Thursday, October 1, 2020

ಕೃಷಿ ಆವಿಷ್ಕಾರಗಳ ಅನ್ವೇಷಣಾ ಉತ್ಸವ - ಬಾಲವಿಜ್ಞಾನಿಗಳ ಕಲರವ



 

l ಡಾ.ಮೋಹನ್ ತಲಕಾಲುಕೊಪ್ಪ    l ನಾ. ಕಾರಂತ ಪೆರಾಜೆ

 

ಚಿಣ್ಣರ ಮನದಲ್ಲಿ ಸಂಶೋಧನೆಯ ಹೊಳಹು ಮೂಡಿಸಲು,

ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ತುಂಬಾ ಸಹಾಯಕ

 

ಶೈಕ್ಷಣಿಕ ಸಂಸ್ಥೆಯೊಂದು ಕೃಷಿ ಆವಿಷ್ಕಾರಗಳತ್ತ ಮುಖ ಮಾಡಿರುವುದು ಅಪರೂಪ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ತನ್ನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ಎರಡು ದಿವಸದ (November 2019) ಅಗ್ರಿ ಟಿಂಕರಿಂಗ್ ಫೆಸ್ಟ್ಅನ್ವೇಷಣಾ 2019’ ಸಂಪನ್ನಗೊಳಿಸಿತ್ತು. ಅನ್ಯಾನ್ಯ ಶಾಲೆಗಳ ಮುನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಯೋಚನೆಯ ಆವಿಷ್ಕಾರಗಳಮಾದರಿಪ್ರದರ್ಶನಗಳು ವಿನೂತನ. ತೆಂಗಿನ ಮಡಲು ಹಾಗೂ ಅಡಿಕೆ ಕಂಬಗಳನ್ನು ಉಪಯೋಗಿಸಿ ಮಾಡಿದ್ದ ಪರಿಸರಸ್ನೇಹಿ ಮಳಿಗೆಗಳು ಗಮನ ಸೆಳೆಯುವಂತಿದ್ದವು.

ಎಲ್ಲ ಮಳಿಗೆಗಳಲ್ಲಿ ವಿದ್ಯಾರ್ಥಿಗಳದ್ದೇ ನಿರ್ವಹಣೆ. ಅವರವರ ಆವಿಷ್ಕಾರದ ವಿವರಣೆ, ಕ್ಷಮತೆ, ಪ್ರಯೋಜನಗಳನ್ನು ಕೃಷಿಕರಿಗೆ ವಿವರಿಸುತ್ತಿದ್ದರು. ಬಾಲ ವಿಜ್ಞಾನಿಯ ಯೋಚನೆ - ಯೋಜನೆಗಳಿಗೆ ಬೆರಗಾದವರೇ ಹೆಚ್ಚು. ಇಲ್ಲಿ ಆಯ್ಕೆಯಾದ ಸುಮಾರು ಮೂವತ್ತರಿಂದ ಐವತ್ತು ಆವಿಷ್ಕಾರಗಳನ್ನು ಒಂದು ವರುಷದೊಳಗೆ ಕೃಷಿರಂಗಕ್ಕೆ ಉತ್ನನ್ನವಾಗಿ ಒದಗಿಸುವ ದೂರದೃಷ್ಟಿ.

ನಾಲ್ಕು ವಿಭಾಗದಲ್ಲಿ ಸ್ಪರ್ಧೆಗಳಿದ್ದುವು. ಹದಿಮೂರು ವರುಷ ಮತ್ತು ಕೆಳಗಿನ ಅಂದರೆ ಎಂಟನೇ ತರಗತಿ ತನಕದ ವಿದ್ಯಾರ್ಥಿಗಳು, ಹದಿನಾಲ್ಕರಿಂದ ಹದಿನೆಂಟು ವರುಷ ಅಂದರೆ ಎಂಟರಿಂದ ಪಿ.ಯು.ಸಿ. ತನಕ, ಪದವಿ ಮತ್ತು ತಾಂತ್ರಿಕ ಕಲಿಕೆ ಹಾಗೂ ಕೃಷಿಕರು - ಸಾರ್ವಜನಿಕರು - ನಾಲ್ಕು ವಿಭಾಗಗಳಲ್ಲಿ ಮುಕ್ತ ಅವಕಾಶ. ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ಕೃಷಿಕರ ಆವಿಷ್ಕಾರಗಳೂ  ಮುಖಾಮುಖಿಯಾಗಿವೆ. ಕೃಷಿಕರ ಸ್ವಾನುಭವ ಮತ್ತು ವಿದ್ಯಾರ್ಥಿ ವಿಜ್ಞಾನಿಯ ಜ್ಞಾನ ಎರಡೂ ಮಿಳಿತಗೊಂಡಿವೆ!

ಅನ್ವೇಷಣೆ 2019ಕ್ಕೆ ಲಘು ಉದ್ಯೋಗ ಭಾರತಿ ಸಂಸ್ಥೆಯು ಕೈ ಜೋಡಿಸಿದೆ. ಇದು ಚಿಕ್ಕ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವ ಸಂಸ್ಥೆ. “ಅನ್ವೇಷಣಾ 2019ರಲ್ಲಿ ಲಘು ಉದ್ಯೋಗ ಭಾರತಿಯು ಎಲ್ಲಾ ಮಾದರಿಗಳನ್ನು ಸಮಗ್ರ ಅವಲೋಕನ    ನಡೆಸಿದೆ.    ಕೂಲಂಕಶವಾಗಿ ಪರಿಶೀಲಿಸಿದೆ. ಇವುಗಳಲ್ಲಿ ಮೆಂಟರ್ಶಿಪ್ಗೆ ಮಾನ್ಯತೆ ಪಡೆದ ಮೂವತ್ತು ಮಾದರಿಗಳು ಉತ್ಪನ್ನವಾಗಿ ಹೊರಗೆ ಬಂದರೆ ಕೃಷಿಕರಿಗೂ ಉದ್ಯಮಿಗಳಿಗೂ ಲಾಭದಾಯಕ ಎನ್ನುವುದನ್ನು ಕಂಡುಕೊಂಡಿದೆಎನ್ನುತ್ತಾರೆ ಮುರಳೀಧರ್. ಇವರು ವಿವೇಕಾನಂದ ಆಂಗ್ಲ ಮಾಧ್ಯಮ  ಶಾಲೆಯ ಸಂಚಾಲಕ ಹಾಗೂ ಅನ್ವೇಷಣಾ ಹಬ್ಬಕ್ಕೆ ದೊಡ್ಡ ಹೆಗಲು ನೀಡಿದವರು.

ಪ್ರದರ್ಶನಗೊಂಡ ಎಲ್ಲವೂ ಪ್ರಶಂಸನೀಯವಾದವುಗಳೇ. ಕಣ್ಣೋಟದಲ್ಲಿ ಕಂಡ ಕೆಲವು ಆವಿಷ್ಕಾರಗಳ ಮಾದರಿಗಳು ಇಲ್ಲಿವೆ:

ಬಿತ್ತನೆ ಸಾಧನ

ಹೊಲದಲ್ಲಿ ಸಾಧನವನ್ನು ತಳ್ಳುತ್ತಿದ್ದರೆ ಆಯಿತು, ಏಕಕಾಲಕ್ಕೆ ನಾಲ್ಕು ಕೆಲಸಗಳು! ಸಾಧನದ ಮುಂಭಾಗದಲ್ಲಿ ನೇಗಿಲಿನಂತಹ ರಚನೆಯಿದೆ. ಇದರಿಂದ ಉಳುಮೆ. ಇದರ ಬೆನ್ನಿಗೆ ಹಾಪರ್ನಲ್ಲಿ ಹಾಕಿದ ಬೀಜಗಳು ಸಮಾನಾಂತರದಲ್ಲಿ ಮಣ್ಣಿಗೆ ಸೇರುತ್ತಿದೆ. ಜತೆಗೆ ಹನಿ ಹನಿ ನೀರು ಮಣ್ಣನ್ನು ಒದ್ದೆ ಮಾಡುತ್ತದೆ. ಬೀಜಕ್ಕೆ ಬೇಕಾದಷ್ಟೇ ಮಣ್ಣು ತೋಯುತ್ತದೆ. ಸಾಧನದ ಹಿಂದಿರುವ  ರಚನೆಯು ಉಳುಮೆಯ ಸಾಲನ್ನು ಮುಚ್ಚಿ ಬೀಜವನ್ನು ಮಣ್ಣಿನೊಳಗೆ ಅವಿತುಕೊಳ್ಳುವಂತೆ ಮಾಡುತ್ತದೆ.

ಇದು ರಾಕೇಶ್ಕೃಷ್ಣ ಇವರ ಆವಿಷ್ಕಾರ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ  (ವಿಆಮಾಶಾ) ವಿದ್ಯಾರ್ಥಿ. ಮಣ್ಣಿಗೆ ಬೀಜ ಇಳಿಸಿಕೊಳ್ಳುವ ಭಾಗದಲ್ಲಿ ಪ್ರತ್ಯಪ್ರತ್ಯೇಕವಾಗಿ ಒಂದರ ಬಳಿಕ  ಒಂದರಂತೆ  ಮೂರು   ಬೇರೆ  ಬೇರೆ ಬೀಜಗಳನ್ನೂ ಪ್ರದಾನಿಸುವಂತಹ ವ್ಯವಸ್ಥೆಯಿದೆ. ಅವಶ್ಯವಿದ್ದರೆ ನೀರಾವರಿ ಜಾಲದಲ್ಲಿ ದ್ರವ ಗೊಬ್ಬರಗಳನ್ನು ಬಳಸಬಹುದು.

ಮಳೆಗೆ ಅಡಿಕೆ ಒದ್ದೆಯಾಗುವ ಭಯವಿಲ್ಲ!

ಅಂಗಳದಲ್ಲಿ ಅಡಿಕೆಯಿದೆ. ಮಳೆ ಬರುವ ಸೂಚನೆಯಿದ್ದರೂ ಬರುತ್ತೋ ಇಲ್ವೋ ಅರೆ ಧೈರ್ಯ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಖಿಲೇಶ್ ಮತ್ತು ಪ್ರಜ್ವಲ್ ಸಮಸ್ಯೆಯನ್ನು ಪರಿಹರಿಸುವ ಚಿಕ್ಕ ಇಲೆಕ್ಟ್ರಾನಿಕ್ ಉಪಕರಣದ ಮಾದರಿ ಸಿದ್ಧಪಡಿಸಿದ್ದಾರೆ.

ಅಡಿಕೆ ಒಣಗಿಸುವ ಅಂಗಳದಲ್ಲಿ, ಒಣಗಿಸುವ ನಿಶ್ಚಿತ ಜಾಗದಲ್ಲಿ ನೆಲ ಮಟ್ಟದಿಂದ ನಾಲ್ಕೈದು ಅಡಿ ಎತ್ತರಕ್ಕೆ ಒಂದು ಚಪ್ಪರದಂತಹ ರಚನೆ ಜೋಡಣೆಯ ವ್ಯವಸ್ಥೆ. ಟರ್ಪಾಲು ಮಡಚಿಕೊಳ್ಳುವ, ಬಿಡಿಸಿಕೊಳ್ಳುವ ಇಲೆಕ್ಟ್ರಾನಿಕ್ ತಾಂತ್ರಿಕತೆ. ಸೋಲಾರ್ ಪ್ಯಾನೆಲ್ನಂತಿರುವ ಚಿಕ್ಕ ಪ್ಯಾನೆಲ್ ಮೇಲೆ ಮಳೆಯ ಒಂದು ಹನಿ ಬಿದ್ದರೆ ಸಾಕು, ಅದು ತಕ್ಷಣ ಸಂದೇಶ ರವಾನಿಸಿ, ಅಂಗಳದಲ್ಲಿದ್ದ ಅಡಿಕೆಯ ಮೇಲೆ ಸ್ಥಾಪಿಸಿರುವ ಟರ್ಪಾಲನ್ನು ಬಿಡಿಸುತ್ತಾ ಹಾಸಿಬಿಡುತ್ತದೆ. ಅಡಿಕೆ ಒದ್ದೆಯಾಗುವುದು ತಪ್ಪುತ್ತದೆ. ಸಂದೇಶವು ಯಜಮಾನನಿಗೂ ಹೋಗುತ್ತದೆ.

ಮನೆಯಲ್ಲೇ ಕುಳಿತು ಪಂಪ್ ಚಾಲೂ

ಒಂದೆಡೆ ವಿಆಮಾಶಾ ಒಂಭತ್ತರ ವಿದ್ಯಾರ್ಥಿ ನಿಶ್ಚಲ್ ತನ್ನ ಆವಿಷ್ಕಾರವನ್ನು ಹೇಳುತ್ತಾನೆ, ‘ಭತ್ತದ ಗದ್ದೆಯಲ್ಲಿ ಒಣ ಪೈರಿದೆ, ಅಕಸ್ಮಾತ್ತಾಗಿ ಬೆಂಕಿ ಬಿದ್ದಿತೆನ್ನಿ. ಯಜಮಾನರಿಗೆ ತಿಳಿಯುವ ಹೊತ್ತಿಗೆ ಎಲ್ಲವೂ ಕರಟಿರುತ್ತದೆ. ಇಲ್ನೋಡಿ.. ರೀತಿಯ ಸೆನ್ಸಾರ್ ಒಂದನ್ನು ಗದ್ದೆಯಲ್ಲಿ ಸ್ಥಾಪಿಸಿ. ಬೆಂಕಿ ಬಿತ್ತೋ ಅದು ಯಜಮಾನನಿಗೆ ಮೆಸ್ಸೇಜ್ ಕಳುಹಿಸುತ್ತದೆ. ಆಗ ತಕ್ಷಣ ನಂದಿಸುವ ಕೆಲಸಕ್ಕೆ ತೊಡಗಬಹುದು. ನಮ್ಮಲ್ಲಿ ಅಷ್ಟೊಂದು ಭಯವಿಲ್ಲ. ಯಾಕೆ ಹೇಳಿ. ಭತ್ತದ ಗದ್ದೆಗಳೇ ಇಲ್ಲ. ಉತ್ತರ ಕರ್ನಾಟಕಕ್ಕೆ ಸಾಧನ ಹೊಂದಬಹುದು.”

ಒಂಭತ್ತರ ವಿದ್ಯಾರ್ಥಿಯಲ್ಲಿರುವ ಭತ್ತದ ಕೃಷಿಯ ಇಳಿಲೆಕ್ಕದ ಜ್ಞಾನಕ್ಕೆ ಬೆರಗಾಗುವ ಸರದಿ ನನ್ನದು! “ಇಲ್ನೋಡಿ. ಇಲ್ಲೊಂದು ಸೆನ್ಸಾರ್ ಇದೆ. ಗದ್ದೆಯಲ್ಲೋ, ತೋಟದಲ್ಲೋ ನೀರಿನ ತೇವ ಆರಿದಾಗ ಮೆಸ್ಸೇಜ್ ಹೋಗುವಂತಹ ತಾಂತ್ರಿಕತೆ. ಜತೆಗೆ ಮೊಬೈಲಿನಲ್ಲಿರುವ ಆಪಿನಲ್ಲಿ ಪಂಪನ್ನು ಚಾಲು ಮತ್ತು ಆಫ್ ಮಾಡುವ ವ್ಯವಸ್ಥೆ. ‘ಮನೆಯಲ್ಲೇ ಕುಳಿತು ಇರಿಗೇಶನ್ ಮಾಡಬಹುದು ಸರ್.’ ನಿಶ್ಚಲನ ಆತ್ಮವಿಶ್ವಾಸ.

ದುರ್ವಾಟೀ

ಗರಿಕೆ ಹುಲ್ಲಿನ ಚಹದುರ್ವಾಟೀ! ವಿವೇಕಾನಂದ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಆಕಾಶ್ ಎಂ.ಶೆಟ್ಟಿ ಮತ್ತು ಅಕ್ಷತಾ ಕುಮಾರ್ ಇವರಿಬ್ಬರ ಅಧ್ಯಯನ. ಮುಖ್ಯವಾಗಿ ಗರಿಕೆ ಹುಲ್ಲು ಮತ್ತು ಕೆಲವು ಔಷಧೀಯ ಸಸ್ಯಗಳ ಮಂದಸಾರದಿಂದ ತಯಾರಿಸುವ ಪೌಡರ್. 

ಇದು ಮಧುಮೇಹ, ಬೊಜ್ಜು ಇದ್ದವರು ಬಳಸಬಹುದುಎನ್ನುತ್ತಾರೆ. ಅಧ್ಯಯನಕ್ಕೆ ಬಹುಮಾನ ಬಂದಿದೆ.  ದುರ್ವಾಟೀಯನ್ನು ನಾವೇ ಮಾರುಕಟ್ಟೆ ಮಾಡುತ್ತೇವೆ.  ಇದರ ಸುವಾಸನೆ, ಆರೋಗ್ಯ ಪರಿಣಾಮಗಳು ಕ್ಲಿಕ್ ಆಗಬಹುದುವಿದ್ಯಾರ್ಥಿ ದೆಸೆಯಲ್ಲಿನ ಅವರ ದೂರನಿರೀಕ್ಷೆಗೆ ಹ್ಯಾಟ್ಸ್ ಆಫ್.

ಮಡಲಿನಿಂದ ಕಡ್ಡಿ ಪ್ರತ್ಯೇಕಿಸುವ ಸಾಧನ

ಒಂದು ಮಳಿಗೆಯಲ್ಲಿ ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಯ ಏಳರ ವಿದ್ಯಾರ್ಥಿ ಸೋನಾಲ್ ಕೆ.ಶೆಟ್ಟಿ ಅಳುಕಿಲ್ಲದೆ ತೆಂಗಿನ ಮಡಲಿನಿಂದ ಕಡ್ಡಿಯನ್ನು ಪ್ರತ್ಯೇಕಿಸುವ ಚಿಕ್ಕ ಸಾಧನವನ್ನು ವಿವರಿಸುತ್ತಿದ್ದ. ಜತೆಗೆ ಪ್ರಾತ್ಯಕ್ಷಿಕೆಯನ್ನೂ ಮಾಡುತ್ತಿದ್ದ. “ಇದು ನಂನಮ್ಮ ಮನೆಯಲ್ಲಿದ್ದರೆ ಮನೆ ಮಟ್ಟಕ್ಕೆ ಪೊರಕೆಯನ್ನು ಅಂಗಡಿಯಿಂದ ತರುವ ಅಗತ್ಯವಿಲ್ಲ. ನಾವೇ ಮಡಲಿನಿಂದ ಕಡ್ಡಿ ಬೇರ್ಪಡಿಸಿ ಪೊರಕೆ ತಯಾರಿಸಬಹುದುಎಂದಾಗ ಮಳಿಗೆಯಲ್ಲಿದ್ದ ಮಂದಿ ಮುಖಮುಖ ನೋಡಿಕೊಂಡರು.

ಮಳಿಗೆ ವೀಕ್ಷಿಸುತ್ತಿದ್ದ ಸಾವಯವ ಸದಾಶಿವರು ಸೋನಾಲನನ್ನು ಬೆನ್ನು ತಟ್ಟಿ ಶ್ಲಾಘಿಸುತ್ತಾ, “ ಮಾದರಿಯ ಯಂತ್ರವೇ ಬಂದುಬಿಟ್ಟರೆ ಉದ್ಯಮವನ್ನೇ ಸ್ಥಾಪಿಸಿಬಹುದಲ್ಲಾಎಂದರು.

ನೀರು ಉಳಿತಾಯ ಮಾದರಿ

ನಳ್ಳಿಗಳಲ್ಲಿ ನೀರು ಪೋಲಾಗುವುದನ್ನು ತಡೆಯಲು ಸಾಧನ. ಪ್ರತಿಯೊಂದು ನಳ್ಳಿಗೂ ಒಂದೊಂದು ಮೀಟರ್. ನಮಗೆ ಎಷ್ಟು ಸೆಕೆಂಡ್ ನೀರು ನಳ್ಳಿಯಲ್ಲಿ ಬರಬೇಕೆನ್ನುವುದನ್ನು ಫೀಡ್ ಮಾಡಿದರಾಯಿತು. ಅಷ್ಟೇ ನಳ್ಳಿಯಲ್ಲಿ ನೀರು ಬರುತ್ತದೆ. ಉದಾ: ಕೈ ತೊಳೆಯಲು ಐದು ಸೆಕೆಂಡ್ ಸಾಕು ಎಂದು ಟ್ಯೂನ್ ಮಾಡಿದರೆ ಅಷ್ಟೇ ಸೆಕೆಂಡ್ ಕಾಲದಲ್ಲಿ ನೀರು ಬರುತ್ತದೆ. ಬಳಿಕ ಅಟೋ ಮ್ಯಾಟಿಕ್ ಆಗಿ ಸ್ಥಗಿತಗೊಳ್ಳುತ್ತದೆ. ರಾಮಕುಂಜ ಕನ್ನಡ ಮಾಧ್ಯಮ ಹೈಸ್ಕೂಲಿನ ಪ್ರಜ್ವಲ್ ಆವಿಷ್ಕಾರದ ಮಾದರಿಯು ಅನೇಕರ ಗಮನ ಸೆಳೆದಿತ್ತು.

ಉಪ್ಪುನೀರು ಸಿಹಿ ಮಾಡಲು ಬಾಳೆದಿಂಡು!

ಇದು  ಸಾಮಾನ್ಯ  ಕೆಟಗರಿಯಲ್ಲಿದ್ದ  ಗಮನ ಸೆಳೆದ ಅನ್ವೇಷಣೆ. ಬಾಳೆದಿಂಡನ್ನು ಬಳಸಿ ಸಮುದ್ರದ ನೀರನ್ನು ಕೃಷಿಯೋಗ್ಯವನ್ನಾಗಿ ಪರಿವರ್ತಿಸುವುದು ಇಲ್ಲಿನ ವಿಶೇಷ. ಈಗಿರುವ ವಿಧಾನಗಳಲ್ಲಿ ದುಬಾರಿ ಯಂತ್ರೋಪಕರಣಗಳು ಹಾಗೂ ರಾಸಾಯನಿಕಗಳನ್ನು ಬಳಸುತ್ತಾರೆ.  ದೊಡ್ಡ ಪೈಪಿನಲ್ಲಿ ಮೆಶ್ ಅಳವಡಿಸಿ ಅದರ ಮೇಲೆ ಬಾಳೆದಿಂಡಿನ ಚೂರು ಮತ್ತು ಬೈಹುಲ್ಲನ್ನು ಹಾಕಿ ಅದರ ಮೂಲಕ ಉಪ್ಪುನೀರನ್ನು ಹಾಯಿಸಿದ್ದೇವೆ. ನಿಧಾನಕ್ಕೆ ಬಾಳೆದಿಂಡು ನೀರಿನಲ್ಲಿರುವ ಉಪ್ಪನ್ನು ಹೀರಿಕೊಂಡು ನೀರನ್ನು ಹೊರಬಿಡುತ್ತದೆ. ಇದು ಕೃಷಿ ಬಳಕೆಗೆ ಯೋಗ್ಯಎನ್ನುತ್ತಾರೆ ಇದರ ಅನುಶೋಧಕ ವಿಖ್ಯಾತ್.  ಪರಿಕಲ್ಪನೆ ಬಂದಿದ್ದು ಒಬ್ಬ ಅಡುಗೆ ಭಟ್ಟರಿಂದ! ಅವರು ಅಡಿಗೆಗೆ ಉಪ್ಪು ಜಾಸ್ತಿಯಾದರೆ ಬಾಳೆದಿಂಡನ್ನು ಹಾಕಿ ಅದನ್ನು ಸರಿಪಡಿಸುತ್ತಾರೆ. ಅದೇ ಐಡಿಯಾವನ್ನು ಇಲ್ಲಿ ಬಳಸಿದ್ದೇವೆ. ಇದು ವ್ಯರ್ಥವಾಗುವ ಬಾಳೆದಿಂಡಿಗೆ ಮೌಲ್ಯ ಹಾಗೂ ಬಾಳೆ ಕೃಷಿಕರಿಗೆ ಒಂದಷ್ಟು ಆದಾಯ ತರಬಹುದು!

ಸಗಣಿಯಿಂದ ವಿದ್ಯುತ್!

ನಾಲ್ಕು ಪ್ಲಾಸ್ಟಿಕ್ ಕಪ್ಪುಗಳಲ್ಲಿ ಸಗಣಿಯನ್ನು ಹಾಕಿಟ್ಟು ಅದಕ್ಕೆ ಒಂದಿಷ್ಟು ವೈರ್ಗಳನ್ನು ಅಳವಡಿಸಿದ್ದರು. ಕುತೂಹಲದಿಂದ ವಿಚಾರಿಸಿದಾಗಇದು ಸಗಣಿಯಿಂದ ವಿದ್ಯುತ್ ಉತ್ಪಾದಿಸುವುದನ್ನು ತೋರಿಸುವ ಮಾದರಿ. ಇಲ್ಲಿ ಸಗಣಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಉಪ್ಪನ್ನು ಬೆರೆಸಿದಾಗ ಅದು ವಿದ್ಯುತ್ ಉತ್ಪಾದಿಸುತ್ತದೆ ಅನುಶೋಧನೆಯ ಹಿಂದಿರುವ ಸಾತ್ವಿಕಾ ರೈ ಹಾಗೂ ಸಮೃದ್ಧಿ  ಅವರ ಮಾಹಿತಿ. ಝಿಂಕ್ ಮತ್ತು ಕಾಪರ್ ರಾಡ್ಗಳನ್ನು ಬಳಸಿ ವಿದ್ಯುತ್ ಉತ್ಪಾದನೆಯಾಗುವುದನ್ನೂ ತೋರಿಸಿದರು. ನಮಗೆ ಗೋಬರ್ ಗ್ಯಾಸಿನಿಂದ ಲೈಟ್ ಉರಿಸುವುದು ಗೊತ್ತು. ಈಗಿರುವ ಗೋಬರ್ ಗ್ಯಾಸ್ ಪ್ಲಾಂಟಿನಲ್ಲೇ ನೇರವಾಗಿ ಹೀಗೆ ಮಾಡಬಹುದಾ? ಇದನ್ನು ದೊಡ್ಡ ಪ್ರಮಾಣದಲ್ಲಿ ಹೇಗೆ ಮಾಡಬಹುದು ಎಂಬ ಚಿಂತನೆಯನ್ನು ಆಸಕ್ತರು ಮಾಡಬಹುದು.

ಗ್ರೈಂಡರಿನ ಮೂಲಕ ಕೋಕೋ ಬೀಜ ತೆಗೆಯುವ ತಂತ್ರ

ಇದು ವಿಆಮಾಶಾ ಹತ್ತನೇ ತರಗತಿಯ ನಿಶ್ಚಯ್ ರೈ ಅವರ ಅನುಶೋಧನೆ. ಗ್ರೈಂಡರಿನ ತಿರುಗಣೆಗೆ ಕೋಕೋ ಬೀಜ ತೆಗೆಯುವ ಉಪಕರಣವನ್ನು ಅಳವಡಿಸಿದರೆ ಆಯಿತು. ಕೋಕೋ ಕಾಯಿಗಳನ್ನು ಒಡೆದು ಇದಕ್ಕೆ ಹಿಡಿದರೆ ಬೀಜ ಗ್ರೈಂಡರಿನೊಳಗೆ ಬೀಳುತ್ತದೆ. ಬಹಳ ಸರಳ ಆದರೆ ಉಪಯುಕ್ತ ಆವಿಷ್ಕಾರ. ಸಮಯ ಉಳಿತಾಯ ಸಾಧ್ಯ.

ಕೂದಲಿನಿಂದ ಕೇಶಸತ್ವ

ವಿಆಮಾಶಾ ಆರನೇ ತರಗತಿಯ ಅನ್ವಿತ್ -   ಹುಡುಗನ  ಚುರುಕಿಗೆ  ಮರುಳಾಗದವರೇ ಇರಲಿಲ್ಲ! ಅದಮ್ಯ ಆತ್ಮವಿಶ್ವಾಸದಿಂದ ತನ್ನ ಅನುಶೋಧನೆಯನ್ನು ವಿವರಿಸುತ್ತಿದ್ದ ವೈಖರಿ ಅನುಕರಣೀಯ. ಎಲ್ಲ ರಿಪೋರ್ಟ್ಗಳನ್ನೂ ತೋರಿಸಿ ಗಮನ ಸೆಳೆದ. ಸಲೂನಿಂದ ಸಿಗುವ ಕೂದಲಿಗೆ ಸಗಣಿ, ಮಜ್ಜಿಗೆ, ಗೋಮೂತ್ರ, ಮಣ್ಣು ಸೇರಿಸಿ ಕಾಂಪೋಸ್ಟ್ಕೇಶಸತ್ವಮಾಡುವ ಅನುಶೋಧನೆ. ವಿವಿಧ ಹಂತಗಳಲ್ಲಿ ಹೇಗೆ ಕೂದಲು ಕಾಂಪೋಸ್ಟ್ ಆಗಿ ಪರಿವರ್ತನೆ ಹೊಂದುತ್ತದೆ ಎಂಬುದನ್ನು ಮಾದರಿಗಳ ಮೂಲಕ ತೋರಿಸಲಾಗಿತ್ತು.

ಹಣ್ಣಡಿಕೆ ಸಿಪ್ಪೆಯಿಂದ ಪರಿಸ್ನೇಹಿ ಬಣ್ಣ

ಇದು ವಿಆಮಾಶಾ ಶ್ರೀಜಿತ್ ಅನುಶೋಧನೆ. ಹಣ್ಣಡಿಕೆ ಸಿಪ್ಪೆಯ ರಸ, ದಾಳಿಂಬೆ ಸಿಪ್ಪೆ ಹಾಗೂ ದಾಲ್ಚಿನ್ನಿ ಎಲೆಯ ಹುಡಿಯನ್ನು ಸೇರಿಸಿ ಹದಿನೈದು ನಿಮಿಷ ಕುದಿಸಿ ತಣಿಸಿದರೆ ಗಾಢ ಹಳದಿ - ಕಂದು ಬಣ್ಣ ತಯಾರು. ಹಣ್ಣಡಿಕೆ ರಸಕ್ಕೆ ಅರಿಶಿನವನ್ನು ಸೇರಿಸಿದರೂ ಬಣ್ಣವನ್ನು ತಯಾರಿಸಲು ಸಾಧ್ಯ.

ಡಬಲ್ ಗಟೋರ್ ಸ್ಪ್ರೇಯರ್

ಸಾಮಾನ್ಯವಾಗಿ ಬಳಕೆಯಲ್ಲಿರುವುದು ಸಿಂಗಲ್ ಗಟೋರ್ ಸ್ಪ್ರೇಯರ್. ಇಲ್ಲಿ ಎರಡು ಗಟೋರ್ ಸ್ಪ್ರೇಯರ್ಗಳನ್ನು ಅಳವಡಿಸಿದ್ದಾರೆ. ಇದು ಬ್ಯಾಟರಿ ಚಾಲಿತ. ಜಾಸ್ತಿ ಪ್ರದೇಶವನ್ನು ಕಡಿಮೆ ಸಮಯದಲ್ಲಿ ಸಿಂಪಡಿಸಲು ಸಾಧ್ಯ. ಇದರಲ್ಲಿ ಸಿಂಪರಣಾ ದ್ರಾವಣದ ಮಟ್ಟವನ್ನು ಮೈಕ್ರೋಕಂಟ್ರೋಲರ್ ಆಧಾರಿತವಾಗಿ ಪತ್ತೆ ಹಚ್ಚುವ ವ್ಯವಸ್ಥೆ ಇದೆ. ಇದು ಆಶ್ರಯ ಪಿ. ಮತ್ತು  ನೇಹ ಭಟ್,  ವಿಆಮಾಶಾ  ಒಂಭತ್ತನೇ ತರಗತಿಯ ಮಕ್ಕಳು ಪ್ರದರ್ಶನಕ್ಕಿಟ್ಟ ಅನುಶೋಧನೆ. ಇದನ್ನು ಬೆಂಗಳೂರಿನ ಸುಪ್ರೀಂ ಇಂಡಸ್ಟ್ರೀಸ್ ಮುಂದೆ ತೆಗೆದುಕೊಂಡು ಹೋಗುವುದಕ್ಕೆ ಒಪ್ಪಿದೆಯಂತೆ.

ಕುತೂಹಲ ಹುಟ್ಟಿಸಿದ ಅನುಶೋಧನೆಗಳು

ಇವೆಲ್ಲದರ ಜೊತೆಗೆ ಸೈಕಲ್ ಆಧಾರಿತ ಸಿಂಪರಣೆ, ಆಸ್ಪತ್ರೆ ತ್ಯಾಜ್ಯಗಳಿಂದ ಕಾಂಪೋಸ್ಟ್, ಅಡಿಕೆ ಸಿಪ್ಪೆಯಿಂದ ಫೈಬರ್ ಬೋರ್ಡ್, ರಂಗುಮಾಲಿ (Bixa orellana) ಬೀಜಗಳಿಂದ ಮಾಡಿದ ಲಿಪ್ಸ್ಟಿಕ್ ಮತ್ತು ನೈಲ್ಪಾಲಿಷ್, ಮುಚ್ಚಿಗೆ ಮಾಡಲು ರಬ್ಬರು, ಸೋಗೆ ಹುಡಿ, ಮರದ ಹುಡಿ, ತೆಂಗಿನ ಸಿಪ್ಪೆ ಹುಡಿ ಇತ್ಯಾದಿ ಸೇರಿಸಿ ತಯಾರಿಸಿದ ಬಯೋಮ್ಯಾಟ್, ಅಡಿಕೆ ಡಂಕಿ ಬೀಳದಂತೆ ಹಾಕುವ ಕರಿಬೇವು, ಕಹಿಬೇವು, ವೀಳ್ಯದೆಲೆ ಹಾಗೂ ನೆಕ್ಕಿ ಸೊಪ್ಪು ಸೇರಿಸಿದ ಹುಡಿ, ಕೊಕೋ ಕೋಡಿನಿಂದ ಮಾಡಿದ ನಯವಾದ ಹುಡಿ (ಕುಡಿಯುವ ಪೇಯಕ್ಕೆ) ಹಾಗೂ ತರಿತರಿಯಾದ ಹುಡಿ (ಸ್ನಾನಕ್ಕೆ), ಅಡಿಕೆಯ ಟೂತ್ಪೇಸ್ಟ್, ಅಲ್ಟ್ರಾಸೋನಿಕ್ ಮತ್ತು ವಿದ್ಯುತ್ಕಾಂತೀಯ ಅಲೆಗಳ ಮೂಲಕ ಕಾಡುಪ್ರಾಣಿಗಳನ್ನು ಓಡಿಸುವ ಉಪಕರಣ, ಸೆನ್ಸರುಗಳ ಮೂಲಕ ನೀರಾವರಿ, ಸೊಳ್ಳೆ ಓಡಿಸಲು ಕೊಬ್ಬರಿ ಎಣ್ಣೆ ಮತ್ತು ಹಾಡೆಬಳ್ಳಿಯ ಗೆಡ್ಡೆಯ ಚೂರು ಸೇರಿಸಿದ ದ್ರವ ಹೀಗೆ ಹಲವಾರು ಉಪಯುಕ್ತ ಅನುಶೋಧನೆಗಳು ಅಲ್ಲಿದ್ದವು.

ಬುದ್ಧಿ ಪ್ರಚೋದಕ ಕಾರ್ಯಕ್ರಮ

ಚಿಣ್ಣರ ಮನದಲ್ಲಿ ಸಂಶೋಧನೆಯ ಹೊಳಹು ಮೂಡಿಸುವ, ಕುತೂಹಲ ಹೆಚ್ಚಿಸುವ, ಹುಡುಕುವ ಸ್ವಭಾವವನ್ನು ಪ್ರೇರೇಪಿಸುವ ಇಂತಹ ಕಾರ್ಯಕ್ರಮಗಳು ಅಪೇಕ್ಷಣೀಯ. ಅಂದು ಅಲ್ಲಿ ಪ್ರದರ್ಶನಕ್ಕಿದ್ದ ಕೃಷಿಸಂಬಂಧಿ ಅನುಶೋಧನೆಗಳ ವೈವಿಧ್ಯ, ಹೊಸತನ ಹಾಗೂ ವಿನ್ಯಾಸಗಳನ್ನು ಗಮನಿಸಿದಾಗ ಕೆಲವರಿಗೆ ಅನ್ನಿಸಿರಬಹುದು - ಇಷ್ಟು ಎಳೆಯ ಮಕ್ಕಳಿಗೆ ಇದೆಲ್ಲಾ ಹೊಳೆಯಲು, ಇಂತಹದನ್ನು ಮಾಡಲು ಸಾಧ್ಯವಾ?

ಅವರ ಪೋಷಕರ/ಮಾರ್ಗದರ್ಶಕರ ಪಾತ್ರ ಇವರ ಅನುಶೋಧನೆಗಳಲ್ಲಿ ಖಂಡಿತಾ ಇದೆ. ಆದರೆ ಅನುಶೋಧನೆ ಮಾಡುವಾಗಿನ ಉತ್ಸಾಹ, ಆತಂಕ, ಎಡವಟ್ಟುಗಳು, ಸಾರ್ಥಕ ಭಾವ ಇವುಗಳನ್ನೆಲ್ಲಾ ಪೋಷಕ/ಮಾರ್ಗದರ್ಶಕರೊಟ್ಟಿಗೆ ಮಕ್ಕಳೂ ಅನುಭವಿಸಿರುತ್ತಾರೆ. ವಾತಾವರಣ ಮಕ್ಕಳ ಮನದಲ್ಲಿ ಅಚ್ಚಳಿಯದಂತೆ ನಿಂತಿರುತ್ತದೆ.  ಇನ್ನೊಂದು ರೀತಿಯಲ್ಲಿ - ಇದು ಎಳೆಯರ ಮೂಲಕ ಪೋಷಕ/ಮಾರ್ಗದರ್ಶಕರ ಸೃಜನಶೀಲತೆಯನ್ನು ಗುರುತಿಸುವ ಕಾರ್ಯಕ್ರಮವೂ ಆಗಿ ಪರಿಣಮಿಸುವುದು ಇನ್ನಷ್ಟು ಉತ್ತೇಜನಕಾರಿ. ಇದರಿಂದ ಮಕ್ಕಳಲ್ಲೂ ಅನ್ವೇಷಣಾ ಪ್ರವೃತ್ತಿಯ ಮುಂದುವರಿಕೆ ಸಾಧ್ಯ. ಕೃಷಿಕರಿಗೂ ಅನುಕೂಲ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ

08251 - 232 015


0 comments:

Post a Comment