇಲ್ಲದಾಯಿತು. ಸಂಕಟ ಸುಬ್ರಾಯ ಭಟ್ ಅಂತರಾತ್ಮವನ್ನು ಕೆಣಕಿತು. ಮತ್ತೆ ಅವರು ಸವಾಲನ್ನೆದುರಿಸಲು ಸಜ್ಜಾದರು. ಇವರ ದಿಟ್ಟ ನಿರ್ಧಾರದಿಂದಾಗಿ ಕೆಲವೇ ದಿನಗಳಲ್ಲಿ ಕ್ಯಾಂಪ್ಕೋ ಕೊಕ್ಕೋ ಖರೀದಿ ಆರಂಭಿಸಿತು. ಉತ್ತಮ ನೆಲೆ ಕಂಡಿತು. ಕೊಕ್ಕೋ ಬೀಜ ರಫ್ತು ಮಾಡುವಷ್ಟರ ಮಟ್ಟಿಗೆ ಸದೃಢವಾಯಿತು. 1986ರಲ್ಲಿ ಹದಿಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರಿನಲ್ಲಿ ಆರಂಭವಾದ ಚಾಕೊಲೇಟು ಕಾರ್ಖಾನೆ ಕಾಲಕ್ಕೆ ಏಷ್ಯಾದಲ್ಲೇ ಅತಿ ದೊಡ್ಡದು.
             ‘ಸಹಕಾರಿ ಸಂಸ್ಥೆಗಳು ಹೇಗಿರಬೇಕುಎನ್ನುವುದಕ್ಕೆ ಭಟ್ಟರ ಪಂಚ ಸೂತ್ರಗಳು. ಸದಾ ಜಾಗರೂಕ ಸದಸ್ಯರು, ಪ್ರಮಾಣಿಕ ಮತ್ತು ದಕ್ಷ ಆಡಳಿತ ಮಂಡಳಿ, ಕರ್ತವ್ಯನಿಷ್ಠ ಸಿಬ್ಬಂದಿ, ಮಿತಿಯರಿತ ಸರಕಾರ ಮತ್ತು ರಾಜಕೀಯ ರಾಹಿತ್ಯ. ಸೂತ್ರಗಳೇ ಕ್ಯಾಂಪ್ಕೋದಂತಹ ದೊಡ್ಡ ಸಂಸ್ಥೆಯ ಅಡಿಗಟ್ಟು. ಅಡಿಗಟ್ಟಿನ ಮೇಲೆ ವಾರಣಾಶಿಯವರ ಪುತ್ತಳಿ ಸ್ಥಾಪನೆ ಅರ್ಥಪೂರ್ಣ. ಚೇತನಕ್ಕೆ ನೀಡಿದ ಗೌರವ.

0 comments:

Post a Comment