`ನಮ್ಮ ನಾಲಿಗೆ ಹಳೆ ರುಚಿಯನ್ನು ಕಳಕೊಂಡಿದೆ. ಅದಕ್ಕೆ ಮತ್ತೊಮ್ಮೆ ರುಚಿಯನ್ನು ಹಿಡಿಸುವ ಕೆಲಸ ಸಾಧ್ಯವಾದರೆ ನಮ್ಮಿಂದ ದೂರವಾದ, ದೂರವುಳಿದ ಹಣ್ಣಿನ ತಳಿಗಳು ಮರಳಿ ಬರಬಹುದು' - ಮಾಪಲ್ತೋಟ ಸುಬ್ರಾಯ ಭಟ್ಟರ ಈ ಮಾತು ಅವರ ಕಾಡುಮಾವಿನ ಹುಚ್ಚಿಗೆ ಕನ್ನಡಿ ಹಿಡಿಯುತ್ತದೆ.
ಸುಳ್ಯ ತಾಲೂಕಿನ ಮರ್ಕಂಜದ ಈ ಕೃಷಿಕರ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಕಾಡುಮಾವಿನ ತಳಿಗಳಿವೆ. ಬಹುತೇಕ ನೆಟ್ಟು ಬೆಳೆಸಿದವುಗಳೇ. ಮಾವು, ಹಲಸು, ವಿವಿಧ ಹಣ್ಣುಗಳು, ಅದರಲ್ಲೂ ಸ್ವದೇಶಿ-ವಿದೇಶಿ ಗುಂಪುಗಳು, ಔಷಧೀಯ, ಕಾಡುಗಿಡಗಳು, ಮರಮಟ್ಟುಗಳು.....ಇವೆಲ್ಲಾ ಇವರ ಆಸಕ್ತಿಯ ಮೂರ್ತರೂಪಗಳು. `ಯಾವುದಿಲ್ಲ' ಎಂದು ಪಟ್ಟಿ ಮಾಡುವುದೇ ಸುಲಭವಾಗುವಷ್ಟು ಹಣ್ಣುಗಳ ಸಸ್ಯಸಂಗ್ರಹ.
ಮಾಂಬಳ, ಗೊಜ್ಜು, ಹುಳಿ ಪದಾರ್ಥಗಳಿಗೆ ಬೇರೆಬೇರೆ ಜಾತಿಯ ಕಾಡುಮಾವುಗಳ ಬಳಕೆ. ಕೆಲವು ಸಿಹಿ, ಕೆಲವು ಹುಳಿ. ನಾವು `ಇದು ನೆಕ್ಕರೆ, ಇದು ಕಾಟು.....' ಹೀಗೆ ಹೆಚ್ಚೆಂದರೆ ಐದಾರು ಜಾತಿಗಳನ್ನು ಗುರುತಿಸುತ್ತೇವೆ. ಇವರ ಮಾತು, ಮನಸ್ಸು, ಜಮೀನುಗಳಲ್ಲಿ ಅದರದ್ದೇ ಅದ ರುಚಿಯ ನೂರಾರು ಕಾಡುಮಾವುಗಳ ವೈವಿಧ್ಯವಿದೆ.
ಕೃಷಿಯ ಖುಷಿ ಬಾಲ್ಯದ ನಂಟು
ತಂದೆಯವರೊಂದಿಗೆ ಇದ್ದು ಕೃಷಿ ಮಾಡಿದ ಸುಬ್ರಾಯ ಭಟ್ಟರಿಗೆ ಮಣ್ಣಿನ ಮಿಡಿತ ಚೆನ್ನಾಗಿ ಗೊತ್ತು. ಕೃಷಿ ಅವರಿಗೆ ಒಂದು ಕೆಲಸವಲ್ಲ. ಅದೊಂದು ಅಭ್ಯಾಸ. ಬಾಲ್ಯದಲ್ಲಿ - ಬೇರೆಡೆ ಯಾವುದೇ ಹಣ್ಣನ್ನು ತಿನ್ನಲಿ, ಅದು ತನ್ನ ತೋಟದಲ್ಲಿ ಇರಬೇಕು, ಬೆಳೆಸಬೇಕು ಎಂಬ ಹಂಬಲ. ಕಣ್ಣೆದುರೇ ಮಾವು-ಹಲಸುಗಳ ತಳಿ ನಾಶವಾಗುವುದು ಕಂಡು ಸಂಕಟ. ಇವನ್ನು ತನ್ನ ತೋಟದಲ್ಲಾದರೂ ಉಳಿಸಬೇಕು-ಬೆಳೆಸಬೇಕು ಎಂಬ ಛಲ. ಇದುವೇ `ಸಂಗ್ರಹ ಹುಚ್ಚಿ'ಗೆ ನಾಂದಿ. ಮೊದಲೇ ಇದ್ದ 32 ಜಾತಿಯ ಕಾಡುಮಾವು ಸಂಸಾರಕ್ಕೆ ಮತ್ತೂ 70ಕ್ಕೂ ಹೆಚ್ಚು ಜಾತಿ ಸೇರಿ ಶತಕ ದಾಟಿತು. ಹದಿನೇಳು ವರುಷದ ತಪಸ್ಸು ಇದು.
ಹೊಸ ಜಾತಿಯ ಮಾವಿನ ಸುಳಿವು ಸಿಕ್ಕರೆ ಸಾಕು. ಅಲ್ಲಿಗೆ ಧಾವಿಸುತ್ತಾರೆ. ಹಣ್ಣನ್ನು ಪಡೆಯುತ್ತಾರೆ. ತಿಂದು, ರುಚಿ ಅನುಭವಿಸಿ ಪಾಸಾದರಷ್ಟೇ ಸ್ವೀಕಾರ. ವಿಶಿಷ್ಟ ರುಚಿಯಿದ್ದರೆ ಅದರ ಕುಡಿ ತಂದು ಕಸಿಕಟ್ಟಿದ ನಂತರವೇ ವಿಶ್ರಾಂತಿ. ಕಸಿ ಕಟ್ಟುವಾಗ ಸ್ವಲ್ಪ ಹೆಚ್ಚೇ ಕಟ್ಟುತ್ತಾರೆ. ತನ್ನ ತಳಿಸಂರಕ್ಷಣೆ ಕಾಯಕಕ್ಕೆ ಬೇಕಾದ 3- 4 ಗಿಡಗಳನ್ನು ನೆಟ್ಟು ಉಳಿದುದನ್ನು `ನಿಜ ಆಸಕ್ತರಿಗೆ' ಹಂಚುತ್ತಾರೆ. `ನನ್ನಲ್ಲಿ ಅಳಿದರೂ ಅವರಲ್ಲಿ ಉಳಿಯಲಿ' ಎಂಬ ದೂರದೃಷ್ಟಿ. `ಈ ಅನ್ವೇಷಣೆಗೆ ನನಗೆ ಮಾಧ್ಯಮಗಳು ಸಹಕರಿಸಿದುವು' ಅಂತ ನೆನೆಯುತ್ತಾರೆ.
ಸ್ವಾದಿಷ್ಟ ರುಚಿ, ಪರಿಮಳ
ಕಸಿ, ಹೈಬ್ರಿಡ್ ಮಾವಿನಂತೆ ಕಾಡುಮಾವಿಗೆ ನಿಶ್ಚಿತವಾದ ಹೆಸರಿಲ್ಲ. ಗುರುತು ಹಿಡಿಯಲೋಸುಗ ಪ್ರ್ರಾದೇಶಿಕ ಹೆಸರು. ಹಣ್ಣಿನ ಗುಣ, ಪರಿಮಳ, ರುಚಿಯನ್ನು ಹೊಂದಿಕೊಂಡು ನಾಮಕರಣ. ಉದಾ: ಸಾಸಿವೆ ಪರಿಮಳವಿರುವ ಮಾವು `ಸಾಸಿವೆ ಮಾವು'. ಇದರಲ್ಲೂ ರುಚಿವ್ಯತ್ಯಾಸ ಹೊಂದಿಕೊಂಡು ನಾಲ್ಕು ಪ್ರಬೇಧಗಳು. ಒಂದು ಚಪ್ಪಟೆಯಾಕಾರ, ಒಂದು ಉರುಟು, ಇನ್ನೊಂದು ಎರಡೂ ಬದಿಯಲ್ಲೂ ಬೇರೆಬೇರೆ ರುಚಿಯುಳ್ಳದ್ದು, ಇನ್ನೊಂದು ಸಣ್ಣಗೊರಟು.... ಜೀರಿಗೆ ಪರಿಮಳವಿರುವ `ಜೀರಿಗೆ ಮಾವು'. `ಕಂಚುಹುಳಿ' ಪರಿಮಳದ್ದು, ಪನ್ನೀರು ಪರಿಮಳದ್ದು ಇವೆ. ಅರಸಿನ, ಸೇಡಿಮಣ್ಣಿನ ಬಣ್ಣದ ಮಾವಿದೆ. ಮರ ಉದ್ದಕ್ಕೆ ಬೆಳೆದದ್ದು `ಗಳೆಮಾವು'. `ಮಾವನ್ನು ಸಂಗ್ರಹಿಸುವ ಆಸಕ್ತಿ ನಿಮಗಿದೆಯೇ? ಹಾಗಾದರೆ ಮಾವಿನ ಗುರುತು ಹಿಡಿಯುವಲ್ಲಿ ಏಕಕಾಲಕ್ಕೆ ಎರಡು ಜಾತಿಯ ಹಣ್ಣು ಮಾತ್ರ ತಿನ್ನಿ. ಹೆಚ್ಚು ಜಾತಿಯ ಮಾವು ತಿಂದರೆ ನಾಲಗೆ ನಿಮಗೆ ಕೈಕೊಡುತ್ತದೆ' ಭಟ್ಟರ ಕಿವಿಮಾತು. `ಎಳೆಯ ಮರದಲ್ಲಿ ಮಾವಿನ ಹಣ್ಣಿನ ಮೂಲ ರುಚಿ ಸಿಗುವುದಿಲ್ಲ. ಮರ ಬೆಳೆದ ನಂತರ ಅದರ ಹಣ್ಣು ಮೂಲ ಗುಣ ಪಡೆಯುತ್ತದೆ.'
`ಮಿಡಿ' ಆಯ್ಕೆ ಹೇಗೆ?
ಕಾಡು ಮಾವಿನ `ಮಿಡಿ ಉಪ್ಪಿನಕಾಯಿ' ಸ್ವಾದಿಷ್ಟ. ಕಾಯನ್ನು ತುಂಡು ಮಾಡಿ ಉಪ್ಪಿನಕಾಯಿ ಹಾಕಬಹುದು. ಇದರ ಮಿಡಿ ಉಪ್ಪಿನಕಾಯಿಗೆ ಹೊಂದುತ್ತದೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಇವರ ತಂದೆಯವರಲ್ಲಿದ್ದ ಪರೀಕ್ಷಾ ವಿಧಾನ ಹೀಗೆ : ಪದಾರ್ಥಕ್ಕೆ ತರಕಾರಿಯನ್ನು ಹೆಚ್ಚಿ ಅದಕ್ಕೆ ಉಪ್ಪು, ಹುಳಿ ಹಾಕಿ ಬೇಯಿಸುತ್ತೀರಷ್ಟೇ. ಇದಕ್ಕೆ ಪರೀಕ್ಷಿಸಬೇಕಾದ ಕಾಡುಮಾವಿನ ಐದಾರು ಮಿಡಿ ಹಾಕಿ. ಮತ್ತೆ ಐದಾರು ಮಿಡಿಯನ್ನು ತುಂಡು ಮಾಡಿ ಹಾಕಿ ಒಟ್ಟಿಗೆ ಬೇಯಿಸಿ. ಹೀಗೆ ಬೆಂದಾಗ ಮಿಡಿ ಮೃದುವಾಗಬಾರದು-ಗಟ್ಟಿಯಾಗಿರಬೇಕು, ಕಪ್ಪಾಗಬಾರದು, ಬಣ್ಣ ಕಳೆದುಕೊಳ್ಳಬಾರದು, ಸೊನೆ ಬಿಡಬಾರದು, ಪರಿಮಳ ಮೊದಲಿನಂತೆ ಉಳಿದಿರಬೇಕು. ತುಂಡರಿಸಿ ಹಾಕಿದ ಮಿಡಿಯು ಉಪ್ಪು, ಹುಳಿ, ಖಾರ ಎಳೆದದ್ದರಿಂದಾಗಿ ರುಚಿಯಲ್ಲಿ ವ್ಯತ್ಯಾಸವಾಗಬಾರದು, ಬೆಂದಾಗ ರುಚಿಯಲ್ಲಿ ಕಹಿ ಅನುಭವವಾಗಬಾರದು - ಈ ಎಲ್ಲಾ ಗುಣಗಳಿದ್ದರೆ ಮಾತ್ರ ಅದಕ್ಕೆ `ಉಪ್ಪಿನಕಾಯಿ ಮಿಡಿ'ಯಾಗುವ ಅರ್ಹತೆ.
`ಮಿಡಿಯನ್ನು ಕತ್ತಿಯಲ್ಲಿ ಕೊಯ್ಯುವಾಗಲೇ ಮಿಡಿಯ ಒಳಗಿನ ಬಿಳಿಭಾಗ ಕಪ್ಪಾಯಿತು ಎಂದಾದರೆ ಅಗಲೇ ರಿಜೆಕ್ಟ್.. ಮಿಡಿ ಪರೀಕ್ಷೆ ಬೇಕೇಬೇಕು. ಪರೀಕ್ಷೆ ಮಾಡದೆ ಮಿಡಿ ಹಾಕಿದರೆ ಉಪ್ಪಿನಕಾಯಿ ಮಾಡುವ ಹಂತದಲ್ಲಿ ಉಪ್ಪು-ಸಾಸಿವೆ ಸೇರಿದಾಗ ಮಿಡಿ ಕಪ್ಪಗಾಗುತ್ತದೆ.' ಮನೆಯೊಡತಿ ಸತ್ಯವತಿ ದನಿಗೂಡಿಸುತ್ತಾ, `3 ವರುಷದ ವರೆಗೂ ಉಪ್ಪಿನಕಾಯಿ ಕೆಡದೆ, ಮಿಡಿಯ ಮೂಲ ಗುಣದಲ್ಲೇ ಇರುವ ಮಾವಿನ ಜಾತಿ ನಮ್ಮ ಗುಡ್ಡದಲ್ಲಿದೆ' ಎನ್ನುತ್ತಾರೆ. ಇವರ ಸಂಗ್ರಹದಲ್ಲಿ ಉಪ್ಪಿನಕಾಯಿಗೆ ಆಗುವ ಹನ್ನೆರಡು ಮಾವುಗಳಿದ್ದರೆ, ನೀರುಮಾವಿನಕಾಯಿ ಹಾಕಲೆಂದೇ ಎರಡು ಜಾತಿಯಿದೆ.
`ಗುಡ್ಡದಲ್ಲಿ ಮುಖ ಸಿಂಡರಿಸುವಂತಹ ಹುಳಿ ರುಚಿಯ ಮಾವಿನ ಮರವೊಂದಿದೆ. ಅದರ ಹಣ್ಣು ಮನುಷ್ಯರಿಗೆ ಬಿಡಿ, ಮಂಗ ಕೂಡಾ ತಿನ್ನುವುದಿಲ. ಅದರ ಸೊನೆ ತಾಗಿತೋ, ಅಲ್ಲಿ ಹುಣ್ಣಾಗುತ್ತದೆ' ಭಟ್ ಹೇಳುತ್ತಾರೆ. `ಮಾವಿನ ರುಚಿಯನ್ನು ಗುರುತಿಸಲು ಕಷ್ಟ. ಹಣ್ಣಾಗುವ ಹೊತ್ತಿಗೆ ಒಂದು ಮಳೆ ಬಿದ್ದರೂ ಸಾಕು, ರುಚಿ ವ್ಯತ್ಯಾಸವಾಗುತ್ತದೆ' ಎನ್ನುತ್ತಾ, ಮಳೆಯ ಮೊದಲಿನ ಮತ್ತು ನಂತರದ ಒಂದೊಂದು ಹಣ್ಣನ್ನು ಸುಬ್ರಾಯ ಭಟ್ಟರು ನೀಡಿದರು. ಜಾತಿ ಒಂದೇ, ರುಚಿ ಭಿನ್ನ.
ಅಪ್ಪೆಮಿಡಿಯ ಹದಿನಾರು ಜಾತಿಗಳಿವೆ. ಫಲ ಬರಬೇಕಷ್ಟೇ. ನಿರೀಕ್ಷೆಯಲ್ಲಿದ್ದಾರೆ. `ಅಪ್ಪೆಮಿಡಿಯ ಸಹಜ ನೆಲದ ಗುಣ ಇಲ್ಲಿ ಬಂದಿತೋ' ಎಂಬ ಸಂಶಯವೂ ಇದೆ.
ಸಂಚಾರದಿಂದ ಸಂಚಯನ
ಇಷ್ಟು ಮಾವಿನ ಸಂಗ್ರಹ ಏಕಗಂಟಿನಲ್ಲಿ ಆದುದಲ್ಲ. ದಕ್ಷಿಣಕನ್ನಡ, ಉಡುಪಿ, ಶಿರಸಿ, ಸಿದ್ದಾಪುರ...ಹೀಗೆ ದೂರದೂರುಗಳಿಗೂ ಸಂಚರಿಸಿದ್ದಾರೆ. ಇದಕ್ಕಾಗಿ ವ್ಯಯಿಸಿದ ಹಣವೆಷ್ಟೋ, ಸಮಯವೆಷ್ಟೋ.... ಕಸಿಕಟ್ಟಿದ ಮಾವಿನ ಗಿಡಗಳ ಆರೈಕೆ ಹೇಳುವಂತಹ ಕಷ್ಟವಿಲ್ಲ. `ಶುರುವಿನ ಮಳೆಗೆ ಸಸಿ ನೆಡಿ. ಗೊಬ್ಬರ ಕೊಡಿ. ಮುಂದಿನ ಬೇಸಿಗೆಯಲ್ಲಿ ಅಗತ್ಯಬಿದ್ದರೆ ನೀರು ಹಾಕಿ. ಬುಡಕ್ಕೆ ಹೊಸಮಣ್ಣು ಬಿದ್ದಷ್ಟೂ ಒಳ್ಳೆಯದು' ಭಟ್ ಅನುಭವ. ನೆಟ್ಟು ಹತ್ತು ವರುಷದಲ್ಲಿ ಫಲ ಬಿಡಲು ಶುರು.
`ನನ್ನಲ್ಲಿ ಇರುವುದು ಗೌಣ. ಇನ್ನೆಷ್ಟೋ ಜಾತಿಯವು ಇವೆ. ಅವುಗಳನ್ನು ಹುಡುಕುವ ಕಣ್ಣುಬೇಕು. ನನ್ನ ಮಿತಿ ಮತ್ತು ಸಾಮಥ್ರ್ಯದಂತೆ ಬೆಳೆಸಿದ್ದೇನೆ. ಹಾಗಾಗಿ ಕಳೆದ ನಾಲ್ಕು ವರುಷದಿಂದ ನನ್ನ ತಳಿ ಹುಡುಕಾಟಕ್ಕೆ ವಿಶ್ರಾಂತಿ ನೀಡಿದ್ದೇನೆ' ಎನ್ನುತ್ತಾರೆ. ಮಗ ವೆಂಕಟಮುರಳಿ ಪದವೀಧರ. ತಂದೆಯವರ ಸಸ್ಯಕಾಶಿಯ ಉತ್ತರಾಧಿಕಾರಿ. ಆಸಕ್ತಿ ಇದೆ. ತಂದೆಯೊಂದಿಗೆ ಬೆಳೆಯುತ್ತಿದ್ದಾರೆ.
ಭಟ್ಟರ ಸಂಗ್ರಹದಲ್ಲಿ ಕಾಡು ಮಾವು ಇಷ್ಟಾದರೆ; ಹೈಬ್ರಿಡ್, ಕಸಿಮಾವು ಜಾತಿಗಳು ತೊಂಭತ್ತರ ಹತ್ತಿರವಿವೆ. ಗಿಡ, ಮರಗಳಲ್ಲಿ ಮಾವಿನಹಣ್ಣು ತೊನೆಯುತ್ತದೆ, ಬಿದ್ದು ಮಣ್ಣಲ್ಲಿ ಮಣ್ಣಾಗಿ ಹೋಗುತ್ತವೆ. ಅದನ್ನೆಲ್ಲಾ ಮಾರಾಟ ಮಾಡಬಹುದಲ್ಲವೇ?
`ಮಾರಾಟ ಉದ್ದೇಶದಿಂದ ನಾನು ಯಾವುದೇ ಗಿಡಗಳನ್ನು ತೋಟದಲ್ಲಿ ನೆಟ್ಟಿಲ್ಲ. ಕೇವಲ ತಳಿ ಸಂರಕ್ಷಣೆ ಉದ್ದೇಶ ಮಾತ್ರ. ನನ್ನ ತೋಟವಿರುವುದು ತೀರಾ ಹಳ್ಳಿ. ಇಲ್ಲಿ ಮಾರುಕಟ್ಟೆ ರೂಪಿಸಲು ಕಷ್ಟ. ದಲ್ಲಾಳಿಗಳಿಗೆ ಕೊಟ್ಟರೆ ನನಗೆನೋ ಕಾಸು ಸಿಗಬಹುದು. ಆದರೆ ಗಿಡ ಹಾಳಾದರೆ? ನಾನೇ ಹಣ್ಣುಗಳನ್ನು ಆಯ್ದು ಹತ್ತಿರದ ಸುಳ್ಯವೋ, ಪುತ್ತೂರಿಗೆ ಒಯ್ದರೆ ಸರಿಯಾದ ದರ ಸಿಗಬಹುದೆನ್ನುವ ವಿಶ್ವಾಸ ನನಗಿಲ್ಲ. ಯಾಕೆಂದರೆ ಬೆಳೆದವನೇ ಮಾರುವವನಲ್ಲಿಗೆ ಒಯ್ದರೆ ಅದು ಸಸಾರ! ಇದೆಲ್ಲಾ ನಾವು ಕುಟುಂಬ ಸದಸ್ಯರು ಮಾಡುವಂತಹುದಲ್ಲ.
ಮಾವಿನ ಋತುವಿನಲ್ಲಿ ಭಟ್ಟರ ಮನೆಯಲ್ಲಿ ಊಟಕ್ಕೆ ಮಾವಿನಹಣ್ಣಿನ ಪಾಕ ಇದ್ದೇ ಇರುತ್ತದೆ. ಶರಬತ್ ಮಾವಿನ ಹಣ್ಣಿನದೇ. `ಮಾವು, ಹಲಸು ಮತ್ತು ಹಣ್ಣಿನ ಗಿಡಗಳನ್ನು ಸಂರಕ್ಷಿಸಿ, ಅದರ ಹಣ್ಣನ್ನು ತಿಂದ ಸಂತೃಪ್ತಿ ಕೋಟಿ ಹಣಕ್ಕಿಂತಲೂ ಮಿಗಿಲಿನದು. ಹಾಗಾಗಿ ನಾನು ಕೋಟ್ಯಾಧೀಶ್ವರ' ಎನ್ನುವಾಗ ಸುಬ್ರಾಯ ಭಟ್ಟರ ಕಣ್ಣುಗಳು ಇನ್ನಷ್ಟು ಗಿಡಗಳನ್ನು ಅರಸಲು ಸಿದ್ಧವಾಗುತ್ತದೆ!
ವಿಳಾಸ: ಸುಬ್ರಾಯ ಭಟ್, ಮಾಪಲ್ತೋಟ ಮನೆ, ಅಂಚೆ : ಮರ್ಕಂಜ, ಸುಳ್ಯ ತಾಲೂಕು,ದ.ಕ. ಜಿಲ್ಲೆ.
ದೂರವಾಣಿ : 08257-274 239.
(ಸುಳ್ಯ - ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಅರಂತೋಡು ಎಂಬ ಚಿಕ್ಕ ಪೇಟೆಯಿದೆ. ಇಲ್ಲಿಂದ ಅಂದಾಜು 12 ಕಿ.ಮೀ. ದೂರದಲ್ಲಿದೆ ಮರ್ಕಂಜ. ಸರಕಾರಿ ಬಸ್ ಸುಳ್ಯದಿಂದ ಮರ್ಕಂಜಕ್ಕೆ ದಿನಕ್ಕೆ ನಾಲ್ಕು ಟ್ರಿಪ್ ನಡೆಸುತ್ತದೆ; ಜೀಪು ಸವರ್ೀಸೂ ಇದೆ. ದುರ್ಗಮ ರಸ್ತೆ. ಇಲ್ಲಿಂದ ಮಾಪಲ್ತೋಟಕ್ಕೆ ಎರಡು ಕಿಲೋಮೀಟರ್ ಕಚ್ಚಾರಸ್ತೆ. ಯಾರನ್ನೂ ಕೇಳಿದರೂ ತೋರಿಸುತ್ತಾರೆ. ಆಸಕ್ತರು ಮೊದಲೇ ಫೋನಿಸಿ, ದಿನ ನಿಗದಿ ಪಡಿಸಿ ಬನ್ನಿ.)
Home › Unlabelled › ಕಾಡು ಮಾವಿಗಿಲ್ಲಿ ರಾಜಮರ್ಯಾದೆ : ಮಾಪಲ್ತೋಟ
0 comments:
Post a Comment