Saturday, June 23, 2018

ಜಾಲತಾಣ ಗುಂಪುಗಳ ಅಗೋಚರ ಕ್ಷಮತೆ


           ಪುರುಸೊತ್ತಿಲ್ಲ. ಮಾಡಲು ಕೆಲಸವಿಲ್ಲ.” ಸ್ಮಾರ್ಟ್ಫೋನನ್ನು ಕೇಂದ್ರೀಕರಿಸಿ ಜಾಲತಾಣದಲ್ಲಿ ಹರಿದಾಡಿದ ಪದಗಳ ಗೊಂಚಲು. ಮೇಲ್ನೋಟಕ್ಕೆ ಇವುಗಳು ಢಾಳಾಗಿ ಕಾಣಬಹುದು. ಪದಗಳ ಭಾವದೊಳಗೆ ಇಳಿದಾಗ ವರ್ತಮಾನದ ತಲ್ಲಣಗಳು ತೆರೆದುಕೊಳ್ಳುತ್ತವೆ. ಸ್ಮಾರ್ಟ್ಫೋನ್ ದೇಹದ ಒಂದಂಗವಾದ ಕಾಲಘಟ್ಟದಲ್ಲಿ ಮರೆಯದ ಅಂಗೈ ಸಾಧನ, ಮರೆತರೆ ಬುದ್ಧಿನಾಶ!
                ಹಳ್ಳಿಗೆ ಹೋಗಿ. ಗೂಡಂಗಡಿ, ಹೋಟೆಲುಗಳ ಗೋಡೆಗಳಲ್ಲಿ 3ಜಿ, 4ಜಿಗಳ ಪೋಸ್ಟರ್ಗಳು ಸೆಳೆಯುತ್ತವೆ. ಅದರಲ್ಲಿರುವ ಆಫರ್ಗಳನ್ನು ಪೋಸ್ಟ್ಮಾರ್ಟಂ ಮಾಡುತ್ತಾ, ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿಯ ಮುಂದೆ ಗಣಿತ ತಜ್ಞರು ಏನೂ ಅಲ್ಲ! ಸ್ಮಾರ್ಟ್ಫೋನ್ಗಳ ದರ ಹೆಚ್ಚಿದಂತೆ ವ್ಯಕ್ತಿತ್ವ ಏರುತ್ತದೆಯೆಂಬ ಭ್ರಮೆಯಿದೆ!
                ವಾಟ್ಸಪ್, ಫೇಸ್ಬುಕ್, ಟ್ವಿಟ್ಟರ್, ಟೆಲಿಗ್ರಾಂ.. ಸಂವಹನಗಳ ಜಾಲತಾಣಗಳು. ನಗರ, ಹಳ್ಳಿಗಳ ಯುವ ಮನಸ್ಸುಗಳನ್ನು ಅತಿ ಶೀಘ್ರವಾಗಿ ವಶೀಕರಿಸುವ ಮಿಂಚುವೇಗದ ಸುದ್ದಿದೂತ! ವ್ಯವಹಾರಕ್ಕೆ ಪೂರಕವಾಗಿ ಜಾಲತಾಣಗಳ ಬಳಕೆ ವಿಸ್ತಾರವಾಗುತ್ತಿದೆ. ವಿವಿಧ ಆಸಕ್ತಿಯ ಗುಂಪುಗಳು ರೂಪುಗೊಳ್ಳುತ್ತಿವೆ. ಧನಾತ್ಮಕವಾದ ವಿಚಾರಗಳು ಹರಿಯುತ್ತಿವೆ. ಇವು ಎಲ್ಲೂ ದಾಖಲಾಗುವುದಿಲ್ಲ. 
                ಈಚೆಗೆ ಮುಂಡಾಜೆಯ ಕೃಷಿಕ ಗಜಾನನ ವಝೆಯವರು ಮಾತಿಗೆ ಸಿಕ್ಕಿದರು. ತಮ್ಮ ಇಸ್ರೇಲ್ ಪ್ರವಾಸದ ಹಿನ್ನೆಲೆಯಲ್ಲಿ ಜಾಲತಾಣಗಳ ಬಳಕೆಯನ್ನು ಗರಿಷ್ಠವಾಗಿ ಮಾಡಿಕೊಂಡಿದ್ದರು. ಒಂದು ತಂಡದ ಜತೆಗೆ ಜವಾಬ್ದಾರಿಯನ್ನೂ ಹೆಗಲಿಗೇರಿಸಿಕೊಂಡು ಇಸ್ರೇಲ್ ಪ್ರವಾಸವನ್ನು ಮುಗಿಸಿದ್ದರು. ಅಲ್ಲಿನ ಕೃಷಿ, ನೀರಾವರಿ ವಿಧಾನಗಳನ್ನು ಅಧ್ಯಯನ ಮಾಡಿದ್ದರು. ಪ್ರವಾಸದ ಹಿಂದೆ ವಾಟ್ಸಾಪ್, ಫೇಸ್ಬುಕ್ ಗುಂಪುಗಳು ಸಂವಹನ ಮಾಧ್ಯಮಗಳಾಗಿದ್ದುವು.
            “ಸಮಾನಾಸಕ್ತರ ಗುಂಪುಗಳಿಂದ ವಿಚಾರ ವಿನಿಮಯ ಸುಲಭವಾಗುತ್ತದೆ. ಇಸ್ರೇಲಿನಲ್ಲಿರುವ ಪರಿಚಯಸ್ಥರು, ಮತ್ತು ಇತರ ಸದಸ್ಯರೊಂದಿಗೆ ಒಂದೈದು ನಿಮಿಷ ಮಾತನಾಡಬಹುದು. ಆಗಿಂದಾಗ್ಗೆ ಮಾತನಾಡುವುದು ಉಭಯರಿಗೂ ಕಿರಿಕಿರಿ. ಹಿನ್ನೆಲೆಯಲ್ಲಿ ತಂಡದ ಸದಸ್ಯರ ವಾಟ್ಸಾಪ್ ಗುಂಪು ಎಲ್ಲರ ಜತೆ ಮಾತನಾಡಲು, ಅಪ್ಡೇಟ್ಸ್ಗಳನ್ನು ತಿಳಿಸಲು, ಮಾಹಿತಿಯನ್ನು ಹಂಚಲು ಸಹಕಾರಿಯಾಯಿತು. ಇಂತಹ ಸದುದ್ದೇಶಕ್ಕೆ ಜಾಲತಾಣಗಳು ಬಳಕೆಯಾಗಬೇಕು.” ಎನ್ನುತ್ತಾರೆ.
         ಗೋಕಾಕ್, ಬೈಲಹೊಂಗಲದಲ್ಲಿ ಕೃಷಿಕ ಯುವಕರು ವಾಟ್ಸಪ್ ಗುಂಪು ರಚಿಸಿಕೊಂಡು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಜಾಣ್ಮೆಯನ್ನು ಕೃಷಿ ಪತ್ರಕರ್ತ ಶಿವಾನಂದ ಕಳವೆ ದಾಖಲಿಸುತ್ತಾರೆ. ತಮ್ಮೂರ ಗ್ರಾಹಕರಿಗೆ ತಾವು ಬೆಳೆದ ಕಾಳು, ತರಕಾರಿಗಳನ್ನು ಹಂಚುವ ವೇದಿಕೆಯಿದು. ಕೃಷಿ ಜ್ಞಾನ ವಿನಿಮಯಕ್ಕೂ ಗುಂಪು ಬಳಕೆ. ಇದರಿಂದ ನಾಳಿನ ಸಂತೆಯಲ್ಲಿ ಯಾವ್ಯಾವ ಉತ್ಪನ್ನಗಳಿವೆ ಎನ್ನುವ ವಿಚಾರ ಮೊದಲೇ ತಿಳಿದುಬಿಡುತ್ತದೆ. ಖರೀದಿಗೆ ಬೇಕಾದ ವ್ಯವಸ್ಥೆ ಅಥವಾ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ.
         ಶಿವಾನಂದ ಹೇಳುತ್ತಾರೆ, “ಇಲ್ಲಿನ ಹಲವರು ಹೊಲದೆಡೆಯಿಂದ ಹರಿದು ಬರುವ ವಾಟ್ಸಾಪ್ ಸಂದೇಶದ ನಿರೀಕ್ಷೆಯಲ್ಲಿರುತ್ತಾರೆ. ವಿಷಮುಕ್ತ ಆಹಾರ ಬಯಸುವ ಗ್ರಾಹಕರು ವಾರದ ತರಕಾರಿ ಪೇಟೆಗೆ ಏನೆಲ್ಲಾ ತರಕಾರಿ ತರುತ್ತಾರೆಂದು ಮುಂಚಿತವಾಗಿ ಗಮನಿಸುತ್ತಾರೆ. ಜಗತ್ತು ಅನುಸರಿಸುವ ಸಂಪರ್ಕ ತಂತ್ರಜ್ಞಾನ ಅಳವಡಿಸಿಕೊಂಡು ಮಾರುಕಟ್ಟೆಯಲ್ಲಿ ಬೆಳೆ ಹಾಗೂ ಬೆಳೆದವರನ್ನು ಪರಿಚಯಿಸುತ್ತ ಕೃಷಿ ಭವಿಷ್ಯ ಕಟ್ಟುವ ಹೋರಾಟ ನಡೆದಿದೆ.” ಮಂಗಳೂರಿನಲ್ಲೂ ಅಡ್ಡೂರು ಕೃಷ್ಣ ರಾಯರ ನೇತೃತ್ವದಲ್ಲಿ ಸಾವಯವ ಕೃಷಿಕ ಗ್ರಾಹಕ ಬಳಗ ರೂಪುಗೊಂಡಿದೆ.  ಬಳಗದ ತರಕಾರಿ ಸಂತೆಗೆ ಉತ್ತಮ ಗ್ರಾಹಕ ಪ್ರತಿಕ್ರಿಯೆಯಿದೆ.
         “ಈಗೀಗ ಗ್ರಾಹಕರು ತಮಗೆ ಬೇಕಾದ ಎಲ್ಲಾ ವಸ್ತುಗಳನ್ನು ಜಾಲತಾಣಗಳಿಂದ ತರಿಸುವ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆಸಕ್ತಿಗೆ ಸಹಕರಿಸುವ ಫ್ಲಿಪ್ಕಾರ್ಟ್, ಅಮೆಝಾನ್, ಸ್ನ್ಯಾಪ್ಡೀಲ್.. ಜಾಲತಾಣಗಳು ಹಳ್ಳಿಗೂ ಹಬ್ಬಿವೆ. ಕಂಪ್ಯೂಟರ್ ಅಲ್ಲದೆ ದಿನಸಿ ಸಾಮಾನುಗಳೂ ಜಾಲತಾಣಗಳ ಮೂಲಕ ಮಾರಾಟವಾಗುತ್ತಿವೆ.  ಹಲವಾರು ಯುವಕರು ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿಯೇ ನವೀನ ರೀತಿಯ -ಮಾರುಕಟ್ಟೆಯನ್ನು ರೂಪಿಸುತ್ತಿದ್ದಾರೆ.” ವಿಜ್ಞಾನ, ತಂತ್ರಜ್ಞ ಡಾ.ಮೋಹನ್ ತಲಕಾಲುಕೊಪ್ಪ ವಿಶ್ಲೇಷಣೆ. 
           ಮಲೇಶ್ಯಾದಲ್ಲಿ ಭಾರತೀಯ ಮೂಲದ ಮನಮೋಹನ ಸಿಂಗ್, ಹರ್ವಿಂದರ್ ಸಿಂಗ್ ಹಲಸು ಕೃಷಿಯಲ್ಲಿ ಹೆಸರು ಮಾಡಿದವರು. ಹಲಸಿನ ಅಂತಾರಾಷ್ಟ್ರೀಯ ರಾಯಭಾರಿ ಶ್ರೀ ಪಡ್ರೆಯವರಿಗೆ ಮಲೇಶ್ಯಾದಲ್ಲಿ ಹಲಸಿನ ತೋಪು ಎದ್ದಿರುವ ಸುಳಿವು ಸಿಕ್ಕಿತು. ಯಶೋಗಾಥೆಗೆ ಕನ್ನಡಿ ಹಿಡಿಯಲು ಕಾಯುತ್ತಿದ್ದರು. ಸುಳಿವಿನ ಬೆನ್ನೇರಿದರು. ವಾಟ್ಸಾಪ್ ಮೂಲಕ ಮಾಹಿತಿಗಳು ಹರಿದು ಬಂದುವು. ಸುಮಾರು ನಾಲ್ಕು ತಿಂಗಳ ಸಂವಹನದಿಂದ ಒಳ್ಳೆಯ ನುಡಿಚಿತ್ರವೊಂದು ಹೆಣೆಯಲ್ಪಟ್ಟಿತು. 
             “ಮೂವತ್ತೋ ನಲತ್ತೋ ಸಾವಿರ ರೂಪಾಯಿ ವೆಚ್ಚ ಮಾಡಿ ಮಲೇಶ್ಯಾಗೆ ಹೋಗಿ ಬಂದರೂ ಇಷ್ಟು ಮಾಹಿತಿ ಚಿತ್ರ ತರಲಾಗುತ್ತಿತ್ತೇ? ನಮ್ಮಿಬ್ಬರು ಭಾಯ್ಗಳು ಗಿಡಗಳ ಪ್ರೂನಿಂಗ್ ಡೆಮೋ, ಫೋಟೋಗಳು, ಇಂಟರ್ವ್ಯೂ ಸೆಶನುಗಳಿಗಾಗಿ ಸಮಯ ಮಾಡಿ, ಮನದ ಮಾತೆಲ್ಲವನ್ನೂ ತೆರೆದು ಹೇಳಿದ್ದಾರೆ. ಮೂರು ನಾಲ್ಕು ತಿಂಗಳುಗಳ ವಿನಿಮಯದ ನಂತರ ನಾನು ಇಬ್ಬರಿಗೂಬಡೆ ಭಾಯ್ಆಗಿದ್ದೇನೆ. ಭಾರತಕ್ಕೆ ಬಂದಾಗ ನಮ್ಮೂರಿಗೂ ಬರುವುದಾಗಿ ಹೇಳಿದ್ದಾರೆ. ನನ್ನ ಪತ್ರಿಕೋದ್ಯಮ ಬದುಕಿನಲ್ಲಿ ಇದೊಂದು ಅಚ್ಚರಿಯ, ಸಫಲ ಪ್ರಯೋಗ.” ಎನ್ನುವ ಖುಷಿ ಪಡ್ರೆಯವರದು. ಕೆಲವು ವರುಷಗಳ ಹಿಂದೆ ಹವಾಯಿಯ ಫಲಪ್ರಿಯ ಕೆನ್ಲವ್ ಕನ್ನಾಡಿಗೆ ಬಂದುದು ಕೂಡಾ ಇಂತಹ ಸಂಪರ್ಕ ಜಾಲಗಳ ಫಲಶ್ರುತಿ.
          ಜಲಸಂರಕ್ಷಣೆಯ ಆಸಕ್ತರು, ಶಾಲಾ ಅಧ್ಯಾಪಕರ ನಡುವಿನ ಸೇತುಜಲ ಸಾಕ್ಷರತಾ ಆಂದೋಳನಎನ್ನುವ ಗುಂಪು. ಅಧ್ಯಾಪಕರು ಮಾತ್ರವಲ್ಲ ನೀರಿನ ಕೆಲಸ ಮಾಡಿದವರಿಗೆ ಮುಕ್ತ ಸ್ವಾಗತ. ನೂರ ಎಪ್ಪತ್ತ ಒಂಭತ್ತು ಮಂದಿ ಸದಸ್ಯರಿರುವ ಬಳಗಕ್ಕೆ ಸುಧಾಕರ್ ಅಡ್ಮಿನ್. ಇವರು .. ಜಿಲ್ಲಾ ವಯಸ್ಕ ಶಿಕ್ಷಣ ಅಧಿಕಾರಿ. ಜಲಯೋಧರು, ಅಧ್ಯಾಪಕರು ತಂತಮ್ಮ ಊರಿನ, ಶಾಲೆಯ ನೀರಿನ ಸುದ್ದಿಗಳನ್ನು ಹಂಚಿಕೊಳ್ಳುತ್ತಾರೆ. ಜಲಮರುಪೂರಣದ ವಿಧಾನಗಳು, ಸಂಶಯಗಳು, ಹೊಸ ವಿಚಾರಗಳು ಗುಂಪಿನಲ್ಲಿ ಚರ್ಚೆಯಾಗುತ್ತದೆ. 
       ಎಗ್ರಿಕಲ್ಚರಿಸ್ಟ್ ಗುಂಪುಇದು ಕೃಷಿಕರ ವೇದಿಕೆ. ಆಧುನಿಕ ತಂತ್ರಜ್ಞಾನಗಳ ಮಾಹಿತಿಗಳು, ಕೃಷಿ ವಿಚಾರಗಳ ವಿನಿಮಯ ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸುವ ಉದ್ದೇಶದಿಂದ ರೂಪುಗೊಂಡ ಫೇಸ್ಬುಕ್ ಗುಂಪಿಗೆ ಈಗ ಏಳು ವರ್ಷ. ಎರಡೂವರೆ ಲಕ್ಷಕ್ಕೂ ಅಧಿಕ ಸದಸ್ಯರು! ಅತ್ಯಂತ ಪ್ರಭಾವಿ ಕೃಷಿಕರ ತಂಡವಾಗಿ ಬೆಳೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳೂ ಮಾತ್ರವಲ್ಲ, ದೇಶದ ವಿವಿದೆಡೆಯ ಕೃಷಿಕರು ವೇದಿಕೆಯಲ್ಲಿದ್ದಾರೆ. ವಾಟ್ಸಪ್ ಗುಂಪು ಕೂಡಾ ಸಕ್ರಿಯ. ಕೃಷಿ ಉತ್ಪನ್ನಗಳ ಮಾರಾಟ, ಮಾಹಿತಿ, ಕೃಷಿ ಸಮಸ್ಯೆಗಳ ಚರ್ಚೆ, ವಿಜ್ಞಾನಿಗಳ ಸಲಹೆ, ಸೋಲಾರ್ ಬಳಕೆ.. ಹೀಗೆ ಅನ್ಯಾನ್ಯ ವಿಚಾರಗಳ ಮಾತುಕತೆಗಳು. ಗುಂಪಿನ ನಿರ್ವಾಹಕರು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಮತ್ತು ಕೃಷಿಕ ರಮೇಶ ದೇಲಂಪಾಡಿ.
           ರಾಜ್ಯದಲ್ಲೀಗ ಹೊಸ ಸಮ್ಮಿಶ್ರ ಸರಕಾರ ಹಸೆಮಣೆ ಏರಿದೆ! ಪೂರ್ವಭಾವಿಯಾಗಿ ಎಗ್ರಿಕಲ್ಚರಿಸ್ಟ್ ಫೇಸ್ಬುಕ್ ಗುಂಪು ರಾಜಕೀಯ ಪಕ್ಷಗಳಿಗೆ ಕೃಷಿ ಮತ್ತು ಕೃಷಿಕರ ಅವಶ್ಯಕತೆ, ಸೌಕರ್ಯ, ಮೂಲಭೂತ ವ್ಯವಸ್ಥೆಗಳ ಮಾಹಿತಿಯುಳ್ಳ ಪಟ್ಟಿಯನ್ನು ನೀಡಿದೆ. ಎಲ್ಲಾ ಪಕ್ಷಗಳಿಗೂ ತಂತಮ್ಮ ಪ್ರಣಾಳಿಕೆಗಳಿಗೆ ಸೇರಿಸಲು ಅನುಕೂಲವಾಗುವಂತೆ ವಿಚಾರಗಳನ್ನು ಹೊಸೆಯಲಾಗಿದೆ. ಯುವ ಕೃಷಿಕರ ಅಭಿಪ್ರಾಯಗಳನ್ನೂ ಸೇರಿಸಿದೆ. ವಿದ್ಯುತ್, ಬಿತ್ತನೆ ಬೀಜ, ಮಾರುಕಟ್ಟೆ, ಕೃಷಿ ದಾಖಲೆಗಳು, ಬೆಂಬಲ ಬೆಲೆ, ಯಂತ್ರೋಪಕರಣ, ಅನುಶೋಧನೆ, ಕೃಷಿ ಉತ್ಪನ್ನಗಳ ಖರೀದಿ, ಕೃಷಿ ಸಹಾಯಕರಿಗೆ ಪಿಂಚಣಿ, ನಗರಕ್ಕೆ ವಿದಾಯ ಹೇಳಿ ಹಳ್ಳಿಗೆ ಮರಳುವ ಮನಸ್ಸುಗಳಿಗೆ ಪ್ರೋತ್ಸಾಹ, ತಾಂತ್ರಿಕ ಮಾಹಿತಿ, ಮೌಲ್ಯವರ್ಧನೆ, ಜಲಮರುಪೂರಣ, ಹೈನುಗಾರಿಕೆ.. ಹೀಗೆ ಕೃಷಿಯ ಬೇಕುಗಳನ್ನು ಕೃಷಿಕರ ಕಣ್ಣಿನ ನೋಡಿ, ಅವರ ಅಭಿಪ್ರಾಯದಂತೆ ಮಾಹಿತಿ ಗುಚ್ಛವನ್ನು ಸಿದ್ಧಪಡಿಸಿ ರಾಜಕೀಯ ಪಕ್ಷಗಳಿಗೆ ಜಾಲತಾಣ ಗುಂಪೊಂದು ನೀಡಿರುವುದು ಅಪರೂಪ.
          ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು ವಾಟ್ಸಪ್ ಗುಂಪಿನ ನೆರವಿನಿಂದ ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮ ಪಾಠ ಮಾಡಿರುವುದು ಅನನ್ಯ. ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಎರಡು ವರುಷದ ಹಿಂದೆವಾಟ್ಸಾಪ್ ಕೃಷಿ ಪತ್ರಿಕೋದ್ಯಮ ಶಿಬಿರಏರ್ಪಡಿಸಿತ್ತು. ಜಾಲತಾಣಗಳ ಮಾಹಿತಿಗಳ ಸುಳಿವಿನಿಂದ ನುಡಿಚಿತ್ರಗಳನ್ನು, ವರದಿಗಳನ್ನು ಹೊಸೆಯುವ ಪ್ರಾಕ್ಟಿಕಲ್ ಮಾಹಿತಿಯನ್ನು ಮೊಗೆದು ತೋರಿಸಿದೆ. “ವಾಟ್ಸಾಪ್ ಪತ್ರಿಕೋದ್ಯಮವು ತುಂಬ ವಿನೂತನ. ಕೃಷಿಕರಿಗೆ ಇಂದು ಭಟ್ಟಿ ಇಳಿಸಿ ಕೊಡುವ ಮಾಹಿತಿ ಬೇಕು. ಅತ್ಯಂತ ನವೀನ ಪತ್ರಿಕೋದ್ಯಮ ವಿಧಾನ ಕಾಲದ ಆವಶ್ಯಕತೆಎಂದವರು ಮಲೆಯಾಳ ಕೃಷಿ ಜಾಲತಾಣವೊಂದರ ಸಂಪಾದಕರಾದ ನೆಮೆ ಜಾರ್ಜ್.  
            ಹೀಗೆ ಜಾಲತಾಣಗಳ ಸದ್ಭಳಕೆ ಕಾಲದ ಅನಿವಾರ್ಯ. ಸದುದ್ದೇಶದ ಗುಂಪಿನಲ್ಲೂ ಸಮಸ್ಯೆ ಇಲ್ಲವೆಂದಲ್ಲ. ಉಡಾಫೆ, ಗೇಲಿ, ಪ್ರತಿಷ್ಠೆಗಳು ನುಸುಳುತ್ತವೆ. ಅದನ್ನು ನಿಯಂತ್ರಿಸುವುದು ನಿರ್ವಾಹಕನ ತಾಕತ್ತು. ಕಟು ನಿಷ್ಠುರವೂ ಅಗತ್ಯ. ಬದುಕಿಗೆ ಪೂರಕವಾದ ಚಟುವಟಿಕೆಗಳಿಗೆ ಬಳಕೆಯಾಗುವುದು ಸಂತೋಷದ ಸಂಗತಿ. ಅ್ಯಪ್ಗಳೂ ಕೂಡಾ ಕೃಷಿಕರ ಸಂಗಾತಿ. ಇವುಗಳನ್ನೆಲ್ಲಾ ನಾವು ಹೇಗೆ ಬಳಸಿಕೊಳ್ಳುತ್ತವೆ ಎನ್ನುವುದರಲ್ಲಿ ಅವುಗಳ ಯಶಸ್ಸು. ಕೃಷಿ, ಗ್ರಾಮೀಣ ಬದುಕಿಗೆ ನೆರವಾಗಬಲ್ಲ ಸಾವಿರಾರು ಗುಂಪುಗಳಿವೆ. ಅವುಗಳ ಕಾರ್ಯಹೂರಣ ಅಜ್ಞಾತ. ಅದರಲ್ಲಿರುವ ಸದಸ್ಯರಿಗಷ್ಟೇ ಗೊತ್ತು. ಹೊರ ಪ್ರಪಂಚಕ್ಕೆ ಅಗೋಚರ.   
(ಉದಯವಾಣಿ / ನೆಲದ ನಾಡಿ / 31-5-2018)
 


1 comments:

RAMESH DELAMPADY said...

ಹೊಸದಾದ ಉತ್ಪನ್ನದ/ಅವಕಾಶಗಳ ಬಗೆಗೆ ಋಣಾತ್ಮಕವಾಗಿ ಪ್ರತಿಕ್ರಿಯಿಸುವವರೇ ಜಾಸ್ತಿ.ಅವುಗಳನ್ನು ಸಕಾರಾತ್ಮಕವಾಗಿ ಉಪಯೋಗಿಸುವ ಸಾಧ್ಯತೆಯನ್ನು ಬರಹ ತೆರೆದಿಟ್ಟಿದೆ.ಧನ್ಯವಾದಗಳು.

Post a Comment