Thursday, October 1, 2020

ಕಟ್ಟ ಕಟ್ಟುವ ಕಾಲೇಜು



 ಈ ಕಾಲೇಜು ಕಳೆದ ದಶಕಾರ್ಧದಿಂದ ಪ್ರತಿ ವರ್ಷ ತನ್ನ ಎನ್ನೆಸ್ಸೆಸ್ ಸೈನ್ಯವನ್ನು ನೀರಿಗಿಳಿಸುತ್ತಿದೆ. ಹಳ್ಳಿಗಳ ಹೊಳೆ - ತೋಡುಗಳಿಗೆ 'ಕಟ್ಟ' ಕಟ್ಟಿ ಹೇಗೆ ನೀರಿನ ಲಭ್ಯತೆ ಹೆಚ್ಚಿಸಬಹುದು ಎಂದು ತೋರಿಸಿಕೊಡುತ್ತದೆ. ಊರುಗಳ ನೀರಸಂಕಟ  ಪರಿಹಾರ, ಎಳೆ ಮನಸ್ಸುಗಳಿಗೆ ಜಲಸಂರಕ್ಷಣೆಯ ಅನುಭವಪಾಠ.

 

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಲ್ಲಿ ಸದಾ ನೀರಿನ ಗುಂಗು! ವಾರಾಂತ್ಯದಲ್ಲಿ ವಿದ್ಯಾರ್ಥಿ ಸೈನ್ಯವು ಯಾವುದಾದರೊಂದು ಹೊಳೆಯಲ್ಲಿ ಕಟ್ಟ ಕಟ್ಟುತ್ತಿರುತ್ತದೆ! 

ಸಮಾಜದ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಎನ್.ಎಸ್.ಎಸ್. ಘಟಕದ ಆಶಯ. ಅದರಲ್ಲಿ ನೆಲಜಲ ಸಂರಕ್ಷಣೆಯೂ ಒಂದು. ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಬಾರಿ ಹಳ್ಳಗಳಿಗೆ ಕಟ್ಟ ಕಟ್ಟುವ ಕಾಯಕಕ್ಕೆ ಆದ್ಯತೆ.

2019 ಕೊನೆಯಿಂದ ತನಕ ಏನಿಲ್ಲವೆಂದರೂ ಹದಿನೈದು ಕಟ್ಟಗಳು ಆಗಿವೆ. ಕಳೆದ ಹತ್ತು ವರುಷಗಳಿಂದ ನೆಲಜಲ ಸಂರಕ್ಷಣೆಯ ವಿವಿಧ ಕೆಲಸಗಳನ್ನು ಮಾಡುತ್ತಾ ಬಂದಿದೆ. ನೂರಕ್ಕೂ ಮಿಕ್ಕಿ ಕಟ್ಟಾಗಳಾಗಿವೆ. ಎನ್ನುತ್ತಾರೆ ವಸಂತ . ಇವರು ಸಮಾಜಶಾಸ್ತ್ರ ಉಪನ್ಯಾಸಕ; ಎನ್.ಎಸ್.ಎಸ್. ಘಟಕದ ಅಧಿಕಾರಿ.

ಎರಡು ವರುಷಗಳಲ್ಲಿ ಇವರ ನೇತೃತ್ವದಲ್ಲಿ ಇಪ್ಪತ್ತೆಂಟು  ಕಟ್ಟಗಳಾಗಿವೆ.  ಅದೂ  ಕಾಲೇಜಿನ  ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ.

ವೇಣೂರಿನ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಧರಣೇಂದ್ರ ಕುಮಾರ್ ಕಟ್ಟಗಳನ್ನು ಮನಸ್ಸಿನಲ್ಲಿ ತುಂಬಿಕೊಂಡ ಕಟ್ಟಾಳು. ವರುಷ ಅವರು ಐವತ್ತು ಕಟ್ಟ ಕಟ್ಟುವ ಗುರಿ ಹಾಕಿಕೊಂಡರು. ಇವರ ಸಂಕಲ್ಪವು ಆಳ್ವಾಸ್ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ಸ್ಫೂರ್ತಿಯಾಯಿತು. ವೇಣೂರಿನಲ್ಲಿ ಒಂದು ವಾರದ ಶಿಬಿರ ಆಯೋಜನೆ. ಏಳು ದಿವಸದಲ್ಲಿ ಏಳು ಕಟ್ಟಗಳ ನಿರ್ಮಾಣ.

“ ಅರಸುಕಟ್ಟೆ ಎನ್ನುವಲ್ಲಿ ಎಂಟಡಿ ಎತ್ತರ, ಐವತ್ತಡಿ ಉದ್ದದ ಮಣ್ಣಿನ ಚೀಲದ ಕಟ್ಟವನ್ನು ಕಟ್ಟಿದ್ದೆವು. ಅದರಲ್ಲಿ ಎರಡು ಕಿಲೋಮೀಟರಿನಷ್ಟು ನೀರು ಏರಿ  ನಿಂತಿತ್ತು.  ಕಟ್ಟದ ಅಡಿಪಾಯದಲ್ಲಿ ಬಂಡೆಯ ಹಾಸು ಇದ್ದುದರಿಂದ ನೀರಿನ ಲೀಕೇಜ್  ಇತ್ತು ಹಾಗೂ ಗೋಣಿಯನ್ನು ತೂತು ಮಾಡುವ ಏಡಿಯ ಕಾಟದಿಂದ ನೀರು ಹೇಳುವಷ್ಟು ಏರಿ ನಿಲ್ಲಲಿಲ್ಲ. ಆದರೆ ಕಟ್ಟ ಮಾತ್ರ ಭದ್ರವಾಗಿ ನಿಂತಿದೆ.” ಎನ್ನುವ ವಸಂತ; ಕೊಡ್ಯಡ್ಕ, ಅಶ್ವತ್ಥಪುರ, ಕುತ್ಲೂರು, ಮರೋಡಿ.. ಕಟ್ಟಗಳ ರಚನೆಯ ಖುಷಿಗಳನ್ನು ಹಂಚಿಕೊಂಡರು.

ವಿದ್ಯಾರ್ಥಿಗಳೇ ಗುರುಗಳು

ಕಟ್ಟ ಕಟ್ಟುವ ಜ್ಞಾನಕ್ಕೆ ಹಿರಿಯ ವಿದ್ಯಾರ್ಥಿಗಳೇ ಗುರುಗಳು! ಹಿಂದಿನ ವರುಷದವರು ಹೊಸಬರಿಗೆ ವಿದ್ಯೆಯನ್ನು ಕಲಿಸಿಕೊಡುತ್ತಾರೆ. ಜ್ಞಾನದ ಶೃಂಖಲೆ ಕಳೆದೈದು ವರುಷದಿಂದ ನಿರಂತರವಾಗಿ ಹರಿದು ಬಂದಿದೆ. ಹಿಂದಿನ ಎನ್.ಎಸ್.ಎಸ್. ಅಧಿಕಾರಿಗಳ ತನುಶ್ರಮವು ಗುರುತರ. ಇದಕ್ಕೆ ಪೂರಕವಾದ ಅಂಶಗಳಿಗೆ  ಅಧ್ಯಾಪಕರ ನೆರವು. ತಂಡದಲ್ಲಿ ಏನಿಲ್ಲವೆಂದರೂ ನೂರು ವಿದ್ಯಾರ್ಥಿಗಳು.

ಮೊದಲಿಗೆ ಘಟಕದ ಮುಖ್ಯಸ್ಥರು ಪಂಚಾಯತ್ ವರಿಷ್ಠರನ್ನು ಸಂಪರ್ಕಿಸುತ್ತಾರೆ. ಎಲ್ಲೆಲ್ಲಿ ಹರಿಯುವ ಹಳ್ಳಗಳಿವೆ, ಅಲ್ಲೆಲ್ಲ ಕಟ್ಟಗಳ ಹೋಂವರ್ಕ್  ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದಷ್ಟು ಗೋಣಿಗಳ ಸಂಗ್ರಹ. ಕೆಲವು ದಾನಿಗಳಿಂದ. ಮಿಕ್ಕವು ಎನ್.ಎಸ್.ಎಸ್. ಘಟಕದ ಫಂಡಿನಿಂದ. ಕಟ್ಟಕ್ಕೆ ಬೇಕಾದ ಮಣ್ಣು ಯಥೇಷ್ಟವಾಗಿ ಸ್ಥಳದಲ್ಲೇ ಸಿಗುವಂತಿದ್ದರೆ ಮೊದಲ ಆದ್ಯತೆ. ಸೈನ್ಯವು ಒಂದೇ ದಿವಸದಲ್ಲಿ ಕಟ್ಟ ಸಿದ್ಧ ಮಾಡಿಕೊಡುತ್ತದೆ. 

“ಕಟ್ಟ ಕಟ್ಟುವ ಸಮಯದಲ್ಲಿ ಊರವರ ಬೆಂಬಲ ಇರುತ್ತದೆ. ಊಟ, ಉಪಾಹಾರದ ವ್ಯವಸ್ಥೆ ಮಾಡುತ್ತಾರೆ. ನೀರು ಏರಿ ನಿಂತಾದ ಖುಷಿ ಪಡುತ್ತಾರೆ. ಆದರೆ ನಂತರದ ದಿವಸಗಳಲ್ಲಿ ಕಟ್ಟದ ನಿರ್ವಹಣೆಯ ವಿಚಾರದಲ್ಲಿ ಖುಷಿ ಇರುವುದಿಲ್ಲ.” ಎಂದು ವಿಷಾದಿಸುತ್ತಾರೆ ವಸಂತ. ಹಳ್ಳದ ಮೇಲ್ಭಾಗದಲ್ಲಿ ಕಟ್ಟ ಕಟ್ಟುವಾಗ ಕೆಳಭಾಗದವರು, 'ಹರಿಯುವ ನೀರಿಗೆ ಕಟ್ಟ ಹಾಕಿ ನಮಗೆ ನೀರಿಲ್ಲ ಎಂದು ಮಾಡಿದಿರಿ' ಎನ್ನುವ ಗೊಣಗಾಟ ಇದ್ದೇ ಇರುತ್ತದೆ.

ಸ್ಥಳೀಯರ ನಿರ್ವಹಣೆ ಬೇಕು

ಕಟ್ಟಕ್ಕೆ ಏಡಿ ಶತ್ರು. ಗೋಣಿಚೀಲಗಳನ್ನು ತೂತು ಮಾಡಿಬಿಡುತ್ತದೆ. ಇದಕ್ಕಾಗಿ ಕಟ್ಟದ ವಿನ್ಯಾಸದಲ್ಲಿ ತುಸು  ವ್ಯತ್ಯಾಸ ಮಾಡಿಕೊಂಡಿದ್ದಾರೆ. ಎರಡೂ ಬದಿಗಳಲ್ಲಿ ಗೋಣಿ ಚೀಲಗಳನ್ನು ಸಾಲಾಗಿ ಪೇರಿಸಿಡುತ್ತಾರೆ. ಇವುಗಳ ಮಧ್ಯೆ ಸುಮಾರು ಒಂದು ಒಂದೂವರೆ ಅಡಿ ಅಗಲಕ್ಕೆ ಕಲಸಿದ ಅಂಟು ಮಣ್ಣಿನ ಪದರ. ಇದು ಎರಡೂ ಬದಿಯ ಗೋಣಿ ಚೀಲಗಳಿಗೆ ಬೆನ್ನಾಗುತ್ತದೆ. ಹೀಗೆ ಮಾಡಿದ್ದರಿಂದ ಕಟ್ಟದ ಮೇಲೆ ನಿರಾಯಾಸವಾಗಿ  ಅತ್ತಿತ್ತ  ಹೋಗಿ ಬರಬಹುದು. 

“ಒಂದು ಕಟ್ಟವನ್ನು ಕಟ್ಟುವಾಗ ಕಟ್ಟುವ ಸಮಯ ಮೀರಿತ್ತು. ಆದರೂ ಧೈರ್ಯದಿಂದ ಹದಿನೈದು ಅಡಿ ಎತ್ತರಕ್ಕೆ ಕಟ್ಟಿದೆವು. ಅಂದು ಮಳೆ ಬಂತು. ಹರಿ ನೀರು ಹೆಚ್ಚಾಗಿ ಕಟ್ಟ ಕಡಿದು ಹೋಯಿತು. ಅದನ್ನು ಪಿರಾಮಿಡ್ನಂತೆ ಕಟ್ಟಿದರೆ ಉಳಿಯುತ್ತಿತ್ತೋ ಏನೋ.” ವಸಂತರ ಬೇಸರ. 

ಕಟ್ಟ ಪೂರ್ತಿಯಾದ ಬಳಿಕ ಒಂದಿಬ್ಬರು ವಿದ್ಯಾರ್ಥಿಗಳೊಂದಿಗೆ ವಸಂತರು ಭೇಟಿ ನೀಡುತ್ತಾರೆ. ನೀರಿನ ಫಲಾನುಭವಿಗಳು ಕಟ್ಟಗಳ ಸಂರಕ್ಷಣೆಯ ಹೊಣೆ ವಹಿಸಿಕೊಳ್ಳುವುದಿಲ್ಲ. ನಿಜವಾಗಿ ಅವರಲ್ಲಿ ಕಾಳಜಿ ಬೇಕಿತ್ತು. ಅವರವರ ಮನೆ ಸನಿಹದ ಕಟ್ಟದಿಂದ ಅವರಿಗೆ ಲಾಭವಲ್ವಾ. ನಿರ್ವಹಣೆಯತ್ತ ಗಮನ ಸಾಲದು ಅಂತ ಅನ್ನಿಸುತ್ತದೆ. ನಾವು ಒಂದೆರಡು ಬಾರಿ ಹೋಗಬಹುದು. ಮಿಕ್ಕ ಸಮಯದಲ್ಲಿ ಸ್ಥಳೀಯರೇ ನಿರ್ವಹಣೆ ಮಾಡಬೇಕು. ಸ್ಥಳೀಯ ಸಮಸ್ಯೆಯತ್ತ ಬೆರಳು ತೋರುತ್ತಾರೆ.

ಸಮಸ್ಯೆಯ ಇನ್ನೊಂದು ಮುಖದತ್ತ ಗಮನ ಸೆಳೆದರು ವಸಂತ. “ನಾವು ಕಟ್ಟಗಳನ್ನು ಕಟ್ಟುವುದೇನೋ ಸಹಜ. ಆದರೆ ಫಲಾನುಭವಿಗಳಲ್ಲಿ ಬಹುತೇಕರು ಕೂಲಿ ಕೆಲಸಕ್ಕೆ ಹೋಗುವವರು. ಅವರಿಗೆ ಸಮಯ ಕೊಡಲು ಆಗುತ್ತಿಲ್ಲ. ಕಟ್ಟದ ಕೆಲಸ ಆಗುವಾಗ ಸ್ಥಳದಲ್ಲಿ ಇರುವುದಿಲ್ಲ. ಇದು ಕೂಡಾ ನಿರ್ವಹಣೆಯ ಜವಾಬ್ದಾರಿಗೆ ತೊಡಕಾಗಿದೆ. ಇದು ನಮ್ಮ ಕಟ್ಟ ಎನ್ನುವ ಭಾವನೆ ಬಂದುಬಿಡಬೇಕು. ಕೇವಲ ಸಂಖ್ಯಾತ್ಮಕವಾಗಿ ಕಟ್ಟಗಳ ಸಂಖ್ಯೆ ಏರಿದರೆ ಏನು ಪ್ರಯೋಜನ? ಅಲ್ಲಿ ನೀರೂ ಏರಿ ನಿಲ್ಲಬೇಕು.”

“ಕಳೆದ ವರುಷ ಅಶ್ವತ್ಥಪುರ ಕಟ್ಟದಲ್ಲಿ ನೀರು ಏರಿ ನಿಂತು ಸುತ್ತಲಿನ ಬಾವಿಗಳಲ್ಲಿ ನೀರಿನ ಪ್ರಮಾಣ ಏರು ಕಂಡಿದೆ. ಕೆಲವೆಡೆ ಸುತ್ತುಮುತ್ತಲಿನ ತೋಟಗಳು ಹಸಿರಾಗಿದೆ. ವ್ಯರ್ಥವಾಗಿ ಹರಿಯುವ ನೀರು ಸದ್ಭಳಕೆಯಾಗುತ್ತಿದೆ. ಅಂತರ್ಜಲ ಹೆಚ್ಚಳಕ್ಕೆ ಇದೊಂದೇ ಹಾದಿ.” ಕಟ್ಟದ ಕೆಲಸಗಳಲ್ಲಿ ತೊಡಗಿಸಿ ಕೊಂಡಿರುವ ಅಖಿಲ್ ಫಲಶ್ರುತಿಗಳನ್ನು ಕಟ್ಟಿ ಕೊಡುತ್ತಾರೆ. ಇವರು ದ್ವಿತೀಯ ಪದವಿ ವಿದ್ಯಾರ್ಥಿ.  

ಅಂಕಪಟ್ಟಿಯೊಂದಿಗೆ ನೀರಿನ ಜ್ಞಾನ

“ಮುಂದಿನ ವರುಷದ ರೂಪುರೇಷೆ ಸಿದ್ಧವಾಗುತ್ತಿದೆ. ಮರೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ವಾರದ ಶಿಬಿರ ಆಯೋಜನೆಗೆ ವ್ಯವಸ್ಥೆಯಾಗುತ್ತಿದೆ. ಇರುವೈಲು ಪಂಚಾಯತಿನಲ್ಲಿ ನಾಲ್ಕೈದು ಕಟ್ಟಗಳಾಗುವ ಸಾಧ್ಯತೆಗಳಿವೆ. ಒಟ್ಟು ಮೂವತ್ತು ಕಟ್ಟಗಳನ್ನು ಕಟ್ಟುವ ಇಚ್ಛೆಯನ್ನು ಎನ್.ಎಸ್.ಎಸ್. ಘಟಕ ಹೊಂದಿದೆ. ಇವರಿಂದ ಪ್ರೇರಿತರಾಗಿ ಕಾರ್ಕಳದ ಧವಳ ಕಾಲೇಜು, ಮಂಗಳೂರಿನ ಕೆಲವು ಕಾಲೇಜುಗಳು ಮೂಡುಬಿದಿರೆಯತ್ತ ಕತ್ತು ತಿರುಗಿಸಿವೆ. ಇವರೆಲ್ಲಾ ನಮ್ಮ ಜತೆ ಸೇರಿದರೆ ಕಟ್ಟದ ಕೆಲಸಗಳಿಗೆ ನಿರಂತರತೆ ಬಂದುಬಿಡುತ್ತದೆ. ಕಟ್ಟಗಳ ಸಂಖ್ಯೆಯೂ ಹೆಚ್ಚಾಗುತ್ತದೆ.” ವಸಂತರ ಮಾತಿನಲ್ಲಿ ಭವಿಷ್ಯದ ಭರವಸೆಯಿದೆ.

ವಿದ್ಯಾರ್ಥಿಒಗಳು ಕಟ್ಟ ಕಟ್ಟುವುದು ಮಾತ್ರವಲ್ಲದೆ ಅರಣ್ಯ ಇಲಾಖೆಯೊಂದಿಗೆ ನಿಡ್ಡೋಡಿ, ಕೋಟೆಬಾಗಿಲುಗಳಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಇಂಗುಗುಂಡಿಗಳನ್ನು ತೆಗೆದಿದ್ದಾರೆ. ನಮ್ಮ ವಿದ್ಯಾರ್ಥಿಗಳು ಬ್ಯುಸಿ ಸರ್. ಪಾಠ ಅಲ್ಲದೆ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನಮ್ಮ ಮಕ್ಕಳು ಒಂದು ಸೆಕೆಂಡ್ ಕೂಡಾ ವ್ಯಯ ಮಾಡುವುದಿಲ್ಲ. ಅಷ್ಟು ಮಾಡಲು ಅವರಿಗೆ ಪುರುಸೊತ್ತು ಕೂಡಾ ಇರುವುದಿಲ್ಲ. ಹಾಗಾಗಿ ಎನ್.ಎಸ್.ಎಸ್. ಚಟುವಟಿಕೆಗಳ ಬೀಸು ಹೆಜ್ಜೆಗೂ ಮಿತಿಯಿದೆ. ತನ್ನ ವಿದ್ಯಾಥರ್ಿಗಳ ಕುರಿತು ವಸಂತರಿಗೆ ಅಭಿಮಾನ.

ಕಾಲೇಜು ವಿದ್ಯಾಭ್ಯಾಸ ಮುಗಿಸಿ ಅಂಕಪಟ್ಟಿಯೊಂದಿಗೆ ಹೊರಟಾಗ ನಮ್ಮೊಳಗೆ ಕಾಲೇಜು ಹರಿಯಬಿಟ್ಟ ನೀರಿನ ಗುಂಗು ಮನೆಯವರಿಗೆ ತಲಪುತ್ತದೆ. ಇತರರಿಗೆ ಐಡಿಯಾ ಕೊಡುವಷ್ಟು ಜ್ಞಾನ ನಮ್ಮೊಳಗೆ ತುಂಬಿದ್ದಾರೆ.  ನಮ್ಮೂರಿನ ಕೃಷಿಗೆ, ಕೃಷಿಕರಿಗೆ ನೀರಿನ ಅರಿವನ್ನು ಮೂಡಿಸಲು ಜ್ಞಾನ ಸಹಕಾರಿಯಾಗುತ್ತದೆ. ಎನ್ನುತ್ತಾರೆ ವಿದ್ಯಾರ್ಥಿ  ಅಶ್ವಲ್.

“ವಿದ್ಯಾರ್ಥಿಗಳ ಮೇಲೆ ನೆಲಜಲ ಸಂರಕ್ಷಣೆಯ ಜ್ಞಾನ ಪರಿಣಾಮ ಬೀರಿದುದನ್ನು ಗಮನಿಸಿದ್ದೇನೆ. ಅವರಲ್ಲಿ ನೀರಿನ ಕುರಿತು ಬದ್ಧತೆ ಬಂದುಬಿಟ್ಟಿದೆ. ನೂರರಲ್ಲಿ ಹತ್ತು ಮಂದಿಯಲ್ಲಾದರೂ ಗಾಢವಾಗಿ ನೀರಿನ ಸಂರಕ್ಷಣೆಯ ಜ್ಞಾನ ಇಳಿದುಬಿಟ್ಟರೆ ಅದು ಅವರ ಸ್ನೇಹಿತರ ಹಾಗೂ ಸುತ್ತಲಿನವರಿಗೆ ಪ್ರಭಾವ ಬೀರುತ್ತದೆ.” ವಿದ್ಯಾರ್ಥಿಗಳೊಂದಿಗೆ ತಾನೂ ಓರ್ವ ವಿದ್ಯಾರ್ಥಿಯಾಗಿ ಮಿಳಿತವಾಗುವ ವಸಂತ್ ಅನುಭವ.

ಇಲಾಖೆಗಳಿಗೆ ಕಿಂಡಿ ಅಣೆಕಟ್ಟುಗಳಲ್ಲಿ ಆಸಕ್ತಿ. ಆದರೆ ಕಿಂಡಿ ಅಣೆಕಟ್ಟುಗಳು ಯಶಸ್ಸಾದುದು ಕಡಿಮೆ. ಕಾರಣ ಹಲವಾರು. ಜನಪ್ರತಿನಿಧಿಗಳು, ಶಾಸಕರು, ಆಡಳಿತ ವ್ಯವಸ್ಥೆಗಳು ಸಾಂಪ್ರದಾಯಿಕ ಕಟ್ಟಗಳಿಗೆ ಒತ್ತು ನೀಡಬೇಕು. ಫಂಡ್, ಕಾಗದಪತ್ರಗಳು, ಮಂಜೂರಾತಿ.. ಹೀಗೆ ಫೈಲುಗಳು ತಿರುಗುತ್ತಲೇ  ಇರುತ್ತವೆ   ಹೊರತು  ನೀರನ್ನು

ಮನದೊಳಗೆ ತಿರುಗಿಸುವ ಕೆಲಸಗಳಾಗುತ್ತಿಲ್ಲ. ಹಳ್ಳಿಗಳಲ್ಲಿ ಪಂಚಾಯತ್ ನೇತೃತ್ವದಲ್ಲಿ ಕಟ್ಟಗಳಾಗಬೇಕಿತ್ತು. ಅಲ್ಲೋ ಇಲ್ಲೋ ಇಚ್ಛಾಶಕ್ತಿ ಹೊಂದಿರುವ ಪಂಚಾಯತ್ಗಳು ಮಾಡುತ್ತಿವೆ. ಅದಿಲ್ಲದಲ್ಲಿ ಈಗ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ!

'ಕಾಲೇಜು ಜನರ ಬದುಕಿನ ಭಾಗ'

ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್. ನೀರಿನ ವಿಚಾರ ಬಂದಾಗ ಒಂದು ಕ್ಷಣ ಎಲ್ಲವನ್ನೂ ಮರೆತು ನೀರಿಗೆ ದನಿಯಾದರು. ಆಳ್ವಾಸ್ ಎಜುಕೇಶನ್ ಫೌಂಡೇಶನ್ನಿನ ಮುಖ್ಯಸ್ಥ  ಡಾ.ಮೋಹನ ಆಳ್ವ ಮತ್ತು ಕಾಲೇಜು ಆಡಳಿತವು ನೆಲಜಲ ಸಂರಕ್ಷಣೆಗೆ ಬೆನ್ನೆಲುಬು ಆಗಿದ್ದಾರೆ. ಆಶಯವನ್ನು ಡಾ.ಕುರಿಯನ್ ಮಾತಲ್ಲಿ ಕೇಳೋಣ:

“ಮೂಡುಬಿದಿರೆ (..) ಸುತ್ತಮುತ್ತ ಅಂತರ್ಜಲ ಕುಸಿಯುತ್ತಿದೆ. ಕಾರಣ ಎಲ್ಲರಿಗೂ ತಿಳಿದದ್ದೇ. ಕುಸಿದ ಅಂತರ್ಜಲವನ್ನು ಮೇಲಕ್ಕೆ ತರುವಲ್ಲಿ ಎಲ್ಲರಿಗೂ ಜವಾಬ್ದಾರಿಯಿಲ್ವಾ. ಎಲ್ಲರನ್ನೂ ಜತೆ ಸೇರಿಸಿಕೊಂಡು ನೀರಿನ ಕೆಲಸವನ್ನು ಮಾಡುವ ಯೋಚನೆ ನಮ್ಮದು. ನೆಲಜಲ ಸಂರಕ್ಷಣೆಯ ಕಾಯಕದಲ್ಲಿ ಮರೆತುಹೋದ ಪಾರಂಪರಿಕ ಜ್ಞಾನಕ್ಕೆ ಆದ್ಯತೆ ನೀಡಿದ್ದೇವೆ. ಹಳ್ಳಗಳಿಗೆ ಕಟ್ಟಗಳನ್ನು ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾಲು ದೊಡ್ಡದು.

ನಮ್ಮಲ್ಲಿ  ಎನ್.ಎಸ್.ಎಸ್., ಎನ್.ಸಿ.ಸಿ., ಹ್ಯುಮಾನಿಟಿ ವಿಭಾಗ, ಸು-ಮನಸ ಅಧ್ಯಾಪಕರು.. ಹೀಗೆ ಎಲ್ಲರೂ ಸೇರಿರುವ ಒಂದು ಚಿಕ್ಕ ಚಳುವಳಿ. ಮುಂದಿನ ಹದಿನೈದು ವರುಷ ನಾವು 'ಡ್ರೈವಿಂಗ್ ಸಪೋರ್ಟ್ ' ಆಗಿ ಇರಬೇಕೆನ್ನುವುದು ಆಸೆ. ಇಂತಹ ಕೆಲಸಗಳಿಗೆ ಮುಂಚೂಣಿಗೆ ಯಾರೂ ಬರುವುದಿಲ್ಲ. ಒಂದೋ ನಾವು ಕಟ್ಟ ಕಟ್ಟುವುದು, ಅಥವಾ ಇತರರು ಕಟ್ಟುವಂತೆ ಪ್ರೇರೇಪಿಸುವುದು. ಯಾವುದೇ ಒಂದು ಮಾದರಿಯು ಜನರ ಮನಸ್ಸಿನೊಳಗೆ ಇಳಿಯಬೇಕಾದರೆ ಅದು ಮತ್ತೆ ಮತ್ತೆ ಜನರ ಮಧ್ಯೆ ಎದ್ದು ಬರಬೇಕು. ಅದು ನೆನಪಾಗಿ ಕುಳಿತುಕೊಳ್ಳಬೇಕು. ಯಾವಾಗ ನೆನಪಾಗುವುದಿಲ್ಲವೋ ಅದು ಶಾಶ್ವತವಾಗದು. ಹಿನ್ನೆಲೆಯಲ್ಲಿ ಮದಕ, ಕಟ್ಟಗಳು ಜನರ ಬದುಕಿನ ಒಂದು ಭಾಗವಾಗಬೇಕು.

ವರುಷದಿಂದ ಕಟ್ಟಗಳಲ್ಲಿ ಏರಿ ನಿಂತ ನೀರಿನ ದಾಖಲಾತಿ ಮಾಡುವ ಯೋಚನೆಯಿದೆ. ನೀರಿನ ಒರತೆಯ ಪ್ರಮಾಣ, ಬಾವಿಗಳಲ್ಲಿ ಏರಿದ ನೀರು ಮೊದಲಾದ ವಿಷಯಗಳನ್ನಿಟ್ಟುಕೊಂಡು ದಾಖಲಾತಿ ಮಾಡಬೇಕೆಂದಿದ್ದೇವೆ. ಇದರಿಂದ ಮುಂದೆ ಅಂತರ್ಜಲದಲ್ಲಾಗುವ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಕಟ್ಟಗಳನ್ನು ಕಟ್ಟುವ ಹೊತ್ತಿಗೆ ಮಂತ್ರಿ-ಮಹೋದಯರನ್ನು ಆಹ್ವಾನಿಸಬಹುದು. ಭರ್ಜರಿ ಪ್ರಚಾರ ಗಿಟ್ಟಿಸಬಹುದು. ಆಗ ಅದಕ್ಕೆ ಪ್ರತ್ಯೇಕವಾದ ರಾಜಕೀಯದ ಬಣ್ಣ, ಘೋಷಣೆಗಳು ಬೋನಸ್ ಆಗಿ ಅಂಟಿಬಿಡುತ್ತವೆ! ಸಂಭ್ರಮಗಳ ಮಧ್ಯೆ ನೀರು ಸೆಕೆಂಡರಿಯಾಗುತ್ತದೆ. ಹಾಗಾಗಬಾರದು. ಒಂದು ಕಾಲೇಜು ಜನರ ಬದುಕಿನ ಭಾಗವಾಗಬೇಕು. ಕಾಲೇಜು ಸಮುದಾಯದ ಬದುಕಿನ ಭಾಗ.

ವಸಂತ . - 88616 48805

 


0 comments:

Post a Comment