ಫೆ.14ರ ಸಂಜೆ ಮಂಗಳೂರಿನ 'ಪಿಲಿಕುಳ'ದಲ್ಲಿ ಅಖಿಲ ಭಾರತ ವೆನಿಲ್ಲಾ ಕಾರ್ಯಾಗಾರಕ್ಕೆ ಶುಭಚಾಲನೆ. ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಾ.ಜಿ.ಕೆ.ವಸಂತಕುಮಾರ್ ದೀಪಜ್ವಲನ. ಕರ್ನಾಟಕ ಬ್ಯಾಂಕ್ ಅಧ್ಯಕ್ಷರಿಂದ ವಸ್ತುಪ್ರದರ್ಶನ ಉದ್ಘಾಟನೆ. ಭಾರತೀಯ ವೆನಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಪಿ.ಎಂ.ರಾಮು ಸಭಾಹಿರಿತನ.
ಭಾರತೀಯ ವೆನಿಲ್ಲಾ ಬೆಳೆಗಾರರ ಸಂಘ ಮತ್ತು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ಕಾರ್ಯಾಗಾರ ಆಯೋಜನೆ. ಹಿರಿಯ ಡಾ.ಡಿ.ಕೆ.ಚೌಟರ ಹೆಗಲೆಣೆ. ಆಹ್ವಾನಿತ ವಂದಿಮಾಗಧರು ನಾಪತ್ತೆ. ಅಧಿಕಾರಿಗಳ ಗೈರು.
ತಾ. 15, 16 - ಎರಡು ದಿವಸ ಬರೋಬ್ಬರಿ ವೆನಿಲ್ಲಾ ಮಾತುಕತೆ. 'ನೇಶನಲ್ ಸೆಮಿನಾರ್' ಅಲ್ವಾ, ಪೂರ್ತಿ ಆಂಗ್ಲಮಯ! ಪವರ್ ಪಾಯಿಂಟ್ ಸಹಿತ ನಿರೂಪಣೆ. ಅಂಕಿಅಂಶಗಳ ದಿಂಞಣ! ಮಾರುಕಟ್ಟೆ ಚರ್ಚೆ.
ಜಿಕೆವಿ ಉವಾಚ : 'ವೆನಿಲ್ಲಾಕ್ಕೆ ಬೆಲೆ ಬಂದಾಗ ಜನರು ಮನ ಬಂದಂತೆ ಬೆಳೆದರು. ಬೆಂಗಳೂರಲ್ಲಿ ತಾರಸಿ ಮೇಲೂ ಬೆಳೆ. ಕೋಲಾರ, ಚಿತ್ರದುರ್ಗಗಳಲ್ಲಿ ಹವಾಮಾನ ಸೂಕ್ತವಲ್ಲದಿದ್ದರೂ ವೆನಿಲ್ಲಾ ಬೆಳೆದು ಕೈಸುಟ್ಟುಕೊಂಡವರೇ ಹೆಚ್ಚು. ಇದಕ್ಕೆ ಕಾರಣ ಸರಿಯಾದ ಯೋಜನೆ ಇಲ್ಲದಿರುವುದು. 4500 ಹೆಕ್ಟೇರ್ನಲ್ಲಿದ್ದ ಬೆಳೆ ಈಗ 2000 ಹೆಕ್ಟೇರ್ಗೆ ಇಳಿದಿದೆ.'
ಅನಂತಕೃಷ್ಣ ಉವಾಚ : 'ಬ್ಯಾಂಕುಗಳು ತಮ್ಮ ಸಾಲದ ಮೊತ್ತದಲ್ಲಿ ಶೇ.18ರಷ್ಟನ್ನು ಕೃಷಿಗೆ ಮೀಸಲಿಡಬೇಕೆಂದು ಸೂಚನೆ. ಇಡೀ ರಾಷ್ಟ್ರದ ಎಲ್ಲಾ ಬ್ಯಾಂಕುಗಳು ಹೀಗೆ ಶೇ.18ರಷ್ಟು ಮೊತ್ತವನ್ನು ಮೀಸಲಿಟ್ಟರೆ 4.50 ಲಕ್ಷ ಕೋಟಿ ರೂ. ಹಣ ಕೃಷಿಗೆ ಲಭ್ಯವಾಗುತ್ತದೆ. ಭಾರತದಲ್ಲಿ ಅಷ್ಟೊಂದು ಪ್ರಮಾಣದ ಹಣವನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವವರು ಯಾರು? ನಮ್ಮ ದೇಶ ಇನ್ನೂ ಶಕ್ತವಾಗಿಲ್ಲ. ಬೆಳೆಗೆ ಸೂಕ್ತ ಬೆಲೆ ಲಭ್ಯವಾಗುವಂತೆ ಸರಿಯಾದ ಕೃಷಿ ಯೋಜನೆಯನ್ನು ರೂಪಿಸಬೇಕು.'
ಡಾ.ಚೌಟಾಜಿ - 'ಪ್ರಪಂಚದಲ್ಲಿ ಮಡಗಾಸ್ಕರ್, ಇಂಡೋನೇಶ್ಯಾ, ಮೆಕ್ಸಿಕೋ, ಚೀನಾ ಮುಂತಾದ ದೇಶಗಳ ವೆನಿಲ್ಲಾ ಖ್ಯಾತಿ. ಒಟ್ಟು ಉತ್ಪಾದನೆಯಲ್ಲಿ ಮಡಗಾಸ್ಕರ್ ನದು ಸಿಂಹಪಾಲು. ವೆನಿಲ್ಲಾದಲ್ಲಿರುವ 'ವೆನಿಲಿನ್' ಪರಿಮಳಕ್ಕೆ ಮೂಲ. ಮಣ್ಣು, ಹವಾಗುಣ, ಕ್ಯೂರಿಂಗ್, ಒಣಗಿಸುವ ವಿಧಾನಗಳು ವೆನಿಲಿನ್ ಪ್ರಮಾಣವನ್ನು ನಿರ್ಧರಿಸುತ್ತದೆ. ಭಾರತದ ವೆನಿಲ್ಲಾದಲ್ಲಿ ವೆನಿಲಿನ್ ಪ್ರಮಾಣ ಅಧಿಕ. ನಮ್ಮ ವೆನಿಲ್ಲಾಗೆ ಪ್ರತ್ಯೇಕ ಲೇಬಲ್ ಇಲ್ಲದಿರುವುದು ಮಾರುಕಟ್ಟೆ ಸಮಸ್ಯೆ'.
Home › Unlabelled › ಪಿಲಿಕುಳದಲ್ಲಿ ವೆನಿಲ್ಲಾ ಘಮಘಮ!
0 comments:
Post a Comment