Thursday, October 1, 2020

ಕೃಷಿಕಸ್ನೇಹಿ ಬೆಳೆ, ಕಂದಮೂಲ



ಆರು ತಿಂಗಳು ಕಾದರೆ ಸಾಕು. ನೆಟ್ಟು ಗೊಬ್ಬರ ಕೊಡುತ್ತಿದ್ದರೆ ಮತ್ತೇನೂಚಿಂತೆಯಿಲ್ಲ. ಗೆಡ್ಡೆಗೆಣಸಿನ ಬೆಳೆಗೆ ಹೆಚ್ಚು ಆದ್ಯತೆ ಕೊಡೋಣ ಎಂದುಕೊಂಡಿದ್ದೇನೆಎನ್ನುತ್ತಾರೆ ಸಾವಯವ ಕೃಷಿಕ. ಗೆಡ್ಡೆಗಳಿಗೆ ಸಿದ್ಧ ಮಾರುಕಟ್ಟೆ ಇರುವುದು ಇವರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ನಗೆ ನೀರಿನ ಲಭ್ಯತೆ ಕಡಿಮೆ. ಹಾಗಾಗಿ ಮಿತ ನೀರು ಬಯಸುವ ಗೆಡ್ಡೆಗಳ ಒಲವು ಜಾಸ್ತಿ. ಮಂಗಳೂರಿನ ಸಾವಯವ ಕೃಷಿಕರ ಬಳಗ ಮೂಲಕ ಸಿದ್ಧ ಮಾರುಕಟ್ಟೆ ಇದೆ. ಮಾರುಕಟ್ಟೆ ಉದ್ದೇಶದಿಂದಲೇ ಗೆಡ್ಡೆ (ಕಂದಮೂಲ) ತರಕಾರಿ ಬೆಳೆಯಲು ಮನಸ್ಸು ಮಾಡಿದೆ.”

ಸಾವಯವ ಕೃಷಿಕ ಹರಿಕೃಷ್ಣ ಕಾಮತ್ (48) ತನ್ನ ಕಂದಮೂಲ ಕೃಷಿಯ ಬಗ್ಗೆ ವಿವರಿಸುತ್ತಿದ್ದರು. ಇವರು ಪುತ್ತೂರು ಬಡಗನ್ನೂರಿನ ಮುಡಿಪಿನಡ್ಕ ಸನಿಹದ ದುರ್ಗಾಗಿರಿಯವರು. ಬೆಟ್ಟಂಪಾಡಿಯಿಂದ ಇವರಲ್ಲಿಗೆ ಐದು ಕಿಲೋಮೀಟರ್.

ಕಳೆದ ವರುಷಕಲಶ ಕೆಸುವನ್ನು ಮಾರುಕಟ್ಟೆ ಉದ್ದೇಶದಿಂದ ಬೆಳೆದಿದ್ದರು. ಚೆನ್ನಾಗಿ ಇಳುವರಿ ಬಂದಿತ್ತು. ಗೆಡ್ಡೆಯ ನೋಟ ಚೆನ್ನಾಗಿತ್ತು. ಆಲೂಗೆಡ್ಡೆಗೆ ಪರ್ಯಾಯ ಆಗಬಹುದಾದ ರುಚಿ.  ಆದರೆ ಮಾರುಕಟ್ಟೆಯನ್ನು ಗೆಲ್ಲಲಿಲ್ಲ. ಕಾಮತರಿಗೆ ನಿರಾಶೆ. ಬೆಳೆದುದು ವ್ಯರ್ಥವಾಗಬಾರದಲ್ಲಾ. ಆಪ್ತರಿಗೆ, ಸ್ನೇಹಿತರಿಗೆ ಹಂಚಿದರು. ಖಾಯಂ ಗ್ರಾಹಕರಿಗೆ ರುಚಿ ನೋಡಲು ಕೊಟ್ಟರು.

ಒಂದೆರಡು ತಿಂಗಳಲ್ಲಿ ಪೆರ್ಲದ ಕೃಷಿಕ ವರ್ಮುಡಿ ಶಿವಪ್ರಸಾದರಿಂದ ತರಕಾರಿ ಕೃಷಿಯ ಮಾಹಿತಿ ಕಾರ್ಯಕ್ರಮ. ಸಾವಯವ ಕೃಷಿಕರ ಬಳಗದ ಆಯೋಜನೆ. ಕಲಶ ಕೆಸುವಿನ ಗುಣ, ಬಳಕೆಗಳ ಮಾಹಿತಿಗಳಿಗೆ ಕಿವಿಯಾದರು. “ಜನರ ಮುಂದೆ ಇದರ ಗುಣಗಳನ್ನು ವಿವರಿಸಿ ಅರ್ಥ ಮಾಡಿಸುವ ಕೆಲಸವೂ ಅಗತ್ಯಎಂದು ಮನಗಂಡರು. ಮುಂದಿನ ಋತುವಿಗೆ ಕಲಶ ಕೆಸು ನಾಟಿಗೆ ಸಿದ್ಧವಾಗುತ್ತಿದೆ.

ಸೆಗಣಿ ಮತ್ತು ಬೀಜಾಮೃತದಲ್ಲಿ ಮಿಂದ ಬೀಜಗಳಿಗೆ ನೆರಳಿನ ಸ್ನಾನ. ಎಪ್ರಿಲಿನಲ್ಲಿ (ಯುಗಾದಿ) ಗೆಡ್ಡೆ ಬೀಜಗಳ ನಾಟಿ. ಒಂದು - ಒಂದೂವರೆ ತಿಂಗಳಲ್ಲಿ ಮಳೆ ಬಂದಾಗ ಚಿಗುರುತ್ತದೆ. ಅಕ್ಟೋಬರ್ ತಿಂಗಳಿಗಾಗುವಾಗ ಗೆಡ್ಡೆ ಅಗೆಯಲು ಸಿದ್ಧ. ರೋಗ ಕಡಿಮೆ. ಯಾವುದೇ ಸಿಂಪಡಣೆಯಾಗಲೀ, ರಾಸಾಯನಿಕ ಗೊಬ್ಬರವಾಗಿ ಬಯಸದ ತರಕಾರಿಯಿದು.

ತಾಳಿಕೆ ಹೆಚ್ಚಿರುವುದರಿಂದ ಗೆಡ್ಡೆ ತರಕಾರಿ ಸುಲಭದ ಆಯ್ಕೆ ಎನ್ನುತ್ತಾರೆ. ಇತರ ತರಕಾರಿಗಳು ಒಂದು ವಾರದೊಳಗೆ ಮುಗಿದುಬಿಡಬೇಕು. ಸಾವಯವ ಕೃಷಿಕರ ಬಳಗದ ಸಂಪರ್ಕದ ಬಳಿಕ ಕಾಮತರಿಗೆ ಮಾರುಕಟ್ಟೆಯ ತಲೆನೋವಿಲ್ಲ.  ಮಂಗಳೂರಲ್ಲಿ ಪ್ರತಿ ರವಿವಾರ ಸಾವಯವ ಸಂತೆ. ಖಾಯಂ ಗ್ರಾಹಕರಿಗೆ ಯಾರು ಯಾರಲ್ಲಿ ಎಂತೆಂತಹ ತರಕಾರಿ ಇದೆ ಎಂಬ ವಿವರ ವಾಟ್ಸ್ಸಪಿನಲ್ಲಿ ಹಿಂದಿನ ದಿನ ಹರಿಯುತ್ತದೆ.

ನನ್ನಲ್ಲಿ ಏನೇನಿದೆ ಎಂದು ಮೊದಲೇ ವಿವರ ನೀಡುವುದರಿಂದ ತರಕಾರಿಗಳನ್ನು ಮೊದಲೇ ಗ್ರಾಹಕರು ಕಾದಿರಿಸುವುದೂ ಇದೆ. ಬೇಡಿಕೆ ಇದ್ದಷ್ಟೇ ತರಕಾರಿ ಒಯ್ದರೆ ಸಾಕುಎನ್ನುತ್ತಾರೆ. ಎಲ್ಲಾ ತರಕಾರಿಗಳಿಗೆ ಕಿಲೋಗೆ ಐವತ್ತು - ಅರುವತ್ತು ರೂಪಾಯಿಯ ಆಜೂಬಾಜು ಬೆಲೆ.

ಈಚೆಗೆ ಉತ್ತರ ಕರ್ನಾಟದ ಜೋಯಿಡಾ ಗೆಡ್ಡೆ ಮೇಳಕ್ಕೆ ಕಾಮತರು ಭೇಟಿ ನೀಡಿದ್ದರು. ಅಲ್ಲಿಂದ ಮರಳುವಾಗ ಎಂಟು ವಿಧದ ಗೆಡ್ಡೆಗಳು ಅವರ ಚೀಲ ಸೇರಿದುವು. “ಇದರಲ್ಲಿ ಮುಂಡ್ಲಿ ತಳಿಯದ್ದು ಇದೆಯಲ್ಲಾ. ತುಂಬಾ ರುಚಿ. ಸ್ವಲ್ಪ ಹೆಚ್ಚು ತರಬಹುದಿತ್ತಲ್ಲಾಎಂದು ಗಂಡನನ್ನು ಛೇಡಿಸಿದರು ಆಶಾ ಕಾಮತ್.

ಮುಂಡಿ, ಸುವರ್ಣಗೆಡ್ಡೆ, ಕಲಶ ಕೆಸು.. ಇವಕ್ಕೆಲ್ಲಾ ದೊಡ್ಡ ಆರೈಕೆ ಬೇಡ. ಗೊಬ್ಬರ, ಸುಡುಮಣ್ಣು ಹಾಕಿದ್ರೆ ಎಷ್ಟೋ ಬೆಳೆಯುತ್ತದೆ. ಕೆಸುವಿನ ಗೆಡ್ಡೆಯ  ಹಪ್ಪಳ ತಿಂದಷ್ಟೂ ಬೇಕು ಅನ್ನಿಸುತ್ತದೆ. ಅಷ್ಟೊಂದು ರುಚಿ, ಮಾತಿನ ಮಧ್ಯೆ ನಾಯಕರ ಅಮ್ಮ ಸುಮನ ಕಾಮತ್ ತಮ್ಮ ಅನುಭವದ ಸಂಚಿ ಬಿಚ್ಚಿದರು.

ಇಪ್ಪತ್ತೆರಡು ಜಾತಿ

ಹರಿಕೃಷ್ಣರು ಇಪ್ಪತ್ತೆರಡು ತರಹದ ಗೆಡ್ಡೆಗಳನ್ನು ಬೆಳೆಯುತ್ತಾರೆ. ಕೆಲವು ಮನೆವಾರ್ತೆಗಾದರೆ, ಬಹುಪಾಲು ಮಾರಾಟ ಉದ್ದೇಶ. ಆರೈಕೆ ಕಡಿಮೆ ಬೀಳುವ ಗೆಡ್ಡೆ ತರಕಾರಿ ಉಳಿದ ತರಕಾರಿಗಳಿಗಿಂತ ತಾಳಿಕೆ ಜಾಸ್ತಿ. ಮಾರಾಟ ಅವಕಾಶವೂ ಕೂಡಾ.

ಇಲ್ನೋಡಿ.. ಇದು ತುರಿಸದ ಕೆಸು. ಸಲಾಡಿಗೆ ಬಳಕೆ. ಎಲೆಯನ್ನು ಹಸಿಯಾಗಿಯೇ ತಿನ್ನಬಹುದು. ಆದರೆ ಇದಕ್ಕೆ ಗೋಮೂತ್ರ, ಸೆಗಣಿಯನ್ನು ನೇರವಾಗಿ ಉಣಿಸಿದರೆ ತುರಿಸುವ ಗುಣ ಬಂದು ಬಿಡುತ್ತದೆ. ಹಾಗಾಗಿ ಗೊಬ್ಬರವನ್ನು ಕನಿಷ್ಠ ಹದಿನೈದು ದಿವಸವಾದರೂ ಹಳತು ಮಾಡಿ (ಕಳಿಸಿ) ಉಣಿಸಿ.” ಎನ್ನುತ್ತಾರೆ.

ಎರಡು ವಿಧದ ಹಾಲು ಗೆಣಸು. ಇದರಲ್ಲೊಂದರ ಗೆಡ್ಡೆಗಳು ಅಗಲವಾಗಿ ಬೆಳೆದರೆ, ಮತ್ತೊಂದು ಆಳವಾಗಿ ಇಳಿದು ಬೆಳೆಯುತ್ತದೆ. ಅದಕ್ಕಾಗಿ ಇದನ್ನು ನೆಡುವಾಗಲೇ ಹೊಂಡಕ್ಕೆ ಕಲ್ಲನ್ನು ಹಾಸಿದರೆ ಆಳಕ್ಕೆ ಇಳಿಯದೆ ಅಗಲವಾಗಿ ಗೆಡ್ಡೆ ಹಬ್ಬುತ್ತದೆ.

ಪತ್ರೊಡೆ ಎಲೆಗಾಗಿಯೇ ಇನ್ನೊಂದು. ವಾರಕ್ಕೆ ಇಪ್ಪತ್ತೈದರಿಂದ ಮೂವತ್ತು ಕಟ್ಟುಗಳಿಗೆ ಬೇಡಿಕೆ. ಒಂದು ಕಟ್ಟಿನಲ್ಲಿ ಎಂಟು ಎಲೆ. ಇಪ್ಪತ್ತು ರೂಪಾಯಿ. ವಾರ ವಾರ ಎಲೆ ತೆಗೆಯುತ್ತಾ ಇರುವುದರಿಂದ ಗೆಡ್ಡೆ ಬೆಳವಣಿಗೆ ಕಡಿಮೆ.  ಚಳಿಗಾಲದ ಮೊದಲ ಋತುವಿನಲ್ಲಿ ಎಲೆ, ದಂಟು ಎರಡೂ ಮಾರಿಹೋಗುತ್ತದೆ.

ಚೈನೀಸ್ ಪೊಟೇಟೋ (ಕೂಕ). ತುಂಬಾ ರುಚಿ. ಕಿಲೋಗೆ ನೂರೈವತ್ತು ರೂಪಾಯಿವರೆಗೂ ದರ. ಕೇಳಿ ಕೊಳ್ಳುವವರು ಇದ್ದಾರೆ. ಇದರಲ್ಲಿ ಕಪ್ಪು ತಳಿಯದ್ದಿದೆ.  ತುಂಬಾ ನಿರೀಕ್ಷೆಯಕಲಶ ಕೆಸುಆಲೂಗೆಡ್ಡೆಗೆ ಪರ್ಯಾಯ. ವರುಷ ಮಾರುಕಟ್ಟೆ ಉದ್ದೇಶಕ್ಕಾಗಿ ಬೆಳೆಯುವ ಯೋಜನೆ ಹಾಕಿಕೊಂಡಿದ್ದಾರೆ.

ಇದು ಕಪ್ಪು ಕೆಸು. ಪದಾರ್ಥ ಮಾಡಿದರೆ ಬೀಟ್ರೂಟಿನಂತೆ ಕೆಂಪು ಬಣ್ಣವಾಗುತ್ತದೆ. ಇದರಲ್ಲಿ ಇನ್ನೊಂದು ವೆರೈಟಿ ಇದೆ.” ಎಂದು ದನಿಗೂಡಿಸಿದ ಆಶಾ ಕಾಮತ್, ‘ಎಲಿಫೆಂಟ್ ಫೂಟ್ತಳಿಯತ್ತ ಗಮನ ಸೆಳೆದರು, “ಇದರ ಗೆಡ್ಡೆ ಆನೆಯ ಪಾದದ ಆಕೃತಿಯಂತೆ ಇರುವುದರಿಂದಲೋ ಏನೋ ಹೆಸರು.”

ಇವಿಷ್ಟಲ್ಲದೆ ಮರಗೆಣಸು, ಅರಶಿನ, ತುಪ್ಪ ಗೆಣಸು, ಆರಾರೂಟ್, ಮಾವು ಶುಂಠಿ.. ಹೀಗೆ ಗೆಡ್ಡೆಗಳ ಸುತ್ತ ಕಾಮತರ ಆಸಕ್ತಿ. “ನೋಡಿ... ಇದು ಮಾವು ಶುಂಠಿ. ವಾರಕ್ಕೆ ಹತ್ತೋ ಹದಿನೈದೋ ಕಿಲೋ ಮಾರುಕಟ್ಟೆಗೆ ಒಯ್ಯುತ್ತೇನೆ. ಇದು ನನ್ನ ಏಟಿಎಂ.” ಎಂದು ನಗೆಯಾಡುತ್ತಾರೆ.

ಈಚೆಗೆ ಜೋಯಿಡಾದಿಂದ ಐದಾರು ತಳಿಯ ಗೆಡ್ಡೆಗಳನ್ನು ತಂದಿದ್ದಾರೆ. “ಅದರ ಆರೈಕೆ ಕ್ರಮಗಳು ಗೊತ್ತಿಲ್ಲ. ರುಚಿ ನೋಡಬೇಕಷ್ಟೇ. ಬೆಳೆದ ಬಳಿಕವಷ್ಟೇ ಹೇಳಬಹುದು.” ಎನ್ನುತ್ತಾರೆ.

ಕಾಮತರಕೆಣಿ

ಗೆಡ್ಡೆಗಳನ್ನು ಬೆಳೆಯಲು ಮೊದಲು ಜಾಗದ ತಯಾರಿ ಮುಖ್ಯ. ನಮ್ಮ ಮಣ್ಣು ಸೂಕ್ತವೇ ಎನ್ನುವುದು ಇನ್ನೊಂದು. ಕೆಲವೊಂದು ಸೂಕ್ಷ್ಮ ವಿಚಾರಗಳತ್ತ ಗಮನ ಸೆಳೆದರು: ಹುಳದ ಬಾಧೆಯನ್ನು ನಿಯಂತ್ರಿಸಲು ಮಣ್ಣಿಗೆ ಸುಣ್ಣ ಹಾಕಿ. ತಿಂಗಳ ನಂತರ ಬೀಜದ ಗೆಡ್ಡೆಗಳನ್ನು ಮಣ್ಣಿನಲ್ಲಿ ಊರಬೇಕು. ಮಣ್ಣು ಸಡಿಲ ಇರುವುದು ಮುಖ್ಯ. ಸಾಲು ಮಾಡುವಾಗಲೇ ತರಗೆಲೆಗಳನ್ನು ಹಾಕಿದರೆ ಮಣ್ಣು ಸಡಿಲವಾಗುತ್ತದೆ. ಬಳಿಕ ಸುಡುಮಣ್ಣು, ಉಮಿಕರಿ. ಅದರ ಮೇಲೆ ಗೆಡ್ಡೆಯ ಬೀಜಗಳನ್ನು ಊರಿದರಾಯಿತು. ಆಳ ಸಾಲುಗಳ ಅಥವಾ ಹೊಂಡದ ಅಗತ್ಯವಿಲ್ಲ.

ಗೆಡ್ಡೆಯಲ್ಲಿ ಕಾಮತರದು ಸಾಂದ್ರ ಬೇಸಾಯ! ಸುವರ್ಣಗೆಡ್ಡೆಯಾದರೆ ಅರ್ಧ ಅಡಿಗೊಂದರಂತೆ ಬೀಜ ಪ್ರದಾನ. “ಹೀಗೆ ಹತ್ತಿರ ಹತ್ತಿರ ನೆಟ್ಟರೆ ಅದರಿಂದ ಬಿಡುವ ಗೆಡ್ಡೆಗಳು ಒಂದು ಒಂದೂಕಾಲು ಕಿಲೋ ಸಿಗುತ್ತದೆ. ಮಾರಾಟಕ್ಕೆ ಅನುಕೂಲ. ಸಣ್ಣ ಕುಟುಂಬದವರು ಇಂತಹುದನ್ನೇ ಅಪೇಕ್ಷೆ ಪಡುತ್ತಾರೆ.  ಬೀಜದಿಂದ ಬೀಜಕ್ಕೆ ಅಂತರ ಹೆಚ್ಚಾದರೆ ಗೆಡ್ಡೆಗಳು ದೊಡ್ಡದಾಗಿ ಬೆಳೆಯುತ್ತವೆ.” ಕಾಮತರ ಬೆಳೆ ಉಪಾಯ. 

ಕಂದಮೂಲಗಳ ಮೊದಲ ಅತಿಥಿ

ಕಂದಮೂಲಗಳಿಗೆ ಹಂದಿ, ಹೆಗ್ಗಣಗಳು ಮೊದಲ ಅತಿಥಿ. ಒಮ್ಮೆ ಪ್ರವೇಶ ಮಾಡಿದರೆ ಸಾಕು. ಪೂರ್ತಿ ಸರ್ವನಾಶ ಮಾಡಿಬಿಡುತ್ತವೆ. ನಿಮಗೆ ಅವುಗಳಿಂದ ಬಾಧೆಯಾಗಲಿಲ್ವಾ? ಕಾಮತರು ಒಂದು ದಿವಸದ ತಪ್ಪು ನಿರ್ಧಾರವನ್ನು ಜ್ಞಾಪಿಸಿಕೊಂಡರು.

                ನನ್ನ ಮಿತ್ರರೊಬ್ಬರು ಬೇಡ ಬೇಡವೆಂದರೂ ಒತ್ತಾಯದಿಂದ ಮೀನಿನ ಗೊಬ್ಬರ ಒದಗಿಸಿದ್ದರು. ಅವರೇನೂ ಕೆಟ್ಟದಾಗಬೇಕೆಂದು ಬಯಸಿದವರಲ್ಲ. ಮನಸ್ಸಿಲ್ಲದ ಮನಸ್ಸಿನಿಂದ ಪ್ರಾಯೋಗಿಕವಾಗಿ ಹಸಿ ಹುಲ್ಲಿಗೆ ಗೊಬ್ಬರವನ್ನು ಉಣಿಸಿದೆ. ಗೊಬ್ಬರದ ಪರಿಮಳಕ್ಕೆ ಎಲ್ಲಿದ್ದುವೋ ಏನೋ ಹಂದಿಗಳು ಮುತ್ತಿದುವು. ಗೆಡ್ಡೆಗಳನ್ನು ಮುಕ್ಕಿದುವು. ಜತೆಗೆ ಹೆಗ್ಗಣಗಳೂ ಸಾಥ್ ಆದುವು. ನಾನು ಹೊತ್ತಿಗೆ ಮನೆಯಲ್ಲಿ ಇದ್ದಿರಲಿಲ್ಲ. ಎಲ್ಲಿ ತಪ್ಪಾಗಿದೆ ತಿಳಿಯಿತು. ಅಂದೇ ಮೀನಿನ ಗೊಬ್ಬರಕ್ಕೆ ವಿದಾಯ. ಅದುವೇ ಫಸ್ಟ್ ಮತ್ತು ಲಾಸ್ಟ್!. ನಂತರ ಹಂದಿಗಳ ಕಾಟವಿಲ್ಲ.”

ಹೆಗ್ಗಣ ಬಾಧೆಗೆ ಉಪಾಯ ಅವರಿಗೆ ಉಪಕಾರವಾಗಿದೆ. ಯಾವ ಜಾಗದಲ್ಲಿ ಹೆಗ್ಗಣ ಉಪದ್ರ ಇದೆಯೋ ಅಲ್ಲಿ ಎಂಡ್ ಕ್ಯಾಪ್ ಹಾಕಿದ ಮೂರಡಿ ಉದ್ದದ, ಹೆಚ್ಚು ಅಗಲವಿರುವ ಪಿ.ವಿ.ಸಿ. ಪೈಪನ್ನಿಟ್ಟು ಬಿಡುತ್ತಾರೆ. ಹೆಗ್ಗಣವನ್ನು ಆಕರ್ಷಿಸಲು ಪೈಪಿನ ಪ್ರವೇಶದಲ್ಲಿ ಕೊಬ್ಬರಿಯ ಚೂರುಗಳು, ತಿಂಡಿಗಳು. ಒಂದೆರಡು ದಿವಸ ಹೆಗ್ಗಣವು ತಿಂಡಿ ತಿನ್ನುತ್ತಾ ಪೈಪಿನೊಳಗೆ ಸರಾಗವಾಗಿ ಅತ್ತಿತ್ತ ಓಡಾಡಿ ಅದಕ್ಕೆ ಸೇಫ್ ಅಂತ ಭಾವನೆ ಬರುತ್ತದಂತೆ. ಮೂರು - ನಾಲ್ಕನೇ ದಿವಸದಲ್ಲಿ  ಪೈಪಿನ  ಒಳಗಡೆಪಾಷಾಣ  ಕೇಕ್ಇಡುತ್ತಾರೆ. ಹೆಗ್ಗಣ ಸಾಯುತ್ತದೆ! ‘ಕೊಲ್ಲುವುದಕ್ಕೆ ಮನಸ್ಸು ಬರುವುದಿಲ್ಲ. ಆದರೆ ಕೃಷಿ ಉತ್ಪನ್ನಗಳನ್ನು ರಕ್ಷಿಸಬೇಕಲ್ವಾಎನ್ನುತ್ತಾರೆ.

ನಾನಿನ್ನೂ ಎಲ್.ಕೆ.ಜಿ.’

ಗೆಡ್ಡೆ ತರಕಾರಿಗಳ ಕೃಷಿಯಲ್ಲಿ ನಾನಿನ್ನೂ ಎಲ್. ಕೆ.ಜಿ. ತರಗತಿ. ಜೋಯಿಡಾದ ಗೆಡ್ಡೆಗಳು ಇಲ್ಲಿನ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಗೊತ್ತಿಲ್ಲ. ಇವೆಲ್ಲಾ ಇಲ್ಲಿಗೆ ಹೊಸತು. ಅದನ್ನು ಬೆಳೆಸಿ, ಅಡುಗೆಮನೆಯಲ್ಲಿ ಬಳಸಿದ ಬಳಿಕವೇ ಇತರರಿಗೆ ಹೇಳಲು ಸಾಧ್ಯ. ಹೊಸತನ್ನು ಪರಿಚಯ ಮಾಡಲು ಸಮಯ ಬೇಕು.” ಎನ್ನುತ್ತಾರೆ.

ನಿಮ್ಮ ಸಂಗ್ರಹದಲ್ಲಿರುವ ಗೆಡ್ಡೆಗಳಲ್ಲಿ ಟಾಪ್ ಟೂ ಯಾವುದು? “ಮೊದಲಿಗೆ ಕಲಶ ಕೆಸು, ಚೈನೀಸ್ ಪೊಟೇಟೋಗೆ ಎರಡನೇ ಸ್ಥಾನ.” ಎಂದರು. ಇವೆರಡೂ ಮೊದಲಿಗವಾದರೂ ಸುವರ್ಣಗೆಡ್ಡೆಗೆಟಾಪ್ ಮೋಸ್ಟ್ಸ್ಥಾನ.

ಇಪ್ಪತ್ತೆರಡು ವೆರೈಟಿ ಗೆಡ್ಡೆಗಳ ಸಂಗ್ರಹದಲ್ಲಿ ಕಾಮತರಿಗೆ ತೃಪ್ತಿಯಿಲ್ಲ. ಇನ್ನೂ ಹುಡುಕಾಡುತ್ತಿದ್ದಾರೆ. ಎಲ್ಲವೂ ಇವರ ಅಡುಗೆ ಮನೆಯನ್ನು ಹೊಕ್ಕೇ ಮಣ್ಣು ಸೇರಿವೆ. ಗೆಡ್ಡೆಗಳ ಗುಣ - ದೋಷಗಳನ್ನು ಸ್ವಾನುಭವದಿಂದ ಹೇಳಲು ಇವರಿಗೆ ಸಲೀಸು.

ಹರಿಕೃಷ್ಣ ಕಾಮತ್ - 94813 90710

 

ಬಟಾಟೆಗೆ ಪರ್ಯಾಯ

ಕಲಶ ಕೆಸು - ಆಕಾರದಲ್ಲಿದು ಕಲಶಾಕೃತಿ. ಬಟಾಟೆಯಿಂದ ಮಾಡಬಹುದಾದ ಎಲ್ಲಾ ಖಾದ್ಯಗಳನ್ನು ಕಲಶ ಕೆಸುವಿನ ಗೆಡ್ಡೆಯಿಂದ ಮಾಡಲು ಸಾಧ್ಯ. ಇದರಲ್ಲಿ ತುರಿಕೆಯ ಅಂಶವಿಲ್ಲ. ಮಸಾಲೆ ದೋಸೆಗೆ ಬಾಜಿ; ಊಟಕ್ಕೆ ಪಲ್ಯ, ಗಸಿ, ಮೇಲೋಗರ.. ರುಚಿ.

ನಾನು ಏನಿಲ್ಲವೆಂದರೂ ವರುಷಕ್ಕೆ ನೂರೈವತ್ತರಷ್ಟು ಕಲಶ ಕೆಸುವನ್ನು ಬೆಳೆಯುತ್ತಿದ್ದೇನೆ. ಬಹುತೇಕ ಎಲ್ಲವೂ ಅಡುಗೆ ಮನೆಯಲ್ಲಿ ಪಾಕವಾಗುತ್ತಿರುತ್ತದೆ. ಹತ್ತಿರದ ಸ್ನೇಹಿತರು ಬಂದರೆ ಅವರಿಗೆ ಒಂದು ಗೆಡ್ಡೆ ಉಡುಗೊರೆ ನೀಡುತ್ತೇನೆ.” ಎನ್ನುತ್ತಾರೆ ಪೆರ್ಲ ಸನಿಹದ ಕೃಷಿಕ ವರ್ಮುಡಿ ಶಿವಪ್ರಸಾದ್.

ಉಳಿದೆಲ್ಲಾ ಗೆಡ್ಡೆಗಳನ್ನು ನೆಡುವಂತಹುದೇ ಕ್ರಮ. ವಿಶೇಷ ಆರೈಕೆ ಬೇಡ. “ಇದರ ರುಚಿ ಎಷ್ಟು ಒಗ್ಗಿ ಹೋಗಿದೆ ಎಂದರೆ ಒಂದು ಗೆಡ್ಡೆಯನ್ನು ಇತರರಿಗೆ ಕೊಡಲು ನನ್ನಲ್ಲಿ ಜಿಪುಣತನವಿದೆ.” ಎಂದು ನಗೆಯಾಡುತ್ತಾರೆ. 

ಹೆಚ್ಚು ಗೊಬ್ಬರ ಕೊಟ್ಟು ಆರೈಕೆ ಮಾಡಿ ಮೂರರಿಂದ ನಾಲ್ಕು ಕಿಲೋ ವರೆಗೂ ಗೆಡ್ಡೆ ಪಡೆದಿದ್ದಾರೆ ವರ್ಮುಡಿಯವರು. ಒಂದರಿಂದ ಎರಡು ಕಿಲೋ ಸಾಮಾನ್ಯ.

ಅಂದ ಹಾಗೆ ಕಲಶ ಕೆಸುವಿನ ಮೂಲ ಮತ್ತು ಸಸ್ಯಶಾಸ್ತ್ರೀಯ ಹೆಸರು ಏನು?

 

ಹೊಸ ಗೆಡ್ಡೆ ಕೃಷಿಕ

ಈಚೆಗೆ ಮೈಸೂರಿನಲ್ಲಿ ಗೆಡ್ಡೆಮೇಳದಿಂದ ಇಪ್ಪತ್ತೆಂಟು ವೆರೈಟಿಯ ಗೆಡ್ಡೆಗಳನ್ನು ತಂದಿದ್ದೆ. ಸಹಜ ಸಮೃದ್ಧದ ಮೂಲಕ ಹನ್ನೆರಡು ತಳಿಯ ಗೆಡ್ಡೆಗಳು ಸಿಕ್ಕಿದವು.  ಇವುಗಳನ್ನು ಆರೈಕೆ ಮಾಡಿ ಅಭಿವೃದ್ಧಿಸುವ ಇರಾದೆಯಿದೆ. ಆಗಲೇ ನನ್ನಲ್ಲಿ ಸ್ಥಳೀಯ ಆರೇಳು ತಳಿಗಳಿವೆ. ಉಳಿದ ತರಕಾರಿಗಳಿಗಿಂತ ಗೆಡ್ಡೆ ಕೃಷಿ ಸುಲಭ ಹಾಗೂ ರೋಗಬಾಧೆ ಕಡಿಮೆಯಿರುವುದರಿಂದ ಗೆಡ್ಡೆ ತರಕಾರಿ ಗೆಲ್ಲಬಹುದೆಂಬ ವಿಶ್ವಾಸ. ಹಂದಿಕಾಟ, ಹೆಗ್ಗಣಗಳ ಸಮಸ್ಯೆಯಿದೆ. ಹೊಸ ಕೃಷಿಯಾದ್ದರಿಂದ ಮಾಡಿ-ನೋಡಿ ಕಲಿಯಬೇಕಷ್ಟೇ.”- ಎನ್ನುತ್ತಾರೆ ಈಶ್ವರಮಂಗಲದ ನಟೇಶ್ ಮೂಡಾಯೂರು ವಿಶ್ವಾಸ.

 

0 comments:

Post a Comment