Wednesday, February 18, 2009

ಹೀಗೊಂದು ಕಲಿಕೆ- 'ಪ್ಲಾಸ್ಟಿಕ್ ಹೆಕ್ಕಿಕೋ'

ಕೃಷಿಕ ಭಾಸ್ಕರ ಅವರಿಗೆ ವಾಕಿಂಗ್ ನಿತ್ಯಾಭ್ಯಾಸ. ಇತ್ತೀಚೆಗೆ ಯಾಕೋ ವಾಕಿಂಗ್ ಜತೆಗೆ ರಸ್ತೆಯಲ್ಲಿದ್ದ ಪ್ಲಾಸ್ಟಿಕ್ ಹೆಕ್ಕಲು ಶುರುಮಾಡಿದ್ದರು! ಎಲ್ಲರಿಗೂ ಆಶ್ಚರ್ಯ. ಇದೇನು? ಅವರಲ್ಲೇ ಪ್ರಶ್ನಿಸಿ. ಶಾಲೆಯತ್ತ ಕೈ ತೋರಿಸುತ್ತಾರೆ.

ಇದು ಪುತ್ತೂರಿನ ಇಡ್ಕಿದು ಗ್ರಾಮದ 'ಸೂರ್ಯ' ಎಂಬ ಹಳ್ಳಿಯ ಸರಕಾರಿ ಶಾಲೆ. ಇಲ್ಲಿನ ಮಕ್ಕಳಿಗೆ ದಾರಿಗುಂಟ ಬಿದ್ದಿರುವ ಪ್ಲಾಸ್ಟಿಕ್ ಅಂದರೆ ಅಲರ್ಜಿ! ಕಂಡರೆ ಸಾಕು, ಮುಗಿಬಿದ್ದು ಹೆಕ್ಕುತ್ತಾರೆ! ಕಾಳುಹೆಕ್ಕುವ ಸ್ಪರ್ಧೆಯಂತೆ. ಶಾಲಾವ್ಯಾಪ್ತಿಯಲ್ಲಿ ಈಗ ಪ್ಲಾಸ್ಟಿಕ್ಕೇ ಇಲ್ಲ. ಮಕ್ಕಳ ಈ ಕೆಲಸ ಭಾಸ್ಕರ ಅವರಿಗೆ ಪ್ರಚೋದನೆ.

ಇಡ್ಕಿದು 'ಜಲಮರುಪೂರಣ'ದ ಗ್ರಾಮ. ಮನೆಮನೆಗಳಲ್ಲಿ ಮಳೆಕೊಯ್ಲು. ನೆಲ-ಜಲ, ಅರಣ್ಯ-ಪರಿಸರ ಇಲ್ಲಿನ ಮಂತ್ರ. ಒಂದರಿಂದ ಹತ್ತರ ತನಕ ತರಗತಿ ಇಲ್ಲಿದೆ. ಮುನ್ನೂರರ ಹತ್ತಿರ ವಿಧ್ಯಾರ್ಥಿಗಳು. ಎಲ್ಲರ ಬಾಯಲ್ಲೂ ಒಂದೇ ಶಬ್ದ - 'ಪ್ಲಾಸ್ಟಿಕ್ ಹೆಕ್ಕಿಕೋ'. ಇದು ಮನೆಯಿಂದಲೇ ಶುರು. ನೆಲ-ಜಲ ಸಂರಕ್ಷಣೆಯ ಆಂದೋಳನ ಪ್ರೇರಣೆಯೇ ಪ್ಲಾಸ್ಟಿಕ್ ಚಳುವಳಿಯ ಮೂಲ.

ಎಲ್ಲಾ ಶಾಲೆಗಳಲ್ಲೂ ರಾಷ್ಟ್ರೀಯ ಹಬ್ಬಗಳಂದು ಶಾಲೆಯಲ್ಲಿ, ಅದರಲ್ಲೂ ಹಳ್ಳಿ ಶಾಲೆಗಳಲ್ಲಿ ಧ್ವಜಾರೋಹಣ, ಸಭೆ, ಸಿಹಿ ಅಂತ ಗೌಜಿ ಇರುತ್ತದೆ. ಆ ದಿವಸ ಸಿಹಿಗಿಂತ ಸಂಗ್ರಹಿತ ಪ್ಲಾಸ್ಟಿಕ್ಕನ್ನು ಶಾಲೆಗೆ ಒಯ್ಯುವುದೇ ಇಲ್ಲಿನ ಮಕ್ಕಳಿಗೆ ಸಂಭ್ರಮ. ಜತೆಯಾಗಿ ಶಾಲಾ ವ್ಯಾಪ್ತಿಯ ಮಾರ್ಗ, ಮನೆ, ತೋಡು, ಕಣಿ..ಹೀಗೆ ಸುತ್ತಾಟ. ಪಾನ್ಪರಾಗ್ ಸ್ಯಾಚೆಟ್ನಿಂದ ತೊಡಗಿ, ದೊಡ್ಡ ದೊಡ್ಡ ತೊಟ್ಟೆ ತನಕ ಸಂಗ್ರಹ. ಶುಚಿಯಾಗಿ ಕೈತೊಳೆದು ಕ್ಲಾಸಿಗೆ ಬಂದ ನಂತರ ಉಳಿದ ಕಲಾಪ, ಸಿಹಿ.

'ಒಂದು ಕಿಲೋದಿಂದ ನಲವತ್ತು ಕಿಲೋದವರೆಗೂ ಸಂಗ್ರಹಿಸುತ್ತಾರೆ. ಅದು ಅವರವರ ಸಾಮರ್ಥ್ಯ. ಈಗಾಗಲೇ ಹತ್ತು ಕ್ವಿಂಟಾಲ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗಿದೆ. ತ್ಯಾಜ್ಯ ವಿಲೇವಾರಿಗಾಗಿ ಇಲಾಖೆಗಳನ್ನು ಸಂಪರ್ಕಿಸಿದ್ದೇವೆ.' ಎನ್ನುತ್ತಾರೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊಂಕೋಡಿ ಸುಬ್ರಾಯ ಭಟ್.

ಮಕ್ಕಳೆಲ್ಲರೂ ಅಭಿಯಾನದಲ್ಲಿ ಪಾಲ್ಗೊಂಡಿರುವುದರಿಂದ ಎಲ್ಲರಿಗೂ ಬಹುಮಾನ. ಅದು ಲೋಟ, ಪ್ಲೇಟ್...ರೂಪದಲ್ಲಲ್ಲ! ವರ್ಷಕ್ಕೆ ಬೇಕಾಗುವಷ್ಟು ಬರೆಯುವ ಪುಸ್ತಕವನ್ನು ಉಚಿತವಾಗಿ ನೀಡುವ ಮೂಲಕ. ಒಂದರಿಂದ ನಾಲ್ಕರ ತನಕ ಬರೆಯುವ ಪುಸ್ತಕ ಕಡಿಮೆ ಬೇಕಾದುದರಿಂದ ಅವರಿಗೆ ಚೀಲ ಮತ್ತು ಕೊಡೆ ಬೋನಸ್! ಅತೀ ಹೆಚ್ಚು ಸಂಗ್ರಹಿಸಿದ ಮಗುವಿಗೆ ವಿಶೇಷ ಪುರಸ್ಕಾರ.

ಇವೆಲ್ಲವನ್ನೂ ವಿಶೇಷ ಸಮಾರಂಭದಲ್ಲಿ ವಿತರಣೆ. 40 ಕಿಲೋ ಸಂಗ್ರಹಿಸಿದ ತೇಜಸ್ಸಿಗೆ ಈ ಬಾರಿಯ ಪುರಸ್ಕಾರ.ಇಷ್ಟಕ್ಕೇ ಮುಗಿಯಲಿಲ್ಲ. ಪುಸ್ತಕಗಳೊಂದಿಗೆ ಒಂದೊಂದು ಗಿಡ. ಇದನ್ನು ತಂತಮ್ಮ ಮನೆಯಲ್ಲಿ ನೆಡಲೇಬೇಕು. ಉದಾಸೀನ ಮಾಡುವಂತಿಲ್ಲ. ಪರಿವೀಕ್ಷಣೆಗೆ ಶಾಲಾಭಿವೃದ್ಧಿ ಸಮಿತಿಯ 'ಲೋಕಾಯುಕ್ತ' ಇದೆ!

ಸುಬ್ರಾಯ ಭಟ್ ಹೇಳುತ್ತಾರೆ - 'ಈ ಯೋಜನೆಗೆ ಒಂದು ವರ್ಷ ಆಯಿತಷ್ಟೇ. ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಕೈಗೂಡಿಸಿವೆ. ಮಕ್ಕಳಿಗೆ ಪ್ಲಾಸ್ಟಿಕ್, ಪರಿಸರ ಕುರಿತ ನೇರ ಶಿಕ್ಷಣ ಲಭಿಸಿದಂತಾಗುತ್ತದೆ. ಇದಕ್ಕಾಗಿ ಪುಸ್ತಕ ಬಹುಮಾನದ ಕಾರ್ಯ. ಏನಿಲ್ಲವೆಂದರೂ ಮೂವತ್ತೈದು ಸಾವಿರ ವೆಚ್ಚಕ್ಕೆ ಬೇಕು.' ಇಂತಹ ಅರಿವನ್ನು ಹುಟ್ಟಿಸುವ ಕೆಲಸ ಶಾಲಾ ಮಟ್ಟದಲ್ಲಾಗಬೇಕು. ನಮ್ಮ ನಡುವೆ ಇರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ - ಸೂರ್ಯದ ಸರಕಾರಿ ಸಂಯುಕ್ತ ಪ್ರೌಢ ಶಾಲೆ.

ತಾಲೂಕಿನ ಇರಾ ಎಂಬಲ್ಲಿ ಪಂಚಾಯತ್ ಮಟ್ಟದಲ್ಲಿ ಪ್ಲಾಸ್ಟಿಕ್ ಆಂದೋಳನ ರಾಜ್ಯದ ಗಮನ ಸೆಳೆದಿರುವುದು ಇಲ್ಲಿ ಉಲ್ಲೇಖಾರ್ಹ. ಆದರೆ ಸೂರ್ಯದಲ್ಲಾದುದು ಕೇವಲ ಶಾಲಾ ಮಟ್ಟದಲ್ಲಿ ಎಂಬುದು ಗಮನಿಸಬೇಕಾದ ಅಂಶ. ಶಾಲಾ ಆವರಣದಲ್ಲಿ ಒಂದು ಮಾಹಿತಿ ಫಲಕ ಇದೆ. ಇದರಲ್ಲಿ ಅಡಿಕೆ, ಬಾಳೆಕಾಯಿ ಧಾರಣೆ, ಕೃಷಿ ಸುದ್ದಿ, ಊರಿನ ಹಬ್ಬಗಳ ಮಾಹಿತಿಯಿದೆ. ರಾಜಕೀಯ ಹೊರತುಪಡಿಸಿ. ಇದರಿಂದಾಗ ಊರಿನ ಸುದ್ದಿಯು 'ಪತ್ರಿಕೆ ಇಲ್ಲದೆ' ಎಲ್ಲರಿಗೂ ತಿಳಿದಂತಾಗುವುದು.

'ಇದು ನಮ್ಮ ಶಾಲೆ' ಎಂಬ ಆಭಿಮಾನವನ್ನು ಮಕ್ಕಳಲ್ಲಿ ಮೂಡಿಸುವ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯುತ್ತವೆ. 'ಸರಕಾರಿ ಶಾಲೆ ಅಂದರೆ ಹೆಚ್ಚಿನವರು ಮುಖ ಸಿಂಡರಿಸುತ್ತಾರೆ. ಅದೊಂದು ಫ್ಯಾಷನ್. ನಿಜವಾದ ಅಭಿವೃದ್ಧಿ ಮಕ್ಕಳಿಂದ. ಅವರನ್ನು ಆ ದಿಸೆಯಲ್ಲಿ ತಯಾರುಗೊಳಿಸುವ ಹೊಣೆ ಶಾಲೆಯದು' ಸುಬ್ರಾಯ ಭಟ್ ಅಭಿಮತ. ಸಾಲು ಮರಗಳನ್ನು ನೆಡುವುದು ಮುಂದಿನ ಯೋಜನೆ.ತ್ಯಾಜ್ಯ ಊರಿಂದೇನೋ ಹೋಗುತ್ತದೆ. ಅದರ ಆಮೂಲಾಗ್ರ ನಾಶ ಹೇಗೆ? ಚಿಂತಿಸಬೇಕಾದ ದಿನಗಳು. ರಿಸೈಕಲ್ - ಮುಂದಿರುವ ದಾರಿ!

0 comments:

Post a Comment