ಪುತ್ತೂರಿನಲ್ಲಿ ‘ಅನ್ವೇಷಣಾ 2019’ ಸಂಪನ್ನವಾಗಿತ್ತು. ಬಾಲ ವಿಜ್ಞಾನಿಗಳ ಕೃಷಿ ಮತ್ತು ಕೃಷಿಕಪರ ಅನ್ವೇಷಣೆಗಳ ಪ್ರದರ್ಶನ ನಡೆದಿತ್ತು. ವಿದ್ಯಾರ್ಥಿಗಳೊಂದಿಗೆ ಕೃಷಿಕರೂ ಮುಖಾಮುಖಿಯಾಗಿರುವುದು ವಿಶೇಷ. ಜನವರಿ ಅಡಿಕೆ ಪತ್ರಿಕೆಯಲ್ಲಿ ವಿದ್ಯಾರ್ಥಿಗಳ ಅನ್ವೇಷಣೆಗಳ ಮುಖ್ಯ ಎಳೆಗಳನ್ನು ತೋರಿಸಿದರೆ, ಇಲ್ಲಿ ಕೃಷಿಕಾವಿಷ್ಕಾರದ ಒಂದು ಚಿಕ್ಕ ನೋಟವಿದೆ.
ಪುತ್ತೂರಿನಲ್ಲಿ 2019 ನವೆಂಬರ್ 30 ಮತ್ತು ದಶಂಬರ 1ರಂದು ಅಗ್ರಿ ಮೆಂಟರಿಂಗ್ ಫೆಸ್ಟ್ ‘ಅನ್ವೇಷಣಾ 2019’ ಸಂಪನ್ನಗೊಂಡಿತ್ತು. ಸುಮಾರು ಮುನ್ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ಕೃಷಿಯತ್ತ ಮುಖಮಾಡಿದ ಆವಿಷ್ಕಾರಗಳು ಕೃಷಿಕರ ಮನಗೆದ್ದಿದ್ದುವು. ಅನ್ವೇಷಣೆಗೆ ಪುತ್ತೂರು ವಿದ್ಯಾವರ್ಧಕ ಸಂಘದ ಸಾರಥ್ಯ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಯೋಜನೆ.
‘ಅನ್ವೇಷಣೆ’ ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ಸೀಮಿತವಲ್ಲ. ಕೃಷಿಕಾವಿಷ್ಕಾರಕ್ಕೂ ಮಣೆ ಹಾಕಿತ್ತು. ಕೃಷಿಕರೇ ಸ್ವತ: ತಂತಮ್ಮ ಆವಿಷ್ಕಾರಗಳಿಗೆ ಮಾತು ಕೊಡುತ್ತಿದ್ದರು. ವಿದ್ಯಾರ್ಥಿಗಳು ಕುತೂಹಲ ಕಣ್ಣಿನಿಂದ ಪ್ರಾಕ್ಟಿಕಲ್ ಅನ್ವೇಷಣಾ ಕ್ಷಮತೆಯನ್ನು ಹತ್ತಿರದಿಂದ ವೀಕ್ಷಿಸಿದರು. ಇಂತಹ ಕೆಲವು ಆವಿಷ್ಕಾರಗಳ ಸೂಕ್ಷ್ಮ ಪರಿಚಯ.
ಗೂಡೊಲೆ
ಆಹಾರ ಪದಾರ್ಥಗಳನ್ನು ಬಿಸಿ ಮಾಡಲು ಅನುಕೂಲ. ಬ್ರೆಡ್, ಕೇಕ್, ಬಿಸ್ಕೆಟ್ಗಳನ್ನು ಬಿಸಿ ಮಾಡಲು ಓವನ್ ಬಳಕೆ ವ್ಯಾಪಕವಾಗುತ್ತಿದೆ. ಓವನ್ ಏನು ಕೆಲಸ ಮಾಡುತ್ತದೋ ಅದು ಗೂಡೋಲೆಯಲ್ಲೂ ಸಾಧ್ಯ. ಗದ್ದೆಯ ಮಣ್ಣು ಮತ್ತು ಬೈಹುಲ್ಲು ಬಳಸಿ ಪುತ್ತೂರು ತಾಲೂಕಿನ ಪುಣ್ಚಪ್ಪಾಡಿಯ ಸ್ಮಿತಾ ವಿವೇಕ್ ದೇಸಿ ಓವೆನ್ ತಯಾರಿಸಿದ್ದಾರೆ.
“ನಾನು ಮೂರು ರೀತಿಯ ಓವೆನ್ ಅಂದರೆ - ಗುಮ್ಮಟಾಕಾರ, ಲಂಬಾಕಾರ ಮತ್ತು ರಾಕೆಟ್ ಸ್ಟೌವ್ - ತಯಾರಿಸಿದ್ದೇನೆ. ಮಾನವ ಶ್ರಮ ಮತ್ತು ಕಡಿಮೆ ಖರ್ಚು ಸಾಕು. ಸ್ವಲ್ಪ ತಂತ್ರಜ್ಞಾನದ ಅರಿವು ಇದ್ದರೆ ಎಲ್ಲರಿಗೂ ಮನೆಗಳಲ್ಲಿ ಮಾಡಿಕೊಳ್ಳಬಹುದು.” ಎನ್ನುತ್ತಾರೆ.
ಅಡಿಕೆ ಹಲ್ಲುಪುಡಿ
ಅಡಿಕೆಯ ಚಾರ್ಕೋಲ್ - ಚಾಲಿ ಅಡಿಕೆಯ ಇದ್ದಿಲು ಅನ್ನೋಣ. ಚಾಲಿ ಅಡಿಕೆಯನ್ನು ಮಿತ ಶಾಖದಲ್ಲಿ - ಅಂದರೆ ಬೂದಿಯಾಗದಂತೆ - ಸುಟ್ಟಾಗ ಇದ್ದಿಲು ಲಭ್ಯ. ಇದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ರುಚಿಗೆ ಉಪ್ಪು, ಲವಂಗ ಸೇರಿಸಿ ಹಲ್ಲು ಪುಡಿ ತಯಾರಿಸಿದ್ದಾರೆ ಪುತ್ತೂರು ತಾಲೂಕಿನ ಕಣಿಯೂರಿನ ರವಿರಾಜ್.
“ಒಂದು ಕಿಲೋ ಅಡಿಕೆಯಲ್ಲಿ ಮುನ್ನೂರು ಗ್ರಾಂ ಅಂತಿಮ ಉತ್ಪನ್ನ ಸಿಕ್ಕಿದೆ. ಇದರಲ್ಲಿ ಅಡಿಕೆಯ ಮೂಲಗುಣ ನಾಶವಾಗುವುದಿಲ್ಲ. ಇಪ್ಪತ್ತೈದು ಗ್ರಾಮಿನ ಸೀಸೆಗೆ ನೂರ ಇಪ್ಪತ್ತು ರೂಪಾಯಿ ದರ. ಆರು ತಿಂಗಳಿನಿಂದ ‘ಮಾಡಿ - ಬೇಡಿ’ ಮಾಡುತ್ತಾ ಈಗ ಅಂತಿಮ ಉತ್ಪನ್ನ ಸಿದ್ಧವಾಗಿದೆ.” ಎನ್ನುವ ಮಾಹಿತಿ ನೀಡಿದರು.
“ನೂರು ಗ್ರಾಮ್ ಚಾಲಿ ಅಡಿಕೆಯಲ್ಲಿ 0.7 ಗ್ರಾಂ ಅರೆಕೋಲಿನ್ ಇದೆ. ನಾವು ದಿನಕ್ಕೆ ಒಂದು ಅಡಿಕೆ ತಿಂದರೆ ಹೆಚ್ಚೆಂದರೆ 70 ಎಂ.ಜಿ. ಅರೆಕೋಲಿನ್ ಉದರ ಸೇರುತ್ತದೆ. ಇದು ದೇಹಕ್ಕೆ ಒಳ್ಳೆಯದು. ಆದರೆ ಅಡಿಕೆಯು ಚಾರ್ಕೋಲ್ ಆಗಿ ರೂಪಾಂತರವಾದಾಗ ಅದರಲ್ಲಿ ಅರೆಕೋಲಿನ್ ಇರುವುದಿಲ್ಲ.” ಎನ್ನುತ್ತಾರೆ.
ಇದು ಆರೋಗ್ಯದಾಯಕ ಹಲ್ಲುಪುಡಿ. ಇದಕ್ಕೆ ಹಲ್ಲುನೋವು ಶಮನಗೊಳಿಸುವ ಗುಣವಿದೆ.
ದನ ಎತ್ತುವ ಸಾಧನ
ನಾಲ್ಕು ಕಾಲಿರುವ ಕಬ್ಬಿಣದ ಸ್ಟಾಂಡ್. ಒಂದು ಬದಿಗೆ ದೊಡ್ಡದಾದ ಗೋಣಿಯನ್ನು ಬಿಗಿದಿದ್ದಾರೆ. ಸ್ಟಾಂಡಿನ ಇನ್ನೊಂದು ಬದಿಯಲ್ಲಿ ಮೇಲ್ಗಡೆ ತಿರುಗಣೆ ಹೊಂದಿರುವ ಜಾಕ್ ಇರುವ ಚಿಕ್ಕ ರೋಲರ್. “ಅನಾರೋಗ್ಯದಿಂದ ಮಲಗಿದ ಜಾಗಕ್ಕೆ ಸ್ಟಾಂಡನ್ನು ಒಯ್ದು, ದನವು ಮಧ್ಯದಲ್ಲಿರುವಂತೆ ಸ್ಟಾಂಡನ್ನು ಇಟ್ಟುಬಿಡಿ. ಗೋಣಿಯ ಇನ್ನೊಂದು ತುದಿಯನ್ನು ದನದ ಕೆಳಭಾಗದಲ್ಲಿ ತೂರಿಸಿ ಸ್ಟಾಂಡಿನ ಮತ್ತೊಂದು ಬದಿಯ ಮೇಲಿರುವ ರಾಡ್ಗೆ ಬಿಗಿಯಿರಿ. ತಿರುಗಣೆಯನ್ನು ತಿರುಗಿಸುತ್ತಾ ಹೋದಂತೆ ಗೋಣಿಯು ರೋಲ್ ಆಗುತ್ತಾ ಆಗುತ್ತಾ ಮಲಗಿದ್ದ ದನವನ್ನು ಸ್ವಲ್ಪ ಸ್ವಲ್ಪವೇ ಮೇಲೆತ್ತುತ್ತದೆ. ನಂತರ ನಾವು ಆಧರಿಸಿ ಎಬ್ಬಿಸಬಹುದು. ನಾನು ಈಗಾಗಲೇ ಬಳಸಿ ಯಶಸ್ವಿಯಾಗಿದ್ದೇನೆ.” ಕಬಕದ ರಮೇಶ್ ವಿವರಣೆಯನ್ನು ನೀಡುತ್ತಿದ್ದಾಗ ಪಶುವೈದ್ಯ ಡಾ.ಕೆ.ಎಂ.ಕೃಷ್ಣ ಭಟ್ ಚುರುಕಾದರು.
“ಹೈನುಗಾರಿಕೆಯ ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ಸಿಕ್ಕಿತು. ಅನಾರೋಗ್ಯದಿಂದ ಮಲಗಿದ ಸಂಕರ ತಳಿಯ ದನಗಳನ್ನು ಆರೇಳು ಜನರಿಂದಲೂ ಎಬ್ಬಿಸಲು ತ್ರಾಸ. ಈ ಉಪಾಯವು ಖಂಡಿತ ಉಪಯೋಗಿಯಾಗುವುದರಲ್ಲಿ ಸಂಶಯವಿಲ್ಲ. ಇದನ್ನು ಅಭಿವೃದ್ಧಿಪಡಿಸುವತ್ತ ಯೋಚಿಸುತ್ತೇನೆ.”
ಕೋತಿಗಳ ಕಾಟಕ್ಕೆ ಸುಲಭ ಉಪಾಯ
ಕಬ್ಬಿಣದ ಸರಳು ಮತ್ತು ಬಲೆಗಳಿಂದ ನಿರ್ಮಿಸಿದ ಈ ಸಾಧನವು ಕೋತಿಗಳಿಗೆ ದುಃಸ್ವಪ್ನ! ಬಾಳೆಗೊನೆಯು ಎಳೆಯದಿರುವಾಗಲೇ ಗೊನೆಗೆ ಅಳವಡಿಸಿದರೆ ಆಯಿತು. ಬಲೆಯ ಗೂಡಿನೊಳಗೆ ಗೊನೆ ಬೆಳೆಯುತ್ತಿರುತ್ತದೆ. ಗೊನೆ ಕಡಿದ ಬಳಿಕ ಇನ್ನೊಂದು ಗೊನೆಗೆ ಅಳವಡಿಸಿಕೊಳ್ಳಬಹುದು.
“ಬಾಳೆ ಮಾತ್ರವಲ್ಲ ಪಪ್ಪಾಯಿ, ಕುಂಬಳ, ಚೀನಿಕಾಯಿ, ಸೌತೆಕಾಯಿಗಳಿಗೂ ಈ ಗೂಡನ್ನು ಬಳಸಿಕೊಳ್ಳಬಹುದು. ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ಸಣ್ಣ ಮಟ್ಟದಲ್ಲಿ ಬಾಳೆಕೃಷಿ ಮಾಡುವವರಿಗೆ ಅನುಕೂಲ. ಗೊನೆಯನ್ನು ಮಂಗನಿಂದ ರಕ್ಷಿಸಬಹುದು. ಆರಂಭಕ್ಕೆ ಒಮ್ಮೆ ವೆಚ್ಚ ಮಾಡಿದರೆ ಆಯಿತು.” ಎನ್ನುತ್ತಾರೆ ಗಾಯತ್ರೀ ಬಡೆಕ್ಕಿಲ. ಇವರು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ವಿಜ್ಞಾನ ಅಧ್ಯಾಪಿಕೆ.
ಅಡಿಕೆಯ ಕಷಾಯ ಪುಡಿ
ಶಿವಮೊಗ್ಗದ ಆರ್.ರಾಘವೇಂದ್ರರಿಂದ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯ. ಅಡಿಕೆಯೇ ಮುಖ್ಯ ಕಚ್ಚಾವಸ್ತುವಾಗಿರುವ ಕಷಾಯದ ಸೇವನೆಯಿಂದ ಸಕ್ಕರೆ ಕಾಯಿಲೆ ನಿಯಂತ್ರಣ! ಹಿಪ್ಪಲಿ, ಬಿಲ್ವಪತ್ರೆ ಎಲೆ, ಕರಿಬೇವಿನ ಸೊಪ್ಪು, ತುಳಸಿ, ಪತ್ರೆ, ಶುಂಠಿ, ಅಮೃತಬಳ್ಳಿ.. ಹೀಗೆ ಹದಿನಾಲ್ಕು ಸಸ್ಯ ಮೂಲದ ವಸ್ತುಗಳ ಕಷಾಯ ಪುಡಿ.
ಹಸಿ ಅಡಿಕೆಯ ಉಪ್ಪಿನಕಾಯಿ, ಚಟ್ನಿ ಪುಡಿ, ರಸಂ ಪುಡಿ, ಅಡಿಕೆ ಮಿಂಟ್ (ಮೌತ್ ಫ್ರೆಶನರ್) ಇತರ ಉತ್ಪನ್ನಗಳು. ಸೇವಿಸಿದವರು ಉತ್ತಮ ಹಿಮ್ಮಾಹಿತಿ ನೀಡಿದ್ದಾರಂತೆ. ರಾಘವೇಂದ್ರರು ಶಿವಮೊಗ್ಗದ ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಉದ್ಯೋಗಿ.
“ಮಾರುಕಟ್ಟೆಯ ಗ್ರಾಹಕ ಸ್ವೀಕೃತಿ ನೋಡಿಕೊಂಡು ಉತ್ಪನ್ನಗಳ ತಯಾರಿ ಘಟಕಗಳನ್ನು ವಿಸ್ತರಿಸುವ ಯೋಚನೆಯಿದೆ. ನಿವೃತ್ತಿಯ ಬಳಿಕ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ. ಈ ಯೋಜನೆಗಳಿಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದೇನೆ.” ಎನ್ನುತ್ತಾರೆ.
ನಿಟಿಲೆ ‘ಕೆಣಿ’ಗಳು
ಕೋಡಪದವಿನ ನಿಟಿಲೆ ಮಹಾಬಲೇಶ್ವರ ಭಟ್ಟರ ಮಳಿಗೆಯಲ್ಲಿ ಕೃಷಿ ಉಪಕರಣಗಳದ್ದೇ ರಾಶಿ. ತಾವು ಇದುವರೆಗೆ ಆವಿಷ್ಕರಿಸಿದ ಬಹುತೇಕ ಸಾಧನಗಳನ್ನು ಪ್ರದರ್ಶನಕ್ಕಿಟ್ಟಿದ್ದರು. ಆಸಕ್ತರು ಮಾತಿಗಿಳಿದರೆ ಸಾಕು, ಪ್ರತಿಯೊಂದು ಸಾಧನಗಳ ಕ್ಷಮತೆಯನ್ನು ವಿವರಿಸುವಲ್ಲಿ ಅವರಿಗೆ ಆಯಾಸವಿಲ್ಲ.
“ನೋಡಿ, ಅಂಗಳದಲ್ಲಿ ಒಣಗುತ್ತಿರುವ ಅಡಿಕೆಯನ್ನು ಅಡಿಮೇಲು ಮಾಡಲು ಈ ಸಾಧನ. ಇದಕ್ಕೆ ಹಿಡಿ ಹಾಕಿ ಅಡಿಕೆ ಮೇಲೆ ಎಳೆದುಕೊಂಡು ಹೋಗುತ್ತಿದ್ದರೆ ಅಡಿಕೆ ಅಡಿಮೇಲು ಆಗುತ್ತದೆ. ಇಲ್ಲದಿದ್ದರೆ ತನುಶ್ರಮದಿಂದಲೇ ಮಾಡಬೇಕಿತ್ತು.” ಎಂದರು.
ಕಾಳುಮೆಣಸಿನ ಕಾಳನ್ನು ಆಯುವ ಯಂತ್ರದಿಂದ ಆರಂಭವಾದ ಇವರ ಯಂತ್ರಾಭಿವೃದ್ಧಿ ಮನಸ್ಸು ಇದುವರೆಗೆ ರಜೆ ತೆಕ್ಕೊಳ್ಳಲಿಲ್ಲ. ಒಂದಲ್ಲ ಒಂದು ಯೋಚನೆಗಳು ಬಂದಾಗ ತಕ್ಷಣ ಕಾರ್ಯರೂಪಕ್ಕೆ ತರುತ್ತಾರೆ. ಚಿಕ್ಕ ಚಿಕ್ಕ ವೀಡಿಯೋ, ಫೋಟೋಗಳನ್ನು ನವಮಾಧ್ಯಮಗಳಲ್ಲಿ ಹರಿಯಬಿಡುತ್ತಾರೆ. ‘ಇವೆಲ್ಲವೂ ನನಗಾಗಿ ಮಾಡಿದ್ದು’ ಎಂದು ಹೇಳಿ ಮಾತುಕತೆ ಮುಗಿಸುತ್ತಾರೆ.
ಅಡಿಕೆ ಸುಲಿ ಸಾಧನ
ಕಡಬದ ಬರೆಮೇಲಿನ ರಾಜೇಶರಿಂದ ತಮ್ಮ ಅಡಿಕೆ ಸುಲಿ ಸಾಧನದ ವಿವರಣೆ. ಏಕಕಾಲಕ್ಕೆ ಎರಡು ಕೈಯಲ್ಲಿ ಸುಲಿಯಬಹುದಾದ ಸಾಧನವು ಹಲವರ ಗಮನ ಸೆಳೆದಿತ್ತು. ಈ ಸಾಧನದಲ್ಲಿ ಅಡಿಕೆ ಸುಲಿತ ಮಾಡುವಾಗ ಸುಸ್ತು ಆಗುವುದಿಲ್ಲ. ಕೈಗೆ ಗಾಯ ಆಗುವುದಿಲ್ಲ. ಎಲ್ಲಾ ವಯೋಮಾನದವರು ಸುಲಿಯಬಹುದು. ಗಂಟೆಗೆ ಸುಮಾರು ಎಂಟರಿಂದ ಹತ್ತು ಕಿಲೋ ಸುಲಿತ.
ಒಣ ಅಡಿಕೆ ಬಾಚು ಸಹಾಯಿ, ಏಕಚಕ್ರದ ಗಾಡಿ.. ಗಳನ್ನು ‘ತಮಗಾಗಿ’ ಮಾಡಿಕೊಂಡಿದ್ದಾರೆ. ಕೃಷಿಯಲ್ಲಿ ಶ್ರಮ ಹಗುರ ಮಾಡುವ ಉಪಕರಣ ತಯಾರಿ ಇವರ ದೂರದೃಷ್ಟಿ. ಕೃಷಿಕರ ಬೇಡಿಕೆಗಳನ್ನು ಪೂರೈಸುವ ಉದ್ದೇಶದಿಂದ ಈಗಿರುವ ಚಿಕ್ಕ ವರ್ಕ್ಶಾಪನ್ನು ಅಭಿವೃದ್ಧಿಪಡಿಸುವ ಯೋಚನೆಯಲ್ಲಿದ್ದಾರೆ.
ಅಲ್ಲದೆ ಜೋಯ್ ಆಗಸ್ಟಿನ್ ಅವರ ಕೈಚಾಲಿತ ಅಡಿಕೆ ಸುಲಿ ಉಪಕರಣ, ರಾಜೇಶ್ ಮಾಡಾವು - ಮಾನಸ ದಂಪತಿಯ ಅಡಿಕೆಯನ್ನು ವಿವಿಧ ಗಾತ್ರಕ್ಕೆ ಅನುಸಾರವಾಗಿ ಬೇರ್ಪಡಿಸುವ ಸ್ಟಾಂಡ್ (ಅಡಿಕೆ ಸಪರೇಟರ್), ಟ್ರಾಲಿ, ಭಾರ ಎತ್ತುವ ಸನ್ನೆಗಳು ಗಮನಾರ್ಹ.
ಕೃಷಿಕ ಆವಿಷ್ಕಾರಗಳಲ್ಲಿ ಎತ್ತಿ ಹೇಳಬಹುದಾದ ಕೆಲವನ್ನಷ್ಟನ್ನೇ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿಗಳ ಆವಿಷ್ಕಾರಗಳೊಂದಿಗೆ ಕೃಷಿಕರದ್ದೂ ಸೇರಿಕೊಂಡಿರುವುದು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕ.
0 comments:
Post a Comment